Tag: Sewage

  • ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

    ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

    ವಿಜಯಪುರ: ಸಲಾಕೆ, ಬುಟ್ಟಿ ಹಿಡಿದು ಚರಂಡಿಯಿಂದಾದ ರಾಡಿಯನ್ನು ಸ್ವತಃ ಶಾಸಕ ದೇವಾನಂದ ಚವ್ಹಾಣ ಸ್ವಚ್ಛಗೊಳಿಸಿದ್ದಾರೆ. ಎಷ್ಟೇ ಸೂಚಿಸಿದರೂ ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಖುದ್ದು ಶಾಸಕರೇ ಸ್ವಚ್ಛಗೊಳಿಸಿದ್ದಾರೆ.

    ನಗರದ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.15ರ ಕಾವಿ ಪ್ಲಾಟ್ ನಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸ್ವಚ್ಛಗೊಳಿಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾವಿ ಪ್ಲಾಟ್ ನಲ್ಲಿ ಚರಂಡಿ ನೀರು ರಸ್ತೆ ಹಾಗೂ ಕೆಲ ಮನೆಗಳಿಗೆ ನುಗ್ಗಿತ್ತು. ಇದರ ಬಗ್ಗೆ ಸಾರ್ವಜನಿಕರು ಶಾಸಕ ದೇವಾನಂದ ಅವರಿಗೆ ಅನೇಕ ಬಾರಿ ದೂರು ನೀಡಿದ್ದರು. ಅಲ್ಲದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕರೆದೊಯ್ದು ಪರಿಸ್ಥಿತಿ ತೋರಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದನ್ನೂ ಓದಿ:ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    ಇಷ್ಟಾದರೂ ಯಾವುದೇ ಪ್ರಯೋಜನ ಆಗದ ಕಾರಣ ಖುದ್ದು ಶಾಸಕ ದೇವಾನಂದ ಚವ್ಹಾಣ ಸಲಾಕೆ, ಬುಟ್ಟಿ ಹಿಡಿದು ಸ್ವಚ್ಛತೆಗೆ ಮುಂದಾದರು. ಆಗ ದೌಡಾಯಿಸಿದ ಮಹನಾಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ದೇವಾನಂದ ತರಾಟೆಗೆ ತಗೆದುಕೊಂಡರು.

    ಈ ಸಮಸ್ಯೆ ಮಳೆ ಬಂದಾಗೆಲಲ್ಲ ಆಗುತ್ತೆ, ಶಾಶ್ವತ ಪರಿಹಾರ ಒದಗಿಸಿ ಎಂದು ಸೂಚಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಮಹನಗರ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಶಾಸಕ ದೇವಾನಂದ ಹಿಂದಿರುಗಿದರು.

  • ಇಂಜಿನಿಯರ್ ಎಡವಟ್ಟು- ವಿದ್ಯುತ್ ಕಂಬ ಸ್ಥಳಾಂತರಿಸದೇ ಚರಂಡಿ ನಿರ್ಮಾಣ

    ಇಂಜಿನಿಯರ್ ಎಡವಟ್ಟು- ವಿದ್ಯುತ್ ಕಂಬ ಸ್ಥಳಾಂತರಿಸದೇ ಚರಂಡಿ ನಿರ್ಮಾಣ

    ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರ ಸ್ಮಾರ್ಟ್ ಆಗುತ್ತಿದೆ. ಆದರೆ ಇದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಾಡುತ್ತಿರುವ ಕಾಮಗಾರಿ ಸಾರ್ವಜನಿಕರ ನಗೆಪಾಟಲಿಗೆ ಕಾರಣವಾಗಿದೆ.

    ನಗರದ ಸೈನಿಕ ಪಾರ್ಕ್ ಬಳಿ ಚರಂಡಿಯೊಳಗೆ ವಿದ್ಯುತ್ ಕಂಬ ಇದ್ದರೂ ಅವುಗಳನ್ನು ಸ್ಥಳಾಂತರ ಮಾಡದೇ ಚರಂಡಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ನಕ್ಕು ಸುಮ್ಮನಾಗಿರುತ್ತೇವೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಅದರಲ್ಲೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳು ಇರುವ ಸಮೀಪವೇ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆದಿದೆ.

    ಚರಂಡಿ ನಿರ್ಮಾಣ ಮಾಡುವ ಮೊದಲು ಈ ಕಂಬಗಳನ್ನು ಸ್ಥಳಾಂತರಿಸಬೇಕಿತ್ತು. ಆದರೆ ಅವುಗಳನ್ನು ಸ್ಥಳಾಂತರ ಮಾಡದೇ ಅವು ಇರುವ ಜಾಗದಲ್ಲೇ ಬಿಟ್ಟು ಚರಂಡಿ ನಿರ್ಮಾಣ ಮಾಡುವ ಮೂಲಕ ಇಂಜಿನಿಯರ್ ಗಳು ಕಾಮಗಾರಿ ಮಾಡಿ, ಎಡವಟ್ಟು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಬಳಿಯೇ ಈ ಕಾಮಗಾರಿ ನಡೆದಿರುವುದು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.

  • ನಿರಂತರ ಮಳೆಯಿಂದ ಕೆರೆಯಂತಾದ ಬಡಾವಣೆ- ರಸ್ತೆ, ಉದ್ಯಾನವನ ಮಾಯ

    ನಿರಂತರ ಮಳೆಯಿಂದ ಕೆರೆಯಂತಾದ ಬಡಾವಣೆ- ರಸ್ತೆ, ಉದ್ಯಾನವನ ಮಾಯ

    – ತಲೆಕೆಡಿಸಿಕೊಳ್ಳದ ರಾಯಚೂರು ನಗರಸಭೆ
    – ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು

    ರಾಯಚೂರು: ನಗರದಲ್ಲಿ ನಿರಂತರವಾಗಿ ಸುರಿದ ಮಳೆ ಕೆಲವೆಡೆ ಭಾರೀ ಅವಾಂತರ ಸೃಷ್ಟಿಸಿದೆ. ಕೆಲ ಪ್ರದೇಶದ ಜನ ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನಿಂದ ರಸ್ತೆಗಳೇ ಮಾಯವಾಗಿವೆ. ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಇಲ್ಲಿನ ಬೆಲ್ಲಂ ಕಾಲೋನಿಯಲ್ಲಿ ಸುಮಾರು ಐದು ಅಡಿಯಷ್ಟು ನೀರು ನಿಂತಿದೆ. ಇದರಿಂದ ಜನ ಹೊರಗಡೆ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಹರಿದು ಹೋಗದೆ ನಿಂತಲ್ಲೇ ನಿಂತಿದೆ. ರಸ್ತೆ, ಗಾರ್ಡನ್ ಜಾಗ, ಖಾಲಿ ಸೈಟ್ ಯಾವುದು ಎಲ್ಲಿದೆ ಅನ್ನೋದು ತಿಳಿಯದಷ್ಟು ಮಟ್ಟಿಗೆ ನೀರು ನಿಂತಿದೆ. ಐದು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿರುವುದರಿಂದ ಕಾರು, ಬೈಕ್ ಓಡಾಟಕ್ಕೆ ಅಡ್ಡಿಯಾಗಿದೆ.

    ಚರಂಡಿ ವ್ಯವಸ್ಥೆ ಸರಿಪಡಿಸಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಿದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಯುತ್ತದೆ. ಆದ್ರೆ ಕಳೆದ ಐದು ವರ್ಷಗಳಿಂದ ಇಲ್ಲಿನ ನಿವಾಸಿಗಳು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಎಡಬಿಡದೆ ಎರಡು ದಿನ ಕಾಲ ಮಳೆ ಸುರಿದಿದ್ದರಿಂದ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸ್ವಲ್ಪ ತಗ್ಗು ಪ್ರದೇಶದಲ್ಲಿ ಉದ್ಯಾನವನದ ಜಾಗ ಇರುವುದರಿಂದ ಮಳೆಯ ನೀರೆಲ್ಲಾ ತಗ್ಗುಪ್ರದೇಶದಲ್ಲಿ ನಿಂತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲೇ ಸುರಿದಿದ್ದರಿಂದ ಪಕ್ಕದಲ್ಲಿನ ರಸ್ತೆಯೂ ಮುಳುಗಡೆಯಾಗಿದೆ. ಭಯದಲ್ಲೇ ನೀರಿನಲ್ಲಿ ರಸ್ತೆಯನ್ನ ಹುಡುಕಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಇನ್ನೂ ಕೆಲವರು ಮನೆಬಿಟ್ಟು ಹೊರಗೆ ಬಂದಿಲ್ಲ. ನೀರು ನಿಂತಲ್ಲೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗಿದೆ. ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ಮಳೆಯಿಂದ ಇನ್ನಷ್ಟು ಆತಂಕ ಶುರುವಾಗಿದೆ.

    ಕೂಡಲೇ ನೀರನ್ನ ಖಾಲಿ ಮಾಡಿ ರಾಜಕಾಲುವೆಗೆ ಚರಂಡಿ ಸಂಪರ್ಕ ಕಲ್ಪಿಸುವಂತೆ ಬೆಲ್ಲಂ ಕಾಲೋನಿ ನಿವಾಸಿಗಳು ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ರಾಯಚೂರಿನಲ್ಲಿ ಮಳೆ ನಿಂತಿದ್ದು ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಬಂದರೆ ಇಲ್ಲಿನ ನಿವಾಸಿಗಳು ಇನ್ನೂ ಹೆಚ್ಚಿನ ತೊಂದರೆಯನ್ನ ಅನುಭವಿಸಲಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ನೀರನ್ನು ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಅನ್ನೋದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.

  • ಚರಂಡಿ ಕಾಮಗಾರಿ ವಿಳಂಬ, ಕೊಪ್ಪಳದಲ್ಲಿ ಹೋಟೆಲ್‍ಗಳು ಬಂದ್ – ವ್ಯಾಪಾರಸ್ಥರು, ಸಾರ್ವಜನಿಕರ ಪರದಾಟ

    ಚರಂಡಿ ಕಾಮಗಾರಿ ವಿಳಂಬ, ಕೊಪ್ಪಳದಲ್ಲಿ ಹೋಟೆಲ್‍ಗಳು ಬಂದ್ – ವ್ಯಾಪಾರಸ್ಥರು, ಸಾರ್ವಜನಿಕರ ಪರದಾಟ

    ಕೊಪ್ಪಳ: ನಗರದಲ್ಲಿ ಒಂದಲ್ಲ ಒಂದು ಸಮಸ್ಯೆ ಜನರನ್ನು ಕಾಡುತ್ತಿದ್ದು, ದೂಳಿನ ಸಮಸ್ಯೆಯಿಂದ ಕೊಪ್ಪಳ ಜನತೆ ಕಂಗೆಟ್ಟಿದ್ದರು. ಇದೀಗ ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ.

    ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ಸಿಸಿ ರಸ್ತೆ ಆಯಿತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಇದೀಗ ಚರಂಡಿ ಕಾಮಗಾರಿ ಪ್ರಾರಂಭವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದೆ ಚರಂಡಿಗಳು ಹಳ್ಳಹಿಡಿದಿವೆ. ಸದ್ಯ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರದವರು ಕೈಗೆತ್ತಿಕೊಂಡಿದ್ದು, ನಾನಾ ಸಮಸ್ಯೆಯಿಂದ ಚರಂಡಿ ಕಾಮಗಾರಿ ವಿಳಂಬವಾಗುತ್ತಿದೆ.

    ಇದರಿಂದ ಸಾರ್ವಜನಿಕರು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಚರಂಡಿಯ ದುರ್ವಾಸನೆಯಿಂದ ರಸ್ತೆ ಮೇಲೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು, ವ್ಯಾಪಾರಸ್ಥರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲೇ ಕೂರುವಂತಾಗಿದೆ. ಇದಕ್ಕೆ ಕೊಪ್ಪಳ ನಗರಸಭೆ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದೂರುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಚರಂಡಿ ಕಾಮಗಾರಿಗೆ ಸಹಾಯ ಸಹಕಾರ ನೀಡುತ್ತಿಲ್ಲ. ಹೀಗಾಗಿ ಚರಂಡಿ ಕಾಮಗಾರಿಗೆ ತೊಂದರೆಯಾಗುತ್ತಿದೆ ದೂರಿದ್ದಾರೆ.

    ಈ ಬಗ್ಗೆ ಕೊಪ್ಪಳ ನಗರಸಭೆ ಪೌರಾಯುಕ್ತ ಮಂಜುನಾಥ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಯವರಿಗೆ ಈ ಕೆಲಸ ವಹಿಸಲಾಗಿದೆ. ಅದು ಅವರ ಕೆಲಸ ಸಾಕಷ್ಟು ಬಾರಿ ಅವರಿಗೆ ಸಹಕಾರ ನೀಡಲಾಗಿತ್ತು. ಈಗಲೂ ನಗರಸಭೆಯಿಂದ ಸಹಾಯ ಮಾಡುತ್ತಿದ್ದೇವೆ. ಅವರೇ ಸರಿಯಾದ ಸಮಯದಲ್ಲಿ ಕಾಮಗಾರಿ ಮಾಡುತ್ತಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ದೂರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.