Tag: separate district

  • ಗೆದ್ದು ಮಂತ್ರಿಯಾಗಿ ಹುಣಸೂರನ್ನು ಜಿಲ್ಲೆ ಮಾಡ್ತೇನೆ- ವಿಶ್ವನಾಥ್ ಶಪಥ

    ಗೆದ್ದು ಮಂತ್ರಿಯಾಗಿ ಹುಣಸೂರನ್ನು ಜಿಲ್ಲೆ ಮಾಡ್ತೇನೆ- ವಿಶ್ವನಾಥ್ ಶಪಥ

    ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತೆ ಮೈಸೂರು ವಿಭಜನೆಯ ಕೂಗು ಎತ್ತಿದ್ದು, ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಶಪಥ ಮಾಡಿದ್ದಾರೆ.

    ಹುಣಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಅಖಾಡಕ್ಕಿಳಿದ ಮೊದಲ ದಿನವೇ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನಾನು ಹುಣಸೂರಿನಿಂದ ಗೆದ್ದು ಮಂತ್ರಿಯಾಗುತ್ತೇನೆ. ಹುಣಸೂರು ತಾಲೂಕನ್ನು ಹೊಸ ಜಿಲ್ಲೆಯಾಗಿ ಮಾಡುತ್ತೇನೆ. ಇದು ನನ್ನ ಶಪಥ ಎಂದು ಭರವಸೆ ನೀಡಿದ್ದಾರೆ.  ಇದನ್ನೂ ಓದಿ: ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ನನ್ನದು ಬರೀ ಮಾತು, ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡುತ್ತೇನೆ. ನಮ್ಮದೇ ಸರ್ಕಾರ ಇದೆ. ಹುಣಸೂರು ತಾಲೂಕಿನ್ನು ಜಿಲ್ಲೆಯನ್ನಾಗಿ ಮಾಡಿಯೇ ಮಾಡುತ್ತೇನೆ. ಅದಕ್ಕೆ ದೇವರಾಜ ಅರಸು ಹೆಸರನ್ನು ಇಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶದ ಮರುದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ವಿಶ್ವನಾಥ್ ಮಾತು ಕೊಟ್ಟಿದ್ದಾರೆ.

    ಬಿಜೆಪಿ ಸೇರುವುದಕ್ಕೂ ಮುನ್ನ ಸಹ ಸಹ ವಿಶ್ವನಾಥ್ ಅವರು ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ್ದರು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.

  • ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗೆ ಪತ್ರ – ಪರಮೇಶ್ವರ್ ಸ್ಪಷ್ಟನೆ

    ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗೆ ಪತ್ರ – ಪರಮೇಶ್ವರ್ ಸ್ಪಷ್ಟನೆ

    ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು ಆಡಳಿತಾತ್ಮಕ ದೃಷ್ಟಿಯಿಂದ ಮಧುಗಿರಿಯನ್ನ ತುಮಕೂರು ಜಿಲ್ಲೆಯಿಂದ ಪ್ರತ್ಯೇಕ ಜಿಲ್ಲೆ ಮಾಡಿ ಅಂತ ಪತ್ರ ಬರೆದಿದ್ದೇನೆ. ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಜಿಲ್ಲೆಗಳ ರೀತಿ ಪ್ರತ್ಯೇಕ ಮಾಡುವಂತೆ ಮನವಿ ಮಾಡಿದ್ದೇನೆ. ಪಾವಗಡದಿಂದ ತುಮಕೂರಿಗೆ ಬರಲು ದೂರವಾಗುತ್ತದೆ. ಈಗಾಗಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿದೆ. ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡುವುದಾದರೆ ನಮ್ಮ ಜಿಲ್ಲೆಯನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದೇನೆ ಎಂದರು.

    ಯಾವುದೇ ರಾಜಕೀಯ ದುರುದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವು ತಾಲೂಕುಗಳನ್ನು ಮಾಡಿದ್ವಿ. ಹೊಸಬರು ಬಂದಾಗ ಹೊಸ ತಾಲೂಕುಗಳ ಸಂಖ್ಯೆ ಜಾಸ್ತಿ ಮಾಡೋದು ಜಿಲ್ಲೆಗಳನ್ನು ಮಾಡೋದು ಸಾಮಾನ್ಯವಾಗಿದೆ. ಸರ್ಕಾರ ಎಲ್ಲವನ್ನೂ ನೋಡಿ ಮಾಡುತ್ತೆ. ನಾನು ಡಿಸಿಎಂ ಆಗಿದ್ದಾಗ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬಂದಿರಲಿಲ್ಲ. ಬಂದಿದರೆ ಅವತ್ತೆ ಕ್ಯಾಬಿನೆಟ್ ತೀರ್ಮಾನ ಮಾಡುತ್ತಿದ್ದೇವು ಎಂದು ತಿಳಿಸಿದರು.

    ವಿಜಯನಗರ ಜಿಲ್ಲೆ ಮಾಡಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೇರೆ ಜಿಲ್ಲೆಗಳ ಬಗ್ಗೆ ಮಾತನಾಡುವುದಿಲ್ಲ. ಸ್ಥಳೀಯ ಶಾಸಕರು, ಸಂಸದರು ಆ ಬಗ್ಗೆ ತೀರ್ಮಾನ ಮಾಡ್ತಾರೆ. ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ಜಿಲ್ಲೆ ಕೇಳುತ್ತಾರೆ. ಜಿಲ್ಲೆ ಮತ್ತು ತಾಲೂಕು ಮಾಡಿದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕೆಲಸ ಎಂದು ಹೇಳಿದರು.

    ನೆರೆಗೆ ಪರಿಹಾರ ಕೊಡದ ಪ್ರಧಾನಿ ಮೋದಿ ವಿರುದ್ಧ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿಕಾರಿದ್ದಾರೆ. ಮೋದಿ ಮತ್ತು ಅಮಿತ್ ಶಾ ಯಾಕೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕಿತ್ತು. ಯಡಿಯೂರಪ್ಪ ಮಾತಿಗೂ ಅವರು ಗೌರವ ಕೊಡ್ತಿಲ್ಲ. ಬಿಜೆಪಿ ಅವರನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನಿಸುತ್ತೆ ಅಂತ ಲೇವಡಿ ಮಾಡಿದ್ರು. ರಾಜ್ಯದಲ್ಲಿ ನೆರೆ ಇದ್ದು, ಸೂಕ್ತ ಪರಿಹಾರವನ್ನ ಕೇಂದ್ರ ಇದೂವರೆಗೂ ನೀಡಿಲ್ಲ. ಆದರೆ ಬಿಹಾರಕ್ಕೆ ಪರಿಹಾರ ನೀಡ್ತಾರೆ ಎಂದು ಕಿಡಿಕಾರಿದರು.

  • ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ

    ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ

    ಚಿಕ್ಕೋಡಿ(ಬೆಳಗಾವಿ): ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ ನೀಡಲಾಗಿದೆ. ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಚಿಕ್ಕೋಡಿ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ.

    ಈಗಾಗಲೇ ಚಿಕ್ಕೋಡಿಯನ್ನ ಶೈಕ್ಷಣಿಕ ಜಿಲ್ಲೆ ಎಂದು ಘೋಷಿಸಲಾಗಿದ್ದರೂ ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿಯನ್ನ ಜಿಲ್ಲೆ ಮಾಡುವಂತೆ ಹೋರಾಟಗಾರರರು ಒತ್ತಾಯಿಸಲಿದ್ದಾರೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಬೆಳಗಾವಿ ಜಿಲ್ಲೆಯನ್ನ ಆಡಳಿತಾತ್ಮಕ ದೃಷ್ಟಿಯಿಂದ ಒಡೆಯಬೇಕಿರುವ ಅನಿವಾರ್ಯತೆ ಸರ್ಕಾರದ ಮೇಲಿದ್ದರೂ ಗಡಿ ವಿವಾದ ಹಾಗೂ ಕೇಂದ್ರೀಕೃತ ರಾಜಕಾರಣಕ್ಕೆ ಚಿಕ್ಕೋಡಿ ಜಿಲ್ಲೆಯಾಗಿಲ್ಲ.

    ಹೀಗಾಗಿ ಹಲವು ವರ್ಷಗಳಿಂದ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟಗಾರರು ನಡೆಸುತ್ತಿರುವ ಹೋರಾಟ, ಹೋರಾಟವಾಗಿಯೇ ಉಳಿದಿದೆ. ಒಟ್ಟಿನಲ್ಲಿ ಇಂದಿನ ಚಿಕ್ಕೋಡಿ ಬಂದ್ ಸರ್ಕಾರಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv