Tag: sex-change surgery

  • ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ನವದೆಹಲಿ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತನೆಯಾದ ನಾವಿಕ ಎಮ್‍ಕೆ ಗಿರಿ ಎಂಬವರನ್ನ ಭಾರತೀಯ ನೌಕಾ ಪಡೆ ಕೆಲಸದಿಂದ ವಜಾ ಮಾಡಿದೆ.

    ನಾವಿಕ ಮನೀಷ್ ಗಿರಿ ಅವರನ್ನ ವಿಶಾಖಪಟ್ಟಣಂನಲ್ಲಿ ನೌಕಾ ಸೇವೆಗೆ ನಿಯೋಜಿಸಲಾಗಿತ್ತು. ಆಗಸ್ಟ್‍ನಲ್ಲಿ ರಜೆಯಲ್ಲಿದ್ದಾಗ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಹಾಗೂ ಲಿಂಗ ಬದಲಾವಣೆಗಾಗಿ ಯಾವುದೇ ಅನುಮತಿ ಪಡೆದಿರಲಿಲ್ಲ.

    ಇದೀಗ ಭಾರತೀಯ ನೌಕಾ ಪಡೆ ನೌಕಾ ನಿಯಮಗಳ ಅಡಿಯಲ್ಲಿ ಇನ್ನು ನಿಮ್ಮ ಸೇವೆಯ ಅಗತ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ಮನೀಷ್ ಗಿರಿ ಅವರನ್ನ ಕೆಲಸದಿಂದ ತೆಗೆದುಹಾಕಿದೆ. ಈ ವ್ಯಕ್ತಿಯು ರಜೆಯಲ್ಲಿದ್ದಾಗ ತನ್ನ ಸ್ವಂತ ಇಚ್ಛೆಯಂತೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಮೂಲಕ ಅವರನ್ನು ಕೆಲಸಕ್ಕೆ ತೆಗೆದುಕೊಂಡಾಗ ಪರಿಗಣಿಸಲಾಗಿದ್ದ ಲಿಂಗ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಮಾರ್ಪಾಡು ಮಾಡಿದ್ದಾರೆ ಎಂದು ಹೇಳಿದೆ.

     

    ಅವರು ಭಾರತೀಯ ನೌಕೆಯಲ್ಲಿ ನಾವಿಕನಾಗಿ ಕೆಲಸಕ್ಕೆ ಸೇರುವಾಗ ಇದ್ದ ನೇಮಕಾತಿ ನಿಯಮ ಹಾಗೂ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ನೌಕಾಪಡೆ ಹೇಳಿದೆ.

    ಪ್ರಸ್ತುತ ಇರುವ ಸೇವಾ ನಿಯಮ ಮತ್ತು ನಿಬಂಧನೆಗಳ ಪ್ರಕಾರ ಲಿಂಗ ಸ್ಥಿತಿಯಲ್ಲಿ ಮಾರ್ಪಾಡು ಹಾಗೂ ವೈದ್ಯಕೀಯ ಸ್ಥಿತಿಯ ಹಿನ್ನೆಲೆಯಲ್ಲಿ ಅವರಿಗೆ ನಾವಿಕನಾಗಿ ಕೆಲಸದಲ್ಲಿ ಮುಂದುವರೆಯುವ ಅವಕಾಶವಿಲ್ಲ ಎಂದಿದೆ.

    ಇದೀಗ ಸಬಿ ಆಗಿ ಬದಲಾಗಿರುವ ಗಿರಿ, ತೃತೀಯಲಿಂಗಿಗಳಿಗೆ ಮಾಡಲಾಗುತ್ತಿರುವ ತಾರತಮ್ಯವನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.