ಚಂಡೀಗಢ್: ಮಂಗಳವಾರ ದೇಶದಾದ್ಯಂತ 71 ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಅಂತೆಯೇ ಹರ್ಯಾಣದ ಶಾಲೆಯೊಂದರಲ್ಲಿ ಧ್ವಜಾರೋಹಣಕ್ಕೆ ಸಿದ್ಧಗೊಳಿಸಿದ್ದ ಬಾವುಟವನ್ನು ಕೋತಿಗಳು ಹಾರಿಸುವ ಮೂಲಕ ಅಚ್ಚರಿ ಮೂಡಿಸಿವೆ.
ಹೌದು. ಹರ್ಯಾಣದ ಅಂಬಲ ಎಂಬಲ್ಲಿರೋ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟು ಕಂಬದ ತುದಿಗೇರಿಸಿ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಅಂತೆಯೇ ವಿದ್ಯಾರ್ಥಿಗಳು ಕಾರ್ಯಕ್ರಮದಲಲಿ ಭಾಗವಹಿಸಿ, ಇನ್ನೇನು ಧ್ವಜಾರೋಹಣ ಮಾಡಬೇಕೆನ್ನುವಷ್ಟರಲ್ಲಿ ಶಾಲೆಯ ಕಟ್ಟಡದಲ್ಲಿ ಕುಳಿತಿದ್ದ ಕೋತಿಗಳು ಹಾರಿ ಬಂದು ರಾಷ್ಟ್ರಧ್ವಜಕ್ಕೆ ಕಟ್ಟಿದ ಹಗ್ಗವನ್ನು ಎಳೆಯುವ ಮೂಲಕ ಅವುಗಳೇ ಧ್ವಜಾರೋಹಣ ನೆರವೇರಿಸಿವೆ. ಈ ದೃಶ್ಯ ನರೆದಿದ್ದವರಿಗೆ ಅಚ್ಚರಿ ಮೂಡಿಸಿವೆ. ಕೂಡಲೇ ಧ್ವಜಾರೋಹಣಕ್ಕೆ ಸಾಕ್ಷಿಯಾದವರು ಹರ್ಷೋದ್ಗಾರದಿಂದ ಚಪ್ಪಾಳೆ ಹೊಡೆದಿದ್ದಾರೆ.
ಈ ದೃಶ್ಯವನ್ನು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದಾರೆ.
ಬೆಂಗಳೂರು: ಇಡೀ ಶಾಲಾ ಮಕ್ಕಳು 71ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತಲ್ಲಿನರಾಗಿದ್ದರು. ಇದೇ ವೇಳೆ ಮರದ ಕೆಳಗೆ ಆಟವಾಡುತ್ತಿದ್ದಾಗ ಇದ್ದಕ್ಕಿದಂತೆ ಮರ ಬೀಳುವ ಶಬ್ದ ಕೇಳಿಸಿದೆ. ಕೂಡಲೇ ವಿದ್ಯಾರ್ಥಿಗಳು ಓಡಿದ್ದರೂ, ನಾಲ್ವರು ಮಕ್ಕಳು ಮರದಡಿ ಸಿಲುಕಿದ ದಾರುಣ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ಹೊಸೂರು ಮುಖ್ಯರಸ್ತೆಯ ಬೇರೆಟೇನ ಅಗ್ರಹಾರದ ಸರ್ಕಾರಿ ಶಾಲಾ ಆವರಣದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಈ ವೇಳೆ ಲಕ್ಷ್ಮೀಕಾಂತ್ ಮತ್ತು ರಾಕೇಶ್ ಎಂಬ ಇಬ್ಬರು ವಿದ್ಯಾರ್ಥಿಗಳ ಕಾಲು ಮುರಿದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಮಾರಕ ಶಾಲೆಯಲ್ಲಿ ಇಂದು ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಶಾಲಾ ಆವರಣದಲ್ಲಿನ ಮರ ಉರುಳಿ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳು ಸಹೋದರರಾಗಿದ್ದಾರೆ. ವಿಷಯ ತಿಳಿದು ಶಾಸಕ ಎಂ. ಕೃಷ್ಣಪ್ಪ, ಸ್ಥಳೀಯ ಪಾಲಿಕೆ ಸದಸ್ಯ ಶಾಂತಬಾಬು ಮತ್ತು ಮಾಜಿ ಪಾಲಿಕೆ ಸದಸ್ಯೆ ಶ್ರೀನಿವಾಸರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧೀಕಾರಿ ರಮೇಶ್ ಆಸ್ಪತ್ರೆಗೆ ಭೇಟಿ ನೀಡಿ ಶಸ್ತ್ರ ಚಿಕಿತ್ಸೆಗೆ ಬೇಕಾದ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನಡುವೆ ಸ್ಥಳೀಯ ಜನಪ್ರತಿನಿಧಿಗಳು ಸಹೋದರರ ನೆರೆವಿಗೆ ಆಗಮಿಸಿದ್ದಾರೆ.
ಉಡುಪಿ: ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ 7ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಕುಂದಾಪುರ ತಾಲೂಕಿನ ಕಟ್ ಬೆಳ್ತೂರಿನಲ್ಲಿ ಪವಿತ್ರಾ ಎಂಬಾಕೆಯನ್ನು ಅಪಹರಿಸಲಾಗಿದೆ. ತನ್ನ ದೊಡ್ಡಪ್ಪನ ಮಗ ಮತ್ತು ಆತನ ಗೆಳೆಯನ ಜೊತೆ ಶಾಲೆಗೆ ಹೋಗುವುದಾಗಿ ಪವಿತ್ರಾ ಮನೆಯಿಂದ ಹೊರಟಿದ್ದಳು. ಆದ್ರೆ ಅತ್ತ ಶಾಲೆಗೂ ಹೋಗದೆ- ವಾಪಾಸ್ ಮನೆಗೂ ಬಾರದೆ ಪವಿತ್ರಾ ನಾಪತ್ತೆಯಾಗಿದ್ದಾಳೆ.
ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಕುಂದಾಪುರ ಪೊಲೀಸ್ ಭಾನುವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೇಪಾಳ ಮೂಲದ ಕುಂದಾಪುರದಲ್ಲಿ ಗೂರ್ಖಾ ಕೆಲಸ ಮಾಡುತ್ತಿರುವ ಭರತರಾಜ್ ಮತ್ತು ಸೋನಾರ ಎರಡನೇ ಮಗಳಾಗಿರುವ ಪವಿತ್ರಾ ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಳು.
ತನ್ನ ಅಣ್ಣನ ಮಗ ವಿಕ್ರಂ ಮತ್ತು ಆತನ ಗೆಳೆಯ ಸುನೀಲ್ ತಮಿಳುನಾಡಿನಿಂದ ವಾರದ ಹಿಂದೆ ಬಂದಿದ್ದರು. ಅವರೇ ಈಕೆಯನ್ನು ತಮಿಳುನಾಡಿಗೆ ಅಪಹರಣ ಮಾಡಿರಬಹುದು ಎಂಬುವುದು ಕುಟುಂಬದವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ವಿಕ್ರಂಗೆ ಮೂರು ಮದುವೆಯಾಗಿದೆ. ಆತನೇ ಪವಿತ್ರಾಳನ್ನು ಅಪಹರಣ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರು ಅಪಹರಣ ಪ್ರಕರಣವನ್ನು ಶೀಘ್ರ ಪತ್ತೆ ಮಾಡಬೇಕೆಂದು ಪವಿತ್ರಾಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪವಿತ್ರಾಳ ಅಜ್ಜ, ವಿಕ್ರಂ ಈ ಹಿಂದೆ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ಪ್ರಕರಣದಲ್ಲೂ ನಂಬಲು ಸಾಧ್ಯವಿಲ್ಲ. ಸಂಬಂಧದಲ್ಲಿ ಅಣ್ಣನಾದ್ರೂ ಆತ ಈಕೆಯನ್ನು ಕೂಡ ಮಾರಾಟ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದಾಳೆ. ತಂಗಿಯೂ ಜೊತೆಗೆ ಹೋಗಿದ್ದಳು. ವಿಕ್ರಂ ಮತ್ತು ಸುನೀಲ್ ಅಪಹರಿಸುವ ಸಾಧ್ಯತೆಯಿದೆ. ಸುನೀಲ್‍ಗಾಗಿ ಅಪಹರಿಸಿರುವ ಸಾಧ್ಯತೆಯಿದೆ. ಓದಿನಲ್ಲಿ ಪವಿತ್ರಾ ಮುಂದಿದ್ದಳು ಅಂತ ಪವಿತ್ರಾ ತಾಯಿ ಸೋನಾ ಹೇಳಿದ್ದಾರೆ.
ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಸರ್ಕಾರ ಅನುದಾನ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಎರಡೂ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ.
ಶ್ರೀರಾಮ ವಿದ್ಯಾಕೇಂದ್ರ ಹಾಗೂ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿತ್ತು. ಹೀಗಾಗಿ ಬಿ.ಸಿ.ರೋಡ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಊಟದ ತಟ್ಟೆ ಹಿಡಿದು ಮಕ್ಕಳು ಪ್ರತಿಭಟನೆ ಮಾಡುತ್ತಿದ್ದು, ಅನ್ನ ಕಸಿದ ಸಿದ್ಧರಾಮಯ್ಯ ಎನ್ನುವ ಘೋಷಣೆ ಕೂಗುತ್ತಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿದ್ದ ಶ್ರೀರಾಮ ವಿದ್ಯಾ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ಬರುತ್ತಿದ್ದ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ. ಕಳೆದ ಹತ್ತು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಈ ಶಾಲೆಗಳಿಗೆ ಅನುದಾನ ನೀಡಲಾಗ್ತಿತ್ತು. ಈ ಎರಡು ಶಾಲೆಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯ ದತ್ತು ಪಡೆದುಕೊಂಡಿತ್ತು.
ಕಳೆದ ಹತ್ತು ವರ್ಷಗಳಲ್ಲಿ ಕೊಲ್ಲೂರು ದೇಗುಲದಿಂದ 2.83 ಕೋಟಿ ಅನುದಾನ ನೀಡಲಾಗಿತ್ತು. ಶ್ರೀರಾಮ ವಿದ್ಯಾಕೇಂದ್ರಕ್ಕೆ 2.32 ಕೋಟಿ ರೂ. ನೆರವು ಲಭಿಸಿತ್ತು. ಹಾಗೆ ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ 50.72 ಲಕ್ಷ ನೆರವು ಲಭಿಸಿತ್ತು. ಇದೀಗ ಕೊಲ್ಲೂರು ದೇಗುಲ ದತ್ತು ತೆಗೆದುಕೊಂಡಿದ್ದ ಆದೇಶ ಹಿಂದಕ್ಕೆ ಪಡೆಯಲಾಗಿದ್ದು, ದೇವಸ್ಥಾನದ ದುಡ್ಡು ಶಾಲೆಗೆ ನೀಡಬಾರದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಿರ್ಜಾಪುರ್: ಸರ್ಕಾರಿ ಶಾಲೆಯನ್ನೇ ಡ್ಯಾನ್ಸ್ ಬಾರ್‍ನಂತೆ ಮಾಡಿಕೊಂಡು ಸ್ಥಳೀಯರು ಎಣ್ಣೆ ಪಾರ್ಟಿ ಮಾಡಿದ್ದು, ಇಬ್ಬರು ಹುಡುಗಿಯರು ಕುಣಿಯುತ್ತಿದ್ದರೆ ಅವರ ಮೇಲೆ ನೋಟಿನ ಸುರಿಮಳೆಗೈದಿರೋ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಈದರ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಸೋಮವಾರದಂದು ರಕ್ಷಾ ಬಂಧನದ ಅಂಗವಾಗಿ ಶಾಲೆಗೆ ರಜೆ ನೀಡಲಾಗಿತ್ತು. ಈ ವೇಳೆ ಶಾಲೆಯಲ್ಲಿ ಪಾರ್ಟಿ ಮಾಡಲಾಗಿದೆ. ಗ್ರಾಮದ ಮುಖ್ಯಸ್ಥ ತನ್ನ ಮಗನ ಹುಟ್ಟುಹಬ್ಬಕ್ಕೆ ಪಾರ್ಟಿ ಏರ್ಪಡಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪಾರ್ಟಿಗಾಗಿ ರಾತ್ರೋರಾತ್ರಿ ತರಗತಿಯಲ್ಲಿದ್ದ ಡೆಸ್ಕ್ ಹಾಗೂ ಚೇರ್‍ಗಳನ್ನ ತಮಗೆ ಬೇಕಾದಂತೆ ಜೋಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಬಂದು ನೋಡಿದಾಗ ನೆಲದ ಮೇಲೆ ಮದ್ಯ ಚೆಲ್ಲಾಡಿರುವುದು ಹಾಗೂ ಖಾಲಿ ಎಣ್ಣೆ ಬಾಟಲಿಗಳು ಬಿದ್ದಿದ್ದನ್ನು ಕಂಡು ಶಾಕ್ ಆಗಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಕೋಣೆಯನ್ನ ಕ್ಲೀನ್ ಮಾಡಬೇಕಾಯ್ತು.
ಶನಿವಾರದಂದು ತರಗತಿಗಳು ಮುಗಿದ ನಂತರ ಗ್ರಾಮದ ಮುಖ್ಯಸ್ಥ ಬಂದು ಶಾಲೆಯ ಕೀಗಳನ್ನ ತೆಗೆದುಕೊಂಡು ಹೋದರು. ಆದ್ರೆ ಯಾಕೆ ಎಂದು ಹೇಳಲಿಲ್ಲ ಅಂತ ಶಾಲಾ ಮುಖ್ಯೋಪಾಧ್ಯಾಯರು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ವಿಸ್ತೃತ ವರದಿ ಸಿದ್ಧಪಡಿಸುತ್ತಿದ್ದೇವೆ ಹಾಗೂ ಕ್ರಮ ಕೈಗೊಳ್ಳುತ್ತೇವೆ ಅಂತ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ .
ಹಾವೇರಿ: ಸರ್ಕಾರಿ ಶಾಲೆ ಅಂದ್ರೆ ಮೂಗುಮರಿಯೋ ಜನರೇ ಹೆಚ್ಚು. ಆದ್ರೆ ಇಂಥ ಮಾತನ್ನ ಸುಳ್ಳು ಮಾಡಿರೋ ಹಲವು ಶಾಲೆಗಳು, ಶಿಕ್ಷಕರ ಬಗ್ಗೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ತೋರಿಸಿದ್ದೀವಿ. ಇವತ್ತು ಅಂಥದ್ದೇ ಸ್ಟೋರಿ. ಮಕ್ಕಳನ್ನ ಸೆಳೆಯೋಕೆ, ಅವರಲ್ಲಿ ಹೆಚ್ಚಿನ ಜ್ಞಾನ ತುಂಬೋಕೆ ಹಾವೇರಿಯ ರಾಣೇಬೆನ್ನೂರಿನ ಅರೇಮಲ್ಲಾಪುರ ಗ್ರಾಮದ ಶಿಕ್ಷಕ ಕಾರ್ಯ ಶ್ಲಾಘನೀಯ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ರೀತಿ ನಿರ್ಮಾಣಗೊಂಡಿರುವ ಸುಂದರ ಕಲಾಕೃತಿಗಳು ಮತ್ತು ಅದನ್ನ ತೋರಿಸಿ ಪಾಠ ಮಾಡುತ್ತಿರುವ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ
1904ರಲ್ಲಿ ಪ್ರಾರಂಭವಾದ ಶಾಲೆ ಶತಮಾನೋತ್ಸ ಕಂಡಿದೆ. ಆದ್ರೆ ಎಲ್ಲಾ ಶಾಲೆಗಳಂತಿದ್ದ ಈ ಶಾಲೆಗೆ ನಾಲ್ಕು ವರ್ಷದಿಂದ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರ ವಿಶೇಷ ಆಸಕ್ತಿಯಿಂದ ಹೊಸರೂಪ ಬಂದಿದೆ. ಶಾಲೆಯ ಆವರಣದಲ್ಲಿ ಹೋರಾಟಗಾರರು, ದಾರ್ಶನಿಕರು, ಸಾಹಿತಿಗಳು, ಮಹಾನ್ ವ್ಯಕ್ತಿಗಳ ಕಲಾಕೃತಿಯನ್ನ ಸಿಮೆಂಟ್‍ನಲ್ಲಿ ನಿರ್ಮಿಸಿದ್ದಾರೆ.
ಅರೇಮಲ್ಲಾಪುರ ಶಾಲೆಯಲ್ಲಿ ಮೊದಲಿಗೆ ಮಕ್ಕಳ ಕೊರತೆ ಇತ್ತು. ಆದ್ರೆ ಶಾಲೆಗೆ ಹೊಸ ಮೆರುಗು ನೀಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರೋದ್ರಿಂದ ಈಗ 400ಕ್ಕೆ ಏರಿದೆ. ಶಿಕ್ಷಕ ಕೃಷ್ಣಪ್ಪ ಕಾರ್ಯದ ಬಗ್ಗೆ ಗ್ರಾಮಸ್ಥರು ಕೊಂಡಾಡುತ್ತಾರೆ.
ಇದಕ್ಕಾಗಿ ಶಿಕ್ಷಕ ಕೃಷ್ಣಪ್ಪ ಮೊದಲಿಗೆ ತಾವೇ ಖರ್ಚು ಮಾಡಿದ್ದು, ನಂತರ ಗ್ರಾಮದ ದಾನಿಗಳಿಂದ ನೆರವು ಸಿಕ್ಕಿದೆ. ಕೃಷ್ಣಪ್ಪ ಅವರ ಕಾರ್ಯಕ್ಕೆ ಶಾಲೆಯ ಶಿಕ್ಷಕ ವೃಂದ ಕೂಡ ಸಾಥ್ ನೀಡಿದೆ.
ಭೋಪಾಲ್: ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ಬಳಕೆಯಾಗದ ಶೌಚಾಲಯದಲ್ಲಿ ಕುಳಿತು ಪಾಠ ಓದಿದ್ದಾರೆ. ಶಾಲೆಯಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲದ ಕಾರಣ ಮಕ್ಕಳನನ್ನ ಶೌಚಾಲಯದಲ್ಲಿ ಕೂರಿಸಲಾಗಿದೆ.
ಇಲ್ಲಿನ ನೀಮುಚ್ ಜಿಲ್ಲೆಯಿಂದ 35 ಕಿ.ಮೀ ದೂರದಲ್ಲಿರುವ ಈ ಶಾಲೆಯನ್ನ 2012ರಲ್ಲಿ ತೆರೆಯಲಾಗಿತ್ತು. ಈ ಶಾಲೆಯನ್ನ ಸಂಪೂರ್ಣವಾಗಿ ಶಿಕ್ಷಕರೇ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. 2013ರವರೆಗೆ ಶಾಲೆಯನ್ನ ಬಾಡಿಗೆ ಜಾಗದಲ್ಲಿ ನಡೆಸಲಾಗುತ್ತಿತ್ತು. ಈಗ ಆ ಜಾಗ ಬಾಡಿಗೆಗೆ ಲಭ್ಯವಿಲ್ಲ.
ಶಾಲೆಗಾಗಿ ಕಟ್ಟಡ ಇಲ್ಲದ ಕಾರಣ ಶೌಚಾಲಯದಲ್ಲೇ ಪಾಠ ಮಾಡಬೇಕಾಯ್ತು ಎಂದು ಶಿಕ್ಷಕರಾದ ಕೈಲಾಶ್ ಚಂದ್ರ ಹೇಳಿದ್ದಾರೆ. ಇದೇ ಶೌಚಾಲಯವನ್ನ ಮಳೆ ಬಂದಾಗ ಮೇಕೆಗಳನ್ನ ಕಟ್ಟಿ ಹಾಕಲು ಬಳಸಲಾಗ್ತಿತ್ತು ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಜಯ್ ಶಾ, ರಾಜ್ಯದಲ್ಲಿ 1.25 ಲಕ್ಷ ಶಾಲೆಗಳಿವೆ. ಆದ್ರೆ ಸಂಪನ್ಮೂಲದ ಕೊರತೆಯಿಂದಾಗಿ ಇತರೆ ಶಾಲಾ ಕಟ್ಟಡಗಳನ್ನ ಕಟ್ಟಲು ಸಾಧ್ಯವಾಗದೆ ತರಗತಿ ನಡೆಸಲು ಬಾಡಿಗೆ ಸ್ಥಳ ನೀಡಲಾಗಿದೆ. ಈ ಪ್ರಕರಣಕ್ಕೆ ಬಂದ್ರೆ ಕಟ್ಟಡವನ್ನ ಇನ್ನೂ ಕಟ್ಟಿಲ್ಲ. ಈ ಬಗ್ಗೆ ಇಲಾಖೆಯೊಂದಿಗೆ ಹಾಗೂ ಡಿಸಿ ಜೊತೆಗೆ ಮಾತಾಡಿದ್ದೇವೆ. ಕಟ್ಟಡ ಕಟ್ಟಲು ಸಾಧ್ಯವಾಗದಿದ್ರೂ ಬಾಡಿಗೆ ಸ್ಥಳ ಹೊಂದಲು ಕಷ್ಟವಾಗದಂತೆ ನೋಡಿಕೊಳ್ತೀವಿ ಎಂದು ಹೇಳಿದ್ದಾರೆ.
ಆದರೂ ಶೌಚಾಲಯದಲ್ಲಿ ತರಗತಿ ತೆಗೆದುಕೊಳ್ಳುವಂತೆ ಆಗಬಾರದಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇವೆ. ಎಲ್ಲೆಲ್ಲಿ ಶಾಲಾ ಕಟ್ಟಡಗಳ ಸಮಸ್ಯೆ ಇದೆಯೋ ಆ ಬಗ್ಗೆ ವರದಿ ಕೇಳಿದ್ದೇವೆ. ಕಟ್ಟಡ ಸಿಗುವವರೆಗೆ ಬಾಡಿಗೆ ಜಾಗದಲ್ಲಿ ಶಾಲೆ ನಡೆಸಬಹುದು. ಅದರ ಖರ್ಚನ್ನ ರಾಜ್ಯ ಸರ್ಕಾರ ಭರಿಸಲಿದೆ ಎಂದು ಅವರು ಹೇಳಿದ್ದಾರೆ.
ಎಲ್ಲೆಲ್ಲಿ ಶಾಲಾ ಕಟ್ಟಡದ ಸಮಸ್ಯೆ ಇದೆಯೋ ಅದಕ್ಕಾಗಿ ಸರ್ಕಾರ ವ್ಯವಸ್ಥೆ ಮಾಡಲಿದೆ. ಆದರೂ ಪರಿಸ್ಥಿತಿ ಇಷ್ಟು ಕೆಟ್ಟದಾಗಿದ್ದಾಗ ಶಿಕ್ಷಕರು ಶಾಲೆಗೆ ರಜೆ ಕೊಡಬಹುದಾಗಿತ್ತು ಎಂದಿದ್ದಾರೆ.
ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕರ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದ. ಆದ್ರೆ ಆತ ಮಾಡಿದ ಈ ಕೆಲಸಕ್ಕೆ ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಲ್ಲಿನ ಮಹಬೂಬ್‍ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ. ಬಾಲಕ ತನ್ನ ತರಗತಿಯಲ್ಲಿ ನಿದ್ರಿಸುತ್ತಿದ್ದ ಗಣಿತ ಶಿಕ್ಷಕರ ಫೋಟೋ ಕ್ಲಿಕ್ಕಿಸಿ ಅದನ್ನ ವಾಟ್ಸಪ್‍ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳಿಸಿದ್ದ ಎನ್ನಲಾಗಿದೆ. ಬಳಿಕ ಆ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕೆರಳಿದ ಶಾಲೆಯ ಇತರೆ ಶಿಕ್ಷಕರು ಶನಿವಾರದಂದು ಪೊಲೀಸರನ್ನ ಸಂಪರ್ಕಿಸಿದ್ದರು.
ನಾನು ಸ್ನೇಹಿತರ ಜೊತೆ ಕುಳಿತು ತಂಪು ಪಾನೀಯ ಕುಡಿಯುತ್ತಿದ್ದೆ. ಆಗ ನನ್ನನ್ನು ಹಿಡಿದು ಶಾಲೆಯ ಗ್ರೌಂಡ್‍ನಲ್ಲಿರುವ ಕಂಬಕ್ಕೆ ಕಟ್ಟಿ ಥಳಿಸಿದ್ರು. ಇಬ್ಬರು ಪೊಲೀಸರು ಕೋಲಿನಿಂದ ಹೊಡೆಯುತ್ತಿದ್ರೆ ಶಿಕ್ಷಕರು ನಿಂತು ನೋಡ್ತಿದ್ರು ಎಂದು ಬಾಲಕ ಆರೋಪಿಸಿದ್ದಾನೆ. ಬಾಲಕನ ಮೈಮೇಲೆ ಗಾಯಗಳಾಗಿದ್ದು, ತನ್ನ ಸ್ನೇಹಹಿತರು ಹೇಗೋ ಅಲ್ಲಿಂದ ಓಡಿ ಹೋದ್ರು ಎಂದು ಹೇಳಿದ್ದಾನೆ.
ಆದ್ರೆ ಈ ಆರೋಪವನ್ನ ತಳ್ಳಿಹಾಕಿರೋ ಪೊಲೀಸರು ಆತ ಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದಿದ್ದ ಎಂದಿದ್ದಾರೆ.
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಧರಂ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ಇಂದು ಮಧ್ಯಾಹ್ನದಿಂದ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಶುಕ್ರವಾರ ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ತೀರ್ಮಾನಿಸಿದೆ.
ಶೋಕಾಚರಣೆ ನಡೆಯುವ ಕಾರಣ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಬಾವುಟ ಅರ್ಧಕ್ಕೆ ಹಾರಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರಂ ಸಿಂಗ್ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ, ಜೇವರ್ಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ 1936 ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಹಾಗೂ ಎಲ್‍ಎಲ್‍ಬಿ ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ 60 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಿದ್ದರು.
ಚೆನ್ನೈ: ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಪ್ರಕರಣವೊಂದರ ಇತ್ಯರ್ಥದ ವೇಳೆ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ವೀರಮಣಿ ಎಂಬವರು ರಾಜ್ಯ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ವಂದೇ ಮಾತರಂ ಯಾವ ಭಾಷೆಯಲ್ಲಿದೆ ಎಂಬ ಪ್ರಶ್ನೆಗೆ ಬೆಂಗಾಲಿ ಎಂದು ಉತ್ತರಿಸಿದ್ದರು. ಆದ್ರೆ ಆನ್ಸರ್ ಕೀನಲ್ಲಿ ಸಂಸ್ಕೃತ ಎಂಬ ಉತ್ತರ ನೀಡಲಾಗಿತ್ತು. ಇದನ್ನ ಪ್ರಶ್ನಿಸಿ ವೀರಮಣಿ ಕೋರ್ಟ್ ಮೆಟ್ಟಿಲೇರಿದ್ದರು. ವಂದೇ ಮಾತರಂ ಸಂಸ್ಕೃತದಲ್ಲಿದೆಯೋ ಬೆಂಗಾಲಿ ಭಾಷೆಯಲ್ಲಿದೆಯೋ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕೋರಿದ್ದರು.
ಜೂನ್ 13ರಂದು ಅಡ್ವೋಕೇಟ್ ಜನರಲ್ ಆರ್ ಮುತ್ತುಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿ, ವಂದೇ ಮಾತರಂನ ಮೂಲ ಭಾಷೆ ಸಂಸ್ಕೃತ ಆದ್ರೆ ಬೆಂಗಲಿಯಲ್ಲಿ ಬರೆಯಲಾಗಿದೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವೀರಮಣಿ ಅವರು ಪರೀಕ್ಷೆಯಲ್ಲಿ ಕಳೆದುಕೊಂಡಿದ್ದ 1 ಅಂಕವನ್ನು ನೀಡಬೇಕೆಂದು ಕೋರ್ಟ್ ನಿರ್ಧರಿಸಿದೆ. ಅಲ್ಲದೆ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ (ಪ್ರಮುಖವಾಗಿ ಸೋಮವಾರ ಅಥವಾ ಶುಕ್ರವಾರ) ವಂದೇ ಮಾತರಂ ಕಡ್ಡಾಯವಾಗಿ ಹಾಡಬೇಕು. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಹಾಗೂ ಫ್ಯಾಕ್ಟರಿಗಳಲ್ಲಿ ತಿಂಗಳಿಗೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ಲಭ್ಯವಿರುವಂತೆ ಮಾಡಲು ತಮಿಳು ಹಾಗೂ ಇಂಗ್ಲಿಷ್‍ನಲ್ಲಿ ವಂದೇ ಮಾತರಂನ ಭಾಷಾಂತರಿತ ಆವೃತ್ತಿಯನ್ನು ಅಪ್‍ಲೋಡ್ ಮಾಡಿ ಹಂಚಿಕೊಳ್ಳಬೇಕು ಎಂದು ಸಾರ್ವಜನಿಕ ಮಾಹಿತಿ ನಿರ್ದೇಶಕರಿಗೆ ಸೂಚಿಸಲಾಗಿದೆ.
ಒಂದು ವೇಳೆ ಯಾವುದಾದ್ರೂ ಸಂಸ್ಥೆಗೆ ಅಥವಾ ವ್ಯಕ್ತಿಗೆ ವಂದೇ ಮಾತರಂ ಹಾಡುವುದಕ್ಕೆ ಕಷ್ಟವಾದ್ರೆ ಅವನು/ಅವಳಿಗೆ ಹಾಡಲು ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ. ಇಂದಿನ ಯುವಕರೇ ದೇಶದ ನಾಳಿನ ಭವಿಷ್ಯ. ಈ ಆದೇಶವನ್ನು ಸಕಾರಾತ್ಮವಾಗಿ ಸ್ವೀಕರಿಸಿ ದೇಶದ ಪ್ರಜೆಗಳು ಇದನ್ನು ಪಾಲಿಸುತ್ತಾರೆಂದು ಈ ಕೋರ್ಟ್ ನಂಬಿರುತ್ತದೆ ಎಂದು ಆದೇಶದ ಕೊನೆಯಲ್ಲಿ ತಿಳಿಸಲಾಗಿದೆ.