ಹೈದರಾಬಾದ್: ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ (Lingayat Separate Religion) ಕೂಗು ಮುನ್ನೆಲೆಗೆ ಬಂದಿದೆ.
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಭಾನುವಾರ ಹೈದರಾಬಾದ್‌ನಲ್ಲಿ (Hyderabad) 10 ಸಾವಿರಕ್ಕೂ ಹೆಚ್ಚು ಲಿಂಗಾಯತರು ರಣಕಹಳೆ ಮೊಳಗಿಸಿದ್ದಾರೆ. ಬಸವ ಪೀಠದ ಗಂಗಾಮಾತೆ ನೇತೃತ್ವದಲ್ಲಿ ನಾಗನಪಲ್ಲಿ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರತ್ಯೇಕ ಧರ್ಮಕ್ಕೆ ಹಕ್ಕೋತ್ತಾಯ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರ , ಹೂಲಸೂರು ಶ್ರೀ, ರಾಜೇಶ್ವರ್ ಶಿವಾಚಾರ್ಯರು ಸೇರಿದಂತೆ ಹತ್ತಾರು ಲಿಂಗಾಯತ ಮುಖಂಡರು ಭಾಗಿಯಾಗಿದ್ದಾರೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೀದರ್‌ನಿಂದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕಿಚ್ಚು ಪ್ರಾರಂಭವಾಗಿತ್ತು.
ದಾವಣಗೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಸರಿಯಾಗಿ ಅನುದಾನ ಸಿಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ನಾಯಕ ಜನಾಂಗದ ವಿದ್ಯಾರ್ಥಿನಿಲಯ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರ ಕರ್ನಾಟಕ್ಕೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ಅಲ್ಲದೇ ಶಾಸಕರಾದ ಬಸವರಾಜ್ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ಕೊಡದೇ, ಅದನ್ನು ಕಿತ್ತುಕೊಂಡಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಜನರಿಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.
ನಮಗೂ ಅಖಂಡ ಕರ್ನಾಟಕದಲ್ಲಿ ಇರಬೇಕು ಎನ್ನುವುದು ಇಷ್ಟ. ಆದರೆ ಈ ರೀತಿ ಧೋರಣೆ ಮಾಡಿದರೆ, ಉಗ್ರವಾದ ಹೋರಾಟದ ಹಾದಿಯನ್ನು ತುಳಿಯುವುದು ಸರ್ವೇಸಾಮಾನ್ಯ. ಅಧಿವೇಶನ ಮುಗಿಯುವುದರೊಳಗಾಗಿ ಕನಿಷ್ಠ ಐದಾರು ಇಲಾಖೆಗಳನ್ನಾದರೂ ಕನ್ನಡ ಸೌಧಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟವನ್ನು ಲೋಕಸಭಾ ಚುನಾವಣೆಯಾದ ಬಳಿಕ ಮುಂದುವರಿಸುತ್ತೇವೆಂಬ ಶಾಸಕ ಎಂ.ಬಿ.ಪಾಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಹೇಳಿರುವುದಕ್ಕೂ ಅರ್ಥವಿದೆ. ಕೆಲ ತಾಂತ್ರಿಕ ಕಾರಣದಿಂದ ಲೋಕಸಭಾ ಚುನಾವಣೆವರೆಗೂ ಹೋರಾಟವನ್ನು ತಡೆಹಿಡಿದಿದ್ದಾರೆ. ಆದರೆ ಅದು ಯಾವ ಕಾರಣಕ್ಕೆ ಎನ್ನುವುದು ಗೊತ್ತಾಗುತ್ತಿಲ್ಲ. ನಮ್ಮ ಹೋರಾಟ ಮಾತ್ರ ನಿರಂತರವಾಗಿ ಸಾಗುತ್ತದೆ. ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಮನವಿಯನ್ನು ತಿರಸ್ಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಲಂಡನ್ ಗೆ ಹೋಗಿ ಬಸವಣ್ಣನವರ ಪ್ರತಿಮೆಯನ್ನು ಉದ್ಘಾಟನೆ ಮಾಡಿ ಬಂದಿದ್ದಾರೆ. ಅವರಿಗೆ ಬಸವಣ್ಣನವರ ಬಗ್ಗೆ ಅಪಾರವಾದ ಗೌರವ ಇದೆ. ಕೆಲವು ಕಾಣದ ಕೈಗಳು ಪ್ರತ್ಯೇಕ ಧರ್ಮದ ಬಗ್ಗೆ ಅವರಿಗೆ ತಪ್ಪು ಮಾಹಿತಿಯನ್ನು ನೀಡಿವೆ. ಈ ಬಗ್ಗೆ ನಾವೆಲ್ಲ ಒಮ್ಮೆ ಹೋಗಿ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಅಂಬೇಡ್ಕರ್ ಸಂವಿಧಾನ ಇದೆ. ಅದರ ಮೂಲಕ ಪ್ರತ್ಯೇಕವಾಗುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಶೈವ ಲಿಂಗಾಯತ ಒಂದೇ ಧರ್ಮ, ಪ್ರತ್ಯೇಕ ಧರ್ಮ ಮಾಡಲು ಹೋಗಿದ್ದು ತಪ್ಪಾಗಿದೆ ಎಂದು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಕ್ಕೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದೆ ಎಂದು ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ವೀರಸೋಮೇಶ್ವರ ಸ್ವಾಮಿಜಿ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಯಲ್ಲಿ ಪ್ರತ್ಯೇಕ ಧರ್ಮ ಮಾಡಲು ಕೆಲವರು ಪ್ರಚೋದಿಸಿದ್ದರು. ಆದರೆ ಈಗಿನ ಸಮ್ಮಿಶ್ರ ಸರ್ಕಾರ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಮಾಡುವ ಸಾಧ್ಯತೆ ಕಡಿಮೆಯಿದೆ. ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಲಿಂಗಾಯತ ಹಾಗು ವೀರಶೈವ ಪ್ರತ್ಯೇಕ ಧರ್ಮ ಮಾಡುವ ಒಲವು ಇಲ್ಲ ಹೇಳಿದ್ದಾರೆ. ಸದ್ಯ ರಾಜ್ಯದ ಕಾಂಗ್ರೆಸ್ ನಾಯಕರು ಕೂಡ ಈ ಕುರಿತು ಕೇಂದ್ರ ನಾಯಕರಿಗೆ ಮನವರಿಗೆ ಮಾಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಧರ್ಮ ವಿಭಜನೆ ವಿಚಾರದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ವಿಳಂಬ ಮಾಡುತ್ತಿರುವುದು ಸರಿ ಅಲ್ಲ. ವಿಳಂಬದಿಂದಾಗಿ ರೈತರ ಆತ್ಮಹತ್ಯೆಗಳು ಮುಂದುವರಿದಿವೆ. ಕಬ್ಬು ಬೆಳೆಗಾರ ಸಮಸ್ಯೆಯ ಬಗ್ಗೆಯೂ ಸರಕಾರ ಪರಿಹಾರಕ್ಕೆ ಚಿಂತಿಸಬೇಕು ಎಂದರು.
ಡಿಕೆ ಶಿವಕುಮಾರ್ ಹೇಳಿದ್ದು ಏನು?
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತನಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ಮೊನ್ನೆ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದರು.
ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ದೇವೆ ಎನ್ನುವ ಹೇಳಿಕೆಗೆ ನಾನು ಬದ್ಧನಾಗಿದ್ದು, ಪ್ರಜ್ಞಾ ಪೂರ್ವಕವಾಗಿಯೇ ಆತ್ಮಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.
ಪತ್ಯೇಕ ಲಿಂಗಾಯತ ಧರ್ಮಕ್ಕೆ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ವಿ ಎನ್ನುವ ಹೇಳಿಕೆಗೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಪ್ರಜ್ಞಾ ಪೂರ್ವಕವಾಯೇ ಆತ್ಮಾವಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ. ಯಾವತ್ತು ಧರ್ಮ, ಜಾತಿ ವಿಚಾರದಲ್ಲಿ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಮ್ಮ ಹೇಳಿಕೆಗೆ ಸಮರ್ಥಿಸಿಕೊಂಡರು.
ಈ ಬಗ್ಗೆ ಬೇರೆಯವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ನನ್ನ ಮನಸ್ಸಿಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ. ಹಿಂದಿನ ಸರ್ಕಾರ ಪ್ರತ್ಯೇಕ ಧರ್ಮ ಮಾಡುವಾಗ ನಾನು ಬೇಡವೆಂದು ಹೇಳಬೇಕಿತ್ತು. ಆದರೆ ಹಲವು ಸಚಿವರ ಅಭಿಪ್ರಾಯ ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಅದಕ್ಕೆ ಬೆಂಬಲ ಸೂಚಿಸಿದ್ದೆ. ಯಾವುದೇ ಕಾರಣಕ್ಕೂ ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಂತಹ ಕೆಲಸ ಮಾಡಿ, ನಾವು ದೊಡ್ಡ ತಪ್ಪು ಮಾಡಿದ್ದೇವು ಪಶ್ಚಾತ್ತಾಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು
ನನ್ನ ಹೇಳಿಕೆಯನ್ನು ತೆಗಳುವವರು ತೆಗಳಲಿ, ಮಾನನಷ್ಟ ಮೊಕದ್ದಮೆ ಹಾಕುವವರು ಹಾಕಲಿ, ಬೈಯುವವರು ಬೈಯಲಿ. ಯಾರು ಏನೇ ಅಂದರೂ, ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಖಡಕ್ ಆಗಿಯೇ ತಿಳಿಸಿದರು.
ಬಳ್ಳಾರಿ ಚುನಾವಣೆ ಬಗ್ಗೆ ಮಾತನಾಡಿ, ನವೆಂಬರ್ 6ನೇ ತಾರೀಖಿನವರೆಗೂ ಕಾಯೋಣ, ಶ್ರೀರಾಮುಲು ಅಣ್ಣನವರು ಕನಕಪುರದ ಗೌಡರಿಗೇನು ಕೆಲಸ ಎಂದು ಹೇಳುತ್ತಿದ್ದಾರೆ. ಅವರನ್ನು ನಾನೇಕೆ ತುಳಿಯೋಕೆ ಹೋಗೋಣ. ಅವರನ್ನು ಬೇಕಾದರೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ರು.
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೇ ಕಾರಣವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ, ಮುಖಂಡರುಗಳು ಪ್ರತ್ಯೇಕ ಧರ್ಮದ ಹೋರಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಭಯ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಹೋರಾಟವನ್ನು ಬ್ರೇಕ್ ಹಾಕಲು ಮುಖಂಡರುಗಳು ಮುಂದಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ಯಾವುದೇ ಸಮಾವೇಶ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳನ್ನು ನಡೆಸದಂತೆ ಲಿಂಗಾಯತ ಜಾಗತಿಕ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ್ ಸ್ವಾಮಿಗಳು ನಿರ್ಣಯ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ.
ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದ್ದು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೇ ಎಂಬುದು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ, ಲಿಂಗಾಯತ ಜಾಗತಿಕ ಮಹಾಸಭಾದ ಮುಖಂಡರೊಂದಿಗೆ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ವೇಳೆ ಎಚ್ಚರಿಕೆ ನಡೆ ಅನುಸರಿಸಲು ಮಹಾಸಭಾ ಮುಂದಾಗಿದ್ದು, ತಾತ್ಕಾಲಿಕವಾಗಿ ಹೋರಾಟಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದ್ದಾರೆ. ಇದರಿಂದಾಗಿ ಲಿಂಗಾಯತ ಧರ್ಮದ ಯಾವುದೇ ಬಹಿರಂಗ ಸಭೆ, ಸಂಸದರ ಮನೆ ಮುತ್ತಿಗೆ ಹಾಗೂ ಸಮಾವೇಶಗಳನ್ನು ನಡೆಸದಂತೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
ಜಾಗತಿಕ ಮಹಾಸಭಾದ ನಿರ್ಧಾರಕ್ಕೆ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದು, ಪ್ರತಿಭಟನೆಯನ್ನು ಕೈ ಬಿಟ್ಟರೆ ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಲಿಂಗಾಯತ ಜಾಗತಿಕ ಮಹಾಸಭಾ ತೀರ್ಮಾನಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಅಲ್ಲದೇ ಸಭಾ ತೀರ್ಮಾನದ ನಡುವೆಯೂ ನವೆಂಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ನಾಯಕರ ನಡುವೆ ಜಟಾಪಟಿ ಆರಂಭವಾಗಿದೆ.
ನೂತನ ಸರ್ಕಾರ ರಚನೆ ಸಂಬಂಧ ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡುವ ಕುರಿತು ಜಟಾಪಟಿ ನಡೆದಿದೆ ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವುದರಿಂದ ಎಂಬಿ ಪಾಟೀಲ್ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಸಲಹೆಗೆ ವಿಜಯಪುರದ ಇಬ್ಬರು ಲಿಂಗಾಯತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತಮ್ಮ ಮಾತಿಗೆ ಪಕ್ಷದ ನಾಯಕರು ಬೆಲೆ ನೀಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮುದಾಯವನ್ನು ಒಡೆದವರು ಎಂ.ಬಿ.ಪಾಟೀಲ್ ಎಂದು ಆರೋಪಿಸಿದ್ದಾರೆ. ಅಲ್ಲದೇ ಚುನಾವಣೆಯ ವೇಳೆ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡದ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡಿದ್ದ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಎಂಬಿ ಪಾಟೀಲ್ ಹಣ ಸಹಾಯ ಮಾಡಿ ಸೋಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಭೆಯಲ್ಲಿ ಲಿಂಗಾಯತ ಶಾಸಕರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬರಲು ಕಾರಣ ಎಂಬಿ ಪಾಟೀಲ್ ಕಾರಣ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿರುವ ಶಾಸಕರು ಒಟ್ಟು 17 ಜನ ಲಿಂಗಾಯತ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಅವರವನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಎಂಬಿ ಪಾಟೀಲ್ ಅವರಿಗೆ ಯಾವುದೇ ಸ್ಥಾನಮಾನ ಕೊಡಬಾರದು. ಉಳಿದ 15 ಲಿಂಗಾಯತ ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನ ಅಲಿಸಿರುವ ಕಾಂಗ್ರೆಸ್ ಮುಖಂಡರು ಈ ಕುರಿತು ಕೇಂದ್ರ ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ವೀರಶೈವ ಲಿಂಗಾಯತರಿಂದ ಬೇಡಿಕೆ: ಲಿಂಗಾಯತರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎನ್ನುವ ಕೂಗು ಸದ್ಯ ಜೋರಾಗಿದ್ದು, ಈ ಕುರಿತು ಲಾಬಿ ನಡೆಸಲು ಲಿಂಗಾಯತ ಸಮಾಜದ ಪ್ರಮುಖದ ಸ್ವಾಮೀಜಿಗಳೇ ಈಗ ಅಖಾಡಕ್ಕೆ ಇಳಿದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಈಗಾಗಲೇ ನಮಗೆ ಸೋಲಾಗಿದ್ದು, ಸಚಿವರು ಸೋತಿದ್ದಾರೆ. ಈಗ ಆಗಿರುವ ನಷ್ಟವನ್ನು ಸರಿಪಡಿಸಲು ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.
ಒಂದು ವೇಳೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡದೇ ಇದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಏಟು ಬೀಳುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಮುಂದೆ ಈ ಸಮಸ್ಯೆ ಆಗದೇ ಇರಲು ಉಪಮುಖ್ಯಮಂತ್ರಿ ಪಟ್ಟವನ್ನು ನೀಡುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರೆ.