Tag: seize

  • 2 ದಿನದಲ್ಲಿ ಪೊಲೀಸರಿಂದ 956 ವಾಹನಗಳು ಸೀಜ್, 92 ಪ್ರಕರಣ ದಾಖಲು

    2 ದಿನದಲ್ಲಿ ಪೊಲೀಸರಿಂದ 956 ವಾಹನಗಳು ಸೀಜ್, 92 ಪ್ರಕರಣ ದಾಖಲು

    ರಾಮನಗರ: ಕೊರೊನಾ ತಡೆಗಾಗಿ ದೇಶವನ್ನೇ ಲಾಕ್‍ಡೌನ್ ಮಾಡಿದರೂ ಅನಗತ್ಯವಾಗಿ ರಸ್ತೆಗಿಳಿದು ಓಡಾಟ ನಡೆಸುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 956 ವಾಹನಗಳನ್ನು ರಾಮನಗರ ಪೊಲೀಸರು ಸೀಜ್ ಮಾಡಿದ್ದಾರೆ. ಅನುಮತಿಯಿಲ್ಲದೇ ಅಂಗಡಿ ತೆರೆದಿದ್ದಕ್ಕೆ 94 ಪ್ರಕರಣ ದಾಖಲು ಮಾಡಲಾಗಿದೆ.

    ಅನಗತ್ಯವಾಗಿ ರಸ್ತೆಗಿಳಿದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ನಗರದ ರಸ್ತೆಗಳಲ್ಲಿ ಹಾಗೂ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ. ಜೊತೆಗೆ ಅಂಗಡಿಗಳು, ಬೇಕರಿ, ಟೀ ಸ್ಟಾಲ್, ಸಲೂನ್ ಶಾಪ್‍ಗಳನ್ನು ತೆರೆದು ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಒಟ್ಟು 94 FIR ದಾಖಲಾಗಿದೆ.

    ಈಗಾಗಲೇ ರಾಮನಗರ, ಚನ್ನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಮಾಡಿರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಠಾಣೆ ಆವರಣದಲ್ಲಿ ಬೈಕ್‍ಗಳು, ಕಾರು, ಆಟೋಗಳು ನಿಲ್ಲಿಸಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಠಾಣೆಯ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

    ಸೀಜ್ ಮಾಡುವ ವಾಹನಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿ ಲಾಕ್‍ಡೌನ್ ತೆರವಿನ ಬಳಿಕ ದಂಡ ಹಾಕಿ ಬೈಕ್ ನೀಡಲು ಪೊಲೀಸರು ಮುಂದಾಗಿದ್ದಾರೆ.

  • ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಸಿಕ್ಕಿಬಿದ್ದ

    ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಸಿಕ್ಕಿಬಿದ್ದ

    – ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯ ವಶಕ್ಕೆ

    ಶಿವಮೊಗ್ಗ: ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಪರಾರಿಯಾಗುತ್ತಿದ್ದವನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿನ ವಿನಯ್ ವೈನ್ಸ್‍ನ ಬೀಗ ಮುರಿದು ಅದೇ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೇವರಾಜ್ ಈ ಕೃತ್ಯ ಎಸಗಿದ್ದಾನೆ. ಅಬಕಾರಿ ಇಲಾಖೆಯಿಂದ ಸೀಜ್ ಮಾಡಲಾಗಿದ್ದ ಮದ್ಯದಂಗಡಿಯ ಬೀಗ ಮುರಿದು ಮದ್ಯ ಸಾಗಿಸಲು ಯತ್ನಿಸಿದ್ದ ಎಂದು ಹೇಳಲಾಗಿದೆ.

    ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯವನ್ನು ಈ ವೇಳೆ ವಶಪಡಿಸಿಕೊಳ್ಳಲಾಗಿದ್ದು, ಮದ್ಯ ಸಾಗಿಸುತ್ತಿದ್ದ ಆಲ್ಟೋ ಕಾರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂಗಡಿಯಲ್ಲಿ ಇನ್ನಿಬ್ಬರು ಇದ್ದು ಅವರಿಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಅಬಕಾರಿ ಉಪ ಆಯುಕ್ತ ಕ್ಯಾ.ಅಜಿತ್ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮದ್ಯ, ಆಲ್ಟೋ ಕಾರು ಸೇರಿದಂತೆ ಸುಮಾರು 2 ಲಕ್ಷದ 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮನೆಯಿಂದ ಹೊರ ಬಂದ್ರೆ ಸೀಜ್ ಆಗುತ್ತೆ ಬೈಕ್, ಕಾರ್ ಎಚ್ಚರ

    ಮನೆಯಿಂದ ಹೊರ ಬಂದ್ರೆ ಸೀಜ್ ಆಗುತ್ತೆ ಬೈಕ್, ಕಾರ್ ಎಚ್ಚರ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಸಂಪೂರ್ಣ ಸ್ತಬ್ಧವಾಗಿದ್ದು ಗಡಿ ಪ್ರದೇಶಗಳನ್ನು ಬಂದ್ ಮಾಡಿ ನಿಷೇಧಾಜ್ಞೆ ಹೇರಲಾಗಿದೆ. ಯಾರೊಬ್ಬರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

    ನಿಷೇಧಾಜ್ಞೆ ನಡುವೆ ಮನೆಯಿಂದ ಹೊರ ಬರುವ ಜನರ ವಿರುದ್ಧ ಪೋಲಿಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ರಸ್ತೆಗಿಳಿದ ಚಾಲಕರ ಕಾರ್ ಮತ್ತು ಬೈಕ್ ಗಳನ್ನು ದೆಹಲಿ ಪೋಲಿಸರು ಸೀಜ್ ಮಾಡುತ್ತಿದ್ದಾರೆ. ಅಗತ್ಯ ಕೆಲಸಗಳಿಗೆ ಮಾತ್ರ ಹೊರ ಬರಲು ಸೂಚಿಸಿದ್ದು ಸರ್ಕಾರಿ ಸೇವೆ, ಮಾಧ್ಯಮದವರು, ವೈದ್ಯಕೀಯ ಕಾರಣಗಳನ್ನು ಹೊರತು ಪಡೆಸಿ ಸುಖಾ ಸುಮ್ಮನೆ ಹೊರ ಬರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ಜೊತೆ ವಾಗ್ದಾದ ನಡೆಸುವ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ಕರೆದ್ಯೊಲಾಗುತ್ತಿದೆ.

    ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೇ ಹೊರ ಕೊರೊನಾ ಸೋಂಕುಗಳು ಪತ್ತೆಯಾಗಿಲ್ಲ. ಇದೇ ಪರಿಸ್ಥಿತಿಯನ್ನು ಮುಂದುವರೆಸಬೇಕಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಮೂರನೇ ಹಂತ ತಲುಪಿದರೆ ಏನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುತ್ತಿದೆ. ಐದು ಮಂದಿ ತಜ್ಞ ವೈದ್ಯರ ತಂಡವನ್ನು ರಚನೆ ಮಾಡಿದ್ದು, 24 ಗಂಟೆಯಲ್ಲಿ ವರದಿ ನೀಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ಇನ್ನು ನಿಷೇಧಾಜ್ಞೆಯಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು 5,000 ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೇ ನಿರಾಶ್ರಿತರ ಊಟಕ್ಕಾಗಿ ಕೇಂದ್ರಗಳನ್ನು ಆರಂಭಿಸಿದ್ದು ಮಧ್ಯಾಹ್ನ ಮತ್ತು ರಾತ್ರಿಯ ಊಟ ಉಚಿತವಾಗಿ ವಿತರಿಸಲಾಗುತ್ತಿದೆ.

  • ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ರಾಯಚೂರು: ಜಿಲ್ಲೆಯ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನ ಕೊನೆಗೂ ಸಿಂಧನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಚಂಗು ಅಲಿಯಾಸ್ ಗೌಸ್ ಹಾಗೂ ರೆಹಮಾನ್ ಬಂಧಿತ ಆರೋಪಿಗಳು. ರಾಯಚೂರು, ಸಿಂಧನೂರು, ಮುದಗಲ್, ನೇತಾಜಿನಗರ ಹಾಗೂ ಬಳಗಾನೂರ ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ ಒಟ್ಟು 8 ಕಳ್ಳತನ ಪ್ರಕರಣ ದಾಖಲಾಗಿದ್ದವು. ಸಿಂಧನೂರು ಮೂಲದ ಖದೀಮರು ಕೊನೆಗೆ ಸಿಂಧನೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.


    ಬಂಧಿತರಿಂದ 14 ಲಕ್ಷ 40 ಸಾವಿರ ರೂ. ಮೌಲ್ಯದ 360 ಗ್ರಾಂ. ಚಿನ್ನಾಭರಣ ಹಾಗೂ ಅರ್ಧ ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್‍ಪಿ. ಡಾ.ಸಿ.ಬಿ.ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

    ರಾಯಚೂರು ನಗರ ಹಾಗೂ ಲಿಂಗಸುಗೂರಿನಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನ ರಚಿಸಲಾಗಿದೆ ಎಂದು ವೇದಮೂರ್ತಿ ಹೇಳಿದ್ದಾರೆ.

  • ಇಸ್ಪೀಟ್ ಅಡ್ಡೆ ಮೇಲೆ ದಾಳಿ – 19 ಬೈಕ್‍ಗಳು ವಶ

    ಇಸ್ಪೀಟ್ ಅಡ್ಡೆ ಮೇಲೆ ದಾಳಿ – 19 ಬೈಕ್‍ಗಳು ವಶ

    – ವಾಹನ ಸಮೇತ ಮರಳು ಜಪ್ತಿ

    ಕೊಪ್ಪಳ: ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ಮಾಡಿದ್ದು, ಬರೋಬ್ಬರಿ 19 ಬೈಕ್‍ಗಳನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದ ಹೊರವಯಲಯದ ಬೆಟ್ಟದ ಪ್ರದೇಶದಲ್ಲಿ ನಡೆದಿದೆ.

    ಇನ್ಸ್‌ಪೆಕ್ಟರ್ ಉದಯರವಿ ಅವರ ನೇತೃತ್ವದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಗಾವತಿಯ ಹೊರವಲಯದಲ್ಲಿ ಈ ಜೂಜಾಟ ನಡೆಸಲಾಗುತ್ತಿತ್ತು ಎನ್ನಲಾಗಿದೆ.

    ಪೊಲೀಸರು ದಾಳಿ ಮಾಡುತ್ತಿದ್ದಂತಯೇ ಬಹುತೇಕ ಜೂಜುಕೋರರು ಓಡಿ ಹೋಗಿದ್ದು, ಮೂವರು ಮಾತ್ರ ಸಿಕ್ಕಿ ಬಿದ್ದಿದ್ದಾರೆ. ಸ್ಥಳದಲ್ಲಿ ಪತ್ತೆಯಾದ 19 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಕ್ರಮ ಮರಳು ಸಾಗಾಣಿಕೆ:
    ಗಂಗಾವತಿ ತಾಲೂಕಿನ ಹಿರೇಜಂತಕ್ಕಲ್ ಪ್ರದೇಶದ ವಿನೋಬನಗರದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಗ್ರಾಮೀಣ ಠಾಣೆಯ ಪೊಲೀಸರು ಎರಡು ಟ್ಯಾಕ್ಟರನ್ನು ವಶಕ್ಕೆ ಪಡೆದಿದ್ದಾರೆ.


    ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ ಟ್ರಾಕ್ಟರ್ ಚಾಲಕರು ವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮರಳು ಸಮೇತ ಟ್ರಾಕ್ಟರ್ ಗಳನ್ನು ಠಾಣೆಗೆ ತಂದ ಪೊಲೀಸರು, ದೂರು ದಾಖಲಿಸಿದ್ದಾರೆ. ಈ ಪೈಕಿ ಒಂದು ವಾಹನಕ್ಕೆ ಟ್ರಾಲಿಯ ನಂಬರ್ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

  • 58.95 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

    58.95 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

    – ಮಂಗ್ಳೂರು ಏರ್‌ಪೋರ್ಟಿನಲ್ಲಿ ಇಬ್ಬರ ಅರೆಸ್ಟ್

    ಮಂಗಳೂರು: ವಿದೇಶದಿಂದ ಆಗಮಿಸಿದ ಇಬ್ಬರು ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

    ಕೇರಳದ ಮಲ್ಲಾಪುರಂನ ನಿವಾಸಿ ಮಹಮ್ಮದ್ ಸ್ವಾಲಿಹ್ ಮತ್ತು ಮೊಹಮ್ಮದ್ ನಿಶಾದ್ ಬಂಧಿತ ಆರೋಪಿಗಳು. ಇಬ್ಬರು ಬೇರೆ ಬೇರೆ ವಿಮಾನದಲ್ಲಿ ಆಗಮಿಸಿದ್ದು, ಬರೋಬ್ಬರಿ 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಸ್ವಾಲಿಹ್ ದುಬೈನಿಂದ ಸ್ಪೈಸ್ ಜೆಟ್‍ನಲ್ಲಿ ಆಗಮಿಸಿದ್ದನು. ನಿಶಾದ್ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದನು. ಇಬ್ಬರನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯಕ್ಕೆ ಆರೋಪಿಗಳನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಬ್ಬರ ಬಳಿ ಸುಮಾರು 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

  • ದಾಖಲೆಯಿಲ್ಲದೇ ಸಾಗಿಸ್ತಿದ್ದ 56.96 ಲಕ್ಷ ರೂ. ವಶ

    ದಾಖಲೆಯಿಲ್ಲದೇ ಸಾಗಿಸ್ತಿದ್ದ 56.96 ಲಕ್ಷ ರೂ. ವಶ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ನಾಕಾ ಬಳಿ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು 56 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿದ್ದಾಪುರ ತಾಲೂಕಿನ ಹೇರೂರಿನ ಅಬ್ದುಲ್ ಮುತಲಿಫ್ (31) ಹಾಗೂ ಅಬ್ದುಲ್ ಸೌದ್ (42) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

    ಅಬ್ದುಲ್ ಮುತಲಿಫ್ ಮತ್ತು ಅಬ್ದುಲ್ ಸೌದ್ ಇವರು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಆದರೆ ಚಿಪಗಿ ನಾಕಾ ಬಳಿ ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಜಿ.ಟಿ.ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದೆ. ಆಗ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಸುಮಾರು 56 ಲಕ್ಷ ರೂ. ನಗದು ಪತ್ತೆಯಾಗಿದೆ.

    ತಕ್ಷಣ ಪೊಲೀಸರು ಇಬ್ಬರನ್ನು ಬಂಧಿಸಿ, 55 ಲಕ್ಷದ 96 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಹಣ ಸಾಗಿಸಲು ಬಳಸಿದ್ದ ಕಾರನ್ನು ಸಹ ಜಪ್ತಿ ಮಾಡಲಾಗಿದೆ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ಸಿಬ್ಬಂದಿ ಪ್ರಶಾಂತ್, ಚಂದ್ರಪ್ಪ, ಕೃಷ್ಣ, ಅನ್ಸಾರಿ, ರಾಜೇಶ್ ನಾಯಕ್, ರಾಜೇಶ್ ಕೊರಗ, ಜೋಸೆಫ್, ಶ್ರೀಧರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ಇಸ್ಪೀಟ್ ಅಡ್ಡೆ ಮೇಲೆ ದಾಳಿ- 17 ಬೈಕ್, 88 ಸಾವಿರ ಹಣ ವಶ

    ಇಸ್ಪೀಟ್ ಅಡ್ಡೆ ಮೇಲೆ ದಾಳಿ- 17 ಬೈಕ್, 88 ಸಾವಿರ ಹಣ ವಶ

    ಯಾದಗಿರಿ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, 17 ಬೈಕ್ ಮತ್ತು 88 ಸಾವಿರ ನಗದು ಹಣವನ್ನು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಗೋಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಗೋಗಿ ಪಿಎಸ್‍ಐ ಸೋಮಲಿಂಗ ಒಡೆಯರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇತ್ತೀಚೆಗೆ ಶಹಪುರ ತಾಲೂಕಿನ ಚಂದಾಪುರ ಗ್ರಾಮದ ಹೊರವಲಯದಲ್ಲಿ ಕಾನೂನು ಬಾಹಿರವಾಗಿ ಚಟುವಟಿಕೆಗಳು ಹೆಚ್ಚಾಗಿದ್ದವು. ಶಹಪುರ ತಾಲೂಕಿನ ಕೆಲ ಪ್ರಭಾವಿ ಮುಖಂಡರ ಮಕ್ಕಳು ಮತ್ತು ಸಂಬಂಧಿಕರು ಈ ಇಸ್ಪೀಟು ಅಡ್ಡೆಗಳನ್ನು ನಡೆಸುತ್ತಿದ್ದರು.

    ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದವು. ಹೀಗಾಗಿ ಪೊಲೀಸರು ಖಚಿತ ಮಾಹಿತಿ ಪಡೆದು ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 17 ಬೈಕ್ ಮತ್ತು 88,000 ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ದಾಳಿಯಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಸ್ಯಾಟಲೈಟ್ ಫೋನ್ ಹೊಂದಿದ್ದ ಮಹಿಳಾ ಪೈಲಟ್ ವಶ

    ಬೆಂಗಳೂರು: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಮೂಲದ ಮಹಿಳಾ ಪೈಲಟನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

    ಅಮೆರಿಕಾ ಮೂಲದ ಬೆಂಟರ್ ಚಾರಿಟಿ ನೊಯಲ್ ವಶಕ್ಕೆ ಪಡೆದ ಮಹಿಳಾ ಪೈಲಟ್. ಅಂದಹಾಗೆ ವಿಶೇಷ ವಿಮಾನದ ಚಾಲಕಿಯಾಗಿರುವ ಬೆಂಡರ್ ಚಾರಿಟಿ ನೊಯಲ್ ಬಳಿ ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಹೀಗಾಗಿ ಅನುಮಾನಗೊಂಡ ಸಿಐಎಸ್‍ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕೆಯನ್ನ ಕೆಐಎಎಲ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕೆಐಎಎಲ್‍ನ ಸಿಪಿಐ ಪ್ರಶಾಂತ್, ಮಹಿಳಾ ವಿಮಾನ ಚಾಲಕಿಯನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಭಾರತ ದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷಿದ್ಧ ಹಾಗೂ ಕಾನೂನುಬಾಹಿರ, ಕೇವಲ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಮಾತ್ರ ಸರ್ಕಾರಿ ಸದುದ್ದೇಶದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಆದರೆ ಈ ಮಹಿಳಾ ಪೈಲಟ್ ಇರುಡಿಯಮ್ ಅನ್ನೋ ಸ್ಯಾಟಲೈಟ್ ಫೋನ್ ಹೊಂದಿದ್ದಾಳೆ. ಹೀಗಾಗಿ ಅಮೆರಿಕಾದಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಗೆ ಅವಕಾಶ ಇದೆಯಾ ಅಥವಾ ಕಾನೂನುಬಾಹಿರವಾಗಿ ಈಕೆ ಸ್ಯಾಟಲೈಟ್ ಫೋನ್ ಹೊಂದಿದ್ದಾಳಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 4 ಲಕ್ಷ ಮೌಲ್ಯದ ಗಾಂಜಾ ಜಪ್ತಿ – ರೈತನ ಬಂಧನ

    4 ಲಕ್ಷ ಮೌಲ್ಯದ ಗಾಂಜಾ ಜಪ್ತಿ – ರೈತನ ಬಂಧನ

    ರಾಯಚೂರು: ಮಾದಕ ಪದಾರ್ಥ ಗಾಂಜಾ ಬೆಳೆ ಬೆಳೆಯುವುದು ನಿಷೇಧವಿದ್ದರೂ ರಾಯಚೂರಿನಲ್ಲಿ ಹಲವಾರು ರೈತರು ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ. ಇದೀಗ ಸಿರವಾರ ತಾಲೂಕಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ 4 ಲಕ್ಷ 15 ಸಾವಿರ ಮೌಲ್ಯದ ಗಾಂಜಾ ಬೆಳೆ ಜಪ್ತಿಯಾಗಿದೆ.

    ದೋತರಬಂಡಿ ಗ್ರಾಮದ ಪುಷ್ಪರಾಜ್ ಕಾನೂನು ಬಾಹಿರವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದು ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 415 ಕೆ.ಜಿ ಗಾಂಜಾ ಬೆಳೆಯನ್ನ ಜಪ್ತಿ ಮಾಡಿ ಪುಷ್ಪರಾಜನನ್ನ ಬಂಧಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಜಿಲ್ಲೆಯಲ್ಲಿ ಒಂದೊಂದೆ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ನೂರಾರು ಎಕರೆಯಲ್ಲಿ ಗಾಂಜಾ ಬೆಳೆದಿರುವ ಶಂಕೆಯಿದೆ. ಕೆಲ ರೈತರು ತಮ್ಮ ಮನೆಗಳ ಹಿತ್ತಲಲ್ಲಿ ಬೆಳೆದಿದ್ದರೆ, ಕೆಲವರು ರಾಜಾರೋಷವಾಗಿ ಜಮೀನಿನಲ್ಲಿ ಬೆಳೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪೊಲೀಸರು ಮೂರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ತಿಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.