Tag: school

  • ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ನವೀಕರಣ ಕಟ್ಟಡ ಉದ್ಘಾಟನೆ

    ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ನವೀಕರಣ ಕಟ್ಟಡ ಉದ್ಘಾಟನೆ

    ಮಂಗಳೂರು: ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನವೀಕರಣಗೊಂಡ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ನವೀಕೃತ ಕಟ್ಟಡವನ್ನು ಕ್ಯಾನ್ ಫಿನ್ ಹೋಮ್ ಲಿಮಿಟೆಡ್‍ನ ಪ್ರಬಂಧಕ ಉಮೇಶ್ ಪೈ ಉದ್ಘಾಟಿಸಿದರು.

    ಕಟ್ಟಡ ಉದ್ಘಾಟಿಸಿ ಮಾತನಾಡಿದ ಉಮೇಶ್ ಪೈ ಅವರು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ದೇಶದ ಏಳಿಗೆಗಾಗಿ ಜೀವನ ನಡೆಸಿರಿ ಎಂದು ಕರೆ ನೀಡಿದರು.

    ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಒದಗಿಸಿದ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಸಹಕಾರಿಯಾಗಬೇಕು. ಕ್ಯಾನ್ ಫಿನ್ ಹೋಮ್ಸ್ ಇವರ ಉದಾರತೆಯ ಸಮಾಜದ ಉಳಿದ ಸಂಘ ಸಂಸ್ಥೆಗಳಲ್ಲಿ ಇದ್ದಲ್ಲಿ ವಿದ್ಯಾ ಸಂಸ್ಥೆಗಳು ಬೆಳೆಯುತ್ತವೆ. ಅದರ ಉಪಯೋಗ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಎಂದು ತಿಳಿಸಿದರು.

    ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್‍ನವರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆದಿದೆ. ಈ ವೇಳೆ ಗುತ್ತಿಗೆದಾರ ಸುಧೀರ್ ರಾಜ್, ಸುಮಂತ್ ರಾವ್, ಫೆಲ್ಸಿ ರೇಗೋ, ರಮಾನಂದ ಭಂಡಾರಿ, ಜಗದೀಶ್, ನಾಗೇಶ್ ನಾಯಕ್ ಮತ್ತಿತರು ಉಪಸ್ಥತಿರಿದ್ರು. ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ್ ನಾಯ್ಕ್ ಎ.ಸಿ ಸ್ವಾಗತಿಸಿದರು. ಸಹ ಶಿಕ್ಷಕ ನಾಗೇಶ್ ನಾಯಕ್ ವಂದನಾರ್ಪಣೆಗೈದರು. ಸುಭಾಷಿಣಿ ಕಾರ್ಯಕ್ರಮವನ್ನು ನಿರೂಪಿಸಿದರು.

     

  • ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ನರ್ಸರಿ ಶಾಲೆಯ ಸಿಬ್ಬಂದಿ  ಒಬ್ಬನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ್ ಅಲಿಯಾಸ್ ಮಂಜ ಬಂಧಿತ ಆರೋಪಿ. ಪ್ರಾಂಶುಪಾಲೆ ನಿರ್ಲಕ್ಷ್ಯ ವಿರುದ್ಧ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈಗ ಶಾಲೆಯ ಪ್ರಾಂಶುಪಾಲೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ನರ್ಸರಿ ಶಾಲೆಯಲ್ಲಿ ಸಿಸಿ ಕ್ಯಾಮರಾ ನಿರ್ವಹಣೆ ಮಾಡುತ್ತಿದ್ದ ಅರೋಪಿ ಮಂಜುನಾಥ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫೆ.17ರಂದು ಸ್ಕೂಲ್ ನಿಂದ ಕಣ್ಣೀರಿಡುತ್ತಾ ಮನೆಗೆ ಬಂದಾಗ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಫೆ. 18ರಂದು ಬಾಲಕಿಯ ಪೋಷಕರು ಬಾಲಕಿಯಿಂದ ಹೇಳಿಕೆ ನೀಡಿ ಮಾರತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಈಗ ಆರೋಪಿಯನ್ನು ಬಂಧಿಸಿದ್ದಾರೆ.

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಇಂದು ಶಾಲೆಯ ಬಳಿ ಹಲವು ಪೋಷಕರು ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಏನಿದು ಪೋಕ್ಸೋ ಕಾಯ್ದೆ?
    ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು(ಪೋಕ್ಸೋ) ಜಾರಿಗೆ ತರಲಾಗಿದೆ. ಪೋಕ್ಸೋ ಪ್ರಕಾರ 18 ವರ್ಷದೊಳಗಿನವರನ್ನು ಮಗು ಎಂದು ಪರಿಗಣಿಸಲಾಗುತ್ತದೆ.  ಅತ್ಯಾಚಾರ, ಗುಪ್ತಾಂಗ ಮುಟ್ಟುವುದು, ಲೈಂಗಿಕತೆಗೆ ಪ್ರಚೋದಿಸುವುದು,ಅಶ್ಲೀಲ ಚಿತ್ರಗಳ ಬಳಕೆ, ಮಗುವಿನ ಅಶ್ಲೀಲ ಚಿತ್ರ ಸಂಗ್ರಹಿಸಿದರೆ ಅದು ಈ ಕಾಯ್ದೆಯ ಪ್ರಕರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

  • ಧಾರವಾಡದ ಈ ಗ್ರಾಮದ ಮಕ್ಕಳು ಶಾಲೆಗೆ 7ಕಿ.ಮೀ. ನಡಿಬೇಕು..!

    ಧಾರವಾಡ: ಜಲ್ಲೆಯ ಗಡಿಭಾಗದ ಹಾಗೂ ಧಾರವಾಡ ತಾಲೂಕಿನ ಹುಣಶಿಕುಮರಿ ಗ್ರಾಮದ ಮಕ್ಕಳು ಪ್ರೌಢ ಶಾಲೆಗೆ ಹೋಗಬೇಕಾದರೆ ಪ್ರತಿನಿತ್ಯ 7 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.

    ಹುಣಶಿಕುಮರಿ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ಬಸ್ಸು ಬಿಟ್ರೆ ಬೇರೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸೈಕಲ್ ಇದ್ದವರು ಸೈಕಲ್ಲಿನ ಮೇಲೆ ಹೋದ್ರೆ, ಉಳಿದವರಿಗೆ ಕಾಲೇ ಗತಿ. ಈ ಗ್ರಾಮದಿಂದ ಪ್ರತಿ ದಿನ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಕೇರಿ ಗ್ರಾಮದ ಶಾಲೆಗೆ ಹೋಗ್ತಾರೆ. 80 ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದ ಮಕ್ಕಳು ಇವಾಗ ವಿದ್ಯಾಭ್ಯಾಸದ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ.

    ಈ ಗ್ರಾಮ ದಟ್ಟ ಅರಣ್ಯ ಪ್ರದೇಶದಲ್ಲಿದೆ. ದಟ್ಟವಾದ ಅರಣ್ಯದಲ್ಲೇ ಇಲ್ಲಿನ ಮಕ್ಕಳು ಸೈಕಲ್ ಮೂಲಕ ಅಥವಾ ನಡೆದುಕೊಂಡು ಹೋಗಬೇಕು. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಸಚಿವ ಹಾಗು ಕ್ಷೇತ್ರದ ಶಾಸಕ ಸಚಿವ ಸಂತೋಷ ಲಾಡ್ ಅವರಿಗೆ ಕೇಳಿದ್ರೆ, ಅರಣ್ಯ ಪ್ರದೇಶ ಇರುವುದರಿಂದ ರಸ್ತೆ ಡಾಂಬರಿಕರಣ ಮಾಡಿಲ್ಲ ಎಂದು ಹೇಳುತ್ತಾರೆ.

    ಸದ್ಯ ಗ್ರಾಮದ ರಸ್ತೆ ಆಗದೇ ಇದ್ರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಹೀಗೆಯೇ ಎದ್ದು ಬಿದ್ದು ಓಡಾಡಬೇಕೊ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರಿದ್ರು ಇಲ್ಲಿ ಕಳಪೆ ರಸ್ತೆಗಳಿರುವುದು ವಿಪರ್ಯಾಸ.

     

  • ಹೋಮ್‍ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿನಿಯರನ್ನ ಅರೆನಗ್ನವಾಗಿ ಪರೇಡ್ ಮಾಡಿಸಿದ ಶಿಕ್ಷಕಿ

    ಲಕ್ನೋ: ಹೋಮ್‍ವರ್ಕ್ ಪೂರ್ತಿಯಾಗಿ ಮಾಡದ ಕಾರಣ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯರನ್ನ ಅರೆನಗ್ನಾವಸ್ಥೆಯಲ್ಲಿ ಪರೇಡ್ ಮಾಡಿಸಿರೋ ಘಟನೆ ಉತ್ತರಪ್ರದೇಶದ ಸೋನ್‍ಭದ್ರಾದಲ್ಲಿ ನಡೆದಿದೆ.

    ಇಲ್ಲಿನ ಬಾಲಕಿಯರ ಜೂನಿಯರ್ ಹೈ ಸ್ಕೂಲ್‍ನಲ್ಲಿ ಶಿಕ್ಷಕಿ ಮೀನಾ ಸಿಂಗ್, ಶನಿವಾರದಂದು ಹೋಮ್ ವರ್ಕ್ ಮಾಡದ ವಿದ್ಯಾರ್ಥಿನಿಯರ ಬಟ್ಟೆ ಕಳಚಿ ಅರೆ ನಗ್ನವಾಗಿ ಶಾಲೆಯ ಕಾಂಪೌಂಡ್‍ನಲ್ಲಿ 2 ಗಂಟೆಗಳ ಕಾಲ ಪರೇಡ್ ಮಾಡಿಸಿದ್ದಾಳೆ. ಅಲ್ಲದೆ ಇದನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು, ಮುಂದೆ ಹೋಮ್‍ವರ್ಕ್ ಮಾಡದಿದ್ದರೆ ವೀಡಿಯೋವನ್ನ ಲೀಕ್ ಮಾಡೋದಾಗಿ ಹೆದರಿಸಿದ್ದಾಳೆ.

    ಬಾಲಕಿಯರ ಪೋಷಕರಿಗೆ ಈ ವಿಷಯ ಗೊತ್ತಾದಾಗ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಈ ವಿಷಯವನ್ನು ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಘಟನೆ ಬಹಿರಂಗವಾದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್, ಶಿಕ್ಷಕಿಯನ್ನು ಕೂಡಲೇ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

     

  • ಆರ್‍ಟಿಇ ಅಡಿ ಸೀಟು ಸಿಕ್ಕರೂ ರಾಯಚೂರಿನ ಮಕ್ಕಳಿಗೆ ಶಾಲಾ ಪ್ರವೇಶಾತಿ ಇಲ್ಲ!

    ರಾಯಚೂರು : ಬಡ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಸಿಗಲಿ ಅಂತ ಜಾರಿಗೆ ತಂದ ಆರ್‍ಟಿಇ ಕಾಯ್ದೆ ಸೌಲಭ್ಯ ರಾಯಚೂರಿನ ಮಕ್ಕಳಿಗೆ ಸಿಕ್ಕರೂ ಸಿಗದಂತಾಗಿದೆ.

    ಮಕ್ಕಳು ಸೀಟು ಪಡೆದ ರಾಯಚೂರಿನ ಪಂಚಲಿಂಗೇಶ್ವರ ಕಾಲೋನಿಯ ನಿಸರ್ಗ ವಿದ್ಯಾಲಯ ಶಾಲೆ ಏಕಾಏಕಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆ ಮತ್ತೊಂದು ಖಾಸಗಿ ಶಾಲೆಯನ್ನ ಸೂಚಿಸಿತ್ತು. ಆದ್ರೆ ಇಲಾಖೆ ಸೂಚಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಆರ್‍ಟಿಇ ಅನುದಾನವಿಲ್ಲದ ಕಾರಣ ಫೀಸ್ ಕಟ್ಟದಿದ್ದರೆ ಮಕ್ಕಳಿಗೆ ಪ್ರವೇಶ ನೀಡಲ್ಲ ಅಂತ ಪಟ್ಟುಹಿಡಿದಿರೋದು ಕಾಯ್ದೆ ವೈಫಲ್ಯಕ್ಕೆ ಕಾರಣವಾಗಿದೆ.

    ಆರ್‍ಟಿಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈಗ ಕಂಗಾಲಾಗಿದ್ದಾರೆ. ಏಕಾಏಕಿ ಶಾಲೆ ಮುಚ್ಚಿದ್ದರಿಂದ ಇಲ್ಲಿನ ಮಕ್ಕಳ ಪರಸ್ಥಿತಿ ಡೋಲಾಯಮಾನವಾಗಿದೆ. 2013-14 ಹಾಗೂ 2015-16ರ ಸಾಲಿನಲ್ಲಿ ಆರ್‍ಟಿಇ ಅಡಿ ಸೀಟು ಪಡೆದ 13 ವಿದ್ಯಾರ್ಥಿಗಳಿಗೆ ಈಗ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದು ಮುಂದುವರೆಸಲು ಶಿಕ್ಷಣ ಇಲಾಖೆ ಕ್ರಮಕೈಗೊಂಡಿತ್ತು. ಆದ್ರೆ ಆರ್‍ಟಿಇ ಅನುದಾನವಿಲ್ಲದ ಕಾರಣ ಶಾಲಾ ಶುಲ್ಕ 10 ಸಾವಿರದ 400 ರೂಪಾಯಿ ಕೂಡಲೇ ಕಟ್ಟುವಂತೆ ಪೋಷಕರಿಗೆ ಒತ್ತಾಯಿಸಿದೆ.

    ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮ್ಮನಿರುವುದರಿಂದ ಮಕ್ಕಳಿಗೆ ನಾವು ಪ್ರವೇಶಾತಿ ಕೊಡಲು ಸಾಧ್ಯವಿಲ್ಲ. ಪೋಷಕರು ಕೂಡಲೇ ಶಾಲಾ ಶುಲ್ಕ ಕಟ್ಟದಿದ್ದರೇ ಮಕ್ಕಳ ಪ್ರವೇಶಾತಿಯನ್ನ ರದ್ದುಗೊಳಿಸುತ್ತೇವೆ ಎಂದು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಮಂಜುಳಾದೇವಿ ಹೇಳಿದ್ದಾರೆ.

    ನಿಸರ್ಗ ವಿದ್ಯಾಲಯ ತಮ್ಮ ಸಂಸ್ಥೆಗೆ ಬರುತ್ತಿದ್ದ ಆರ್‍ಟಿಇ ಅನುದಾನವನ್ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ವರ್ಗಾಯಿಸುವಂತೆ ಶಿಕ್ಷಣ ಇಲಾಖೆಗೆ ಈಗಾಗಲೇ ಕೇಳಿಕೊಂಡಿದೆ. ಆದ್ರೆ ಇಲಾಖೆಯ ಸಾಫ್ಟವೇರ್‍ನಲ್ಲಿ ಪ್ರಸಕ್ತ ವರ್ಷದಲ್ಲಿ ನಿಸರ್ಗ ವಿದ್ಯಾಲಯ ಶಾಲೆಯ ಹೆಸರು ಹಾಗೂ ಡೈಸ್ ಸಂಖ್ಯೆಯೇ ಇಲ್ಲ. ಹೀಗಾಗಿ ಶಾಲೆಗೆ ಅನುಧಾನವೂ ಬಿಡುಗಡೆಯಾಗುವುದಿಲ್ಲ. ಈಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಭಯಹುಟ್ಟುವಂತೆ ಮಾಡಿದೆ.

    ಒಟ್ನಲ್ಲಿ, ದೇವರು ಕೊಟ್ರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೇ ಆರ್‍ಟಿಇ ಅಡಿ ಸೀಟು ಸಿಕ್ಕರೂ ಮಕ್ಕಳಿಗೆ ಶಾಲಾ ಪ್ರವೇಶಾತಿ ಸಿಗುತ್ತಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಬಡ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕಿದೆ. ಸಮಸ್ಯೆಯನ್ನ ಅರಿತು ಕೂಡಲೇ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

     

  • ಶಾಲಾ ವಾರ್ಷಿಕೋತ್ಸವದಂದು ತಾಯಿಯ ಪಾದ ತೊಳೆದು ಪೂಜೆ ಸಲ್ಲಿಸಿದ ಕೊಪ್ಪಳದ ಮಕ್ಕಳು

    ಕೊಪ್ಪಳ: ಜಿಲ್ಲೆಯ ಹನುಮಸಾಗರ ಪಟ್ಟಣದ ಸರ್ವೋದಯ ಖಾಸಗಿ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಜನ್ಮದಾತೆಯರಿಗೆ ನಮನ ಸಲ್ಲಿಸಿದರು.

    ಫೆಬ್ರವರಿ ಮತ್ತು ಮಾರ್ಚ ತಿಂಗಳು ಬಂದರೆ ಎಲ್ಲ ಶಾಲೆಗಳಲ್ಲಿ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಸರ್ವೋದಯ ಶಾಲೆಯಲ್ಲಿ `ಜನ್ಮದಾತರಿಗೊಂದು ನಮನ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಂದ ಹೆತ್ತವರ ಪಾದ ಪೂಜೆ ಮಾಡಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಪಾಲಕರು ಆಗಮಿಸಿದ್ದರು. ಅವರವರ ಮಕ್ಕಳು ತಮ್ಮ ತಂದೆ-ತಾಯಂದಿರಿಗೆ ಸಾಮೂಹಿಕವಾಗಿ ಪಾದ ಪೂಜೆ ನೆರವೇರಿಸಿದರು. ಜಾತಿ-ಬೇಧ ಎನ್ನದೆ ಎಲ್ಲ ಧರ್ಮದ ತಾಯಂದಿರು ಪಾದ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

    ಯಾಕೆ ಕಾರ್ಯಕ್ರಮ ಆಯೋಜಿಸಿದ್ದು ಎಂದು ಕೇಳಿದ್ದಕ್ಕೆ, ಯುವ ಪೀಳಿಗೆ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದೆ. ಇದರಿಂದ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.