Tag: Scuba Dye

  • ಹಾಡು ಹಾಡುವ ಅಪರೂಪದ ಹಂಪ್ ಬ್ಯಾಕ್ ತಿಮಿಂಗಿಲ ಮುರಡೇಶ್ವರದಲ್ಲಿ ಪತ್ತೆ

    ಹಾಡು ಹಾಡುವ ಅಪರೂಪದ ಹಂಪ್ ಬ್ಯಾಕ್ ತಿಮಿಂಗಿಲ ಮುರಡೇಶ್ವರದಲ್ಲಿ ಪತ್ತೆ

    ಕಾರವಾರ: ವಿಶ್ವದಲ್ಲೇ ಅಪರೂಪ ಹಾಗೂ ಅಳವಿನಂಚಿನಲ್ಲಿರುವ ಹಂಪ್ ಬ್ಯಾಕ್ ವೇಲ್ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದೆ. ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುತಿದ್ದವರಿಗೆ ಈ ಬೃಹತ್ ತಿಮಿಂಗಿಲ ಕಾಣಿಸಿದ್ದು ಇದರ ವಿಡಿಯೋ ತುಣುಕುಗಳು ಪಬ್ಲಿಕ್ ಟಿವಿಗೆ ದೊರೆತಿದೆ.

    ಮುರಡೇಶ್ವರದಿಂದ ಅರಬ್ಬಿ ಸಮುದ್ರದಲ್ಲಿ 20 ಕಿಲೋ ಮೀಟರ್ ಕ್ರಮಿಸಿದರೆ ನೇತ್ರಾಣಿ ನಡುಗಡ್ಡೆ ದ್ವೀಪ ಬರುತ್ತದೆ. ಈ ದ್ವೀಪದ ಸುತ್ತಮುತ್ತಲೂ ಮೂವತ್ತಕ್ಕೂ ಹೆಚ್ಚು ಪ್ರಬೇದದ ಮೀನುಗಳು, ಹವಳದ ದಿಬ್ಬಗಳು, ಸಮುದ್ರದ ಆಮೆಗಳ ಆವಾಸ ಸ್ಥಾನವಾಗಿದ್ದು ಭಾರತೀಯ ನೌಕಾದಳವು ಈ ದ್ವೀಪದಲ್ಲಿ ಸಮರಾಭ್ಯಾಸ ನಡೆಸುತ್ತದೆ. ಕಳೆದ ಮೂರು ವರ್ಷದ ಹಿಂದೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈ ಮಾಡಲು ಅವಕಾಶ ಮಾಡಿಕೊಟ್ಟಿದೆ.

    ಅರಬ್ಬಿ ಸಮುದ್ರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈ ಮಾಡುತ್ತಿದ್ದ ವೇಳೆ ಸುಮಾರ್ 100 ಮೀಟರ್ ಆಳದಲ್ಲಿ ಹಂಪ್ ಬ್ಯಾಕ್ ಗಂಡು ತಿಮಿಂಗಿಲ ಪತ್ತೆಯಾಗಿದೆ. ಈ ವೇಳೆ ಈ ತಿಮಿಂಗಿಲದ ಬಾಲಕ್ಕೆ ಪೆಟ್ಟು ಬಿದ್ದಿದ್ದರಿಂದ ಈ ಬೃಹತ್ ತಿಮಿಂಗಿಲ ಈ ಭಾಗದಲ್ಲಿ ವಿಶಾಂತ್ರಿ ಸ್ಥಿತಿಯಲ್ಲಿತ್ತು.

    ಈ ವೇಲ್‍ಗಳ ವಿಶೇಷತೆ ಏನು ಗೊತ್ತಾ?
    ವಿಶ್ವದಲ್ಲೇ ಅಪರೂಪವಾದ ಈ ತಿಮಿಂಗಿಲವು ಅರಬ್ಬಿ ಸಮುದ್ರದಲ್ಲಿ ವಾಸಿಸುವ ಅತೀ ಅಪರೂಪದ ಸಮುದ್ರ ಸಸ್ತನಿ ಜೀವಿ. ಇಡೀ ವಿಶ್ವದಲ್ಲಿ ಇದರ ಸಂಖ್ಯೆ ನೂರು ಮಾತ್ರ. ಓಮಾನ್ ದೇಶದಿಂದ ಭಾರತದವರೆಗೆ, ಶ್ರೀಲಂಕದಿಂದ ಓಮಾನ್‍ವರೆಗೆ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತವೆ. ಜಗತ್ತಿನ ಅತೀ ದೊಡ್ಡ ತಿಮಿಂಗಿಲಗಳಲ್ಲಿ ಇದು ನಾಲ್ಕನೇ ಸ್ಥಾನ ಪಡೆದಿದೆ.

    ಈ ತಿಮಿಂಗಿಲಗಳಲ್ಲಿ ಗಂಡು ತಿಮಿಂಗಿಲ 15 ರಿಂದ 20 ನಿಮಿಷ ತನ್ನ ವಿಶಿಷ್ಟ ಧ್ವನಿಯಲ್ಲಿ ಮನುಷ್ಯರಂತೆ ಹಾಡು ಹೇಳುತ್ತದೆ. ಹೀಗಾಗಿಯೇ ಈ ತಿಮಿಂಗಿಲಗಳನ್ನು ಅದರ ಧ್ವನಿಯ ಮೂಲಕವೇ ಸಂಶೋಧಕರು ಗುರುತಿಸುತ್ತಾರೆ. ಇದು ಉಸಿರಾಟ ಮಾಡುವಾಗ ಅದರ ಮೂಗಿಂದ ಮೂರು ಮೀಟರ್ ಎತ್ತರ ನೀರು ಚಿಮ್ಮುತ್ತವೆ. ಸುಮಾರು 15 ಮೀಟರ್‍ನಿಂದ 18 ಮೀಟರ್ ಹೆಣ್ಣು ತಿಮಿಂಗಿಲ ಉದ್ದವಿದ್ದರೆ 13 ರಿಂದ 14 ಮೀಟರ್ ಉದ್ದ ಗಂಡು ತಿಮಿಂಗಿಲವಿರುತ್ತದೆ. ಸುಮಾರು 30 ಮೆಟ್ರಿಕ್ ಟನ್ ನಷ್ಟು ಭಾರವನ್ನು ಇದರ ದೇಹ ಹೊಂದಿದ್ದು ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ.

    ಆಳ ಸಮುದ್ರದಲ್ಲಿ ಹೆಚ್ಚು ಓಡಾಡುವ ಈ ತಿಮಿಂಗಿಲಗಳು ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದೆ. ಈ ಹಿಂದೆ 2017 ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಹೆಚ್ಚಾಗಿ ಕಾಣಿಸಿಕೊಳ್ಳದ ಇವು ಸಮುದ್ರದಾಳದಲ್ಲೇ ತನ್ನ ಜೀವಿತ ಅವಧಿಯನ್ನು ಕಳೆಯುವ ಜೊತೆಗೆ ಅರಬ್ಬಿ ಸಮುದ್ರದುದ್ದಕ್ಕೂ ವಲಸೆ ಹೋಗುತ್ತವೆ. ಹಲವು ಬಾರಿ ತನ್ನ ವಲಸೆ ಪ್ರವೃತ್ತಿಯಿಂದ ದೊಡ್ಡ ದೊಡ್ಡ ಹಡಗುಗಳಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪುತ್ತವೆ. ಮನುಷ್ಯನ ದುರಾಸೆಗೆ ತಿಮಿಂಗಿಲಗಳ ಮಾಂಸಕ್ಕಾಗಿ ಇವುಗಳನ್ನು ಭೇಟೆ ಆಡುತ್ತಿದ್ದು ಇವುಗಳ ಸಂತತಿ ಕ್ಷೀಣವಾಗಲು ಮತ್ತೊಂದು ಕಾರಣವಾಗಿದೆ.

    ನೇತ್ರಾಣಿ ನಡುಗಡ್ಡೆಯಲ್ಲಿ ಈ ತಿಮಿಂಗಿಲಗಳು ಪತ್ತೆಯಾಗಿದ್ದು ಈ ವಿಷಯವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಮಾಹಿತಿ ರವಾನೆ ಮಾಡಲಾಗಿದೆ. ಇದಕ್ಕೆ ಕೇಂದ್ರ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದ್ದು ಇವುಗಳ ಸಂಶೋಧನೆಗಾಗಿ ನುರಿತ ತಜ್ಞರ ನೇಮಕ ಮಾಡಿದೆ. ಹೆಚ್ಚಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ 60:40 ಸಹಭಾಗಿತ್ವದಲ್ಲಿ 42 ಲಕ್ಷ ಹಣ ಮಂಜೂರು ಮಾಡಲಾಗಿದೆ. ಈ ವರೆಗೂ ಈ ತಿಮಿಂಗಿಲಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಈ ಕಾರಣದಿಂದ ಮುರಡೇಶ್ವರ ಭಾಗದಲ್ಲಿ ಇವು ಕಾಣಿಸಿದ್ದು ಹೆಚ್ಚಿನ ಸಂಶೋಧನೆಗೆ ಸಹಕಾರಿಯಾಗಲಿದೆ.

  • ಸ್ಕೂಬಾ ಉತ್ಸವ – ಸಮುದ್ರದಾಳದಲ್ಲಿ ಮೀನಿನೊಂದಿಗೆ ಈಜಿ ಖುಷಿಪಟ್ಟ ಪ್ರವಾಸಿಗರು

    ಸ್ಕೂಬಾ ಉತ್ಸವ – ಸಮುದ್ರದಾಳದಲ್ಲಿ ಮೀನಿನೊಂದಿಗೆ ಈಜಿ ಖುಷಿಪಟ್ಟ ಪ್ರವಾಸಿಗರು

    ಕಾರವಾರ: ಒಂದೆಡೆ ಆಳ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜುತ್ತಿರುವ ಬಣ್ಣ ಬಣ್ಣದ ಹತ್ತಾರು ಬಗೆಯ ಮೀನುಗಳು. ಕಡಲಾಳಕ್ಕೆ ಇಳಿದು ಅಲ್ಲಿನ ಜಲಚರಗಳನ್ನ ಕಣ್ಣಾರೆ ನೋಡುವ ಆಸೆ ಯಾರಿಗೆ ತಾನೆ ಇಲ್ಲ ಹೇಳಿ. ಇದಕ್ಕೆ ಹೇಳಿ ಮಾಡಿಸಿದಂತಿರುವ ರಾಜ್ಯದ ಏಕೈಕ ಸ್ಥಳ ಅಂದ್ರೆ ಅದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪ. ಈಗಾಗಲೇ ಜಿಲ್ಲಾಡಳಿತ ಅಲ್ಲಿ ಸ್ಕೂಬಾ ಡೈವಿಂಗ್‍ಗೆ ಅವಕಾಶ ಮಾಡಿಕೊಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಎರಡು ದಿನದ ರಾಜ್ಯ ಮಟ್ಟದ ಸ್ಕೂಬಾ ಉತ್ಸವವನ್ನ ನೇತ್ರಾಣಿಯಲ್ಲಿ ಆಯೋಜನೆ ಮಾಡುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.

    ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲಾಡಳಿತವೇ ಖುದ್ದು ಸ್ಕೂಬಾ ಡೈವಿಂಗ್‍ನ್ನು ಆರಂಭಿಸಿದ್ದು, ಸಾಕಷ್ಟು ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ದೇಶ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಕತ್ ಎಂಜಾಯ್ ಮಾಡಿದರು. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಸ್ಕೂಬಾ ಉತ್ಸವ ಆಯೋಜನೆ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ದೇಶ, ವಿದೇಶಗಳ ಪ್ರವಾಸಿಗರು ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಎಂಜಾಯ್ ಮಾಡಿದರು.

    ನೇತ್ರಾಣಿ ದ್ವೀಪ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದ್ದು, ಹಲವಾರು ಬಗೆಯ ಜಲಚರಗಳಿಗೆ ಸ್ಥಾನ ಒದಗಿಸಿದೆ. ಕರ್ನಾಟಕದಲ್ಲಿಯೇ ಹವಳದಂಡೆಯನ್ನು ಹೊಂದಿರುವ ಏಕೈಕ ಪ್ರದೇಶವಾಗಿರುವುದರ ಜೊತೆಗೆ ಅಪರೂಪದ ಸುಮಾರು 35ಕ್ಕೂ ಅಧಿಕ ಪ್ರಬೇಧಗಳ ಕಡಲಜೀವಿಗಳನ್ನು ಇಲ್ಲಿ ಗುರುತಿಸಲಾಗಿದೆ.

    ಈ ಪ್ರದೇಶದಲ್ಲಿ ಸ್ವಚ್ಛ ನೀರು ಇರುವುದರಿಂದ ಸ್ಕೂಬಾ ಡೈವಿಂಗ್‍ಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ದೇಶ, ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಿಲ್ಲಾಡಳಿತ ಸ್ಕೂಬಾ ಡೈವಿಂಗ್‍ಗೆ ಅವಕಾಶ ಒದಗಿಸಿರುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.

    ಸ್ಕೂಬಾ ಡೈವಿಂಗ್‍ಗೆ ನೇತ್ರಾಣಿಯಂತಹ ಪ್ರದೇಶ ರಾಜ್ಯದಲ್ಲೆಲ್ಲೂ ಇಲ್ಲ. ಹೀಗಾಗಿ ವಿದೇಶಗಳಿಗೆ ತೆರಳುವ ಬದಲು ರಾಜ್ಯದಲ್ಲೇ ಇರುವ ಮುರುಡೇಶ್ವರಕ್ಕೆ ಆಗಮಿಸಿ, ಪ್ರವಾಸಿಗರು ಖುಷಿ ಪಡುತ್ತಿದ್ದಾರೆ.

    ಎರಡು ದಿನಗಳ ಕಾಲ ನಡೆದ ಸ್ಕೂಬಾ ಡೈವಿಂಗ್ ಉತ್ಸವಕ್ಕೆ ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ಸ್ ಸಂಸ್ಥೆ ಕೈಜೋಡಿಸಿದೆ. ಎರಡು ದಿನಗಳ ಕಾಲ ಸ್ಕೂಬಾ ಡೈವಿಂಗ್ ಮಾಡಲು ಬಂದ ಪ್ರವಾಸಿಗರನ್ನು ಮುರುಡೇಶ್ವರದಿಂದ ಅರಬ್ಬಿ ಸಮುದ್ರದಲ್ಲಿರುವ ನೇತ್ರಾಣಿ ನಡುಗಡ್ಡೆಗೆ ಯಾವುದೇ ತೊಂದರೆಗಳಾಗದಂತೆ ಕರೆದೊಯ್ದು ಪ್ರವಾಸಿಗರನ್ನು ಸಂತಸ ಪಡಿಸಿತು. ಸ್ಕೂಬಾ ಉತ್ಸವಕ್ಕೆ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ನೂರಾರು ಜನ ಸ್ಕೂಬಾ ಡೈವಿಂಗ್ ಮಾಡಲು ರಿಜಿಸ್ಟರ್ ಮಾಡಿಕೊಂಡಿಕೊಂಡಿದ್ದಾರೆ.