Tag: section 144

  • ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಯಾದಗಿರಿ: ನಗರ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡುವಂತೆ, ಕಳೆದ ಎರಡು ದಿನಗಳ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುಧವಾರ ಕೈಜೋಡಿಸಲಿದ್ದಾರೆ.

    ಯಾದಗಿರಿ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಲಿದ್ದು, ಆದರೆ ಭದ್ರತಾ ದೃಷ್ಟಿಯಿಂದ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಡಳಿತ ಮನವಿಗೆ ಸೊಪ್ಪು ಹಾಕದ ದೇವೇಗೌಡರು ಪ್ರತಿಭಟನೆಯಲ್ಲಿ ಭಾಗವಹಿಸುವುದು ಶತಸಿದ್ಧ ಎಂದು ಕಾರ್ಯಕರ್ತರ ಮುಖಾಂತರ ಜಿಲ್ಲಾಡಳಿತಕ್ಕೆ ಸಂದೇಶ ಕಳುಹಿಸಿದ್ದಾರೆ.

    ರೈಲಿನ ಮುಖಾಂತರ ಬುಧವಾರ ಬೆಳಿಗ್ಗೆ 6:40ಕ್ಕೆ ಯಾದಗಿರಿಗೆ ಆಗಮಿಸಲಿರುವ ದೇವೇಗೌಡರು, ಕೆಲ ಹೊತ್ತು ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅಪಾರ ಜೆಡಿಎಸ್ ಕಾರ್ಯಕರ್ತರೊಂದಿಗೆ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನೂ ನಾಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.

    ಎಚ್‍ಡಿಡಿ ಹೇಳಿದ್ದೇನು?:  ಸಿಎಂ ಬಿಎಸ್‍ವೈ ಅವರ ಕಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಯಾದಗಿರಿ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೀಡಿದ ಅನುದಾನವನ್ನು ಕಡಿತ ಮಾಡಿದ್ದ ಪರಿಣಾಮ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನೆ ಮಾಡಲು ತೆರಳಿದ್ದರು. ಈ ವೇಳೆ ಸಿಎಂ ಅವರ ಕಾರನ್ನು ತಡೆದಿದ್ದಾರೆ. ಈ ಕಾರಣಕ್ಕೆ ಪ್ರಕರಣ ದಾಖಲಿಸಿ ಅವರಿಗೆ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ಕಾರ್ಯರ್ಕತರಿಗೆ ಧೈರ್ಯ ಹೇಳುವ ಸಾಲುವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಎಚ್‍ಡಿ ದೇವೇಗೌಡ ಅವರು ಹೇಳಿದರು.

  • ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಬಿಹಾರದಲ್ಲಿ ರಣಬಿಸಿಲಿಗೆ 117 ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ

    ಪಾಟ್ನಾ: ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.

    ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಅವರು ಸೋಮವಾರ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿ ಮಾಡಿದ್ದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು.

    ಅಲ್ಲದೆ ಪ್ರಕಟಣೆಯಲ್ಲಿ ತಿಳಿಸಿರುವ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಎಂಎನ್‍ಆರ್‍ಇಜಿಎ ಕಾರ್ಯಕ್ರಮಗಳ ಅಡಿಯಲ್ಲಿ ಬೆಳಗ್ಗೆ 10.30ರ ಬಳಿಕ ಯಾವುದೇ ತೆರೆದ ಸ್ಥಳಗಳಲ್ಲಿ ಕಾರ್ಮಿಕರು ಕೆಲಸ ಮಾಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಷ್ಟೇ ಅಲ್ಲದೆ, ಜೂನ್ 22ರವರೆಗೆ ಬಿಹಾರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮೂಲಕ ಬಿಸಿಲ ಝಳಕ್ಕೆ ಮೃತಪಡುವವರ ಸಂಖ್ಯೆ ತಗ್ಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

    ಹಾಗೆಯೇ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಗಯಾದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಸಿಲ ತಾಪಕ್ಕೆ ಬಲಿಯಾದ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪ್ರತಿಕ್ರಿಯಿಸಿ, ಜನರು ಬಿಸಿಲಿಗೆ ಹೋಗುವುದಕ್ಕಿಂತ ನೆರಳು ಇರುವ ಪ್ರದೇಶದಲ್ಲಿ ಇರುವುದು ಸೂಕ್ತ. ಅತಿಯಾದ ಬಿಸಿಲ ತಾಪಕ್ಕೆ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಮೆದುಳು ಸಂಬಂಧಿ ರೋಗಗಳು ಬರುತ್ತವೆ ಎಂದು ಹೇಳಿದ್ದಾರೆ.

  • ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಚಿಕ್ಕಮಗಳೂರು: ಡಿಸೆಂಬರ್ 1 ರಿಂದ 3ರವರೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಡಿಸೆಂಬರ್ 2ರಂದು ಬಾಬಾ ಬುಡನ್‍ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಅದೇ ದಿನ ಮುಸ್ಲಿಮರಿಗೆ ಈದ್‍ಮಿಲಾದ್ ಸಂಭ್ರಮ ಕೂಡಾ ಇದೆ. ದತ್ತಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆದ್ರೆ, ಅಂದೇ ಈದ್‍ಮಿಲಾದ್ ಅಂಗವಾಗಿ ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ.

    ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರಿಗೆ ಮೆರವಣಿಗೆಗೆ ಅನುಮತಿ ನೀಡಿದ್ದು, ಮಧ್ನಾಹ್ನದ ನಂತರ ಶೋಭಾಯಾತ್ರೆಗೆ ಅವಕಾಶ ಕಲ್ಪಿಸಿದೆ. 3 ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದೆ.

  • ಟೋಲ್ ವಿರೋಧಿಸಿ ಉಡುಪಿ ಬಂದ್ – ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಗಲಾಟೆ ನಡೀತಿದೆ. ಮಂಗಳೂರು- ಉಡುಪಿ- ಕುಂದಾಪುರ ನಡುವೆ ಮೂರು ಟೋಲ್ ಗೇಟ್ ನಿರ್ಮಾಣ ಮಾಡಿದ್ದೇ ಈ ಹೋರಾಟಕ್ಕೆ ಕಾರಣವಾಗಿದೆ.

    ಎರಡೂ ಟೋಲ್‍ಗಳ ಮೂಲಕ ಹೋಗಿ ಬರೋ ಎಲ್ಲಾ ವಾಹನಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಬಸ್ ಗಳು ಹೆದ್ದಾರಿಗೆ ಇಳಿದಿಲ್ಲ. ಪರಿಣಾಮ ಪ್ರಯಾಣಿಕರು ಉಡುಪಿ ಬಸ್ ನಿಲ್ದಣದಲ್ಲೇ ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದವರು ಕೂಡ ಪರದಾಟ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮಂಗಳೂರು, ಚಿಕ್ಕಮಗಳೂರು, ಕಾರವಾರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 6 ಇನ್ಸ್‍ಪೆಕ್ಟರ್, 35 ಎಸ್‍ಐ, 25 ಎಎಸ್‍ಐ, 5 ಕೆಎಸ್‍ಆರ್‍ಪಿ, 6 ಡಿಎಆರ್ ಪೊಲೀಸರು, 109 ಮಂದಿ ಹೋಮ್ ಗಾರ್ಡ್‍ಗಳನ್ನ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನೇಮಕ ಮಾಡಲಾಗಿದೆ. ಪಡುಬಿದ್ರೆ ಸಮೀಪದ ಹೆಜಮಾಡಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಕೆನರಾ ಬಸ್ ಮಾಲೀಕರ ಸಂಘ, ಟ್ಯಾಕ್ಸಿಮೆನ್ ಅಸೋಸಿಯೇಷನ್, ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘ- ಹೋಟೆಲ್ ಮತ್ತು ಬಾರ್ ಅಸೋಸಿಯೇಷನ್ ಇಂದು ಬಂದ್ ಮಾಡೋ ನಿರ್ಧಾರ ಮಾಡಿತ್ತು.

    ಹೆಜಮಾಡಿ ಮತ್ತು ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಬಂದ್ ನ ಮುಂದಾಳತ್ವ ವಹಿಸಿದೆ. ಹೈವೇಯುದ್ದಕ್ಕೂ ಅಲ್ಲಲ್ಲಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಡುಪಿ ರಿಜಿಸ್ಟ್ರೇಷನ್ ನ ಕೆ.ಎ 20 ಎಲ್ಲಾ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋದು ಹೋರಾಟಗಾರರ ಉದ್ದೇಶ. ಆಂಧ್ರ ಮೂಲದ ನವಯುಗ ಕನ್‍ಸ್ಟ್ರಕ್ಷನ್‍ಗೆ ಹೈವೇ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಜಗನ್ಮೋಹನ್ ರೆಡ್ಡಿ ಜೈಲುವಾಸದಿಂದ ಮತ್ತು ಉಡುಪಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ನದಿ- ಉಪನದಿಗಳು ಹಾದು ಹೋಗೋದರಿಂದ ಕಾಮಗಾರಿ ವಿಳಂಬವಾಗಿದೆ.

    ಇನ್ನು ಕೆಲವೆಡೆ ಸ್ಟೇ ಬಂದಿರೋದ್ರಿಂದ ಪಡುಬಿದ್ರೆ- ಕುಂದಾಪುರ ಭಾಗದಲ್ಲಿ ರಸ್ತೆಕಾಮಗಾರಿ ಪೂರ್ಣಗೊಂಡಿಲ್ಲ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಕಂಪನಿ ರಸ್ತೆ ಮಾಡಿರೋದ್ರಿಂದ ಬ್ಯಾಂಕ್ ಗೆ ಮರುಪಾವತಿ ಮಾಡಲು ಒತ್ತಡ ಬರುತ್ತಿದೆ ಅಂತ ಜಿಲ್ಲಾಡಳಿತಕ್ಕೆ ನವಯುಗ ಒತ್ತಡ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಂಕ ವಸೂಲಿಗೆ ಪರವಾನಿಗೆ ನೀಡಿದೆ. ಸೆಕ್ಷನ್ 144 ಹಾಕಿ ಹೋರಾಟ ನಡೆಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.