Tag: school

  • ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಗುರ್ಗಾವ್: 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕೊಲೆ ಮಾಡಿರುವ ಘಟನೆ ದೆಹಲಿ ಸಮೀಪದ ಗುರ್ಗಾವ್ ನಲ್ಲಿರುವ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.

    7 ವರ್ಷದ ಪ್ರದ್ಯುಮನ್ ಕೊಲೆಯಾದ ಬಾಲಕ. ಪ್ರದ್ಯುಮನ್‍ನ ಕತ್ತು ಸೀಳಲಾಗಿದ್ದು, ಮೃತದೇಹದ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಬಾಲಕನ ಸಾವಿನ ಬಗ್ಗೆ ವಿಷಯ ಹರಡುತ್ತಿದ್ದಂತೆ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಶಾಲೆಯ ಬಳಿ ಧಾವಿಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನ ಎಸೆದಾಡಿದ್ದು, ಕಿಟಕಿ ಗಾಜುಗಳನ್ನ ಮುರಿದಿದ್ದಾರೆ. ಕೊನೆಗೆ ಪೊಲೀಸರು ಬಂದು ಪೋಷಕರನ್ನ ಕಟ್ಟಡದಿಂದ ತೆರವುಗೊಳಿಸಿದ್ದಾರೆ.

    ಇಂದು ಬೆಳಿಗ್ಗೆ 8.45ರ ವೇಳೆಗೆ ಶಾಲೆಯ ಅಧಿಕಾರಿಯೊಬ್ಬರು ಟಾಯ್ಲೆಟ್‍ಗೆ ಹೋದಾಗ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ತಂದೆ ವರುಣ್ ಠಾಕೂರ್ ಖಾಸಗಿ ಕಂಪೆನಿಯೊಂದರಲ್ಲಿ ಕ್ವಾಲಿಟಿ ಮ್ಯಾನೇಜರ್ ಆಗಿದ್ದು, ಮಗನನ್ನು ಶಾಲೆಗೆ ಬಿಟ್ಟು ಹೋದ ಸ್ವಲ್ಪ ಸಮಯದಲ್ಲೇ ಈ ಘಟನೆ ನಡೆದಿದೆ.

    ನಾನು ಇಂದು ಬೆಳಿಗ್ಗೆ 7.55ರ ವೇಳೆಗೆ ಆತನನ್ನು ಡ್ರಾಪ್ ಮಾಡಿದೆ. ಅವನು ಖುಷಿಯಾಗಿದೇ ಇದ್ದ. ಬೆಳಿಗ್ಗೆ 9 ಗಂಟೆಗೆ ನನಗೆ ವಿಷಯ ತಿಳಿಯಿತು. ಆತನಿಗೆ ತೀವ್ರ ರಕ್ತಸ್ರಾವವಾಗುತ್ತಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೀವಿ ಎಂದು ಶಾಲೆಯವರು ಹೇಳಿದ್ರು. ನನಗೂ ಬರಲು ಹೇಳಿದ್ರು. ಅವರು ನನ್ನ ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಬದುಕುಳಿಯುತ್ತಿದ್ದ ಎಂದು ಠಾಕುರ್ ಹೇಳಿದ್ದಾರೆ.

    ಪೊಲೀಸರು ಶಾಲೆಯ ಸಿಬ್ಬಂದಿ, ಶಿಕ್ಷಕರು ಹಾಗೂ ಪ್ರದ್ಯುಮನ್‍ನ ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಟಾಯ್ಲೆಟ್ ಹೊರಗಡೆ ಕಾರಿಡಾರ್‍ನಲ್ಲಿರುವ ಸಿಸಿಟಿವಿಯಿಂದ ಏನಾದ್ರೂ ಸುಳಿವು ಸಿಗಬಹುದು ಎಂದು ಪೊಲೀಸರು ಭರವಸೆ ಹೊಂದಿದ್ದಾರೆ.

    ಎಲ್ಲಾ ರೀತಿಯಲ್ಲೂ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ. ಶಾಲಾ ಆವರಣದಲ್ಲಿರುವ ಮಾರು 30 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪೊಲೀಸ್ ತಂಡ ಪರೀಶೀಲನೆ ಮಾಡುತ್ತಿದೆ ಎಂದು ಗುರಗಾಂವ್ ಪೊಲೀಸ್ ವಕ್ತಾರರಾದ ರವಿಂದರ್ ಕುಮಾರ್ ಹೇಳಿದ್ದಾರೆ.

    ಕಳೆದ ವರ್ಷ ವಸಂತ್‍ಕುಂಜ್‍ನಲ್ಲಿ ಇದೇ ಶಾಲೆಯ ಮತ್ತೊಂದು ಶಾಖೆಯಲ್ಲಿ 1ನೇ ತರಗತಿಯ 6 ವರ್ಷದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

  • ಸಿಗೋ ಒಂದಿಷ್ಟು ಸಂಬಳದಲ್ಲೂ ಶಾಲೆಗೆ ಮೀಸಲಿಡುತ್ತಾರೆ ಮಡಿಕೇರಿಯ ಸತೀಶ್ ಮೇಷ್ಟ್ರು

    ಸಿಗೋ ಒಂದಿಷ್ಟು ಸಂಬಳದಲ್ಲೂ ಶಾಲೆಗೆ ಮೀಸಲಿಡುತ್ತಾರೆ ಮಡಿಕೇರಿಯ ಸತೀಶ್ ಮೇಷ್ಟ್ರು

    ಮಡಿಕೇರಿ: ಮೇಷ್ಟ್ರ ಸಂಬಳ ಎಣ್ಣೆಗಾದ್ರೆ ಉಪ್ಪಿಗಾಗಲ್ಲ. ಉಪ್ಪಿಗಾದ್ರೆ ಎಣ್ಣೆಗಾಗಲ್ಲ ಅಂತಾ ಕೆಲವರು ಮಾತಾಡ್ತಾರೆ. ಹಾಗೇ ಬಡ ಮೇಷ್ಟ್ರ ಖರ್ಚು ವೆಚ್ಚದ ಲೆಕ್ಕಾಚಾರ ಹೇಗಿರುತ್ತೆ ಅಂತಾ ನಿಮಗೆಲ್ಲಾ ಗೊತ್ತು. ಆದರೆ ಇದೇ ಸಂಬಳದಲ್ಲಿ ಒಬ್ಬ ಪ್ರೈಮರಿ ಸ್ಕೂಲ್ ಮೇಷ್ಟ್ರು, ಶಾಲಾ ಪ್ರಗತಿಗೆ ಸಂಬಳದ ಒಂದಿಷ್ಟು ದುಡ್ಡನ್ನ ಖರ್ಚು ಮಾಡ್ತಿದ್ದಾರೆ.

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಸಿ.ಎಸ್ ಸತೀಶ್ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಇವರು ಇಡೀ ಶಾಲಾ ಪರಿಸರವನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಿದ್ದಾರೆ. ಪರಿಸರದೊಂದಿಗೆ, ಕಲಿಕೆ, ನಾಟಕ ಪ್ರಯೋಗದೊಂದಿಗೆ ವಿನೂತನ ಶೈಲಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧನೆ ಮಾಡುತ್ತಾರೆ. ಇದಕ್ಕಾಗಿಯೇ ತಮ್ಮ ಸಂಬಳದ ಸ್ಪಲ್ಪ ಭಾಗವನ್ನು ಎತ್ತಿಡುತ್ತಾರೆ. ನಲಿ-ಕಲಿ ಕೊಠಡಿಯಲ್ಲಿ ವಿವಿಧ ಕೀಟಗಳ, ಪಕ್ಷಿಗಳ ಗೂಡುಗಳನ್ನು ಸಂಗ್ರಹಿಸಲಾಗಿದೆ. ಕವಿಗಳ, ರಾಜ ಮಹಾರಾಜ ಚಿತ್ರಪಟಗಳು ಶಾಲೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ನಿತ್ಯವೂ ಒಂದೊಂದು ಸರಳ ಪ್ರಯೋಗ ಮಾಡಲಾಗ್ತಿದೆ.

