Tag: sexual harrasement

  • ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

    ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

    ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಬೆನ್ನಲ್ಲೇ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು ಶ್ರೀಗಳ ಬೆಂಬಲಕ್ಕೆ ನಿಂತಿದ್ದಾರೆ.

    ಮಠಕ್ಕೆ ಆಗಮಿಸಿ ಶ್ರೀಗಳೊಂದಿಗೆ ಸಮಾಲೋಚನೆ ನಡೆಸುವ ಜೊತೆಗೆ ಮುರುಘಾ ಶರಣರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

    ಇಂದು ಬೆಳಿಗ್ಗೆಯಿಂದಲೂ ಮೌನವಹಿಸಿದ್ದ ಮುರುಘಾ ಮಠದ ಶ್ರೀಗಳು ತಮ್ಮ ಬೆಂಬಲಿಗರಾದ ಮಾದಾರ ಚನ್ನಯ್ಯ ಶ್ರೀ ಲಿಂಗಮೂರ್ತಿ ಅವರು ಬಂದ ಬಳಿಕ ಸಭೆಯಲ್ಲಿ ಮಾತನಾಡಿದ್ದಾರೆ. ಶ್ರೀಗಳು ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಇದೀಗ ಪಬ್ಲಿಕ್ ಟಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಘಟನೆ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಶ್ರೀಗಳು, ನಾವು ಸಂದಾನಕ್ಕೂ ಸಿದ್ಧ ಸಮರಕ್ಕೂ ಬದ್ದರಿದ್ದೇವೆ. ಸಂದಾನ ಮತ್ತೆ ಸಮರ ಎರಡೂ ಆಯ್ಕೆಗಳು ಇವೆ. ಸಂದಾನ ನೀವು ಮಾಡಿ, ಒಂದು ವೇಳೆ ಅದು ಫೇಲ್ ಆದರೆ ಸಮರ ಇದ್ದೇ ಇದೆ. ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಈ ರೀತಿ ಪಿತೂರಿ, ಒಳಸಂಚು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಆಡಿಯೋನಲ್ಲಿ ಏನಿದೆ?
    ನಮ್ಮ ಜೊತೆ ಜಗಳವಾಡಿದ್ರೆ ಏನಾದರೂ ಸಿಗುತ್ತದೆ. ಬೇರೆಯವರ ಜೊತೆ ಜಗಳ ಮಾಡಿದ್ರೆ ಏನು ಸಿಗುತ್ತೆ? ಮುರುಘಾ ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಕಳೆದ 15 ವರ್ಷಗಳಿಂದ ಮುರುಘಾ ಮಠವನ್ನು ಜನ ನೋಡುವ ಹಾಗೆ ಮಾಡಿದ್ದೇವೆ. ಆದರೆ ಬ್ಲ್ಯಾಕ್‌ಮೇಲ್‌ ತಂತ್ರದ ಮೂಲಕ ಅಧಿಕಾರ ಬೇಕು ಎನ್ನುವುದು ಇಲ್ಲಿನ ಧೋರಣೆಯಾಗಿದೆ. ಇದನ್ನೂ ಓದಿ: ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ನಾವು ಸಂದಾನಕ್ಕೂ ಸಿದ್ಧ ಸಮರಕ್ಕೂ ಬದ್ಧರಿದ್ದೇವೆ. ಸಂದಾನ ಮತ್ತೆ ಸಮರ ಎರಡೂ ಆಯ್ಕೆಗಳು ಇವೆ. ಸಂದಾನ ನೀವು ಮಾಡಿ, ಅದು ಫೇಲ್ ಆದರೆ ಸಮರ ಇದ್ದೇ ಇದೆ. ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಈ ರೀತಿ ಪಿತೂರಿ, ಒಳಸಂಚು ಮಾಡಿದ್ದಾರೆ. ಈ ಒಳಸಂಚಿನ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಈ ಸಮಸ್ಯೆ, ಆರೋಪ ಶಾಶ್ವತವಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಹೆಚ್ಚಿಸುವ ಕೆಲಸವಾಗಿದೆ. ರಾಜ್ಯದ ವಿವಿಧ ಕಡೆಯಿಂದ ಜನರು ಬರ್ತಾ ಇದ್ದಾರೆ, ಫೋನ್ ಮಾಡ್ತಾ ಇದ್ದಾರೆ. ನಿಮ್ಮ ಜೊತೆ ನಾವು ಇದ್ದೇವೆ ಎಂದು ಧೈರ್ಯ ಹೇಳುತ್ತಿದ್ದಾರೆ.

