Tag: seniors

  • 9ನೇ ತರಗತಿ ವಿದ್ಯಾರ್ಥಿಗೆ ಬಲವಂತವಾಗಿ ಮೂತ್ರ ಕುಡಿಸಿದ ಸೀನಿಯರ್ಸ್!

    9ನೇ ತರಗತಿ ವಿದ್ಯಾರ್ಥಿಗೆ ಬಲವಂತವಾಗಿ ಮೂತ್ರ ಕುಡಿಸಿದ ಸೀನಿಯರ್ಸ್!

    ಗಾಂಧಿನಗರ: 9ನೇ ತರಗತಿ ವಿದ್ಯಾರ್ಥಿಯೋರ್ವನಿಗೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್‌ ಮಾಡಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ನಗರದ ಕೇಂದ್ರೀಯ ವಿದ್ಯಾಲಯ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ.

    ಘಟನೆ ಕುರಿತು ವಿದ್ಯಾರ್ಥಿಯ ತಾಯಿ ಮಾತನಾಡಿ, ತಮ್ಮ ಮಗ ಹಾಗೂ ಆತನ ಸ್ನೇಹಿತರಿಗೆ ಅದೇ ಶಾಲೆಯ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್‌ ಮಾಡಿ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಸಮೋಸಾ ತಯಾರಿಕೆ – 30 ವರ್ಷಗಳ ಬಳಿಕ ರೆಸ್ಟೊರೆಂಟ್ ಬಂದ್

    ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಏಪ್ರಿಲ್ 20 ರಂದು ಶಾಲಾ ಸಮಯದಲ್ಲಿ ತಮ್ಮ ಮಗ ಮತ್ತು ಇತರ ಕೆಲವರನ್ನು ಶೌಚಾಲಯಕ್ಕೆ ಕರೆದೊಯ್ದು ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಏಪ್ರಿಲ್ 22 ರಂದು ವಸ್ತ್ರಾಪುರ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಶಾಲೆಯ ಪ್ರಾಂಶುಪಾಲರಾದ ಜೇಮಿ ಜೇಮ್ಸ್ ಅವರು ಈ ವಿಷಯವಾಗಿ ಎರಡು ವಿಚಾರಣೆಗಳನ್ನು ನಡೆಸಿದ್ದಾರೆ. ಆದರೆ ಗಂಭೀರವಾದ ಅಂಶ ಏನೂ ಕಂಡುಬಂದಿಲ್ಲ. ಘಟನೆ ಸಂಭವಿಸಿದ ಕೂಡಲೇ ನಾವು ಗುರುವಾರದಂದು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ವಿಚಾರಣೆ ಪೂರ್ಣಗೊಂಡಿದ್ದು, ಅದರಲ್ಲಿ ಏನೂ ಇಲ್ಲ ಎಂದು ತಿಳಿಸಿದ್ದಾರೆ.

    POLICE JEEP

    ಘಟನೆ ಕುರಿತು ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸಂದೀಪ್ ಖಂಬಳ್ ತಿಳಿಸಿದ್ದಾರೆ. ಇನ್ನೂ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‍ಐಆರ್) ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

  • ಬೆಂಗಳೂರು ವಿವಿಯಲ್ಲಿ ಹೊಡೆದಾಟ- ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

    ಬೆಂಗಳೂರು ವಿವಿಯಲ್ಲಿ ಹೊಡೆದಾಟ- ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

    ಬೆಂಗಳೂರು: ಶುಕ್ರವಾರ ತಡರಾತ್ರಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಪಿಜಿ 2 ಹಾಸ್ಟೆಲ್ ನಲ್ಲಿ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ವೇಳೆ ಹೊಡೆದಾಡಿಕೊಂಡಿದ್ದು, ಹಲ್ಲೆ ಮಾಡಿದ ಪಿಹೆಚ್‍ಡಿ ಸೀನಿಯರ್ಸ್‍ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಸ್ಟೆಲ್ ಮುಂದೆ ಉರಿ ಬಿಸಿಲಿನಲ್ಲೇ ಪ್ರತಿಭಟನೆ ನಡೆಸಿದ್ದಾರೆ.

    ಹಾಸ್ಟೆಲ್ ರೂಮ್ ನಲ್ಲಿ ಹುಟ್ಟುಹಬ್ಬ ಸೆಲಬ್ರೇಷನ್ ವೇಳೆ, ಸೀನಿಯರ್ಸ್ ಗುಂಪು ನೇರವಾಗಿ ನಮ್ಮ ರೂಮ್‍ಗೆ ನುಗ್ಗಿ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಸೀನಿಯರ್ ಗಳ ಆಟಾಟೋಪ ಹೆಚ್ಚಾಗಿದೆ. ಯೂನಿವರ್ಸಿಟಿ ಕ್ಯಾಂಪಸ್‍ಗೆ ಕುಡಿದು ಬಂದು ಜೂನಿಯರ್ಸ್ ಗಳನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಪಿಹೆಚ್‍ಡಿ ವಿದ್ಯಾರ್ಥಿಗಳ ಮೇಲೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಘಟನೆ ಸಂಬಂಧ ಎರಡು ಬಣದ 8 ವಿದ್ಯಾರ್ಥಿಗಳನ್ನು ಜ್ಞಾನ ಭಾರತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪಿಜಿ ಹಾಸ್ಟೆಲ್ 2 ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯ ಸ್ವರೂಪ ಹೆಚ್ಚಾಗ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ವಿವಿಯ ಕುಲಪತಿ ವೇಣುಗೋಪಾಲ್ ಭೇಟಿ ನೀಡಿ, ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದ್ರು. ಇದಕ್ಕೆ ಸೊಪ್ಪು ಹಾಕದ ವಿದ್ಯಾರ್ಥಿಗಳು ಕೂಗಾಟ ನಡೆದರು.

    ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ವಿವಿ ಕುಲಪತಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆ ಹಾಸ್ಟೆಲ್‍ನ ಊಟದಲ್ಲಿ ಹಲ್ಲಿ ಬಿದ್ದಿದೆ ಎಂದು ವಿದ್ಯಾರ್ಥಿಗಳು ಊಟವನ್ನು ಹೊರಗಿಟ್ಟು ಪ್ರತಿಭಟಿಸಿದರು.

  • 150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    ಲಕ್ನೋ: 150 ವೈದ್ಯಕೀಯ ಕಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಲೆ ಬೋಳಿಸಿ ರ‍್ಯಾಗಿಂಗ್‌ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರ ಪ್ರದೇಶದ ಸೈಫೈ ಎಂಬ ನಗರದಲ್ಲಿರುವ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, 150ಕ್ಕೂ ಹೆಚು ವಿದ್ಯಾರ್ಥಿಗಳು ತಲೆ ಬೋಳಿಸಿ ಬಿಳಿ ಬಣ್ಣದ ಬಟ್ಟೆ ತೊಟ್ಟು ಹಿರಿಯ ವಿದ್ಯಾರ್ಥಿಗಳಿಗೆ ನಮಸ್ಕಾರ ಮಾಡುತ್ತಿರುವುದನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ಒಟ್ಟು ಮೂರು ವಿಡಿಯೋಗಳು ವೈರಲ್ ಆಗಿವೆ. ಮೊದಲನೇ ವಿಡಿಯೋದಲ್ಲಿ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು ಬಿಳಿ ಬಟ್ಟೆ ಧರಿಸಿ ಒಂದೇ ಸಾಲಿನಲ್ಲಿ ಓಡುತ್ತಿರುತ್ತಾರೆ. ನಂತರ ಎರಡನೇ ವಿಡಿಯೋದಲ್ಲಿ ಅವರು ಹಿರಿಯ ವಿದ್ಯಾರ್ಥಿಗಳಿಗೆ ತಲೆ ಭಾಗಿ ನಮಸ್ಕಾರ ಮಾಡುತ್ತಿರುವುದು ಕಂಡು ಬಂದಿದೆ. ಕೊನೆಯ ವಿಡಿಯೋದಲ್ಲಿ ಇದನ್ನು ಗಮನಿಸಿದ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ಕೂಡ ಇದನ್ನು ನೋಡಿಕೊಂಡು ಏನೂ ಮಾಡದೇ ಸುಮ್ಮನೆ ನಿಂತಿರುವುದು ಕಂಡು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ರಾಜ್ ಕುಮಾರ್, ಸಂಸ್ಥೆಯು ರ‍್ಯಾಗಿಂಗ್‌  ತಡೆಯಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಯಾರಾದರು ರ್‍ಯಾಂಗ್ ಮಾಡಿದರೆ ವಿದ್ಯಾರ್ಥಿಗಳು ಅದರ ಬಗ್ಗೆ ವಿರೋಧಿ ಸಮಿತಿಗೆ ಅಥವಾ ಅವರ ವಾರ್ಡನ್ ಗಳಿಗೆ ದೂರು ನೀಡಬಹುದು. ಈ ಹಿಂದೆ ಇದೇ ರೀತಿಯ ಮಾಡಿದಕ್ಕೆ ಕೆಲ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ಈ ವಿಚಾರದಲ್ಲೂ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ರ‍್ಯಾಗಿಂಗ್‌ನಲ್ಲಿ ಭಾಗಿಯಾದ ಕೆಲ ವಿದ್ಯಾರ್ಥಿಗಳನ್ನು ಆಗಲೇ ಅಮಾನತು ಮಾಡಿದ್ದೇವೆ. ಜೂನಿಯರ್ ವಿದ್ಯಾರ್ಥಿಗಳು ಇದರ ಬಗ್ಗೆ ಅತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ. ಸೈಫೈ ಗ್ರಾಮವು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತವರು ಗ್ರಾಮವಾಗಿದೆ.

    ಕಳೆದ ತಿಂಗಳು 14 ವರ್ಷದ ಹೈದರಾಬಾದ್ ಬಾಲಕನೊಬ್ಬ ತನ್ನ ಸಹಪಾಠಿಗಳು ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ರೀತಿ ಕಳೆದ ಮಾರ್ಚ್ ನಲ್ಲಿ ತಮಿಳುನಾಡಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು ತಮ್ಮ ಸಿನಿಯರ್ಸ್ ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ನೀಡಿದ ರ್‍ಯಾಗಿಂಗ್ ದೂರುಗಳ ಸಂಖ್ಯೆ 2015 ರಲ್ಲಿ 423 ಇತ್ತು ಆದರೆ ಎರಡು ವರ್ಷಗಳ ನಂತರ 901 ಕ್ಕೆ ಏರಿದೆ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

  • ಕಾಲೇಜೊಳಗೆಯೇ ವಿದ್ಯಾರ್ಥಿಯನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ರು!

    ಕಾಲೇಜೊಳಗೆಯೇ ವಿದ್ಯಾರ್ಥಿಯನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ರು!

    ಕೋಲ್ಕತ್ತಾ: ವಿದ್ಯಾರ್ಥಿಯೊಬ್ಬನನ್ನು ಕಾಲೇಜೊಳಗೆಯೇ ಬೆತ್ತಲೆಗೊಳಿಸಿದ್ದಲ್ಲದೇ, ವಿಡಿಯೋ ಮಾಡಿ ಆತನ ಮೇಲೆ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆಯೊಂದು ನಡೆದಿದೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ಈ ಘಟನೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ವಿದ್ಯಾರ್ಥಿಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸೈಂಟ್ ಪೌಲ್ಸ್ ಕ್ಯಾತೇಡ್ರಲ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಪರಿಪರಿಯಾಗಿ ಬೇಡಿಕೊಂಡರೂ ತಂಡವೊಂದು ಆತನನನ್ನು ಒತ್ತಾಯ ಮಾಡಿ ಬಟ್ಟೆ ಬಿಚ್ಚಿಸಿದೆ. ಈ ವಿಡಿಯೋ ಸಚಿವರ ಗಮನಕ್ಕೆ ಬಂದಿದೆ. ಅಲ್ಲದೇ ಈ ಕುರಿತು ಕೆಲ ವಿದ್ಯಾರ್ಥಿಗಳು ಸಚಿವರಿಗೆ ದೂರು ನೀಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಸರ್ಕಾರಕ್ಕೆ ತಿಳಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಛಾತ್ರ ಪರಿಷದ್(ಟಿಎಂಸಿಪಿ) ಸಂಘದ ಸದಸ್ಯನೋರ್ವ, ಮುಂಬರುವ ಕಾಲೇಜು ಫೆಸ್ಟ್ ಗೆ ಹಣ ಖರ್ಚು ಮಾಡುವ ವಿಚಾರ ಕುರಿತು ವಿಚಾರಿಸಿ ಆತನಿಗೆ ತೊಂದರೆ ನೀಡಿದ್ದಾರೆ ಅಂತ ಫ್ರಥಮ ವರ್ಷದ ವಿದ್ಯಾರ್ಥಿ ಶನಿವಾರ ಮಾಧ್ಯಮದ ಮುಂದೆ ಆರೋಪ ಮಾಡಿದ್ದ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಪಿ ರಾಜ್ಯಾಧ್ಯಕ್ಷ ಜಯ ದತ್ತ ಅವರು ಕಾಲೇಜಿನ ಅಧಿಕಾರಿಗಳು ಹಾಗೂ ಸದಸ್ಯರಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ.