Tag: seva cafe team

  • ಟೆಕ್ಕಿಗಳ ಶ್ರಮದಿಂದ ಬ್ರಿಟಿಷರ ಕಾಲದ ಸರ್ಕಾರಿ ಶಾಲೆಯ ಚಿತ್ರಣವೇ ಬದಲು

    ಟೆಕ್ಕಿಗಳ ಶ್ರಮದಿಂದ ಬ್ರಿಟಿಷರ ಕಾಲದ ಸರ್ಕಾರಿ ಶಾಲೆಯ ಚಿತ್ರಣವೇ ಬದಲು

    ತುಮಕೂರು: ಬೆಂಗಳೂರಲ್ಲಿ ಲಕ್ಷ ಲಕ್ಷ ರೂಪಾಯಿ ದುಡಿಯುವ ಟೆಕ್ಕಿಗಳು ವೀಕೆಂಡ್ ಬಂತೆಂದರೆ ಪ್ರವಾಸಿತಾಣಗಳು, ಮೋಜು ಮಸ್ತಿಯಲ್ಲಿ ಕಾಲ ಕಳೆಯುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಟೆಕ್ಕಿಗಳ ತಂಡ ತಮ್ಮ ವೀಕೆಂಡ್ ದಿನಗಳನ್ನು ಸಮಾಜ ಸೇವೆ ಮಾಡುವ ಮೂಲಕ ಸಾರ್ಥಕವಾಗಿ ಕಳೆಯುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಶಿಥೀಲಾವಸ್ಥೆಯಲ್ಲಿದ್ದ ಬ್ರಿಟೀಷರ ಕಾಲದ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಬೆಂಗಳೂರು ಟೆಕ್ಕಿಗಳು ರಚಿಸಿಕೊಂಡಿರೋ ಸೇವಾ ಕೆಫೆಗೆ ಈ ವಿಚಾರ ಬಿದ್ದಿದ್ದೇ ತಡ, ಬ್ರಿಟೀಷರ ಕಾಲದ ಶಾಲೆಯ ಗ್ರಹಗತಿಯೇ ಬದಲಾಗಿ ಹೋಯಿತು.

    ಶನಿವಾರ ಬಂತು ಅಂದರೆ ಸಾಕು, ಗುಂಪು ಗುಂಪಾಗಿ ಕಡಬಕ್ಕೆ ತೆರಳುತ್ತಿದ್ದ ಸೇವಾ ಕೆಫೆ ವಾಟ್ಸಪ್ ಗ್ರೂಪ್ ಸದಸ್ಯರು, ತಾವೇ ನಿಂತು ಎಲ್ಲಾ ಕೆಲಸ ಮಾಡಿದರು. ಐದು ತಿಂಗಳ ಕಾಲ ಗಾರೆ ಕೆಲಸ, ಬಡಗಿ ಕೆಲಸ ಮಾಡಿದರು. ಗೋಡೆಗಳಿಗೆ ಬಣ್ಣ ಹಚ್ಚಿದರು. ಪರಿಣಾಮ ಸರ್ಕಾರಿಯ ಶಾಲೆಯ ಚಿತ್ರಣವೇ ಸಂಪೂರ್ಣ ಬದಲಾಗಿದೆ.

    ಅಂದ ಹಾಗೇ ಈ ಊರಿಗೂ ಈ ಸಂಸ್ಥೆಗೂ ಸಂಬಂಧವೇ ಇಲ್ಲ. ಗೆಳೆಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಇಲ್ಲಿ ಬಂದು ಬೆಂಗಳೂರಿನ ಸೇವಾ ಕೆಫೆ ಗ್ರೂಪ್ ಸಮಾಜಮುಖಿ ಕೆಲಸ ಮಾಡಿದೆ. ಇದಕ್ಕೆ ಖರ್ಚಾದ 5 ಲಕ್ಷ ಹಣವನ್ನು ಗ್ರೂಪ್ ಸದಸ್ಯರೇ ಭರಿಸಿರುವುದಾಗಿ ಸೇವಾ ಕೆಫೆ ಅಡ್ಮಿನ್ ತಾರಾನಾಥ್ ಹೇಳಿದ್ದಾರೆ.

    ಸೇವಾ ಕೆಫೆ ಕೃಪೆಯಿಂದ ಹಾಳು ಕೊಂಪೆಯಂತಿದ್ದ ಶಾಲಾ ಕಟ್ಟಡ ಈಗ ಮರುಜೀವ ಪಡೆದಿದೆ. ತುಂಬಾ ಕಲರ್ ಫುಲ್ ಆಗಿ ಕಾಣುತ್ತಿದೆ. ಇದಕ್ಕೆ ಮುಖ್ಯಶಿಕ್ಷಕಿ ಮಂಜಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.

    ಕೇವಲ ಕಟ್ಟಡ ದುರಸ್ಥಿ ಮಾತ್ರವಲ್ಲ, ಮುಂದಿನ ದಿನದಲ್ಲಿ ಈ ಶಾಲೆಯ ವಿದ್ಯಾಥಿಗಳಿಗೆ ಬೇಕಾದ ಸವಲತ್ತು ಒದಗಿಸಲು ಸೇವಾ ಕೆಫೆ ಟೀಮ್ ಮುಂದಾಗಿದೆ.