Tag: seized liquor

  • ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

    ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

    ನವದೆಹಲಿ: ಸೀಜ್ ಮಾಡಿದ್ದ ಮದ್ಯವನ್ನು ನಾಶಪಡಿಸುವ ಬದಲು ದೆಹಲಿ ಸರ್ಕಾರ ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ.

    ರಾಜ್ಯದಲ್ಲಿ ವಿವಿಧ ಇಲಾಖೆಗಳು ಹಲವು ಸಂದರ್ಭದಲ್ಲಿ ಅಕ್ರಮ ಮದ್ಯವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮದ್ಯವನ್ನು ನಾಶ ಮಾಡುವ ಬದಲು ಅದನ್ನು ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಆದ್ದರಿಂದ ಮದ್ಯ ಪ್ರಿಯರ ಚಿತ್ತ ಸದ್ಯ ದೆಹಲಿ ಸರ್ಕಾರದ ಮೇಲಿದೆ.

    ಇಲ್ಲಿಯವರೆಗೆ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದ ಮೇಲೆ ಅಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಅಬಕಾರಿ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಮದ್ಯಗಳನ್ನು ಲ್ಯಾಬ್‍ಗಳಲ್ಲಿ ಪರೀಕ್ಷೆಗೊಳಪಡಿಸಿ, ಅವುಗಳು ಸೇವಿಸಲು ಯೋಗ್ಯವಾಗಿದ್ದರೆ ಮಾತ್ರ ಆ ಮದ್ಯವನ್ನು ಮುಟ್ಟುಗೋಲು ಹಾಕಿದ ಏಳು ದಿನದಲ್ಲಿ ಮಾರಾಟ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

    ದೆಹಲಿಯೇ ಈ ವಿಧಾನವನ್ನ ಅಳವಡಿಕೊಂಡ ಮೊದಲ ರಾಜ್ಯವಾಗಲಿದ್ದು, ಮೊದಲ ಹಂತದಲ್ಲಿ 8 ಮಾರಾಟಗಾರರಿಗೆ ಮಾತ್ರ ವಶಪಡಿಸಿಕೊಂಡ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಹೀಗೆ ಮಾರಾಟಗೊಳ್ಳುವ ಮದ್ಯಗಳ ಬಾಟಲಿ ಮೇಲೆ `ಅಧಿಕೃತ ಜಪ್ತಿ ಮದ್ಯ’, `ದೆಹಲಿಯಲ್ಲಿ ಮಾರಾಟಕ್ಕೆ ಮಾತ್ರ’ ಎಂದು ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತಿ ವರ್ಷ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸುವ ಅಥವಾ ಮಾರಾಟ ಮಾಡುವ ಸುಮಾರು 2.5 ಲಕ್ಷ ಬಾಟಲಿಗಳ ಮದ್ಯವನ್ನು ವಶಪಡಿಸಿಕೊಳ್ಳುತ್ತದೆ. ಆದರೆ 2018-19 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ.

    ಈ ಮದ್ಯಗಳನ್ನು ನೆರೆಯ ಹರ್ಯಾಣದಿಂದ ಕಡಿಮೆ ದರದಲ್ಲಿ ಖರೀದಿಸಿ ದೆಹಲಿಗೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಅಲ್ಲದೆ ಇವುಗಳನ್ನು ಮಳಿಗೆಗಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • 1,000 ಲೀಟರ್ ಮದ್ಯ ಕುಡಿದ ಇಲಿಗಳು!

    1,000 ಲೀಟರ್ ಮದ್ಯ ಕುಡಿದ ಇಲಿಗಳು!

    – ಪೊಲೀಸರ ಆರೋಪಕ್ಕೆ ವ್ಯಂಗ್ಯವಾಡಿದ ನೆಟ್ಟಿಗರು

    ಲಕ್ನೋ: ಕಳ್ಳ ಭಟ್ಟಿ ದಂಧೆಕೋರರಿಂದ ವಶಕ್ಕೆ ಪಡೆದಿದ್ದ ಒಂದು ಸಾವಿರ ಲೀಟರ್ ಮದ್ಯವನ್ನು ಇಲಿಗಳು ಕುಡಿದು ಖಾಲಿ ಮಾಡಿವೆ ಎಂದು ಪೊಲೀಸರು ದೂರಿದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೆಟ್ಟಿಗರು ಅಧಿಕಾರಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಬರೇಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರವೇ ಉಳಿದಿವೆ. ಬಿಹಾರ, ಅಸ್ಸಾಂನಲ್ಲಿಯೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಈಗ ಬರೇಲಿಯ ಪೊಲೀಸರು ಕೂಡ ಠಾಣೆಯ ಕೊಠಡಿಯಲ್ಲಿ ಇಟ್ಟಿದ್ದ ಮದ್ಯ ಖಾಲಿಯಾಗಲು ಇಲಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ಅಭಿನಂದನ್ ಸಿಂಗ್ ಅವರು, ಠಾಣೆಯ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ 1,000 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಅದನ್ನು ಠಾಣೆಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಠಾಣೆಯ ಮುಖ್ಯ ಕ್ಲರ್ಕ್ ನರೇಶ್ ಪಾಲ್ ಬುಧವಾರ ಕೊಠಡಿ ತೆರೆದು ನೋಡಿದಾಗ ಮದ್ಯ ಖಾಲಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರ ಬಿದ್ದಿದ್ದು ಹಾಗೂ ಅಲ್ಲಿ ಇಲಿಗಳು ಇದ್ದಿರುವುದನ್ನು ನರೇಶ್ ಪಾಲ್ ನೋಡಿದ್ದಾರೆ. ಹೀಗಾಗಿ ಮದ್ಯವನ್ನು ಇಲಿಗಳೇ ಖಾಲಿ ಮಾಡಿವೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ತನಿಖೆ ನಡೆಸಲಾಗುತ್ತದೆ. ಆದರೆ ಮದ್ಯ ವಶಕ್ಕೆ ಪಡೆದ ಬಳಿಕ ಮಾದರಿಯನ್ನು ತನಿಖೆಗೆ ಒಪ್ಪಿಸಿ ಉಳಿದಿರುವುದನ್ನು ನಾಶಪಡಿಸಲಾಗುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದು ಮದ್ಯವನ್ನು ಕೊಠಡಿಯಲ್ಲಿಯೇ ಇರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಬಿಹಾರದಲ್ಲಿ 1,500 ಲೀಟರ್, ಅಸ್ಸಾಂನಲ್ಲಿ 650 ಲೀಟರ್, ಈಗ ಬರೇಲಿಯಲ್ಲಿ 1,000 ಲೀಟರ್! ಇಲಿಗಳು ನಿಜವಾಗಿಯೂ ದೊಡ್ಡಮಟ್ಟದ ಕುಡಿತಕ್ಕೆ ಒಳಗಾಗಿವೆ ಹಾಗೂ ಸ್ವಾದೀನಪಡಿಸಿಕೊಂಡ ಮದ್ಯ ಮಾತ್ರ ಕಾಣೆಯಾಗುತ್ತಿದೆ ಎಂದು ಗಿರೀಶ್ ಜೋಹಾರ್ ಎಂಬವರು ಟ್ವೀಟ್ ಮಾಡಿದ್ದಾರೆ. ಪೊಲೀಸರು ಉತ್ತಮ ಜೋಕ್ ಮಾಡುತ್ತಿದ್ದಾರೆ ಎಂದು ಶಿಲ್ಪಾ ಎಂಬವರು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv