Tag: sea

  • ಪಣಂಬೂರ್ ಬೀಚ್‍ನಲ್ಲಿ ಪ್ರಕೃತಿ ವಿಸ್ಮಯ – ಸಮುದ್ರ, ಆಕಾಶದ ನಡ್ವೆ ಸುಂಟರಗಾಳಿ ಆಟ

    ಪಣಂಬೂರ್ ಬೀಚ್‍ನಲ್ಲಿ ಪ್ರಕೃತಿ ವಿಸ್ಮಯ – ಸಮುದ್ರ, ಆಕಾಶದ ನಡ್ವೆ ಸುಂಟರಗಾಳಿ ಆಟ

    ಮಂಗಳೂರು: ನಗರದ ಪಣಂಬೂರು ಬೀಚ್ ನಲ್ಲಿ ಸೋಮವಾರ ಸಂಜೆ ಭಾರೀ ಸುಂಟರಗಾಳಿ ಕಾಣಿಸಿಕೊಂಡಿದ್ದು, ಖಗೋಳ ವಿಸ್ಮಯ ಕಂಡುಬಂದಿದೆ.

    ಭಾರೀ ಸುಂಟರಗಾಳಿಯಿಂದ ಆಕಾಶದಲ್ಲಿ ಕಾರ್ಮುಗಿಲಿನ ನಡುವಿನಿಂದ ಸುರುಳಿ ಸುತ್ತುತ್ತಾ ಸಮುದ್ರಕ್ಕೆ ಇಳಿದ ಸುಂಟರಗಾಳಿ ಬಳಿಕ ದಡದತ್ತ ಸಾಗಿ ತನ್ನ ವೇಗವನ್ನು ಕಳೆದುಕೊಂಡಿತು. ದಡದತ್ತ ಪ್ರವೇಶಿಸುತ್ತಿದ್ದಂತೆ ವೇಗ ಕಳೆದುಕೊಂಡಿದ್ದರಿಂದ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

    ಸಾಮಾನ್ಯವಾಗಿ ಮೋಡ ಹಾಗೂ ಭೂಮಿಯ ಸಂಪರ್ಕದೊಂದಿಗೆ ಮುನ್ನುಗ್ಗುವ ಸುಂಟರಗಾಳಿಗಳು ಅಪಾಯಕಾರಿಯಾಗಿವೆ. ಸಮುದ್ರದಲ್ಲಿ ಈ ಸುಂಟರಗಾಳಿಗಳ ಚಲನೆ ಅತೀ ವೇಗವಾಗಿದ್ದು, ದಡ ತಲುಪುತ್ತಿದ್ದಂತೆ ವೇಗ ಕುಗ್ಗಿ ಬಳಿಕ ಕಣ್ಮರೆಯಾಗುತ್ತವೆ. ಇನ್ನು ಎರಡು ಮೂರು ದಿನಗಳ ಕಾಲ ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಗೋವಾ ಬೀಚ್‍ನಲ್ಲಿ ಇಬ್ಬರು ಪ್ರವಾಸಿಗರು ಸಮುದ್ರ ಪಾಲು -ವಿಡಿಯೋ ನೋಡಿ

    ಗೋವಾ ಬೀಚ್‍ನಲ್ಲಿ ಇಬ್ಬರು ಪ್ರವಾಸಿಗರು ಸಮುದ್ರ ಪಾಲು -ವಿಡಿಯೋ ನೋಡಿ

    ಪಣಜಿ: ಪ್ರವಾಸಿಗರಿಬ್ಬರು ಸಮುದ್ರ ಅಲೆಗಳಲ್ಲಿ ಕೊಚ್ಚಿ ಹೋಗಿರುವ ಘಟನೆ ಗೋವಾದ ಬಾಗಾ ಬೀಚ್ ನಲ್ಲಿ ನಡೆದಿದೆ.

    ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪ್ರವಾಸಿಗರು ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಓರ್ವ ಯುವತಿ, ಇಬ್ಬರು ಯುವಕರು ಜೊತೆಯಾಗಿ ಬಾಗಾ ಬೀಚ್ ನೋಡಲು ಹೋಗಿದ್ದರು. ಈ ವೇಳೆ ಶಶಿಕುಮಾರ್ ಎಂಬ ವ್ಯಕ್ತಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾನೆ.

    ಶಶಿಕುಮಾರ್ ಸಮುದ್ರ ಬಂಡೆಗಳ ಮೇಲೆ ಕುಳಿತು ಹತ್ತಿರದಿಂದ ಸಮುದ್ರ ಅಲೆಗಳನ್ನು ನೋಡಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ಬಂಡೆಗಲ್ಲಿಗೆ ಅಪ್ಪಳಿಸಿದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಶಶಿಕುಮಾರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದೆ.

    https://www.youtube.com/watch?v=Sed8JwoT8kE

  • ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಾರವಾರ: ಮಳೆಯಿಂದಾಗಿ ಟನ್ ಗಟ್ಟಲೆ ಕಸದರಾಶಿ ಕಾರವಾರದ ಸಮುದ್ರಕ್ಕೆ ಸೇರಿ ಸಮುದ್ರದ ನೀರು ಕಪ್ಪಾಗಿದ್ದು, ಆತಂಕ ಮನೆ ಮಾಡಿದೆ.

    ನಗರದ ಬಳಿಯಿರುವ ರವೀಂದ್ರನಾಥ ಟಾಗೋರ್ ಕಡಲತೀರ ನದಿ ಹಾಗೂ ನಗರದ ಕೊಚ್ಚೆ, ಮರದ ಕಸಕಡ್ಡಿಗಳಿಂದ ತುಂಬಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಸ್ಥಳೀಯ ಜನರು ಭಯಗೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

    ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಕಾಳಿನದಿ ಸುತ್ತಮುತ್ತಲಿನ ಹಳ್ಳಿಗಳ ಗದ್ದೆಗಳಲ್ಲಿ ಸುಟ್ಟ ಮರಗಿಡಗಳು ತೇಲಿ ಸಮುದ್ರಕ್ಕೆ ಸೇರಿ ತೀರದ ನೂರು ಮೀಟರ್ ಪ್ರದೇಶದಲ್ಲಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ಯಾವುದೇ ಅಪಾಯವಿಲ್ಲ, ಇನ್ನೆರೆಡು ದಿನ ಇದೇ ರೀತಿ ಸಮುದ್ರದ ನೀರು ಕಪ್ಪಾಗಿರುತ್ತದೆ ಎಂದು ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಎಲ್.ಎನ್ ರಾಥೋಡ್ ರವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಕಳೆದ ನಾಲ್ಕು ತಿಂಗಳಿಂದೆ ಓಖಿ ಚಂಡಮಾರುತದಿಂದಾಗಿ ಇಲ್ಲಿನ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು. ಆದರೆ ಯಾವುದೇ ಜಲಚರಗಳಿಗೆ ಹಾನಿಯಾಗಿರಲಿಲ್ಲ. ಈಗ ಕೊಚ್ಚೆ ನೀರು ಹಾಗೂ ಸುಟ್ಟ ಮರದ ಕಾಂಡಗಳು ಸಮುದ್ರಕ್ಕೆ ಸೇರಿ ದಡದ ಭಾಗಕ್ಕೆ ಬರುತಿದ್ದು, ಯಾವುದೇ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಿದೆ.

  • ನಿಮ್ಮ ಕನಸು ನನಸಾಗಲು ಎಸ್‍ಈಏ ಶಿಕ್ಷಣ ಸಂಸ್ಥೆಗೆ ಸೇರಿ

    ನಿಮ್ಮ ಕನಸು ನನಸಾಗಲು ಎಸ್‍ಈಏ ಶಿಕ್ಷಣ ಸಂಸ್ಥೆಗೆ ಸೇರಿ

    ಬೆಂಗಳೂರು: ಸೌತ್ ಈಸ್ಟ್ ಏಷಿಯನ್ ವಿದ್ಯಾ ಸಂಸ್ಥೆ ಕ್ರಿ.ಶ. 2000ರಲ್ಲಿ ಸ್ಥಾಪನೆಗೊಂಡು ಎಲ್ಲಾ ಅರ್ಹ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ವಿಶಾಲ ದೃಷ್ಟಿ ಕೋನವನ್ನು ಹೊಂದಿದೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಎ. ಕೃಷ್ಣಪ್ಪನವರ ಆಶಯದಂತೆ ಈ ಸಂಸ್ಥೆ ದಶ ದಿಕ್ಕುಗಳಲ್ಲಿ ತನ್ನ ಎಲ್ಲೆ ವಿಸ್ತರಿಸಿ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಾಮೂಹಿಕ ಶಿಕ್ಷಣ ಸಂಸ್ಥೆಯ ಅಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಲಯಗಳು ಈ ಕೆಳಗಿನಂತಿವೆ.