    ಶಾಲೆಯ ಹೂದೋಟಗಳ ನಡುವೆ ಪುಟ್ಟ ಮೃಗಾಲಯದ ಮಾದರಿ ನಿರ್ಮಿಸಿದ್ದಾರೆ. ತಂತಿ, ಬೆಂಡು, ಕಾಗದದ ರಟ್ಟಿನ ಸಹಾಯದಿಂದ ಪ್ರಾಣಿಗಳ ಪ್ರತಿರೂಪ ರಾರಾಜಿಸುತ್ತಿವೆ. ಇಡೀ ಖಗೋಳವನ್ನೇ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುತ್ತಿದ್ದಾರೆ. ಪೋಷಕರೆಲ್ಲಾ ಖಾಸಗಿ ಶಾಲೆ ಬಿಟ್ಟು, ಈ ಹೈಟೆಕ್ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

    ಒಟ್ಟಿನಲ್ಲಿ ಇತಿಹಾಸ, ಪರಿಸರ ವಿಜ್ಞಾನ, ಖಗೋಳ, ಗಣಿತ, ಇಂಗ್ಲೀಷ್ ಹೀಗೆ ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಮಾದರಿಗಳ ಮೂಲಕ ಕಲಿಸೋ ಶಿಕ್ಷಕರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=wmfs_9xsXUE

  • ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಹಾವೇರಿ: ಇಂದು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ 129ನೇ ಜನ್ಮದಿನ. ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗ್ತಿದೆ. ಆದ್ರೆ ಹಾವೇರಿಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ವಿಶೇಷ ಅಂದ್ರೆ ಎಲ್ಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಜೊತೆಗೆ ಸ್ಮಾರ್ಟ್ ಕ್ಲಾಸ್‍ಗಳಾಗಿವೆ. ಕಳೆದ ವರ್ಷ 130 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಇದೀಗ 230ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

    ಕೇವಲ ಒಂದು ವರ್ಷದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶಾಲೆಯ 9 ಜನ ಶಿಕ್ಷಕರ ಆಸಕ್ತಿ ಕಾರಣವಾಗಿದೆ. ಶಾಲೆಯಲ್ಲಿ ಬೋಧನ ಮಟ್ಟ ಸುಧಾರಣೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಉತ್ಸಾಹ ತುಂಬುತ್ತಿದ್ದಾರೆ. ಶನಿವಾರ ಮತ್ತು ಭಾನುವಾರವೂ ಒಬ್ಬೊಬ್ಬ ಶಿಕ್ಷಕರು ಮಕ್ಕಳಿಗೆ ವಿಶೇಷ ಪಾಠ ಪ್ರವಚನ ಮಾಡುತ್ತಾರೆ.

    ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ. ಸಭೆ ಕರೆದು ಶಾಲೆಯ ಕುಂದುಕೊರತೆ ಚರ್ಚಿಸಿ, ಮಕ್ಕಳಿಗೆ ಬೇಕಾದ ಕಂಪ್ಯೂಟರ್, ಆಟದ ವಸ್ತುಗಳು, ಪೀಠೋಪಕರಣಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ಶಿಕ್ಷಕರ ದಿನಾಚರಣೆಯ ಇವತ್ತಿನ ಸುಸಂದರ್ಭದಲ್ಲಿ ಹೊಸಕಟ್ಟಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಕಾರ್ಯ ಶ್ಲಾಘನಾರ್ಹವಾಗಿದೆ.

     

  • ಬಿಸಿ ಹಾಲಿನ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

    ಬಿಸಿ ಹಾಲಿನ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

    ವಿಜಯಪುರ: ಸಿಬ್ಬಂದಿ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಯಲ್ಲಿ ಬಿಸಿ ಹಾಲಿನ ಪಾತ್ರೆಗೆ ವಿದ್ಯಾರ್ಥಿನಿಯೊಬ್ಬಳು ಬಿದ್ದು  ಗಂಭೀರ ಗಾಯಗೊಂಡಿರುವ ಘಟನೆ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.

    ಮುದ್ದರೂ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಈರಣ್ಣ ಪತ್ತಾರ ಗಂಭೀರ ಗಾಯಗೊಂಡ ಬಾಲಕಿ.

    ಇಂದು ಹಾಲು ವಿತರಿಸುತ್ತಿದ್ದ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಆಯತಪ್ಪಿ ಬಿಸಿ ಹಾಲಿನ ಪಾತ್ರೆಯಲ್ಲಿ ಬಿದ್ದಿದ್ದರಿಂದ ದೇಹದ ಬಹುತೇಕ ಭಾಗದಲ್ಲಿ ಶೇ. 80 ರಷ್ಟು ಸುಟ್ಟು ಗಾಯವಾಗಿದೆ. ಗಾಯಾಳು ಬಾಲಕಿಗೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 400 ಮಕ್ಕಳ ಪ್ರಾಣ ರಕ್ಷಿಸಲು 10 ಕೆಜಿ ತೂಕದ ಬಾಂಬ್ ಹಿಡಿದು 1 ಕಿ.ಮೀ ಓಡಿದ ಪೇದೆ!

    400 ಮಕ್ಕಳ ಪ್ರಾಣ ರಕ್ಷಿಸಲು 10 ಕೆಜಿ ತೂಕದ ಬಾಂಬ್ ಹಿಡಿದು 1 ಕಿ.ಮೀ ಓಡಿದ ಪೇದೆ!

    ಭೋಪಾಲ್: 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು ಕಾನ್‍ಸ್ಟೇಬಲ್ ಒಬ್ಬರು 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಅಭಿಷೇಕ್ ಪಟೇಲ್ ಬಾಂಬ್ ಹೊತ್ತುಕೊಂಡು ಓಡಿದ ಪೊಲೀಸ್ ಪೇದೆ. ಶುಕ್ರವಾರ ಚಿತೋರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

    ಆಗಿದ್ದೇನು?
    ಚಿತೋರಾದಲ್ಲಿರುವ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿತ್ತು. ಶಾಲಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದು ಪೊಲೀಸರ ಜೊತೆ ಪಟೇಲ್ ಸ್ಥಳಕ್ಕೆ ಆಗಮಿಸಿದ್ದಾರೆ.

    ಬಾಂಬ್ ನೋಡಿದ ಕೂಡಲೇ ಪೊಲೀಸರು ಶಾಲೆಯನ್ನು ಮುಚ್ಚುವಂತೆ ಹೇಳಿದರು. ಈ ವೇಳೆ ಬಾಂಬ್ ನಿಷ್ಕ್ರಿಯ ದಳ ಸಹ ಸ್ಥಳಕ್ಕೆ ಆಗಮಿಸಿರಲಿಲ್ಲ. ವಿಚಾರ ತಿಳಿದು ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದವು. ಈ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದಂತೆ 40 ವರ್ಷದ ಅಭಿಷೇಕ್ ಪಟೇಲ್ 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬನ್ನು ಹೊತ್ತುಕೊಂಡು ಓಡಲು ಆರಂಭಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಈಗ 12 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಓಡಿದ್ದು ಯಾಕೆ?
    100 ಸಂಖ್ಯೆಗೆ ಕರೆ ಬಂದ ಹಿನ್ನೆಲೆಯಲ್ಲಿ ನಾವು ಶಾಲೆಗೆ ಬಂದೆವು. ಕೆಲ ತಿಂಗಳ ಹಿಂದೆ ನಡೆದ ಪೊಲೀಸ್ ಆಪರೇಷನ್ ತರಬೇತಿ ಸಮಯದಲ್ಲಿ ಬಾಂಬ್ ಸಿಡಿದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶಗಳಿಗೆ ಹಾನಿ ಆಗುತ್ತದೆ ಎಂದು ತಿಳಿಸಿದ್ದರು. ಹೀಗಾಗಿ ಮಕ್ಕಳ ಪ್ರಾಣವನ್ನು ಉಳಿಸಲು ನಾನು ಬಾಂಬ್ ಅನ್ನು ಹಿಡಿದುಕೊಂಡು ಒಂದು ಕಿ.ಮೀ ದೂರದವರೆಗೆ ಓಡಿ ಎಸೆದು ಬಂದೆ ಎಂದು ಅಭಿಷೇಕ್ ಪಟೇಲ್ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಈ ಪ್ರದೇಶದ ಸಮೀಪವೇ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಈ ಸ್ಥಳಕ್ಕೆ ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಶಾಲೆ ಇರುವ ಗ್ರಾಮದಲ್ಲೇ ಸೇನೆ ಶೂಟಿಂಗ್ ನಡೆಸುವ ಸ್ಥಳವಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸತೀಶ್ ಸಕ್ಸೇನಾ ತಿಳಿಸಿದ್ದಾರೆ.

     

     

  • ಆಸ್ಪತ್ರೆ ಕಾಮಗಾರಿಗೆ ಪೇಜಾವರ ಶ್ರೀಗಳು ಓದಿದ ಶಾಲೆಯ ಕಟ್ಟಡದಲ್ಲಿ ಬಿರುಕು- ಬಿಆರ್ ಶೆಟ್ಟಿಗೆ ತಲೆಬಾಗ್ತಿದೆಯಾ ಸರ್ಕಾರ?

    ಆಸ್ಪತ್ರೆ ಕಾಮಗಾರಿಗೆ ಪೇಜಾವರ ಶ್ರೀಗಳು ಓದಿದ ಶಾಲೆಯ ಕಟ್ಟಡದಲ್ಲಿ ಬಿರುಕು- ಬಿಆರ್ ಶೆಟ್ಟಿಗೆ ತಲೆಬಾಗ್ತಿದೆಯಾ ಸರ್ಕಾರ?

    ಉಡುಪಿ: ಇದು 131 ವರ್ಷಗಳ ಹಳೆಯ ಐತಿಹಾಸಿಕ ಶಾಲೆ. ಪೇಜಾವರ ಶ್ರೀಗಳಂತಹ ಹಿರಿಯರು ಇಲ್ಲಿ ಕಲಿತಿದ್ದಾರೆ. ಆದ್ರೆ ಖಾಸಗಿ ಆಸ್ಪತ್ರೆಯ ಲಾಬಿಗೆ ಆ ಶಾಲೆಯ ಸ್ಥಳಾಂತರಕ್ಕರ ಹುನ್ನಾರ ನಡೀತಿದೆ. ಶಾಲೆಯನ್ನ ಅಭಿವೃದ್ಧಿಗೊಳಸಬೇಕಾದವ್ರೇ ಈಗ ಶಿಫ್ಟ್ ಮಾಡೋಕೆ ನಿರ್ಧರಿಸಿದ್ದಾರೆ.

    ಹೌದು. ಉಡುಪಿ ನಗರದಲ್ಲಿರೋ ಮಹಾತ್ಮಗಾಂಧಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1885ರಲ್ಲಿ ಸ್ಥಾಪನೆಯಾಗಿದೆ. ಈ ಶಾಲೆಯಲ್ಲಿ ಸದ್ಯ 60ಕ್ಕೂ ಅಧಿಕ ಮಕ್ಕಳು ಕಲೀತಿದ್ದಾರೆ. ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿರೋ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಾಗಿದ್ದಾರೆ.

    ಈ ಶಾಲೆಯ ಹಿಂಭಾಗದಲ್ಲಿ ಉಡುಪಿ ಮೂಲದ ದುಬೈ ಉದ್ಯಮಿ ಬಿಆರ್ ಶೆಟ್ಟಿ ಎರಡು ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಆಸ್ಪತ್ರೆ ಕಾಮಗಾರಿಯಿಂದ ಶಾಲಾ ಕಟ್ಟಡ ಈಗಾಗಲೇ ಬಿರುಕು ಬಿಟ್ಟಿದೆ. ರಸ್ತೆಗೆ ಆಸ್ಪತ್ರೆ ಕಾಣುವುದಕ್ಕೆ ಅಡ್ಡಲಾಗಿರೋ ಈ ಶಾಲೆಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

    ನಗರಸಭೆಯ ಮುಂಭಾಗದಲ್ಲೇ ಇರೋ ಈ ಶಾಲೆಯ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ. ಆದರೆ ಶಾಲೆಯನ್ನು ಇದೇ ಜಾಗದಲ್ಲಿ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆ ಬಗ್ಗೆ ಬಾಲ ನ್ಯಾಯ ಮಂಡಳಿಗೂ ದೂರು ಕೊಟ್ಟಿದ್ದಾರೆ. ಕೊನೆಗೆ ಉದ್ಯಮಿಯ ಆಸೆ ಈಡೇರಿಸಲು ಸರ್ಕಾರ ಶಾಲೆಗೆ ಎಳ್ಳುನೀರು ಬಿಟ್ಟಿದೆ. ಶಿಕ್ಷಣಾಧಿಕಾರಿಯನ್ನ ಕೇಳಿದ್ರೆ, ಇದು ತಾತ್ಕಾಲಿಕ ಸ್ಥಳಾಂತರ, ಮಕ್ಕಳ ಹಿತದೃಷ್ಟಿಯಿಂದ ಮಾಡಿದ್ದೇವೆ ಅಂತ ಹೇಳುತ್ತಿದ್ದಾರೆ.

    ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಿಡಿದು ಉಡುಪಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ ವಿದ್ಯಾರ್ಥಿಗಳು ಸ್ಥಳಾಂತರ ವಿರೋಧಿಸಿ ಪ್ರತಿಭಟಿಸಿದ್ದರು. ನಮ್ಮ ಸಿಎಂ ಸಿದ್ದರಾಮಯ್ಯ ಸರ್ಕಾರಿ ಶಾಲೆ, ಕನ್ನಡ ವ್ಯಾಕರಣ ಅಂತೆಲ್ಲಾ ಮಾತಾಡ್ತಾನೇ ಇರ್ತಾರೆ. ಆದ್ರೆ ಈ ಶಾಲೆಯ ಅಭಿವೃದ್ಧಿಗೆ ಮುಂದಾಗದ ಶಿಕ್ಷಣ ಇಲಾಖೆ, ಈಗ ಸ್ಥಳಾಂತರಕ್ಕೆ ಆಸಕ್ತಿ ವಹಿಸಿದೆ.

  • ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಬೀದರ್: ಒಂದು ಕಡೆ ಶೇ.25 ರಷ್ಟು ಶೌಚಾಲಯ ಕಟ್ಟಿ ಹಾಗೇ ಬಿಟ್ಟಿರುವ ಗುತ್ತಿಗೆದಾರರು. ಮೊತ್ತೊಂದು ಕಡೆ ರಸ್ತೆಯಲ್ಲೆ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಈ ವಿದ್ಯಾರ್ಥಿಗಳದ್ದು.

    ಹೌದು. ಬೀದರ್ ತಾಲೂಕಿನ ಸಿಕಿಂದ್ರಾಪೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಪ್ರತಿನಿತ್ಯ ಅನುಭವಿಸುತ್ತಿರೋ ಸಂಕಟದ ಕಥೆ ಇದು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ.

    ಒಟ್ಟು 270 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ ಶೇ.8ಂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಶೌಚಾಲಯವಿಲ್ಲದ ಮುಜುಗರದಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು 9 ಶಿಕ್ಷಕರ ಪೈಕಿ 7 ಜನ ಶಿಕ್ಷಕಿಯರು ಇದ್ದಾರೆ ಅವರಿಗೂ ಶೌಚಾಲಯದ್ದೇ ಸಮಸ್ಯೆ.

    ನೈಸ್ ರಸ್ತೆಯ ಮೇಲೆ ನೈಸ್ ಆಗಿ ಓಡಾಡಿಕೊಂಡಿರೋ ಕ್ಷೇತ್ರದ ಶಾಸಕರಾದ ಖೇಣಿ ಸಾಹೇಬ್ರಿಗೆ ಮಕ್ಕಳ ಈ ಸಮಸ್ಯೆ ಕಾಣದಿರುವುದು ನಾಚಿಕೆಗೇಡಿನ ಸಂಗತಿ. ಇತ್ತ ಶಿಕ್ಷಣ ಇಲಾಖೆಯು ಕೂಡ ಜಾಣ ಕುರುಡು ತೋರುತ್ತಿದ್ದು ವಿದ್ಯಾರ್ಥಿಗಳ ಸಂಕಟಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದೆ ಕಡಿಮೆ ಎಂಬ ಆರೋಪವಿದೆ. ಆದ್ರೆ ಇಲ್ಲಿ ಮಕ್ಕಳು ಬರುತ್ತಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲ. ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ?

