ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ತಿರುವು ಸಿಕ್ಕ ಬೆನ್ನಲ್ಲೇ ಇದೀಗ ಎನ್‍ಐಎ ಅಧಿಕಾರಿಗಳು ಸಾಕ್ಷ್ಯ ನಾಶದ ಕುರಿತು ಎನ್‍ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದರು. ಈ ವೇಳೆ ನದಿಯಲ್ಲಿ ಭಾರೀ ಪ್ರಮಾಣದ ಸಾಕ್ಷ್ಯ ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಂದ್ರಾದ ಮಿಥಿ ನದಿ ಬಳಿ ಎಲೆಕ್ಟ್ರಾನಿಕ್ ತುಣುಕುಗಳ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಕ್ಷ್ಯ ವಶಪಡಿಸಿಕೊಳ್ಳಲು ಎನ್‍ಐಎ ಅಧಿಕಾರಿಗಳು ಇಂದು ಮುಂಬೈ ಪೊಲೀಸ್‍ನಿಂದ ಅಮಾನತುಗೊಂಡ ಎಪಿಐ ಸಚಿನ್ ವಾಜೆ ಅವರನ್ನು ಮಿಥಿ ನದಿಯ ಸೇತುವೆ ಬಳಿ ಕರೆದೊಯ್ದಿದ್ದರು. ಈ ವೇಳೆ 11 ಈಜು ತಜ್ಞರಿಂದ 3 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಲಾಗಿದ್ದು, ಬಳಿಕ 2 ಸಿಸಿಟಿವಿ ಡಿವಿಆರ್‍ಗಳು, 2 ಸಿಪಿಯು, 2 ಹಾರ್ಡ್ ಡಿಸ್ಕ್ ಹಾಗೂ 2 ನಂಬರ್ ಪ್ಲೇಟ್‍ಗಳು ಪತ್ತೆಯಾಗಿವೆ. ಸಾಕ್ಷ್ಯ ನಾಶಪಡಿಸುವುದರ ಭಾಗವಾಗಿ ಸಚಿನ್ ವಾಜೆ ಸಹಚರ ಎಪಿಐ ರಿಯಾಜ್ ಕಾಜಿ ಈ ವಸ್ತುಗಳನ್ನು ನದಿಗೆ ಎಸೆದಿದ್ದನು ಎಂದು ತಿಳಿದುಬಂದಿದೆ.
ಈಜು ತಜ್ಞರು ಲ್ಯಾಪ್‍ಟಾಪ್‍ನ್ನು ಸಹ ವಶಪಡಿಸಿಕೊಂಡಿದ್ದು, ಆದರೆ ಸ್ಕ್ರೀನ್ ಟ್ಯಾಮೇಜ್ ಆಗಿದೆ. ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ಸಹ ನದಿಗೆ ಎಸೆಯಲಾಗಿದೆ. ಅಲ್ಲದೆ ನದಿಗೆ ಎಸೆಯಲಾಗಿರುವ ಎರಡೂ ನಂಬರ್ ಪ್ಲೇಟ್‍ಗಳಲ್ಲಿ ಒಂದೇ ನಂಬರ್ ಇದೆ. ವಾಹನವನ್ನು ಒಂದು ವರ್ಷದ ಹಿಂದೆ ಔರಂಗಬಾದ್‍ನಿಂದ ಕಳ್ಳತನ ಮಾಡಲಾಗಿದೆ. ಈ ನಂಬರ್‍ನ್ನು ಆರ್‍ಟಿಒ ಆಗಲೇ ಬ್ಲ್ಯಾಕ್ ಲಿಸ್ಟ್‍ಗೆ ಸೇರಿಸಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.
ನಂಬರ್ ಪ್ಲೇಟ್ ಶಾಪ್ ಬಳಿ ಸಚಿನ್ ವಾಜೆ ಓಡಾಡಿರುವುದು ಸಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಸ್ಪೆಂಡ್ ಆಗಿರುವ ಎಪಿಐ ರಿಯಾಜ್ ಕಾಝಿ ನಂಬರ್ ಪ್ಲೇಟ್ ಅಂಗಡಿ ಪ್ರವೇಶಿಸುತ್ತಿರುವುದು ಹಾಗೂ ಮಾಲೀಕರೊಂದಿಗೆ ಮಾತನಾಡುವುದು ತಿಳಿದಿದೆ. ಅಲ್ಲದೆ ಅಂಗಡಿಯಿಂದ ಡಿವಿಡಿ ಹಾಗೂ ಕಂಪ್ಯೂಟರ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಬಳಿಕ ಇದೆಲ್ಲವನ್ನೂ ಮಿಥಿ ನದಿಗೆ ಎಸೆಯಲಾಗಿದೆ. ಅಂಟಿಲಿಯಾದ ಬಳಿ ಸ್ಫೋಟಕ ಪತ್ತೆ ಹಾಗೂ ಬ್ಯುಸಿನೆಸ್ ಮ್ಯಾನ್ ಮನ್ಸುಖ್ ಹಿರಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಹ ರಿಯಾಜ್ ಕಾಝಿಗೆ ಎನ್‍ಐಎ ಹಾಗೂ ಮುಂಬೈ ಪೊಲೀಸ್‍ನ ಎಟಿಎಸ್ ನಿಂದ ಸಮನ್ಸ್ ನೀಡಲಾಗಿತ್ತು. ಸಚಿನ್ ವಾಜೆ ನಕಲಿ ನಂಬರ್ ಪ್ಲೇಟ್ ಪಡೆಯಲು ಕಾಝಿ ಸಹಾಯ ಮಾಡಿದ್ದಾನೆ ಎಂದು ಎಟಿಎಸ್ ಹಾಗೂ ಎನ್‍ಐಎ ಹಲವು ಬಾರಿ ಶಂಕೆ ವ್ಯಕ್ತಪಡಿಸಿವೆ.
ಏನಿದು ಪ್ರಕರಣ?
ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಮಾರ್ಚ್ 14ರಂದು ಬಂಧಿಸಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸ್ ಇಲಾಖೆಯಿಂದ ಸಚಿನ್ ವಾಜೆ ಅವರನ್ನು ಅಮಾನತು ಸಹ ಮಾಡಲಾಗಿದೆ.

ಅಂಬಾನಿ ಮನೆ ಬಳಿ ಫೆಬ್ರವರಿ 25 ರಂದು ಸ್ಕಾರ್ಪಿಯೋ ಕಾರಿನಲ್ಲಿ ಜಿಲೆಟಿನ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್‍ಐಎ ವಶಕ್ಕೆ ಪಡೆದು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಸಚಿನ್ ವಾಜೆ ಅವರನ್ನು ವಿಚಾರಣೆಗಾಗಿ ಮಾರ್ಚ್ 25ರ ವರೆಗೆ ಎನ್‍ಐಎ ವಶಕ್ಕೆ ಪಡೆದುಕೊಂಡಿತ್ತು.

ಎನ್‍ಐಎ ವಕ್ತಾರರ ಪ್ರಕಾರ, “ಫೆಬ್ರವರಿ 25 ರಂದು ಕಾರ್ಮೈಕಲ್ ರಸ್ತೆ ಬಳಿ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಇರಿಸುವಲ್ಲಿ ಸಚಿನ್ ವಾಜೆರವರ ಪಾತ್ರವಿರುವುದರಿಂದ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ), 473 (ನಕಲಿ ಮುದ್ರೆಯನ್ನು ತಯಾರಿಸುವುದು ಅಥವಾ ಹೊಂದಿರುವುದು), 502 (2)(ಕ್ರಿಮಿನಲ್ ಬೆದರಿಕೆ), 120 ಬಿ ಅಡಿಯಲ್ಲಿ ಸಚಿನ್ ವಾಜೆರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು.

ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಥಾಣೆ ಉದ್ಯಮಿ ಮನ್ಸುಖ್ ಹಿರಾನ್ ಸಾವಿಗೆ ಸಂಬಂಧಿಸಿದಂತೆ ಸಚಿನ್ ವಾಜೆ ಅವರ ಪಾತ್ರವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.