Tag: sea

  • ಕೋಳ ಸಮೇತ ಕೇರಳ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆ

    ಕೋಳ ಸಮೇತ ಕೇರಳ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆ

    ಉಡುಪಿ: ಕೇರಳ ರಾಜ್ಯದ ಕಾಸರಗೋಡಿನ ಪೋಕ್ಸೋ ಕಾಯ್ದೆಯಡಿಯ ಬಂದಿತ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆಯಾಗಿದೆ.

    ಕೇರಳ ರಾಜ್ಯದ ಕೂಡ್ಲು ಕಾಳ್ಯಾಂಗಾಡ್‍ನ ಮಹೇಶ್ (28) ಪೋಕ್ಸೋ ಕೇಸಿನ ಆರೋಪಿ. ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡಿದ್ದ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಮಹಜರಿನ ವೇಳೆ ಆತ ಕೇರಳದಲ್ಲಿ ಸಮುದ್ರಕ್ಕೆ ಹಾರಿದ್ದ. ಜುಲೈ 22ರಂದು ಈ ಘಟನೆ ನಡೆದಿದ್ದು, ಇಂದು ಮೃತದೇಹ ಪತ್ತೆಯಾಗಿದೆ.

    ಕೇರಳದಿಂದ ತೆಲಿಕೊಂಡು ಬಂದು ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಶವದ ಬಟ್ಟೆ, ಕೈಕೋಳ ಗಮನಿಸಿ ಪೊಲೀಸರು ವ್ಯಕ್ತಿಯ ಚಹರೆ ಪತ್ತೆ ಮಾಡಿದ್ದಾರೆ. ಈ ಸಂಬಂಧ ಕೋಟ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

  • 50 ಕೆ.ಜಿ ತೂಕದ ಅಪರೂಪದ ಆಕಳ ಮೂಗಿನ ತೊರ್ಕೆ ಮೀನು ಪತ್ತೆ

    50 ಕೆ.ಜಿ ತೂಕದ ಅಪರೂಪದ ಆಕಳ ಮೂಗಿನ ತೊರ್ಕೆ ಮೀನು ಪತ್ತೆ

    ಉತ್ತರ ಕನ್ನಡ: ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಸಮೀಪದ ಲೇಡಿ ಬೀಚ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಬಲೆಗೆ ಬರೋಬ್ಬರಿ ಅರ್ಧ ಕ್ವಿಂಟಾಲ್ ತೂಕದ ಆಕಳ ಮೂಗಿನ ತೊರ್ಕೆ ಮೀನು ಬಿದ್ದಿದೆ.

    ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ ಕಾರಣವಾಗಿದೆ. ಇದನ್ನು ಉದ್ದ ತಲೆಯ ಹಕ್ಕಿ ತೊರ್ಕೆ ಅಥವಾ ಆಕಳ ಮೂಗಿನ ತೊರ್ಕೆ ಎಂದು ಕರೆಯುವ ಈ ಮೀನು ಶಾರ್ಕ್ ಜಾತಿಗೆ ಸೇರಿದೆ.

    ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನು ಎರಡು ಮೀಟರ್ ವರೆಗೂ ಬೆಳೆಯುತ್ತದೆ. ಇದರ ಬಾಲ ಉದ್ದವಾಗಿ ಎರಡು ಮುಳ್ಳುಗಳನ್ನು ಹೊಂದಿರುತ್ತದೆ. ಗರಿಷ್ಠ 16 ವರ್ಷಗಳ ಕಾಲ ಬದುಕುವ ಈ ಮೀನು ಅಳವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಒಂದಾಗಿದೆ.

  • ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    – ಸಾರ್ವಜನಿಕರಿಂದ ಮೆಚ್ಚುಗೆ, ಅಧಿಕಾರಿಗಳಿಂದ 3 ಲಕ್ಷ ದಂಡ

    ಕ್ವೀನ್ಸ್‌ಲ್ಯಾಂಡ್: ಬಲೆಗೆ ಸಿಕ್ಕ ಮರಿ ತಿಮಿಂಗಿಲವನ್ನು ಬದುಕಿಸಲು ವ್ಯಕ್ತಿಯೋರ್ವ ಆಳದ ಸಮುದ್ರಕ್ಕೆ ಧುಮುಕಿ ದಿಟ್ಟತನ ಮೆರೆದಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸಮುದ್ರದಲ್ಲಿ ನಡೆದಿದೆ.

    ಈ ಸಹಾಯ ಮಾಡಿದ ವ್ಯಕ್ತಿಯನ್ನು ಜಾಂಗೊ ಎಂದು ಗುರುತಿಸಲಾಗಿದೆ. ಒಬ್ಬನೇ ಬೋಟಿನಲ್ಲಿ ಹೋಗಿ ತನ್ನ ಜೀವವನ್ನು ಲೆಕ್ಕಿಸದೆ ತಿಮಿಂಗಿಲಕ್ಕಾಗಿ ಸಮುದ್ರಕ್ಕೆ ಹಾರಿದ ಜಾಂಗೊ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಾಂಗೊಗೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡವನ್ನು ವಿಧಿಸಿದ್ದಾರೆ.

    ಜಾಂಗೊ ಮಾಡಿದ ಈ ಸಹಾಸವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ ಹಂಪ್‍ಬ್ಯಾಕ್ ಜಾತಿಗೆ ಸೇರಿದ ಮರಿ ತಿಮಿಂಗಲವೊಂದು ಸಮುದ್ಯದಲ್ಲಿ ಬಿಟ್ಟಿದ್ದ ಬಲೆಯೊಂದಕ್ಕೆ ಸಿಲುಕಿ ಹೊರಗೆ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ಕಂಡ ಜಾಂಗೊ ಒಂದು ಚಿಕ್ಕ ಬೋಟಿನಲ್ಲಿ ಹೋಗಿ ಏಕಾಏಕಿ ಸಮುದ್ರಕ್ಕೆ ಧುಮುಕಿ ಸುಮಾರು 5 ನಿಮಿಷಗಳ ಕಾಲ ಈಜಿ ತಿಮಿಂಗಿಲವನ್ನು ಬಲೆಯಿಂದ ಬಿಡಿಸಿ ವಾಪಸ್ ಬಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಾಂಗೊ, ನಮ್ಮ ಪರಿಸರದಲ್ಲಿ ಇರುವ ಪ್ರತಿಯೊಂದು ಜೀವರಾಶಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನನ್ನ ಜಾಗದಲ್ಲಿ ಯಾರೇ ಇದ್ದರೂ ತಿಮಿಂಗಿಲವನ್ನು ಆ ಪರಿಸ್ಥಿತಿಯಲ್ಲಿ ನೋಡಿದರೆ ನಾನು ಮಾಡಿದ ಕೆಲಸವನ್ನೇ ಮಾಡುತ್ತಿದ್ದರು. ಜೊತೆಗೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಳ್ಳೆ ಕೆಲಸ ಮಾಡಿದರೂ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಸಚಿವ ಮಾತನಾಡಿ, ಈ ರೀತಿಯ ಘಟನೆ ನಡೆದಾಗ ಅದನ್ನು ಮೀನುಗಾರಿಕೆ ಇಲಾಖೆಗೆ ತಿಳಿಸಬೇಕು. ಅದರಲ್ಲಿ ಪರಿಣಿತಿ ಪಡೆದವರು ಹೋಗಿ ರಕ್ಷಿಸುತ್ತಾರೆ. ಅದನ್ನು ಬಿಟ್ಟು ಈ ರೀತಿ ಜನರು ಸಹಾಸಕ್ಕೆ ಕೈ ಹಾಕಬಾರದು. ಇದರಿಂದ ಅವರ ಜೀವಕ್ಕೆ ಅಪಾಯವಿರುತ್ತದೆ. ಆದ್ದರಿಂದ ನಿಯಮವನ್ನು ಉಲ್ಲಂಘನೆ ಮಾಡಿದ ಜಾಂಗೊಗೆ 3 ಲಕ್ಷ ದಂಡವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಜಾಂಗೊ ಮಾಡಿದ ಕೆಲಸಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಅವರ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಜಾಂಗೊಗೆ ವಿಧಿಸಿರುವ ದಂಡವನ್ನು ಜನರು ಭರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಗೋ ಫಂಡ್‍ಮಿ ಎಂಬ ಸಂಸ್ಥೆ ಜಾಂಗೊಗೆ 3 ಲಕ್ಷ ರೂ. ಅನ್ನು ಬಹುಮಾನವಾಗಿ ನೀಡಿದೆ.

  • ಅಂಫಾನ್ ಚಂಡಮಾರುತ – ಭಾರಿ ಮಳೆ, ಬಿರುಗಾಳಿಗೆ ಒಡಿಶಾ, ಬಂಗಾಳ ತತ್ತರ

    ಅಂಫಾನ್ ಚಂಡಮಾರುತ – ಭಾರಿ ಮಳೆ, ಬಿರುಗಾಳಿಗೆ ಒಡಿಶಾ, ಬಂಗಾಳ ತತ್ತರ

    ನವದೆಹಲಿ: ಬಂಗಾಳ ಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಅಂಫಾನ್ ಚಂಡಮಾರುತವು ಕಡಲ ತೀರವನ್ನು ಅಪ್ಪಳಿಸಲು 150 ಕಿಮೀ ವೇಗದಲ್ಲಿ ಲಗ್ಗೆ ಇಡುತ್ತಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಭಾರೀ ಮಳೆ, ಬಿರುಗಾಳಿ ಆರ್ಭಟ ಜೋರಾಗಿದ್ದು, ಇಂದು ಪಶ್ಚಿಮ ಬಂಗಾಳದ ಡೀಘಾ ಬಳಿ ಚಂಡಮಾರುತ ಕಾಲಿಡುವ ಸಾಧ್ಯತೆ ಇದ್ದು, ಒಡಿಶಾದ ಭದ್ರಾಕ್ ಪ್ರದೇಶದಲ್ಲಿ ಬುಧವಾರ ಗುಡುಗು ಸರಿತ ಭಾರಿ ಮಳೆ ಆಗಲಿದ್ದು, ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

    ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4 ಗಂಟೆಯಿಂದಲೇ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಸಮುದ್ರ ತೀರ ಪ್ರದೇಶದಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 45 ತಂಡಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಿಯೋಜನೆ ಮಾಡಲಾಗಿದೆ.

    ಪಶ್ಚಿಮ ಬಂಗಾಳದಲ್ಲಿ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಆದರೆ ಕೊರೋನಾ ವೈರಸ್ ಭೀತಿ ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟವಾಗಿದ್ದು, ದೇಶದ ವಿವಿಧೆಡೆಯಿಂದ ವಾಪಸ್ಸಾದ ವಲಸೆ ಕಾರ್ಮಿಕರನ್ನು ಪ್ರವಾಹ ಕೇಂದ್ರಗಳಲ್ಲೇ ಕ್ವಾರಂಟೈನ್‍ಗೆ ಮಾಡಲಾಗಿದೆ. ಸದ್ಯ ಚಂಡಮಾರುತ ಬಾಧಿತ ಪ್ರದೇಶಗಳಲ್ಲಿನ ಜನರನ್ನು ಶಾಲೆ, ಹಾಸ್ಟೆಲ್ ಮತ್ತಿತರ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

    ಅಂಫಾನ್ ಚಂಡಮಾರುತದ ಬಿರುಗಾಳಿಯ ವೇಗವು 155-165 ಆಗಿದ್ದು ಭಾರಿ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಅಪಾಯವಿದೆ. ಕೆಲ ಕರಾವಳಿ ಪ್ರದೇಶಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ನಿರ್ಮಾಣವಾಗುತ್ತಿವೆ. ಕೆಲ ಮಟ್ಟದ ಪ್ರದೇಶಗಳಿಗೆ ಸಮುದ್ರ ನೀರು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ಮತ್ಸ್ಯ ಸಂಪದ ಯೋಜನೆ ಪ್ರಕಟ – ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್

    ಮತ್ಸ್ಯ ಸಂಪದ ಯೋಜನೆ ಪ್ರಕಟ – ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್

    ನವದೆಹಲಿ: ಮೊದಲ ದಿನ ಉದ್ಯಮಗಳಿಗೆ, ಎರಡನೇ ದಿನ ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇಂದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳನ್ನು ಮೇಲಕ್ಕೆ ಎತ್ತಲು ವಿಶೇಷ ಪ್ಯಾಕೇಜ್ ಪ್ರಕಟಿಸಿದೆ.

    ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಒಟ್ಟು 18,700 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯ ಅಡಿ ಒಟ್ಟು 6,400 ರೂ. ಹಣವನ್ನು ಪಾವತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

    ಮುಖ್ಯಾಂಶಗಳು:
    ಲಾಕ್‍ಡೌನ್ ಸಮಯದಲ್ಲಿ ಹಾಲಿನ ಬೇಡಿಕೆ ಶೇ20-25ರಷ್ಟು ಇಳಿಕೆಯಾಗಿದೆ. ದೇಶದ ಸಹಕಾರಿ ಸಂಘಗಳಲ್ಲಿ ಪ್ರತಿದಿನ 560 ಲಕ್ಷ ಲೀಟರ್ ಹಾಲಿನ ಉತ್ಪಾದನೆಯಾಗಿದ್ದರೆ 360 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ.

    ಮೀನುಗಾರರಿಗೆ ನೆರವು ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಆರಂಭಿಸಲಾಗುವುದು. ಈ ಯೋಜನೆಗೆ 20 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ.

    ಸಮುದ್ರ, ದೇಶದ ಒಳಗಿನ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಗೆ 11 ಸಾವಿರ ಕೋಟಿ ರೂ. ಪ್ಯಾಕೇಜ್. ಕೋಲ್ಡ್ ಚೈನ್, ಮಾರುಕಟ್ಟೆ, ಮೀನುಗಾರಿಕಾ ಬಂದರುಗಳಿಗೆ ಒಟ್ಟು 9 ಸಾವಿರ ಕೋಟಿ ರೂ. ಅನುದಾನ.

    ಮೀನುಗಾರಿಕೆಗೆ ನಿಷೇಧ ಹೇರಿದ ಸಮಯದಲ್ಲಿ ಮೀನುಗಾರರ ವೈಯಕ್ತಿಕ ಮತ್ತು ದೋಣಿಗಳಿಗೆ ವಿಮೆ. ಈ ಉತ್ತೇಜನ ಕ್ರಮಗಳಿಂದ ಮುಂದಿನ 5 ವರ್ಷದಲ್ಲಿ 70 ಲಕ್ಷ ಟನ್ ಗಳಿಗೆ ಮೀನು ಉತ್ಪಾದನೆ ಏರಿಕೆಯಾಗಲಿದೆ. ಒಟ್ಟು 55 ಲಕ್ಷ ಜನರಿಗೆ ಉದ್ಯೋಗ, 1 ಲಕ್ಷ ಕೋಟಿ ರೂ. ಮೌಲ್ಯ ರಫ್ತು ಆಗಲಿದೆ.

  • ಕೊರೊನಾ ಭೀತಿಗೆ ಡಿಸಿ ಪರವಾನಿಗೆ ಕೊಟ್ರೂ ಸಮುದ್ರಕ್ಕೆ ಇಳಿಯದ ಮೀನುಗಾರರು

    ಕೊರೊನಾ ಭೀತಿಗೆ ಡಿಸಿ ಪರವಾನಿಗೆ ಕೊಟ್ರೂ ಸಮುದ್ರಕ್ಕೆ ಇಳಿಯದ ಮೀನುಗಾರರು

    ಉಡುಪಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಇಷ್ಟು ದಿನ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ಇರಲಿಲ್ಲ. ಇದೀಗ ವಿನಾಯಿತಿ ಕೊಟ್ಟರೂ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿಲ್ಲ. ಸಾವಿಗೆ ಹೆದರದ ಕಡಲ ಮಕ್ಕಳು ಕಾಣದ ಕೊರೊನಾಗೆ ಭಯ ಬಿದ್ದಿದ್ದಾರೆ.

    ನೂರು ಆಳಸಮುದ್ರ ಬೋಟುಗಳಿಗೆ ಉಡುಪಿ ಜಿಲ್ಲಾಡಳಿತ ಕಸುಬು ನಡೆಸಲು ಅವಕಾಶ ಕೊಟ್ಟಿದೆ. ಆದೇಶ ಕೊಟ್ಟರೂ ಕೊರೊನಾ ವೈರಸ್ ಭೀತಿಗೆ ಮೀನುಗಾರ ಕಾರ್ಮಿಕರು ಭಯಗೊಂಡಿದ್ದಾರೆ. ಮಲ್ಪೆಯಲ್ಲೇ 1,500 ಆಳಸಮುದ್ರ ಬೋಟುಗಳು ಲಂಗರು ಹಾಕಿದೆ. ಸಮುದ್ರ ಮುಖೇನ ಮಹಾರಾಷ್ಟ್ರ, ಗುಜರಾತ್, ಗೋವಾ ಹೋಗಲು ಕಾರ್ಮಿಕರು ನಿರಾಕರಿಸುತ್ತಿದ್ದಾರೆ.

    ಉಡುಪಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳು ಲಂಗರು ಹಾಕಿ ಬರೋಬ್ಬರಿ 50 ದಿನ ಕಳೆದಿದೆ. ಇದರಿಂದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳದ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ನಾಡ ದೋಣಿ ಸಾಂಪ್ರದಾಯಿಕ ಮೀನುಗಾರಿಕೆ ಆರಂಭವಾದ ಸಂದರ್ಭದಲ್ಲಿ ಆಳಸಮುದ್ರ ಬೋಟಿಗೂ ಅವಕಾಶ ಕೊಡಿ ಎಂದು ಮೀನುಗಾರರು ಒತ್ತಾಯ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಆರಂಭದಲ್ಲಿ 40 ಬೋಟುಗಳಿಗೆ ಅವಕಾಶ ಕೊಟ್ಟಿತ್ತು. ಆ ನಂತರ ಮೀನುಗಾರರ ಒತ್ತಡ ಹೆಚ್ಚಾದ ಮೇಲೆ 100 ಬೋಟುಗಳಿಗೆ ಉಡುಪಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ.

    ಲಿಖಿತ ಆದೇಶ ಕೊಟ್ಟು ಮೂರು ದಿನ ಕಳೆದರೂ ಮೀನುಗಾರರು ಮಾತ್ರ ಕಸುಬು ಆರಂಭಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕೊರೊನಾ ವೈರಸ್‍ಗೆ ಕಾರ್ಮಿಕರು ಬೆಚ್ಚಿ ಬಿದ್ದಿದ್ದು, ಮೀನುಗಾರಿಕೆಗೆ ತೆರಳಿದ ಸಂದರ್ಭ ಬೇರೆ ಬೇರೆ ರಾಜ್ಯದ ಮೀನುಗಾರರು ಸಂಪರ್ಕ ಮಾಡಬೇಕು, ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಮೀನುಗಾರರಲ್ಲಿ ಆತಂಕ ಆವರಿಸಿದೆ. ಹೀಗಾಗಿ ಬೋಟಿನ ಮಾಲೀಕರು ಮೀನುಗಾರಿಕೆಗೆ ಉತ್ಸುಕತೆ ತೋರಿದ್ದರೂ ಕಾರ್ಮಿಕರು ಬಂದರಿಗೆ ಬರುತ್ತಿಲ್ಲ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೀನುಗಾರ ಕಾರ್ಮಿಕ ಆನಂದ, ನಾನು ಆಂಧ್ರಪ್ರದೇಶದವನು. ಆದರೆ ನನ್ನ ಕುಟುಂಬ ಅಲ್ಲೇ ಇದೆ. ದಯಮಾಡಿ ನಮಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡಿ. ಕೆಲಸವಿಲ್ಲದೆ, ಖರ್ಚಿಗೆ ಕಾಸಿಲ್ಲದೆ ನಾವು ಇಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಆಳ ಸಮುದ್ರದ ಮೀನುಗಾರಿಕೆ ಆರಂಭಿಸಲು ಮೀನುಗಾರ ಸಂಘ ಸಿದ್ಧ ಇದೆ. ಜಿಲ್ಲಾಡಳಿತ ಹೊರಡಿಸಿರುವ ಆದೇಶ ಪ್ರತಿಯೂ ಅವರಿಗೆ ಸಿಕ್ಕಿದೆ. ಬೋಟ್ ಗೋವಾ, ಮಹಾರಾಷ್ಟ್ರ ಅಥವಾ ಗುಜರಾತ್ ಗಡಿಗೆ ಹೋದ ಸಂದರ್ಭದಲ್ಲಿ ಮತ್ತೆ ನಾಲ್ಕನೇ ಹಂತದ ಲಾಕ್‍ಡೌನ್ ವಿಸ್ತರಣೆ ಆದರೆ ನಮ್ಮ ಪರಿಸ್ಥಿತಿ ಏನು? ಆ ರಾಜ್ಯದವರು ನಮ್ಮನ್ನು ಒಳಗೆ ಬಿಟ್ಟುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಇನ್ನೆರಡು ದಿನ ಕಾದು ನೋಡುವ ತಂತ್ರಕ್ಕೆ ಮಲ್ಪೆ ಮೀನುಗಾರಿಕಾ ಸಂಘ ಮುಂದಾಗಿದೆ. ಸಾವಿನ ಜೊತೆ ಸೆಣಸಾಡುತ್ತಿದ್ದ ಮೀನುಗಾರರು ಇದೀಗ ಕಣ್ಣಿಗೆ ಕಾಣದ ಕೊರೊನಾ ವೈರಸ್‍ಗೆ ಭೀತಿ ಪಟ್ಟು ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಹಾಯಾಗಿ ವಿಹರಿಸುತ್ತಿರೋ ಪ್ರಾಣಿ, ಪಕ್ಷಿ, ಜಲಚರಗಳು – ವಿಡಿಯೋ ನೋಡಿ

    ಹಾಯಾಗಿ ವಿಹರಿಸುತ್ತಿರೋ ಪ್ರಾಣಿ, ಪಕ್ಷಿ, ಜಲಚರಗಳು – ವಿಡಿಯೋ ನೋಡಿ

    ಕಾರವಾರ: ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇದ್ದಾರೆ. ಆದರೆ ಪರಿಸರ ಹಾನಿಯಿಂದ ಎಲ್ಲೋ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮತ್ತು ಜಲಚರಗಳು ಈಗ ಹಾಯಾಗಿ ಎಲ್ಲೆಡೆ ಓಡಾಡುತ್ತಿವೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ, ಹಾವು, ಪಕ್ಷಿಗಳು, ಜಲಚರಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದಲ್ಲಿ ಮಂಜುನಾಥ್ ತ್ರ್ಯಂಬಕ ಹೆಗಡೆಯವರ ತೋಟದಲ್ಲಿ 11 ಅಡಿ ಉದ್ದದ ಕಾಳಿಂಗಸರ್ಪ ಕಾಣಿಸಿಕೊಂಡಿದೆ. ತಕ್ಷಣ ಶಿರಸಿಯ ಉರಗತಜ್ಞ ಮನು ಬಂದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.

    ಹಳಿಯಾಳ ಮತ್ತು ಯಲ್ಲಾಪುರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಡುವ ಮೂಲಕ ಜನರ ಕ್ಯಾಮರಾದಲ್ಲಿ ಸೆರೆಯಾಗಿದ್ದಾವೆ. ಇತ್ತ ಅಂಕೋಲದಲ್ಲಿ ನಗರಕ್ಕೆ ಬಾರದ ಕಾಡಿನಲ್ಲೇ ಹೆಚ್ಚು ಇರುವ ಹಾರ್ನ್ ಬಿಲ್ ಪಕ್ಷಿಗಳು ಸದ್ದಿಲ್ಲದ ನಗರ ಪ್ರವೇಶ ಮಾಡಿ ಮನೆಗಳ ಮೇಲೆ ವಿಹರಿಸುತ್ತಿವೆ.

    ಅರಬ್ಬಿ ಸಮುದ್ರದಲ್ಲೂ ಕೂಡ ಮೀನುಗಾರಿಕೆ ಬಂದ್ ಆಗಿದ್ದರಿಂದ ಬೃಹದಾಕಾರದ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿವೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕ್ಯಾಮರಾಕ್ಕೆ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯ ಸೆರೆಯಾಗಿದೆ.

  • ಕೊರೊನಾ ಅಲರ್ಟ್ ಇದ್ರೂ ಜನ ಕ್ಯಾರೇ ಅಂತಿಲ್ಲ- ಬೀಚ್ ಸ್ನಾನಕ್ಕೆ ಪ್ರವಾಸಿಗರ ದಂಡು

    ಕೊರೊನಾ ಅಲರ್ಟ್ ಇದ್ರೂ ಜನ ಕ್ಯಾರೇ ಅಂತಿಲ್ಲ- ಬೀಚ್ ಸ್ನಾನಕ್ಕೆ ಪ್ರವಾಸಿಗರ ದಂಡು

    ಉಡುಪಿ: ರಾಜ್ಯದಲ್ಲಿ ಕೊರೊನಾ ಹಾವಳಿ ಜಾಸ್ತಿಯಾಗಿದೆ. ಜನನಿಬಿಡ ಪ್ರದೇಶದಿಂದ, ಪ್ರವಾಸಿ ತಾಣಗಳಿಂದ ಜನ ದೂರ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪ್ರವಾಸಿಗರು ಇದಕ್ಕೆ ಕ್ಯಾರೇ ಅಂತಿಲ್ಲ.

    ಕೊರೊನಾ, ಗಿರೊನಾ ಅಂತ 24 ಗಂಟೆ ಮನೆಯೊಳಗೆ ಕೂರೊಕ್ಕಾಗುತ್ತಾ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಕೊರೊನಾ ಇರಲಿ ನಾವು ಕೇರ್ ಮಾಡಲ್ಲ, ಲೈಫ್ ಎಂಜಾಯ್ ಮಾಡೋ ಟೈಮಲ್ಲಿ ಮಾಡಬೇಕು ಎಂದು ಪ್ರವಾಸಿಗರು ಮಲ್ಪೆ ಬೀಚ್ ನತ್ತ ಬರುತ್ತಿದ್ದಾರೆ.

    ರಾಜ್ಯದಲ್ಲಿ ಉರಿ ಬಿಸಿಲು ಜಾಸ್ತಿ ಆಗಿರಬೇಕಾದರೆ ಮಲ್ಪೆ ಬೀಚಿಗೆ ಬಂದು ದಿನಪೂರ್ತಿ ನೀರಲ್ಲಿ ಬಿದ್ದು ಒದ್ದಾಡಬೇಕು ಎಂದು ಪ್ಲ್ಯಾನ್ ಮಾಡ್ಕೊಂಡು ಜನ ಉಡುಪಿಗೆ ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ, ಶಿವಮೊಗ್ಗದ ಪ್ರವಾಸಿಗರು ಉಡುಪಿಗೆ ಬಂದಿದ್ದಾರೆ. ಬಿಸಿಲ ಬೇಗೆಯನ್ನು ಕಳೆಯುವುದಕ್ಕೆ ನೂರಾರು ಪ್ರವಾಸಿಗರು ಮಲ್ಪೆ ಬೀಚಿಗೆ ಬರುತ್ತಿದ್ದು ಕೆಲ ಹೊತ್ತು ನೀರಿನಲ್ಲಿ ಇದ್ದು ದಾಹವನ್ನು ತಣಿಸಿಕೊಳ್ಳುತ್ತಿದ್ದಾರೆ.

    ಶಿವಮೊಗ್ಗ ಮೂಲದ ತೌಸಿಫ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೊರೊನಾಗೆ ನಾವು ಭಯಪಡಬಾರದು. ವೈರಸ್ ಮನುಷ್ಯನನ್ನು ನೋಡಿ ಅದು ಭಯ ಪಡಬೇಕು. ವೈರಸ್ ಇದೆ ಎಂದು ಮನೆಯಲ್ಲಿ ಕೂತರೆ 24 ಗಂಟೆ ಕೂರಬೇಕಾಗಬಹುದು ಎಂದು ಹೇಳಿದರು.

    ಮಲ್ಪೆ ಬೀಚ್ ಬಳಿಯ ಜ್ಯೂಸ್ ಅಂಗಡಿ ಮಾಲೀಕ ಉಪೇಂದ್ರ ಮಾತನಾಡಿ, ಮಾಮೂಲಿ ದಿನಗಳಲ್ಲಿ ನಮಗೆ 10 ಸಾವಿರ ರೂ. ವ್ಯಾಪಾರ ಆಗುತ್ತದೆ. ಕಳೆದ ಮೂರ್ನಾಲ್ಕು ದಿವಸಗಳಿಂದ ಒಂದರಿಂದ ಎರಡು ಸಾವಿರದಷ್ಟು ವ್ಯಾಪಾರವಾಗುತ್ತಿಲ್ಲ. ಅಂಗಡಿ ಮುಚ್ಚಿ ಮನೆಗೆ ಹೋಗುವ ಎಂದಿ ಎನಿಸುತ್ತಿದೆ. ಜಿಲ್ಲಾಡಳಿತ ಇವರಿಗೆ ಬಂದ್ ಮಾಡಬೇಕು ಎಂದು ಲಿಖಿತವಾಗಿ ನಮಗೆ ಏನೂ ಮಾಹಿತಿ ಕೊಟ್ಟಿಲ್ಲ ಎಂದರು.

    ಮಲ್ಪೆ ಬೀಚ್‍ನ ಅಮ್ಯೂಸ್ಮೆಂಟ್ ಪಾರ್ಕ್ ಗಳು ವಿವಿಧ ಗೇಮ್‍ಗಳು, ಬೀಚ್ ರೈಡಿಂಗ್, ಬೀಚ್ ಕ್ರಿಕೆಟ್, ಬೀಚ್ ಶೂಟಿಂಗ್ ಎಲ್ಲವೂ ಪ್ರವಾಸಿಗರಿಲ್ಲದೆ ಬಿಕೋ ಅನ್ನುತ್ತಿದೆ. ಆದರೆ ಸಮುದ್ರಕ್ಕೆ ಈಜಿ ಹೇಳುವವರಿಗೆ ನಾವು ತಡೆಯೊಡ್ಡಲು ಆಗುತ್ತಿಲ್ಲ. ಕಿ.ಮೀಗಟ್ಟಲೆ ಸಾಗರ ಆವರಿಸಿರುವುದರಿಂದ ಪ್ರವಾಸಿಗರು ಎಲ್ಲಾದರೂ ಹೋಗಿ ನೀರಿಗೆ ಇಳಿಯುತ್ತಿದ್ದಾರೆ ಎಂದು ಲೈಫ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದರು.

  • ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಹವಾಮಾನ ಮತ್ತು ಸಮುದ್ರದ ವಾತಾವರಣದಲ್ಲಿ ಬದಲಾವಣೆಯಿಂದಾಗಿ ಸಮುದ್ರದಲ್ಲಿ ಸೃಷ್ಟಿಯ ವೈಚಿತ್ರಗಳು ನಡೆಯುತ್ತಿದೆ. ಕಾರವಾರದ ಗೋವಾ ಗಡಿಗೆ ಅಂಟಿಕೊಂಡಿರುವ ಮಾಜಾಳಿ ಕಡಲ ಬಳಿ ಅಲೆಗಳಲ್ಲಿ ಮಿಂಚಿನ ಬೆಳಕು ಕಾಣತೊಡಗಿದೆ.

    ರಾತ್ರಿ ವೇಳೆ ಬೆಳಕು ಗೋಚರವಾಗುತ್ತಿದ್ದು, ಮಾಜಾಳಿಯಿಂದ ಕಪ್ಪು ಮರಳಿನ ಸಮುದ್ರ ಎಂದೇ ಪ್ರಸಿದ್ಧವಾಗಿರುವ ತಿಳಮಾತಿ ಕಡಲತೀರದವರೆಗೂ ಆವರಿಸಿದೆ. ಕಳೆದ ಒಂದು ವಾರದಿಂದ ಸಮುದ್ರದಲ್ಲಿ ಈ ಬೆಳವಣಿಗೆ ಕಾರಣವಾಗುತ್ತಿದೆ. ಈ ಬದಲಾವಣೆಯನ್ನು ಧಾರವಾಡ ವಿಶ್ವವಿದ್ಯಾನಿಲಯದ ಕಡಲ ಜೀವಶಾಸ್ತ್ರಜ್ಞ  ಶಿವಕುಮಾರ್ ಹರಗಿರವರು ಗುರುತಿಸಿದ್ದಾರೆ.

    ಅಲೆಗಳಲ್ಲಿ ಬೆಳಕು ಮೂಡುತ್ತಿರಲು ಕಾರಣವೇನು?
    ಸಮುದ್ರದಲ್ಲಿ ಮಲೀನದಿಂದಾಗಿ ನಾಕ್ಟುಲುಕ ಸೆಂಟನೆಲ್ಸ್ (noctiluca seintillans)ಎಂಬ ಪಾಚಿ ಹೇರಳವಾಗಿ ಬೆಳೆದಿದೆ. ಇದು ರಾತ್ರಿ ವೇಳೆ ಸಮುದ್ರದಲ್ಲಿ ಮಿಂಚಿನಂತೆ ಕಾಣುತಿದ್ದು, ಬೆಳಕನ್ನು ಹೊರಸೂಸುತ್ತಿದೆ. ತನ್ನಲ್ಲಿ ಬೆಳಕನ್ನು ಸೂಸುವ ಶಕ್ತಿ ಹೊಂದಿರುವ ಇದು ಸಮುದ್ರಕ್ಕೆ ಸೇರುವ ತ್ಯಾಜ್ಯಗಳ ಖನಿಜಾಂಶದಿಂದ ಹೆಚ್ಚು ಬೆಳೆದಿದೆ. ಈ ಹಿಂದೆ 2011ರಲ್ಲಿ ಮಂಗಳೂರಿನಲ್ಲಿ, 2017ರಲ್ಲಿ ಉಡುಪಿ, ಕಾರವಾರದ ಕಡಲತೀರದ ಬಳಿ ಹೇರಳವಾಗಿ ಕಾಣಿಸಿಕೊಂಡಿದ್ದವು. ಇವು ಹೆಚ್ಚಾದಾಗ ಸಮುದ್ರ ಹಸಿರಿನಂತೆ ಕಂಗೊಳಿಸುತ್ತವೆ.

    ಮೀನುಗಾರಿಕೆಗೂ ಬೀರಲಿದೆ ಇದರ ಪರಿಣಾಮ!
    ಜಿಲ್ಲೆಯ ಮೀನುಗಾರರು ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದಾರೆ. ಈ ಸಸ್ಯಗಳು ಬೆಳೆದಿದ್ದರಿಂದ ಮೀನುಗಾರಿಕೆ ಮೇಲೂ ಪರಿಣಾಮ ಬೀರುವ ಜೊತೆಗೆ ಮಾರಕವಾಗಿದ್ದು, ಪರಿಸರದ ಅಸಮತೋಲನಕ್ಕೆ ಸಾಕ್ಷಿಯಾಗಿದೆ ಎಂಬುದು ಸಂಶೋಧನೆ ನಿರತ ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ರವರ ಅಭಿಪ್ರಾಯವಾಗಿದೆ.

    ಈ ಪಾಚಿಗಳು ಬೆಳೆಯುವುದರಿಂದ ಮೀನುಗಳು ದೂರ ಹೋಗುತ್ತದೆ ಇದು ಮತ್ಸ್ಯ ಕ್ಷಾಮದ ಸೂಚನೆ. ಈ ಪಾಚಿ ಸಸ್ಯ ಆಕ್ಸಿಜನ್ ತೆಗೆದುಕೊಂಡು ಬೆಳಕನ್ನು ಹೊರಸೂಸುತ್ತದೆ. ದಕ್ಷಿಣ ಕರಾವಳಿಯಲ್ಲಿ ಹೆಚ್ಚು ಪತ್ತೆಯಾಗುತ್ತಿದೆ. ಆಹಾರ ಸಿಕ್ಕಾಗ ಅತಿಯಾಗಿ ಬೆಳೆಯುತ್ತದೆ. ತ್ಯಾಜ್ಯ ಹೆಚ್ಚು ಸಮುದ್ರ ಸೇರುವುದರಿಂದ ಇವು ಹೆಚ್ಚು ಬೆಳೆಯುತ್ತದೆ. ತ್ಯಾಜ್ಯದ ಖನಿಜಾಂಶ ಹಾಗೂ ಸೂರ್ಯನ ಬೆಳಕು ಇವುಗಳ ಆಹಾರ. ಪಶ್ಚಿಮ ಕರಾವಳಿಯಲ್ಲಿ ಆಗುತ್ತಿರುವ ಹೆಚ್ಚಿನ ಮಾಲಿನ್ಯ ಇವುಗಳ ಬೆಳವಣಿಗೆಗೆ ಕಾರಣವಾಗಿದೆ.

    ಸದ್ಯ ಕಾರವಾರದ ಸಮುದ್ರದಲ್ಲಿ ಈ ಪಾಚಿಗಳು ಎರಡು ಮೂರು ದಿನ ಉಳಿಯಬಹುದು. ಯಾಕೆಂದರೆ ಬೇಸಿಗೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಪಾಚಿ ಬೆಳೆಯುತ್ತಿದೆ. ಏಳು ದಿನ ಇವು ಬದುಕುತ್ತವೆ. ನಂತರ ಎರಡುಪಟ್ಟಾಗಿ ಬೆಳೆಯುತ್ತದೆ. ಇವುಗಳಲ್ಲಿ ರೆಡ್, ಗ್ರೀನ್ ಟೈಡ್ ಎಂಬ ಜಾತಿಯ ಪ್ರಭೇದ ಪಾಚಿಗಳಿವೆ. ಇವುಗಳು ಟಾಕ್ಸಿನ್ ಹೆಚ್ಚು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಇವುಗಳು ಉಪಯುಕ್ತವಾದರೆ ಹಲವು ಬಾರಿ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ಸಂಶೋಧಕರ ಮಾತು.

    ಮೀನುಗಾರರಲ್ಲಿ ಹುಟ್ಟಿದ ಭಯ?
    ಕಳೆದ ಹಲವು ದಿನದಿಂದ ಸಮುದ್ರದಲ್ಲಿ ಆಗುವ ಈ ಬೆಳವಣಿಗೆ ಮೀನುಗಾರರಲ್ಲಿ ಭಯ ಮೂಡಿಸಿದೆ. ಸ್ಥಳೀಯ ಮೀನುಗಾರರು ಹೇಳುವಂತೆ ಈ ರೀತಿ ಮಿಂಚುಗಳ ಬೆಳಕು ಬಂದರೆ ಸಮುದ್ರದಲ್ಲಿ ಮೀನುಗಳು ಬರುವುದಿಲ್ಲ ಎಂದಿದ್ದಾರೆ.

    ಸಂಶೋಧಕರು ಕೂಡ ಇದನ್ನು ಪುಷ್ಟಿಕರಿಸಿದ್ದು, ಸಮುದ್ರಕ್ಕೆ ಮಲೀನ ನೀರುಗಳು ಅತಿ ಹೆಚ್ಚು ಸೇರುತ್ತಿದೆ. ಇದರಿಂದಾಗಿ ಈ ಪಾಚಿಗಳು ಹೇರಳವಾಗಿ ಬೆಳೆಯಲು ಕಾರಣವಾಗಿದೆ. ಇದು ಸಮುದ್ರದ ವಾತಾವರಕ್ಕೆ ಪೂರಕವಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎನ್ನುತ್ತಾರೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯ ಕರಾವಳಿ ಭಾಗದ ಸಮುದ್ರ ಭಾಗದಲ್ಲಿ ನೈಸರ್ಗಿಕ ಬದಲಾವಣೆ ಹೆಚ್ಚಾಗುತ್ತಿದೆ.

  • ಸಮುದ್ರದಲ್ಲಿ ಸಿಕ್ತು ಅಪರೂಪದ ಕಾಯಿನ್ ಮೀನು!

    ಸಮುದ್ರದಲ್ಲಿ ಸಿಕ್ತು ಅಪರೂಪದ ಕಾಯಿನ್ ಮೀನು!

    ಕಾರವಾರ: ಸಮುದ್ರದ ತಳದಲ್ಲಿ ವಾಸ ಮಾಡುವ ಅಪರೂಪದ ಜಲಚರ ಕಾಯಿನ್ ಮೀನು ಅಥವಾ ಸ್ಯಾಂಡ್ ಡಾಲರ್ ಮೀನು ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರ ಆಕರ್ಷಣೆಯ ಜೊತೆಗೆ ಸಮುದ್ರ ಅಧ್ಯಯನಕಾರರ ಕುತೂಹಲಕ್ಕೆ ಕಾರಣವಾಗಿದೆ.

    ಕಾರವಾರ ನಗರದ ರವೀಂದ್ರನಾಥ ಕಡಲ ತೀರದ ಮರಳಿನಲ್ಲಿ ಹತ್ತಾರು ಸಂಖ್ಯೆಯಲ್ಲಿ ಈ ಅಪರೂಪದ ಫಿಶ್ ಕಂಡುಬಂದಿದೆ. ನಕ್ಷತ್ರದ ಮೀನಿನ ಪ್ರಬೇಧಕ್ಕೆ ಸೇರಿದ ಇವುಗಳಿಗೆ ವೈಜ್ಞಾನಿಕವಾಗಿ ಕ್ಲಾಯಪೇಸ್ಟರ್ ರಾರಿಸ್ಪಯನಸ್ ಎಂದು ಕರೆಯಲಾಗುತ್ತದೆ. ಆಭರಣದಲ್ಲಿ ಅಳವಡಿಸುವ ಡಾಲರ್ ಮಾದರಿಯಲ್ಲಿಯೇ ಇವುಗಳ ದೇಹ ರಚನೆಯಿದೆ. ಇವು ಕಡಲಿನ ತಳದಲ್ಲಿರುವ 14 ರಿಂದ 15 ಮೀಟರ್ ಆಳದ ಮರಳುನಲ್ಲಿ ವಾಸ ಮಾಡುತ್ತವೆ. ಹಾಗಾಗಿ ಇವುಗಳು ಸ್ಯಾಂಡ್ ಡಾಲರ್ ಎಂದು ಪರಿಚಿತವಾಗಿದೆ.

    ಸಮುದ್ರ ಸಂಶೋಧಕರು ಹೇಳುವುದು ಏನು?:
    ಕರ್ನಾಟಕ ವಿಶ್ವ ವಿದ್ಯಾನಿಲಯದ ಮರಿನ್ ಬಯಾಲಜಿ ಪ್ರೊಪೇಸರ್ ಡಾ. ಶಿವಕುಮಾರ್ ಹರಿಗಿಯವರು ಹೇಳುವಂತೆ ಕಾರವಾರದ ಕಡಲತೀರದಲ್ಲಿ ಇವುಗಳನ್ನು ಕಂಡಿರಲಿಲ್ಲ. ಅರಬ್ಬಿ ಸಮುದ್ರದಲ್ಲಿ ದೇಶದ ಕರಾವಳಿ ಉದ್ದಕ್ಕೂ ಇವು ವಾಸಿಸುತ್ತವೆ. ಇದನ್ನೂ ಓದಿ: ಮೀನುಗಾರರ ಬಲೆಗೆ ಬಿತ್ತು ಚಪ್ಪಲಿ ಮೀನು – ಅಪರೂಪದ ಈ ಮೀನಿನ ವಿಶೇಷವೇನು ಗೊತ್ತಾ?

    ರಾಜ್ಯದ ಕರಾವಳಿಯಲ್ಲಿ ಮೊದಲ ಬಾರಿಗೆ 2006ರಲ್ಲಿ ಭಟ್ಕಳ ಮತ್ತು ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದವು. ಉಳಿದಂತೆ ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್, ಸ್ಪೇನ್ ಪೋರ್ಚುಗಲ್ ಮುಂತಾದ ದೇಶದ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ವಿವರಿಸಿದರು. ಇವು ಪರಿಸರದ ಬದಲಾವಣೆ ಯಿಂದಲೂ ಅಥವಾ ಮೀನುಗಾರರು ಬೀಸಿದ ಬಲೆಗೆ ಸಿಕ್ಕಿರಬಹುದು ಹಾಗಾಗಿ ಕಾರವಾರ ಕಡಲತೀರದಲ್ಲಿ ಕಾಣಿಸಿಕೊಂಡಿದೆ ಎನ್ನುತ್ತಾರೆ.

    ವಿಶೇಷವೇನು?:
    ಕರ್ನಾಟಕ ಕರಾವಳಿ ಭಾಗದಲ್ಲಿ ಅಪರೂಪದ್ದಾಗಿದೆ. ಇದರ ವಾಸ ಸಮುದ್ರದಾಳದ ಮರಳುಗಳು. ಇವುಗಳ ಮೇಲ್ಮೈ ಸ್ಪಲ್ಪ ಗಟ್ಟಿಯಾಗಿದ್ದು ದೇಹದ ರಕ್ಷಣೆಗಾಗಿ ಸುತ್ತಲೂ ಚಿಕ್ಕ ಮುಳ್ಳುಗಳಿರುತ್ತವೆ. ಮರಳಿನ ಬಣ್ಣವನ್ನೇ ಇವುಗಳು ಹೊಂದಿರುವುದರಿಂದ ಸುಲಭವಾಗಿ ಗುರುತಿಸುವುದು ಕಷ್ಟ .ಆದರೆ ಬಹುತೇಕ ಎಲ್ಲಾ ಮೀನುಗಳು ಮತ್ತು ದೊಡ್ಡ ಜಾತಿಯ ಸಮುದ್ರ ಏಡಿಗಳು ಇವುಗಳನ್ನು ಭೇಟೆಯಾಡಿ ತಿನ್ನುತ್ತವೆ. ಸ್ಯಾಂಡ್ ಡಾಲರ್ ಗಳಿಗೆ ಲಾರ್ವ, ಸೆಟ್ಟೆ ಮೀನುನ ಸಣ್ಣ ಮರಿಗಳು, ಆಲ್ಗೆ ಮುಂತಾದವೇ ಇವುಗಳ ಆಹಾರವಾಗಿದೆ. ಇದನ್ನೂ ಓದಿ: ನೇತ್ರಾಣಿ ಸಮುದ್ರ ಭಾಗದಲ್ಲಿ ಅಪರೂಪದ ಸ್ಪ್ಯಾನರ್ ಕ್ರಾಬ್ ಪತ್ತೆ

    2 ರೂ. ಕಾಯಿನ್‍ನಂತಿರುವ ಈ ಮೀನುಗಳನ್ನು ನಾಣ್ಯದ ಮೀನು, ಡಾಲರ್ ಮೀನು ಎಂದು ಸ್ಥಳೀಯರು ಕರೆಯುತ್ತಾರೆ. ಸ್ಟಾರ್ ಫಿಶ್ ಪ್ರಬೇದದ ಮೀನು ಇದಾಗಿದ್ದು ಆಹಾರದಲ್ಲಿ ಬಳಕೆ ಇಲ್ಲ. ವಿಶ್ವದಲ್ಲಿ 600 ಜಾತಿಯ ಪ್ರಬೇಧದ ಡಾಲರ್ ಮೀನುಗಳಿದ್ದು ಭಾರತದಲ್ಲಿ ಗುಜರಾತ್, ಕೇರಳದಲ್ಲಿ ಮೂರು ಪ್ರಬೇಧಗಳು ಮಾತ್ರ ಕಾಣಸಿಗುತ್ತವೆ.

    ಕಡಲಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಈಗ ಕರ್ನಾಟಕದ ಕರಾವಳಿ ಭಾಗದಲ್ಲಿ ಸಹ ಗೋಚರವಾಗುತಿದ್ದು, ಅಪರೂಪದ ಮೀನುಗಳಲ್ಲಿ ಒಂದಾಗಿದೆ.