    ನಮ್ಮ ಮೇಲಿನ ಅಭಿಮಾನ ಜಾಗೃತವಾಗುತ್ತಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತೆ. ಮಾನವ ಬಗೆಹರಿಸುವ ಪರಿಹಾರ ಇರುತ್ತೆ. ಕೆಲವೊಂದನ್ನು ಕಾಲವೇ ನಿರ್ಣಯ ಮಾಡುತ್ತೆ. ಕಾಲ ಕೂಡಿ ಬಂದರೆ ಸುಮ್ಮನಾಗುತ್ತೇನೆ, ಇಲ್ಲವಾದ್ರೆ ಹೋರಾಟಕ್ಕೆ ಮುಂದಾಗುತ್ತೇನೆ.

    ಕೆಳಗಡೆ ಇದ್ದಾಗ ಗಾಳಿ ಹೊಡೆತ ಕಮ್ಮಿ ಇರುತ್ತವೆ. ಮೇಲೆಕ್ಕೆ ಹೋದಂತೆಲ್ಲ ಗಾಳಿ ಹೊಡೆತ ಬಹಳ ಇರುತ್ತೆ. ಸಣ್ಣವರಿಗೆ ಸಣ್ಣ ಪೆಟ್ಟುಗಳು ಬಂದಂತೆ ದೊಡ್ಡವರಿಗೆ ದೊಡ್ಡ ಪೆಟ್ಟುಗಳು ಬರುತ್ತವೆ. ಎಲ್ಲಾ ಸಮಾಜ ಸುಧಾರಕರ ಕಾಲದಲ್ಲೂ ಈ ರೀತಿ ಸಾತ್ವಿಕ ಶಕ್ತಿ ದುಷ್ಟ ಶಕ್ತಿಗಳು ಎರಡು ಜೊತೆ-ಜೊತೆಯಾಗಿ ಇರುತ್ತವೆ. ಸಾತ್ವಿಕ ಸಮಾಜ ಪುರುಷರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ನಕಾರಾತ್ಮಕ ಧೋರಣೆಯೂ ಇರುತ್ತದೆ.

    ಏಸು ಕ್ರಿಸ್ತನನ್ನು ಶಿಲುಭೆಗೆ ಏರಿಸಿದ್ದು ಬೇರೆಯವರಲ್ಲ ಅದೇ ಧರ್ಮದವರು. ಪೈಗಂಬರ್‌ಗೆ ಟಾರ್ಚರ್ ಮಾಡಿದ್ದೂ ಅದೇ ಧರ್ಮದವರು. ಗೌತಮ ಬುದ್ಧನಿಗೆ ಹಂದಿಯ ಮಾಂಸದ ರಸ ಉಣ್ಣಿಸಿದವರೂ ಅದೇ ಧರ್ಮದವರು. ಸಾಕ್ರೆಟೀಸ್‌ನ ಜೀವನದಲ್ಲಿಯೂ ಕೂಡ ಇದೇ ಆಗಿದ್ದು. ರಾಜಸತ್ತೆ, ಪ್ರಭುಸತ್ತೆ ವಿರುದ್ಧವಾಗಿ ಅವರ ಹೋರಾಟ ಇತ್ತು. ನಮಗೆ ಸಾಕ್ರೆಟೀಸ್‌ಗೆ ಸಿಕ್ಕ ಶಿಷ್ಯ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಶಿಷ್ಯರು ಮರಣದಂಡನೆ ತಪ್ಪಿಸಲು ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದಾಗ್ಯೂ ಸಾಕ್ರೆಟೀಸ್ ರಾಜಿಯಾಗಲಿಲ್ಲ.

    ಜಗತ್ತಿನಲ್ಲಿ ಮೈಗಳ್ಳರು, ಜೀವಗಳ್ಳರು ಇದ್ದಾರೆ. ಏನಾದರೂ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕವಾಗುತ್ತೆ ಎಂದು ಸಾಕ್ರೆಟೀಸ್ ಹೇಳಿದ್ದರು. ಈ ಜಗತ್ತಿನಲ್ಲಿ ಧರ್ಮಾಂಧರು, ಅಂದರು ಈ ರೀತಿಯ ಸನ್ನಿವೇಶ ಎದುರಿಸಿಲ್ಲ. ಯಾರು ತಾತ್ವಿಕತೆ, ಸೈದ್ಧಾಂತಿಕ ತಳಹದಿಯ ಮೇಲೆ ನಡೆಯುತ್ತಾರೆ ಅವರಿಗೆ ಹೆಜ್ಜೆ ಹೆಜ್ಜೆಗೂ ಮುಳ್ಳು ಇರುತ್ತವೆ.

    ಗಾಂಧೀಜಿ, ಬಸವಣ್ಣನವರಿಗೂ ಕೂಡ ದುರಂತಗಳು ಆಗಿದೆ. ನಾವು ಕೂಡ ಹೊರತಾಗಿಲ್ಲ. ಕಿತ್ತೂರು, ಪಾಳೆಗಾರ ಸಂಸ್ಥಾನ ಹಾಳಾಗಿದ್ದು ಸ್ವಜಾತಿಯ ಜನರಿಂದಲೇ. ಇದು ಸತ್ಯಯುತವಾಗಿ ಬಂದಿರುವ ಘಟನೆಗಳು. ಮುಸ್ಲಿಂ, ಕ್ರಿಶ್ಚಿಯನ್ನರು ದಲಿತರು, ಎಲ್ಲರೂ ಸೇರಿ ನನಗೆ ಧೈರ್ಯ ತುಂಬಿದ್ದಾರೆ. ನಾವು ಹೇಳಿ ಕರೆಸಿಲ್ಲ, ಮುಂಜಾನೆಯ ಸುದ್ದಿ ನೋಡಿ ನೀವೆಲ್ಲ ಬಂದಿದ್ದೀರಿ. ಈ ಘಟನೆಯಿಂದ ನನಗಿಂತಲೂ ನಿಮಗೇ ಬಹಳಷ್ಟು ನೋವಾಗಿದೆ. ನೋವಿನಿಂದ ನೀವೆಲ್ಲಾ ಬಂದಿದ್ದೀರಿ. ನಮ್ಮ ಮೇಲಿನ ಅಭಿಮಾನ ಜಾಗೃತವಾಗುತ್ತಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಮಠದ ಶ್ರೀಗಳ ವಿರುದ್ಧ ಆರೋಪ – ಹೆಚ್‌ಡಿಕೆ ಹೇಳಿದ್ದೇನು?

    ಮುರುಘಾ ಮಠದ ಶ್ರೀಗಳ ವಿರುದ್ಧ ಆರೋಪ – ಹೆಚ್‌ಡಿಕೆ ಹೇಳಿದ್ದೇನು?

    ರಾಮನಗರ: ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಚನ್ನಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿಂದ ಇಂತಹ ಆರೋಪಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಆರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕು. ಇದರಿಂದ ಧಾರ್ಮಿಕ ಕ್ಷೇತ್ರಗಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ಹಿಂದೆ ಹೊಸನಗರದ ಸ್ವಾಮೀಜಿಗಳ ವಿಷಯದಲ್ಲೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಈ ವಿಷಯಗಳಿಂದ ನಮ್ಮ ಭಾವನೆ, ಸಂಸ್ಕೃತಿಗೆ ಧಕ್ಕೆ ಆಗಬಾರದು. ಬಲವಂತವಾಗಿ ಇಂತಹ ಘಟನೆಗಳು ಜರುಗಿದ್ರೆ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಚಂದ್ರರಿರುವ ತನಕ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ: ಲಹರಿ ವೇಲು

    ಮೋದಿಗಿಂತ ಕಡಿಮೆಯಿಲ್ಲ ಅಂತ ತೋರಿಸೋಕೆ ಹೊರಟಿದ್ದಾರೆ:
    ಇದೇ ವೇಳೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಪ್ರತಾಪ್‌ಸಿಂಹ ಫೇಸ್ಬುಕ್ ಲೈವ್ ಕುರಿತು ಮಾತನಾಡಿದ ಅವರು, ಪ್ರತಾಪ್ ಸಿಂಹ ಪ್ರಧಾನಿ ಮೋದಿಗಿಂತ ಕಡಿಮೆ ಇಲ್ಲ ಎಂದು ತೋರಿಸೋಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

    ಕಾಮಗಾರಿ ಬಗ್ಗೆ ಸರ್ಟಿಫಿಕೇಟ್ ಕೊಡುವ ಕೆಲಸ ಅವರದ್ದಲ್ಲ. ದೇವೇಗೌಡರು ಪ್ರಧಾನಿಯಾದ ಕಾಲದಲ್ಲಿ ಅಸ್ಸಾಂನಲ್ಲಿ ಒಂದು ಬ್ರಿಡ್ಜ್ ಕಟ್ಟಿಸಿದ್ರು. 1997ರಲ್ಲಿ ಬ್ರಿಡ್ಜ್ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾದ ಬಳಿಕ ಮೋದಿ ಅವರು ಇತ್ತೀಚೆಗೆ ಒಬ್ಬರೇ ನಡೆದುಕೊಂಡು ಹೋಗಿ ಉದ್ಘಾಟನೆ ಮಾಡಿದ್ರು. ಪ್ರತಾಪ್‌ಸಿಂಹ ಅವರೂ ಹಾಗೆಯೇ ಈ ರಸ್ತೆ ವಿಚಾರವಾಗಿ ಏಕಾಂಗಿಯಾಗಿ ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ. ನಾನು ನಮ್ಮ ಪ್ರಧಾನ ಮಂತ್ರಿಗಳಿಗಿಂತ ಕಡಿಮೆ ಇಲ್ಲ, ಅವರಿಗಿಂತಲೂ ಕೆಲಸ ಮಾಡ್ತಿದ್ದೀನಿ ಅಂತಾ ತೋರಿಸಲು ಹೊರಟಿರಬಹುದು ಎಂದು ಕುಟುಕಿದ್ದಾರೆ.

    ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ಪರಿಶೀಲಿಸಿದ ಮಾಜಿ ಸಿಎಂ ಹೆಚ್‌ಡಿಕೆ, ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು ಜಲಾವೃತವಾಗಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಂತ್ರಸ್ತರ ಅಹವಾಲು ಸ್ವೀಕರಿಸಿ ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಮಾತನಾಡಿ, ನಿನ್ನೆ ಭಾರೀ ಮಳೆ ಬಂದಿದೆ. ಹಲವಾರು ಕೆರೆ, ಕಟ್ಟೆಗಳು ಒಡೆದು ಕೋಡಿಹರಿದಿವೆ. ನಗರ ಪ್ರದೇಶದಲ್ಲಿಯೂ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಕಳೆದ ಬಾರಿ ಎಪಿಎಂಸಿಗಳಲ್ಲಿ ಮಳೆಯಿಂದಾಗಿ ಅನಾಹುತವಾಗಿತ್ತು. ಅಲ್ಲಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಹಾಗಾಗಿ ಈ ಬಾರಿ ಎಪಿಎಂಸಿಗಳಲ್ಲಿ ಅಂತಹದ್ದೇನೂ ಡ್ಯಾಮೇಜ್ ಆಗಿಲ್ಲ. ಆದರೆ ಕೋಡಿ ಹರಿದು ರಸ್ತೆ ಬಿರುಕು ಬಿಟ್ಟಿದೆ. ಲೋಕೋಪಯೋಗಿ ಇಲಾಖೆ ಹಾಗೂ ನಗರ ಸಭೆ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    CRIME 2

    ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ ಅವರು ನೀಡಿದ ದೂರನ್ನು ಆಧರಿಸಿ ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354 (ಅತ್ಯಾಚಾರಕ್ಕೆ ಯತ್ನ) ಹಾಗೂ ಬಸವರಾಜನ್ ಮತ್ತು ಸೌಭಾಗ್ಯ ವಿರುದ್ಧ ಸೆಕ್ಷನ್ 341, 342, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಆಡಳಿತಾಧಿಕಾರಿ ಬಸವರಾಜನ್ ಹಾಸ್ಟೆಲ್ ಪರಿಶೀಲನೆ ಮಾಡುವ ನೆಪದಲ್ಲಿ ಆಗಾಗ್ಗೆ ಬಂದು ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ ಅವರು ಮನೆಗೆ ತೆರಳದೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಆದರೆ ಮಕ್ಕಳ ಸಂಬಧಪಟ್ಟವರಿಗೆ ಮಾಹಿತಿ ನೀಡದೇ ತನ್ನ ಮನೆಯಲ್ಲೇ ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಗಂಭೀರ ಆರೋಪ ಕೇಳಿಬಂದಿದೆ.

    ಇಬ್ಬರು ಅಪ್ರಾಪ್ತೆಯರ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಗಳು ಸೇರಿದಂತೆ, ಐದು ಮಂದಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿ ಕೇಸ್ ದಾಖಲಾಗಿದೆ.

    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

    ಯಾರೆಲ್ಲ ಆರೋಪಿಗಳು?
    ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶರಣರು ಮೊದಲ ಆರೋಪಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ (ಮರಿಸ್ವಾಮಿ) ಮೂರನೇ ಆರೋಪಿ. ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು.

    ದೂರು ನೀಡಿದವರು ಯಾರು?
    ಉಚಿತ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿನಿಯರು ಮೈಸೂರು ನಗರದಲ್ಲಿರುವ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದಾರೆ.

    ಶುಕ್ರವಾರ ರಾತ್ರಿ 10ರ ವೇಳೆಗೆ ಸಮಿತಿಯು ದೂರು ನೀಡುವಂತೆ ಅಧಿಕಾರಿಗೆ ಸೂಚಿಸಿತ್ತು. ಅದರಂತೆ ರಾತ್ರಿ 10:30ರ ವೇಳೆಗೆ ದೂರು ದಾಖಲಾಗಿದೆ. ಸದ್ಯ ಇಬ್ಬರು ಬಾಲಕಿಯರು ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

    ಶ್ರೀಗಳ ಮೇಲಿರುವ ಆರೋಪ ಏನು?
    ಮಠದ ಅಧೀನದಲ್ಲಿರೋ ಶಾಲಾ ಮಕ್ಕಳ ದುರ್ಬಳಕೆ ಮಾಡಿ ಶ್ರೀಗಳು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜ.1, 2019ರಿಂದ ಜೂ.6, 2022ವರೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಕೃತ್ಯ ಉಳಿದ ಆರೋಪಿಗಳು ಸಾಥ್‌ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂದರ್ಶನ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಸಂಬಳ ಜಾಸ್ತಿ ಕೊಡ್ತೀನಿ ನನ್ನೊಂದಿಗೆ ಸಹಕರಿಸು ಎಂದ ಕಾಮುಕ

    ಸಂದರ್ಶನ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಸಂಬಳ ಜಾಸ್ತಿ ಕೊಡ್ತೀನಿ ನನ್ನೊಂದಿಗೆ ಸಹಕರಿಸು ಎಂದ ಕಾಮುಕ

    ಬೆಂಗಳೂರು: ಇಂಟರ್ವ್ಯೂ ನೆಪದಲ್ಲಿ ಕಾಮುಕ ಸಂದರ್ಶಕನೊಬ್ಬ ಯುವತಿಯೋರ್ವಳನ್ನು ಫ್ಯಾಕ್ಟರಿ ಬಳಿ ಕರೆಸಿಕೊಂಡು ಸಂಬಳ ಜಾಸ್ತಿ ಕೊಡ್ತೀನಿ ನನ್ನೊಂದಿಗೆ ಸಹಕರಿಸು ಎಂದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಷಣ್ಮುಗಂ ಎಂಬಾತ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಷಣ್ಮುಗಂ ಪಿಣ್ಯ 2ನೇ ಹಂತದಲ್ಲಿರುವ ಸರವಣ ಇಂಜಿನಿಯರಿಂಗ್ ವರ್ಕ್ ಕಂಪನಿಯ ಎಂ.ಡಿ ಆಗಿ ಕೆಲಸ ಮಾಡುತ್ತಿದ್ದಾನೆ. ಮೊದಲು ಇಂಟರ್ವ್ಯೂ ಪಾಸ್ ಆಗಿದ್ದಿರಾ ಕೆಲಸಕ್ಕೆ ಬನ್ನಿ ಎಂದು ಯುವತಿಗೆ ಆರೋಪಿ ಹೇಳಿದ್ದಾನೆ. ಬಳಿಕ ಎರಡನೇ ದಿನ ನಿಮ್ಮ ಸ್ಯಾಲರಿ ಬಗ್ಗೆ ಮಾತನಾಡಬೇಕು ಫ್ಯಾಕ್ಟರಿ ಬಳಿ ಬನ್ನಿ ಎಂದು ಯುವತಿಯನ್ನ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ.

    ಫ್ಯಾಕ್ಟರಿ ಬಳಿ ಯುವತಿಯನ್ನು ಕರೆಸಿಕೊಂಡ ಆರೋಪಿ ಕೆಲಸಕ್ಕೆ ಬಂದ ಬಳಿಕ ನಿನಗೆ ಸ್ಯಾಲರಿ ಜಾಸ್ತಿ ಕೊಡುತ್ತೇನೆ, ನಿನಗೆ ಬೈಕ್ ಕೊಡಿಸುತ್ತೇನೆ. ನೀನು ನನಗೆ ಸಹಕರಿಸು ಎಂದು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಗೊಂಡು ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

    ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ಕೊಟ್ಟ ಷಣ್ಮುಗಂ ವಿರುದ್ಧ ಯುವತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv