Tag: sea

  • ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಸಾಗರವನ್ನೇ ಹಿಂದೆ ಸರಿಸಿದ ಕಾಳಿ ನದಿ

    ಕಾರವಾರ: ಅಬ್ಬರದ ಮಳೆಬಂದ್ರೆ ಭೂ ಕುಸಿತವಾಗುತ್ತೆ, ಇದ್ದ ಜಾಗವೇ ಮಾಯವಾಗುತ್ತೆ ಅಂತದ್ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಅಬ್ಬರದ ಮಳೆಯಿಂದ ಅರಬ್ಬೀ ಸಮುದ್ರ ಭಾಗದಲ್ಲಿ ಹತ್ತು ಎಕರೆ ಪ್ರದೇಶದಷ್ಟು ಭೂ ಭಾಗ ಸೃಷ್ಟಿಯಾಗಿದ್ದು ಸಮುದ್ರವೇ ಹಿಂದೆಸರಿದಿದೆ.

    ಕಾರವಾರದ ಟಾಗೂರ್ ಕಡಲತಡಿ ನೋಡಲು ಸಾಧಾರಣವಾಗಿ ಕಾಣ್ತಿದೆಯಾದ್ರೂ ಇದರ ಹಿಂದೆ ಇರೋ ಪ್ರಕೃತಿಯ ಕೌತುಕ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿವೆ. ಕಾಳಿ ನದಿ ಸಂಗಮದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮುದ್ರವನ್ನೇ ನುಂಗಿ ಹತ್ತು ಎಕರೆಯಷ್ಟು ಹೊಸ ಭೂಭಾಗ ನಿರ್ಮಾಣವಾಗಿದೆ.

    ನದಿಯೊಂದಿಗೆ ಹೆಚ್ಚಿನ ಪ್ರಮಾಣದ ಮರಳು ಕಡಲತಡಿಯನ್ನು ಸೇರುತ್ತಿದೆ. ಇದರಿಂದ ಕಾಳಿ ನದಿ ಪ್ರದೇಶದ ಅಳವೆಗಳು ಮುಚ್ಚಿಹೋಗುವ ಭಯ ಸ್ಥಳೀಯರನ್ನು ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

    ಮರಳಿನ ಭೂಮಿ ನಿರ್ಮಾಣವಾಗಿ ಅರಬ್ಬಿ ಸಮುದ್ರವೇ ಹಿಂದೆ ಸರಿದಿದ್ದು, ಮರಳು ಹೇರಳವಾಗಿ ಸಂಗ್ರಹವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಅಬ್ಬರದ ಮಳೆಯ ಪ್ರಭಾವವೇ ಇದಕ್ಕೆ ಕಾರಣ ಎಂದು ಕಡಲ ಜೀವಶಾಸ್ತ್ರಜ್ಞರಾದ ಡಾ.ಜಗನ್ನಾಥ್ ರಾಥೋಡ್ ಹೇಳುತ್ತಾರೆ.

    ಅಕ್ರಮ ಮರಳುಗಾರಿಕೆಯಿಂದ ಸಹ ಕಡಲತಡಿಯಲ್ಲಿ ಮರಳು ಸಂಗ್ರಹವಾಗ್ತಿದೆ ಎಂಬ ಮಾತು ಇದೆ. ಈ ಮಟ್ಟದಲ್ಲಿ ಮರಳು ಸಂಗ್ರಹವಾದರೆ ನದಿಯ ಹರಿಯುವ ದಿಕ್ಕು ಬದಲಾಗಿ ದೊಡ್ಡ ಹಾನಿಯಾಗಬಹುದೆಂಬ ಆತಂಕವೂ ಇದೆ.

  • ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    – ಭಾರೀ ಪ್ರಮಾಣದ ಅಲೆಗಳ ಹೊಡೆತಕ್ಕೆ ಜನ ತತ್ತರ

    ಕಾರವಾರ: ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾದರೂ ರಕ್ಕಸ ಅಲೆಗಳ ಹೊಡೆತಕ್ಕೆ ಕರಾವಳಿ ತೀರದ ಜನ ತತ್ತರಿಸಿದ್ದು, ಭಯಭೀತರಾಗಿದ್ದಾರೆ.

    ಕಡಲ ಅಬ್ಬರಕ್ಕೆ ಕಡಲ ತೀರ ಪ್ರದೇಶ ಭಾಗದ ರಾಜ್ಯದ ಪ್ರಸಿದ್ಧ ಇಕೋ ಬೀಚ್ ನ ಹಲವು ಭಾಗಗಳಿಗೆ ಹಾನಿಯಾಗಿದ್ದು, ಸಮುದ್ರದ ಅಲೆಗಳಿಗೆ ಮರಗಿಡಗಳು ಕೊಚ್ಚಿಹೋಗುತ್ತಿವೆ. ಕಾರವಾರ, ಹೊನ್ನಾವರದ ಕಡಲತೀರದಲ್ಲಿ ಕಡಲಕೊರತದಿಂದಾಗಿ ಭಾರೀ ಹಾನಿ ಸಂಭವಿಸಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕಡಲ ಅಬ್ಬರದಿಂದಾಗಿ ಕಡಲ ಕೊರೆತ ಹೆಚ್ಚಾಗಿದ್ದು, ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ ಭಾಗದ ಕಡಲ ತೀರ ಪ್ರದೇಶದಲ್ಲಿ ಗಜ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಈ ಭಾಗದ ಪ್ರದೇಶಗಳಲ್ಲಿ ಕಡಲ ಕೊರೆತ ಪ್ರಾರಂಭವಾಗಿದ್ದು, ರಾಜ್ಯದ ಪ್ರಸಿದ್ಧ ಇಕೋ ಬೀಚ್ ಸೇರಿದಂತೆ ಹಲವು ಭಾಗಗಳಿಗೆ ಹಾನಿಯಾಗಿದೆ.

    ಸುಮಾರು 4-5 ಅಡಿಯ ಅಲೆಗಳು ಸಮುದ್ರದ ದಂಡೆಗೆ ಬಂದು ಹೊಡೆಯುತ್ತಿವೆ. ಇದರಿಂದಾಗಿ ದಡದಲ್ಲಿರುವ ಬೀಚ್‍ನ ಹಟ್‍ಗಳಿಗೆ ಹಾನಿಯಾಗಿದ್ದು, ಭೂ ಭಾಗ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ.

  • ಗೋಕರ್ಣ ಸಮುದ್ರದಲ್ಲಿ ಈಜಲು ಹೋದವರು ನೀರು ಪಾಲು

    ಗೋಕರ್ಣ ಸಮುದ್ರದಲ್ಲಿ ಈಜಲು ಹೋದವರು ನೀರು ಪಾಲು

    – ಹೋಗಬೇಡಿ ಅಂದ್ರು ಹೋದ್ರು

    ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ತೀರ ಪ್ರದೇಶದಲ್ಲಿ ನಡೆದಿದೆ.

    ಮೈಸೂರಿನ ಸುಹಾಸ್(17) ಹಾಗೂ ಈತನೊಂದಿಗಿದ್ದ ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕರಾಗಿದ್ದಾರೆ. ಒಟ್ಟು 8 ಜನರ ತಂಡ ಮೈಸೂರಿನಿಂದ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಖಾಸಗಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಇವರು, ಇಂದು ಮುಂಜಾನೆ ಸಮುದ್ರಕ್ಕಿಳಿದಿದ್ದರು. ಅಮವಾಸ್ಯೆಯಾದ್ದರಿಂದ ಸಮುದ್ರದಲ್ಲಿ ಸೆಳತ ಹೆಚ್ಚಿರುತ್ತದೆ ಹೀಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಎಚ್ಚರಿಸಲಾಗಿತ್ತು.

    ಸ್ಥಳೀಯರ ಮಾತಿಗೆ ಬೆಲೆ ಕೊಡದೆ ಬಾಲಕರು ಸಮುದ್ರಕ್ಕಿಳಿದಿದ್ದು, ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಯುವಕ ಸುಹಾಸ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವು ಕಂಡಿದ್ದಾನೆ. ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಳಿವಿನಂಚಿನಲ್ಲಿರುವ ಪೆಸಿಫಿಕ್ ರಿಡ್ಲೆ ಕಡಲಾಮೆ ಕಳೇಬರಹ ಪತ್ತೆ

    ಅಳಿವಿನಂಚಿನಲ್ಲಿರುವ ಪೆಸಿಫಿಕ್ ರಿಡ್ಲೆ ಕಡಲಾಮೆ ಕಳೇಬರಹ ಪತ್ತೆ

    – ಸಮುದ್ರ ಕಲ್ಮಶ ಶುದ್ಧೀಕರಿಸುತ್ತೆ ಈ ಆಮೆ

    ಕಾರವಾರ: ಅಳಿವಿನಂಚಿನಲ್ಲಿರುವ ಪೆಸಿಫಿಕ್ ರಿಡ್ಲೆ ಕಡಲಾಮೆಯೊಂದು ಮೀನುಗಾರರು ಬೀಸಿದ ಬಲೆಗೆ ಸಿಲುಕಿ ಮೃತಪಟ್ಟಿದ್ದು, ಕಾರವಾರದ ಕೋಡಿಭಾಗ್ ಬ್ರಿಡ್ಜ್ ಬಳಿ ಇದರ ಕಳೇಬರಹ ಪತ್ತೆಯಾಗಿದೆ.

    ಸಮುದ್ರದ ಕಲ್ಮಶಗಳನ್ನು ಶುದ್ಧೀಕರಿಸುವ ಫಿಲ್ಟರ್ ಎಂದೇ ಕರೆಯುವ ಈ ಆಮೆಗಳು ಭಾರತದ ಕರಾವಳಿ ಉದ್ದಕ್ಕೂ ಕಂಡುಬರುತ್ತವೆ. ಒರಿಸ್ಸಾ ಕಡಲ ಭಾಗದಲ್ಲಿ ಅತಿ ಹೆಚ್ಚು ಇದರ ಸಂತತಿ ಉಳಿದಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇದರ ಸಂತತಿ ಕ್ಷೀಣವಾಗಿದ್ದು, ಇದನ್ನು ಲೆಪಿಡೊಕೆಲಿಸ್ ಓಲಿವೆಸಿ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಐಸಿಯುಎನ್(ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್) ಪ್ರಕಾರ ಈ ಕಡಲಾಮೆ ಸಂತತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ.

    ಹೆಚ್ಚಾಗಿ ಸಮಶೀತೋಷ್ಣ ವಲಯದ ಸಮುದ್ರದಲ್ಲಿ ವಾಸಿಸುವ ಈ ಆಮೆಗಳು, 2 ರಿಂದ 2.5 ಅಡಿಯಷ್ಟು ದೊಡ್ಡದಾಗಿ ಬೆಳೆಯುತ್ತವೆ. ಇವು 150 ಮೀಟರ್ ನಷ್ಟು ಆಳದವರೆಗೂ ವಾಸಿಸಬಲ್ಲವು. ಇವುಗಳ ಜೀವಿತಾವಧಿ 50 ರಿಂದ 60 ವರ್ಷಗಳಷ್ಟಿದ್ದು, ಪ್ರತಿ ಹದಿನೈದು ನಿಮಿಷಕ್ಕೆ ಸಮುದ್ರದಾಳದಿಂದ ಹೊರಬಂದು ಉಸಿರಾಟಕ್ಕೆ ಆಮ್ಲಜನಕವನ್ನು ತೆಗೆದುಕೊಳ್ಳುತ್ತವೆ. ಸಮುದ್ರದಲ್ಲಿ ಜಲ್ಲಿ ಫಿಷ್ ಗಳು ಸತ್ತ ಸಮುದ್ರ ಜೀವಿಗಳ ಕಳೆಬರಹ ಹಾಗೂ ಕೆಲವೊಮ್ಮೆ ಚಿಕ್ಕಪುಟ್ಟ ಮೀನುಗಳನ್ನು ಭಕ್ಷಿಸುವ ಇವು, ಸಮುದ್ರದ ಕಲ್ಮಶವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತವೆ. ಗಾತ್ರದಲ್ಲಿ ಚಿಕ್ಕದಿರುವ ಈ ಆಮೆಗಳು ಕಡಲ ದಂಡೆಯಲ್ಲಿ 100 ರಿಂದ 150 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ ಎಂದು ಟೆರ್ರಾ ಸಾಗರ ಸಂಶೋಧನಾ ಸಂಸ್ಥೆಯ ಸಮುದ್ರ ಆಮೆಗಳು ಮತ್ತು ಕರಾವಳಿ ಸಂಪನ್ಮೂಲಗಳ ಸಹ ಸಂಸ್ಥಾಪಕ ಮತ್ತು ಕಾರ್ಯಕ್ರಮ ನಿರ್ದೇಶಕ ಕಡಲ ಜೀವ ವಿಜ್ಞಾನಿ ಡಾ.ಅನ್ನಿ ಕುರಿಯನ್ ತಿಳಿಸಿದ್ದಾರೆ.

    ಮೀನುಗಾರಿಕೆ ಅವೈಜ್ಞಾನಿಕ ಕ್ರಮದಿಂದ ಆಮೆ ಸಂತತಿ ಕ್ಷೀಣ
    ಕರ್ನಾಟಕದ ಕರಾವಳಿ ಭಾಗದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಆಮೆಗಳ ಸಂತತಿಗೆ ಹೊಡೆತ ಕೊಡುತ್ತಿದೆ. ಸಮುದ್ರಭಾಗದಲ್ಲಿ ಮೀನುಗಾರಿಕೆ ನಡೆಸುವಾಗ ಹಾಳಾದ ಬಲೆಗಳನ್ನು ಸಮುದ್ರದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಸಮುದ್ರದಾಳದಿಂದ ಉಸಿರಾಟಕ್ಕೆ ಮೇಲೆಬರುವ ಈ ಆಮೆಗಳು ಬಲೆಗಳಿಗೆ ಸಿಲುಕಿ ಮೃತಪಡುತ್ತಿವೆ. ಇದಲ್ಲದೆ ಇವುಗಳ ಭಕ್ಷಣೆ ಸಹ ಮಾಡಲಾಗುತಿದ್ದು, ಇದು ಸಹ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ. ಅರಣ್ಯ ಇಲಾಖೆ ಇವುಗಳ ಭಕ್ಷಣೆಗೆ ನಿಷೇಧ ಹೇರಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇವುಗಳ ಭಕ್ಷಣೆ ನಡೆಯುತಿದ್ದು, ಸಂತತಿ ಕ್ಷೀಣಿಸುತ್ತಿದೆ.

  • ಉಡುಪಿಯಲ್ಲಿ ಹುಬ್ಬಾ ಅಬ್ಬರ – ನಾಳೆ ರೆಡ್ ಅಲರ್ಟ್ ಘೋಷಣೆ

    ಉಡುಪಿಯಲ್ಲಿ ಹುಬ್ಬಾ ಅಬ್ಬರ – ನಾಳೆ ರೆಡ್ ಅಲರ್ಟ್ ಘೋಷಣೆ

    ಉಡುಪಿ: ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಕೂಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾಧಾರಣ ಮಳೆ ಬೀಳುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಒಂದು ವಾರ ಭಾರೀ ಮಳೆಯಾಗುವ ಸೂಚನೆ ಕೊಟ್ಟಿದೆ.

    ಮುಂದಿನ ನಾಲ್ಕು ದಿನ ಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ 11ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಆರೆಂಜ್, 12ರಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿನ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ರವಾನಿಸಲಾಗಿದೆ.

    ಆಳ ಸಮುದ್ರ ಮೀನುಗಾರಿಕೆಗೆ ಈಗಾಗಲೇ ಸೇರಿರುವ ಸಮುದ್ರ ಮೀನುಗಾರಿಕೆ ಅರಬ್ಬಿ ಸಮುದ್ರ ಸೇರಿರುವ ಮೀನುಗಾರರಿಗೆ ವಯರ್ಲೆಸ್ ಮೂಲಕ ಸಂದೇಶ ರವಾನಿಸಲಾಗಿದೆ. ಭಾರಿ ಗಾಳಿ ಮಳೆ ಬೀಳುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನಾಡದೋಣಿ ಮೀನುಗಾರರು ಸಮುದ್ರತೀರದಲ್ಲಿ ಬಹಳ ಎಚ್ಚರಿಕೆಯಿಂದ ಮೀನುಗಾರಿಕೆ ನಡೆಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

    ಕಳೆದ ಒಂದು ತಿಂಗಳಿನಿಂದ ಮಳೆ ಕೊಂಚ ವಿರಾಮ ಕೊಟ್ಟಿತ್ತು. ಈಗ ಹುಬ್ಬಾ ನಕ್ಷತ್ರ ಕಳೆದು ಉತ್ತರಾ ಆರಂಭವಾಗುವ ವೇಳೆ ಮಳೆ ರೌದ್ರಾವತಾರ ತೋರುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿದ್ದು, ಈಗಾಗಲೇ ಬೇಸಾಯ ಮಾಡಿದ ಭತ್ತ ಬೆಳೆದ ರೈತರು ಸಂತಸದಲ್ಲಿದ್ದಾರೆ. ಮೋಡ ಮುಸುಕಿದ ವಾತಾವರಣ ಇದ್ದು, ಭಾರೀ ಮಳೆ ನಿರೀಕ್ಷಿಸಲಾಗಿದೆ.

    ಎಷ್ಟು ಮಳೆಯಾಗುತ್ತೆ?
    64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.

  • ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಉಡುಪಿ: ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನನ್ನು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಲಾಗುತ್ತದೆ. ಬೋಟ್‍ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಖಾಲಿ ಮಾಡಲಾಗುತ್ತದೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ನೀರಿನಲ್ಲಿ ಇದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಬಂದಿದೆ.

    ಮೀನು ಖಾಲಿ ಮಾಡುವ ಸಂದರ್ಭ ಗೂಡ್ಸ್ ಟೆಂಪೋವನ್ನು ಬೋಟಿಗೆ ಸಿಕ್ಕಿಸಲಾಗಿತ್ತು. ಟೆಂಪೋ ಹಿಂದಕ್ಕೆ ಹೋಗಿ, ನೀರಿಗೆ ಬಿದ್ದಿದೆ. ಅಲ್ಲದೇ ಟೆಂಪೋ ಸಂಪೂರ್ಣವಾಗಿ ಮುಳುಗಿದೆ. ಮುಳುಗಿದ್ದ ಟೆಂಪೋವನ್ನು ಕ್ರೇನ್‌ಗೆ ಸರಪಳಿಯಲ್ಲಿ ಕಟ್ಟಿ ಮೇಲಕ್ಕೆತ್ತಲಾಗಿದೆ.

    ವಿಠ್ಠಲ ಪೂಜಾರಿ ಎಂಬವರಿಗೆ ಸೇರಿದ ಟೆಂಪೋ ಇದಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋದ ಎಂಜಿನ್ ಒಳಗೆ ನೀರು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ.

  • ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ

    ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ

    ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.

    ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.

    ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿಯ ಒತ್ತಡ ಇದ್ದಿದ್ದರಿಂದ, ನದಿಯಿಂದ ಭಾರಿ ಪ್ರಮಾಣದ ನೀರು ಸಮುದ್ರಕ್ಕೆ ಹರಿಯುತ್ತಿರುವುದರಿಂದ ಭಾರೀ ಒತ್ತಡ ನಿರ್ಮಾಣವಾಗಿತ್ತು. ಮೀನುಗಾರಿಕೆ ನಡೆಸಿ ಬಂದರಿಗೆ ವಾಪಸ್ಸಾಗುವ ಸಂದರ್ಭ ಸಾಗರಶ್ರೀ ಬೋಟ್ ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು, ಸ್ಥಳೀಯ ಮೀನುಗಾರರಿಗಾಗಿ ಶೋಧ ನಡೆಸುತ್ತಿದ್ದಾರೆ. ಈಜಿ ಬಚಾವಾದ ಏಳು ಜನರಿಗೆ ಚಿಕಿತ್ಸೆ ಕೊಡಲಾಗಿದೆ.

    ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಮೀನುಗಾರರಿಂದ ಘಟನೆಯ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಅಳಿವೆ ಬಾಗಿಲಿನ ಉದ್ದ ಕಿರಿದಾಗಿರುವುದರಿಂದ ಅಲೆಗಳ ಹೊಡೆತ ವಿಪರೀತ ಇದೆ. ಮುಂದಿನ ದಿನಗಳಲ್ಲಿ ಅಳಿವೆ ಬಾಗಿಲಿನ ಉದ್ದವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆ ಮಾತನಾಡಿ ಕಾಮಗಾರಿ ಮುಂದುವರಿಸುವಂತೆ ಪ್ರಯತ್ನಿಸುತ್ತೇನೆ ಎಂದರು.

    ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನಾಡದೋಣಿ ಬೋಟುಗಳು ಒಂದರ ಹಿಂದೆ ಒಂದು ಬರುತ್ತಿತ್ತು. ಈ ಸಂದರ್ಭ ಗಾಳಿಯ ಹೊಡೆತಕ್ಕೆ ಸಿಕ್ಕಿ ಸಾಗರ ಶ್ರೀ ದೋಣಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಾಲ್ವರು ಮೀನುಗಾರರು ಬಲೆಯ ಜೊತೆಗೆ ಸಮುದ್ರಕ್ಕೆ ಬಿದ್ದಿರುವುದರಿಂದ ಬಲೆ ಮೀನುಗಾರರನ್ನು ಸುತ್ತಿಕೊಂಡಿರುವ ಸಾಧ್ಯತೆ ಇದೆ. ಕ್ರೇನ್ ಬಳಸಿ ಕಣ್ಮರೆಯಾದ ಮೀನುಗಾರರನ್ನು ಹುಡುಕುವ ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದರು.

  • ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಮಂಗಳೂರು: ನಗರದ ಪಣಂಬೂರು ಸಮೀಪದ ತಣ್ಣೀರುಬಾವಿ ಎಂಬಲ್ಲಿ ಸಮುದ್ರದ ನೀರು ದಡಕ್ಕೆ ನುಗ್ಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

    ಎಂಆರ್‌ಪಿಎಲ್ ಪೆಟ್ರೋಲಿಯಂ ಕಂಪನಿಗೆ ಕಡಲಿನ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಘಟಕ ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಮುದ್ರದ ನೀರನ್ನು ಪೈಪ್ ಮೂಲಕ ಸ್ಥಾವರಕ್ಕೆ ತರುವ ಕಾಮಗಾರಿ ನಡೆಯುತ್ತಿದ್ದು, ಪೈಪ್ ಅಳವಡಿಸಲು ಸಮುದ್ರ ತೀರದ ಮರಳನ್ನು ತೆಗೆಯಲಾಗಿದೆ.

    ಇದೀಗ ಕಡಲಿನ ಅಬ್ಬರ ಹೆಚ್ಚಾಗಿದ್ದರಿಂದ ಸಮುದ್ರದ ನೀರು ಮರಳು ತೆಗೆದ ಪ್ರದೇಶದಿಂದ ಜನ ವಸತಿ ಸ್ಥಳಕ್ಕೆ ನುಗ್ಗಿ ಬಂದಿದೆ.ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದರೆ ಇನ್ನೂ ತೊಂದರೆಗಳಾಗಬಹುದು ಅನ್ನೋ ಹಿನ್ನೆಲೆಯಲ್ಲಿ ಸ್ಥಳೀಯ 15 ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ. ಎಂಆರ್‌ಪಿಎಲ್ ನ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಹೀಗಾಗಿ ಇಲ್ಲಿ ಸ್ಥಾವರದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್, ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಾಜ್ಯದಲ್ಲಿ ಕೊಡಗು ಜಿಲ್ಲೆ ಅಪಾಯದಲ್ಲಿದೆ: ಆರ್.ಅಶೋಕ್

    ರಾಜ್ಯದಲ್ಲಿ ಕೊಡಗು ಜಿಲ್ಲೆ ಅಪಾಯದಲ್ಲಿದೆ: ಆರ್.ಅಶೋಕ್

    – ಕೊಚ್ಚಿಹೋದ ಪಡುಬಿದ್ರೆ ಬೀಚ್
    – 5 ಕೋಟಿ ಪರಿಹಾರ ಬಿಡುಗಡೆ

    ಉಡುಪಿ: ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಕೊಡಗು ಜಿಲ್ಲೆ ಅಪಾಯದಲ್ಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ಕಡಲ್ಕೊರೆತ ಆಗಿದ್ದು, ಕಡಲ್ಕೊರೆತ ಸ್ಥಳಗಳನ್ನು ಭೇಟಿ ಮಾಡಿದ ಅಶೋಕ್ ಹಾನಿಯನ್ನು ಪರಿಶೀಲನೆ ನಡೆಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ಅವರಿಂದ ಅನಾಹುತದ ಮಾಹಿತಿಗಳನ್ನು ಪಡೆದುಕೊಂಡರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿ ಜಿಲ್ಲೆಗೆ 5 ಕೋಟಿ ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ವಿಪತ್ತು ನಿರ್ವಹಣೆಗೆ 300 ಕೋಟಿ ರೂಪಾಯಿಗಳು ಇದೆ. ಅವಶ್ಯಕತೆ ಆದ ತಕ್ಷಣ ಅದನ್ನು ಬಿಡುಗಡೆ ಮಾಡಲಾಗುವುದು. ಇಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮಳೆಯಿಂದ ಆದ ಅನಾಹುತಗಳು ವೀಕ್ಷಣೆಗೆ ಮಾಡಲಿದ್ದೇನೆ ಎಂದರು.

    ರಾಜ್ಯದಲ್ಲಿ ಕೊಡಗು ಜಿಲ್ಲೆ ಅಪಾಯದಲ್ಲಿದೆ. ಅಲ್ಲಿಗೂ ಭೇಡಿ ಕೊಡುತ್ತೇನೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇವೆ. ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಯಾರು ಕೂಡ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿರುವುದಾಗಿ ಆರ್.ಅಶೋಕ್ ಕೇಳಿದರು.

    ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಜೊತೆ ಮಾತನಾಡುತ್ತೇನೆ. ಪಡುಬಿದ್ರೆ ಅಭಿವೃದ್ಧಿಯ ಬಗ್ಗೆ ಕಂದಾಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜೊತೆಯಾಗಿ ಕರ್ತವ್ಯ ನಿರ್ವಹಿಸಲಿದೆ ಎಂದರು.

  • ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ- ಉಡುಪಿ, ಕಾಪು ಮೀನುಗಾರಿಕಾ ರಸ್ತೆಗೆ ಹಾನಿ

    ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ- ಉಡುಪಿ, ಕಾಪು ಮೀನುಗಾರಿಕಾ ರಸ್ತೆಗೆ ಹಾನಿ

    ಉಡುಪಿ: ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಕಮ್ಮಿ ಇದ್ದರೂ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ವಿಪರೀತವಾಗಿದೆ. ಇದರಿಂದ ಉಡುಪಿ- ಕಾಪು ಮೀನುಗಾರಿಕಾ ರಸ್ತೆಗೆ ಸಮುದ್ರದ ನೀರು ನುಗ್ಗಿದೆ.

    ಇಂದು ಮಧ್ಯಾಹ್ನದಿಂದ ಕಡಲು ಆರ್ಭಟ ಹೆಚ್ಚುತ್ತಿದ್ದು, ಇಂದು ಕೂಡ ಕಾಪು ತಾಲೂಕಿನ ಕಡೆಕಾರು ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ವಿಪರೀತವಾಗಿದೆ. ಹರಿದ ನೀರು ಮೀನುಗಾರಿಕಾ ರಸ್ತೆಯನ್ನು ದಾಟಿ ನದಿ ಸೇರಿದೆ. ಒಂದು ವಾರದಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ.

    ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಾಗಿರುವುದರಿಂದ ನೀರು ಕರಾವಳಿ ಕಡೆ ಹರಿದುಬರುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಂತೆ, ಅರಬ್ಬಿ ಸಮುದ್ರದಲ್ಲಿ ಮೂರರಿಂದ ಐದು ಅಡಿ ಎತ್ತರದ ಅಲೆಗಳು ಮೇಲೇಳುವ ಸೂಚನೆಯಿದೆ. ಸ್ಥಳೀಯ ಮೀನುಗಾರರು ಮತ್ತು ಯುವಕರು ರಸ್ತೆಗೆ ಬಿದ್ದ ಕಲ್ಲು ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

    ಪಡುಕೆರೆ ವ್ಯಾಪ್ತಿಯಲ್ಲಿ ಆಧುನಿಕ ಶೈಲಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಇದೇ ನಿರಂತರ ಕಡಲ್ಕೊರೆತಕ್ಕೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರವನ್ನು ಅದರಷ್ಟಕ್ಕೆ ಬಿಡಬೇಕು. ಸಮುದ್ರಕ್ಕೆ ತಡೆಗೋಡೆ ಕಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸ್ಥಳೀಯ ಸೂರಜ್ ಸಾಲಿಯಾನ್ ಹೇಳಿದ್ದಾರೆ. ಮನೆಗಳಿರುವ ಪ್ರದೇಶದಲ್ಲಿ ಹೆಚ್ಚುವರಿ ಕಲ್ಲು ತಂದು ಹಾಕುವ ಪ್ರಕ್ರಿಯೆ ನಾಳೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.