Tag: SDPI

  • ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಯ ನಂಟು – ಏನಿದು ಅಲ್ ಹಿಂದ್?

    ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಯ ನಂಟು – ಏನಿದು ಅಲ್ ಹಿಂದ್?

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಡೀ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ಗಲಭೆಯ ಹಿಂದೆ ಉಗ್ರಗಾಮಿ ಸಂಘಟನೆಯ ಪಾತ್ರವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್‌ ಭೈರಸಂದ್ರದ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮೀವುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಮೀವುದ್ದೀನ್‍ಗೆ ಆಲ್ ಹಿಂದ್ ಭಯೋತ್ಪಾದಕ ಸಂಘಟನೆಯ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್‌ ವಿರುದ್ಧ ಕೇಸ್‌ ದಾಖಲು

    ಡಿಜೆ ಹಳ್ಳಿ ಗಲಭೆ ವೇಳೆ ಸಮೀವುದ್ದೀನ್ ಸ್ಥಳದಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಮೀವುದ್ದೀನ್‍ನನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು, ಗಲಭೆ ಹಿಂದೆ ಉಗ್ರಗಾಮಿ ಸಂಘಟನೆ ಆಲ್ ಹಿಂದ್ ಪಾತ್ರವಿದೆಯಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

    ಶಿವಾಜಿನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡ ರುದ್ರೇಶ್ ಕೊಲೆ ಆರೋಪಿಗಳ ಜೊತೆಗೂ ಸಮೀವುದ್ದೀನ್‍ಗೆ ನಿಕಟ ನಂಟಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಪಿಗಳು ಉಗ್ರ ಸಂಘಟನೆಗಳ ಜೊತೆಗೂ ಲಿಂಕ್ ಇಟ್ಕೊಂಡಿದ್ದಾರಾ ಅಂತ ಪರಿಶೀಲನೆ ನಡೆಸಲಾಗ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಈ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

    ಏನಿದು ಅಲ್ ಹಿಂದ್?
    ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡು ಸ್ಥಾಪನೆಯಾದ ಸಂಘಟನೆಯೇ ಅಲ್ ಹಿಂದ್. ಉಗ್ರರಾದ ಮೆಹಬೂಬ್ ಪಾಷಾ, ಮೊಯಿದ್ದೀನ್ ಕ್ವಾಜಾ ಈ ಸಂಘಟನೆಯನ್ನು ಸ್ಥಾಪಿಸಿದ್ದು, ದಕ್ಷಿಣ ಭಾರತದಲ್ಲಿ (ಕರ್ನಾಟಕ, ಕೇರಳ) ಸಕ್ರಿಯವಾಗಿದೆ. 200-250 ಉಗ್ರರು ಈ ಸಂಘಟನೆಯಲ್ಲಿ ಇರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಲ್ ಹಿಂದ್ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಉಗ್ರರು ಹರಡಿರುವ ಶಂಕೆ ವ್ಯಕ್ತವಾಗಿದ್ದು, 2019ರಲ್ಲಿ ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ನಡೆದಿದ್ದ ಹಲವು ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಹಿಂದೂ ನಾಯಕರ ಹತ್ಯೆಯಲ್ಲಿ ಅಲ್ ಹಿಂದ್ ಪಾತ್ರವಿದೆ. ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಲ್ ಹಿಂದ್‍ನ ಉಗ್ರ ಶಿವಮೊಗ್ಗದ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ನೀಡಿದರೆ 3 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ತೀರ್ಥಹಳ್ಳಿ ಉಗ್ರನ ಪತ್ತೆ ಮಾಡ್ಕೊಟ್ಟರೆ 3 ಲಕ್ಷ ಬಹುಮಾನ- ಎನ್‍ಐಎ ಘೋಷಣೆ

  • ಕೆಜಿ ಹಳ್ಳಿಯಿಂದ ಸಾವಿರಾರು ಫೋನ್‌ ಕಾಲ್‌ – ತನಿಖೆ ವೇಳೆ ಬಯಲಾಗುತ್ತಿದೆ ಸ್ಫೋಟಕ ವಿಚಾರ

    ಕೆಜಿ ಹಳ್ಳಿಯಿಂದ ಸಾವಿರಾರು ಫೋನ್‌ ಕಾಲ್‌ – ತನಿಖೆ ವೇಳೆ ಬಯಲಾಗುತ್ತಿದೆ ಸ್ಫೋಟಕ ವಿಚಾರ

    – ಭಯಗೊಂಡು ಎಫ್‌ಬಿ ಖಾತೆ ಡಿಲೀಟ್‌, ಪುಂಡರು ಪರಾರಿ
    – ಮತ್ತೆ 57 ಆರೋಪಿಗಳು ಅರೆಸ್ಟ್‌

    ಬೆಂಗಳೂರು: ಗಲಭೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಗಳ ಫೋನ್ ಕಾಲ್ ಲೆಕ್ಕ ನೋಡಿ ಶಾಕ್ ಆಗಿದ್ದಾರೆ.

    ಘಟನೆ ನಡೆದ ರಾತ್ರಿ ಸುಮಾರು 30 ಆರೋಪಿಗಳ ಮೊಬೈಲ್‍ಗಳಿಂದ ಹೊರ ಜಿಲ್ಲೆಗಳಿಗೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಿಂದಲೇ ಸಾವಿರಾರು ಕಾಲ್ ಹೋಗಿದೆ. ಎಲ್ಲವನ್ನು ಡಿ-ಕೋಡಿಂಗ್ ಮಾಡುವ ಕೆಲಸ ಆರಂಭಗೊಂಡಿದೆ. ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಪೊಲೀಸರು 800ಕ್ಕೂ ಸಿಸಿಟಿವಿಗಳನ್ನು ವಶಕ್ಕೆ ಪಡೆದಿದ್ದಾರೆ.

    ದೊಂಬಿ ನಡೆಯುವ ಹಿಂದಿನ ದಿನ ಪುಂಡರನ್ನು ಸೇರಿಸಲು 10 ಫೇಸ್‍ಬುಕ್ ಲೈವ್ ಮಾಡಲಾಗಿತ್ತು. ಪ್ರಚೋದಿಸುವ ಮೂಲಕ 50 ಜನರಿದ್ದ ಗುಂಪನ್ನು 5 ಸಾವಿರಕ್ಕೆ ಏರಿಸಲಾಗಿತ್ತು. ಫೇಸ್‍ಬುಕ್ ಲೈವ್ ನಡೆಸಿದ್ದ ಪುಂಡರು ಪರಾರಿಯಾಗಿದ್ದಾರೆ. ಬಹುತೇಕರು ಎಫ್‍ಬಿ ಅಕೌಂಟ್ ಡಿಲೀಟ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಡಿಜೆ ಹಳ್ಳಿ ಪೊಲೀಸರು ತಡರಾತ್ರಿ ಪ್ರಮುಖ ಆರೋಪಿ ಎಸ್‍ಡಿಪಿಐನ ಸಲೀಂ ಸೇರಿದಂತೆ 57 ಮಂದಿಯನ್ನು ಬಂಧಿಸಿದ್ದು, ಈವರೆಗೆ 370ಕ್ಕೂ ಹೆಚ್ಚು ಆರೋಪಿಗಳು ಅಂದರ್ ಆಗಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಉದ್ಘಾಟನೆಗೆ ಸಿದ್ದವಾಗಿದ್ದ ಹೆಗ್ಗಡೆನಗರದ ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 8 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ವೇಳೆ ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿ ಮುಜಾಮ್ಮಿಲ್ ಹೇಳಿಕೆ ಆಧರಿಸಿ ಸಾರಾಯಿಪಾಳ್ಯದಲ್ಲಿ 20ಕ್ಕೂ ಜನರನ್ನು ಸಿಸಿಬಿ ಬಂಧಿಸಿದೆ. ಮೊನ್ನೆ ಅರೆಸ್ಟ್ ಆದ ಕಾರ್ಪೊರೇಟರ್ ಪತಿ ಖಲೀಂ ಪಾಷಾ, ಮೊಬೈಲ್‍ನಲ್ಲಿ ಇಡೀ ಗಲಭೆಯ ಪಿನ್ ಟು ಪಿನ್ ಬ್ಲೂ ಪ್ರಿಂಟ್ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಎಸ್‌ಡಿಪಿಐ ನಿಷೇಧಕ್ಕೆ ಮುಹೂರ್ತ ಫಿಕ್ಸ್‌ – ಸರ್ಕಾರ ನೀಡಿದೆ 10 ಚಾರ್ಜ್‌ಶೀಟ್‌

    ಎಸ್‌ಡಿಪಿಐ ನಿಷೇಧಕ್ಕೆ ಮುಹೂರ್ತ ಫಿಕ್ಸ್‌ – ಸರ್ಕಾರ ನೀಡಿದೆ 10 ಚಾರ್ಜ್‌ಶೀಟ್‌

    ಬೆಂಗಳೂರು: ಸೋಷಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಸಂಘಟನೆಗೆ ಬೆಂಗಳೂರು ಗಲಭೆ ಉರುಳಾಗುವಂತೆ ಕಾಣುತ್ತಿದೆ. ಕಾಡುಗೊಂಡನಹಳ್ಳಿ, ದೇವರಜೀವನಹಳ್ಳಿ ಗಲಭೆಯಲ್ಲಿ ಸೋಷಿಯಲ್ ಎಸ್‍ಡಿಪಿಐ ನೇರ ಪಾತ್ರ ಇದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೇ, ಎಸ್‍ಡಿಪಿಐ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

    ತನಿಖೆಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಪೂರ್ಣ ವರದಿಯನ್ನು ಇವತ್ತು ಗೃಹ ಸಚಿವರು ನೀಡಿದ್ದು, ಎಸ್‍ಡಿಪಿಐ ಪಾತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಎಸ್‍ಡಿಪಿಐನ ಭಿನ್ನಾಭಿಪ್ರಾಯ ಕೂಡ ಈ ಗಲಭೆಗೆ ಕಾರಣ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    ಎಸ್‍ಡಿಪಿಐ ಬ್ಯಾನ್ ಮಾಡುವುದಕ್ಕೆ ಅಗತ್ಯವಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಸಿಎಂ ಸೂಚನೆ ಕೊಟ್ಟ ತಕ್ಷಣ ಮುಂದುವರೆಯುತ್ತೇವೆ. ಸರ್ಕಾರ ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಕಠಿಣ ಕ್ರಮ ತೆಗೆದುಕೊಂಡು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.

    ಇದು ಕಾಂಗ್ರೆಸ್ ಸರ್ಕಾರ ಅಲ್ಲ ರಾಜಾಹುಲಿ ಸರ್ಕಾರ. ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ಎರಡನೇ ಹಂತದ ನಾಯಕರನ್ನು ಟಾರ್ಗೆಟ್ ಮಾಡುತ್ತಿವೆ. ಭವಿಷ್ಯದಲ್ಲಿ ನಾಯಕರಾಗಲಿರುವವರೇ ಇವರ ಟಾರ್ಗೆಟ್ ಎಂದು ಅಶೋಕ್ ಆರೋಪಿಸಿದ್ದಾರೆ.

    ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2008ರಿಂದ ಇಲ್ಲಿಯವರೆಗೂ ಒಟ್ಟು 17 ಪ್ರಕರಣಗಳಲ್ಲಿ ಎಸ್‍ಡಿಪಿ, ಪಿಎಫ್‍ಐ ಭಾಗಿಯಾಗಿರೋದಕ್ಕೆ ಪುರಾವೆ ಇದೆ.

    ಮಾಜಿ ಮಂತ್ರಿ ದಿನೇಶ್ ಗುಂಡೂರಾವ್, ಎಸ್‍ಡಿಪಿಐ ಬ್ಯಾನ್ ಮಾಡೋದಕ್ಕೆ ಕಾರಣಗಳು ಬೇಕು. ಕಾರಣಗಳನ್ನು ಕೊಟ್ಟು ಬ್ಯಾನ್ ಮಾಡಲಿ ಬೇಡ ಎನ್ನಲ್ಲ ಎಂದಿದ್ದಾರೆ. ಎಸ್‍ಡಿಪಿಐ ಮಾತ್ರ ನಾವು ತಪ್ಪೇ ಮಾಡಿಲ್ಲ. ಈ ಗಲಭೆ ಹಿಂದೆ ಬಿಜೆಪಿ ಕುಮ್ಮಕ್ಕಿದೆ ಎಂದು ಆರೋಪಿಸಿದೆ.

    ಸರ್ಕಾರದ 10 ಚಾರ್ಜ್‍ಶೀಟ್‌ಗಳು
    1. ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಕೊಲೆಯಲ್ಲಿ 9 ಅಪರಾಧಿಗಳು ಎಸ್‍ಡಿಪಿಐನವರು
    2. ಆರ್‌ಎಸ್‌ಎಸ್‌ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ. ಕಸಾಯಿಖಾನೆ ಮುಚ್ಚಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಬಂಧಿತರು ಪಿಎಫ್‍ಐ ಕಾರ್ಯಕರ್ತರಾಗಿದ್ದರು.
    3. ಎಸ್‍ಡಿಪಿಐನಿಂದಲೇ ಮೈಸೂರಿನ ರಾಜು ಕೊಲೆ .ಗಣೇಶ ಮಂದಿರ ಕಟ್ಟುವ ವಿಚಾರದಲ್ಲಿ ಹತ್ಯೆ
    4. ಶಿವಾಜಿನಗರದ ಆರ್‌ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯಲ್ಲಿ ಭಾಗಿ. ಪಥ ಸಂಚಲನ ಮುಗಿಸಿ ಬರುವಾಗ ಕೊಲೆ ನಡೆದಿತ್ತು.


    5. ಟಿಪ್ಪು ಜಯಂತಿ ವಿರೋಧಿಸಿದ್ದ ಮಡಿಕೇರಿಯ ಕುಟ್ಟಪ್ಪ ಕೊಲೆ
    6. ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿಯೂ ಇದೇ ಸಂಘಟನೆ ಕೈವಾಡ
    7. ಹುಣಸೂರಿನ ಇಬ್ಬರು ಯುವಕರ ಅಪಹರಣ ಮತ್ತು ಕೊಲೆ
    8. ಮೈಸೂರಿನಲ್ಲಿ ನಡೆದ ಕೊಲೆ ಸಂಬಂಧ 9 ಕೇಸ್ ದಾಖಲು
    9. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿ
    10. ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆಗೆ ಜೀವ ಬೆದರಿಕೆ

  • ಶಂಕರಾಚಾರ್ಯರ ಪುತ್ಥಳಿ ಮೇಲೆ ಬಾವುಟ ಹಾಕಿದ್ದು ಮಿಲಿಂದ್‌ – ಎಸ್‍ಡಿಪಿಐ

    ಶಂಕರಾಚಾರ್ಯರ ಪುತ್ಥಳಿ ಮೇಲೆ ಬಾವುಟ ಹಾಕಿದ್ದು ಮಿಲಿಂದ್‌ – ಎಸ್‍ಡಿಪಿಐ

    – ಇದು ಬಿಜೆಪಿಯ ಕೃತ್ಯ

    ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ನಮ್ಮ ಸಂಘಟನೆಯ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಸಂಘಟನೆಯ ಬಾವಟ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಮಾಜಿ ಶಾಸಕ ಜೀವರಾಜ್ ನಡು ರಸ್ತೆಯಲ್ಲಿ ನಿಂತು ಪೊಲೀಸರಿಗೆ ಆವಾಜ್ ಹಾಕುತ್ತಾರೆ. ಜೊತೆಗೆ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ಚೆಕ್ ಮಾಡಿದಾಗ ನಿಜಾಂಶ ಗೊತ್ತಾಗಿದೆ ಎಂದರು.

    ಮೀಲಿಂದ್ ಎಂಬ ಯುವಕ ಮಸೀದಿಗೆ ಹೋಗಿ ಅಲ್ಲಿಂದ ಬಾವುಟವನ್ನು ಕದ್ದುಕೊಂಡು ಹೋಗಿದ್ದಾನೆ. ಆತ ಹಿಂದೂ ಸಂಘಟನೆಯ ಯುವಕ, ಆತನಿಗೂ ಮಾಜಿ ಶಾಸಕ ಜೀವರಾಜ್‍ಗೂ ಸಂಬಂಧವಿದೆ. ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟ ಪ್ರಚಾರ ಮಾಡೋದಕ್ಕಾಗಿ ಈ ರೀತಿ ಮಾಡಿದ್ದಾರೆ. ಇದು ಬಿಜೆಪಿಯ ಕುತಂತ್ರ. ನಮ್ಮ ಎಸ್‍ಡಿಪಿಐ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಸಮುದಾಯದ ನಡುವೆ ಗಲಭೆ ಸೃಷ್ಟಿ ಮಾಡುವ ಕೆಲಸ ಸಂಘಪರಿವಾರದವರು ಮಾಡುತ್ತಾಲೇ ಬರುತ್ತಿದ್ದಾರೆ ಎಂದು ದೂರಿದರು.

    ಬಾವುಟ ಕದ್ದುಕೊಂಡು ಹೋದ ಯುವಕ ಮೀಲಿಂದ್ ಒಬ್ಬ ಕುಡುಕ ಅಂತಾ ಹೇಳುತ್ತಾರೆ. ಈ ಷಡ್ಯಂತ್ರ ಉತ್ತಮ ಬೆಳವಣಿಗೆ ಅಲ್ಲ. ಕೂಡಲೇ ಮಾಜಿ ಶಾಸಕ ಜೀವರಾಜ್ ಅವರನ್ನು ಆರೆಸ್ಟ್ ಮಾಡಬೇಕು ಎಂದು ಇಲಿಯಾಸ್ ಮಹಮ್ಮದ್ ಒತ್ತಾಯ ಮಾಡಿದರು.

  • ಅಲ್ಲಾ ಎಲ್ಲವನ್ನು ಕೊಡ್ತಾನೆ, ಚಿಂತೆ ಮಾಡ್ಬೇಡಿ – ಅಖಂಡಗೆ ಧೈರ್ಯ ತುಂಬಿದ ಮೌಲ್ವಿಗಳು

    ಅಲ್ಲಾ ಎಲ್ಲವನ್ನು ಕೊಡ್ತಾನೆ, ಚಿಂತೆ ಮಾಡ್ಬೇಡಿ – ಅಖಂಡಗೆ ಧೈರ್ಯ ತುಂಬಿದ ಮೌಲ್ವಿಗಳು

    ಬೆಂಗಳೂರು: ಅಲ್ಲಾ ಎಲ್ಲವನ್ನೂ ಕೊಡ್ತಾನೆ ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೌಲ್ವಿಗಳು ಧೈರ್ಯ ತುಂಬಿದ್ದಾರೆ.

    ಗಲಭೆಯಿಂದ ಹೊತ್ತಿ ಉರಿದ ಶಾಸಕರ ಕಾವಲ್‌ ಭೈರಸಂದ್ರದಲ್ಲಿರುವ ಶಾಸಕರ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮೌಲ್ವಿಗಳು ಭೇಟಿ ನೀಡಿ ವೀಕ್ಷಿಸಿದರು.

    ಹೊತ್ತಿ ಉರಿದ ಮನೆಯನ್ನು ಅಖಂಡ ತೋರಿಸುವ ಸಂದರ್ಭದಲ್ಲಿ ಮೌಲ್ವಿ ಇರ್ಷಾದ್ ಅಹಮ್ಮದ್, ಅಖಂಡ ಶ್ರೀನಿವಾಸ್ ನಮಗೆ ಮನೆ ಮಗ ಇದ್ದಂತೆ. ಎಲ್ಲಾ ಮಸೀದಿಗಳು ನಿಮ್ಮ ಜೊತೆ ಇರುತ್ತದೆ. ಅಲ್ಲಾ ಎಲ್ಲವನ್ನೂ ಕೊಡುತ್ತಾನೆ. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್‌, ಮನೆ ಕಟ್ಟಿಸಿಕೊಡುವುದಾಗಿ ಧರ್ಮಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಾವು ಸ್ವಂತ ಹಣ ದಿಂದ ಮನೆ ಕಟ್ಟಿಸಿಕೊಡೊದಾಗಿ ಹೇಳಿದ್ದಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಅಖಂಡ, ಮನೆಯನ್ನು ನಾನೇ ನಿರ್ಮಿಸುತ್ತೇನೆ. ಗುರುಗಳ ಆಶೀರ್ವಾದ ಸದಾ ಇರಲಿ. ನಾವೇ ಹೋಗಿ ಮಾತನಾಡಿಕೊಂಡು ಬರಬೇಕಾಗಿತ್ತು. ಗುರುಗಳೇ ಬಂದು ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

    ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ದೂರಿನಲ್ಲಿ ಯಾರ ಹೆಸರನ್ನು ಹೇಳಿಲ್ಲ. ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದು ತಿಳಿಸಿದ್ದರು.

  • ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?

    – 6 ತಿಂಗಳ ಹಿಂದೆ ಎಸ್‌ಡಿಪಿಐಗೆ ಬಂದು ಸೇರಿದ್ದ
    – ಭಯೋತ್ಪಾದಕ ಸಂಘಟನೆಗಳಿಗೆ ಸ್ಲೀಪರ್ ಸೆಲ್?

    ಬೆಂಗಳೂರು: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು ಇದ್ಯಾ ಈ ಪ್ರಶ್ನೆಯನ್ನು ಇಟ್ಟುಕೊಂಡು ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಲಾಭೆಯ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಮೊಬೈಲ್‌ ಕರೆ, ವಾಟ್ಸಪ್‌ ಕಾಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಗಲಭೆಯ ಸಂಚುಕೋರ ಮುಜಾಮಿಲ್‍ ಕರೆಯಲ್ಲಿ ಸ್ಫೋಟಕ ವಿಚಾರಗಳು ಲಭ್ಯವಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಪಿಎಫ್‌ಐ ಸಂಘಟನೆ ಸದಸ್ಯನಾಗಿದ್ದ ಮುಜಾಮಿಲ್‌ ಪಾಷಾ 6 ತಿಂಗಳ ಹಿಂದೆ ಎಸ್‌ಡಿಪಿಐ ಸಂಘಟನೆ ಸೇರಿದ್ದ. ಬೆಂಗಳೂರು ಗಲಭೆಯ ಎ1 ಆರೋಪಿ ಆಗಿರುವ ಈತ ಭಯೋತ್ಪಾದನಾ ಸಂಘಟನೆಗಳಿಗೆ ಸ್ಲೀಪರ್‌ ಸೆಲ್‌ ಆಗಿ ಕೆಲಸ ಮಾಡುತ್ತಿದ್ದಾನಾ ಎಂಬ ಅನುಮಾನ ಮೂಡಿದೆ.

    ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಜೊತೆ ಭಯೋತ್ಪಾದನಾ ಸಂಘಟನೆಗಳ ನಂಟು ಇದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಈಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ: ವಿಡಿಯೋ: ನವೀನ್ ತಲೆ ತಂದವ್ರಿಗೆ 51 ಲಕ್ಷ ಕೊಡ್ತೀನಿ- ಮುಸ್ಲಿಂ ನಾಯಕ ಘೋಷಣೆ

    ಗಲಭೆಯಲ್ಲಿ ಪಾಲ್ಗೊಂಡವರಿಗೆ ಈತ ಹಣವನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪವೂ ಇದೆ. ಹೀಗಾಗಿ ಈತನಿಗೆ ಹಣವನ್ನು ನೀಡಿದವರು ಯಾರು? ಈತನ ಖಾತೆಗೆ ಎಲ್ಲಿಂದ ಹಣ ಜಮೆ ಆಗುತ್ತಿತ್ತು? ಇಷ್ಟು ಪ್ರಮಾಣದಲ್ಲಿ ಜನರನ್ನು ಸೇರಿಸಿದ್ದು ಹೇಗೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಯುತ್ತಿದೆ.

    ಸದ್ಯ ನಡೆಯುತ್ತಿರುವ ವಿಚಾರಣೆ ವೇಳೆ ನಾನು ಧರ್ಮವನ್ನು ಪಾಲಿಸುವ ವ್ಯಕ್ತಿ ಎಂದಷ್ಟೇ ಹೇಳುತ್ತಿದ್ದಾನೆ. ಬೇರೆ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ ಎಂಬುದಾಗಿ ಉತ್ತರಿಸುತ್ತಿದ್ದಾನೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಒಂದು ವೇಳೆ ಮುಜಾಮಿಲ್‌ ಪಾಷಾನ ವಾಟ್ಸಪ್‌, ಇಮೇಲ್‌, ಮೊಬೈಲ್‌ ಕರೆಗಳ ತನಿಖೆಯ ವೇಳೆ ಹೊರ ದೇಶ ಅಥವಾ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕದ ಶಂಕೆ ವ್ಯಕ್ತವಾದರೆ ಈ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಎಂಟ್ರಿ ಕೊಡಲಿದೆ. ಒಂದು ವೇಳೆ ಎನ್‌ಐಎ ಎಂಟ್ರಿ ನೀಡಿದರೆ ಈಗ ನಡೆಯುತ್ತಿರುವ ಮ್ಯಾಜಿಸ್ಟ್ರೇಟ್‌ ತನಿಖೆಯ ಸ್ವರೂಪವೇ ಬದಲಾಗಲಿದೆ. ಇದನ್ನೂ ಓದಿ: ಸರ್ಕಾರಿ ಸಂಬಳ ತಗೊಂಡು ಬೆಂಕಿ ಇಟ್ಟ ಕಿರಾತಕ- ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್

    ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ದೇಶದಲ್ಲಿ ದಾಳಿ ನಡೆಸಲು ಮತ್ತು ಭಯೋತ್ಪಾದಕರನ್ನು ತಯಾರಿಸಲು ಇಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸುವುದು ಹೊಸದೆನಲ್ಲ. ಬಡ ಯುವಕರಲ್ಲಿ ಮತೀಯ ಭಾವನೆಗಳನ್ನು ಬೆಳೆಸಿ ತಮ್ಮ ಕೃತ್ಯದಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡುವುದನ್ನು ಉಗ್ರ ಸಂಘಟನೆಗಳು ಮಾಡಿಕೊಂಡೇ ಬಂದಿದೆ. ಈ ಯುವಕರಿಗೆ ಹಣದ ಆಮಿಷವನ್ನು ಒಡ್ಡಿ ಉಗ್ರ ಸಂಘಟನೆಗಳಿಗೆ ಸೇರುವಂತೆ ಮಾಡುವುದು ಸ್ಲೀಪರ್‌ ಸೆಲ್‌ ಸದಸ್ಯರ ಕೆಲಸ. ಈ ವ್ಯಕ್ತಿಗಳು ಸಮಾಜ ಸುಧಾರಕರಂತೆ ಬಿಂಬಿಸುತ್ತಾ ಒಳಗಡೆ ಉಗ್ರ ಕೃತ್ಯಗಳಿಗೆ ಸಾಥ್‌ ನೀಡುತ್ತಿರುತ್ತಾರೆ.

  • ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್‌

    ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್‌

    ಬೆಂಗಳೂರು: ಗಲಭೆಯಲ್ಲಿ ಎಸ್‍ಡಿಪಿಐ ಜೊತೆಗೆ ಮತ್ತೊಂದು ಸಂಘಟನೆ ಕೂಡ ಸಾಥ್ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಫೈರೋಜ್ ಖಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ನೇರವಾಗಿ ಎಲ್ಲೂ ಗಲಭೆಯಲ್ಲಿ ಕಾಣಿಸಿಕೊಳ್ಳದ ಆರ್‌ಟಿ ನಗರದದ ನಿವಾಸಿ ಫೈರೋಜ್, ತೆರೆ ಹಿಂದಿದ್ದು ಮುಜಾಮಿಲ್ ಪಾಷಾ ಮೂಲಕವಾಗಿ ರಕ್ತದೋಕುಳಿಗೆ ಸ್ಕೆಚ್ ಹಾಕಿಕೊಟ್ಟಿದ್ದ ಎಂದು ತಿಳಿದುಬಂದಿದೆ.

    ಗಲಭೆ ನಡೆದ ದಿನ ಅಂದರೆ ಮಂಗಳವಾರ ಸಂಜೆ ಆರರಿಂದಲೇ ಫೈರೋಜ್ ಎಲ್ಲರಿಗೂ ಮೆಸೇಜ್ ಶೇರ್ ಮಾಡಿದ್ದ. ಯಾರ್ಯಾರು ಎಲ್ಲಿಗೆ ಹೋಗಿ ಏನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೇ ವಾಟ್ಸಪ್ ಸಂದೇಶಗಳ ಮೂಲಕ ಗಲಾಟೆ ಮಾಡಬೇಕೆಂದು ಕೆಲವೊಂದು ಮೌಲ್ವಿಗಳಿಗೆ ಹೇಳಿಕೊಟ್ಟಿದ್ದ. ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಫೈರೋಜ್‍ನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಗಲಭೆ ಸಂಬಂಧ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಮೂವರಿಗೆ ಕೊರೋನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

  • ಮೋದಿ, ಶಾ ವಿರುದ್ಧ ಅವಹೇಳನಕಾರಿ ಪೋಸ್ಟ್ – ಎಸ್‍ಡಿಪಿಐ ಕಾರ್ಯಕರ್ತರ ಬಂಧನ

    ಮೋದಿ, ಶಾ ವಿರುದ್ಧ ಅವಹೇಳನಕಾರಿ ಪೋಸ್ಟ್ – ಎಸ್‍ಡಿಪಿಐ ಕಾರ್ಯಕರ್ತರ ಬಂಧನ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಇಬ್ಬರು ಎಸ್‍ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

    ಮಹಮ್ಮದ್ ಇಲ್ಯಾಸ್,ಅಬ್ದುಲ್ ಬಷೀರ್ ಬಂಧಿತ ಆರೋಪಿಗಳು. ಮೈಕಾಲ್ತೊ ಬಿಸಯಾ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಕೊರೊನಾಕ್ಕಿಂತಲೂ ಭಯಾನಕ ಮೋದಿ, ಒಂದೇ ದಿನ ಎರಡು ಸಾವಿರ ಜನರನ್ನು ಬಲಿ ತೆಗೆದುಕೊಂಡ ಮೋದಿ ವೈರಸ್, ನಮ್ಮ ದೇಶದಲ್ಲಿ ಅತೀ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಜೀವಂತ ಕೊರೊನಾ ಎಂದು ಅಮಿತ್ ಶಾ ಫೋಟೋವನ್ನು ಎಡಿಟ್ ಮಾಡಲಾಗಿತ್ತು.

    ಅಮಿತ್ ಶಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯ ಫೋಟೋವನ್ನು ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಾರ್ಯಚರಣೆ ನಡೆಸಿದ ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

  • ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    – ಪ್ರತಿ ವಾರ್ಡ್ ಗೆ ಬಿಜೆಪಿಯಿಂದ 50 ಲಕ್ಷ ಖರ್ಚು-ಕೈ ಶಾಸಕ
    – ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು ಎಂದ ಶಾಸಕ ಮಂಜುನಾಥ್

    ಮೈಸೂರು: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಇಲ್ಲಿ ಕೇವಲ 22 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು.

    ಬಿಜೆಪಿಯಿಂದ ವಾರ್ಡ್ ಗೆ 50 ಲಕ್ಷ ರೂ: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಬಗ್ಗೆ ಶಾಸಕ ಹೆಚ್.ಪಿ. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಹಣದಿಂದಲೇ ಹುಣಸೂರು ನಗರಸಭೆ ಚುನಾವಣೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ವಾರ್ಡಿಗೆ 50 ಲಕ್ಷ ಹಣ ಖರ್ಚು ಮಾಡಲಾಗಿದೆ. ಇತ್ತೀಚಿಗೆ ನಡೆದ ಹುಣಸೂರು ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಾಗಲೇ ಇದರ ಸೂಚನೆ ಸಿಕ್ಕಿತ್ತು. ಹೀಗಾಗಿಯೇ ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಬಿಜೆಪಿ ಗೆ ಮೂರು ಸ್ಥಾನ ಬಂದಿದೆ. ಇಲ್ಲವಾದಲ್ಲಿ ಇನ್ನಷ್ಟು ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು ಎಂದು ಹೇಳಿದ್ದಾರೆ.

    ಈಗ ಅಧಿಕಾರ ಹಿಡಿಯಲು ಯಾರನ್ನು ಮನವೊಲಿಸಲು ಹೋಗೋಲ್ಲ. ಮನವೊಲಿಕೆ ಮಾಡೋದು ತಮಾಷೆಯ ವಿಚಾರವೂ ಅಲ್ಲ. ಯಾರು ಬೇಷರತ್ ಬೆಂಬಲ ಕೊಡುತ್ತಾರೆ ಅಂತವರನ್ನ ಸೇರಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಈ ನಗರಸಭೆ ನನಗೆ ಯುಗಾದಿ ರೀತಿ ಬೇವು-ಬೆಲ್ಲ ಎರಡು ನೀಡಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

    ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು: ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿಯದ್ದು ಸಾಧನೆಯಲ್ಲ. ನಗರಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಎಸ್‍ಡಿಪಿಐ ಪಕ್ಷದ್ದು ದೊಡ್ಡ ಸಾಧನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು 7 ಸಾವಿರ ಇದ್ದ ಮತಗಳನ್ನ 50 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದೇನೆ ಅಂತಾರೆ. ಆ ಮತಗಳಿಗೆ ಈ ಸ್ಥಾನಗಳಿಗೆ ಸಾಟಿಯೆ? ಆದರೆ ಏನು ಇಲ್ಲದ ಎಸ್‍ಡಿಪಿಐ 2 ಸ್ಥಾನ ಗೆದ್ದಿರುವುದು ಸಾಧನೆ. 3 ಸ್ಥಾನ ಗೆದ್ದ ಬಿಜೆಪಿ ಗಿಂತಾ 2 ಸ್ಥಾನ ಗೆದ್ದ ಎಸ್‍ಡಿಪಿಐರದ್ದು ಸಾಧನೆ ದೊಡ್ಡದು ಎಂದ್ರು.

    ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಹೋಗಲ್ಲ: ಹುಣಸೂರು ನಗರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಮಾಧಾನಕರ ಸಾಧನೆ ಮಾಡಿದೆ. ಹಿಂದೆ ಜಿಟಿಡಿ ಹಾಗೂ ಚಿಕ್ಕಮಾದು ಅವರಂಥ ಘಟಾನುಘಟಿ ನಾಯಕರಿದ್ದು 9 ಸ್ಥಾನ ಗೆದ್ದಿದ್ದೇವು. ಈಗ ಯಾವ ನಾಯಕರು ಇಲ್ಲದೆ 7 ಸ್ಥಾನ ಗೆದ್ದಿದ್ದೇವೆ. ಉಪಚುನಾವಣೆ ಮತಗಳಿಗೂ ನಗರಸಭೆ ಚುನಾವಣೆಗು ವ್ಯತ್ಯಾಸ ಇದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ. ಪಕ್ಷೇತರರ ಸಹಾಯ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರ.

    1ನೇ ವಾರ್ಡ್-ದೇವರಾಜ್- ಜೆಡಿಎಸ್
    2ನೇ ವಾರ್ಡ್- ಆಶಾರಾಣಿ- ಪಕ್ಷೇತರ
    3ನೇ ವಾರ್ಡ್- ಅನಿಷಾ- ಕಾಂಗ್ರೆಸ್
    4ನೇ ವಾರ್ಡ್- ಭವ್ಯ- ಕಾಂಗ್ರೆಸ್
    5ನೇ ವಾರ್ಡ್- ಸ್ವಾಮಿಗೌಡ- ಕಾಂಗ್ರೆಸ್
    6ನೇ ವಾರ್ಡ್- ದೇವನಾಯ್ಕ- ಕಾಂಗ್ರೆಸ್
    7ನೇ ವಾರ್ಡ್- ಶರವಣ- ಜೆಡಿಎಸ್
    8ನೇ ವಾರ್ಡ್- ಸತೀಶ್- ಪಕ್ಷೇತರ
    9ನೇ ವಾರ್ಡ್- ಸಮೀನಾ ಪರ್ವೇಜ್- ಕಾಂಗ್ರೆಸ್
    10ನೇ ವಾರ್ಡ್- ರಮೇಶ್- ಪಕ್ಷೇತರ
    11ನೇ ವಾರ್ಡ್- ಹರೀಶ್ ಕುಮಾರ್- ಬಿಜೆಪಿ
    12ನೇ ವಾರ್ಡ್- ವಿವೇಕ್- ಬಿಜೆಪಿ
    13ನೇ ವಾರ್ಡ್- ಮಾಲಕ್ ಪಾಷಾ- ಪಕ್ಷೇತರ
    14ನೇ ವಾರ್ಡ್- ಸಾಯಿಂತಾಜ್- ಜೆಡಿಎಸ್
    15ನೇ ವಾರ್ಡ್- ಸೌರಭ ಸಿದ್ದರಾಜು- ಕಾಂಗ್ರೆಸ್
    16ನೇ ವಾರ್ಡ್- ಕೃಷ್ಣರಾಜ ಗುಪ್ತ- ಜೆಡಿಎಸ್
    17ನೇ ವಾರ್ಡ್- ಮನು- ಕಾಂಗ್ರೆಸ್
    18ನೇ ವಾರ್ಡ್- ಹೆಚ್.ಎನ್.ರಮೇಶ್- ಕಾಂಗ್ರೆಸ್
    19ನೇ ವಾರ್ಡ್- ಶ್ರೀನಾಥ್- ಜೆಡಿಎಸ್
    20ನೇ ವಾರ್ಡ್- ಫರ್ವಿನ್ ತಾಜ್- ಪಕ್ಷೇತರ
    21ನೇ ವಾರ್ಡ್- ರಾಣಿ ಪೆರುಮಾಳ್- ಜೆಡಿಎಸ್
    22ನೇ ವಾರ್ಡ್- ಜೆಬಿವುಲ್ಲಾ ಖಾನ್- ಕಾಂಗ್ರೆಸ್
    23ನೇ ವಾರ್ಡ್- ರಂಜಿತಾ- ಕಾಂಗ್ರೆಸ್
    24ನೇ ವಾರ್ಡ್- ಗೀತಾ- ಕಾಂಗ್ರೆಸ್
    25ನೇ ವಾರ್ಡ್- ಮಂಜ- ಕಾಂಗ್ರೆಸ್
    26ನೇ ವಾರ್ಡ್- ಗಣೇಶ್ ಕುಮಾರಸ್ವಾಮಿ- ಬಿಜೆಪಿ
    27ನೇ ವಾರ್ಡ್- ರಾಧಾ- ಜೆಡಿಎಸ್
    28 ನೇ ವಾರ್ಡ್- ಶ್ವೇತಾ ಮಂಜು- ಕಾಂಗ್ರೆಸ್
    29ನೇ ವಾರ್ಡ್- ಪ್ರಿಯಾಂಕ ಥಾಮಸ್- ಕಾಂಗ್ರೆಸ್
    30ನೇ ವಾರ್ಡ್- ಸಮೀನಾಭಾನು- ಎಸ್‍ಡಿಪಿಐ
    31ನೇ ವಾರ್ಡ್- ಸೈಯದ್ ಯೂನಸ್- ಎಸ್‍ಡಿಪಿಐ

  • ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುತ್ತೇವೆ: ಈಶ್ವರಪ್ಪ

    ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುತ್ತೇವೆ: ಈಶ್ವರಪ್ಪ

    -ಸಚಿವಾಕಾಂಕ್ಷಿಗಳ ಋಣ ನಮ್ಮ ಮೇಲಿದೆ

    ಮೈಸೂರು: ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದರು.

    ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿಯವರು ಸಿನಿಮಾ ಮಾಡಿಕೊಂಡು ಇರಲಿ ಸಾಕು. ಅವರು ಸಿಎಂ ಆಗಿದ್ದವರು, ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು ಎಂದರು.

    ಋಣ ತೀರಿಸುತ್ತೇವೆ: ಸಚಿವ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ, ಬಿಜೆಪಿಗೆ ಬಂದು ಗೆದ್ದಿರುವ ಶಾಸಕರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಅವರ ಋಣವನ್ನು ನಾವು ತೀರಿಸಬೇಕಿದೆ ಅಷ್ಟೇ, ಇನ್ನೆರಡು ದಿನಗಳಲ್ಲಿ ಅದು ಆಗಲಿದೆ ಎಂದು ತಿಳಿಸಿದರು.

    ಪೂರ್ಣ ಬಹುಮತ ಬಾರದ ಕಾರಣ ಈ ಗೊಂದಲ ಉಂಟಾಗಿದೆ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ. ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಆಗಮಿಸಿದ ವೇಳೆ ಏನು ಚರ್ಚೆಯಾಗಿದೆ ನನಗೆ ಮಾಹಿತಿ ಇಲ್ಲ. ನಿಮಗೆ ಇರುವಷ್ಟೇ ಮಾಹಿತಿ ನನಗಿದೆ ಎಂದರು.

    ಈ ಬಗ್ಗೆ ಕಾಂಗ್ರೆಸ್ ಟೀಕೆಯಲ್ಲಿ ಅರ್ಥವಿಲ್ಲ. ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನ ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನ ವಿರೋಧಿ ಕೆಲಸ ಮಾಡಿದರು. ಜಾತಿಯನ್ನು ಒಡೆದರು, ಧರ್ಮದ ನಡುವೆ ಬೆಂಕಿ ಹಚ್ಚಿದರು. ಹೀಗಾಗಿ ಜನ ಅವರನ್ನು ಮನೆಗೆ ಕಳುಹಿಸಿದರು ಎಂದು ವಾಗ್ದಾಳಿ ನಡೆಸಿದರು.

    ಅಲ್ಲದೆ ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಬಿಜೆಪಿಯ ಕೆಲ ನಾಯಕರ ಟೀಕೆ ಮಾಡುತ್ತಿರುವುದಕ್ಕೂ ಈಶ್ವರಪ್ಪ ಬೇಸರ ವ್ಯಕ್ತಪಡಿಸಿ, ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು. ಅವರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದರು.