Tag: sea

  • ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಉಡುಪಿ: ಕರಾವಳಿ ಜಿಲ್ಲೆಗಳಿಗೆ ವಿಶೇಷವಾಗಿ ಸಮುದ್ರತೀರಕ್ಕೆ ಪ್ರವಾಸ ಬರಬೇಡಿ ಎಂದು ಎಷ್ಟು ಎಚ್ಚರಿಕೆ ನೀಡಿದರೂ ಜನ ಕೇಳುತ್ತಿಲ್ಲ. ವೀಕೆಂಡ್ ಬಂದ್ರೆ ಈಗಲೂ ನೂರಾರು ಜನ ಸಮುದ್ರ ತೀರದತ್ತ ಮುಖ ಮಾಡುತ್ತಾರೆ. ಹೀಗೆ ಕೊಡಗು ಮತ್ತು ಮೈಸೂರು ಭಾಗದಿಂದ ಬಂದಿದ್ದ ಯುವಕ-ಯುವತಿಯರ ತಂಡವೊಂದು ಮಲ್ಪೆಗೆ ಆಗಮಿಸಿತ್ತು. ಈ ವೇಳೆ ಸಮುದ್ರದ ಅಲೆಗಳಲ್ಲಿ ಈಜುತ್ತಿದ್ದಾಗ ನೀರು ಪಾಲಾದ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ.

    ಮೈಸೂರಿನ ಯುವಕ ಹಾಗೂ ಕೊಡಗಿನಿಂದ ಮೂವರು ಯುವತಿಯರು ಬೀಚ್ ಗೆ ಬಂದಿದ್ದರು. ನಾಲ್ವರ ಪೈಕಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗಿನ ಯುವತಿ ದಶಮಿ (20) ಸಮುದ್ರದಲ್ಲಿ ಕಣ್ಮರೆಯಾಗಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗಾಗಿ ಹುಡುಕಾಟ ನಡೆಯುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ತಂಡ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ಆರ್ಭಟಕ್ಕೆ ಸಿಲುಕಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದರೂ ಹೊರ ಜಿಲ್ಲೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ.

  • ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿಗಳು ಪಲ್ಟಿ- ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿಗಳು ಪಲ್ಟಿ- ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಂದರು ಬಳಿಯ ಅಳಿವೆ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

    ಅಬ್ಬರದ ಮಳೆಯಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧವಿದ್ದರೂ, ಪಾತಿದೋಣಿ ಮೂಲಕ ಮೀನುಗಾರಿಕೆಗೆ ಐದಕ್ಕೂ ಹೆಚ್ಚು ದೋಣಿಗಳು ತೆರಳಿದ್ದವು. ಭಟ್ಕಳದಲ್ಲಿ ಭಾರೀ ಗಾಳಿ ಸಹಿತ ಅಬ್ಬರದ ಮಳೆಯಾಗಿದ್ದರಿಂದ ಮೀನುಗಾರರು ಅಲೆಯ ರಭಸಕ್ಕೆ ವಾಪಾಸ್ ಬರಲಾಗದೆ ತೊಂದರೆ ಗೊಳಗಾಗಿದ್ದರು. ಇನ್ನು ಹಲವು ಪಾತಿ ದೋಣಿಗಳು ಅಲೆಯ ಹೊಡೆತಕ್ಕೆ ಪಲ್ಟಿಯಾಗಿವೆ. ತಕ್ಷಣ ದಡದಲ್ಲಿದ್ದ ಸ್ಥಳೀಯ ಮೀನುಗಾರರು ಇದನ್ನು ಗಮನಿಸಿ ಗಿಲ್ನೆಟ್ ದೋಣಿ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆಗೊಳಗಾದ ಮೀನುಗಾರರು ಭಟ್ಕಳದ ಮುಂಡಳ್ಳಿ, ಬೆಳ್ನಿ ಭಾಗದವರಾಗಿದ್ದಾರೆ.

    ರಕ್ಷಣೆಗೆ ಬಾರದ ಕರಾವಳಿ ಕಾವಲು ಪಡೆ!
    ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಪೊಲಿಸರು ಇದ್ದಾರೆ. ಮೀನುಗಾರರಿಗೆ ತೊಂದರೆಯಾದಾಗ ಇವರನ್ನು ರಕ್ಷಣೆ ಮಾಡುವುದು ಕರಾವಳಿ ಕಾವಲುಪಡೆಯ ಕತ್ರ್ಯವ್ಯ. ಆದರೆ ಈ ವರೆಗೆ ಕಡಲಲ್ಲಿ ಏನಾದರು ತೊಂದರೆಗಳಾದಾಗ ರಕ್ಷಣೆ ಕೋರಿದರೂ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ಸ್ಥಳೀಯ ಮೀನುಗಾರರ ಆಕ್ರೋಶವಾಗಿದೆ. ಮೀನುಗಾರರಿಗೆ ಸಮುದ್ರದಲ್ಲಿ ಏನೇ ಆದರೂ ಮೀನುಗಾರರೇ ರಕ್ಷಣೆ ಮಾಡಿಕೊಳ್ಳಬೇಕಾದ ದೌರ್ಭಾಗ್ಯ ಇಲ್ಲಿನವರದ್ದಾಗಿದೆ.

    ಮೀನುಗಾರಿಕೆಗೆ ಇಲಾಖೆ ನಿರ್ಬಂಧ ವಿಧಿಸಿದೆ. ಆದರೂ ಸಂಪ್ರದಾಯಿಕ ಮೀನುಗಾರರು ಸಮುದ್ರ ಅಬ್ಬರದ ನಡುವೆ ದೋಣಿಗಳನ್ನು ಸಮುದ್ರದಲ್ಲಿ ಮೀನುಗಾರಿಕೆಗೆ ಉಪಯೋಗಿಸುತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಾವಳಿ ಕಾವಲುಪಡೆ ಎಚ್ಚರಿಕೆ ನೀಡುವ ಅಥವಾ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಮೀನುಗಾರರು ದುರಂತಕ್ಕೊಳಗಾಗುತಿದ್ದಾರೆ.

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ-ಕದ್ರಾ ಜಲಾಶಯದಿಂದ ನೀರು ಬಿಡುಗಡೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ-ಕದ್ರಾ ಜಲಾಶಯದಿಂದ ನೀರು ಬಿಡುಗಡೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ತುಂಬಿಹರಿಯುವ ಜೊತೆಗೆ ಸಮುದ್ರ ರುದ್ರ ನರ್ತನ ಹೆಚ್ಚಾಗಿದೆ. ಇದೇ ತಿಂಗಳು ಹದಿನೇಳರವರೆಗೂ ಯೆಲ್ಲೂ ಅಲರ್ಟ ಘೋಷಣೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚಿಸಲಾಗಿದೆ.

    ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಭಟ್ಕಳ ಹಾಗೂ ಮಲೆನಾಡು ಭಾಗವಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಹಳಿಯಾಳ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದೆ. ಮುಂಡಗೋಡಿನಲ್ಲಿ ಅಲ್ಪ ಮಳೆ ಸುರಿದಿದ್ದು ಜಿಲ್ಲೆಯಲ್ಲಿ ಅತೀ ಹೆಚ್ಚು ಸಿದ್ದಾಪುರದಲ್ಲಿ -80.4 ಮಿಲಿ ಮೀಟರ್, ಯಲ್ಲಾಪುರ-75.4 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಒಟ್ಟು 568.2 ಮಿ.ಮೀ. ಮಳೆಯಾಗಿದೆ.

    ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಶರಾವತಿ, ಗಂಗಾವಳಿ, ಕಾಳಿ ನದಿಗಳು ತುಂಬಿ ಹರಿಯುತ್ತಿದ್ದು, ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕದ್ರಾ ಜಲಾಶಯದಲ್ಲಿ ಇಂದು 27,798 ಕ್ಯೂಸೆಕ್ಸ್ ನೀರನ್ನು ಮೂರು ಗೇಟುಗಳನ್ನು ತೆರದು ಹೊರಬಿಡಲಾಯಿತು. (17748- ವಿದ್ಯುತ್ ಉತ್ಪಾದಿಸಿ ಹೊರ ಬಿಟ್ಟಿರುವುದು. 10,050-ಗೇಟ್ ನಿಂದ ಹೊರ ಬಿಟ್ಟಿದ್ದು) ಇನ್ನು ಹೆಚ್ಚಿನ ಮಳೆ ಆಗುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಬೇರೆಡೆ ತೆರಳಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

    ಇನ್ನು ಕರಾವಳಿ ಭಾಗದಲ್ಲೂ ಸಮುದ್ರ ಅಬ್ಬರ ಹೆಚ್ಚಾಗಿದ್ದು ಇನ್ನೂ ಒಂದು ದಿನಗಳ ಕಾಲ ಸಂಪ್ರದಾಯಿಕ ಮೀನುಗಾರಿಕೆಗೆ ಹಾಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮಳೆಯ ಆರ್ಭಟಕ್ಕೆ ಸಮುದ್ರ ಭಾಗದ ಕಾರವಾರ, ಹೊನ್ನಾವರ ಭಾಗದಲ್ಲಿ ಸಮುದ್ರ ಕೊರೆತ ಹೆಚ್ಚಾಗಿದ್ದು, ಮರಗಳು ಹಾಗೂ ತಡೆ ಗೋಡೆಗಳು ಕೊಚ್ಚಿಹೋಗಿದೆ. ಇನ್ನು ಕಾರವಾರ ನಗರದಲ್ಲಿ ಮಳೆಯಿಂದ ಮನೆಯೊಂದು ಅಲ್ಪ ಪ್ರಮಾಣದಲ್ಲಿ ಕುಸಿದು ಹಾನಿಯಾಗಿದೆ. ಇದನ್ನೂ ಓದಿ: ಮಡಿಕೇರಿ ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

    ಜಿಲ್ಲೆಯಲ್ಲಿ ಜೂ. 17ರ ವರೆಗೆ ಹೆಚ್ಚಿನ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳು ತನ್ನ ಹರಿವನ್ನು ಹೆಚ್ಚಿಸಿಕೊಂಡಿವೆ. ಜೊತೆಗೆ ಸಮುದ್ರ ಭಾಗದಲ್ಲೂ ಅಲೆಗಳ ಅಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು ಮಳೆಯ ಅಬ್ಬರ ಕೂಡ ಹೆಚ್ಚಾಗಿದೆ.

  • ಸಮುದ್ರದ ಅಬ್ಬರಕ್ಕೆ ಕೊಚ್ಚಿ ಹೋದ ಮರಗಳು – ರಾಯಚೂರಿನಲ್ಲಿ ಹಳ್ಳಕೊಳ್ಳಗಳು ಭರ್ತಿ

    ಸಮುದ್ರದ ಅಬ್ಬರಕ್ಕೆ ಕೊಚ್ಚಿ ಹೋದ ಮರಗಳು – ರಾಯಚೂರಿನಲ್ಲಿ ಹಳ್ಳಕೊಳ್ಳಗಳು ಭರ್ತಿ

    ಕಾರವಾರ/ರಾಯಚೂರು: ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಹಳ್ಳಕೊಳ್ಳಗಳು ಭರ್ತಿ ಆಗಿವೆ. ಕಡಲತೀರಕ್ಕೆ ಭಾರೀ ಗಾತ್ರದ ಅಲೆಗಳು ಅಬ್ಬರಿಸುತ್ತಿದ್ದು, ಮರಗಳು ಕೊಚ್ಚಿ ಹೋಗಿವೆ.

    ಕಾರವಾರ:
    ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು ಇದೇ ತಿಂಗಳ 15 ರ ವರೆಗೆ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರದ ಭೋರ್ಗರೆತ ಹೆಚ್ಚಾಗಿದ್ದು ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಅಲೆಗಳು ಏಳತೊಡಗಿದೆ. ಇದರಿಂದಾಗಿ ಸಮುದ್ರ ಕೊರೆತ ಪ್ರಾರಂಭವಾಗಿದ್ದು, ಕಾರವಾರ ಕಡಲತೀರ ಭಾಗದಲ್ಲಿ ಮರಗಳು, ತಡೆಗೋಡೆ ಸಮುದ್ರದಲ್ಲಿ ಕೊಚ್ಚಿಹೋಗಿವೆ. ಇನ್ನು ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸಂಪ್ರದಾಯಿಕ ಮೀನುಗಾರಿಗೆ ನಿರ್ಬಂಧ ವಿಧಿಸಲಾಗಿದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಸದ್ಯ ಮಳೆಗಿಂತ ಸಮುದ್ರದ ಆರ್ಭಟ ಹೆಚ್ಚಿದ್ದು ಇದರಿಂದಾಗಿ ಕಡಲ ಕೊರತ ಸಹ ಕರಾವಳಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿದೆ.

    ರಾಯಚೂರಿಲ್ಲಿ ತುಂಬಿ ಹರಿಯುತ್ತಿರುವ ಹಳ್ಳಗಳು
    ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜೋರು ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರಿದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮುಂದುವರಿದ ಮುಂಗಾರು ಮಳೆ- ಐದು ದಿನ ಆರೆಂಜ್ ಅಲರ್ಟ್

    ಮಾನ್ವಿ ತಾಲೂಕಿನ ಮುಷ್ಟೂರು ಹಳ್ಳಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆಯಿಲ್ಲದೆ ನೀರಿನಲ್ಲೇ ಜನ ಓಡಾಡುತ್ತಿದ್ದಾರೆ. 2009 ರಲ್ಲಿ ಕೊಚ್ಚಿಹೋದ ಸೇತುವೆಯನ್ನು ಈವರೆಗೂ ಪುನರ್ ನಿರ್ಮಾಣ ಮಾಡಿಲ್ಲ. ನೀರಿಲ್ಲದ ವೇಳೆ ಹಳ್ಳದಲ್ಲೇ ಜನ ಓಡಾಡುತ್ತಿದ್ದರು. ಈಗ ಸುರಿಯುತ್ತಿರುವ ಮಳೆಗೆ ಹಳ್ಳದಲ್ಲಿ ಹೆಚ್ಚು ನೀರು ಬಂದಿರುವುದರಿಂದ ರಸ್ತೆ ಮಾರ್ಗ ಬಂದ್ ಆಗಿದೆ. ಇದನ್ನೂ ಓದಿ: ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

    ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ಹಿನ್ನೆಲೆ ಜಿಲ್ಲಾಡಳಿತ ಈಗಾಗಲೇ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಿದೆ. ಕಂಟ್ರೋಲ್ ರೂಂ ಸಹ ತೆರೆದಿದ್ದು ಮಳೆ ಅನಾಹುತಕ್ಕೆ ಸಿಲುಕುವ ಜನರ ರಕ್ಷಣೆಗೆ ಕ್ರಮಕೈಗೊಂಡಿದೆ. ಸತತ ಮಳೆಯಿಂದ ಜಿಲ್ಲೆಯ ಹಳ್ಳ ಹಾಗು ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

  • ಸೆಲ್ಫಿ ಕ್ರೇಜ್ – ಸಮುದ್ರದ ಪಾಲಾದ ಯುವಕ

    ಸೆಲ್ಫಿ ಕ್ರೇಜ್ – ಸಮುದ್ರದ ಪಾಲಾದ ಯುವಕ

    ಕಾರವಾರ: ಲಾಕ್ ಡೌನ್ ಇರುವುದರಿಂದ ಸಮಯ ಕಳೆಯಲು ಅಕ್ಕನ ಮನೆಗೆ ಬಂದ ಯುವಕ ಸಮುದ್ರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

    ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಮೃತ ಯುವಕ. ಕೊರೊನಾ ಲಾಕ್‍ಡೌನ್ ಇರುವುದರಿಂದ ತನ್ನೂರಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕನ ಮನೆಗೆ ಬಂದಿದ್ದ ಅಭಿಷೇಕ್, ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿರುವ ಸಮುದ್ರದ ಭಾಗಕ್ಕೆ ತೆರಳಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಸಮುದ್ರಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಸೆಲ್ಫಿ ಕ್ರೇಜ್ ನಲ್ಲಿ ಕಾಲುಜಾರಿ ಸಮುದ್ರದಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಇದೀಗ ಕುಮಟಾದ ಅಳವೆ ದಂಡೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸುರೇಶ್ ಚಂದ್ರ ಕೊರೊನಾಗೆ ಬಲಿ

     

  • ಲಾಕ್‍ಡೌನ್, ಬೇಸರ ಕಳೆಯಲು ಮೀನು ಹಿಡಿಯಲು ತೆರಳಿದ ಇಬ್ಬರೂ ನೀರುಪಾಲು

    ಲಾಕ್‍ಡೌನ್, ಬೇಸರ ಕಳೆಯಲು ಮೀನು ಹಿಡಿಯಲು ತೆರಳಿದ ಇಬ್ಬರೂ ನೀರುಪಾಲು

    ಕಾರವಾರ: ಲಾಕ್‍ಡೌನ್ ನಲ್ಲಿ ಬೇಸರ ಕಳೆಯಲೆಂದು ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಆಘಾತಕಾರಿ ಘಟನೆ ಅಂಕೋಲಾ ತಾಲೂಕಿನ ಬಸಾಕಲ್ ಗುಡ್ಡದ ಸಮೀಪ ನಡೆದಿದೆ.

    ಅಂಕೋಲಾದ ಬೆಳಾಬಂದರ್ ನಿವಾಸಿ ಸಂದೀಪ ಬೀರಪ್ಪ ನಾಯ್ಕ (30), ಚೇತನ ನಾಗೇಶ ನಾಯ್ಕ (23) ನೀರುಪಾಲಾದವರಾಗಿದ್ದು, ಸಂದೀಪ ನಾಯ್ಕ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿದ್ದು ಬೇಸರಗೊಂಡಿದ್ದ ಇಬ್ಬರು ಯುವಕರು ಮೀನು ಹಿಡಿಯಲೆಂದು ಬಸಾಕಲ್ ಸಮೀಪ ಸಮುದ್ರಕ್ಕೆ ತೆರಳಿದ್ದರು. ಆದರೆ ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಇನ್ನಷ್ಟೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಇನ್ನೊರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ.

  • ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ಕಾರವಾರ: ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ದೊಡ್ಡ ನಷ್ಟ ಸಂಭವಿಸಿದೆ.

    ಚಂಡಮಾರುತದ ಅಬ್ಬರಕ್ಕೆ ಕರಾವಳಿಯ 43 ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು, 153 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮತ್ತು 22 ಮನೆ ತೀವ್ರ ಹಾಗೂ ಒಂದು ಮನೆ ಸಂಪೂರ್ಣ ನಾಶವಾಗಿದೆ. ತೌಕ್ತೆ ಅಬ್ಬರಕ್ಕೆ ಭಟ್ಕಳದ ಮೀನುಗಾರ ಮೃತಪಟ್ಟಿದ್ದಾನೆ.

    ಕರಾವಳಿ ಭಾಗದಲ್ಲಿ ಬಹುತೇಕ ಮೀನುಗಾರರು ನಷ್ಟ ಅನುಭವಿಸಿದ್ದು 83 ಬೋಟುಗಳು ಹಾನಿಯಾಗೊಳಗಾಗಿದ್ದು, ಮೂರು ಬೋಟುಗಳು ಸಂಪೂರ್ಣ ಧ್ವಂಸಗೊಂಡಿದೆ. ಕಡಲ ಅಲೆಯ ಹೊಡೆತಕ್ಕೆ 37 ಬಲೆಗಳು ಹಾನಿಯಾಗಿದ್ದರೆ, 8 ಬಲೆಗಳು ಸಂಪೂರ್ಣ ನಾಶವಾಗಿದೆ. ಇನ್ನು ಮಳೆ ಹಾಗೂ ಗಾಳಿ ಅಬ್ಬರಕ್ಕೆ ಜಿಲ್ಲೆಯಾದ್ಯಂತ 530 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, 139 ಟ್ರಾನ್ಸ್ ಫಾರ್ಮರ್‍ಗಳು ಹಾನಿಗೊಂಡಿದೆ.

    ಜಿಲ್ಲೆಯ ಭಟ್ಕಳ, ಅಂಕೋಲ, ಮುಂಡಗೋಡು ಸೇರಿ 3.57 ಹೆಕ್ಟೇರ್ ತೋಟಗಾರಿಕಾ ಭಾಗಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಹೊನ್ನಾವರ, ಭಟ್ಕಳ, ಕುಮಟಾ ಸೇರಿ ಒಟ್ಟು ಏಳು ಕಾಳಜಿ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಆಶ್ರಯ ನೀಡಿದೆ. ಇಂದು ಮಳೆ ಅಬ್ಬರ ಕಡಿಮೆಯಾಗಿದ್ದು, ಅಲೆಗಳ ಅಬ್ಬರ ಹಾಗೂ ಗಾಳಿಯ ಅಬ್ಬರ ಇಳಿಮುಖವಾಗುತ್ತಿದೆ.

  • ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಜನರನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಲಾಗಿದೆ.

    ಕಳೆದ ಎರಡು ದಿನದ ಹಿಂದೆ ಎಂಆರ್ ಪಿಎಲ್ ಗೆ ಸೇರಿದ್ದ ಸಮುದ್ರದಲ್ಲಿ ಅಂಡರ್ ಗ್ರೌಂಡ್ ಪೈಪ್ ಜೋಡಿಸುವ ಕೋರಮಂಡಲ ಸಪೋರ್ಡರ್-9 ಎಂಬ ಟಗ್ ಸಮುದ್ರ ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿತ್ತು.

    9 ಮಂದಿಯ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ಇಂಡಿಯನ್ ಕೋಸ್ಟ್ ಗಾರ್ಡ್, ನೌಕಾದಳದ ಜಂಟಿ ಕಾರ್ಯಾಚರಣೆಯ ಮೂಲಕ ಇಂದು ಹೆಲಿಕಾಪ್ಟರ್ ಹಾಗೂ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪಣಂಬೂರು ಎನ್ ಎಂಪಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗಿದೆ.

    ಇನ್ನುಳಿದ 5 ಮಂದಿಯನ್ನು ಸ್ಪೀಡ್ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ರಕ್ಷಿಸಲ್ಪಟ್ಟ ಟಗ್ ಸಿಬ್ಬಂದಿ ಜೊತೆ ಮಂಗಳೂರಿನ ಎನ್‍ಎಂಪಿಟಿ ಬಂದರ್ ನಲ್ಲಿ ಮಾತುಕತೆ ನಡೆಸಿದ್ರು. ದುರಂತದ ಮಾಹಿತಿ ಸಂಗ್ರಹಿಸಿ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು.

  • ಸಮುದ್ರದಲ್ಲಿ ಸಿಕ್ತು ಕೋಟಿ ಬೆಲೆಬಾಳುವ ತಿಮಿಂಗಿಲ ವಾಂತಿ!

    ಸಮುದ್ರದಲ್ಲಿ ಸಿಕ್ತು ಕೋಟಿ ಬೆಲೆಬಾಳುವ ತಿಮಿಂಗಿಲ ವಾಂತಿ!

    ಕಾರವಾರ: ಕೋಟ್ಯಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ‘ತಿಮಿಂಗಿಲದ ವಾಂತಿ’ಯ (ಅಂಬೇರ್ಗ್ರಿಸ್) ಸುಮಾರು ಒಂದು ಕೆ.ಜಿ. ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

    ಮುರುಡೇಶ್ವರದ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಅವರಿಗೆ ಕಡಲತೀರದಲ್ಲಿ ತೆರಳುವಾಗ ತಿಮಿಂಗಿಲದ ವಾಂತಿ ಕಂಡಿದ್ದು ಕಲ್ಲಿನಾಕಾರದಲ್ಲಿತ್ತು. ಇದನ್ನು ಮನೆಗೆ ತಂದು ತಿಳಿದವರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದ್ದು, ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ ಎಂದು ತಿಳಿದಿದ್ದಾರೆ. ನಂತರ ನಮ್ಮ ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದ ಅವರು, ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ್ ರವರಿಗೆ ಹಸ್ತಾಂತರಿಸಿದ್ದಾರೆ.

    ಏನಿದು ತಿಮಿಂಗಿಳದ ವಾಂತಿ? ವಿಶೇಷ ಏನು?
    ಅಂಬೇರ್ಗ್ರಿಸ್ ಎಂದು ಇಂಗ್ಲೀಷ್ ನಲ್ಲಿ ಹೇಳುವ ಹಾಗೂ ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದರೆ ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೇರ್ಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ.

    ಈ ಕುರಿತು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದ್ದು, ಎಲ್ಲ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು. ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೇರ್ಗ್ರಿಸ್ ಹೊರ ಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ.

    ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೇ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರ ಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ. ಮೀನಿನ ಮೂಳೆಗಳು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ ಎಂದು ವಿವರಿಸಿದರು.

    ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರುತ್ತದೆ. ತಿಮಿಂಗಿಲ ಹೊರಹಾಕಿದ ವಾಂತಿಯು ಮೊದಲು ಭಾರವಾಗಿದ್ದು, ನಂತರ ಸಮುದ್ರದಲ್ಲಿ ರಾಸಾಯನಿಕ ಪ್ರಕ್ರಿಯೆಯಲ್ಲಿ ಗಟ್ಟಿಯಾಗಿ, ನಿಧಾನ ಗತಿಯಲ್ಲಿ ನೀರಿನಲ್ಲಿ ತೇಲುತ್ತದೆ. ಕೆಲವೊಮ್ಮೆ ಪ್ರಖರ ಬಿಸಿಲಿಗೆ ಕರಗುವ ಸಾಧ್ಯತೆಯೂ ಇರುತ್ತದೆ. ಒಂದು ವೇಳೆ ತಿಮಿಂಗಿಲ ಮೀನುಗಳನ್ನು ತಿಂದ ಒಂದೆರಡು ವಾರಗಳಲ್ಲೇ ಎಲುಬುಗಳನ್ನು ಹೊರ ಹಾಕಿದರೆ ಅದು ಅಸಹನೀಯ ವಾಸನೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.

    ಕೋಟಿ ಬೆಲೆ ಏಕೆ?
    ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತವೆ. ಒಂದು ತಿಮಿಂಗಿಲ ಒಂದು ಕೆ.ಜಿ. ಇಂದ ಹತ್ತು ಕೆ.ಜಿ.ಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗದಲ್ಲಿ ಇವು ರಾಸಾಯನಿಕಕ್ಕೆ ಒಳಗಾಗುವುದರಿಂದ ಇದರ ವಾಂತಿ ಯಲ್ಲಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್ ನಂತೆ ಕರಗಿ ಕೆಟ್ಟ ವಾಸನೆ ಬರುತ್ತದೆ. ಆದರೆ ನಂತರ ಸುಂಗಂಧಭರಿತವಾಗಿರುತ್ತದೆ.

    ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಇದಕ್ಕೆ ಅತೀ ಬೇಡಿಕೆ ಇದೆ. ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಇದಕ್ಕೆ ಒಂದು ಕೆ.ಜಿ.ಗೆ ಕೋಟಿ ಬೆಲೆ ಇರುತ್ತದೆ. ಹೀಗಾಗಿ ವೇಲ್ ಗಳ ಮಾರಣ ಹೋಮ ಸಹ ನಡೆಯುತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಬ್ಲ್ಯೂಡಬ್ಲ್ಯೂಎಫ್ ಹಾಗೂ ನಮ್ಮ ದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು, ಮಾರುವುದು ಕಾನೂನು ಬಾಹಿರ, ಶಿಕ್ಷಾರ್ಹ ಅಪರಾಧವಾಗಿದೆ. ಹಲವು ದೇಶಗಳಲ್ಲಿ ಇವುಗಳ ಮಾರಾಟ, ಆಮದಿಗೆ ಅನುಮತಿ ಇದೆ. ಹೀಗಾಗಿ ಇದರ ಮೌಲ್ಯ ಹೆಚ್ಚು ಪಡೆದುಕೊಂಡಿದ್ದು, ಕಳ್ಳಹಾದಿಯಲ್ಲಿ ಸಹ ಮಾರಾಟವಾಗುತ್ತದೆ.

  • ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ್ದ 11 ಭಾರತೀಯ ಮೀನುಗಾರರನ್ನು ಬಂಧಿಸಿರುವ ಘಟನೆ ನಡೆದಿದೆ.

    ಸಮುದ್ರದ ಗಡಿ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನ ಜಲ ಪ್ರದೇಶ ಪ್ರವೇಶಿಸಿದ ಎರಡು ಬೋಟ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿದ್ದ 11 ಮೀನುಗಾರರನ್ನು ಪ್ರಾಥಮಿಕ ವಿಚಾರಣೆ ಬಳಿಕ ಡಾಕ್ಸ್ ಪೊಲೀಸ್ ಕರಾಚಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ಕಡಲ ಭದ್ರತಾ ಪಡೆ (ಪಿಎಂಎಸ್) ಪ್ರಕಟಣೆಯಲ್ಲಿ ತಿಳಿಸಿದೆ.

    ಹಡಗುಗಳು, ವಿಮಾನಗಳು ಮತ್ತು ವೇಗದ ದೋಣಿಗಳು ನಿಯಮಿತವಾಗಿ ಕಡಲ ವಲಯದಲ್ಲಿ ಗಸ್ತು ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳುತ್ತೇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ನೀರಿನಲ್ಲಿ ಹಲವಾರು ಅನಗತ್ಯ ಒಳನುಗ್ಗುವಿಕೆಗಳನ್ನು ಗಮನಿಸಲಾಗಿದೆ ಎಂದು ಪಿಎಂಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಅರೇಬಿಯನ್ ಸಮುದ್ರದಲ್ಲಿ ಕಡಲ ಗಡಿಯನ್ನು ಸ್ಪಷ್ಟವಾಗಿ ಗುರುತಿಸದ ಕಾರಣ ಮೀನುಗಾರರು ಬರುತ್ತಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಆಗಾಗ್ಗೆ ಮೀನುಗಾರರನ್ನು ಬಂಧಿಸುತ್ತಿವೆ. ಮೀನುಗಾರರಿಗೆ ತಮ್ಮ ನಿಖರವಾದ ಸ್ಥಳವನ್ನು ತಿಳಿಯಲು ತಂತ್ರಜ್ಞಾನವನ್ನು ಹೊಂದಿದ ದೋಣಿಗಳಿಲ್ಲ.