ಪುಣೆ: ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನದ ಮೊದಲ ಭಾಗವಾಗಿ 30 ಕೋಟಿ ಜನರಿಗೆ ಲಸಿಕೆ ಪೊರೈಕೆ ಮಾಡಲು 3 ಟ್ರಕ್‍ಗಳಲ್ಲಿ ಲಸಿಕೆ ಸಾಗಾಟಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ 3 ಟ್ರಕ್ ಗಳಲ್ಲಿ ಹೊರಟ ಲಸಿಕೆ ದೇಶದ 13 ಸ್ಥಳಗಳಿಗೆ ವಿಮಾನದ ಮೂಲಕ ಸಾಗಲಿದೆ.
ಲಸಿಕೆ ಹೊಂದಿರುವ ಎಲ್ಲಾ ಮೂರು ಟ್ರಕ್‍ಗಳು ತಾಪಮಾನ ನಿಯಂತ್ರಿತವಾಗಿದ್ದು. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ಸರಕು ಸಾಗಾಟ ವಿಮಾನದ ಮೂಲಕ ದೇಶದ ವಿವಿಧ ಲಸಿಕಾ ಕೇಂದ್ರಕ್ಕೆ ರವಾನೆಯಾಗಲಿದೆ. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ ಬೆಳಗ್ಗೆ 5 ಗಂಟೆಗೆ ಹೊರಟ ಟ್ರಕ್‍ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಕೊಡಲಾಯಿತು.

ಲಸಿಕೆಯ ರವಾನೆಯ ಕುರಿತು ಮಾತಾನಾಡಿದ ಪುಣೆಯ ಡಿಸಿಪಿ ನಮ್ರತಾ ಪಾಟೀಲ್, ಇನ್‍ಸ್ಟಿಟ್ಯೂಟ್ ಮೊದಲ ಲಸಿಕೆ ರವಾನೆಯನ್ನು ಎಲ್ಲಾ ಪೂರ್ವ ತಯಾರಿಯೊಂದಿಗೆ ಮಾಡಿದೆ. ನಾವು ಲಸಿಕೆಯ ರವಾನೆಗಾಗಿ ಬೇಕಾಗಿದ್ದ ಭದ್ರತೆಯನ್ನು ಮಾಡಿಕೊಟ್ಟಿದ್ದೇವೆ ಎಂದರು.

13 ನಗರಗಳಿಗೆ ಲಸಿಕೆ: ಪುಣೆ ವಿಮಾನ ನಿಲ್ದಾಣದಿಂದ ಲಸಿಕೆ 13 ಸ್ಥಳಗಳಾದ ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನಾಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರಗಳಿಗೆ ವಿಮಾನದ ಮೂಲಕ ತಲುಪಲಿದೆ.

ಟ್ರಕ್ ಒಂದರಲ್ಲಿ 478 ಬಾಕ್ಸ್ ಗಳು ತುಂಬಿ ಹೊರಟಿದ್ದು ಒಂದು ಬಾಕ್ಸ್ ನ ತೂಕ 32 ಕೆ.ಜಿ ಆಗಿದೆ. ಇದು 10 ಗಂಟೆ ಸುಮಾರಿಗೆ ಲಸಿಕಾ ಕೇಂದ್ರಗಳಿಗೆ ಬಂದಿಳಿಯಲಿದೆ. ಮುಂದಿನ ದಿನಗಳಲ್ಲಿ ಇತರ 5 ಟ್ರಕ್‍ಗಳಲ್ಲಿ ಗುಜಾರಾತ್, ಮಧ್ಯಪ್ರದೇಶ ಮತ್ತು ಹರಿಯಾಣಕ್ಕೆ ಸಂಚಾರ ಮಾಡಲಿದ್ದು, ಈ ವಿಶೇಷ ಟ್ರಕ್‍ಗಳು ಕೂಲ್ ಎಕ್ಸ್ ಕೋಲ್ಡ್ ಚೈನ್ ಲಿಮಿಟೆಡ್‍ಗೆ ಸೇರಿರುವುದಾಗಿದೆ.
ಜನವರಿ 16ರಿಂದ ಪ್ರಾರಂಭವಾಗಲಿರುವ ಲಸಿಕಾ ಪ್ರಕ್ರಿಯೆಯು ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಗೆ ನೀಡುವ ಸಲುವಾಗಿ ಸರ್ಕಾರ ಸೆರಂ ಇನ್‍ಸ್ಟಿಟ್ಯೂಟ್‍ನಿಂದ 1.1 ಕೋಟಿ ಡೋಸ್ ಖರೀದಿಸಲು ಆದೇಶ ಹೊರಡಿಸಿದೆ. ಕೋವಿಶೀಲ್ಡ್ ಪ್ರತಿ ಡೋಸ್‍ಗೆ 210 ರೂ ವೆಚ್ಚವಾಗಲಿದೆ. ಏಪ್ರಿಲ್ ವೇಳೆಗೆ 4.5 ಕೋಟಿ ಡೋಸ್ ಖರೀದಿಸಲು ಸರ್ಕಾರ ನಿರ್ಧಾರ ಮಾಡಿದೆ.
ಕೆಲವೇ ಗಂಟೆಗಳಲ್ಲಿ ಬೆಂಗಳೂರಿಗೆ ಕೋವಿಶೀಲ್ಡ್ ಲಸಿಕೆ ಆಗಮನವಾಗಲಿದ್ದು, ಪುಣೆಯಿಂದ ಕೋವಿಶೀಲ್ಡ್ ಲಸಿಕೆ ಹೊತ್ತ ವಿಮಾನ ಬೆಂಗಳೂರಿನತ್ತ ಹಾರಾಟ ಮಾಡಿದೆ. ಕರ್ನಾಟಕಕ್ಕೆ 13 ಲಕ್ಷದ 34 ಸಾವಿರ ಕೋವಿಡ್ ಲಸಿಕೆ ಪೊರೈಕೆಯಾಗಲಿದೆ. ಆರಂಭದಲ್ಲಿ ಕರ್ನಾಟಕದಲ್ಲಿ 6 ಲಕ್ಷದ 30 ಸಾವಿರ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ತಿರ್ಮಾನಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 235 ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆಯಾಗಲಿದೆ.