Tag: SDPI

  • ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ: ಯು.ಟಿ.ಖಾದರ್

    ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ: ಯು.ಟಿ.ಖಾದರ್

    ಮಂಗಳೂರು: ಬೆಂಗಳೂರಿನಲ್ಲಿ ಹಿಂದೂ ನಾಯಕರ ಹತ್ಯೆಗೈಯಲು ಸಂಚು ರೂಪಿಸಿದ್ದು ಯಾರೇ ಆಗಲಿ ಅಂತಹ ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡ ಬೆಂಬಲಿಸಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು, ಕೊಲೆಗೆ ಸಂಚು ರೂಪಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರ ಬಂಧನವಾಗಿರುವುದು ಸರಿಯಾದ ಕ್ರಮ. ಕಾನೂನು ಎಲ್ಲರಿಗೂ ಒಂದೇ. ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂಬುದನ್ನು ಸರ್ಕಾರ ಕೂಡ ಅರ್ಥ ಮಾಡಿಕೊಳ್ಳಬೇಕು. ಜನರು ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ

    ಎಸ್.ಡಿ.ಪಿ.ಐ ನಿಷೇಧಿಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನಿಷೇಧಿಸುವ ಬಗ್ಗೆ ಸರ್ಕಾರ ಹೇಳಬೇಕು. ಪ್ರತಿಪಕ್ಷದಲ್ಲಿದ್ದಾಗ ಅವರೇ ನಿಷೇಧದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದ್ದೇ ಸರ್ಕಾರ ಇದೆ. ಹೀಗಾಗಿ ಬೇರೆಯವರ ಬಳಿ ಕೇಳುವುದಕ್ಕೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

    ಆರೋಪಕ್ಕೆ ಸಾಕ್ಷ್ಯಾಧಾರ ನೀಡಿ ಜನರಿಗೆ ವಿಶ್ವಾಸ ಬರುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು. ಸತ್ಯಾಂಶ ಇದ್ದರೆ ಯಾರು ಕೂಡ ಅವರಿಗೆ ಬೆಂಬಲಿಸಲ್ಲ ಎಂದು ಹೇಳಿದರು.

  • ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ

    ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ

    ಬೆಂಗಳೂರು: ಟೌನ್‍ಹಾಲ್ ಎದುರು ನಡೆದ ಸಿಎಎ ಪರ ಪ್ರತಿಭಟನೆ ವೇಳೆ ಸಂಸದ ತೇಜಸ್ವಿಸೂರ್ಯ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಎಸ್‍ಡಿಪಿಐ ಕಾರ್ಯಕರ್ತರು ಸ್ಕೆಚ್ ಹಾಕಿದ್ದರು ಎಂಬ ನಗರ ಪೊಲೀಸ್ ಆಯುಕ್ತರು ಅಘಾತಕಾರಿ ಮಾಹಿತಿ ಇಂದು ಹೊರಹಾಕಿದ್ದಾರೆ. ಆದರೆ ಘಟನೆಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ ಎಂದು ಎಸ್‍ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲಿಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ತುಂಬೆ ಅವರು, ಪ್ರಕರಣದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಬಂಧಿತರಾಗಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಂದ ಪಡೆದಿದ್ದೇವೆ. ಆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದು, ಆ ವೇಳೆ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರಲ್ಲ ಎಂಬುವುದು ತಿಳಿದು ಬಂದಿದೆ ಎಂದರು. ಇದನ್ನು ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

    ನಮ್ಮ ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈ ಆರೋಪವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಾಬೀತು ಮಾಡದಿದ್ದರೆ ಅವರು ಒಬ್ಬ ಸುಳ್ಳುಗಾರ ಎನಿಸಿಕೊಳ್ಳುತ್ತಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಅವರ ಅಧಿಕಾರದಲ್ಲಿ ಮೇಲೇರಲು, ಯಾರನ್ನೋ ಮೆಚ್ಚಿಸಲು ಈ ಆರೋಪ ಮಾಡಿದ್ದಾರೆ. ಮಾಧ್ಯಮಗಳು ಕೂಡ ಸುಖಾಸುಮ್ಮನೆ ವರದಿ ಮಾಡುತ್ತಿದೆ. ನಮ್ಮ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರೆ ಎಂದಾದರೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಕಾನೂನಿನ ಅಡಿ ಶಿಕ್ಷೆ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು. ಕಮಿಷನರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದರೆ ನಾವು ಅವರು ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು. ಇದನ್ನು ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಬಿಜೆಪಿ ಪಕ್ಷದವರಿಗೆ ಸೈದ್ಧಾಂತಿಕವಾಗಿ ನಮ್ಮನ್ನು ಎದುರಿಸಲು ಸಾಧ್ಯವಾಗದೇ ಹೀಗೆಲ್ಲಾ ಮಾಡುತ್ತಿದ್ದಾರೆ. ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರು ಎಂದು ಹೇಳಲು ಕಮಿಷನರ್ ಅವರ ಬಳಿ ಯಾವ ಸಾಕ್ಷಿಯಿದೆ ಇದೆ. ಈ ಆರೋಪಿಗಳಿಗೂ ಎಸ್‍ಡಿಪಿಐಗೂ ಸಂಬಂಧವೇ ಇಲ್ಲ. ಆದರೆ ಇದು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿರುವ ಆರೋಪ. ಭಾಸ್ಕರ್ ರಾವ್ ಜೊತೆರೊಂದಿಗೆ ಯಾರಿದ್ದಾರೆ ಎಂಬುವುದು ನಮಗೂ ಗೊತ್ತಿದೆ ಎಂದರು. ಇದೇ ವೇಳೆ ಮಂಗಳೂರು ಕಮಿಷನರ್ ಹರ್ಷ ವಿರುದ್ಧ ಕ್ರಮ ಕೈಗೊಂಡಿದ್ದಾರಾ ಎಂದು ತುಂಬೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಓದಿ: ದೇಶ ವಿರೋಧಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಹೆಮ್ಮೆ ಅನಿಸ್ತಿದೆ: ಸೂಲಿಬೆಲೆ

  • ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರು ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರು ಯಾರಾದರೂ ಕಾನೂನಿನ ರೀತಿಯ ಕ್ರಮ ಕೈಗೊಳ್ಳಬೇಕು. ಆದರೆ ಸಿಎಎ ಹಾಗೂ ಎನ್.ಸಿ.ಆರ್ ವಿಚಾರವಾಗಿ ಎಲ್ಲೇ ಗಲಾಟೆ ನಡೆದರೂ ಅದು ಎಸ್‍ಡಿಪಿಐ ಅವರು ಮಾಡಿದ್ದು ಎಂದು ಹೇಳುತ್ತಾರೆ ಎಂದು ಎಸ್‍ಡಿಪಿಐ ಪಕ್ಷದ ಬಿಬಿಎಂಪಿ ಸದಸ್ಯ ಮುಜಾಹೀದ್ದಿನ್ ಪಾಷ ಬೇಸರ ವ್ಯಕ್ತಪಡಿಸಿದ್ದಾರೆ.

    ಇದು ರಾಜಕೀಯ, ನಮ್ಮ ಪಕ್ಷದವರು, ಸಂಘಟನೆಯವರು ಈ ರೀತಿ ಯಾವುದೇ ಕೆಲಸದಲ್ಲಿ ಭಾಗಿಯಾಗಿಲ್ಲ. ವರುಣ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿರುವುದು ಯಾರು ಎಂದು ನಮಗೆ ಗೊತ್ತಿಲ್ಲ. ಈಗಾಗಲೇ ನಾನು ಅವರು ನಮ್ಮ ಸಂಘಟನೆಯ ಕಾರ್ಯಕರ್ತರಾ, ಅಲ್ವಾ ಎಂದು ಹೇಳಲು ಆಗುವುದಿಲ್ಲ. ನನಗೆ ಅವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಮತ್ತು ಆರ್.ಎಸ್.ಎಸ್ ಅವರು ಸ್ವಾತಂತ್ರ್ಯ ಬಂದಾಗಿನಿಂದ ಯಾವೆಲ್ಲಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುವುದು ಜನರಿಗೆ ತಿಳಿದಿದೆ ಎಂದು ಹೇಳಿದರು.

    ನಮ್ಮ ಪಕ್ಷದ ಮೇಲೆ ಬೇಕು ಎಂದೇ ಷಡ್ಯಂತ್ರ ಮಾಡುತ್ತಿದ್ದಾರೆ. ನಾವೂ ಯಾರಿಗೂ ಸಮಾಜ ದ್ರೋಹಿ ಕೆಲಸಕ್ಕೆ ತರಬೇತಿ ನೀಡಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದರು. ಇದನ್ನು ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

  • ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಬೆಂಗಳೂರು: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ, ನಾವು ಕಾಳಿಯನ್ನು ಪೂಜೆ ಮಾಡುವವರು ಸಾವಿಗೆ ಹೆದರಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮೇಲೆ ಕೊಲೆಯ ರೂಪಿಸಿದ ಸಂಚು ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರೋಪಿಗಳ ಎಲ್ಲಾ ಪ್ರಯತ್ನ ಕೂಡ ಶೇಕಡ 100ರಷ್ಟು ವ್ಯರ್ಥ ಪ್ರಯತ್ನ. ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ. ಕಾಳಿಯನ್ನು ಅಂದರೆ ಮೃತ್ಯು ದೇವತೆಯನ್ನು ಪೂಜೆ ಮಾಡಿ ಬಂದು ಕುಳಿತ ನಮಗೆ ಮೃತ್ಯವಿನ ಹೆದರಿಕೆ ಖಂಡಿತವಾಗಿಯೂ ಇಲ್ಲ. ಈ ರಾಷ್ಟ್ರವನ್ನು ಕಟ್ಟುವಂತ ಕೆಲಸವನ್ನು ನಾವು ಮಾಡುತ್ತೇವೆ. ಅವರು ಏನೇ ಮಾಡಿದರೂ ಬಗ್ಗುವ ಜೀವ ನಮ್ಮದಲ್ಲ ಎಂದು ಆರೋಪಿಗಳಿಗೆ ಹೇಳಲು ನಾನು ಇಚ್ಛಿಸುತ್ತೇನೆ ಅಂತ ಪ್ರತಿಕ್ರಯಿಸಿದರು.

    ಸಿಎಎ ಪರ ಜನಜಾಗೃತಿ ವೇಳೆ ದೊಡ್ಡ ಗಾತ್ರದ ಕಲ್ಲು ಬಂದು ನನ್ನ ಮೇಲೆ ಬಿತ್ತು. ಇಷ್ಟೆಲ್ಲ ಜನರ ನಡುವೆ ಗುರಿಯಿಟ್ಟು ನನಗೆ ಹೊಡೆಯಲು ಅವರಿಗೆ ಸಾಧ್ಯವಾಯ್ತಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿ. ನನ್ನ ಪ್ರಕಾರ ಆರೋಪಿಗಳು ಮೊದಲೇ ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ ಅಂದು ನನಗೆ ಏನೂ ಮಾಡಲು ಆಗಲಿಲ್ಲ ಎಂದು ಕಲ್ಲು ಹೊಡೆದಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ತಿಳಿಸಿದ್ದೆ. ಅವರು ನನಗೆ ಸಹಕರಿಸಿ ನನ್ನ ಮನೆ, ಕಚೇರಿಗೆ ಭದ್ರತೆ ಒದಗಿಸಿದ್ದರು. ಅವರಿಗೆ ಧನ್ಯವಾದ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

    ಕೊಲ್ಲಬೇಕೆನ್ನುವ ಮಾನಸಿಕತೆ ಇರುವುದು ಕ್ರಿಮಿನಲ್ ಸಂಗತಿ. ಇಂತಹ ಮನಸ್ಥಿತಿ ಇರುವವರನ್ನು ನಿಷೇಧಿಸುವುದು ಖಂಡಿತವಾಗಿಯು ಅಗತ್ಯವಾಗಿದೆ. ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು. ಕರ್ನಾಟಕ ತುಂಬಾ ಶಾಂತಿಯುತವಾದ ಸುಂದರ ಜಾಗ. ಯಾವುದಕ್ಕೂ ನಾವು ನಮ್ಮ ರಾಜ್ಯವನ್ನು ಕ್ರಿಮಿನಲ್ ಮನಸ್ಥಿತಿ ಇರುವವರ ನಾಡಾಗಲು ಬಿಡಬಾರದು. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ವರದಿಗಳನ್ನು ನೋಡುತ್ತಿದ್ದೇನೆ. ಈ ರೀತಿ ಕೃತ್ಯಗಳಿಗೆ ಮೈಸೂರು, ಮಂಗಳೂರು, ಉಡುಪಿ ಹೀಗೆ ರಾಜ್ಯದ ಹಲವು ನಗರಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಈ ಹೊಸ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರನ್ನು ಮಟ್ಟಹಾಕಬೇಕು. ಯಾವುದೇ ಕಾರಣಕ್ಕೂ ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು ಎಂದು ಸೂಲಿಬೆಲೆ ಸರ್ಕಾರಕ್ಕೆ ಮನವಿ ಮಾಡಿದರು.

    ಇದು ಕೊಲೆಯ ಮಾನಸಿಕತೆ. ಪ್ರತಿಭಟನೆ ಎನ್ನುವುದು ಕೇವಲ ಪ್ರತಿಭಟನೆ ಅಷ್ಟೇ. ಆದರೆ ಅದನ್ನು ಕೊಲೆ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗೋದು ಒಂದು ಕೆಟ್ಟ ಪ್ರಯತ್ನ, ಹುಚ್ಚುತನ. ಈ ರೀತಿ ಪ್ರಯತ್ನವನ್ನು ಬುಡದಿಂದಲೇ ಚಿವುಟಿ ಹಾಕಬೇಕು. ನನ್ನ ಪ್ರಕಾರ ದೇಶವನ್ನು ತುಂಡರಿಸಿ ಆದರೂ ಅಧಿಕಾರ ಪಡೆಯಬೇಕು ಎಂದು ಆಲೋಚಿಸುವವರು ನೀಚರು. ಅಧಿಕಾರಕ್ಕಾಗಿ ಈ ರೀತಿ ಕೊಲೆ ಯತ್ನಕ್ಕೆ ಪ್ರಯತ್ನಿಸುವವರು ಕೊಲೆ ಮಾಡುವವರಿಗಿಂತ ನೀಚರು. ಈ ರೀತಿ ನೀಚ ಪ್ರಯತ್ನ ಮಾಡಬಾರದಿತ್ತು. ಆದರೆ ಇನ್ನಾದರೂ ಇವರೆಲ್ಲ ತಿದ್ದುಕೊಂಡು ರಾಷ್ಟ್ರದ ಕುರಿತು ಕೆಲಸ ಮಾಡಲು ಮುಂದಾದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಾನು ಘಟನೆ ನಡೆದ ದಿನ ಸುಮಾರು 10:30ರ ಹೊತ್ತಿಗೆ ಟೌನ್‍ಹಾಲ್‍ಗೆ ಬಂದೆ. ಆದರೆ ಅಲ್ಲಿನ ಮೆಟ್ಟಿಲ ಬಳಿ ಹೋಗದೇ ನೆರೆದಿದ್ದ ಜನರ ನಡುವೆ ಕುಳಿತೆ. ನಾನು ಅಲ್ಲಿ ಕುಳಿತ 10ರಿಂದ 15 ನಿಮಿಷ ಆಸುಪಾಸಿಗೆ ನನ್ನ ಮೇಲೆ ಕಲ್ಲು ಬಿತ್ತು. ಸುಮಾರು 50 ಅಡಿ ಅಂತರದಿಂದ ಕಲ್ಲು ಬಿದ್ದಿತ್ತು. ಆರೋಪಿಗಳು ನಮ್ಮವರ ನಡುವೆ ಇದ್ದುಕೊಂಡು ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ. ಆದರೆ ಕೊಲ್ಲುವವರಿಗಿಂತ ಕಾಯುವವನು ದೊಡ್ಡವನು. ಇಂತಹ ನೂರಾರು ಎಸ್‍ಡಿಪಿಐ(ಸೊಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)ಗಳನ್ನ ಭಾರತ ನೋಡಿದೆ. ಅವರನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ ಎಂದು ಸೂಲಿಬೆಲೆ ಹೇಳಿದರು.

  • ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    – ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪೊಲೀಸರದ್ದು ಪೂರ್ವಯೋಜಿತ ಕೃತ್ಯ

    ಕಾರವಾರ: ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಹೇಳಿದ್ದಾರೆ.

    ಸಿ.ಎ.ಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸುತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ನಲ್ಲಿ ಇಬ್ಬರ ಜೀವ ಬಲಿಯಾಗಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರೀಕ ಸಮಾಜವನ್ನು ತೀವ್ರ ಘಾಸಿ ಗೊಳಿಸಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಬೇಸರ ವ್ಯಕ್ತಪಡಿಸಿದರು.

    ಇಂದು ಕಾರವಾರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವಿಪರ್ಯಾಸ ಅಂದ್ರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಸರಿಯಾಗಿಲ್ಲ. ಕೇವಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ಹಿಂಸಾಚಾರಗಳು ನಡೆಯುತ್ತಿವೆ. ಸಾವಿರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪೊಲೀಸರು ಯಾವುದೇ ಹಿಂಸಾಚಾರವನ್ನೂ ನಡೆಸಿಲ್ಲ ಎಂದು ತಿಳಿಸಿದರು.

    ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾವು ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಇದು ಏನನ್ನ ಸೂಚಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ, ಕಾನೂನಿನ ಪ್ರಕಾರ ದೇಶದ ಎಲ್ಲರೂ ಸಮಾನರು, ಸಂವಿಧಾನವನ್ನು ಕಾಲಡಿ ಹಾಕಿ ತುಳಿಯುವಂತೆ ನಿಯಮಗಳನ್ನು ರೂಪಿಸುವುದನ್ನು ವಿರೋಧಿಸುವವರನ್ನ ಹತ್ತಿಕ್ಕುವ ಕೆಲಸವನ್ನ ಸರ್ಕಾರವೇ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.

    ಸೆಕ್ಷನ್ 144ನ್ನ ತರಾತುರಿಯಲ್ಲಿ ರಾತ್ರಿ ವೇಳೆ ಜಾರಿ ಮಾಡಿದ್ದರು, ಮಂಗಳೂರಿನಲ್ಲಿ ಪ್ರತಿಭಟನೆಗೆ ಮೊದಲೇ ಅನುಮತಿ ಪಡೆದುಕೊಂಡಿದ್ದು ಹಿಂದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ್ದು ಸಾಕಷ್ಟು ಪ್ರತಿಭಟನಾಕಾರರಿಗೆ ಗೊತ್ತಿರಲಿಲ್ಲ. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ವೃತ್ತದಲ್ಲಿ ಏನೂ ಅರಿಯದೇ ನಿಂತಿದ್ದವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದವರು ಕಲ್ಲು ತೂರಾಟ ಮಾಡದೇ ಬೇರೆ ದಾರಿ ಇರಲಿಲ್ಲ. ಈ ಹಿಂದೆ ನಿಷೇಧಾಜ್ಞೆ ಇದ್ದಾಗ ಸಾಕಷ್ಟು ಕಡೆ ಪ್ರತಿಭಟನೆಗಳಾಗಿವೆ, ಮೆರವಣಿಗೆಗಳು ನಡೆದಿವೆ. ಆದರೆ ಯಾವ ಕಡೆಗಳಲ್ಲೂ ಈ ರೀತಿ ಗುಂಡಿನ ದಾಳಿ ಲಾಠಿ ಚಾರ್ಜ್ ನಡೆದಿಲ್ಲ. ಮಂಗಳೂರಿನಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನೆ ಮಾಡಿದರು.

    ಪೊಲೀಸರು ಬಂದರು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಎದೆಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಹೇಳಿಕೊಂಡು ಗುಂಡು ಹಾರಿಸಿದ್ದಾರೆ. ನಮ್ಮಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ 23ಕ್ಕೂ ಅಧಿಕ ಮಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಹೈಲ್ಯಾಂಡ್ ಆಸ್ಪತ್ರೆ ಒಳಹೊಕ್ಕು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಹಿಂಸಾಚಾರ ನೋಡಿದ್ದೆವು, ಮಂಗಳೂರನಲ್ಲಿ ಇಂತಹ ಘಟನೆ ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೃತರ ಮನೆಗೆ ಭೇಟಿ ನೀಡಿದ ಸಿಎಂ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ಘೋಷಣೆ ಮಾಡಿದರು. ಆದರೆ ಬೆಂಗಳೂರಿಗೆ ಹೋದ ಬಳಿಕ ಪರಿಹಾರ ಕೊಡಲ್ಲ ಎಂದು ಮಾತು ಬದಲಿಸಿದ್ದಾರೆ. ಯಾರಾದರೂ ಕಕ್ಕಿದ್ದನ್ನ ವಾಪಸ್ ತಿಂತಾರಾ? ಎಂದು ಮುಖ್ಯಮಂತ್ರಿಗಳ ನಡೆಗೆ ಅಕ್ರೋಶ ವ್ಯಕ್ತಪಡಿಸಿದರು. ಮೂರು ಪೊಲೀಸ್ ಅಧಿಕಾರಿಗಳ ದಡ್ಡತನ, ದರ್ಪದಿಂದ ಈ ರೀತಿ ಹಿಂಸಾಚಾರ ನಡೆಯುವಂತಾಗಿದೆ. ಆದರೆ ಯಾವುದೇ ಗುಂಡುಗಳಿಂದ ಲಾಠಿ ಚಾರ್ಜ್ ನಿಂದ ಜನರ ಪ್ರತಿಭಟನೆಗಳನ್ನ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಆಸ್ತಿತ್ವದ ಪ್ರಶ್ನೆ ಬಂದಾಗ ಸುಮ್ಮನೆ ಕೂರುವುದು ಸಾಧ್ಯವಿಲ್ಲ ಇಂತಹ ಸರ್ಕಾರವನ್ನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ಎನ್.ಆರ್.ಸಿ ಯನ್ನು ದೇಶದಾದ್ಯಂತ ಜಾರಿ ಮಾಡ್ತೀವಿ ಎಂದು ಅಮಿತ್ ಶಾ ಹೇಳ್ತಾರೆ. ಆದರೆ ಪ್ರಧಾನಿ 2014-19 ರ ಅವಧಿಯಲ್ಲಿ ನಾವು ಎನ್.ಆರ್.ಸಿ ಬಗ್ಗೆ ಮಾತನಾಡಿಲ್ಲ ಅಂತಾರೆ. ಗೃಹಮಂತ್ರಿಗಳು ನಾವು ಕರ್ನಾಟಕದಲ್ಲಿ ಮೊದಲು ಎನ್.ಆರ್.ಸಿ ಜಾರಿ ಮಾಡ್ತೀವಿ ಅಂತಾರೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಿದೆ. ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ, ಬುಡಕಟ್ಟು, ದಲಿತರು, ಬಡವರಿಗೂ ತೊಂದರೆಯಾಗುತ್ತದೆ. ಇದು ದೇಶದ ಮತ್ತೊಂದು ಸ್ವಾತಂತ್ರ್ಯ ಸಮರ ಪ್ರಾರಂಭವಾಗಿದೆ. ನಾವು ಈ ನಿಟ್ಟಿನಲ್ಲೇ ಹೋರಾಟ ಮುಂದುವರೆಸುತ್ತೇವೆ ಎಂದರು.

    ಭಾರತ ಮಾತಕೀ ಜೈ ಎನ್ನುವುದಿಲ್ಲ
    ಅಲ್ಲಾಹು ಅಕ್ಬರ್ ಎನ್ನುವ ಜೊತೆ ಭಾರತ್ ಮಾತಾಕೀ ಜೈ ಎನ್ನಬಹುದಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬಿ ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಾಗಿ ತಂದಿದ್ದ ಪತಂಜಲಿ ನೀರಿನ ಬಾಟಲ್ ನಲ್ಲಿ ಇದ್ದ ಪತಾಂಜಲಿ ದಿವ್ಯ ಜಲ್ ಎಂಬ ಲೇಬಲ್ ಅನ್ನು ಹರಿದುಹಾಕಿ ನಂತರ ನೀರನ್ನು ಕುಡಿಯುವ ಮೂಲಕ ಪರೋಕ್ಷವಾಗಿ ಧಾರ್ಮಿಕ ಮುಖಂಡರ ವಿರುದ್ಧ ಕಿಡಿ ಕಾರಿದರು.

  • ಎಲ್ಲ ಭಯೋತ್ಪಾದಕರು ಹಿಂದೂಗಳೆಂಬ  ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ- ಎಸ್‍ಡಿಪಿಐ ಮುಖಂಡ

    ಎಲ್ಲ ಭಯೋತ್ಪಾದಕರು ಹಿಂದೂಗಳೆಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ- ಎಸ್‍ಡಿಪಿಐ ಮುಖಂಡ

    ನವದೆಹಲಿ: ಭಯೋತ್ಪಾದಕರೆಲ್ಲರೂ ಹಿಂದೂಗಳೆಂದು ಹೇಳಿಕೆ ನೀಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಮುಖಂಡ ತಸ್ಲೀಮ್ ಅಹ್ಮದ್ ರೆಹ್ಮಾನಿ ಸ್ಪಷ್ಟಪಡಿಸಿದ್ದಾರೆ.

    ಖಾಸಗಿ ವಾಹಿನಿಯೊಂದಿಗೆ ಮಾತನಾಡುವ ವೇಳೆ ಈ ಕುರಿತು ರೆಹ್ಮಾನಿ ಒಪ್ಪಿಕೊಂಡಿದ್ದು, ಕಾಫಿರ್ ಎಂಬ ಬದವನ್ನು ಬಳಸಿದರ ಕುರಿತು ಉತ್ತರಿಸಿದ್ದಾರೆ. ಪ್ರಾರಂಭದಲ್ಲಿ ಕಾಫಿರ್ ಪದವನ್ನು ಬಳಸಿಲ್ಲ. ಕುಫ್ರ್ ಪದವನ್ನು ಬಳಸಿದ್ದೆ ಎಂದು ಹೇಳಿದ್ದರು. ನಂತರ ತಮ್ಮ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ.

    ಎಲ್ಲ ಹಿಂದೂಗಳು ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಹಿಂದೂಗಳು. ಪಿಎಫ್‍ಐಗೆ ಈ ಕುರಿತು ನಾವು ಭರವಸೆ ನೀಡುತ್ತೇವೆ. ನೀವು ಒಂಟಿಯಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ನವೆಂಬರ್ 2017ರಲ್ಲಿ ಹೇಳಿದ್ದೆ ಎಂದು ರೆಹ್ಮಾನಿ ಒಪ್ಪಿಕೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರುದ್ಧದ ಹಿಂಸಾಚಾರದಲ್ಲಿ ತೊಡಗಿರುವ ಕುರಿತು ಚರ್ಚೆ ನಡೆದಿದ್ದು, ಯುಪಿ ಮುಖ್ಯಸ್ಥ ಹಾಗೂ ಖಜಾಂಚಿ ಸೇರಿದಂತೆ 25 ಪಿಎಫ್‍ಐ ಸದಸ್ಯರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲೇ ರೆಹ್ಮಾನಿ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ನವೆಂಬರ್ 6, 2017ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಕಾರ್ಯಕರ್ತಸನ್ಮಾನ ಕಾರ್ಯಕ್ರಮದಲ್ಲಿ ರೆಹ್ಮಾನಿ ಪ್ರಚೋದಿತ ಹೇಳಿಕೆ ನೀಡಿದ್ದರು. ಅಲ್ಲದೆ ಎಸ್‍ಡಿಪಿಐ ಪಿಎಫ್‍ಐನ ರಾಜಕೀಯ ಸಂಘಟನೆಯಾಗಿದೆ. ಈ ಸಂಘಟನೆಗಳು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿವೆ ಎಂದು ಆರೋಪಿಸಲಾಗಿದೆ.

    ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಉತ್ತರ ಪ್ರದೇಶದಲ್ಲಿ ನಡೆದ ಭಾರೀ ಹಿಂಸಾಚಾದಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಸಹ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಈ ಮೂಲಕ ಯುಪಿಯ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೆ ಯುಪಿ ರಾಜಧಾನಿ ಲಕ್ನೋದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಪಿಎಫ್‍ಐ ಸಂಘಟನೆಯಾಗಿದೆ. ಸಿಎಎ ಕುರಿತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ. ಈ ಕುರಿತು ಪಿಎಫ್‍ಐ ಮುಖ್ಯಸ್ಥ ಹಾಗೂ ಖಜಾಂಚಿ ಹಿಂಸಾಚಾರದಲ್ಲಿ ತಮ್ಮ ಪಾತ್ರವಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಮೈಸೂರು: ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ನಡೆದಿದೆ.

    ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ಘಟನೆಯಲ್ಲಿ ಓರ್ವ ಎಸ್‍ಡಿಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದ್ದು, ಕೂಡಲೇ ಗಾಯಾಳುವನ್ನು ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಡಲ ನಗರಿಯಲ್ಲಿ ಚುನಾವಣೆಯ ನಗಾರಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲೆಕ್ಷನ್ ಅಖಾಡ ಹೇಗಿದೆ?

    ಕಡಲ ನಗರಿಯಲ್ಲಿ ಚುನಾವಣೆಯ ನಗಾರಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲೆಕ್ಷನ್ ಅಖಾಡ ಹೇಗಿದೆ?

    ಚುನಾವಣಾ ದಂಗಲ್ ನಲ್ಲಿ ಈಗ ಎಲ್ಲರ ಚಿತ್ತ ಕರಾವಳಿ ಕರ್ನಾಟಕದತ್ತ. ದಕ್ಷಿಣ ಕೆನರಾದಲ್ಲಿ ರಾಜಕಾರಣಕ್ಕೆ ಧರ್ಮದ ಹೊದಿಕೆ ಮುಚ್ಚಿ ಅದೆಷ್ಟೋ ಕಾಲವೇ ಆಯ್ತು. ಬುದ್ಧಿವಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಇತರೆ ವಿಷಯಗಳು ರಾಜಕೀಯದ ವಿಷಯದಲ್ಲಂತೂ ನಗಣ್ಯ. ಚುನಾವಣೆಯ ಹೊಸ್ತಿಲಲ್ಲಿ ತಲೆ ಎತ್ತಿದ ಕೋಮುಗಲಭೆ,ಹತ್ಯೆ ವಿಚಾರಗಳು ಈ ಬಾರಿ ನಿರ್ಣಾಯಕ ಅಂತಾ ಅನಿಸಿದ್ರೂ ಮತದಾರನ ಮನದಾಳವನ್ನುಅರಿತವರಾರು..?

    ಸಾಮರಸ್ಯ ಜೀವನವೇ ತುಳುನಾಡಿನ ಅಂದ-ಚಂದ..
    ಅಂದ ಹಾಗೆ, 1948ನೇ ಇಸವಿಗೂ ಮೊದಲು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳೆರಡನ್ನೂ ಒಟ್ಟಾಗಿ ಬ್ರಿಟೀಷರು ಕೆನರಾ ಅಂತಾ ಕರೀತಿದ್ರು. ದಕ್ಷಿಣ ಕೆನರಾ ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಗೆ ಒಳಪಟ್ಟಿತ್ತು. ಪೌರಾಣಿಕ ಕಥೆಗಳ ಮೂಲಗಳ ಪ್ರಕಾರ ದಕ್ಷಿಣ ಕನ್ನಡವನ್ನ ಪರಶುರಾಮ ಸೃಷ್ಟಿಸಿದ ಅನ್ನೋ ನಂಬಿಕೆ ಇದೆ. ಬೆಂಗಳೂರಿನ ನಂತರ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರೋ ನಗರ ದಕ್ಷಿಣ ಕನ್ನಡ. ತುಳು ಪ್ರಮುಖ ಭಾಷೆಯಾಗಿದ್ರೂ ಕನ್ನಡ, ಹವ್ಯಕ, ಕನ್ನಡ, ಮಲಯಾಳಂ, ಕುಂದಾಪುರ ಕನ್ನಡ, ಕೊಂಕಣಿ, ಬ್ಯಾರಿ ಭಾಷೆ ಮಾತನಾಡುವ ಜನರ ಸಾಮರಸ್ಯ ಸಂಗಮ.

    ಇಲ್ಲಿನ ಕಲ್ಲು ಕಲ್ಲು ಹೇಳುತ್ತೆ ಕ್ಷೇತ್ರ ಮಹಿಮೆಯನ್ನ..!
    ಧರ್ಮಸ್ಥಳದ ಶ್ರೀ ಮಂಜುನಾಥ ಕ್ಷೇತ್ರ, ಕದ್ರಿ ಮಂಜುನಾಥೇಶ್ವರ ದೇಗುಲ, ಕುಕ್ಕೆ ಸುಬ್ರಹ್ಮಣ್ಯ, ಕಾರ್ಕಳದ ಗೋಮಟೇಶ್ವರ ಬೆಟ್ಟ ಮತ್ತು ಚತುರ್ಮುಖ ಬಸದಿ, ಮೂಡಬಿದಿರೆಯ ಸಾವಿರ ಕಂಬದ ಬಸದಿ, ಅತ್ತೂರು ಸೇಂಟ್ ಲಾರೆನ್ಸ್ ಚರ್ಚ್, ಪುತ್ತೂರಿನ ಮಹಾಲಿಂಗೇಶ್ವರ ಮತ್ತು ದರ್ಗಾ ಶರೀಫ್ ಮಾಡನ್ನೂರು ಹೀಗೆ ಅನೇಕ ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಿವೆ. ಒಂದರ್ಥದಲ್ಲಿ ದಕ್ಷಿಣ ಕನ್ನಡ ಧಾರ್ಮಿಕ ನೆಲೆಬೀಡು. ಇಂತಿಪ್ಪ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಚುನಾವಣೆಯಿಂದಾಗಿ ಮತ್ತಷ್ಟು ಕಲರ್ ಫುಲ್ ಆಗಿದೆ.

    ಕಣ್ಣುಗಳೆರಡು ಸಾಲದು ಕಡಲನಗರಿಯನ್ನ ತುಂಬಿಕೊಳ್ಳಲು..!
    ಕಣ್ಣು ಹಾಯಿಸಿದಷ್ಟೂ ದೂರ, ಆಕಾಶ ಭೂಮಿಗಳ ಸಮಾಗಮದಂತೆ ಕಾಣುವ ನಯನ ಮನೋಹರ ಕಡಲ ತಡಿಗಳೇ ದಕ್ಷಿಣ ಕನ್ನಡದ ಜಿಲ್ಲೆಯ ಪ್ರಮುಖ ಆಕರ್ಷಣೆ. ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಪಿಲಿಕುಳ, ಕುಮಾರ ಪರ್ವತ, ಜಮಾಲಾಬಾದ್ ಕೋಟೆ ಹೀಗೆ ಸಾಕಷ್ಟು ತಾಣಗಳು ಪ್ರವಾಸಿಗರ ಹಾಟ್ ಫೇವರೇಟ್.

    ಚೆಂಡೆ ಪೆಟ್ಟಿಗೆ ಕುಣಿಯೋ ವಿಶಿಷ್ಟ ಗಂಡು ಕಲೆ ಯಕ್ಷಗಾನ
    ಯಕ್ಷಗಾನ ಕರಾವಳಿಯ ಗಂಡು ಕಲೆ ಅಂತಾನೇ ಪ್ರಸಿದ್ಧ. ಹಿಂದೆಲ್ಲಾ ಈ ಕಲೆ ದೊಂದಿ ಬೆಳಕಿನ ನಡುವೆ ಆಡಿಸ್ತಾ ಇದ್ರು. ಭಾಗವತಿಕೆ, ಮದ್ದಳೆ, ಚೆಂಡೆ, ಚಕ್ರತಾಳ, ಹಿಮ್ಮೇಳದಲ್ಲಿ ಹಾರ್ಮೋನಿಯಂ ಹೀಗೆ ಅವ್ರದ್ದೇ ಚೌಕಟ್ಟಿನಲ್ಲಿ ರಂಗ ಸ್ಥಳದಲ್ಲಿ ಕೂತ್ರೆ ಮುಮ್ಮೇಳದಲ್ಲಿ ಆಯಾ ಪಾತ್ರಧಾರಿಗಳು ಬಂದು ಪ್ರಸಂಗಕ್ಕೆ ತಕ್ಕ ಹಾಗೆ, ಅಭಿನಯಿಸ್ತಾರೆ. ಪೌರಾಣಿಕ ಕಥೆಗಳನ್ನು ಯಕ್ಷರಂಗದ ಮೇಲೆ ತಂದು ಜನರನ್ನ ರಂಜಿಸ್ತಾರೆ. ಯಕ್ಷಗಾನ ಕೇವಲ ಕಲೆ ಅನ್ನೋದಕ್ಕಿಂತ ಹೆಚ್ಚಾಗಿ ಅದು ಸಂಸ್ಕೃತಿಯ ಭಾಗವಾಗಿ ಕರಾವಳಿಯ ಜನರ ಜೀವನಾಡಿಯಾಗಿದೆ.

    ಬಂಗುಡೆ ಗಸಿ ಜೊತೆ ನೀರು ದೋಸೆ ಸೂಪರ್ರೋ ಸೂಪರ್
    ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ ಭಾಷೆ, ಜನರ ಜೀವನ ಶೈಲಿಯ ಜೊತೆಗೆ ಖಾದ್ಯವೂ ಬದಲಾಗುತ್ತೆ. ಒಮ್ಮೆ ನೀವು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ನೀರ್ ದೋಸೆ, ಬಂಗುಡೆ ಗಸಿ, ಪತ್ರೊಡೆ (ಕೆಸುವಿನ ಎಲೆಯಲ್ಲಿ ಮಾಡೋ ಖಾದ್ಯ), ಮಂಗಳೂರು ಶೈಲಿಯ ಚಿಕನ್ ಸುಕ್ಕಾ, ಪುಂಡಿ (ಅಕ್ಕಿಯಲ್ಲಿ ಮಾಡೋ ಖಾದ್ಯ), ಕಣಿಲೆ ಉಪ್ಪಿನಕಾಯಿ, ಉಪ್ಪಡ್ ಪಚ್ಚಿಲ್ ರೊಟ್ಟಿ ಅಥವಾ ಪಲ್ಯ ( ಹಲಸಿನ ಖಾದ್ಯ) ಸವಿದಿಲ್ಲ ಅಂದ್ರೆ ಜೀವನವೇ ವ್ಯರ್ಥ. ಇವಿಷ್ಟು ದಕ್ಷಿಣ ಕನ್ನಡ ಜಿಲ್ಲೆಯ ಬಗೆಗಿನ ವೈವಿಧ್ಯಮಯ ವಿಷಯಗಳಾಗಿದ್ರೆ, ಇಷ್ಟೇ ಕಲರ್ಫುಲ್ಲಾಗಿದೆ ಇಲ್ಲಿನ ರಾಜಕೀಯ ಚಿತ್ರಣ.

    ಬಿರು ಬೇಸಿಗೆಯ ತಾಪ ಹೆಚ್ಚಿಸಲಿದೆ ದಕ್ಕಣ ರಾಜಕಾರಣ..!
    ಸದ್ಯಕ್ಕೆ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭದ್ರವಾಗಿ ಕೂತು ಬಿಟ್ಟಿದೆ. ಹಾಗಾಗಿ ಕಾಂಗ್ರೆಸ್ ಗೆ ದಕ್ಷಿಣ ಕನ್ನಡ ಜಿಲ್ಲೆ ಆಶಾಕಿರಣವಾಗಿರೋದ್ರಲ್ಲಿ ನೋ ಡೌಟ್. 2013ರ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ಇಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಇನ್ನಿಲ್ಲದಂತೆ ಕಸರತ್ತು ನಡೆಸಿದೆ. ಕಾಂಗ್ರೆಸ್ ಬಿಜೆಪಿ ಜಿದ್ದಾಜಿದ್ದಿನ ನಡುವೆ ಜೆಡಿಎಸ್, ಎಸ್ ಡಿಪಿಐ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ ಇದೆ.

    ಬಂಟ್ವಾಳದ ಬಂಟ ರಮಾನಾಥ್ ರೈ ನಡೆದದ್ದೇ ಹಾದಿ..!
    ಡಬಲ್ ಹ್ಯಾಟ್ರಿಕ್ ಗೆಲುವು ಕಂಡಿರುವ ರಮಾನಾಥ ರೈ ಸೋಲಿಲ್ಲದ ಸರದಾರನಾಗಿದ್ದಾರೆ. ಕೋಮು ರಾಜಕಾರಣದಿಂದ ಸದಾ ಕುದಿಯುವ ಕಲ್ಲಡ್ಕ, ರಮಾನಾಥ ರೈಯವರಿಗೆ ಸೆರಗಿನಲ್ಲಿಟ್ಟುಕೊಂಡ ಕೆಂಡ. ಹಾಲಿ ಉಸ್ತುವಾರಿ ಸಚಿವರ ವಿರುದ್ಧವೇ ಉರಿದು ಬಿದ್ದಿರುವ ಸಂಘ ಪರಿವಾರ ಹಾಗೂ ಬಿಜೆಪಿಗೆ ರೈ ಮೇನ್ ಟಾರ್ಗೆಟ್. ರಮಾನಾಥ್ ರೈ ವಿರುದ್ಧ ಕಳೆದ ಬಾರಿ ಸೋತಿದ್ದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಈ ಬಾರಿ ಕೂಡಾ ಬಿಜೆಪಿಯ ಹುರಿಯಾಳು. ಆದ್ರೆ, ರಮಾನಾಥ್ ರೈಗೆ ಇರೋ ಪ್ರಭಾವದ ಮುಂದೆ ರಾಜೇಶ್ ನಾಯ್ಕ್ ಗೆಲ್ತಾರಾ ಅನ್ನೋದೇ ಸದ್ಯದ ಪ್ರಶ್ನೆ. ಕಳೆದ ಬಾರಿ ರಮಾನಾಥ ರೈ 81,665 ಮತಗಳನ್ನು ಪಡೆದು ಜಯ ಗಳಿಸಿದ್ರು. ರಾಜೇಶ್ ನಾಯ್ಕ್ 63,815 ಜನ ಓಟ್ ಹಾಕಿದ್ರೆ, ಜೆಡಿಎಸ್‍ನ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ 1,927 ಮತಗಳಿಗೆ ತೃಪ್ತಿ ಪಟ್ಕೋಬೇಕಾಯ್ತು.

    ಮಂಗಳೂರಲ್ಲಿ ಈ ಬಾರಿ ಯಾರ `ಖದರ್’..?
    ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಯುಟಿ ಖಾದರ್ ಖದರ್ ಜೋರಾಗೇ ಇತ್ತು. ಇಡೀ ದಕ್ಷಿಣ ಕನ್ನಡದಲ್ಲೇ ಕಾಂಗ್ರೆಸ್ ಗೆ ಅತ್ಯಂತ ಸೇಫೆಸ್ಟ್ ಜಾಗ ಅಂದ್ರೆ ಅದು ಮಂಗಳೂರು. ಇಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರೋದ್ರಿಂದ ಯುಟಿ ಖಾದರ್ ಸದ್ಯದ ಮಟ್ಟಿಗೆ ಸೇಫ್ ಗೇಮ್ ಆಡ್ತಿದ್ದಾರೆ. ಎರಡೂವರೆ ದಶಕಗಳ ಹಿಂದೆ ಒಮ್ಮೆ ಮಾತ್ರ ಬಿಜೆಪಿ ಗೆಲುವಿನ ರುಚಿ ಕಂಡಿತ್ತು. ಇನ್ನು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಚಂದ್ರಹಾಸ್ ಉಳ್ಳಾಲ್ ಎದುರು ಯು.ಟಿ.ಖಾದರ್ 29,111 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ರು. ಕ್ಷೇತ್ರದ ಜನರ ಜೊತೆ ಯುಟಿ ಖಾದರ್ ಕುಟುಂಬದ ಒಡನಾಟ ಸಾಕಷ್ಟು ಹಳೇದು. ಖಾದರ್ ತಂದೆ ಯು.ಟಿ ಫರೀದ್ 1972, 1978, 1999 ಮತ್ತು 2004ರಲ್ಲಿ ಗೆಲುವು ಕಂಡಿದ್ರು. ಬಿಜೆಪಿ ಈಗಾಗ್ಲೇ ತನ್ನ ಕದನ ಕಲಿ ಸಂತೋಷ್ ಕುಮಾರ್ ಬೋಳಿಯಾರ್ ಅಂತಾ ಘೋಷಿಸಿದ್ದು ಚುನಾವಣೆ ಕುತೂಹಲ ಕೆರಳಿಸಿದೆ. ಜಿಲ್ಲಾಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ಮಾಡಿ ಜನರ ನಡುವೆ ಕೆಲಸ ಮಾಡಿರೋ ಬೋಳಿಯಾರ್ ಅಬ್ಬಕ್ಕನ ನಾಡಲ್ಲಿ ಜಯದ ಕೇಕೆ ಹಾಕ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ಹೇಳ್ಬೇಕಿದೆ.

    ಮೂಡಬಿದರೆಯಲ್ಲಿ ಯಾರಾಗ್ತಾರೆ ಗೆಲ್ಲೋ ಕುದುರೆ..?
    ಜೈನ ಕಾಶಿ ಮೂಡಬಿದಿರೆಯ ರಾಜಕೀಯ ಜಾತಿಯ ಮೇಲೆ ಆಧರಿತವಾಗಿಲ್ಲ. ಮಾಜಿ ಸಚಿವ ಹಾಲಿ ಶಾಸಕರಾಗಿರೋ ಅಭಯಚಂದ್ರ ಜೈನ್ ಗೆ ಪಕ್ಷ ಹಾಗೂ ವೈಯಕ್ತಿಕ ಪ್ರಭಾವವೇ ಪ್ಲಸ್ ಪಾಯಿಂಟ್. 2013ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅಭಯ ಚಂದ್ರ ಜೈನ್ 53180 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಬಿಜೆಪಿಯ ಉಮಾನಾಥ್ ಕೋಟ್ಯಾನ್ 48630 ಮತಗಳನ್ನು ಪಡೆದು 4550 ಮತಗಳ ಅಂತರದಿಂದ ಸೋತ್ರು. ಇನ್ನುಳಿದಂತೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಮರನಾಥ್ ಶೆಟ್ಟಿ 20471 ಮತಗಳನ್ನು ಪಡೆದ್ರು. ಒಂದು ಬಾರಿ ಜೆಡಿಎಸ್ ಇಲ್ಲಿ ಗೆದ್ದಿದ್ದು ಬಿಟ್ರೆ ಕಾಂಗ್ರೆಸ್ ಹಾಗೂ ಬಿಜೆಪಿಗೇ ಇಲ್ಲಿ ಸಾಕಷ್ಟು ಫೈಟ್ ಇದೆ. ಅಂದ ಹಾಗೆ, ಈ ಬಾರಿ ಬಿಜೆಪಿಯಿಂದ ಮತ್ತೆ ಉಮಾನಾಥ್ ಕೋಟ್ಯಾನ್ ಹೆಸ್ರು ಫೈನಲೈಸ್ ಆಗಿದೆ.

    ಚುನಾವಣಾ ಕಾವಿಗೆ ತತ್ತರವಾಯ್ತು ಮಂಗಳೂರು ಉತ್ತರ !
    ಹಾಲಿ ಶಾಸಕ ಮೊಯಿದ್ದೀನ್ ಬಾವಾ ಈ ಬಾರಿ ಕೂಡಾ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಅಂತಿಮ ಹಣಾಹಣಿಯಲ್ಲಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿಯ ಪಾಲೆಮಾರ್ ಅವರನ್ನು ಸೋಲಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ರು ಬಾವಾ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೃಷ್ಣ ಪಾಲೇಮಾರ್ ಆಸೆಗೆ ತಣ್ಣೀರೆರಚಿದ್ದು ಇದೇ ಮೊಯಿದ್ದೀನ್ ಬಾವಾ. ಈ ಬಾರಿ ಬಿಜೆಪಿ ಕೃಷ್ಣ ಪಾಲೇಮಾರ್ ಗೆ ಟಿಕೆಟ್ ಕೊಡೋ ನಿರೀಕ್ಷೆ ಇತ್ತು. ಆದ್ರೆ,ಎಲ್ಲರಿಗಿಂತ ಮೊದಲೇ ಸಿಪಿಐಎಂನಿಂದ ಮುನೀರ್ ಕಾಟಿಪಳ್ಳ ಕ್ಯಾಂಪೇನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರದೇಶ ಅಂತಾ ಚುನಾವಣಾ ಆಯೋಗ ಈ ಕ್ಷೇತ್ರವನ್ನ ಗುರುತಿಸಿದೆ. ಕಳೆದ ಬಾರಿ ಮೊಯಿದ್ದೀನ್ ಬಾವಾ ಅವರ ಎದುರು 5,373 ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ, ಬಿಜೆಪಿ ಉತ್ತರವಲಯದ ಅಧ್ಯಕ್ಷ ಡಾ. ಭರತ್ ಶೆಟ್ಟಿ ಅಂತಿಮವಾಗಿ ಟಿಕೆಟನ್ನ ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಜೆಡಿಎಸ್ ಅಷ್ಟೊಂದು ಪ್ರಾಮುಖ್ಯತೆ ಗಳಿಸಿಲ್ಲ.

    ಸುಳ್ಯದ ಬಂಗಾರ ಶಾಸಕ ಅಂಗಾರ
    ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ವಶದಲ್ಲಿರುವ ಏಕೈಕ ಕ್ಷೇತ್ರ ಸುಳ್ಯ. ಎರಡೂವರೆ ದಶಕಗಳಿಂದಲೂ ಇಲ್ಲಿ ಹಾಲಿ ಶಾಸಕ ಎಸ್ ಅಂಗಾರರ ಅಶ್ವಮೇಧ ಕುದುರೆಯನ್ನ ಕಟ್ಟಿ ಹಾಕೋದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ. 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಸೋತಿದ್ದಾಗ್ಲೂ ಜಿಲ್ಲೆಯಲ್ಲಿ ಬಿಜೆಪಿಗೆ ಆಸರೆಯಾದ ಏಕೈಕ ಕ್ಷೇತ್ರ ಅಂದ್ರೆ ಅದು ಸುಳ್ಯ. ಆದ್ರೆ, ಮತಗಳು ಕುಸಿತ ಕಂಡಿದ್ರೂ ಅಂಗಾರ ಮಾತ್ರ ಸೋಲೇ ಇಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದಾರೆ. ಕಳೆದ ಬಾರಿ ಕೇವಲ ಒಂದೂವರೆ ಸಾವಿರದಷ್ಟು ಮತಗಳ ಅಂತರದಲ್ಲಿ ಸೋತಿದ್ದ ಡಾ ಬಿ ರಘು ಈ ಬಾರಿಯೂ ಕಾಂಗ್ರೆಸ್ ನಿಂದ ಕಣದಲ್ಲಿದ್ದಾರೆ. ಉಳಿದಂತೆ ಇಲ್ಲಿ ಯಾವ ಪಕ್ಷವೂ ನಿರ್ಣಾಯಕವಲ್ಲ.

    ಮಂಗಳೂರು ದಕ್ಷಿಣದಲ್ಲಿ ರಂಗೇರಿದೆ ರಣಕಣ
    ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಗೆ ಸರಿಯಾಗೇ ಮಣ್ಣು ಮುಕ್ಕಿಸಿದ್ದ ಕ್ಷೇತ್ರ. ಸತತ ನಾಲ್ಕು ಬಾರಿ ಗೆದ್ದು ಬೀಗಿದ್ದ ಯೋಗೀಶ ಭಟ್ ರಿಗೆ ಕಾಂಗ್ರೆಸ್ ನ ಜೆ ಆರ್ ಲೋಬೋ ಕೊಟ್ಟ ಹೊಡೆತಕ್ಕೆ ಬಿಜೆಪಿ ತತ್ತರಿಸಿ ಹೋಗಿತ್ತು. ಹಾಲಿ ಶಾಸಕ ಲೋಬೋ ಬಗ್ಗೆ ಕ್ಷೇತ್ರದಲ್ಲಿ ಯಾವುದೇ ತಕರಾರಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸ್ಪರ್ಧೆಗೆ ಇದೆ ಅನ್ನೋದು ಬಿಟ್ರೆ ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಪಿ.ಚಂಗಪ್ಪ ಕೇವಲ 1672 ಮತಗಳನ್ನಷ್ಟೇ ಗಳಿಸಿದ್ರು. ಕುತೂಹಲ ಮೂಡಿಸಿದ್ದ ಬಿಜೆಪಿ ಟಿಕೆಟ್ ಪಟ್ಟಿಯಲ್ಲಿ ಅಂತಿಮವಾಗಿ ಉದ್ಯಮಿ ವೇದವ್ಯಾಸ ಕಾಮತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ, ಈ ಬಾರಿ ರಣಕಣ ಮತ್ತಷ್ಟು ಕಾವು ಪಡೆದುಕೊಳ್ಳೋದ್ರಲ್ಲಿ ಯಾವ ಅನುಮಾನಾನೂ ಇಲ್ಲ.

    ಬೆಳ್ತಂಗಡಿಯಲ್ಲಿ ಬಂಗೇರರಿಗೆ ಠಕ್ಕರ್ ಕೊಡೋರು ಯಾರಣ್ಣ..?
    ಬೆಳ್ತಂಗಡಿಯಲ್ಲಿ ಕಳೆದ ಐದು ಅವಧಿಯಿಂದಲೂ ಶಾಸಕರಾಗಿರೋ ವಸಂತ ಬಂಗೇರರಿಗೆ ಠಕ್ಕರ್ ಕೊಡೋರು ಯಾರು ಅನ್ನೋದೇ ಬಿಜೆಪಿಯ ತಲೆ ನೋವು. ಆದ್ರೆ, ಇಲ್ಲಿ ಯಾವತ್ತೂ ಒಂದೇ ಪಕ್ಷ ಹಿಡಿತ ಸಾಧಿಸಿದ ಉದಾಹರಣೆ ಇಲ್ಲ. ಬಿಲ್ಲವ ಹಾಗೂ ಗೌಡರೇ ಚುನಾವಣೆಯಲ್ಲಿ ನಿರ್ಣಾಯಕ. 1983 ಮತ್ತು 1985ರಲ್ಲಿ ವಸಂತ ಬಂಗೇರರು ಬಿಜೆಪಿ ಪಾಳಯದಲ್ಲಿದ್ರು. 2013ರಲ್ಲಿ ಇವ್ರ ಪ್ರಬಲ ಪ್ರತಿಸ್ಫರ್ಧಿ ಅಂತಾ ಬಿಜೆಪಿ ರಂಜನ್ ಗೌಡರನ್ನ ಕಣಕ್ಕಿಳಿಸಿತ್ತು. ಆದ್ರೆ, 16000 ಮತಗಳ ಭಾರೀ ಅಂತರದಲ್ಲಿ ರಂಜನ್ ಸೋಲನ್ನಪ್ಪಿದ್ರು. ಬೆಳ್ತಂಗಡಿ ಕ್ಷೇತ್ರದ ಮೇಲೆ ವಸಂತ ಬಂಗೇರರ ಹಿಡಿತ ಎಷ್ಟಿದೆ ಅನ್ನೋದಕ್ಕೆ ಮೂರು ಬೇರೆ ಬೇರೆ ಪಕ್ಷಗಳಿಂದ ಅವರು 5 ಬಾರಿ ಗೆದ್ದಿದ್ದೇ ಸಾಕ್ಷಿ. ಇನ್ನು ಈ ಬಾರಿಯೂ ರಂಜನ್ ಜಿ. ಗೌಡ ಟಿಕೆಟ್ ಬಯಸಿದ್ರೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ.

    ಪುತ್ತೂರಿನ ಮುತ್ತು ಶಕ್ಕು ಅಕ್ಕನ ತಾಕತ್ತು!
    ಪುತ್ತೂರು ಕ್ಷೇತ್ರದಲ್ಲಿ ಶಕ್ಕು ಅಕ್ಕನದ್ದೇ ದರ್ಬಾರ್ ಜೋರಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಬಂಡಾಯದ ಸ್ಪೋಟವಾಗಿದೆ. ಉರಿಮಜಲು ರಾಮಭಟ್ ರಿಂದ ರಾಜಕೀಯ ಪಟ್ಟುಗಳನ್ನ ಕಲಿತ ಶಕುಂತಳಾ ಶೆಟ್ಟಿ ನಂತರ ಕಾಂಗ್ರೆಸ್ ಕದ ತಟ್ಟಿದ್ದು ಇತಿಹಾಸ. 20 ವರ್ಷಗಳಿಂದ ಬಿಜೆಪಿ ಭದ್ರ ಕೋಟೆಯಾಗಿತ್ತು ಪುತ್ತೂರು. ಆದ್ರೆ, ಅದೇ ಬಿಜೆಪಿ ಬಿಟ್ಟು ಶಕುಂತಳಾ ಶೆಟ್ಟಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದಾಗ ಛಿದ್ರ ಛಿದ್ರವಾಯ್ತು. ಶಕ್ಕು ಅಕ್ಕನ ಕೈಬಿಡದ ಪುತ್ತೂರಿನ ಜನ 66,345 ಮತಗಳನ್ನು ಧಾರೆ ಎರೆದ್ರು. ಈ ಮೂಲಕ ಬಿಜೆಪಿ ವಿರುದ್ಧ ಟಿಕೆಟ್ ಕೈತಪ್ಪಿದ ಸೇಡು ತೀರಿಸಿಕೊಂಡು ಹೆಣ್ಣು ಮುನಿದರೆ ಮಾರಿ ಅನ್ನೋದನ್ನ ತೋರಿಸಿದ್ರು. ಈ ಬಾರಿಯೂ ಬಿಜೆಪಿಯಿಂದ ಸಂಜೀವ ಮಠಂದೂರು ಕಣಕ್ಕಿಳಿಯೋ ಹುರಿಯಾಳು.

  • ಲೂಟಿ ಮಾಡೋಕೆ ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿದೆ: ಶೋಭಾ ಕರಂದ್ಲಾಜೆ

    ಲೂಟಿ ಮಾಡೋಕೆ ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿದೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ. ಯಾವ ಆಧಾರದಲ್ಲಿ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಹೇಳುತ್ತಿದ್ದೀರಿ? ಲೂಟಿ ಮಾಡುವುದಕ್ಕೆ ಬಿಬಿಎಂಪಿ ಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಬಿಜೆಪಿ ಜೊತೆ ಹೋಗುತ್ತಿದೆ ಅಂತಾ ಹೇಳಿ ಅಲ್ಪಸಂಖ್ಯಾತರ ಓಲೈಕೆಗೆ ಸಿಎಂ ಮುಂದಾಗಿದ್ದಾರೆ. ಇದು ಭಯ ಹುಟ್ಟಿಸುವ ಪ್ರಯತ್ನ. ಬಿಬಿಎಂಪಿ ಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಿಗೆ ಇದ್ದು, ಒಟ್ಟಿಗೆ ಬೆಂಗಳೂರು ಹಾಳು ಮಾಡುತ್ತಿದ್ದಾರೆ. ಅಪವಿತ್ರ ಮೈತ್ರಿ ಮಾಡಿಕೊಂಡ ನೀವು ನಮಗೆ ನೈತಿಕತೆ ಪಾಠ ಮಾಡಬೇಕಾಗಿಲ್ಲ ಎಂದು ಕಿಡಿಕಾರಿದರು.

    ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾರೆ ಅಂತಾ ಕಾಂಗ್ರೆಸ್ ಹೇಳುತ್ತಿದೆ. ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು. ಎಸ್‍ಡಿಪಿಐ ಜೊತೆ ಎರಡು ತಿಂಗಳ ಹಿಂದೆಯೇ ಹೊಂದಾಣಿಕೆ ಆಗಿದೆ. ಕೊಲೆ ರಾಜಕಾರಣ ಮಾಡಿದ ಎಸ್‍ಡಿಪಿಐ ಜೊತೆ ಕಾಂಗ್ರೆಸ್ ಹೋಗುತ್ತಿದೆ. ಎಸ್‍ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್ ಗಾಗಿ ನಾಮಪತ್ರ ವಾಪಸ್ ಪಡೆಯುತ್ತಿದ್ದಾರೆ ಅದರ ಅರ್ಥವೇನು? ಎಸ್‍ಡಿಪಿಐ ಜೊತೆ ಏನು ಸಂಬಂಧ ಇದೆ? ಈ ವಿಚಾರವನ್ನು ಬಹಿರಂಗ ಮಾಡಿ ಎಂದು ಸಿಎಂಗೆ ಸವಾಲು ಹಾಕಿದರು.

    ಅಮಿತ್ ಶಾ ಕುಮಾರಸ್ವಾಮಿ ಭೇಟಿ ಆರೋಪ ಕುರಿತು ಪ್ರತಿಕ್ರಿಯಿಸಿ 13ನೇ ತಾರೀಖು ಅಮಿತ್ ಶಾ ಕುಮಾರಸ್ವಾಮಿ ಭೇಟಿ ಮಾಡಿಲ್ಲ. ಆ ದಿನ ಅಮಿತ್ ಶಾ ಗೆ ಪೊಲೀಸರು ರಕ್ಷಣೆ ಕೂಡ ಕೊಟ್ಟಿದ್ದರು. ಕುಮಾರಸ್ವಾಮಿ ಅಮಿತ್ ಶಾ ಭೇಟಿ ಮಾಡಿದ್ದಾರೆ ಎನ್ನಲಾದ ದಿನಾಂಕದಂದು ಶಾ ಕಾರ್ಯಕ್ರಮದ ವಿವರ ಬಿಡುಗಡೆ ಮಾಡಿದ ಅವರು ಗುಪ್ತಚರ ಇಲಾಖೆ ನಿಮ್ಮ ದಾರಿ ತಪ್ಪಿಸಿದೆಯಾ, ಪೊಲೀಸರ ಜೊತೆ ಕೇಳಿ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

    ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಸಿಎಂ ವಿಲವಿಲನೆ ಒದ್ದಾಡುತ್ತಿದ್ದಾರೆ. ಸಿಎಂಗೆ ಎರಡು ಕ್ಷೇತ್ರದಲ್ಲಿ ಸೋಲುತ್ತೇನೆ ಎಂದು ಭಾವಿಸಿ ಕೀಳು ಮಟ್ಟದ ರಾಜಕೀಯ ಶುರು ಮಾಡಿದ್ದಾರೆ. ಸಿಎಂ ರಕ್ತನೇ ಜನತಾದಳದ ರಕ್ತ. ಯಾವುದೋ ಕಾರಣಕ್ಕೆ ಕಾಂಗ್ರೆಸ್ ಬಂದಿದ್ದಾರೆ. ಬಿಜೆಪಿಗೆ ಈ ಬಾರಿ ಬಹುಮತ ಬರಲಿದೆ. ಯಾವುದೇ ಪಕ್ಷದ ಜೊತೆ ನಾವು ಹೋಗಲ್ಲ, ಯಾವ ಪಕ್ಷದ ಅಗತ್ಯತೆಯೂ ಬಿಜೆಪಿಗೆ ಇಲ್ಲ ಎಂದು ಅವರು ಹೇಳಿದರು.

  • ದಕ್ಷಿಣ ಕನ್ನಡದಲ್ಲಿ ಎಸ್‍ಡಿಪಿಐ ಜೊತೆಗೆ ಕಾಂಗ್ರೆಸ್ ಮೈತ್ರಿ!

    ದಕ್ಷಿಣ ಕನ್ನಡದಲ್ಲಿ ಎಸ್‍ಡಿಪಿಐ ಜೊತೆಗೆ ಕಾಂಗ್ರೆಸ್ ಮೈತ್ರಿ!

    ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ, ಮಂಗಳೂರು ಉತ್ತರ, ಸುಳ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತ ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಈ ಬಾರಿ ಚುನಾವಣಾ ಕಣಕ್ಕಿಳಿಸದಂತೆ ಕಾಂಗ್ರೆಸ್ ತಂತ್ರ ಹೂಡಿದೆ.

    ಸಚಿವ ರಮಾನಾಥ ರೈ ಪ್ರತಿನಿಧಿಸುವ ಬಂಟ್ವಾಳ ಕ್ಷೇತ್ರದಲ್ಲಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಎಸ್‍ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು, ರಿಯಾಜ್ ನಾಮಪತ್ರ ಹಿಂದೆಗೆಸಲು ಮುಂದಾಗಿದ್ದಾರೆ. ಈ ವಿಚಾರವನ್ನು ಎಸ್‍ಡಿಪಿಐ ನಾಯಕರು ಒಪ್ಪಿಕೊಂಡಿದ್ದು ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸದಂತೆ ತಡೆಯಲು ಈ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕರಾವಳಿಯ ಕ್ಷೇತ್ರಗಳಲ್ಲಿ ಈ ಬಾರಿ ನೆಕ್ ಟು ನೆಕ್ ಫೈಟ್ ಸಾಧ್ಯತೆಯಿದೆ. ಎಸ್‍ಡಿಪಿಐ ಈ ನಿರ್ಧಾರದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಟೀಕೆಗೆ ಗುರಿಯಾಗಿದೆ.