Tag: science

  • ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಬೆಂಗಳೂರು: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲಿ ಸಂಜೆಯ ವೇಳೆ ದಿಢೀರ್ ಬೆಳಕು ಮೂಡಿದ ವಿಚಾರ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದರೆ ನೋಡಿದವರು ನಮ್ಮ ಗ್ರಾಮದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬೆಳಕಿನ ಕುರಿತು ಚರ್ಚೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿಯೂ ಈ ರೀತಿಯಾಗಿ ಬೆಳಕು ಮೂಡುವ ಸಾಧ್ಯತೆಯಿದೆ ಎನ್ನುವ ಮಾತು ಈಗ ಕೇಳಿ ಬಂದಿದೆ.

    ನಡೆದಿದ್ದು ಏನು?
    ಕಳೆದ ವಾರದ ಪಾಂಡವಪುರ ಭಾಗದಲ್ಲಿ ಭಾರೀ ಸದ್ದು ಕೇಳಿತ್ತು. ಇದಾದ ಮೂರು ದಿನದಲ್ಲಿ ಹೆರಗನಹಳ್ಳಿಯಲ್ಲಿ ಸಂಜೆ 7:15ಕ್ಕೆ ದಿಢೀರ್ ಬೆಳಕು ಕಾಣಿಸಿದೆ. ಸುಮಾರು 5 ನಿಮಿಷಗಳ ಕಾಲ ಈ ಬೆಳಕು ಇತ್ತು. ಬೆಳಗಿನ ಜಾವ ಬೆಳಕು ಹೇಗೆ ಇರುತ್ತದೋ ಅದೇ ರೀತಿಯಾಗಿ ಸಂಜೆಯೂ ಕಾಣಿಸಿತ್ತು. ಈ ರೀತಿ ಆಗಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಅಚ್ಚರಿಗೆ ಕಾರಣವಾದ ಈ ಘಟನೆ ನಿಜವಾಗಿಯೇ ನಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ  ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಕಮಲಾ ಅವರನ್ನು ಸಂಪರ್ಕಿಸಿದ್ದು ಅವರು ಮಂಡ್ಯದ ಬೆಳಕನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.

    ವೈಜ್ಞಾನಿಕ ವಿಶ್ಲೇಷಣೆ ಏನು?
    ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕಿನೊಂದಿಗೆ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿದ್ಯಮಾನಗಳು. ಈ ಎರಡೂ ಘಟನೆಗಳು ಕ್ಷಿತಿಜದಂಚಿನಲ್ಲಿ ನಡೆಯುತ್ತಿರುತ್ತದೆ. ಇವೆರಡರೊಂದಿಗೆ ಬೆಸೆದಿರುವ ವಿದ್ಯಮಾನಗಳು ಮುಂಜಾನೆ ಮತ್ತು ಮುಸ್ಸಂಜೆ.

    ಸೂರ್ಯ ಕ್ಷಿತಿಜದಂಚಿನಲ್ಲಿ ಮರೆಯಾದ ನಂತರವೂ ಸುಮಾರು 18 ಡಿಗ್ರಿಗಳಷ್ಟು ಕೆಳಗಿಳಿಯುವ ತನಕ ಸೂರ್ಯನಿಂದ ಬೆಳಕು ಸ್ಪರ್ಷಕವಾಗಿ (Tangential) ಬರುತ್ತಿರುತ್ತದೆ. ಇದು ಸುಮಾರು 45 – 50 ನಿಮಿಷ ಬರುತ್ತಿರುತ್ತದೆ. ಈ ರೀತಿ ಬಂದ ಬೆಳಕು ನಿರ್ದಿಷ್ಟ ದಿಕ್ಕಿನಲ್ಲಿ ಮೋಡಗಳ ಮೇಲೆ ಬಿದ್ದಾಗ ಅಲ್ಲಿನ ವಾತಾವರಣವನ್ನನುಸರಿಸಿ ಪ್ರತಿಫಲಿತವಾಗುತ್ತದೆ. ಈ ಪ್ರತಿಫಲಿತ ಬೆಳಕು ಮಂಡ್ಯದ ಕೆಲ ಹಳ್ಳಿಗಳ ಮೇಲಾಗಿದೆ.

    ಭೂಮಿಯ ಮೇಲಿನ ವಿವಿಧ ಪ್ರದೇಶಗಳು ಅಲ್ಲಿನ ಸೂರ್ಯಾಸ್ತದ ಸಮಯ ಇತ್ಯಾದಿ ಅಂಶಗಳ ಆಧಾರದ ಮೇಲೆ ಇದನ್ನು ವಿವರಿಸಲಾಗುತ್ತದೆ. ಧ್ರುವ ಪ್ರದೇಶಗಳೆಡೆಗೆ ಸಾಗಿದಂತೆ ಈ ವಿದ್ಯಮಾನ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಉಲ್ಕೆಯ ಸಿದ್ಧಾಂತದ ಆಧಾರದ ಮೇಲೂ ವಿವರಣೆಗಳು ನಡೆಯುತ್ತಿವೆ. ಈ ಕಾರಣದಿಂದ ಮಂಡ್ಯದ ಗ್ರಾಮದಲ್ಲಿ ಬೆಳಕು ಕಾಣಿಸಿರಬಹುದು.  ಇನ್ನಿತರ ವಿವರಣೆಗಳಿಗೆ ಮುಂದೆ ಕಾಯೋಣ.

  • ಹೊಸ ರೂಪದಲ್ಲಿ ಇಜ್ಞಾನ.ಕಾಂ

    ಹೊಸ ರೂಪದಲ್ಲಿ ಇಜ್ಞಾನ.ಕಾಂ

    –  ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನೀಡುವ ಜಾಲತಾಣ  ಅನಾವರಣ
    – ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಜಾಲತಾಣ ಈಗ ಇನ್ನಷ್ಟು ವೈವಿಧ್ಯಮಯ

    ಮೈಸೂರು: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯ ಪ್ರಕಟಣೆಗೆ ಹೆಸರುವಾಸಿಯಾಗಿರುವ  ejnana.com  ಜಾಲತಾಣದ ಹೊಸ ರೂಪ  ಲೋಕಾರ್ಪಣೆಯಾಗಿದೆ.

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಸಂವಹನ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಇಜ್ಞಾನ ಜಾಲತಾಣದ ಹೊಸ ಆವೃತ್ತಿಯನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕರಾದ ಡಾ. ಕೆ ಎಸ್ ಎಂ ಎಸ್ ರಾಘವರಾವ್, ಹಿರಿಯ ಪ್ರಧಾನ ವಿಜ್ಞಾನಿ ಎಎಸ್ ಕೆವಿಎಸ್ ಶರ್ಮ, ವಿಜ್ಞಾನ ಪ್ರಸಾರ್ ಪ್ರಮುಖ ವಿಜ್ಞಾನಿ ಡಾ. ಟಿ ವಿ ವೆಂಕಟೇಶ್ವರನ್   ಲೋಕಾರ್ಪಣೆಗೊಳಿಸಿದರು.

    2007ರಲ್ಲಿ ಪ್ರಾರಂಭವಾದ ಇಜ್ಞಾನ ಜಾಲತಾಣವು ವೈವಿಧ್ಯಮಯ ಮಾಹಿತಿಯ ನಿರಂತರ ಪ್ರಕಟಣೆಯಿಂದಾಗಿ ಕನ್ನಡದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ಜಾಲತಾಣವನ್ನು ಇದೀಗ ಉನ್ನತೀಕರಿಸಲಾಗಿದ್ದು, ಹೊಸ ವಿನ್ಯಾಸದ ಜೊತೆಗೆ ಅನೇಕ ಹೊಸ ವಿಭಾಗಗಳನ್ನೂ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಹೊಸ ಸ್ವರೂಪದ ಜಾಲತಾಣದಲ್ಲಿ ಬೆಂಗಳೂರು ಮೂಲದ ಕ್ವಿನ್‍ಟೈಪ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿರುವ ಡಿಜಿಟಲ್ ಪಬ್ಲಿಶಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅದು ಇಜ್ಞಾನದ ಮಾಹಿತಿ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಈ ತಂತ್ರಜ್ಞಾನವನ್ನು ಇಜ್ಞಾನ ಜಾಲತಾಣಕ್ಕೆ ಯಾವುದೇ ಶುಲ್ಕವಿಲ್ಲದೆ ಒದಗಿಸುವ ಮೂಲಕ ಕ್ವಿನ್‍ಟೈಪ್ ಸಂಸ್ಥೆ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಬಲಪಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

    ಇಜ್ಞಾನ ಜಾಲತಾಣದ ಕುರಿತು:
    ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಇಜ್ಞಾನ ಜಾಲತಾಣವನ್ನು ನಿರ್ವಹಿಸುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ಈ ತಾಣದ ಸ್ಥಾಪಕ ಸಂಪಾದಕರಾಗಿದ್ದಾರೆ. 2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ.

  • ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಬೆಂಗಳೂರು: ಮೈಸೂರು ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ನವದೆಹಲಿಯ ವಿಜ್ಞಾನ ಪ್ರಸಾರ್ ನೆರವಿನೊಂದಿಗೆ ಮೈಸೂರಿನಲ್ಲಿ ಇದೇ ಸೆಪ್ಟೆಂಬರ್ 20-21ರಂದು ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು ಎನ್ನುವ ವಿಷಯದ ಬಗ್ಗೆ ರಾಜ್ಯ ಮಟ್ಟದ ಸಮಾವೇಶ ಆಯೋಜನೆಗೊಂಡಿದೆ.

    ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಆಸಕ್ತರಾಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವ್ಯಕ್ತಿಗಳು ಹಾಗೂ ಪ್ರಕಾಶಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚರ್ಚಿಸಲು ಇದು ವೇದಿಕೆಯನ್ನು ಒದಗಿಸಲಿದೆ.

    ಸಂವಹನಕಾರರ ವಿಚಾರಗಳು, ಸರ್ಕಾರಿ ಸಂಸ್ಥೆಗಳ ಕೊಡುಗೆ, ಮಾಧ್ಯಮಗಳ ಪಾತ್ರ, ಪತ್ರಿಕೆಗಳು ಹಾಗೂ ಪ್ರಕಾಶನ, ಸರ್ಕಾರೇತರ ಸಂಸ್ಥೆಗಳ ಕೊಡುಗೆ ಈ ವಿಚಾರದ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಸೆ.20ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ದೆಹಲಿಯ ವಿಜ್ಞಾನ ಪ್ರಸಾರ್ ನಿರ್ದೇಶಕ ಡಾ. ನಕುಲ್ ಪರಾಶರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿಜ್ಞಾನ ಸಂವಹನ ಚಳುವಳಿಯ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆಎಸ್‍ಎಂಎಸ್ ರಾಘವರಾವ್ ಭಾಗವಹಿಸಲಿದ್ದಾರೆ. ಡಾ. ಟಿವಿ. ವೆಂಕಟೇಶ್ವರನ್ ಅವರು ವಿಜ್ಞಾನ್ ಪ್ರಸಾರ್ ಬಗ್ಗೆ ಮಾತನಾಡಲಿದ್ದಾರೆ.

    ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ  iandp.cftri@gmail.com  ಸಂಪರ್ಕಿಸಬಹುದು.

  • ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    – ಚೀನಾ ವಿಜ್ಞಾನದಲ್ಲಿ ಮುಂದೆ ಬರುವುದನ್ನು ನೋಡಿದ್ರೆ ಭಯವಾಗುತ್ತೆ

    ಧಾರವಾಡ: ವಿಜ್ಞಾನದಲ್ಲಿ ಚೀನಾ ದೇಶ ಮುಂದೆ ಬಂದಿರುವುದನ್ನು ನೋಡಿದರೆ ತುಂಬಾ ಭಯ ಆಗುತ್ತದೆ. ಚೀನಾ ವಿಜ್ಞಾನದ ಮೂಲಕವೇ ಮುಂದೇ ಬರುತ್ತಿದೆ ಎಂದು ಹಿರಿಯ ವಿಜ್ಞಾನಿ ಭಾರತ ರತ್ನ ಡಾ. ಸಿಎನ್‍ಆರ್ ರಾವ್ ಹೇಳಿದ್ದಾರೆ.

    ಧಾರವಾಡದಲ್ಲಿ ನಡೆದ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಥಶಾಸ್ತ್ರ, ಸೈನ್ಯ ಬೆಳೆಸುವುದಕ್ಕಿಂತ ವಿಜ್ಞಾನದಲ್ಲಿ ಮುಂದೆ ಬರಬೇಕು. ಚೀನಾಗೆ ವಿಜ್ಞಾನ ವಿಚಾರದಲ್ಲಿ ಹುಚ್ಚು ಬಂದು ಬಿಟ್ಟಿದೆ. ಎಲ್ಲಿ ಹೋದರೂ ಚೀನಾ ಇದೆ, ನಾನು ಜಗತ್ತಿನಲ್ಲಿ ಯಾವುದೇ ಕಾಲೇಜ್, ವಿಶ್ವವಿದ್ಯಾಲಯಕ್ಕೆ ಹೋದರೂ ಅಲ್ಲಿ ಚೀನಾ ಇದೆ ಎಂದು ಹೇಳಿದ ಅವರು, ಸಾವಿರಾರು ಜನ ವಿಜ್ಞಾನಿಗಳು ಅಲ್ಲಿಂದ ಬರುತ್ತಾರೆ ಎಂದರು.

    ಇದನ್ನು ನೋಡಿದಾಗ ಅಯ್ಯೋ ರಾಮ ಇವರು ಈ ತರಹ ಬೆಳೆಯುತ್ತಿದ್ದರೆ ನಮ್ಮ ದೇಶಕ್ಕೆ ಭವಿಷ್ಯ ಇದೆಯಾ ಅನಿಸುತ್ತೆ ಎಂದ ರಾವ್, ಅಮೇರಿಕಾ, ಜಪಾನ್, ಚೀನಾಗಳನ್ನು ಮೀರಿ ನಾವು ಇಂದು ಜಗತ್ತಿನಲ್ಲಿ ಒಳ್ಳೆ ವಿಜ್ಞಾನಿಯಾಗಬೇಕಿದೆ. ಇನ್ನು ಅವರನ್ನು ಮೀರಿಸಿ ಇಲ್ಲವೇ ಅವರಿಗೆ ಸಮಾನವಾಗಿ ಭಾರತದ ವಿಜ್ಞಾನಿ ಬೆಳೆಯಬೇಕಾದರೆ ಬಹಳ ಕಷ್ಟ ಇದೆ. ನಾವೆಲ್ಲ ರಾಜಕೀಯವಾಗಿ ಭಾಷಣ ಮಾಡಬಹುದು, ಆದರೆ ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಮುಂದೆ ಬರಬೇಕಿದೆ ಎಂದು ಹೇಳಿದರು.

  • ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ನವೆದೆಹಲಿ: ಇಂದು ಭಾರತದ ಬಹು ನಿರೀಕ್ಷಿತ ಚಂದ್ರಯಾನ-2 ಯಶಸ್ವಿ ಉಡಾವಣೆಯಾಗಿದ್ದು, ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇಂದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮೆಚ್ಚಿ ಮೋದಿ ಅವರು ಟ್ವೀಟ್ ಮಾಡಿದ್ದು, ಇದು ನಮ್ಮ ದೇಶದ ವಿಶೇಷ ಕ್ಷಣ. ಇದು ಇತಿಹಾಸ ವಾರ್ಷಿಕೋತ್ಸವಗಳಲ್ಲಿ ಕೆತ್ತಲ್ಪಡುತ್ತದೆ! ಚಂದ್ರಯಾನ-2 ರ ಉಡಾವಣೆಯು ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು ವಿಜ್ಞಾನದ ಹೊಸ ಆವಿಷ್ಕಾರವನ್ನು ವಿವರಿಸುತ್ತದೆ ಮತ್ತು 130 ಕೋಟಿ ಭಾರತೀಯರ ವಿಜ್ಞಾನದ ಹೊಸ ಗಡಿನಾಡುಗಳನ್ನು ಅಳೆಯಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆ ಪಡುತ್ತಾನೆ!”ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಚಂದ್ರಯಾನ-2 ನಂತಹ ಪ್ರಯತ್ನಗಳು ನಮ್ಮ ಯುವ ಪೀಳಿಗೆಯನ್ನು ವಿಜ್ಞಾನದ ಕಡೆಗೆ ಮತ್ತಷ್ಟು ಪ್ರೋತ್ಸಾಹಿಸುತ್ತದೆ. ಇದು ಭಾರತದ ಉನ್ನತ ಗುಣಮಟ್ಟದ ಸಂಶೋಧನೆ ಮತ್ತು ಆವಿಷ್ಕಾರ. ಚಂದ್ರಯಾನದ ತಂಡಕ್ಕೆ ಧನ್ಯವಾದಗಳು, ಈ ಕಾರ್ಯಕ್ರಮ ಇನ್ನಷ್ಟು ಉತ್ತೇಜನ ಪಡೆಯಲಿ. ಚಂದ್ರಯಾನ-2 ಏಕೆ ವಿಶಿಷ್ಟ ಎಂದರೆ ಅದು ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುತ್ತದೆ. ಈ ಹಿಂದೆ ಯಾವ ದೇಶದ ಉಪಗ್ರಹವು ಕೂಡ ದಕ್ಷಿಣ ಧ್ರುವಕ್ಕೆ ಹೋಗಿಲ್ಲ ಎಂದು ಮೋದಿ ಹೇಳಿದ್ದಾರೆ.

    ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ..?
    ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ. ಈ ಭಾಗ ಕತ್ತಲಿನಿಂದ ಕೂಡಿದ್ದು ಉತ್ತರ ಭಾಗಕ್ಕೆ ಹೋಲಿಸಿದರೆ ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯಿದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿವೆ. ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆ.

    ಚಂದ್ರನ ಆಯ್ಕೆ ಏಕೆ?
    ಚಂದ್ರ ನಮಗೆ ಅತಿ ಹತ್ತಿರದ ಆಕಾಶಕಾಯವಾಗಿದ್ದು ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷೆಯ ಭರವಸೆಯ ಪ್ರಯೋಗಾಲಯ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

    ಚಂದ್ರಯಾನ-2ಗೆ ಮಹಿಳಾ ವಿಜ್ಞಾನಿಗಳ ಮುಂದಾಳತ್ವ
    ಯೋಜನಾ ತಂಡದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವಹಿಸಿದ್ದು, ಇಬ್ಬರು ಮಹಿಳೆಯರು ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನಾ ನಿರ್ದೇಶಕಿ ಎಂ. ವನಿತಾ, ಅಭಿಯಾನ ನಿರ್ದೇಶಕಿ ರಿತು ಕರಿಧಾಲ್ ಅವರಿಗೆ ಇಸ್ರೋದಲ್ಲಿ 20 ವರ್ಷ ಸೇವೆಗಳ ಅನುಭವವಿದೆ. ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ಇಬ್ಬರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಗೆ 620 ಸರ್ಕಾರಿ, ಖಾಸಗಿ ಕಂಪನಿಗಳು, ಐಐಎಸ್ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣಗಳ ಕೇಂದ್ರಗಳು ನಾನಾ ರೀತಿಯಲ್ಲಿ ಕೆಲಸ ಮಾಡಿವೆ.

  • ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಒಟ್ಟು 2,17,766 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,44,983 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಎಸ್. ರಜತ್ ಕಶ್ಯಪ್ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

                                                      ರಯಿಸಾ

    ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಟಾಪ್ 10 ವಿದ್ಯಾರ್ಥಿಗಳು

    1. ಎಸ್. ರಜತ್ ಕಶ್ಯಪ್ – 594 – ಕುಮಾರನ್ಸ್ ಪಿಯು ಕಾಲೇಜು, ಬೆಂಗಳೂರು
    2. ದಿವ್ಯಾ ಕೆ – 593 – ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
    3. ಪ್ರಿಯಾ ನಾಯಕ್ – 593 – ಆರ್ ವಿ ಪಿಯು ಕಾಲೇಜು, ಬೆಂಗಳೂರು
    4. ರಯಿಸಾ – 592 – ಎಸ್‍ಆರ್ ಪಿಯು ಕಾಲೇಜು, ಉಡುಪಿ
    5. ಡಿ. ನಿಕೇತನ್ ಗೌಡ – 592 – ಮಾಸ್ಟರ್ಸ್ ಪಿಯು ಕಾಲೇಜು, ಹಾಸನ

                                                     ಸ್ವಾತಿ

    6. ಜಾಗೃತಿ. ಜೆ. ನಾಯಕ್ – 592 – ವಿವೇಕಾನಂದ ಪಿಯು ಕಾಲೇಜು, ಪುತ್ತೂರು
    7. ಸ್ವಾತಿ – 592 – ಮಹತ್ಮಾ ಗಾಂಧಿ ಮೆಮೋ ಪಿಯು ಕಾಲೇಜು, ಉಡುಪಿ
    8. ಸೈಶ್ ಶ್ರೀಕಾಂತ್ ಮೆಂದ್ಕೆ – 591 – ಗೋವಿಂದರಾಮ್ ಸೆಕ್ಸಾರಿಯಾ ಪಿಯು ಕಾಲೇಜು, ಬೆಳಗಾವಿ
    9. ಪಲ್ಲವಿ. ಜಿ – 591 – ಎಎಸ್‍ಸಿ ಪಿಯು ಕಾಲೇಜು, ಬೆಂಗಳೂರು
    10. ಪ್ರಥಮ್. ಎನ್ – 591- ಶಾರದಾ ಪಿಯುಸಿ ಕಾಲೇಜು, ಮಂಗಳೂರು

  • ಪೈಲಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ, ರಿಯಲ್ ಬಾಕಿಯಿದೆ: ಪ್ರಧಾನಿ ಮೋದಿ

    ಪೈಲಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ, ರಿಯಲ್ ಬಾಕಿಯಿದೆ: ಪ್ರಧಾನಿ ಮೋದಿ

    ನವದೆಹಲಿ: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕ್ ಕಸ್ಟಡಿಯಲ್ಲಿರುವ ಕಮಾಂಡರ್ ಅಭಿನಂದನ್ ಬಿಡುಗಡೆಯಾಗುತ್ತಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಯಾವುದೇ ಪ್ರಾಜೆಕ್ಟ್ ತಯಾರಿಸುವ ಮೊದಲು ಪೈಲಟ್ ಪ್ರಾಜೆಕ್ಟ್ ಮಾಡಲಾಗುತ್ತದೆ. ಆ ಪೈಲೆಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ ಂದು ಹೇಳಿದರು.

    ಮೋದಿ ಈ ಮಾತನ್ನು ಹೇಳುತ್ತಿದ್ದಂತೆ ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿದರು. ನಂತರ ಮಾತು ಮುಂದುರಿಸಿದ ಮೋದಿ ಪೈಲಟ್ ಪ್ರಾಜೆಕ್ಟ್ ಈಗ ಪೂರ್ಣಗೊಂಡಿದ್ದು ರಿಯಲ್ ಬಾಕಿ ಇದೆ. ರಿಯಲ್ ಪ್ರಾಜೆಕ್ಟ್ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

    ಮೋದಿ ಅವರು ವೇದಿಕೆ ಬರುತ್ತಿದಂತೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದ ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮೋದಿ, ವಿಜ್ಞಾನ ದಿವಸ ಎಂದ ಕೂಡಲೇ ನಮಗೇ ರಾಮನ್ ಅವರ ಸಿದ್ಧಾಂತ ನೆನಪಾಗುತ್ತದೆ. ವಿಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನಿಮ್ಮ ಪ್ರಯತ್ನ, ಕಾರ್ಯಗಳು ದೇಶಕ್ಕೆ ಲಾಭ ನೀಡಿದೆ ಎಂದರು.

    ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದ ಪ್ರಧಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ವಿಜ್ಞಾನವನ್ನು ಸಮಾಜದೊಂದಿಗೆ ಜೋಡಣೆ ಮಾಡಿ ಜನರ ಅಗತ್ಯಗಳನ್ನು ಪೂರೈಕೆ ಮಾಡಬೇಕು. ವಿಶ್ವಮಟ್ಟದಲ್ಲಿ ನಮ್ಮ ವಿಜ್ಞಾನದ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ನಮ್ಮ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ಅಂತರಿಕ್ಷ ಮಾನವನನ್ನು ಕಳಹಿಸುವ ನಮ್ಮ ನಮ್ಮ ಗುರಿ ತಲುಪಬೇಕಿದೆ ಎಂದು ಕರೆ ನೀಡಿದರು.

    ದೇಶ ವಿಜ್ಞಾನವನ್ನು ಮತ್ತಷ್ಟು ಸಫಲವಾಗುವಂತೆ ಮಾಡಲು ದೇಶದ ಐಐಎಸ್‍ಸಿಗಳಿಗೆ ಸ್ವಯತ್ತಾತೆಯನ್ನು ನೀಡುವ ಚಿಂತನೆ ಇದೆ. ಈ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇಶದ ಪ್ರತಿಯೊಬ್ಬ ಜೀವನದ ಬದಲಾವಣೆಗೆ ವಿಜ್ಞಾನ, ತಂತ್ರಜ್ಞಾನದ ಕೊಡುಗೆ ಬೇಕಾಗಿದೆ. ವಿವಿಧ ಯೋಚನೆಗಳ ಮೂಲಕ ಪ್ರತಿಯೊಬ್ಬ ಕೊಡುಗೆ ಭಿನ್ನವಾಗಿರುತ್ತದೆ. ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುತ್ತಾ ನಮ್ಮ ಸಂಶೋಧನೆಗಳು ಸಾಗಬೇಕಿದೆ. ಕೃಷಿ, ಸ್ವಚ್ಛತೆ, ತಂತ್ರಜ್ಞಾನ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮತ್ತಷ್ಟು ಸಂಶೋಧನೆಗಳು ಆಗಬೇಕಿದ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಬೆಂಗಳೂರು: ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ‘ವಿಜ್ಞಾನ’ ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

    ಈ ಕಾರ್ಯಕ್ರಮ ಬರುವ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

    ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ ‘ವಿಜ್ಞಾನ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಘಟಿಕೋತ್ಸವ

    ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಘಟಿಕೋತ್ಸವ

    ಬೆಂಗಳೂರು: ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಬಿಇ, ಬಿಆರ್ಕ್, ಎಂ.ಟೆಕ್, ಎಂ. ಆರ್ಕ್, ಎಂಬಿಎ, ಮತ್ತು ಎಂಸಿಎಯ ಘಟಿಕೋತ್ಸವ ಸಮಾರಂಭದಲ್ಲಿ ಚೆನ್ನೈನ ಅಣ್ಣಾ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ಸೂರಪ್ಪ ಪದವಿ ಪ್ರದಾನ ಮಾಡಿದರು.

    13 ಬಿಇ , 45 ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 1,200 ವಿದ್ಯಾರ್ಥಿಗಳಿಗೆ ಪದವಿ ಪಡೆದರು. ಇದರಲ್ಲಿ ವಿವಿಧ ವಿಭಾಗದಲ್ಲಿ 29 ವಿದ್ಯಾರ್ಥಿಗಳಿಗೆ ಚಿನ್ನ, 16 ಬೆಳ್ಳಿ, 25 ಕಂಚಿನ ಪದಕ ಪಡೆದರು.

    ಸಮಾರಂಭದಲ್ಲಿ ಡಾ. ಎಂ.ಕೆ. ಸೂರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣದಲ್ಲಿ ದೇಶ ಹಿಂದುಳಿದಿದ್ದು, ಇದರ ಕಡೆ ದೇಶ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾಗಿದೆ. ಅಮೆರಿಕ, ಚೀನಾ, ಜಪಾನ್ ರಾಷ್ಟ್ರಗಳು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿವೆ. ಪಾಕಿಸ್ತಾನ, ಶ್ರೀಲಂಕಾಗಿಂತ ಭಾರತ ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಇನ್ನು ಹೆಚ್ಚು ಆವಿಷ್ಕಾರಕ್ಕೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಕೇರಳ, ಕರ್ನಾಟಕ, ಚೆನ್ನೈನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದ ಮನುಕುಲ ತತ್ತರಿಸಿ ಹೋಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ವಿಜ್ಞಾನ- ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಳೆದ 30 ವರ್ಷಗಳಿಂದೆ ಕಾಲರಾ, ಮಲೇರಿಯಾದಂತಹ ರೋಗಗಳಿಂದ ಮಾನವ ಬಳಲುತ್ತಿದ್ದ. ಇಂದು ನಿಫಾ, ಡೆಂಗ್ಯೂ ಸೇರಿದಂತೆ ವಿವಿಧ ಮಾರಕ ರೋಗಗಳಿಗೆ ಸಂಶೋಧನೆಯಿಂದ ಪರಿಹಾರ ಕಂಡುಕೊಳ್ಳಲಾಗಿದೆ. ಹೀಗಾಗಿ ಮುಂದುವರಿಯುತ್ತಿರುವ ಕಾಲಘಟ್ಟದಲ್ಲಿ ಇಂದಿನ ಯುವಕರು ಹೊಸ ಆವಿಷ್ಕಾರಗಳಿಗೆ ಹೆಚ್ಚು ಗಮನ ಹರಿಸಿ ದೇಶ ಅಭಿವೃದ್ಧಿಯತ್ತ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

    ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಲವು ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ಹೊಸ ಹೊಸ ಆವಿಷ್ಕಾರಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುತ್ತಿದೆ. ಅಲ್ಲದೆ, ದೇಶ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಹಾಗೂ ಆರ್ಥಿಕಾಭಿವೃದ್ಧಿಗೆ ಆವಿಷ್ಕಾರ ಪ್ರಮುಖ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

    ಈ ವೇಳೆ ಗೋಕುಲ ಅಣ್ಣಾ ಎಜುಕೇಷನ್ ಫೌಂಡೆಷನ್ ಅಧ್ಯಕ್ಷ ಡಾ. ಎಂ.ಆರ್ ಜಯರಾಮ್, ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾದ ಎಂ.ಆರ್. ರಾಮಯ್ಯ, ಎಂ.ಆರ್. ಸೀತಾರಾಮ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲರಾದ ಡಾ. ಎನ್.ವಿ.ಆರ್. ನಾಯ್ಡು ಸೇರಿದಂತೆ ಇತರರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದ್ರಗ್ರಹಣ- ಮೂಢನಂಬಿಕೆ ಧಿಕ್ಕರಿಸಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ

    ಚಂದ್ರಗ್ರಹಣ- ಮೂಢನಂಬಿಕೆ ಧಿಕ್ಕರಿಸಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ

    ಚಿತ್ರದುರ್ಗ: ಚಂದ್ರಗ್ರಹಣದಿಂದಾಗಿ ಶುಭ ಕಾರ್ಯ ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಿದ್ದರೆ, ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಯನ್ನು ಧಿಕ್ಕರಿಸುವ ಮೂಲಕ ನವಜೋಡಿಗೆ ವಿವಾಹ ಕಾರ್ಯಕ್ರಮ ಏರ್ಪಡಿಸಿ ವಿಶಿಷ್ಟ ಕಾರ್ಯಕ್ರಮ ನಡೆಸಿದೆ. ಅಲ್ಲದೇ ಇದೇ ವೇಳೆ ನೂರಾರು ಬಾಲಕ, ಬಾಲಕಿಯರು ಹಾಗೂ ಯುವಕರು ಲಿಂಗದೀಕ್ಷೆ ಪಡೆದಿದ್ದಾರೆ.

    ಜಿಲ್ಲೆಯ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆಯ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ಅವರಿಗೆ ಚಂದ್ರಗ್ರಹಣದಂದೇ ಮದುವೆ ಶುಭಕಾರ್ಯ ನಡೆಸಲಾಯಿತು. ಮುರುಘಾಮಠದಲ್ಲಿರುವ ಅಲ್ಲಮ್ಮಪ್ರಭು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ನವಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಉಳಿದಂತೆ ನೂರಾರು ಯುವಕ ಯುವತಿಯರು ವಿಭೂತಿ, ರುದ್ರಾಕ್ಷಿ ಧರಿಸುವ ಮೂಲಕ ಲಿಂಗ ದೀಕ್ಷೆ ಪಡೆದರು.

    ಚಂದ್ರಗ್ರಹಣ ಜಗತ್ತಿನ ಅದ್ಭುತ. ಇದು ರಕ್ತ ಚಂದಿರ ಅಲ್ಲ. ಅದ್ಭುತ ಚಂದಿರ. ಮಂಗಳ ಮತ್ತು ಅಮಂಗಳ ಎಂಬುದು ಇಲ್ಲ. ಜಗತ್ತಿನಲ್ಲಿ ಎಲ್ಲವೂ ಶುಭಕರ. ಬ್ರಿಟಿಷರ ದಾಸ್ಯದಿಂದ ಹೊರಗೆ ಬಂದ ನಾವು ಪಂಚಾಂಗದ ದಾಸ್ಯದಲ್ಲಿ ಜೀವಿಸುತ್ತಿದ್ದೇವೆ. ಮುಗ್ಧ ಜನರಿಗೆ ಹಾದಿ ತಪ್ಪಿಸುತ್ತಿರುವ ಕೆಲಸ ನಡೆಯುತ್ತಿದೆ. ಚಂದ್ರ ಗ್ರಹಣದ ಬಗ್ಗೆ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಈ ಮೂಲಕ ಜನರ ಭಯವನ್ನು ದೂರ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದರು.