Tag: SDPI

  • ಎಸ್‍ಡಿಪಿಐ, ಪಿಎಫ್‍ಐ ಕಚೇರಿಗಳು ಸೇರಿದಂತೆ 43 ಕಡೆ ಎನ್‍ಐಎ ದಾಳಿ

    ಎಸ್‍ಡಿಪಿಐ, ಪಿಎಫ್‍ಐ ಕಚೇರಿಗಳು ಸೇರಿದಂತೆ 43 ಕಡೆ ಎನ್‍ಐಎ ದಾಳಿ

    ಬೆಂಗಳೂರು: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಸ್‍ಡಿಪಿಐ, ಪಿಎಫ್‍ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ದಾಳಿ ನಡೆಸಿದೆ.

    ನಾಲ್ಕು ಎಸ್‍ಡಿಪಿಐ ಕಚೇರಿ ಮತ್ತು ಪಿಎಫ್‍ಐ ಕಚೇರಿ ಸೇರಿದಂತೆ ಬೆಂಗಳೂರು ನಗರದ 43 ಕಡೆ ಎನ್‍ಐಎ ದಾಳಿ ನಡೆಸಿದೆ. ದಾಳಿ ವೇಳೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಗೆ ಸೇರಿದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ದಾಳಿಯ ಕೆಲ ಸ್ಥಳಗಳಲ್ಲಿ ಚಾಕು, ಕಬ್ಬಿಣದ ರಾಡ್ ಸೇರಿದಂತೆ ಹಲವು ಆಯುಧಗಳನ್ನ ತನಿಖಾ ಸಂಸ್ಥೆ ವಶಕ್ಕೆ ಪಡೆದು ಎಂದು ತಿಳಿದು ಬಂದಿದೆ.

    ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶದಿಂದ ಗಲಭೆಕೋರರು ಗಲಾಟೆ ಆರಂಭಿಸಿದ್ದರು. ಮಾರಾಕಸ್ತ್ರಗಳ ಮೂಲಕ ಪೊಲೀಸರು, ಸಾರ್ವಜನಿಕ ಆಸ್ತಿ ಪಾಸ್ತಿ, ಖಾಸಗಿ ಆಸ್ತಿ ಪಾಸ್ತಿ, ವಾಹನಗಳು, ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದರು. ಇದೇ ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಇಡಲಾಗಿತ್ತು. ಗಲಭೆ ಪ್ರಕರಣದ 52ನೇ ಆರೋಪಿ ಸಂಪತ್ ರಾಜ್ ನನ್ನು ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ಪಡೆದುಕೊಂಡು ಡ್ರಿಲ್ ನಡೆಸುತ್ತಿದ್ದಾರೆ.

  • ಇಡೀ ಪ್ರಪಂಚದ ಎದುರು ದೇಶ ತಲೆ ತಗ್ಗಿಸೋ ತೀರ್ಪು ಇದಾಗಿದೆ: ಎಸ್‍ಡಿಪಿಐ

    ಇಡೀ ಪ್ರಪಂಚದ ಎದುರು ದೇಶ ತಲೆ ತಗ್ಗಿಸೋ ತೀರ್ಪು ಇದಾಗಿದೆ: ಎಸ್‍ಡಿಪಿಐ

    ಮಂಗಳೂರು: ಈ ದೇಶ ಪ್ರಪಂಚದ ಎದುರು ತಲೆ ತಗ್ಗಿಸೋ ತೀರ್ಪನ್ನು ಲಕ್ನೋ ಕೋರ್ಟ್ ನೀಡಿದೆ ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದ್ದಾರೆ.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯಾ ಅನ್ನೋ ಸಂಶಯ ಮೂಡುತ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

    ರಾಮಮಂದಿರ ತೀರ್ಪಿನಲ್ಲೂ ಬಾಬ್ರಿ ಧ್ವಂಸಗೊಳಿಸಿದ್ದು ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಕೋರ್ಟಿನ ಇಂದಿನ ತೀರ್ಪು ದೇಶದಲ್ಲಿ ನ್ಯಾಯ ಉಳಿದಿಲ್ಲ ಅನ್ನೋವಷ್ಟರ ಮಟ್ಟಿಗೆ ನಾಚಿಕೆಗೇಡು ಉಂಟುಮಾಡಿದೆ. 28 ವರ್ಷ ಕಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಅಂತಾದ್ರೆ ನ್ಯಾಯ ಎಲ್ಲಿದೆ. ಬಿಜೆಪಿ ಮತ್ತು ಸಂಘ ಪರಿವಾರ ಪ್ರಭುತ್ವ ಬೀರಿ ದೇಶ ಒಡೆಯಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ – ಎಲ್ಲ ಆರೋಪಿಗಳು ಖುಲಾಸೆ

    28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯ ಅಂತಿಮ ತೀರ್ಪಿನಲ್ಲಿ ಇದು ಪೂರ್ವನಿಯೋಜಿತ ಕೃತ್ಯ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಅಭಿಪ್ರಾಯ ಪಟ್ಟ ಸಿಬಿಐ ವಿಶೇಷ ಕೋರ್ಟ್ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ. ನ್ಯಾ.ಸುರೇಂದ್ರ ಕುಮಾರ್ ಯಾದವ್ ಅವರು 2,300 ಸಾವಿರ ಪುಟಗಳು ಇರುವ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನಿಂದಾಗಿ ಎಲ್‍ಕೆ ಅಡ್ವಾಣಿ ಅವರಿಗಿದ್ದ ಎಲ್ಲ ಕಂಟಕ ಈಗ ದೂರವಾಗಿದೆ. ಇದನ್ನೂ ಓದಿ: ಬಿಜೆಪಿ ಭೀಷ್ಮನಿಗೆ ಬಿಗ್‌ ರಿಲೀಫ್‌ – ಅಡ್ವಾಣಿ ಖುಲಾಸೆಯಾಗಿದ್ದು ಹೇಗೆ? ಕೋರ್ಟ್‌ ಹೇಳಿದ್ದು ಏನು?

    ಈ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಕರ ಸೇವಕರಿಗೆ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ವಾದಿಸಿದ್ದರೆ, ಆರೋಪಿಗಳು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸಲು ರೂಪಿಸಿದ ರಾಜಕೀಯ ಸಂಚು ಎಂದು ವಾದಿಸಿದ್ದರು. ಅಂದಿನ ಉತ್ತರ ಪ್ರದೇಶ ಸರ್ಕಾರ ಬಿಜೆಪಿ ನಾಯಕರು ಮತ್ತು ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ 120, 153, 295, 149, 395ರ ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು. ಇದನ್ನೂ ಓದಿ: ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ

  • ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣ- ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ನಗರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಸಿಸಿಬಿ ಅಧಿಕಾರಿಗಳ ಕಂಡ ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

    ಗಲಭೆಯಲ್ಲಿ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಈಗಾಗಲೇ 32 ಮಂದಿ ಕಾರ್ಯಕರ್ತರ ಬಂಧನವಾಗಿದೆ. ಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಲಸೂರು ಗೇಟ್‍ನ ಎಸ್‍ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನ್ಯಾಯಾಲಯದಿಂದ ಸರ್ಚ್  ವಾರೆಂಟ್ ಪಡೆದು ಪೊಲೀಸರ ತಂಡ ಪರಿಶೀಲನೆ ನಡೆಸಿದೆ.

    ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂಬಂಧ ಮೂರು ಪ್ರಕರಣಗಳ ಸಿಸಿಬಿ ವರ್ಗಾವಣೆ ಆಗಿದ್ದವು. ಅದರ ಸಂಬಂಧ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಭಾಗವಾಗಿ ಮೂರು ಎಸ್‍ಡಿಪಿಐ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ದಾಳಿ ಮುಂದುವರಿದಿದ್ದು, ಈಗ ತನಿಖಾ ಹಂತದಲ್ಲಿದ್ದು ಹೆಚ್ಚಿನ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏಕಕಾಲಕ್ಕೆ ಮೂರು ಕಡೆಗಳಲ್ಲೂ ದಾಳಿಯಾಗಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳಿಂದ ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಲಸೂರು ಗೇಟ್‍ನ ಎಸ್‍ಡಿಪಿಐನ ಮುಖ್ಯ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

  • ಡಿಜೆ ಹಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ದ ಎಸ್‍ಡಿಪಿಐ ಕಾರ್ಯಕರ್ತ ಖಾಲಿದ್ ಅರೆಸ್ಟ್

    ಡಿಜೆ ಹಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ದ ಎಸ್‍ಡಿಪಿಐ ಕಾರ್ಯಕರ್ತ ಖಾಲಿದ್ ಅರೆಸ್ಟ್

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ, ಎಸ್‍ಡಿಪಿಐ ಕಾರ್ಯಕರ್ತ ಖಾಲಿದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಡಿಜೆ ಹಳ್ಳಿಯ ರೋಷನ್ ನಗರ ನಿವಾಸಿಯಾಗಿದ್ದ ಖಾಲಿದ್ ಇತರೇ ಆರೋಪಿಗಳಾಗಿದ್ದ ಮುಜಾಮಿಲ್, ಅಯಾಜ್, ಆಫ್ನಾನ್ ಜೊತೆಗೂಡಿ ಕೃತ್ಯದಲ್ಲಿ ಭಾಗಿಯಾಗಿದ್ದ. ಖಾಲಿದ್ ಎಸ್‍ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಗಲಭೆ ಮಾಡಿಸಿದ್ದ ಎಂಬ ಮಾಹಿತಿ ಲಭಿಸಿದೆ. ತಡರಾತ್ರಿ ಪೊಲೀಸರು ಆರೋಪಿ ಖಾಲಿದ್‍ನನ್ನು ವಶಕ್ಕೆ ಪಡೆದು ಕರೆತಂದು ವಿಚಾರಣೆ ನಡೆಸಿದ್ದಾರೆ.

    ಖಾಲಿದ್ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಡಿಜೆ ಹಳ್ಳಿ ಪೊಲೀಸರು ಖಾಲಿದ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ವಾಜಿದ್ ನೊಂದಿಗೆ ಖಾಲಿದ್ ಗುರುತಿಸಿಕೊಂಡಿದ್ದ. ಸದ್ಯ ಖಾಲಿದ್ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಗಲಭೆಗೆ ಪ್ರಚೋಧನೆಗೆ ನೀಡಿದ್ದ ಬಗ್ಗೆ ಕೆಲ ಸಾಕ್ಷಿಗಳು ಲಭ್ಯವಾಗಿದೆ ಎನ್ನಲಾಗಿದೆ. ಗಲಭೆ ಸಂದರ್ಭದಲ್ಲಿ ಆರೋಪಿ ವಾಜಿದ್, ಖಾಲಿದ್ ಸಹಕಾರದೊಂದಿಗೆ ಮತ್ತಷ್ಟು ಜನರನ್ನು ಪೊಲೀಸ್ ಠಾಣೆ ಬಳಿ ಸೇರಿಸಿದ್ದ ಎನ್ನಲಾಗಿದೆ.

  • ಎಸ್‌ಡಿಪಿಐ ನಿಷೇಧ ಆಗುತ್ತಾ – ಕ್ಯಾಬಿನೆಟ್‌ ಸಭೆಯ ಇನ್‌ಸೈಡ್‌ ಸುದ್ದಿ

    ಎಸ್‌ಡಿಪಿಐ ನಿಷೇಧ ಆಗುತ್ತಾ – ಕ್ಯಾಬಿನೆಟ್‌ ಸಭೆಯ ಇನ್‌ಸೈಡ್‌ ಸುದ್ದಿ

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಈ ಪಕ್ಷವನ್ನು ಕರ್ನಾಟಕದಲ್ಲಿ ನಿಷೇಧ ಮಾಡುವ ಸಂಬಂಧ ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

    ಕಾನೂನು ಮತ್ತು ಸಂಸದೀಯ ಖಾತೆಯ ಸಚಿವ ಮಾಧುಸ್ವಾಮಿ ಕ್ಯಾಬಿನೆಟ್‌ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಎಸ್‌ಡಿಪಿಐ ನಿಷೇಧ ಸಂಬಂಧವಾಗಿ ಕಾನೂನು ಮೂಲಕ ಏನು ಮಾಡಬಹುದೆಂದು ಚರ್ಚೆ ನಡೆದಿದೆ. ಪೊಲೀಸ್ ಇಲಾಖೆಯಿಂದ ಇನ್ನಷ್ಟು ಮಾಹಿತಿಯನ್ನು ಕೇಳಲಾಗಿದೆ. ಪೊಲೀಸ್ ಇಲಾಖೆ ವರದಿ ಕೊಟ್ಟ ಬಳಿಕ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಎಸ್‌ಡಿಪಿಐ ಬಗ್ಗೆ ಇಲ್ಲಿಯವರೆಗೆ ಗಟ್ಟಿ ಸಾಕ್ಷ್ಯಗಳು ಸಿಕ್ಕಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡುತ್ತೇವೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿರುವ ಕಾರಣ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು.

    ಕ್ಯಾಬಿನೆಟ್ ಸಭೆಯಲ್ಲಿ ಏನಾಯ್ತು?
    ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ಹಲವು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪ್ರಕರಣವನ್ನು ರಾಜಕೀಯಗೊಳಿಸಿ ವಿಷಯಾಂತರ ಮಾಡಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಹೀಗಾಗಿ ನಾವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.

    ತನ್ವೀರ್ ಸೇಟ್ ಮೇಲಿನ ಮಾರಣಾಂತಿಕ ಹಲ್ಲೆ, ಮಂಗಳೂರು ಗಲಭೆ ಪ್ರಕರಣ, ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗಳಲ್ಲಿ ಎಸ್‌ಡಿಪಿಐ ನೇರ ಪಾತ್ರವಿದೆ. ಇದನ್ನು ಆಧರಿಸಿ ಕೇಂದ್ರಕ್ಕೆ ನಿಷೇಧ ಕುರಿತು ಶಿಫಾರಸು ಮಾಡೋಣ. ಸಿಟಿ ರವಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ನಿಷೇಧಕ್ಕೆ ಒತ್ತಾಯ ಮಾಡಿದರು ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಈ ವೇಳೆ ಬೊಮ್ಮಾಯಿ ಅವರು ಗೃಹ ಇಲಾಖೆ ಅಧಿಕಾರಿಗಳು ಈ ಹಿಂದಿನ ಘಟನೆಗಳನ್ನು ಆಧಾರಿಸಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ವಿರುದ್ಧ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ವರದಿಯನ್ನು ಸಿಎಂ ಬಿಎಸ್‌ವೈಗೆ ಸಲ್ಲಿಸಿದರು. ಬಳಿಕ ನಿಷೇಧದ ಸಾಧ್ಯಾಸಾಧ್ಯತೆಗಳು, ಕಾನೂನು ತೊಡಕುಗಳ ಕುರಿತಾಗಿ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಎಸ್‌ಡಿಪಿಐ ಪಕ್ಷವಾಗಿರುವುದರಿಂದ ನಿಷೇಧಕ್ಕೆ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಸಿಎಂ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ ನಿಷೇಧ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಸಿದ್ದರಾಮಯ್ಯರಿಂದ ಎಸ್‍ಡಿಪಿಐ ಪುಂಡರ ರಕ್ಷಣೆ: ಪ್ರತಾಪ್ ಸಿಂಹ

    ಸಿದ್ದರಾಮಯ್ಯರಿಂದ ಎಸ್‍ಡಿಪಿಐ ಪುಂಡರ ರಕ್ಷಣೆ: ಪ್ರತಾಪ್ ಸಿಂಹ

    -ಜಮೀರ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಎಸ್‍ಡಿಪಿಐ ಪುಂಡರ ರಕ್ಷಣೆಗೆ ಮುಂದಾಗಿದ್ದಾರೆ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

    ಎಸ್‍ಡಿಪಿಐ ನಿಷೇಧ ಮಾಡಲು ಸರ್ಕಾರ ಮುಂದಾಗಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಯಾಕಿಷ್ಟು ನೋವು ಆಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಕಳೆದ 30 ವರ್ಷಗಳಲ್ಲಿ ನಡೆದ ಗಲಾಟೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. 2015ರಲ್ಲಿ ಎಸ್‍ಡಿಪಿಐ ಮತ್ತು ಕೆಎಫ್‍ಐ ವಿರುದ್ಧ ದಾಖಲಾಗಿದ್ದ 175 ಕ್ರಿಮಿನಲ್ ಪ್ರಕರಣಗಳನ್ನು ಇದೇ ಸಿದ್ದರಾಮಯ್ಯನವರು ಹಿಂಪಡೆದುಕೊಂಡಿದ್ದನ್ನು ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರಕರಣವನ್ನು ಮುಂದಕ್ಕೆ ತಳ್ಳಿ ಎಸ್‍ಡಿಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯನವರು ಮುಂದಾಗ್ತಿದ್ದಾರೆ ಎಂದು ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.

    ಸಿದ್ದರಾಮಯ್ಯನವರ ಆಡಳಿತದಲ್ಲಿ 12ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಕೊಲೆಯಾದಾಗ ಗುಪ್ತಚರ ವಿಫಲವಾಗಿತ್ತಾ? ಅನಾವಶ್ಯಕವಾಗಿ ಆರೋಪಗಳನ್ನ ಮಾಡೋದು ಸರಿ ಅಲ್ಲ. ತಮ್ಮ ಆಡಳಿತಾವಧಿಯಲ್ಲಿ ದಲಿತರನ್ನ ವ್ಯವಸ್ಥಿತವಾಗಿ ಮಟ್ಟ ಹಾಕುವಂತ ಕೆಲಸ ಮಾಡಲಾಯ್ತ. ಶ್ರೀನಿವಾಸ ಪ್ರಸಾದ್ ಅವರಿಂದ ಹಿಡಿದು ಜಿ.ಪರಮೇಶ್ವರ್ ದಲಿತ ನಾಯಕರನ್ನ ಮುನ್ನಲೆಗೆ ತರಲಿಲ್ಲ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದ ಹಾಗೆ ಒಳ ಪಿತೂರಿ ಮಾಡಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪರನ್ನ ಸೋಲಿಸಿದರು. ದಲಿತ ಶಾಸಕರ ಮೇಲೆ ಪುಂಡ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂದು ಒಮ್ಮೆಯಾದ್ರೂ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದರು.

    ಅಖಂಡ ಶ್ರೀನಿವಾಸಮೂರ್ತಿ ತಮ್ಮ ಮನೆ ಮೇಲಾದ ದಾಳಿ ಬಗ್ಗೆ ಹೇಳಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ತಮ್ಮ ಕ್ಷೇತ್ರದಲ್ಲಾದ ಗಲಾಟೆಯ ಬಗ್ಗೆ ಶಾಸಕರಿಗೆ ಮಾಹಿತಿ ಇದೆ. ಆದ್ರೆ ಶಾಸಕರು ಯಾವ ದೂರು ನೀಡಿಲ್ಲ ಮತ್ತು ಯಾರ ಹೆಸರನ್ನು ಸಹ ಹೇಳಿಲ್ಲ. ಕಾಂಗ್ರೆಸ್ ನಾಯಕರ ಒತ್ತಡದಿಂದ ಅಖಂಡ ಶ್ರೀನಿವಾಸ ಮೂರ್ತಿ ಮೌನವಾಗಿದ್ದಾರೆ. ಪುಂಡ ಮುಸ್ಲಿಂರ ಹೆಸರು ಹೇಳದಂತೆ ಶ್ರೀನಿವಾಸಮೂರ್ತಿ ಅವರನ್ನ ಕಾಂಗ್ರೆಸ್ ಕಂಟ್ರೋಲ್ ಮಾಡ್ತಿದೆ ಎಂದರು.

    ಕಾಂಗ್ರೆಸ್ ನಲ್ಲಿ ಒಂದು ಡಜನ್ ಗೂ ಅಧಿಕ ಗುಂಪುಗಳಿವೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತೆಗೆದುಕೊಂಡು ಹೋಗಲು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲ. ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಸರ್ಕಾರ ನಿಷ್ಪಕ್ಷವಾಗಿ ತನಿಖೆ ನಡೆಸುತ್ತದೆ. ರಾತ್ರಿ ಯಾರು ಒಂದು ಗಂಟೆಗೆ ಕೋತಂಬರಿ ಸೊಪ್ಪು ತರಲು ಹೋಗ್ತಾರಾ? ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕರ್ನಾಟಕದ ಅಸಾದುದ್ದೀನ್ ಓವೈಸಿ ಆಗಲು ಹೊರಟಿದ್ದಾರೆ. ಜಮೀರ್ ಅಹ್ಮದ್ ಅವರನ್ನ ತಡೆಯಲು ಕಾಂಗ್ರೆಸ್ ನಿಂದ ಆಗ್ತಿಲ್ಲ ಎಂದು ಕಿಡಿಕಾರಿದರು.

    ಹುಣಸೂರು, ಮೈಸೂರಿನಲ್ಲಿ ಸ್ಲೀಪರ್ ಸೆಲ್ ಗಳಿವೆ. ಕೇರಳ ಮಾದರಿಯ ರಾಜಕೀಯ ಹತ್ಯೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಮೂಲಕ ರಾಜ್ಯದಲ್ಲಿ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕರು ಇದನ್ನ ಮಟ್ಟ ಹಾಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ವಿಹೆಚ್‍ಪಿ ನಾಯಕ ಜೊತೆಗಿನ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರತಾಪ್ ಸಿಂಹ ಹಿಂದೇಟು ಹಾಕಿದ್ರು.

  • ಇಂದು ಕಾಂಗ್ರೆಸ್ ಶಾಸಕ ಮನೆಗೆ ಬೆಂಕಿ ಇಟ್ಟೊರು ನಾಳೆ ನಿಮ್ಮ ಮನೆಗೆ ಬೆಂಕಿ ಇಡ್ತಾರೆ: ಆಂದೋಲ ಶ್ರೀ

    ಇಂದು ಕಾಂಗ್ರೆಸ್ ಶಾಸಕ ಮನೆಗೆ ಬೆಂಕಿ ಇಟ್ಟೊರು ನಾಳೆ ನಿಮ್ಮ ಮನೆಗೆ ಬೆಂಕಿ ಇಡ್ತಾರೆ: ಆಂದೋಲ ಶ್ರೀ

    -ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್‍ಗೆ ಆಂದೋಲ ಶ್ರೀ ಒತ್ತಾಯ

    ಯಾದಗಿರಿ: ಎಸ್‍ಡಿಪಿಐ ಬ್ಯಾನ್ ಮಾಡುತ್ತಿರೋ ಅಥವಾ ನಿಮ್ಮ ಮನೆಗಳಿಗೆ ಬೆಂಕಿ ಇಡಿಸಿಕೊಳ್ಳುತ್ತಿರೋ ಎಂದು ಬಿಜೆಪಿ ನಾಯಕರುಗಳಿಗೆ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.

    ಜಿಲ್ಲೆಯ ಕೆಂಭಾವಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಸಿದ್ದಲಿಂಗಸ್ವಾಮೀಜಿ, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆ ತಿಕ್ಕಾಟ ನಡೆದು ಮುಸ್ಲಿಂ ಮತ ವಿಭಜನೆಗೊಂಡು ಅದು ಬಿಜೆಪಿಗೆ ಲಾಭವಾಗುತ್ತೆ ಎಂಬ ಭ್ರಮೆ ಬಿಜೆಪಿಯಲ್ಲಿದೆ. ಇಂತಹ ಭಾವನೆ ಬಿಜೆಪಿಗೆ ಇದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ ಎಂದು ಬಿಜೆಪಿ ನಾಯಕರುಗಳಿಗೆ ಎಚ್ಚರಿಸಿದರು.

    ಪಿಎಫ್‍ಐ, ಎಸ್‍ಡಿಪಿಐ ಮತ್ತು ಕೆಎಫ್‍ಡಿಗೆ ಪಾಕಿಸ್ತಾನದ ಐಎಸ್‍ಐನೊಂದಿಗೆ ನಂಟಿದೆ. ಎಸ್‍ಡಿಪಿಐ ಎಂದರೇ ಮುಸ್ಲಿಂ ಲೀಗ್ ಇದ್ದಂತೆ. ಈ ಸಂಘಟನೆ ಇದ್ದರೆ ದೇಶ ಕಂಡಿತ ಮತ್ತೆ ಭಾಗವಾಗುತ್ತೆ. ಈ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂತಹವರ ವಿಚಾರದಲ್ಲಿ ಮುಖ್ಯ ಮಂತ್ರಿಗಳು ಮೃಧು ಧೋರಣೆ ಹೊಂದಿದ್ದಾರೆ. ಪಾದರಾಯನಪುರ ಘಟನೆ ನಡೆದಾಗ ಯಾರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡಬಾರದು ಎಂದು ಸಿಎಂ ಹೇಳಿದ್ದರು. ಆದರೆ ಅದರ ಮುಂದುವರಿದ ಭಾಗವೇ ಬೆಂಗಳೂರಿನ ಗಲಭೆ ಎಂದ ಶ್ರೀಗಳು ಹೇಳಿದರು. ಅಲ್ಲದೇ ಗಲಭೆಕೋರರನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

  • ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ: ಸಚಿವ ಸಿಟಿ ರವಿ

    ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ: ಸಚಿವ ಸಿಟಿ ರವಿ

    ಬೆಂಗಳೂರು: ಎಸ್‍ಡಿಪಿಐ ನಿಷೇಧ ವಿಚಾರ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

    ವಿಧಾನಸೌಧದ ಬಳಿ ಮಾತನಾಡಿದ ಸಿಟಿ ರವಿ ಅವರು, ಯಾವುದೇ ಒಂದು ಘಟನೆ ಮೇಲೆ ನಿಷೇಧದಂತಹ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸ ಆಗುತ್ತಿದೆ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ನಾಳೆ ದಿನ ಕೋರ್ಟಿನಲ್ಲೂ ಈ ಕುರಿತಂತೆ ಉತ್ತರ ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.

    ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರಿಗೆ ಅಕ್ಕಿ ಮೇಲೆ ಆಸೆ, ಅಕ್ಕನ ಮಕ್ಕಳ ಮೇಲೂ ಪ್ರೀತಿ ಅನ್ನೋ ರೀತಿ ಮಾಡುತ್ತಿದ್ದಾರೆ. ಮತ ಬ್ಯಾಂಕ್ ರಾಜಕೀಯ ಇನ್ನಾದರೂ ಕಾಂಗ್ರೆಸ್ ನಾಯಕರು ಬಿಡಲಿ. ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ. ಬೆಂಗಳೂರು ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟವನ್ನು ಅವರಿಂದಲೇ ತುಂಬಿಸುತ್ತೇವೆ ಎಂದರು.

    ಇದೇ ವೇಳೆ ತಮ್ಮ ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ನಾನು ಅಂದುಕೊಂಡ ಎಲ್ಲಾ ಕೆಲಸ ಈಡೇರಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದ ಗೌಡರು ಸಹಕಾರ ನೀಡಿದ್ದು, ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕೆಲಸ ಯಶಸ್ವಿಯಾಗಿದೆ. ಮೈಸೂರಿನಲ್ಲಿ ಸ್ವಾಯತ್ತ ಕೇಂದ್ರ ಮಾಡಲು ಎಚ್‍ಆರ್ ಡಿ ಮಿನಿಸ್ಟರ್ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾದಲ್ಲಿ ಕರ್ನಾಟಕ ಹೆಚ್ಚು ಸಹಕಾರ ನೀಡಲು ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿ ಹಾಗೂ ಬೇಡಿಕೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

  • ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ – ಸಿದ್ದು ಪ್ರಶ್ನೆ

    ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ – ಸಿದ್ದು ಪ್ರಶ್ನೆ

    ಬೆಂಗಳೂರು: ಮುಸ್ಲಿಂ ಸಂಘಟನೆಯಾದ ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಕಾವಲ್ ಭೈರಸಂದ್ರ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ದಿನಕ್ಕೊಬ್ಬ ಸಚಿವರು, ಶಾಸಕರು ಭೇಟಿ ನೀಡಿ, ಗಲಭೆಗೆ ಎಸ್‍ಡಿಪಿಐ, ಕಾಂಗ್ರೆಸ್, ಭಯೋತ್ಪಾದಕರು ಕಾರಣ ಎಂದು ನೀಡುತ್ತಿರುವ ತರಹೇವಾರಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಇಂದು ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚು ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ ರಾಜಕೀಯ ಲಾಭ ಗಳಿಸುವುದು ಹೇಗೆ? ಎನ್ನುವ ಬಗ್ಗೆ ಬಿಜೆಪಿ ಪಕ್ಷದ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

    ಜೊತೆಗೆ ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಯಡಿಯೂರಪ್ಪ ಅವರ ಪದಚ್ಯುತಿಗೆ ಕೆಲವು ಆರ್‍ಎಸ್‍ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

    ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್‍ಗಳು ಇರುವಾಗ ಕಾವಲಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

    ಕಾವಲಭೈರಸಂದ್ರ ಗಲಭೆಯ ನಿಜವಾದ ತನಿಖೆ ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬಕ್ಕೆ ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.

    ಎಸ್‍ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ. ಮುಸ್ಲಿಂ ಮತಗಳನ್ನು ಒಡೆಯಲು ಎಸ್‍ಡಿಪಿಐ ಅನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿಗೆ ಅದನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಸವಾಲು ಹಾಕಿದ್ದಾರೆ.

  • ಇವನು ಕಾಂಗ್ರೆಸ್, ಅವನು ಎಸ್‍ಡಿಪಿಐ – ಫೋನ್‍ಕಾಲ್‍ನಲ್ಲೇ ಬೆಂಕಿಗೆ ಸ್ಕೆಚ್

    ಇವನು ಕಾಂಗ್ರೆಸ್, ಅವನು ಎಸ್‍ಡಿಪಿಐ – ಫೋನ್‍ಕಾಲ್‍ನಲ್ಲೇ ಬೆಂಕಿಗೆ ಸ್ಕೆಚ್

    ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌, ಎಸ್‌ಡಿಪಿಐ ಮುಖಂಡರು ಪರಸ್ಪರ ಫೋನ್‌ ಸಂಪರ್ಕದಲ್ಲಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಎಸ್‌ಡಿಪಿಐ ಸಕ್ರಿಯ ಕಾರ್ಯಕರ್ತ ಮುಜಾಮಿಲ್ ಪಾಷಾನ ಮೊಬೈಲ್‌ ಕರೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಒಂದು ನಂಬರ್‌ಗೆ ಪದೇ ಪದೇ ವಾಟ್ಸಪ್‌ ಕಾಲ್‌ ಹೋಗಿರುವುದು ಗೊತ್ತಾಗಿದೆ. ರಾತ್ರಿ 9:30 ರಿಂದ 11:30ರ ಅವಧಿಯಲ್ಲಿ ಒಟ್ಟು 11 ಬಾರಿ ಕರೆ ಹೋಗಿದ್ದು,ಈ ನಂಬರ್‌ ಯಾವುದು ಎಂದು ಪರಿಶೀಲನೆ ನಡೆಸಿದಾಗ ಅರುಣ್‌ ಎಂಬಾತನದ್ದು ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್‌ ವಿರುದ್ಧ ಕೇಸ್‌ ದಾಖಲು

    ಸಂಪತ್‌ ರಾಜ್‌ ಆಪ್ತ ಅರುಣ್‌
    ಸಂಪತ್‌ ರಾಜ್‌ ಆಪ್ತ ಅರುಣ್‌

    ಅರುಣ್‌ ಬೇರೆ ಯಾರು ಅಲ್ಲ ಈತ ಮಾಜಿ ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್‌ ಆಪ್ತ, ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತ. ಈ ಗಲಭೆಯಲ್ಲಿ ಅರುಣ್‌ ಪಾತ್ರ ಇರುವುದು ತಿಳಿದು ಬರುತ್ತಿದ್ದತೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

    ತನಿಖೆಯ ವೇಳೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದ್ದು, ಫೋನಿನಲ್ಲಿ ಮುಜಾಮಿಲ್‌ ಪಾಷಾನೊಂದಿಗೆ ಅರುಣ್‌ ಮಾತನಾಡಿದರೆ ಜೊತೆಯಲ್ಲೇ ಇನ್ನೊಬ್ಬ ವ್ಯಕ್ತಿಯೂ ಮಾತನಾಡಿದ್ದಾರೆ. ಈ ವ್ಯಕ್ತಿಯ ಧ್ವನಿ ಸಂಪತ್‌ ರಾಜ್‌ ಧ್ವನಿಯಂತೆ ಹೋಲಿಕೆ ಇರುವ ಕಾರಣ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ

    ತನ್ನ ಫೋನ್‌ ನಂಬರ್‌ ಬಳಸಿದ್ರೆ ತನಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಸಂಪತ್‌ ರಾಜ್‌ ಅರುಣ್‌ ಫೋನ್‌ ಬಳಸಿದ್ರಾ? ಇದರ ಜೊತೆ ಗಲಭೆ ಇನ್ನಷ್ಟು ದೊಡ್ಡದಾಗೋ ಸಂಪತ್ ರಾಜ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಧ್ವನಿ ಸಂಪತ್‌ ರಾಜ್‌ ಅವರದ್ದೇ ಎನ್ನುವುದು ಪೊಲೀಸ್‌ ಮೂಲಗಳ ಮಾಹಿತಿ. ಆದರೂ ಈ ಬಗ್ಗೆ ಪೂರ್ಣವಾದ ಸಾಕ್ಷ್ಯ ಸಂಗ್ರಹಿಸಲು ಸಂಪತ್‌ ರಾಜ್‌ ಅವರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.

    ವಿಚಾರಣೆ ವೇಳೆ ಸಂಪತ್‌ ರಾಜ್‌ ಬಗ್ಗೆ ಅರುಣ್‌ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದು, ಇಂದೇ ಸಂಪತ್‌ ರಾಜ್‌ ಬಂಧನವಾಗುವ ಸಾಧ್ಯತೆಯಿದೆ.