Tag: section 144

  • ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು ನಗರದಲ್ಲಿ 144 ಸೆಕ್ಷನ್‌ ಜಾರಿ

    ಬೆಂಗಳೂರು: ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಇಡೀ ಬೆಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿಯಾಗಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್ ‌ಪಂಥ್‌ ಆದೇಶ ಹೊರಡಿಸಿದ್ದಾರೆ.

    ಯಾವುದಕ್ಕೆ ನಿಷೇಧ:
    – ಯಾವುದೇ ವ್ಯಕ್ತಿ ಸಾರ್ವಜನಿಕರಿಗೆ ಧಕ್ಕೆ ಉಂಟಾಗುಂತೆ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ.
    – ಎರಡಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಸಂಚರಿಸುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ.

    – ಶಸ್ತ್ರಗಳನ್ನು, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇತ್ಯಾದಿ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನು ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ.
    – ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ ಮಾಡುವಂತಿಲ್ಲ.

  • ರಾಮ ಮಂದಿರ ಶಿಲನ್ಯಾಸ- ನಾಳೆ ಬೆಂಗಳೂರು, ಮಂಗಳೂರಿನಲ್ಲಿ ಹೈ ಅಲರ್ಟ್

    ರಾಮ ಮಂದಿರ ಶಿಲನ್ಯಾಸ- ನಾಳೆ ಬೆಂಗಳೂರು, ಮಂಗಳೂರಿನಲ್ಲಿ ಹೈ ಅಲರ್ಟ್

    – ಸೆಕ್ಷನ್ 144 ಜಾರಿ, ಸಂಘಟನೆಗಳ ಮೇಲೆ ನಿಗಾ

    ಬೆಂಗಳೂರು/ಮಂಗಳೂರು: ಆಗಸ್ಟ್ 5ರಂದು ಅಂದರೆ ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ಮೋದಿ ಸಹ ಭಾಗವಹಿಸುತ್ತೊದ್ದಾರೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ಇಂದು ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅಲ್ಲದೆ ಕೆಲ ಸಂಘಟನೆ, ಹೋರಾಟಗಾರರ ಮೇಲೆ ನಿಗಾ ವಹಿಸಲಾಗಿದೆ. ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇಲ್ಲ. ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದರೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ. ಅಲ್ಲದೆ ಜನನಿಬಿಡ ಪ್ರದೇಶ, ಮಾಲ್, ದೇವಸ್ಥಾನ, ಮೆಜೆಸ್ಟಿಕ್, ಮಾರ್ಕೆಟ್ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

    ಹಿಂದೂಪರ ಸಂಘಟನೆ, ಹಿಂದೂಯೇತರ ಸಂಘಟನೆಗಳ ಮೇಲೆ ನಿಗಾ ವಹಿಸಲಾಗಿದೆ. ಸಿಎಆರ್ ಮತ್ತು ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆಯಾಗಿ ಸಿಲಿಕಾನ್ ಸಿಟಿಯಲ್ಲಿ ನಾಳೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

    ಇತ್ತ ಮಂಗಳೂರಿನಲ್ಲೂ ನಾಳೆ 144 ಸೆಕ್ಷನ್ ಜಾರಿಯಾಗಲಿದೆ. ಒಂದು ಸಂಘಟನೆಯಿಂದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದ್ದು, ಇದಕ್ಕೆ ವಿರುದ್ಧವಾಗಿ ಮತ್ತೊಂದು ಸಂಘಟನೆಯಿಂದ ಪ್ರತಿಭಟನೆಗೆ ಪ್ಲ್ಯಾನ್ ನಡೆದಿದೆ. ಈ ಹಿನ್ನೆಲೆ ಮುಂದಾಗುನ ಅನಾಹುತ ತಡೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

  • ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಮೇ 3ರವರೆಗೆ ನಿಷೇಧಾಜ್ಞೆ ಜಾರಿ

    ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಮೇ 3ರವರೆಗೆ ನಿಷೇಧಾಜ್ಞೆ ಜಾರಿ

    ಚಿತ್ರದುರ್ಗ: ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಚಿತ್ರದುರ್ಗ ಜಿಲ್ಲಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಯಾವುದೇ ಧಾರ್ಮಿಕ ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯ ಮೇ 03ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಸಿಆರ್‌ಪಿಸಿ 1973ರ ಕಲಂ 144ರ ಮೇರೆಗೆ ಏಪ್ರಿಲ್ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 03ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 05ಕ್ಕೂ ಹೆಚ್ಚು ಜನ ಸೇರದಂತೆ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಿರುವ ವಸ್ತುಗಳು, ಆಹಾರ ಸಾಮಗ್ರಿಗಳ ಪೂರೈಕೆ, ತುರ್ತು ಆರೋಗ್ಯ ಸೇವೆ, ಅಗ್ನಿಶಾಮಕ ಸೇವೆ, ಶವಸಂಸ್ಕಾರ ಇನ್ನಿತರೆ ಅಗತ್ಯ ಸೇವೆಗಳ ಸೌಲಭ್ಯ ಇರಲಿದೆ.

    ಜಿಲ್ಲೆಯಲ್ಲಿನ ಸಿನಿಮಾ ಮಂದಿರ, ಮಾಲ್, ರಂಗಮಂದಿರ, ಪಬ್, ನೈಟ್ ಕ್ಲಬ್, ಸಂಗೀತಹಬ್ಬ, ವಸ್ತುಪ್ರದರ್ಶನಗಳು, ನಾಟಕ, ಮ್ಯಾರಥ್ಯಾನ್ ಸೇರಿದಂತೆ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾಕೂಟಗಳು, ಜಾತ್ರೆಗಳು, ವಾರದ ಸಂತೆಗಳನ್ನು ಮೇ 3ರ ಮಧ್ಯರಾತ್ರಿವರೆಗೆ ನಿಷೇಧಿಸಲಾಗಿದೆ. ಹೆಚ್ಚಾಗಿ ಜನ ಸೇರುವಂತಹ ಮದುವೆ, ಗೃಹಪ್ರವೇಶ, ನಾಮಕರಣ ಕಾರ್ಯಕ್ರಮಗಳನ್ನು ನಡೆಸಬಾರದು, ಇದನ್ನು ಮುಂದಿನ ದಿನಗಳಿಗೆ ಮುಂದೂಡಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೆಚ್ಚು ಜನರನ್ನು ಆಹ್ವಾನಿಸದೇ ಮನೆಯಲ್ಲಿಯೇ ಕಾರ್ಯಕ್ರಮ ಮಾಡಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಆದಷ್ಟು ಕಡಿಮೆ ಸಂಖ್ಯೆ ಜನರು ಭಾಗವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

    ಹೆಚ್ಚು ಜನರು ಬಳಸುವ ಈಜುಕೊಳ, ಜಿಮ್, ಬೇಸಿಗೆ ಶಿಬಿರ ಮುಂತಾದವುಗಳನ್ನು ಮುಚ್ಚಬೇಕು. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಜನಸಂದಣಿ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮೂಲಕ ಮಾತ್ರ ನೀಡಬೇಕು. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಬೇಕು. ಜಿಲ್ಲೆಯಲ್ಲಿ ಎಲ್ಲರೂ ಈ ಸೂಚನೆ ಹಾಗೂ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅನ್ವಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

  • ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆ – ತಾಲೂಕಿನಾದ್ಯಾಂತ 144 ಸೆಕ್ಷನ್

    ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆ – ತಾಲೂಕಿನಾದ್ಯಾಂತ 144 ಸೆಕ್ಷನ್

    – ಚಿಕಿತ್ಸೆ ನೀಡಿದ ವೈದ್ಯರು ಹೋಂ ಐಸೋಲೇಷನ್‍ಗೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ಗೌರಿಬಿದನೂರು ತಾಲೂಕಿನಾದ್ಯಾಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಮಾರ್ಚ್ 31ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ರಾಜಣ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಮೆಕ್ಕಾಗೆ ತಾಯಿ ಹಾಗೂ ಅಕ್ಕನೊಂದಿಗೆ ಪ್ರವಾಸಕ್ಕೆ ತೆರಳಿ ವಾಪಸ್ ಆಗಿದ್ದ 31 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಟ್ರಾವೆಲ್ ಏಜೆನ್ಸಿಯವರ ಬಸ್ ಮೂಲಕ ಹಿಂದೂಪುರಕ್ಕೆ ಬಂದಿದ್ದು, ಅಲ್ಲಿಂದ ಅವರ ಭಾವನ ಕಾರಿನ ಮೂಲಕ ಹಿಂದೂಪುರದಿಂದ ಗೌರಿಬಿದನೂರಿಗೆ ಆಗಮಿಸಿದ್ದರು.

    ಮಾರ್ಚ್ 16ರ ಬೆಳಗ್ಗೆ ಮನೆಗೆ ಬಂದಿದ್ದ ವ್ಯಕ್ತಿಗೆ ಒಂದು ದಿನದ ತರುವಾಯ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸ್ಥಳೀಯ ಖಾಸಗಿ ಕ್ಲಿನಿಕ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ತದನಂತರ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ಜೊತೆ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರಿಶೀಲನೆಗೆ ಒಳಗಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ವ್ಯಕ್ತಿಗೆ ಸೋಂಕು ತಗುಲಿರುವುದನ್ನು ಸ್ವತಃ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಧೃಢೀಕರಿಸಿದ್ದಾರೆ. ಆದರೆ ಜಿಲ್ಲಾಡಳಿತ ಸಂಜೆಯವರೆಗೂ ಕಾದು ನೋಡೋಣ ಮತ್ತೊಂದು ವರದಿ ಬರಬೇಕಿದೆ ಎಂದು ಡಿಸಿ ಆರ್.ಲತಾ ತಿಳಿಸುತ್ತಿದ್ದಾರೆ. ಆದರೂ ಸದ್ಯ ಮುಂಜಾಗ್ರತಾ ಕ್ರಮವಾಗಿ ಸೋಂಕಿತ ವ್ಯಕ್ತಿಯ 24 ಮಂದಿಯನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್‍ಗೆ ಒಳಪಡಿಸಿಲಾಗಿದೆ. ಇದರಲ್ಲಿ ಮೆಕ್ಕಾದಿಂದ ಇವರ ಜೊತೆ ವಾಪಸ್ ಬಂದಿದ್ದ ಇವರ ಅಕ್ಕ ಸಹ ಇದ್ದಾರೆ.

    ಮತ್ತೊಂದೆಡೆ ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ಖಾಸಗಿ ಕ್ಲಿನಿಕ್ ವೈದ್ಯರೂ ಹೋಂ ಐಸೋಲೇಷನ್‍ಗೆ ಒಳಪಟ್ಟಿದ್ದಾರೆ. ಮನೆಗೆ ಬಂದ ಒಂದೂವರೆ ದಿನದಲ್ಲಿ ಈತ ಯಾರ್ಯಾರನ್ನು ಭೇಟಿ ಮಾಡಿದ್ದ ಎಂಬ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಈಗಾಗಲೇ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಇಡೀ ಜಿಲ್ಲೆಗೆ 144 ಸೆಕ್ಷೆನ್ ಜಾರಿ ಮಾಡಲು ಚಿಂತನೆ ನಡೆಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಕೊರೊನಾ ಭೀತಿ- ಕೋಲಾರದಲ್ಲಿ ಸೆಕ್ಷನ್ 144 ಜಾರಿ

    ಕೊರೊನಾ ಭೀತಿ- ಕೋಲಾರದಲ್ಲಿ ಸೆಕ್ಷನ್ 144 ಜಾರಿ

    – ಚಿಕನ್, ಮಟನ್, ಬಾರ್ ಬಂದ್
    – ಹೋಟೆಲ್, ದಿನಸಿ ಅಂಗಡಿ ಎಂದಿನಂತೆ

    ಕೋಲಾರ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋಲಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ಗಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ತೆರೆಯಲು ಸೂಚಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ, ಆದರೂ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ಹೀಗಾಗಿ ಮುಂದಿನ ಆದೇಶದ ವರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೀಗಾಗಿ ಜನರು ಒಟ್ಟಿಗೆ ಸೇರುವಂತಿಲ್ಲ, ಯಾವುದೇ ಸಂತೆ, ಜಾತ್ರೆ, ರಥೋತ್ಸವಗಳನ್ನು ಮಾಡುವಂತಿಲ್ಲ, ಸಭೆ ಸಮಾರಂಭಗಳನ್ನು ಕೂಡಾ ಮಾಡುವಂತಿಲ್ಲ, ಮಾಡಿದರೂ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಕೋಲಾರ ಆಂಧ್ರ ಮತ್ತು ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಆಂಧ್ರ ಮತ್ತು ತಮಿಳುನಾಡಿನ ಗಡಿ ಸಂಪರ್ಕ ಮಾಡುವ ಜಿಲ್ಲೆಯ 6 ಕಡೆಗಳಲ್ಲಿ ಕೊರೊನಾ ಚೆಕ್ ಪೋಸ್ಟ್‍ಗಳನ್ನು ಹಾಕಲಾಗಿದ್ದು, ಅಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಈ ವರೆಗೆ ಜಿಲ್ಲೆಯಲ್ಲಿ ಹೊರ ದೇಶಗಳಿಂದ ಬಂದಿರುವ ಒಟ್ಟು 36 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಪ್ರತಿನಿತ್ಯ ಕೊರೊನಾಗೆ ಸಂಬಂದಿಸಿದಂತೆ ಸಭೆ ಕರೆಯಲಾಗುತ್ತಿದ್ದು, ನಿತ್ಯ ಜಿಲ್ಲೆಗೆ ಬರುವ, ಹೋಗುವವರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಕೋಲಾರ ಉಪ ಕಾರಾಗೃಹದಲ್ಲೂ ಖೈದಿಗಳ ಸಂದರ್ಶನ ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಪುರಸಭೆ ಹಾಗೂ ನಗರಸಭೆಗಳು ಮಾಂಸದಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಜನರಿಗೆ ತೊಂದರೆಯಾಗದಂತೆ ಹೋಟೆಲ್, ದಿನಸಿ ಅಂಗಡಿ, ಬೇಕರಿಗಳು ಸೇರಿದಂತೆ ದಿನ ಬಳಕೆ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಒಂದೆಡೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಬೇಸಿಗೆಯ ತಾಪಮಾನ ಕೂಡಾ ಹೆಚ್ಚಾಗುತ್ತಿದ್ದು, ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮನೆಯಲ್ಲೂ ಇರಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಕನಸು, ಮನಸಲ್ಲೂ ಕೊರೊನಾ ಕೊರೊನಾ ಎನ್ನುವಂತಾಗಿದೆ.

  • ದೆಹಲಿಯಲ್ಲಿ ಹಿಂಸಾಚಾರ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

    ದೆಹಲಿಯಲ್ಲಿ ಹಿಂಸಾಚಾರ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಗಳು ಕೈ ಮೀರಿದೆ. ಪ್ರತಿಭಟನೆಯಿಂದಾಗಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೌಜ್‍ಪುರ, ಗೋಕುಲ್‍ಪುರಿ, ಚಾಂದ್‍ಬಾಗ್ ನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಪ್ರತಿಭಟನಾ ಸ್ಥಳದಲ್ಲಿ 144 ಸೆಕ್ಷನ್ ಹೇರಲಾಗಿದೆ.

    ಮೌಜ್‍ಪುರದಲ್ಲಿ ಪತ್ರಕರ್ತ ಆಕಾಶ್ ಅವರಿಗೆ ಗುಂಡಿಕ್ಕಲಾಗಿದೆ. ಇತ್ತ ಖಾಸಗಿ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾಮ್ಯಾನ್ ಮೇಲೆ ಗಂಭೀರ ಹಲ್ಲೆ ಮಾಡಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

    ಈ ನಡುವೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲಾಗಿದೆ. ದೆಹಲಿಯಲ್ಲಿ ಎರಡು ಪೊಲೀಸ್ ಠಾಣೆಯಲ್ಲಿ ಎಎಪಿ ಕಾರ್ಪೋರೇಟರ್ ರೇಷ್ಮಾ ನದೀಮ್ ಮತ್ತು ಹಸೀಬ್ ಉಲ್ ಹಸನ್ ಅವರು ದೂರು ದಾಖಲಿಸಿದ್ದಾರೆ. ಹಿಂಸಾಚಾರಕ್ಕೆ ಜನಸಮೂಹವನ್ನು ಪ್ರಚೋದಿಸಿರುವ ಆರೋಪದ ಮೇಲೆ ವಿಡಿಯೋ ಸಾಕ್ಷ್ಯ ಸಹಿತ ಲಿಖಿತ ದೂರು ದಾಖಲಿಸಲಾಗಿದೆ.

    ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ಬುಧವಾರ ಈ ಅರ್ಜಿ ವಿಚಾರಣೆಗೆ ಬರಲಿದ್ದು, ದೆಹಲಿಯ ಹೊರ ಭಾಗದ ಅಧಿಕಾರಿಗಳಿಂದ ಎಸ್‍ಐಟಿ ತನಿಖೆ ನಡೆಸಬೇಕು ಮತ್ತು ಸೇನೆಯಿಂದ ದೆಹಲಿಯಲ್ಲಿ ಭದ್ರತೆ ಒದಗಿಸಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

    ಇತ್ತ ಮತ್ತೊಂದು ಕಡೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರಿಗೆ ರಕ್ಷಣೆ ನೀಡಬೇಕು ಹಾಗೂ ಹಿಂಸಾಚಾರ ನಡೆಸುವ ಪ್ರತಿಭಟನಾಕಾರರ ಮೇಲೆ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲು ಆಗ್ರಹಿಸಿದ್ದಾರೆ.

  • ಕುರಿ ಸಂತೆಗೆ ಸೆಕ್ಷನ್ 144 ಜಾರಿ

    ಕುರಿ ಸಂತೆಗೆ ಸೆಕ್ಷನ್ 144 ಜಾರಿ

    ಕೊಪ್ಪಳ: ಕುರಿ ಸಂತೆಗೂ ಸೆಕ್ಷನ್ 144 ಜಾರಿ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ನಡೆಯುತ್ತಿದ್ದ ಕುರಿ ಸಂತೆಯನ್ನು ಈಗ ಶಿಫ್ಟ್ ಮಾಡಲಾಗಿದೆ. ಈ ಹಿಂದೆ 2014ರ ಲೋಕಸಭಾ ಚುನಾವಣೆ ವೇಳೆ ಕೂಕನಪಳ್ಳಿಯಿಂದ ಬೂದಗುಂಪಾ ಗ್ರಾಮಕ್ಕೆ ಶಿಫ್ಟ್ ಆಗಿದ್ದ ಕುರಿ ಸಂತೆಯನ್ನು ಇದೀಗ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೂಕನಪಳ್ಳಿಗೆ ಗ್ರಾಮಕ್ಕೆ ಶಿಫ್ಟ್ ಮಾಡಲಾಗಿದೆ.

    ಸಂಸದ ಸಂಗಣ್ಣ ಕರಡಿ ಸ್ವಗ್ರಾಮ ಕೂಕನಪಳ್ಳಿಗೆ ಶಿಫ್ಟ್ ಮಾಡಿದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸೆಕ್ಷನ್ 144 ಜಾರಿಗೆ ಆದೇಶ ಹೊರಡಿಸಿದ್ದಾರೆ.

    ಈ ಹಿಂದೆ ಬೂದಗುಂಪ ಮತ್ತು ಕುಕನಪಳ್ಳಿ ಎರಡು ಕಡೆ ಕುರಿ ಸಂತೆ ನಡೆಯುತ್ತಿತ್ತು. ಆದರೆ ಇಂದಿನಿಂದ ಕುಕನಪಳ್ಳಿಯಲ್ಲಿ ಮಾತ್ರ ಪ್ರತಿ ಶುಕ್ರವಾರ ಕುರಿ ಸಂತೆ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ಇಂದು ಸಹ ಸೆಕ್ಷನ್ 144 ಜಾರಿ – 244 ಜನರ ವಶಕ್ಕೆ ಪಡೆದ ಪೊಲೀಸ್

    ಇಂದು ಸಹ ಸೆಕ್ಷನ್ 144 ಜಾರಿ – 244 ಜನರ ವಶಕ್ಕೆ ಪಡೆದ ಪೊಲೀಸ್

    ಬೆಂಗಳೂರು: ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುವ ಹಿನ್ನೆಲೆಯಲ್ಲಿ ಇಂದು ಸಹ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಮುಂದುವರಿಯಲಿದೆ. ಗುರುವಾರ ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಹಲವಾರು ಮಂದಿ ಪ್ರತಿಭಟನೆ ನಡೆಸಿದರು.

    ಗುರುವಾರ 244 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು 8 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ. ನಗರದಲ್ಲಿ ಇಂದು ಸಹ ಕೆಲವರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡುಕೊಂಡಿರುವ ಪೊಲೀಸರು ಪ್ರತಿಭಟನೆ ಮಾಡದಂತೆ ಕರೆ ನೀಡಿದ್ದಾರೆ.

    ಪೊಲೀಸರ ಜೊತೆಗೆ ಕೆಎಸ್‍ಆರ್‍ಪಿ ಹಾಗೂ ಸಿಎಆರ್ ತುಕಡಿಗಳ ನಿಯೋಜನೆ ಮಾಡಿಕೊಂಡಿದ್ದು, ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಹೆಚ್ಚು ಪೊಲೀಸರನ್ನು ಭದ್ರತೆಗೆ ಬಳಸಿಕೊಂಡಿದ್ದಾರೆ.

    ಗುರುವಾರ ಬೆಳಗ್ಗೆ 10 ಗಂಟೆವರೆಗೆ ಸಹಜವಾಗಿದ್ದ ಸಿಲಿಕಾನ್ ಸಿಟಿ 10 ಗಂಟೆಯ ನಂತರ ನಿಷೇಧಜ್ಞೆಯ ನಡುವೆಯೂ ಸಾವಿರಾರು ಮಂದಿ ಟೌನ್‍ಹಾಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದರು.

  • ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

    ಮಡಿಕೇರಿ: ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ಮತ್ತು ಎನ್​ಆರ್​ಸಿ (ರಾಷ್ಟ್ರೀಯ ನಾಗರಿಕ ನೊಂದಣಿ) ಕಾಯ್ದೆ ವಿರೋಧ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳು ಜಿಲ್ಲೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ.

    ಕೊಡಗು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಂದಿನಿಂದ 21ರ ಮಧ್ಯರಾತ್ರಿವರೆಗೆ ಕೊಡಗಿನಲ್ಲಿ ನಿಷೇಧಾಜ್ಞೆ ಹೊರಡಿಸುವಂತೆ ಕೊಡಗು ಎಸ್ಪಿ ಸುಮನ್ ಡಿ ಪನ್ನೇಕರ್ ಜಿಲ್ಲಾಧಿಕಾರಿಗೆ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಪುರಸ್ಕರಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

    ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ತರದಂತೆ ಕ್ರಮ ಕೈಗೊಳ್ಳಲಾಗಿದ್ದು, ಎಸ್‍ಪಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆ, ಮೆರವಣಿಗೆ ಹಾಗೂ ದಿಕ್ಕಾರ ಕೂಗುವ ಕಾರ್ಯಕ್ರಮ ನಡೆಸುವಂತಿಲ್ಲ. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಗುಂಪು ಗೂಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ಅವರು ಎಚ್ಚರಿಕೆ ಕೂಡ ನೀಡಿದ್ದಾರೆ. ಸದ್ಯ ಮಡಿಕೇರಿಯಲ್ಲಿ ಬೆಳಗ್ಗೆಯಿಂದಲೂ ಸಹಜ ಸ್ಥಿತಿಯಿದ್ದು, ಎಂದಿನಂತೆ ಸಾರ್ವಜನಿಕ ಚಟುವಟಿಕೆ ಆರಂಭವಾಗಿದೆ. ಶಾಲಾ ಕಾಲೇಜು ಕಡೆಗೆ ವಿದ್ಯಾರ್ಥಿಗಳು ತೆರೆಳುತ್ತಿದ್ದಾರೆ.

  • ಬೆಂಗ್ಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

    ಬೆಂಗ್ಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

    ಬೆಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ಜಾರಿಯನನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುರುವಾರದಿಂದ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಬೆಳಗಾವಿ ಸೇರಿದಂತೆ ರಾಜ್ಯದ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು, ಪ್ರತಿಭಟನೆಗೆ ನಾವು ಅವಕಾಶ ನೀಡಿಲ್ಲ. ಗುರುವಾರ ಬೆಳಗ್ಗೆ 6 ಗಂಟೆಯಿಂದ ಮೂರು ದಿನಗಳ ಕಾಲ (ಡಿಸೆಂಬರ್ 21ವರೆಗೆ) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶಾಲಾ ಕಾಲೇಜುಗಳ ತರಗತಿಗಳು ಎಂದಿನಂತೆ ನಡೆಯುತ್ತವೆ. ಜೊತೆಗೆ ಹೂ ಮಾರ್ಕೆಟ್, ಹಣ್ಣು ತರಕಾರಿ ಮಾರುಕಟ್ಟೆಗಳಿಗೂ ಯಾವುದೇ ನಿರ್ಬಂಧವಿಲ್ಲ. ಬಿಎಂಟಿಸಿ, ಕೆಎಸ್‍ಆರ್ ಟಿಸಿಗೆ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಗರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಎಲ್ಲಾ ಡಿಸಿಪಿಗಳಿಗೆ ಹೆಚ್ಚಿನ ಕ್ಯಾಮೆರಾಗಳನ್ನ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನರಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಬೆಂಗಳೂರು ನಗರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಿಆರ್ ಪಿಸಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸಿಎಎ ಪರ ಅಥವಾ ವಿರೋಧ ಎರಡಕ್ಕೂ ಅವಕಾಶವಿಲ್ಲ ಎಂದು ತಿಳಿಸಿದರು.

    300ಕ್ಕೂ ಹೆಚ್ಚು ಸಂಘಟನೆಗಳು ಪರ ವಿರೋಧ ಪ್ರತಿಭಟನೆಗೆ ಪರವಾನಗಿ ಕೇಳಿದ್ದಾರೆ. ಯಾರಿಗೂ ಯಾವುದೇ ರೀತಿಯ ಪರವಾನಗಿ ಕೊಟ್ಟಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಯಾರಿಗೂ ಪರ್ಮಿಷನ್ ಕೊಟ್ಟಿಲ್ಲ ಎಂದರು.

    ಮೈಸೂರು:
    ಮೈಸೂರಿನಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿಯಾಗಿದೆ. ಡಿಸೆಂಬರ್ 19ರ ಬೆಳಗ್ಗೆ 6ರಿಂದ ಡಿಸೆಂಬರ್ 21ರ ಮಧ್ಯಾರಾತ್ರಿ 12ರವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಯಾವುದೇ ಪ್ರತಿಭಟನೆ, ಧರಣಿ, ಮೆರವಣಿಗೆ, ರ‍್ಯಾಲಿ ಮಾಡದಂತೆ ಆದೇಶ ಮಾಡಲಾಗಿದೆ. ಕೆಲ ಸಂಘಟನೆಗಳು ಬಂದ್ ಮಾಡುವ ಮುನ್ಸೂಚನೆಯಲ್ಲಿ ಶಾಂತಿ, ಕೋಮು ಸೌರ್ಹಾದತೆಗೆ ಭಂಗ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಂಡು 3 ದಿನದ ನಿಷೇಧಾಜ್ಞೆಯ ಸುತ್ತೋಲೆ ಮೈಸೂರು ನಗರ ಪೋಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಹೊರಡಿಸಿದ್ದಾರೆ.

    ಆನೇಕಲ್:
    ಆನೇಕಲ್ ತಾಲೂಕಿನಾದ್ಯಂತ ಇಂದು ಮಧ್ಯರಾತ್ರಿ 12ರಿಂದ ಗುರುವಾರ ಮಧ್ಯರಾತ್ರಿ 12ವರೆಗೂ 144 ಸೆಕ್ಷನ್ ಜಾರಿಗೊಳಿಸಿ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ. ಆನೇಕಲ್ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ನಿಷೇಧಾಜ್ಞೆ ಹಿನ್ನೆಲೇ ಯಾವುದೇ ಪ್ರತಿಭಟನೆ ಹಿಂಸಾ ಕೃತ್ಯದಲ್ಲಿ ತೊಡಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಬಾಗಲಕೋಟೆ:
    ಬಾಗಲಕೋಟೆಯಲ್ಲಿ ಬುಧವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ಡಿಸೆಂಬರ್ 22ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ಸಂಘಟನೆ, ರಾಜಕೀಯ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿಗೆ ಭಂಗ ಉಂಟಾಗದಂತೆ ಮುಂಜಾಗ್ರತೆಗಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಉಡುಪಿ:
    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಭಾರತ್ ಬಂದ್, ಪ್ರತಿಭಟನೆ ಸಾಧ್ಯತೆ ಇದೆ. ಹೀಗಾಗಿ ಉಡುಪಿಯಲ್ಲೂ ಗುರುವಾರದಿಂದ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 21ರ ರಾತ್ರಿ 11 ಗಂಟೆವರೆಗೂ ಸೆಕ್ಷನ್ 144 ಜಾರಿಗೊಳಿಸಿ ಉಡುಪಿ ಜಿಲ್ಲಾಧಿಜಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

    ಚಿತ್ರದುರ್ಗ/ವಿಜಯಪುರ/ಕಾರವರ:
    ಚಿತ್ರದುರ್ಗದಲ್ಲಿ ಗುರುವಾರ ಬೆಳಗ್ಗೆ 6ರಿಂದ 21ರ ಸಂಜೆ 6ರವರೆಗೆ 144 ಸೆಕ್ಷನ್ ಜಾರಿಗೊಳಿಸಿ ಎಸ್‍ಪಿ ಡಾ.ಅರುಣ್ ಆದೇಶ ಹೊರಡಿಸಿದ್ದಾರೆ. ಬಿಜಾಪುರದಲ್ಲಿ ಮೂರು ದಿನ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಒಂದು ದಿನ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಕಲಬುರಗಿ:
    ಕಲಬುರಗಿ ಬಂದ್ ಕರೆ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರತಿಭಟನೆ ಮುಂಜಾಗ್ರತಾ ಕ್ರಮವಾಗಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 21ರವರೆಗೆ ನಗರ ಹಾಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಆದೇಶ ಹೊರಡಿಸಿದ್ದಾರೆ.

    ಹಾವೇರಿ/ಧಾರವಾಡ:
    ಹಾವೇರಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಡಿಸೆಂಬರ್ 21ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ. ಇತ್ತ ಧಾರವಾಡದಲ್ಲೂ 144 ಸೆಕ್ಷನ್ ಜಾರಿಯಾದ ಹಿನ್ನೆಲೆಯಲ್ಲಿ ಅಂಜುಮನ್ ಸಂಸ್ಥೆಯು ಪ್ರತಿಭಟನೆಯನ್ನು ಮುಂದೂಡಿದೆ.

    ಮಂಡ್ಯ:
    ಮಂಡ್ಯ ಜಿಲ್ಲೆಯಾದ್ಯಂತ ಗುರುವಾರದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಡಿಸೆಂಬರ್ 19ರ ಬೆಳಗ್ಗೆ 6ರಿಂದ ಡಿಸೆಂಬರ್ 21ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದ್ದು, ಪ್ರತಿಭಟನೆ, ಮೆರವಣಿಗೆ, ಜಾಥಾ, ಬಹಿರಂಗ ಸಭೆಗಳಿಗೆ ನಿಷೇಧ ಹೇರಲಾಗಿದೆ.