Tag: Selection Committee

  • ಧೋನಿಗೆ ಖಡಕ್ ಸೂಚನೆ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ!

    ಧೋನಿಗೆ ಖಡಕ್ ಸೂಚನೆ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ!

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ರೀ ಎಂಟ್ರಿ ನೀಡುವ ವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿ ಕ್ಲಾರಿಟಿ ನೀಡಿದೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಟೀ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ರೇಸ್‍ನಲ್ಲಿ ನಿಲ್ಲಬೇಕಾದರೆ ಐಪಿಎಲ್ 2020ರ ಸೀಸನ್‍ನಲ್ಲಿ ತಮ್ಮ ಫಾರ್ಮ್ ನಿರೂಪಿಸಬೇಕು ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.

    ಮಾರ್ಚ್ 29 ರಿಂದ ಐಪಿಎಲ್ 2020ರ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಧೋನಿ ಸಿಎಸ್‍ಕೆ ತಂಡದ ತರಬೇತಿ ಶಿಬಿರಕ್ಕೆ ಹಾಜರಾಗಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರ ಅಧಿಕಾರದ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಕನ್ನಡಿಗ ಸುನಿಲ್ ಜೋಶಿ ಕಳೆದ ವಾರವೇ ಆಯ್ಕೆ ಸಮಿತಿಗೆ ಆಯ್ಕೆಯಾಗಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮಾರ್ಚ್ 12ರಿಂದ ಆರಂಭವಾಗುವ ಏಕದಿನ ಕ್ರಿಕೆಟ್ ಟೂರ್ನಿಗೆ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು, ಆ ವೇಳೆ ಧೋನಿ ಅವರ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ. ಆದರೆ ಸದ್ಯ ಆಯ್ಕೆ ಸಮಿತಿ ನಡುವೆ ಧೋನಿ ಅವರ ಕ್ರಿಕೆಟ್ ಭವಿಷ್ಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಆಯ್ಕೆ ಸಮಿತಿ, ದಕ್ಷಿಣ ಆಫ್ರಿಕಾ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಧೋನಿ ಹೆಸರು ಪ್ರಸ್ತಾಪವಾಗಿಲ್ಲ. ಅವರ ಕ್ರಿಕೆಟ್ ಭವಿಷ್ಯದ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ. ಆದರೆ ಐಪಿಎಲ್ ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರು ಮತ್ತೆ ತಂಡಕ್ಕೆ ಕಮ್‍ಬ್ಯಾಕ್ ಮಾಡಬಹುದು. ಏಕೆಂದರೆ ಧೋನಿ ಅವರೊಂದಿಗೆ ಹಲವರು ತಂಡದಲ್ಲಿ ಸ್ಥಾನ ಪಡೆಯಲು ನೋಡುತ್ತಿದ್ದಾರೆ. ಒಂದೊಮ್ಮೆ ಧೋನಿ ಅವರಿಗಿಂತ ಬೇರೆ ಆಟಗಾರರು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡದರೆ ಅಚ್ಚರಿ ಆಯ್ಕೆಗಳನ್ನು ಮಾಡುತ್ತೇವೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನೂತನವಾಗಿ ಆಯ್ಕೆ ಸಮಿತಿಯ ಜವಾಬ್ದಾರಿ ವಹಿಸಿಕೊಂಡಿರುವ ಸುನಿಲ್ ಜೋಶಿ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ಧೋನಿ ಕ್ರಿಕೆಟ್ ಭವಿಷ್ಯ ಬಹುದೊಡ್ಡ ಸವಾಲಾಗಿತ್ತು. ಇತ್ತ ಇದಕ್ಕೂ ಮುನ್ನವೇ ಪ್ರತಿಕ್ರಿಯೆ ನೀಡಿದ್ದ ಎಂಎಸ್‍ಕೆ ಪ್ರಸಾದ್, ಆಯ್ಕೆ ಸಮಿತಿ ಟೀಂ ಇಂಡಿಯಾ ವಿಚಾರದಲ್ಲಿ ಧೋನಿ ಅವರಿಗಿಂತಲೂ ಮುಂದಿನ ಆಯ್ಕೆಗಳ ಬಗ್ಗೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದ್ದರು.

    ಉಳಿದಂತೆ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತ ಧೋನಿ ಅವರ ಸ್ಥಾನದಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ರಿಷಬ್ ಪಂತ್ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಅವರಿಗೆ ಕಮ್‍ಬ್ಯಾಕ್ ಮಾಡುವ ಅವಕಾಶ ಸಿಗುವ ಸಾಧ್ಯತೆ ಇದೆ.

  • ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಗೊತ್ತು – ಎಂಎಸ್‍ಕೆ ಪ್ರಸಾದ್

    ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಗೊತ್ತು – ಎಂಎಸ್‍ಕೆ ಪ್ರಸಾದ್

    ನವದೆಹಲಿ: ಎಂ.ಎಸ್ ಧೋನಿಯಂತಹ ಪ್ರಸಿದ್ಧ ಆಟಗಾರನಿಗೆ ಯಾವಾಗ ನಿವೃತ್ತಿ ಹೊಂದಬೇಕು ಎಂಬುದು ಗೊತ್ತು ಎಂದು ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಇಂದು ಮುಂಬೈನಲ್ಲಿ ಸಭೆ ಸೇರಿ ಆಗಸ್ಟ್ 2ರಿಂದ ಭಾರತದ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಏಕದಿನ, ಟಿ-20 ಮತ್ತು ಟೆಸ್ಟ್ ಸರಣಿಯ ತಂಡಗಳನ್ನು ಆಯ್ಕೆ ಮಾಡಿದರು.

    ಈ ವೇಳೆ ಧೋನಿ ವಿಚಾರದ ಬಗ್ಗೆ ಮಾತನಾಡಿರುವ ಎಂ.ಎಸ್.ಕೆ ಪ್ರಸಾದ್, ನಿವೃತ್ತಿ ಎಂಬುದು ಆಟಗಾರ ವೈಯಕ್ತಿಕ ವಿಷಯವಾಗಿದ್ದು, ಅವರೇ ಆ ಬಗ್ಗೆ ನಿರ್ಧಾರ ಮಾಡಬೇಕು. ಅದ್ದರಿಂದ ಧೋನಿಯಂತಹ ಅನುಭವಿ ಆಟಗಾರರಿಗೆ ಯಾವಾಗ ನಿವೃತ್ತಿ ಹೊಂದಬೇಕು ಎಂಬುದು ಗೊತ್ತು ಎಂದು ಹೇಳಿದ್ದಾರೆ.

    ಎಂಎಸ್ ಧೋನಿ ಅವರು ಈ ಸರಣಿಗೆ ಲಭ್ಯವಿಲ್ಲ. ಅವರು ಈ ಸರಣಿಗೆ ತಮ್ಮ ಅಲಭ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಧೋನಿ ಅವರ ಬದಲು ಮೂರು ಮಾದರಿಯ ಕ್ರಿಕೆಟ್‍ಗೂ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿ ಈ ಬಾರಿಯ ವಿಶ್ವಕಪ್ ನಂತರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದ್ದರಿಂದ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶ ನೀಡಿ ಅವರನ್ನು ಮುಂದಿನ ಯೋಜನೆಗಳಿಗೆ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

    ವಿಶ್ವಕಪ್‍ನಲ್ಲಿ ಎಂ ಎಸ್ ಧೋನಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಆದರ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ. ಆದರೆ ಭಾರತ ತಂಡದಲ್ಲಿ ಯುವ ಆಟಗಾರರನ್ನು ಸಿದ್ಧ ಮಾಡಲು ಹೊರಟಿದ್ದೇವೆ. ಅದ್ದರಿಂದ ರಿಷಬ್ ಪಂತ್‍ಗೆ ಮೂರು ಮಾದರಿಯ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಆಗಿ ಅವಕಾಶ ನೀಡಿದ್ದೇವೆ ಎಂದರು.

    ಧೋನಿ ಟೆರಿಟೋರಿಯಲ್ ಆರ್ಮಿಯ ಪ್ಯಾರಾಶೂಟ್ ರೆಜಿಮೆಂಟ್‍ನ ಕರ್ನಲ್ ಆಗಿದ್ದಾರೆ. ಹಾಗಾಗಿ ತಮ್ಮ ಎರಡು ತಿಂಗಳ ರಜೆಯನ್ನು ರೆಜಿಮೆಂಟ್ ನಲ್ಲಿ ಕಳೆಯಲಿದ್ದಾರೆ. ಧೋನಿ ಅವರೇ ಸ್ವಇಚ್ಛೆಯಿಂದ ವೆಸ್ಟ್ ಇಂಡೀಸ್ ಜೊತೆಗಿನ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ತಮ್ಮ ಎರಡು ತಿಂಗಳ ರಜಾವಧಿಯನ್ನು ಪ್ಯಾರಾಮಿಲಿಟ್ರಿ ರೆಜಿಮೆಂಟ್ ಜೊತೆ ವ್ಯಯಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದರು.

    ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮೂರು ಮಾದರಿಯ ಪಂದ್ಯಗಳಿಗೂ ಆಟಗಾರನ್ನು ಆಯ್ಕೆ ಮಾಡಿದ್ದು, ಆಟಗಾರರ ಪಟ್ಟಿ ಇಂತಿದೆ.

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಹಾಗೂ ಉಮೇಶ್ ಯಾದವ್.

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

  • ಕೆಎಲ್ ರಾಹುಲ್‍ರನ್ನ ತಂಡದಿಂದ ಕೈ ಬಿಟ್ಟಿದಕ್ಕೆ ಸೌರವ್ ಗಂಗೂಲಿ ಗರಂ

    ಕೆಎಲ್ ರಾಹುಲ್‍ರನ್ನ ತಂಡದಿಂದ ಕೈ ಬಿಟ್ಟಿದಕ್ಕೆ ಸೌರವ್ ಗಂಗೂಲಿ ಗರಂ

    ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ನಾಯಕರ ಸೌರವ್ ಗಂಗೂಲಿ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಗಂಗೂಲಿ, ಟೀಂ ಇಂಡಿಯಾ ಬ್ಯಾಟಿಂಗ್ ಬಲಗೊಳಿಸಲು ಉತ್ತಮ ಫಾರ್ಮ್ ಹೊಂದಿರುವ ಕೆಎಲ್ ರಾಹುಲ್ ಅವರ ಅಗತ್ಯತೆ ಇದೆ ಎಂದು ಸಮರ್ಥನೆ ನೀಡಿದರು.

    ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ 4ನೇ ಸ್ಥಾನ ತುಂಬುವ ಸಮರ್ಥ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಕೆಎಲ್ ರಾಹುಲ್ ಈ ಸ್ಥಾನವನ್ನು ತುಂಬಲು ಸಮರ್ಥರಾಗಿದ್ದಾರೆ. ಯಾವುದೇ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊದಲ ನಾಲ್ವರು ಬ್ಯಾಟ್ಸ್ ಮನ್ ಗಳು ಬಲಿಷ್ಠರಾಗಿರಬೇಕು. ಅಲ್ಲದೇ ಯಾವುದೇ ಆಟಗಾರರನ ವೃತ್ತಿ ಜೀವನದ ಆರಂಭದಲ್ಲಿ ಮೊದಲ 15 ಪಂದ್ಯಗಳನ್ನು ಯಾವುದೇ ಒತ್ತಡವಿಲ್ಲದೇ ಆಡಲು ಅವಕಾಶ ನೀಡಬೇಕು. ನಾನು ಕೆಎಲ್ ರಾಹುಲ್ ಗೆ 15 ಪಂದ್ಯಗಳನ್ನು ನೀಡುತ್ತಿದ್ದೆ ಎಂದು ಹೇಳಿದರು.

    ಇದೇ ವೇಳೆ ಸದ್ಯ ಟೀಂ ಇಂಡಿಯಾದ 5,6,7 ಬ್ಯಾಟಿಂಗ್ ಕ್ರಮಾಂಕದಲ್ಲಿ ಧೋನಿ, ದಿನೇಶ್ ಕಾರ್ತಿಕ್, ರೈನಾ ಸೂಕ್ತ ಎಂದು ತಿಳಿಸಿದರು. ಅಂದಹಾಗೇ ಇಂಗ್ಲೆಂಡ್ ವಿರುದ್ಧ ಕೊನೆಯ ಮಂಗಳವಾರ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 22 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.

    ವಿರಾಟ್ ಕೊಹ್ಲಿ ತಂಡದ ನಾಯಕತ್ವದ ತಂಡದಲ್ಲಿ ಸದ್ಯ ರೋಹಿತ್ ಹಾಗೂ ವಿರಾಟ್ ಹೆಚ್ಚಿನ ಒತ್ತಡ ಎದುರಿಸುತ್ತಿದ್ದು, ಕೆಎಲ್ ರಾಹುಲ್ ಅಥವಾ ರಹಾನೆ ಅವರನ್ನು ಬಳಸಿಕೊಳ್ಳಬೇಕಿದೆ. ಇದಕ್ಕೆ ಸೂಕ್ತ ಉದಾಹರಣೆ ದಕ್ಷಿಣ ಆಫ್ರಿಕಾ ವಿರುದ್ಧದ ರಣಿಯಲ್ಲಿ ಕೊಹ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟ್ ಬಿಸಿ 6 ಪಂದ್ಯಗಳಲ್ಲಿ 3 ಶತಕ ಸಿಡಿಸಿದರು. ಕೊಹ್ಲಿ ಶತಕ ಗಳಿಸಿದರೆ ಮಾತ್ರ ತಂಡ ಜಯದ ನಿರೀಕ್ಷೆಯಲ್ಲಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಮುಂಬೈ: ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಗೆ ತೆರಳಲಿರುವ ಕಾರಣ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ಎದುರಿನ ಟಿ20 ಸರಣಿಗಳಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಅಲ್ಲದೇ ಟೆಸ್ಟ್ ತಂಡದ ನಾಯಕನಿಗಾಗಿ ಬದಲಿ ಆಟಗಾರನನ್ನು ಆರಿಸಬೇಕಿದೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಲಿದ್ದು, ಸದ್ಯ ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ. 2017 ರಲ್ಲಿ ನಡೆದ ಆಸೀಸ್ ಎದುರಿನ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಕೊಹ್ಲಿ ಅಲಭ್ಯರಾದ ವೇಳೆ ಶ್ರೇಯಸ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಶ್ರೇಯಸ್ ಗೆ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

    ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಉತ್ತಮ ಫಾರ್ಮ್‍ನಲ್ಲಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೂ ಮೊದಲ ದರ್ಜೆ ಕ್ರಿಕೆಟ್ ನಲ್ಲಿ 46 ಪಂದ್ಯ ಆಡಿರುವ ಅಯ್ಯರ್ 53.90 ಸರಾಸರಿ ಹೊಂದಿದ್ದು, 3989 ರನ್ ಗಳಿಸಿದ್ದಾರೆ. ಟೆಸ್ಟ್ ತಂಡಕ್ಕೆ ಚೇತೇಶ್ವರ ಪೂಜಾರ ಹಾಗೂ ಇಶಾಂತ್ ಶರ್ಮಾ ಆಯ್ಕೆ ಆಗುವ ಸಾಧ್ಯತೆಗಳಿದೆ. ಸದ್ಯ ಇಬ್ಬರು ಆಟಗಾರರು ಕೌಟಿ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಸದಸ್ಯರೊಬ್ಬರು, ಕೊಹ್ಲಿ ಸ್ಥಾನದಲ್ಲಿ ಅಯ್ಯರ್, ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ವಿಜಯ್ ಶಂಕರ್ ಆಯ್ಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಇಂಗೆಂಡ್ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ಎ ತಂಡ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಅಂಡರ್ 19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಶಿವಂ ಮಾವಿ ಸ್ಥಾನ ಪಡೆಯುವ ಸಾಧ್ಯತೆ ಇದೆ.