Tag: Senior Advocate

  • ಹೈಕೋರ್ಟಿನಲ್ಲಿ ಡಿಕೆಶಿ ಅರ್ಜಿ: ಬಿವಿ ಆಚಾರ್ಯರ ವಾದ ಹೀಗಿತ್ತು

    ಹೈಕೋರ್ಟಿನಲ್ಲಿ ಡಿಕೆಶಿ ಅರ್ಜಿ: ಬಿವಿ ಆಚಾರ್ಯರ ವಾದ ಹೀಗಿತ್ತು

    ಬೆಂಗಳೂರು: ವಿಚಾರಣೆಗೆ ಹೋದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುತ್ತಾರೆ ಎಂಬ ಭಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಿತ್ತು. ಹೀಗಾಗಿ ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್ ಪೀಠದಲ್ಲೂ ಅರ್ಜಿ ಸಲ್ಲಿಸಿದ್ದರು.

    ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ಗುರುವಾರ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿಯಿತು. ಡಿ.ಕೆ. ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿದರು. ಆದರೆ ಮಾಜಿ ಸಚಿವರ ಪರ ವಕೀಲರ ವಾದವನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ.

    ಕೋರ್ಟಿನಲ್ಲಿ ನಡೆದಿದ್ದೇನು?:
    ಡಿ.ಕೆ.ಶಿವಕುಮಾರ್ ಅವರ ಪರ ಮೊದಲು ವಾದ ಮಂಡಿಸಿದ ಬಿವಿ ಆಚಾರ್ಯ ಅವರು, ನಾವು ನಿರೀಕ್ಷಣಾ ಜಾಮೀನನ್ನು ಕೇಳುತ್ತಿಲ್ಲ. ಇ.ಡಿ ನೀಡಿದ್ದ ಸಮನ್ಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ಅಲ್ಲಿಯವರೆಗೂ ಮಾಜಿ ಸಚಿವರನ್ನು ಬಂಧಿಸದಂತೆ ಇ.ಡಿಗೆ ಆದೇಶಿಸಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದರು.

    ಆದರೆ ಇಡಿ ಪರ ವಕೀಲರು, ಕಳೆದ 9 ತಿಂಗಳಿಂದ ಇದೇ ನಡೆಯುತ್ತಿದೆ. ವಿಚಾರಣೆ ಅಂದ ಮಾತ್ರಕ್ಕೆ ಬಂಧಿಸುತ್ತಾರೆ ಎಂದಲ್ಲ. ಬಂಧಿಸುವುದು ಬಿಡುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ಪ್ರತಿಯಾಗಿ ಮಂಡಿಸಿದರು. ಆಗ ಬಿವಿ ಆಚಾರ್ಯ ಅವರು, ನಮ್ಮ ಕಕ್ಷಿದಾರ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಸೆಪ್ಟೆಂಬರ್ 5 ಅಥವಾ 6 ರಂದು ದಿನಾಂಕ ನಿಗದಿ ಮಾಡುವಂತೆ ನಿರ್ದೇಶಿಸಿ ಎಂದು ಕೋರ್ಟಿಗೆ ಕೋರಿಕೊಂಡರು.

    ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು, ಇಂದೇ ಮೇಲ್ಮನವಿ ಅರ್ಜಿ ಸಲ್ಲಿಸಬಹುದಲ್ಲ. ನಾಳೆ(ಶನಿವಾರ)ಯವರೆಗೂ ಕಾಯುವ ಅಗತ್ಯವೇನು. ನಾಳೆ ವಿಚಾರಣೆಗೆ ಹಾಜರಾಗುತ್ತೀರಾ ಎಂದು ಪಶ್ರಿಸಿದರು. ಆಗ ಬಿವಿ ಆಚಾರ್ಯ ಅವರು, ನಮಗಿನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಇವತ್ತೇ ಮೇಲ್ಮನವಿ ಸಲ್ಲಿಸುವುದು ಕಷ್ಟ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

    ಇದನ್ನು ಆಲಿಸಿದ ನ್ಯಾಯಾಧೀಶರು, ಆದೇಶ ಪ್ರತಿ ವೆಬ್‍ಸೈಟ್‍ನಲ್ಲಿ ಸಿಗುತ್ತೆ ಅಲ್ವಾ? ಅದನ್ನು ಇಂದೇ ಮೇಲ್ಮನವಿ ಸಲ್ಲಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು. ಇದರಿಂದಾಗಿ ಬಿವಿ ಆಚಾರ್ಯ ಅವರು, ಇಡಿ ಅಧಿಕಾರಿಗಳು ಬಂಧಿಸದಿದ್ದರೆ ಡಿಕೆ ಶಿವಕುಮಾರ್ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಸಮನ್ಸ್ ಗೆ ಸಂಬಂಧಿಸಿದಂತೆ ಗುರುವಾರ ಆದೇಶದಲ್ಲಿಯೇ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಆದೇಶ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಮಧ್ಯಂತರ ರಕ್ಷಣೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

    ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

  • ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬೆಂಗಳೂರು: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಹಿರಿಯ ವಕೀಲರು, ರಾಜೀನಾಮೆಯನ್ನು ಮಾತ್ರ ಅಂಗೀಕಾರ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತೇ ಹೊರತು ಅನರ್ಹತೆ ಬಗ್ಗೆ ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ ರಾಜೀನಾಮೆಯನ್ನು ಕೈಬಿಟ್ಟು ಅನರ್ಹತೆ ಗೊಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ರಾಜೀನಾಮೆಯನ್ನು ಮೊದಲು ಅಂಗೀಕಾರ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಕಾನೂನಿನ ಪ್ರಕಾರ ಅನರ್ಹತೆಗೆ ಒಂದು ವಾರದ ಕಾಲಾವಕಾಶ ನೀಡಬೇಕಿತ್ತು. ಆದರೆ ಸ್ಪೀಕರ್ ಮೂರು ದಿನಗಳಲ್ಲಿ ದಿಢೀರನೆ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅತೃಪ್ತ ಶಾಸಕರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ, ಆದೇಶವನ್ನು ತಡೆಹಿಡಿಯುವ ಅವಕಾಶವಿದೆ ಎಂದರು.

    ಶನಿವಾರ ಹಾಗೂ ಭಾನವಾರ ರಜೆ ಇದ್ದರೂ ಕಚೇರಿಯಲ್ಲಿ ಕುಳಿತು ತರಾತುರಿಯಲ್ಲಿ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಅದೇ ಶಾಸಕರು ರಾಜೀನಾಮೆ ಸ್ವೀಕರಿಸುವಾಗ ರಜೆ ಇದೆ, ಖಾಸಗಿ ಕಾರ್ಯಕ್ರಮದ ಅಂತ ಹೇಳಿ ವಿಳಂಬ ನೀತಿ ಅನುಸರಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಅನುಕೂಲವಾಗುವಂತೆ ನಡೆದುಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    ಸ್ಪೀಕರ್ ರಮೇಶ್ ಕುಮಾರ್ ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಾಸಕರ ಅನರ್ಹತೆಯಿಂದ ವಿಧಾನಸಭೆಯ ಸಂಖ್ಯಾಬಲ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿಯವರು ಯಾರ ಸಹಾಯವಿಲ್ಲದೇ ವಿಶ್ವಾಸಮತ ಸಾಬೀತು ಮಾಡುತ್ತಾರೆ ಎಂದರು.

    ಶಾಸಕರನ್ನು 2023ರ ವರೆಗೆ ಅನರ್ಹತೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳುತ್ತಾರೆ. ಇದು ಅಸಂವಿಧಾನಿಕವಾಗಿದೆ. ಕಾನೂನಿನ ಪ್ರಕಾರ ಅನರ್ಹಗೊಂಡ ಶಾಸಕ ಮುಂದಿನ ಉಪ ಚುನಾಮಣೆ ಇಲ್ಲವೇ, ಮುಖ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸ್ಪೀಕರ್ ಅವರು ಶಾಸಕರನ್ನು ಹೆದರಿಸುವ ತಂತ್ರವನ್ನು ಹೂಡುತ್ತಾ ಬಂದಿದ್ದಾರೆ ಎನ್ನುವ ವಾದಕ್ಕೆ ಸಾಂದರ್ಭಿಕ ಸಾಕ್ಷಿ ಸಿಗುತ್ತದೆ. ಮೊನ್ನೆಯಷ್ಟೇ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಮೂಲಕ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಂತೆ ಬಿಸಿ ಮುಟ್ಟಿಸಿದ್ದರು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅವರ ತಂತ್ರ ವಿಫಲವಾಗಿದ್ದರಿಂದ ಇಂದು 14 ಜನರನ್ನೂ ಅನರ್ಹಗೊಳಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಆದೇಶಕ್ಕೆ ತಡೆತಂದು ಮತ್ತೆ ಕಲಾಪದಲ್ಲಿ ಭಾಗವಹಿಸಬಹುದು. ರೆಬೆಲ್ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕಾಂಗ್ರೆಸ್ ನಾಯಕರು ವಿಪ್ ಜಾರಿ ಮಾಡಿದ್ದಾರೆ. ಈ ಮೂಲಕ ಸ್ಪೀಕರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

    ಅತೃಪ್ತ ಶಾಸಕರಿಗೆ ಬಿಜೆಪಿಯು ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರು, ಕೊಟ್ಟರೆ ಏನು ತಪ್ಪು? ಮಂತ್ರಿಗಿರಿ ನೀಡಿದರೆ ಪ್ರಳಯವಾಗಲ್ಲ ಬಿಡಿ. ಮಂತ್ರಿಗಿರಿಗಾಗಿಯೇ ಅವರು ರಾಜೀನಾಮೆ ನೀಡಿದ್ದರೆ ತಪ್ಪು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರಾಜೀನಾಮೆ ನೀಡುವುದು ಸರಿ ಎಂದು ಅಭಿಪ್ರಾಯಪಟ್ಟರು.

  • ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷನ ಬರ್ಬರ ಕೊಲೆ!

    ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷನ ಬರ್ಬರ ಕೊಲೆ!

    ಕಾರವಾರ: ಹಿರಿಯ ವಕೀಲ ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷನನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಲಾಂಗ್ ನಿಂದ ಹಲ್ಲೆ ನಡೆಸಿ ಬರ್ಬರ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿ ಬಸ್ ನಿಲ್ದಾಣದ ಬಳಿ ನಡೆದಿದೆ.

    ಅಜಿತ್ ನಾಯ್ಕ್ ಕೊಲೆಯಾದ ವ್ಯಕ್ತಿಯಾಗಿದ್ದು, ರಾತ್ರಿ ವೇಳೆ ತಮ್ಮ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿ ಲಾಂಗ್ ನಿಂದ ಹಲ್ಲೆಗೈದು, ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಕೀಲರಾಗಿ ವೃತ್ತಿ ಆರಂಭಿಸಿದ ಅಜಿತ್ ಅವರು ದಾಂಡೇಲಿ ತಾಲೂಕು ಹೋರಾಟದಲ್ಲಿ ಸಕ್ರಿಯರಾಗಿದ್ದು, ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದರು.

    ಇದಲ್ಲದೇ ರಾಜಕೀಯದಲ್ಲಿ ಕೂಡ ತಮ್ಮನ್ನು ಗುರುತಿಸಿಕೊಂಡಿದ್ದರು. ದಾಂಡೇಲಿ ನಗರಸಭಾ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿ 2008ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಆರ್.ವಿ ದೇಶಪಾಂಡೆಯವರಿಗೆ ಬೆಂಬಲ ನೀಡಿದ್ದರು. ದಾಂಡೇಲಿಯನ್ನು ತಾಲೂಕನ್ನಾಗಿಸಲು ಇವರ ಹೋರಾಟ ಪ್ರಮುಖವಾಗಿದ್ದು, ಹೋರಾಟಗಳಿಂದಲೇ ತಮ್ಮನ್ನು ಗುರುತಿಸಿಕೊಂಡು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಭೇಟಿ ನೀಡಿದ್ದಾರೆ. ಆರೋಪಿಯ ಹುಡುಕಾಟಕ್ಕೆ ಬಲೆ ಬೀಸಿದ್ದು, ಘಟನೆಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಘಟನೆಯನ್ನು ಸ್ಥಳೀಯ ಮುಖಂಡರು ಖಂಡಿಸಿದ್ದು, ದಾಂಡೇಲಿ ನಗರ ಬಂದ್ ಮಾಡುವ ಸಾಧ್ಯತೆಗಳಿವೆ.

  • ದೇವರು ಪ್ರತ್ಯಕ್ಷವಾದ್ರೆ ಸಾಯ್ಸಿ ದೇವಸ್ಥಾನ ಕಟ್ಟುತ್ತಾರೆ- ಬಿಜೆಪಿ ವಿರುದ್ಧ ದ್ವಾರಕನಾಥ್ ಕಿಡಿ

    ದೇವರು ಪ್ರತ್ಯಕ್ಷವಾದ್ರೆ ಸಾಯ್ಸಿ ದೇವಸ್ಥಾನ ಕಟ್ಟುತ್ತಾರೆ- ಬಿಜೆಪಿ ವಿರುದ್ಧ ದ್ವಾರಕನಾಥ್ ಕಿಡಿ

    ಚಾಮರಾಜನಗರ: ದೇವರು ಪ್ರತ್ಯಕ್ಷವಾದರೆ ಆತನಿಗೆ ಚೂರಿ ಹಾಕಿ ಸಾಯಿಸಿ, ನಂತರ ದೇವಸ್ಥಾನ ಕಟ್ಟುತ್ತಾರೆ. ರಾಮ, ಕೃಷ್ಣ, ಶಿವ ಬಂದರೇ ಅವರುಗಳಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಮಾತ್ರ ಎಂದು ಹಿರಿಯ ವಕೀಲ ಡಾ. ಸಿ.ಎಸ್.ದ್ವಾರಕನಾಥ್ ಕಿಡಿಕಾರಿದ್ರು.

    ಚಾಮರಾಜನಗರದ ಜೆಹೆಚ್ ಪಟೇಲ್ ಸಭಾಂಗಣದಲ್ಲಿ ಬಿವಿಎಸ್ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕೀರ್ಣದಲ್ಲಿ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

    ನೀವೂ ನಿಮ್ಮ ರಾಮನನ್ನ ರಾಜಕೀಯ ವ್ಯಾಪರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೀರಾ. ನಿಮ್ಮ ರಾಮ ನನ್ನ ರಾಮನಲ್ಲ. ಟ್ರೈಬಲ್ ನ 500 ರಾಮಯಣಗಳಲ್ಲಿ ರಾವಣನೇ ಹೀರೋ. ವಾಲ್ಮೀಕಿ, ಕುವೆಂಪು, ಲೋಹಿಯಾ ಹೇಳುವ ರಾಮ ಬೇರೆ, ನೀವೂ ಹೇಳುವ ರಾಮ ಬೇರೆ. ಹಿಂದುಪರ ಸಂಘಟನೆ ಹಾಗೂ ಬಿಜೆಪಿ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

    ಕಾಂಗ್ರೆಸ್ ಹಾಗೂ ಬಿಜೆಪಿಗೆ ವ್ಯತ್ಯಾಸವೇ ಇಲ್ಲ. ಇವರ ಜಂಡ ಬೇರೆ ಅಜಂಡ ಒಂದೇ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳನ್ನು ನಾವು ತಿರಸ್ಕರಿಸಬೇಕು ಅಂದ್ರು.

    ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಹೇಳಿಕೆ ಕುರಿತು ಮಾತನಾಡಿದ ಅವರು, ಅನಂತಕುಮಾರ್ ಹೆಗ್ಗಡೆ ವಿಕೃತ ಮನುಷ್ಯ. ಜಾತ್ಯಾತೀತ ನನ್ನ ಮಕ್ಕಳಿಗೆ ತಂದೆ-ತಾಯಿ ಇಲ್ಲ ಅಂತಾ ಅವನು ಮಾತನಾಡುತ್ತಾನೆ. ತಾಯಿ-ತಂದೆಗಳನ್ನು ನಿರೂಪಿಸಿಕೊಳ್ಳಬೇಕಾದವರು ನಾವಲ್ಲ. ತಾಯಿ ತಂದೆ ಯಾರು ಅಂತ ತಾಯಿ-ತಂದೆಗಳ ಬಗ್ಗೆ ಅನುಮಾನ ಇರುವ ನೀವೂ ನಿರೂಪಿಸಿಕೊಳ್ಳಿ. ಆತ ಒಬ್ಬ ವಿಷಪೂರಿತ ವ್ಯಕ್ತಿ. ಆತನನ್ನು ಹೆಗ್ಗಣಗಳಿಗೆ ಹೋಲಿಕೆ ಮಾಡಿದ್ದೆ, ಆದರಿಂದ ಹೆಗ್ಗಣಗಳು ಬೇಜಾರು ಮಾಡಿಕೊಂಡಿದ್ದವೂ ಎಂದು ಲಘುವಾಗಿ ಟೀಕೆ ಮಾಡಿದ್ರು.