Tag: sea

  • ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ನವದೆಹಲಿ: ಜನವರಿ 1ರಿಂದ ಭಾರತದ ಎಲ್ಲ ಹಡಗುಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದ್ದು, ಈ ಕುರಿತು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಎಲ್ಲ ಬಂದರುಗಳಿಗೆ ಸೂಚನೆ ನೀಡಿದೆ.

    ಒಂದು ಬಾರಿ ಬಳಸುವ ಐಸ್ ಕ್ರೀಂ ಕಪ್, ಇತರೆ ಪ್ಲಾಸ್ಟಿಕ್ ಕಪ್‌ಗಳು, ಮೈಕ್ರೋವೇವ್ ಡಿಶಸ್ ಹಾಗೂ ಆಲೂಗಡ್ಡೆ ಚಿಪ್ಸ್ನ ಕವರ್‌ಗಳು ಸೇರಿದಂತೆ ಎಲ್ಲ ರೀತಿಯ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ನಿಂದ ಭಾರತವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ‘ಮೊದಲ ದಿಟ್ಟ ಹೆಜ್ಜೆಯನ್ನಿಡಬೇಕು’ ಎಂದು ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಭಾರತೀಯ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಏಕ ಬಳಕೆ ಪ್ಲಸ್ಟಿಕ್‌ಗಳನ್ನು ನಿಷೇಧಿಸಲಾಗುವುದು. ಮಾತ್ರವಲ್ಲದೆ, ಭಾರತೀಯ ನೀರಿನಲ್ಲಿ ಸಂಚರಿಸುವಾಗ ವಿದೇಶಿ ಹಡಗುಗಳಲ್ಲಿಯೂ ಸಹ ಪ್ಲಾಸ್ಟಿಕ್ ನಿಷೇಧಿಸಲಾಗುವುದು.

    ಈ ಪಟ್ಟಿಯಲ್ಲಿ ಚೀಲಗಳು, ಟ್ರೇ, ಪ್ಲಾಸ್ಟಿಕ್ ಪಾತ್ರೆ, ಫುಡ್ ಪ್ಯಾಕೇಜಿಂಗ್ ಫಿಲ್ಮ್, ಹಾಲಿನ ಬಾಟಲಿಗಳು, ಫ್ರೀಜರ್ ಚೀಲಗಳು, ಶ್ಯಾಂಪೂ ಬಾಟಲಿಗಳು, ಐಸ್ ಕ್ರೀಮ್ ಬಾಕ್ಸ್, ನೀರು ಹಾಗೂ ಇತರೆ ಪಾನೀಯ ಬಾಟಲಿಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

    ತಪಾಸಣೆ ಹಾಗೂ ಲೆಕ್ಕಪರಿಶೋಧನೆ ವೇಳೆ ಯಾವುದೇ ಭಾರತೀಯ ಹಡಗಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಪ್ಲಾಸ್ಟಿಕ್ ಬಳಸದ ಕುರಿತು ಹಾಗೂ ಸಂಗ್ರಹಿಸದ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ಪಾಲಿಸದೆ ಪದೇ ಪದೆ ಅಪರಾಧ ಎಸಗಿದಲ್ಲಿ ಅಂತಹವರನ್ನು ಬಂಧಿಸುವಂತೆ ಸೂಚಿಸಲಾಗಿದೆ.

    ಭಾರತೀಯ ಸಮುದ್ರದಲ್ಲಿ ಪ್ರವೇಶಿಸುವ ವಿದೇಶಿ ಹಡುಗುಗಳು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಬೇಕು. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದಲ್ಲಿ ಅಂತಹ ವಸ್ತುಗಳನ್ನು ಭಾರತೀಯ ಬಂದರುಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

    ಏಕ ಬಳಕೆಯ ಪ್ಲಾಸ್ಟಿಕ್ ಅಂಶ ಮಣ್ಣು, ನದಿ ಅಥವಾ ಯಾವುದೇ ಜಲಮೂಲಗಳನ್ನು ಸೇರಿದರೆ ಸರಿಪಡಿಸಲಾಗದಷ್ಟು ಕಲುಷಿತಗೊಳ್ಳುತ್ತದೆ. ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್(ಐಎಂಒ) ಸಾಗರದ ಕಸವು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ. ಈ ರೀತಿ ಮುಂದುವರಿದರೆ 2050ರ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ಪ್ರಮಾಣವು ಅಲ್ಲಿನ ಮೀನುಗಳನ್ನು ಮೀರಿಸುತ್ತದೆ ಎಂದು ಕೆಲವು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ.

  • ಇಂದು, ನಾಳೆ ‘ಮಹಾ’ ವರುಣನ ಆರ್ಭಟ – 9 ಜಿಲ್ಲೆಗಳಿಗೆ ತಟ್ಟಲಿದೆ ಮಳೆ ಅಬ್ಬರದ ಬಿಸಿ

    ಇಂದು, ನಾಳೆ ‘ಮಹಾ’ ವರುಣನ ಆರ್ಭಟ – 9 ಜಿಲ್ಲೆಗಳಿಗೆ ತಟ್ಟಲಿದೆ ಮಳೆ ಅಬ್ಬರದ ಬಿಸಿ

    ಬೆಂಗಳೂರು: ಇಂದು ಹಾಗೂ ನಾಳೆ ಎಂದರೆ ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಸಹ ಘೋಷಿಸಲಾಗಿದೆ. ಇದನ್ನೂ ಓದಿ: 2 ದಿನದಲ್ಲಿ ಕರಾವಳಿಗೆ ಅಪ್ಪಳಿಸಲಿದೆ ‘ಮಹಾ’ ಚಂಡಮಾರುತ

    ಲಕ್ಷದ್ವೀಪ ಬಳಿಯ ಅರಬ್ಬಿ ಸಾಗರದಲ್ಲಿ ವಾಯುಭಾರ ಕುಸಿತದಿಂದ ಮಹಾ ಚಂಡಮಾರುತ ಎದ್ದಿದ್ದು, ಇಂದು ಮಧ್ಯಾಹ್ನ ಲಕ್ಷದ್ವೀಪ ತೀರಕ್ಕೆ ಅಪ್ಪಳಿಸಲಿದೆ. ಸದ್ಯ ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಿಂದ ಆಗ್ನೇಯ ದಿಕ್ಕಿನ 240 ಕಿ.ಮೀ ದೂರದಲ್ಲಿ ಮಹಾ ಚಂಡಮಾರುತ ಕೇಂದ್ರೀಕೃತವಾಗಿದೆ.

    ಈಗಾಗಲೇ ಗಂಟೆಗೆ 90ರಿಂದ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, 2 ಮೀ. ಎತ್ತರದವರೆಗೂ ರಕ್ಕಸ ಅಲೆಗಳು ಏಳುತ್ತಿವೆ. ಈಗಾಗಲೇ ಲಕ್ಷದ್ವೀಪ, ಕೇರಳದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಇದರ ಪರಿಣಾಮ ಕರ್ನಾಟಕಕ್ಕೂ ತಟ್ಟಲಿದೆ.

    ಕಳೆದ ಎರಡು ದಿನಗಳಿಂದ ಸ್ವಲ್ಪ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

  • ರಾಜ್ಯದಲ್ಲಿ 5 ದಿನ ಮುಂದುವರಿಯಲಿದೆ ಮಳೆ

    ರಾಜ್ಯದಲ್ಲಿ 5 ದಿನ ಮುಂದುವರಿಯಲಿದೆ ಮಳೆ

    ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನವೂ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

    ಅರಬ್ಬೀ ಸಮುದ್ರದ ಪೂರ್ವ ಕೇಂದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹೀಗಾಗಿ ಮುಂದಿನ 5 ದಿನ ಮಳೆಯಾಗಲಿದೆ. 24 ಗಂಟೆಯಲ್ಲಿ ಮತ್ತಷ್ಟು ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಮತ್ತೆ 12 ಗಂಟೆ ಕಳೆದ ಮೇಲೆ ವಾಯುಭಾರ ಕುಸಿತದ ತೀವ್ರತೆ ಸಹ ಹೆಚ್ಚಾಗಲಿದೆ.

    ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಹೆಚ್ಚು ಮಳೆಯಾಗಲಿದ್ದು, ಮಧ್ಯಾಹ್ನ, ರಾತ್ರಿ ವೇಳೆ ವರುಣನ ಅಬ್ಬರ ಹೆಚ್ಚಾಗಲಿದೆ. ತೀವ್ರವಾದ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ. ಅಲ್ಲದೆ ಹುಬ್ಬಳಿ, ಧಾರವಾಡ, ಬೆಳಗಾವಿಯಲ್ಲೂ ಮಳೆ ದಾಖಲೆ ಮಾಡಿದೆ.

    ಮತ್ತೆ ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಸಾಧ್ಯತೆ ಇದೆ. ಹೀಗಾಗಿ ಇದೇ ತಿಂಗಳ 23ರೊಳಗೆ ತಮಿಳುನಾಡು ಗಡಿಭಾಗ, ಆಂಧ್ರ ಭಾಗದಲ್ಲೂ ಮಳೆ ಹೆಚ್ಚಾಗಲಿದೆ. ಇತ್ತ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲೂ ಮಳೆಯಾಗಲಿದೆ. ಸುಮಾರು 5 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

    ಉತ್ತರ ಕನ್ನಡದಲ್ಲಿ 85 ಮಿ.ಮೀ, ಉಡುಪಿಯ ಕಾರ್ಕಾಳದಲ್ಲಿ 75 ಮಿ.ಮೀ, ಬಾಗಲಕೋಟೆಯಲ್ಲಿ 135 ಮಿ.ಮೀ, ಬೆಳಗಾವಿಯಲ್ಲಿ 92 ಮಿ.ಮೀ, ಧಾರವಾಡದಲ್ಲಿ 87 ಮಿ.ಮೀ, ಚಿಕ್ಕಮಗಳೂರಿನಲ್ಲಿ 165 ಮಿ.ಮೀ, ಮೈಸೂರಿನಲ್ಲಿ 89 ಮಿ.ಮೀ, ಚಿತ್ರದುರ್ಗ 82 ಮಿ.ಮೀ ಮಳೆ, ದಾವಣಗೆರೆ 78 ಮಿ.ಮೀ, ಶಿವಮೊಗ್ಗದಲ್ಲಿ 75 ಮಿ.ಮೀ ಮಳೆ ಆಗಿದೆ.

  • ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು – ಮೀನುಗಾರರಲ್ಲಿ ಆತಂಕ

    ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು – ಮೀನುಗಾರರಲ್ಲಿ ಆತಂಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಬಲು ಅಪರೂಪದ ಕಾರ್ಗಿಲ್ ಮೀನು (ಕಡಬು) ಟನ್ ಗಟ್ಟಲೇ ಸಿಕ್ಕಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.

    ಲಕ್ಷ ದ್ವೀಪ, ಹವಳದ ದಿಬ್ಬಗಳು ಇರುವಂತ ಪ್ರದೇಶದಲ್ಲಿ ಈ ಮೀನುಗಳು ಹೇರಳವಾಗಿ ವಾಸಿಸುತ್ತಿವೆ. ಇವುಗಳು ಮನುಷ್ಯನಂತೆ ಹಲ್ಲುಗಳನ್ನು ಹೊಂದಿವೆ. ಇದಲ್ಲದೇ ಇವು ಮೀನುಗಳನ್ನೇ ತಿಂದು ಬದುಕುತ್ತವೆ. ಹೀಗಾಗಿ ಇವು ಎಲ್ಲಿ ಇರುತ್ತವೆಯೋ ಆ ಭಾಗದಲ್ಲಿ ಉತ್ತಮ ಆಹಾರದ ಮೀನುಗಳು ಇರುವುದಿಲ್ಲ. ಇದ್ದರೂ ಈ ಮೀನುಗಳು ಭಕ್ಷಿಸುತ್ತವೆ. ಹೀಗಾಗಿ ಈ ಮೀನುಗಳು ಇರುವಲ್ಲಿ ಬೇರೆ ಮೀನುಗಳು ಇರುವುದಿಲ್ಲ ಎಂಬುದು ಮೀನುಗಾರರ ನಂಬಿಕೆಯಾಗಿದ್ದು, ವೈಜ್ಞಾನಿಕವಾಗಿ ಕೂಡ ದೃಢಪಟ್ಟಿದೆ.

    ಈ ಬಾರಿ ಅರಬ್ಬಿ ಸಮುದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಳಿಯ ಚಲನೆ ಬದಲಾಗಿದೆ. ಇದರಿಂದಾಗಿ ಲಕ್ಷದ್ವೀಪಗಳಂತಹ ಪ್ರದೇಶದಲ್ಲಿ ಇರಬೇಕಾದ ಕಾರ್ಗಿಲ್ ಮೀನುಗಳು ತಮ್ಮ ಸ್ಥಾನ ಬದಲಿಸಿ ಉತ್ತರ ದಿಕ್ಕಿನತ್ತ ಚಲಿಸುತ್ತಿವೆ. ಹೀಗಾಗಿ ಈ ಮೀನುಗಳು ಈ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದೆ. ಹೀಗಾಗಿ ಮೊದಲೇ ಮೀನಿನ ಕ್ಷಾಮದಿಂದ ಬಳಲುತ್ತಿರುವ ಕಾರವಾರದ ಮೀನುಗಾರರು ಈ ಮೀನುಗಳ ಆಗಮನದಿಂದ ಮತ್ತಷ್ಟು ಭಯ ಪಡುವಂತಾಗಿದೆ ಎಂದು ಇಲ್ಲಿನ ಮೀನುಗಾರರು ಹೇಳುತ್ತಾರೆ.

    ಇಂದು 15 ಬೋಟುಗಳಿಗೆ 80 ಟನ್‍ಗೂ ಅಧಿಕ ಕಾರ್ಗಿಲ್ ಮೀನುಗಳು ಬಲೆಗೆ ಬಿದ್ದಿವೆ. ಈಗಾಗಲೇ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಹೆಚ್ಚಾಗಿದ್ದು, ಮೀನು ಹಿಡಿಯಲು ತೆರಳಿದವರು ಸಾವಿರಾರು ರೂ.ಯ ಇಂಧನ ವ್ಯಯಿಸಿ ಬರಿ ಕೈಯಲ್ಲಿ ಹಿಂತಿರುಗಲಾಗದೇ ಇವುಗಳನ್ನು ಹೊತ್ತು ತರುತ್ತಿದ್ದಾರೆ. ಈ ಮೀನುಗಳನ್ನು ಈ ಭಾಗದಲ್ಲಿ ಯಾರೂ ತಿನ್ನುವುದಿಲ್ಲ. ಹೀಗಾಗಿ ಫಿಶ್ ಮಿಲ್‍ಗಳಿಗೆ ಇವುಗಳನ್ನು ಕಳುಹಿಸಬೇಕಿತ್ತು. ಸ್ಥಳೀಯವಾಗಿ ಫಿಶ್ ಮಿಲ್ ಬಂದ್ ಆಗಿದ್ದರಿಂದ ನೆರೆಯ ಗೋವಾ, ಮಹಾರಾಷ್ಟ್ರ ಹಾಗೂ ಪಕ್ಕದ ಜಿಲ್ಲೆಯ ಉಡುಪಿಗೆ ಕಳುಹಿಸಬೇಕಿದೆ.

    ಈ ಮೀನುಗಳನ್ನು ಬೇರೆ ಮೀನುಗಳ ಜೊತೆ ಸೇರಿಸಿದರೂ ವಿಪರೀತ ಕೆಟ್ಟ ವಾಸನೆ, ಕಪ್ಪು ಬಣ್ಣಕ್ಕೆ ತಿರುಗುವುದು ಉಳಿದ ಮೀನುಗಳ ರುಚಿ, ಬಣ್ಣ ಕೆಡಿಸುತ್ತದೆ. ಹೀಗಾಗಿ ಪ್ರತ್ಯೇಕ ವಾಗಿ ಸಾಗಾಟ ಮಾಡಬೇಕಿದ್ದು, ಸದ್ಯ ಇದರ ಬೆಲೆ ಕೆಜಿ ಒಂದಕ್ಕೆ 10 ರಿಂದ 15 ರೂಪಾಯಿಗಳಷ್ಟಿದೆ.

    ಚೀನಾದಲ್ಲಿ ಭರ್ಜರಿ ಬೇಡಿಕೆ?
    ಭಾರತದಲ್ಲಿ ಈ ಮೀನುಗಳ ಸೇವನೆ ಮಾಡುವುದು ಅತ್ಯಲ್ಪ. ಹೀಗಾಗಿ ಈ ಭಾಗದಲ್ಲಿ ಇದರ ಬೇಡಿಕೆ ಇರದ ಕಾರಣ ಇವುಗಳನ್ನು ಮೀನುಗಾರರು ಹಿಡಿಯುವುದಿಲ್ಲ. ಸಿಕ್ಕರೂ ಬಿಟ್ಟು ಬರುವುದುಂಟು. ಆದರೆ ಮೀನೇ ಇಲ್ಲದಿದ್ದಾಗ ಬೇಡಿಕೆ ಇಲ್ಲದ ಈ ಮೀನುಗಳನ್ನು ಹೊತ್ತು ತರುತ್ತಾರೆ. ಈ ಮೀನುಗಳಿಗೆ ಚೀನಾದಲ್ಲಿ ಬೇಡಿಕೆ ಇದೆ. ಹೀಗಾಗಿ ಫಿಶ್ ಮಿಲ್‍ನಲ್ಲಿ ರಫ್ತು ಮಾಡುವ ಕಂಪನಿಗಳು ಈ ಮೀನಿನ ತಲೆಯನ್ನು ಕತ್ತರಿಸಿ ದೇಹದ ಭಾಗವನ್ನು ಮಾತ್ರ ಕೆ.ಜಿಗೆ 30 ರೂ. ನಿಂದ 50 ರೂ.ವರೆಗೆ ಬೇಡಿಕೆಗೆ ತಕ್ಕಂತೆ ರಫ್ತು ಮಾಡುತ್ತಾರೆ.

    ಕಡಲ ವಾತಾವರಣ ಬದಲಾಗಿದೆ:
    ಅರಬ್ಬಿ ಸಮುದ್ರದ ಒಳಗಿನ ವಾತಾವರಣ ಬದಲಾಗಿದೆ. ಅಲ್ಲದೆ ಗಾಳಿ ಬೀಸುವ ದಿಕ್ಕು ಬದಲಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಆಹಾರದ ಕೊರತೆ ನೀಗಿಸಿಕೊಳ್ಳಲು ಇವು ತಮ್ಮ ಸ್ಥಾನವನ್ನು ಬದಲಿಸುತ್ತದೆ. ಆಫ್ರಿಕಾ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಭಾರತದ ಲಕ್ಷದ್ವೀಪ, ತಮಿಳುನಾಡು, ಆಂಧ್ರಗಳಲ್ಲಿ ಕಾಣಸಿಗುತ್ತವೆ. ದಕ್ಷಿಣ ಸಮುದ್ರದಲ್ಲಿ ಹೆಚ್ಚಾಗಿ ವಾಸಿಸುವ ಇವು ಈಗ ವಾತಾವರಣ ಬದಲಾವಣೆಯಿಂದ ಉತ್ತರ ದಿಕ್ಕಿಗೆ ಬಂದಿವೆ.

    ಇವು ಈ ಭಾಗದಲ್ಲಿ ಸಿಗುವ ತಾರ್ಲೆ, ಬಾಂಗಡೆಯಂತಹ ಮೀನುಗಳೇ ಆಹಾರವಾಗಿ ತಿನ್ನುತ್ತವೆ. ಇದರಿಂದ ಈ ಭಾಗದಲ್ಲಿ ಮೀನುಗಳ ಸಂತತಿ ಕ್ಷೀಣಿಸುವ ಜೊತೆ ಮೀನುಗಾರರಿಗೂ ಸಮಸ್ಯೆ ಆಗಲಿದೆ. ಆದರೆ ಇದು ನೈಸರ್ಗಿಕ ಕ್ರಿಯೆ ಅಷ್ಟೇ ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಪ್ರೊ. ಜೆ.ಎಲ್ ರಾಥೋಡ್ ಅಭಿಪ್ರಾಯ ಪಟ್ಟಿದ್ದಾರೆ.

  • ಮೂರು ದಿನದಿಂದ ಕೆಟ್ಟು ನಿಂತ ಬೋಟ್‍ನಲ್ಲಿದ್ದ 23 ಮೀನುಗಾರರ ರಕ್ಷಣೆ

    ಮೂರು ದಿನದಿಂದ ಕೆಟ್ಟು ನಿಂತ ಬೋಟ್‍ನಲ್ಲಿದ್ದ 23 ಮೀನುಗಾರರ ರಕ್ಷಣೆ

    ಕಾರವಾರ: ಯಾಂತ್ರಿಕ ಬೋಟಿನಲ್ಲಿ ತಾಂತ್ರಿಕ ದೋಷದಿಂದಾಗಿ ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ನಲ್ಲಿದ್ದ 23 ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಭಟ್ಕಳ ಬಂದರಿನಿಂದ NFG ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಅರಬ್ಬಿ ಸಮುದ್ರದ 30 ನಾಟಿಕಲ್ ಮೈಲು ದೂರದಲ್ಲಿ ಇಂಜಿನ್ ಕೆಡುವುದರ ಜೊತೆ ಬ್ಯಾಟರಿ ಕೂಡ ಕೆಟ್ಟು ಹೋಗಿತ್ತು. ಇದರಿಂದ ಜಿಪಿಎಸ್ ಮತ್ತು ವೈರಲೆಸ್ ಸಂಪರ್ಕ ಸ್ಥಗಿತವಾಗಿ ಯಾರನ್ನೂ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ.

    ಸಮುದ್ರದಲ್ಲಿ ಮೂರು ದಿನಗಳವರೆಗೆ 23 ಮೀನುಗಾರರು ಸಂಕಷ್ಟದಿಂದ ಕಾಯುತ್ತಿದ್ದರು. ಮೂರು ದಿನಗಳ ನಂತರ ಮೀನುಗಾರಿಕಾ ಬೋಟ್ ಈ ಭಾಗದಲ್ಲಿ ಬಂದಿದೆ. ನಂತರ ವೈರಲೆಸ್ಸ್ ಸಂಪರ್ಕ ಮಾಡಿ ಇಂದು ಎಲ್ಲರನ್ನು ರಕ್ಷಣೆ ಮಾಡಲಾಗಿದ್ದು ಭಟ್ಕಳ ಬಂದರಿಗೆ ಕರೆತರಲಾಯಿತು.

  • ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ನವದೆಹಲಿ: ಸಮುದ್ರದ ಒಳಗಡೆಯಿಂದ ಭಾರತಕ್ಕೆ ಉಗ್ರರು ನುಸುಳಲು ಮುಂದಾಗುತ್ತಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಗಡಿಯಲ್ಲಿ ಉಗ್ರರು ನುಸುಳಲು ಒಂದು ಕಡೆ ಗುಂಡಿನ ದಾಳಿ ನಡೆಸಿ ಭಾರತದ ಸೈನ್ಯದ ಗಮನವನ್ನು ಸೆಳೆಯುತ್ತಿದ್ದ ಪಾಕ್ ತಂತ್ರ ಈಗಾಗಲೇ ವಿಫಲವಾಗಿದೆ. ಇದಾದ ಬಳಿಕ ಸುರಂಗದ ಮೂಲಕ ಪ್ರವೇಶಿಸುವ ಉಗ್ರರ ತಂತ್ರವನ್ನು ಭಾರತ ಬಯಲು ಮಾಡಿದೆ. ಮುಂಬೈ ದಾಳಿಯ ನಂತರ ನೌಕಾ ಸೇನೆ ಸಮುದ್ರದಲ್ಲಿ ಹದ್ದಿನ ಕಣ್ಣಿಟ್ಟಿದ್ದರಿಂದ ಬೋಟ್ ಮೂಲಕ ಭಾರತ ಪ್ರವೇಶಿಸವುದು ಅಷ್ಟು ಸುಲಭವಲ್ಲ ಎನ್ನುವುದು ಉಗ್ರರಿಗೆ ಗೊತ್ತಾಗಿದೆ. ಹೀಗಾಗಿ ಈಗ ನೀರಿನ ಅಡಿಯಲ್ಲಿ ಈಜಿಕೊಂಡು ಭಾರತ ಪ್ರವೇಶಿಸಲು ಈಗ ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ.

    ನೌಕಾ ಸೇನೆಯ ಮುಖ್ಯಸ್ಥ ಅಡ್ಮಿರಲ್ ಕರಂ ಬೀರ್ ಸಿಂಗ್ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೈಷ್ ಸಂಘಟನೆಯಲ್ಲಿ ಅಂಡರ್ ವಾಟರ್ ವಿಭಾಗವಿದೆ. ಈ ಸಂಘಟನೆ ನೀರಿನ ಮೂಲಕ ಸಾಗಿ ಭಾರತಕ್ಕೆ ಹೇಗೆ ನುಸುಳಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದೆ. ಆದರೆ ಭಾರತಕ್ಕೆ ಏನು ಆಗದಂತೆ ನಾವು ಭರವಸೆ ನೀಡುತ್ತೇವೆ. ನಾವು ಯಾವಾಗಲೂ ಹೈ ಅಲರ್ಟ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ವಾರ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಮಾತನಾಡಿ, ಶತ್ರುಗಳ ಚಲನೆ ಇರಲಿ ಅಥವಾ ಇಲ್ಲದಿರಲಿ ವಾಯುಸೇನೆ ಯಾವಾಗಲೂ ಗಡಿಯಲ್ಲಿ ಎಚ್ಚರದಲ್ಲಿ ಇರುತ್ತದೆ. ನಾಗರಿಕ ವಿಮಾನಗಳು ರೇಖೆಯನ್ನು ದಾಟಿದರೂ ಸಹ ನಾವು ನಿಯಂತ್ರಣ ಸಾಧಿಸುತ್ತೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.

    2019ರ ಪುಲ್ವಾಮಾ ದಾಳಿ ಬಳಿಕ ಸರ್ಕಾರ ಪ್ರತೀಕಾರ ತೀರಿಸಲು ಮೂರು ವಿಭಾಗಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಬಿಪಿನ್ ರಾವತ್ ಭೂಸೇನೆ ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿದೆ. ಅಗತ್ಯ ಬಿದ್ದರೆ ಗಡಿ ದಾಟಿ ಹೋರಾಟ ಮಾಡಲು ನಾವು ಪೂರ್ಣವಾಗಿ ತಯಾರಿದ್ದೇವೆ ಎಂಬುದಾಗಿ ಭರವಸೆ ನೀಡಿದ್ದ ವಿಚಾರವನ್ನು ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದರು.

    ಪುಲ್ವಾಮಾ ದಾಳಿಯ ಬಳಿಕ ಯಾವ ರೀತಿ ಸಿದ್ಧಗೊಂಡಿದೆ ಎಂದು ಸರ್ಕಾರ ಸೇನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಬಿಪಿನ್ ರಾವತ್, 2016ರ ಉರಿ ಮೇಲಿನ ದಾಳಿಯ ಬಳಿ ಬಳಿಕ ಸಾಕಷ್ಟು ಮದ್ದುಗುಂಡುಗಳ ಸಂಗ್ರಹವನ್ನು ಮಾಡಿಕೊಂಡಿದ್ದೇವೆ. ಹೀಗಾಗಿ ಗಡಿಯನ್ನು ದಾಟಿಯೂ ಹೋರಾಟ ನಡೆಸಲು ಸೇನೆ ಪೂರ್ಣವಾಗಿ ತಯಾರಾಗಿದೆ ಎಂದು ಉತ್ತರಿಸಿದ್ದರು.

  • ಪ್ರಿಯಾಂಕಾಳನ್ನು ಸಮುದ್ರಕ್ಕೆ ತಳ್ಳಿದ ಪತಿ ನಿಕ್

    ಪ್ರಿಯಾಂಕಾಳನ್ನು ಸಮುದ್ರಕ್ಕೆ ತಳ್ಳಿದ ಪತಿ ನಿಕ್

    ವಾಷಿಂಗ್ಟನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಜುಲೈ 18 ರಂದು ತಮ್ಮ 37ನೇ ಹುಟ್ಟಹಬ್ಬವನ್ನು ಫ್ಲೋರಿಡಾದ ಮಿಯಾಮಿಯಲ್ಲಿ ಆಚರಿಸಿದ್ದರು. ಈ ವೇಳೆ ಅವರ ಪತಿ, ಗಾಯಕ ನಿಕ್ ಜೋನಸ್ ಅವರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್ ಆಗುತ್ತಿದೆ.

    ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಪತಿ, ತಾಯಿ, ಸಹೋದರಿ ಪರಿಣಿತಿ ಚೋಪ್ರಾ ಸೇರಿದಂತೆ ಹಲವು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಹುಟ್ಟುಹಬ್ಬದ ಫೋಟೋಗಳು ಒಂದೊಂದಾಗಿ ವೈರಲ್ ಆಗುತ್ತಿದ್ದು, ಈಗ ನಿಕ್ ತಮ್ಮ ಪತ್ನಿಯನ್ನು ಸಮುದ್ರಕ್ಕೆ ತಳ್ಳಿದ ಫೋಟೋ ಕೂಡ ವೈರಲ್ ಆಗುತ್ತಿದೆ.

    ನಿಕ್ ಜೋನಸ್ ತಮಾಷೆಗೆ ಎಂದು ತಮ್ಮ ಪತ್ನಿ ಪ್ರಿಯಾಂಕಾರನ್ನು ಸಮುದ್ರಕ್ಕೆ ತಳ್ಳಿದ್ದಾರೆ. ಜುಲೈ 18ರಂದು ಪ್ರಿಯಾಂಕಾ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಮುಗಿದರೂ ಸಹ ಪ್ರಿಯಾಂಕ ತಮ್ಮ ಪತಿ, ಹಾಗೂ ಸ್ನೇಹಿತರ ಜೊತೆ ಮಿಯಾಮಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟರಿಗರು ಪ್ರಿಯಾಂಕಾ ಅವರ ಕಾಲೆಳೆದಿದ್ದರು.

    ಪ್ರಿಯಾಂಕಾ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡ ನೆಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಕಾರವಾರ: ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರ್‍ ಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್ (24), ಆನಂದ್ (24) ಮತ್ತು ಸುರೇಶ್ (24) ರಕ್ಷಣೆಗೊಳಗಾದವರಾಗಿದ್ದು, ಶಶಿಧರ್ ನಾಯ್ಕ, ಚಂದ್ರಶೇಖರ್ ಹರಿಕಾಂತ್ ರಕ್ಷಿಸಿದ್ದಾರೆ.

    ಬೆಂಗಳೂರಿನಿಂದ ಐದು ಜನ ಗೆಳೆಯರೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಅಲೆಗಳ ಅಬ್ಬರವಿದ್ದರೂ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗೆ ಮೂರು ಜನರು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಲೈಫ್ ಗಾರ್ಡ್ ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರು ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಚರಂಡಿಗೆ ಬಿದ್ದಿರುವ ಮಗ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ – ತಂದೆ

    ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಬುಧವಾರ ರಾತ್ರಿ ಮೂರು ವರ್ಷದ ಬಾಲಕ ತೆರೆದ ಚರಂಡಿಗೆ ಬಿದ್ದಿದ್ದು, ಈ ಬಾಲಕನನ್ನು ಹುಡುಕುವ ಕಾರ್ಯ ಗುರುವಾರ ಬೆಳಗ್ಗೆಯಿಂದ ಆರಂಭಗೊಂಡಿದೆ. ಆದರೆ ಬಾಲಕನ ಸುಳಿವು ಮಾತ್ರ ಸಿಕ್ಕಿಲ್ಲ.

    ಇದರಿಂದ ಮನನೊಂದ ಬಾಲಕ ದಿವ್ಯನಾಶ್ ಅವರ ಕುಟುಂಬ ಸಹನೆಯನ್ನು ಕಳೆದುಕೊಂಡಿದ್ದು, ಆತನ ತಂದೆ ನನ್ನ ಮಗ ಇವತ್ತು ಪತ್ತೆಯಾಗದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಬುಧವಾರ ರಾತ್ರಿ ಅಂಬೇಡ್ಕರ್ ನಗರದಲ್ಲಿ ಸುಮಾರು ರಾತ್ರಿ 10.24ರ ವೇಳೆಗೆ ಮನೆಯಲ್ಲಿ ಊಟ ಮುಗಿಸಿ ಹೊರಗೆ ಬಂದ ಬಾಲಕ ರಸ್ತೆಯ ಬದಿಯಲ್ಲಿರುವ ತೆರೆದ ಚರಂಡಿಗೆ ಬಿದ್ದಿದ್ದಾನೆ. ಬಾಲಕ ಚರಂಡಿಗೆ ಬೀಳುತ್ತಿರುವ ಭಯಾನಕ ದೃಶ್ಯ ಪಕ್ಕದಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಬಾಲಕನನ್ನು ಹುಡುಕಲು ಅಗ್ನಿ ಶಾಮಕ ದಳ, ಎನ್‍ಡಿಆರ್‍ಎಫ್ ಮತ್ತು ಬಿಎಂಸಿಯ ಹಲವಾರು ತಂಡಗಳು ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸುತ್ತೇವೆ. ಆದರೆ ಶೋಧ ಕಾರ್ಯ ಆರಂಭವಾಗಿ 20 ಗಂಟೆಗಳು ಕಳೆದರೂ ಬಾಲಕ ದಿವ್ಯನಾಶ್‍ನ ಸುಳಿವು ಇನ್ನೂ ಸಿಕ್ಕಿಲ್ಲ.

    ಈ ವಿಚಾರವಾಗಿ ಮಾತನಾಡಿರುವ ಬಾಲಕನ ತಂದೆ, “ಈ ಘಟನೆಗೆ ಬಿಎಂಸಿಯವರೇ ಕಾರಣ. ಅವರು ನನ್ನ ಮಗನನ್ನು ವಾಪಸ್ ತಂದುಕೊಡುತ್ತರಾ? ನನಗೆ ನನ್ನ ಮಗಬೇಕು. ಅವನು ಇವತ್ತು ಸಿಗದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    ಈ ಘಟನೆಯಿಂದ ಬಾಲಕನ ಕುಟುಂಬ ವಿಚಲಿತಗೊಂಡಿದ್ದು, ಬಾಲಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಬಿಎಂಸಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಘಟನೆ ನಡೆಯಲು ಅವರೇ ಕಾರಣ. ಈ ಚರಂಡಿಯ ವಿಚಾರವಾಗಿ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಲ ಸ್ಥಳೀಯರು ಮತ್ತು ಕುಟುಂಬದವರು ಸೇರಿ 30 ನಿಮಿಷ ರಸ್ತೆ ತಡೆ ನಡೆಸಿದರು. ಬಾಲಕ ಬಿದ್ದ ಸಮಯದಲ್ಲಿ ಚರಂಡಿಯಲ್ಲಿ ನೀರು ರಭಸದಿಂದ ಹರಿಯುತಿತ್ತು ಮತ್ತು 3 ಕಿ.ಮೀ ನಂತರ ಚರಂಡಿ ಕೊನೆಯಾಗುತ್ತದೆ. ನಂತರ ಅ ನೀರು ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ. ನೀರಿನ ರಭಸ ಜಾಸ್ತಿ ಇರುವ ಕಾರಣ ಬಾಲಕ ಸಮುದ್ರ ಸೇರಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆ – ತೀರದಲ್ಲಿರುವ ನಿವಾಸಿಗಳ ಸ್ಥಳಾಂತರ

    ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆ – ತೀರದಲ್ಲಿರುವ ನಿವಾಸಿಗಳ ಸ್ಥಳಾಂತರ

    ಬೆಂಗಳೂರು: ಕರಾವಳಿಯಲ್ಲಿ ಕೊನೆಗೂ ಮುಂಗಾರು ಬಿರುಸು ಪಡೆದಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಮಂಗಳೂರು ನಗರದ ರಸ್ತೆಗಳು ಹೊಳೆಯಂತೆ ತುಂಬಿಕೊಂಡಿವೆ. ಇತ್ತ ಕಡಲ್ಕೊರೆತವೂ ಹೆಚ್ಚಾಗಿದ್ದು, ತೀರದಲ್ಲಿರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

    40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದ ಅಲೆಗಳು ನಾಲ್ಕು ಮೀಟರ್ ಎತ್ತರಕ್ಕೆ ತೀರಕ್ಕೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಎರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು 24 ಗಂಟೆಯಲ್ಲಿ 122 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕುಂದಾಪುರದಲ್ಲಿ 124 ಮಿಲಿ ಮೀಟರ್, ಕಾರ್ಕಳದಲ್ಲಿ 122 ಮಿಲಿ ಮೀಟರ್, ಉಡುಪಿಯಲ್ಲಿ 120 ಮಿಲಿ ಮೀಟರ್ ಮಳೆ ಸುರಿದಿದೆ.

    ಅಲ್ಲದೆ ಕೊಡಗಿನ ವಿರಾಜಪೇಟೆ ತಾಲೂಕಿನ ಶ್ರೀಮಂಗಲ, ಕುಟ್ಟ ಸುತ್ತಮುತ್ತ ಜೋರು ಮಳೆ ಆಗಿದೆ. ಆದರೆ ಹಾರಂಗಿ ಡ್ಯಾಂನಲ್ಲಿ ನೀರೇ ಇಲ್ಲ. ಇತ್ತ ಬರದ ನಾಡು ರಾಯಚೂರಿನಲ್ಲಿ ಧಾರಾಕಾರ ಮಳೆ ಆಗಿದೆ.