    1. ಎಸ್.ಈ.ಏ. ತಾಂತ್ರಿಕ ಮಹಾ ವಿದ್ಯಾಲಯ.
    2. ಎಸ್.ಈ.ಏ. ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್.
    3. ಎಸ್.ಈ.ಏ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯ.
    4. ಎಸ್.ಈ.ಏ. ಕಾಲೇಜ್ ಆಫ್ ನರ್ಸಿಂಗ್.
    5. ಎಸ್.ಈ.ಏ. ಕಾನೂನು ಮಹಾವಿದ್ಯಾಲಯ.
    6. ಎಸ್.ಈ.ಏ. ಶಿಕ್ಷಣ ಮಹಾವಿದ್ಯಾಲಯ.
    7. ಎಸ್.ಈ.ಏ. ಪದವಿ ಪೂರ್ವ ಮಹಾವಿದ್ಯಾಲಯ.
    8. ಎಸ್.ಈ.ಏ. ಕೈಗಾರಿಕಾ ತರಬೇತಿ ಕೇಂದ್ರ.
    9. ಎಸ್.ಈ.ಏ. ಪ್ರಾಥಮಿಕ ಮತ್ತು ಪ್ರೌಢಶಾಲೆ.
    10.ಎಸ್.ಈ.ಏ. ಇಂಟರ್ ನ್ಯಾಷನಲ್ ಶಾಲೆ(ಸಿಬಿಎಸ್‍ಇ)

    ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಕಲಿಕಾ ಪರಿಸರದ ಮೂಲಕ ಮಕ್ಕಳನ್ನು ತರಬೇತುಗೊಳಿಸಿ ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಿ ಗೆಲ್ಲುವಂತೆ ಪ್ರೇರೇಪಿಸುವ ಗುರಿಯೊಂದಿಗೆ ಈ ಸಂಸ್ಥೆ ಮುನ್ನಡೆಯುತ್ತಿದೆ. ಮಕ್ಕಳು ಸಂಶೋಧನಾ ಸಾಮರ್ಥ್ಯ ವನ್ನು ಬೆಳೆಸಿಕೊಂಡು ಪದವಿಯ ಜೊತೆಗೆ ಸರ್ವಸನ್ನದ್ಧರಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡುವಂತೆ ಅಣಿಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ನಡೆಯುತ್ತಿದೆ.

    ಎಸ್‍ಈಏ ಶಿಕ್ಷಣ ಸಂಸ್ಥೆಯ ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ:http://seaedu.ac.in/

  • ಸೆಲ್ಫಿ ತೆಗೆಯಲು ಹೋಗಿ ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ

    ಸೆಲ್ಫಿ ತೆಗೆಯಲು ಹೋಗಿ ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ

    ಕಾರವಾರ: ಸೆಲ್ಫಿ ತೆಗೆದುಕೊಳ್ಳುವುದು ಇಂದಿನ ಯುವ ಜನತೆಯಲ್ಲಿ ಟ್ರೆಂಡ್ ಆಗಿ ಬದಲಾಗಿದೆ. ಎತ್ತರದ ಸ್ಥಳದಿಂದಲೋ ಅಥವಾ ತುದಿ ಅಂಚಿನಿಂದಲೋ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಸೆಲ್ಫಿ ಅವಘಡಗಳ ಬಗ್ಗೆ ಸಾಕಷ್ಟು ವರದಿಗಳು ಬಿತ್ತರವಾದ್ರೂ ಯುವ ಜನತೆ ಸೆಲ್ಫಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಫೋಟೋ ಮೊರೆ ಹೋಗ್ತಾರೆ. ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಪ್ರವಾಸಿಗನನ್ನು ರಕ್ಷಿಸಿದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ‘ಓಂ ಬೀಚ್’ನಲ್ಲಿ ನಡೆದಿದೆ.

    ರಾಣಿಬೆನ್ನೂರು ಮೂಲದ ಬಸವರಾಜ್ ಎಂ. ಎಂಬವವರೇ ರಕ್ಷಣೆಗೊಳಗಾದ ವ್ಯಕ್ತಿ. 5 ಜನರ ತಂಡ ಪ್ರವಾಸಕ್ಕೆಂದು ಗೋಕರ್ಣದ ಓಂ ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಸಮುದ್ರದ ಬಳಿ ಇದ್ದ ಬಂಡೆಯ ಮೇಲೆ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಬಸವರಾಜ್ ಸಮುದ್ರಪಾಲಾಗಿದ್ದರು.

    ಬಸವರಾಜ್ ಸಮುದ್ರಕ್ಕೆ ಬೀಳುತ್ತಿದ್ದನ್ನು ಸ್ಥಳದಲ್ಲಿದ್ದ ದ ಲೈಫ್ ಗಾರ್ಡ್ ಗಳು ಗಮನಿಸಿದ್ದಾರೆ. ಕೂಡಲೇ ಸಮುದ್ರಕ್ಕೆ ಇಳಿದ ಲೈಫ್ ಗಾರ್ಡ್ ಗಳಾದ ಪಾಂಡುರಂಗ ಹಾಗೂ ಪ್ರವೀಣ್ ಇಬ್ಬರೂ ಬಸವರಾಜ್ ಅವರನ್ನು ರಕ್ಷಣೆ ಮಾಡಿದ್ದಾರೆ.

  • ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಕೈರೋ: ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಸಲುವಾಗಿ ರಷ್ಯಾ ಮಹಿಳೆ ರೆಸಾರ್ಟ್ ಗೆ ಪ್ರಯಾಣಿಸಿ ನಂತರ ಈಜಿಪ್ಟಿನ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಸಂಗತಿವೊಂದು ನಡೆದಿದೆ.

    ಹದಿಯಾ ಹೋಸ್ನಿ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಉತ್ತರ ಶಹರ್ ಎಲ್-ಶೇಖ್ ನ ಡಹಾಬ್ ನಲ್ಲಿರುವ ತನ್ನ ಚಿಕ್ಕಪ್ಪನ ಅಪಾರ್ಟ್ ಮೆಂಟ್‍ನ ಬಾಲ್ಕನಿಯಿಂದ ಡೆಲಿವರಿ ಸಮಯದಲ್ಲಿನ ಫೋಟೋಗಳನ್ನು ತೆಗೆಯಲಾಗಿದೆ.

    ಮಗುವಿಗೆ ಸಮುದ್ರದಲ್ಲಿ ಜನ್ಮ ನೀಡಬೇಕು ಎಂದು ಮೊದಲೇ ತಯಾರಿ ಮಾಡಿಕೊಂಡಿದ್ದೇವು, ಫೋಟೋಗಳಲ್ಲಿ ವೃದ್ಧರೊಬ್ಬರು ಮಗುವನ್ನು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಈ ವ್ಯಕ್ತಿ ನೀರಿನಲ್ಲಿ ಡೆಲಿವರಿ ಮಾಡಿಸುವುದರಲ್ಲಿ ಸ್ಪೆಷಲಿಸ್ಟ್ ಎಂದು ಹದಿಯಾ ಹೇಳಿದ್ದಾರೆ.

    ಮಗುವಿಗೆ ಜನ್ಮ ನೀಡಿ ಕೆಲವೇ ನಿಮಿಷಗಳಲ್ಲಿ ಹದಿಯಾ ಕೂಡ ಸಮುದ್ರದಿಂದ ಹೊರಬಂದಿದ್ದಾರೆ. ಅವರು ಸಮುದ್ರದಿಂದ ಹೊರಬಂದಿದ್ದನ್ನು ನೋಡಿದ್ದರೆ, ಈಜಲು ಹೋಗಿ ಹಿಂತಿರುಗಿ ಬಂದ ಮಹಿಳೆಯಂತೆ ಆರಾಮಾಗಿ ಸಮುದ್ರದಿಂದ ಹೊರಬಂದಿರುವುದನ್ನು ಕಾಣಬಹುದು.

    ಹದಿಯಾ ಮಗುವಿಗೆ ಜನ್ಮ ನೀಡಲು ಮೊದಲು ಸಮುದ್ರಕ್ಕೆ ಈಜಲು ಹೋದರು. ಅವರ ಹಿಂದೆಯೇ ಆಕೆಯ ಪತಿ ಹಾಗೂ ನೀರಿನಲ್ಲಿ ಡೆಲಿವರಿ ಮಾಡುವ ವೈದ್ಯರು ಹಿಂದೆ ಹೋಗಿ ಡೆಲಿವರಿ ಮಾಡಿಸಿದ್ದರು ಎಂದು ವರದಿಯಾಗಿದೆ.

    ಮಗು ಜನಿಸಿದ ಮೇಲೆ ಶಿಶುವನ್ನು ಬೌಲ್‍ನಲ್ಲಿಟ್ಟರು. ನಂತರ ವೈದ್ಯರು ಹಾಗೂ ಪತಿ ಶಿಶುವನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಹದಿಯಾ ಕೂಡ ತಮ್ಮ ಕುಟುಂಬದ ಜೊತೆ ಸೇರಿಕೊಂಡರು ಎಂದು ಪತ್ರಿಕೆವೊಂದು ವರದಿ ಮಾಡಿದೆ.

    ಹದಿಯಾ ಈ ಫೋಟೋಗಳನ್ನು ಶನಿವಾರ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. 2,000ಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಗಳು ಬಂದಿವೆ. ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.

  • ಸತತ ನಾಲ್ಕೂವರೆ ಗಂಟೆಗಳ ಬಳಿಕ ಗೋವಾ ಸಮುದ್ರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ

    ಸತತ ನಾಲ್ಕೂವರೆ ಗಂಟೆಗಳ ಬಳಿಕ ಗೋವಾ ಸಮುದ್ರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ

    ಬೆಂಗಳೂರು: ಸಮುದ್ರದ ಮಧ್ಯೆ ಬೋಟ್ ಕೆಟ್ಟುನಿಂತ ಪರಿಣಾಮವಾಗಿ ಸತತ ನಾಲ್ಕು ಗಂಟೆಗಳ ಕಾಲ ಸಹಾಯಕ್ಕಾಗಿ ಕಾದು ನಿಂತಿದ್ದ ಕನ್ನಡಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋವಾದ ರಾಯಬಾಗ್ ಪ್ರದೇಶದಲ್ಲಿ ನಡೆದಿದೆ.

    ನಗರದ ಪೀಣ್ಯ ಪ್ರದೇಶದಿಂದ ಸುಮಾರು 47 ಕನ್ನಡಿಗರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರವನ್ನು ನೋಡಲು ಗೋವಾದ ಪಣಜಿಯ ರಾಯಬಾಗ್ ನ ಸಮುದ್ರಕ್ಕೆ ಬೋಟ್ ನಲ್ಲಿ ಹೋಗುತ್ತಿದ್ದಾಗ  ಪ್ರಯಾಣದ  ಮಧ್ಯೆ ಕೆಟ್ಟು ನಿಂತಿದೆ.

    ಈ ಸಂದರ್ಭದಲ್ಲಿ ಎರಡು ಗಂಟೆಗಳಾದರೂ ಅಲ್ಲಿನ ಸಿಬ್ಬಂದಿ ನೆರವಿಗೆ ಬಾರದೇ ಇದ್ದ ಕಾರಣ ಪ್ರವಾಸಿಗರಲ್ಲಿ ಹೆದರಿಕೆ ಆರಂಭವಾಗಿದೆ. ಬೋಟ್ ನಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಅತಂಕ ಹೆಚ್ಚಳವಾಗಿದೆ. ಅಲ್ಲದೇ ಸಂಜೆಯಾಗುತ್ತಿದ್ದಂತೆ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿದ್ದು, ಅಲೆಗಳ ವೇಗಕ್ಕೆ ಬೇಟ್ ಅಲುಗಾಡತೊಡಗಿ ಚಲಿಸುತ್ತಿದ್ದ ಕಾರಣ ಮತ್ತಷ್ಟು ಅತಂಕ ಉಂಟಾಗಿತ್ತು.

    ಸುಮಾರು ನಾಲ್ಕೂವರೆ ಗಂಟೆಗಳ ಬಳಿಕ ಆ ಪ್ರದೇಶಕ್ಕೆ ತೆರಳಿದ ಮತ್ತೊಂದು ಬೋಟ್ ನಲ್ಲಿದ್ದ ಕನ್ನಡಿಗರು ಇವರ ಧ್ವನಿ ಕೇಳಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.

  • ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    – ದೀಪಕ್ ಜೈನ್
    ಉಡುಪಿ: ಓಖಿ ಚಂಡಮಾರುತ ತಮಿಳ್ನಾಡು ಮತ್ತು ಕೇರಳ ರಾಜ್ಯದ ನಿದ್ದೆಗೆಡಿಸಿದೆ. ಕರ್ನಾಟಕದ ಕರಾವಳಿಗರಿಗೆ ಚಳಿ ಹಿಡಿಸಿದೆ. ಸಮುದ್ರದಲ್ಲೆದ್ದ ಸುಳಿಗಾಳಿಗೂ ಬಾನಿನಲ್ಲಿರುವ ಚಂದ್ರನಿಗೂ ಲಿಂಕ್ ಇದೆ. ಸಮುದ್ರದ ಅಲೆಗಳನ್ನು ಫುಲ್ ಕಂಟ್ರೋಲ್ ಮಾಡೋನೇ ಆ ಚಂದ ಮಾಮ.

    ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸಾಮಾನ್ಯವಾಗಿ ಕಡಲು ಎಂದಿನಂತೆ ಇರೋದಿಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಈ ಬಾರಿ ಹುಣ್ಣಿಮೆ ಜೊತೆ ಓಖಿ ಚಂಡಮಾರುತ ರೌದ್ರ ನರ್ತನ ತೋರುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಓಖಿ ಹುಣ್ಣಿಮೆ ಸಂದರ್ಭದಲ್ಲೇ ಹುಟ್ಟಿಕೊಂಡಿರೋದರಿಂದ ಅಪಾಯ ಜಾಸ್ತಿ.

    ಓಖಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ತಟ್ಟಿದೆ. ಉಡುಪಿಯಲ್ಲಿ ಹುಣ್ಣಿಮೆಯ ಹಿಂದಿನ ದಿನ (ಡಿ.2) ಕಡಲು ತನ್ನ ರೌದ್ರ ನರ್ತನ ತೋರಿದೆ. ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ.

    200 ನಾಟಿಕಲ್ ಮೈಲಿ ದೂರ ಚಂಡಮಾರುತದ ಸುಂಟರಗಾಳಿ ಇದ್ದರೂ, ಹುಣ್ಣಿಮೆ ಎಫೆಕ್ಟ್ ನಿಂದ ಸಮುದ್ರ ತೀರದಲ್ಲಿ ಅಲೆಗಳು ಉಬ್ಬುಬ್ಬಿ ಬರುತ್ತಿದೆ. ಅಬ್ಬರದ ಅಲೆಗಳಿಗೆ ಹೆದರಿ ಕಡಲತೀರದ ಜನ ಬೇರೆಡೆ ಶಿಫ್ಟ್ ಆಗುತ್ತಿದ್ದಾರೆ. ಹುಣ್ಣಿಮೆಯ ಭಯವೂ ಜನರನ್ನು ಕಾಡುತ್ತಿದೆ.

    ಸಮುದ್ರಕ್ಕೂ ಚಂದ್ರನಿಗೂ ಸಂಬಂಧ!: ಸಮುದ್ರಕ್ಕೂ ಚಂದ್ರನಿಗೂ ಸಂಬಂಧವಿದೆ. ಚಂದ್ರನ ಚಲನೆಯ ಮೇಲೆಯೇ ಎಲ್ಲಾ ರಾಶಿ, ನಕ್ಷತ್ರಗಳು ನಿಂತಿರುವುದು. ತಿಂಗಳಿಗೊಂದು ಹುಣ್ಣಿಮೆ ಅಮವಾಸ್ಯೆ ಬರುತ್ತದೆ. 15 ದಿನಕ್ಕೊಮ್ಮೆ ಸಮುದ್ರದ ಮೇಲೆ ಎಫೆಕ್ಟ್ ಆಗುತ್ತದೆ. ಸಾಗರದ ನೀರು ದಡಕ್ಕೆ ಹತ್ತಿರಾಗೋದು ಈ ಎರಡು ದಿನಗಳಲ್ಲೇ ಜಾಸ್ತಿ.

    ಅಮಾವಾಸ್ಯೆಯ ಹಿಂದಿನ ಮತ್ತು ನಂತರದ ದಿನ, ಹುಣ್ಣಿಮೆ ಮತ್ತು ಎರಡು ದಿನ ಅಲೆಗಳ ಸಂಖ್ಯೆ ಮತ್ತು ಅಪ್ಪಳಿಸುವ ರಭಸ ಹೆಚ್ಚಾಗಿರುತ್ತದೆ. ಹೀಗಾಗಿ ಓಖಿ ಮತ್ತು ಹುಣ್ಣಿಮೆ ಒಟ್ಟಾಗಿದ್ದು, ಅರಬ್ಬೀ ಸಮುದ್ರದ ಅಬ್ಬರ ಹೆಚ್ಚಾಗಲು ಒಂದು ಕಾರಣವಾಗಿದೆ. ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಲಪ್ಪಾ ಎಂದು ಸಮುದ್ರ ರಾಜನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಕಾಪು, ಪಡುಕೆರೆ, ಮಲ್ಪೆ, ಪಿತ್ರೋಡಿ ಆಸುಪಾಸಿನಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳನ್ನು ಮೇಲಕ್ಕೆ ಶಿಫ್ಟ್ ಮಾಡಿದ್ದೇವೆ. ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ಕೊಟ್ಟಿರುವ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದೇವೆ ಎಂದು ಪಿತ್ರೋಡಿ ಸಂಜೀವ ಸಾಲಿಯಾನ್ ಮಾಹಿತಿ ನೀಡಿದರು.

    ಪ್ರತೀ ಅಮವಾಸ್ಯೆ – ಹುಣ್ಣಿಮೆ ದಿನ ಬರುವಾಗ ಕಡಲು ಕಪ್ಪಗೆ ಮತ್ತು ಬೆಳ್ಳಗೆ ಆಗುತ್ತದೆ. ಈ ಬಾರಿ ಹುಣ್ಣಿಮೆ ದಿನದಂದೇ ದಕ್ಷಿಣದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಾವು ಕಸುಬಿಗೆ ಇಳಿಯಲು ಸ್ವಲ್ಪ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

    ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಕೊಂಚಮಟ್ಟಿನ ರೌದ್ರಾವತಾರ ತೋರಿರುವ ಕಡಲು, ಹುಣ್ಣಿಮೆ ರಾತ್ರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬ ಕುತೂಹಲ ಮತ್ತು ಆತಂಕ ಕರಾವಳಿಯ ಜನರಲ್ಲಿ ಇದೆ. ಅದರಲ್ಲೂ ಸಮುದ್ರವನ್ನೇ ಜೀವನ ಮಾಡಿಕೊಂಡಿರುವ, ತಟದಲ್ಲಿ ಮನೆ ಕಟ್ಟಿಕೊಂಡಿರುವ ಮೀನುಗಾರರಿಗೆ ಆತಂಕ ಕೊಂಚ ಹೆಚ್ಚೇ ಇದೆ.

  • ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೋಗುವ ಪ್ರವಾಸಿ ಬೋಟ್ ಸಂಚಾರ ನಿಷೇಧಿಸಲಾಗಿದೆ. ಕಳೆದ ರಾತ್ರಿಯಿಂದ ರಸ್ತೆಗೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ತೀರದ ಜನ ಆತಂಕಕ್ಕೀಡಾಗಿದ್ದಾರೆ.

    ಓಖಿ ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಓಖೀ ಚಂಡಮಾರುತ ರಾಜ್ಯದ ಕರಾವಳಿಯಲ್ಲಿ ಹಾದು ಹೋಗುತ್ತಿರುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಬದಲಾವಣೆಯಾಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಇನ್ನೆರಡು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ರಾತ್ರಿ ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಮೀನುಗಾರಿಕ ಬೋಟ್‍ಗಳು ಮತ್ತೆ ಬಂದರು ಸೇರುತ್ತಿದೆ. ಕೇರಳ, ತಮಿಳುನಾಡಿನ ಬೋಟ್‍ಗಳು, ಮೀನುಗಾರರು ಆಶ್ರಯಕ್ಕಾಗಿ ಉಡುಪಿಯ ಮಲ್ಪೆ ಬಂದರಿನತ್ತ ಧಾವಿಸಿ ಬರುತ್ತಿದ್ದಾರೆ. ಮಲ್ಪೆ ಬೀಚ್‍ನಲ್ಲಿಯೂ ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ನೀರಿನಲ್ಲಿ ನೀರಾಟ ಆಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

    ಜಾಗ್ರತೆ, ಜೀವದ ಜೊತೆ ಚೆಲ್ಲಾಟ ಬೇಡ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆಯ ಲೈಫ್ ಗಾರ್ಡ್ ಮೋಹನ್, ಹೊರ ಜಿಲ್ಲೆಯ ಪ್ರವಾಸಿಗರನ್ನು ನಿಯಂತ್ರಿಸೋದೇ ಸವಾಲು. ಹೇಳಿದರೂ ಸಮುದ್ರಕ್ಕೆ ಇಳಿದು ಬಿಡುತ್ತಾರೆ. ಅಪಾಯ ಎಂದು ಬೋರ್ಡ್ ಹಾಕಿದ್ರೂ ಅದನ್ನು ಜನ ಗಣನೆಗೆ ತೆಗೆದುಕೊಳ್ಳಲ್ಲ ಅಂತ ಅಸಮಾಧಾನಗೊಂಡರು.

    ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವುದರಿಂದ ಕಸಗಳು ದಡ ಸೇರುತ್ತಿದೆ. ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ತೆರಳುವ ಪ್ರವಾಸಿ ಬೋಟ್‍ಗಳ ಸಂಚಾರ ನಿಷೇಧಿಸಲಾಗಿದೆ. ಇಂದು ಪ್ರವಾಸಿಗರಿಗೆ ಐಲ್ಯಾಂಡ್ ನೋಡುವ ಭಾಗ್ಯ ಸಿಗುವುದಿಲ್ಲ. ನಾಳೆ ಮಧ್ಯ ರಾತ್ರಿವರೆಗೂ ಹವಾಮಾನ ಏರುಪೇರಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದಕ್ಕೆ ಸೂಚಿಸಲಾಗಿದೆ. ಬೀಚ್‍ನಲ್ಲಿರುವ ಲೈಫ್ ಗಾರ್ಡ್‍ಗಳು ಪ್ರವಾಸಿಗರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಮೈಕ್ ಮೂಲಕ ಓಖಿ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

    ಓಖಿ ಚಂಡಮಾರುತ ರಾಜ್ಯ ಕರಾವಳಿಯಿಂದ ಬಹುದೂರದಲ್ಲಿ ಸಾಗುತ್ತಿದ್ದು, ಲಕ್ಷದ್ವೀಪದಿಂದ ಗುಜರಾತ್ ಕಡೆಗೆ ಪಯಣಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮ್ಯಾಪ್ ಸಿದ್ಧಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟು ಗೊಂದಲ ನಿವಾರಣೆಗೆ ಯತ್ನಿಸುತ್ತಿದೆ. ಒಟ್ಟಿನಲ್ಲಿ ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

     

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    https://www.youtube.com/watch?v=QC37Q2pdg9w

  • ಮಂಗಳೂರು ಬೀಚ್‍ಗೆ ಬಂತು ರಾಶಿ ರಾಶಿ ಭೂತಾಯಿ ಮೀನುಗಳು!

    ಮಂಗಳೂರು ಬೀಚ್‍ಗೆ ಬಂತು ರಾಶಿ ರಾಶಿ ಭೂತಾಯಿ ಮೀನುಗಳು!

    ಮಂಗಳೂರು: ಭೂತಾಯಿ ಮೀನುಗಳ ರಾಶಿ ಕಡಲ ದಡಕ್ಕೆ ಬಂದಿರುವ ಘಟನೆ ಮಂಗಳೂರಿನ ಉಳ್ಳಾಲದ ಕಡಲ ಕಿನಾರೆಯಲ್ಲಿ ನಡೆದಿದೆ.

    ಭೂತಾಯಿ ಮೀನುಗಳು ಸಮುದ್ರದ ದಡಕ್ಕೆ ಬರುವುದನ್ನು ನೋಡಿ ಸ್ಥಳಿಯರು ಅವುಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮೀನುಗಳು ಗುಂಪಾಗಿರುತ್ತವೆ. ಈ ವೇಳೆ ದಾರಿ ತಪ್ಪಿ ಸಮುದ್ರ ಅಲೆಗಳೊಂದಿಗೆ ದಡಕ್ಕೆ ಬಂದು ಬೀಳುತ್ತವೆ. ದಡಕ್ಕೆ ಆಗಮಿಸುವ ಮೀನುಗಳು ಮತ್ತೆ ಸಮುದ್ರಕ್ಕೆ ತೆರಳಲು ಸಾಧ್ಯವಾಗುವುದಿಲ್ಲ.

    ಇಂತಹ ಅಪರೂಪದ ವಿದ್ಯಮಾನ ಕೆಲವೊಮ್ಮೆ ಸಂಭವಿಸುತ್ತೆ. ಮೀನು ದಾರಿ ತಪ್ಪಿ ತೀರದ ದಿಕ್ಕು ಹಿಡಿದಾಗ ಕೊನೆಗೆ ತೆರೆಯ ಅಬ್ಬರಕ್ಕೆ ಸಿಲುಕಿ ಈ ರೀತಿ ಆಗುತ್ತದೆ ಎಂದು ಮೀನುಗಾರರು ಹೇಳುತ್ತಾರೆ.