    ಪ್ರತಿದಿನ ವಿದ್ಯಾರ್ಥಿನಿಯರು ಶೌಚಕ್ಕಾಗಿ ಬಯಲಿಗೆ ಹೋಗುತ್ತಿದ್ದು ಮುಜುಗರದಿಂದ ಶಾಲೆ ಬಿಡುವ ಹಂತಕ್ಕೆ ತಲುಪಿದ್ದಾರೆ. ಇನ್ನು ಮುಂದೆಯಾದರೂ ಈ ಬೆಳಕು ಕಾರ್ಯಕ್ರಮದ ಮೂಲಕ ನಮ್ಮ ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿಗಳು.

     

  • ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    ಹುಬ್ಬಳ್ಳಿ: ಪೋಷಕರೇ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡೋ ಮುನ್ನ ಎಚ್ಚರ. ರಾಜ್ಯಕ್ಕೂ ಕಾಲಿಟ್ಟಿದೆ ವಿಶ್ವಾದ್ಯಂತ ಹಲವು ಜೀವಗಳನ್ನ ಬಲಿ ಪಡೆದ ಡೆಡ್ಲಿ ಬ್ಲೂವೇಲ್ ಗೇಮ್.

    ಹೌದು. ಬ್ಲೂವೇಲ್ ಗೇಮ್ ಆಡುತ್ತಾ 11 ವರ್ಷದ ಪೋರಿ ಬೆರಳು ಕುಯ್ದುಕೊಂಡ ಘಟನೆ ಹುಬ್ಬಳ್ಳಿಯ ರಾಜನಗರದಲ್ಲಿ ನಡೆದಿದೆ. ಮನೆಯಲ್ಲಿ ಬೆರಳು ಕುಯ್ದುಕೊಂಡ ವಿದ್ಯಾರ್ಥಿನಿ ಹಾಗೆಯೇ ಶಾಲೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯ ಗೆಳೆಯರು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆ ವಿದ್ಯಾರ್ಥಿನಿಯನ್ನು ಕರೆಸಿ ಕೌನ್ಸಿಲಿಂಗ್ ನಡೆಸಿದಾಗ, ತಾನು ಮನೆಯಲ್ಲಿ ಬ್ಲೂವೇಲ್ ಗೇಮ್ ಆಡುತ್ತಾ ಬೆರಳು ಕುಯ್ದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಈ ಬಗ್ಗೆ ಹೆಚ್ಚು ಮಾತನಾಡದೇ ಆ ಬಾಲಕಿಯನ್ನು ಶಿಕ್ಷಕರು ಕಳಿಸಿಕೊಟ್ಟಿದ್ರು. ಬಳಿಕ ಪೋಷಕರನ್ನು ಕರೆಸಿ ಬ್ಲೂವೇಲ್ ಗೇಮ್ ಅವಾಂತರಗಳ ಬಗ್ಗೆ ಮಾಹಿತಿ ನೀಡಿದ ಶಿಕ್ಷಕರು, ಆ ಡೆಡ್ಲಿ ಗೇಮ್ ಆನ್ ಇನ್‍ಸ್ಟಾಲ್ ಮಾಡಿಸಿದ್ರು. ಗಣೇಶನ ಹಬ್ಬ ಮುಗಿದ ನಂತರ ಪೋಷಕರ ಸಭೆ ಕರೆಯಲು ನಿರ್ಧರಿಸಿರುವ ಶಾಲೆಯ ಪ್ರಾಂಸುಪಾಲರು, ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದಾರೆ.

    ಏನಿದು ಬ್ಲೂವೇಲ್ ಗೇಮ್?: ರಷ್ಯಾ ಮೂಲದ ಈ ಡೆಡ್ಲಿ ಗೇಮ್ ಇತ್ತೀಚಿಗಷ್ಟೇ ದೇಶದಲ್ಲಿ ಸದ್ದು ಮಾಡ್ತಿದೆ. ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಮಕ್ಕಳನ್ನ ಬಲಿ ಪಡೆದಿದೆ. ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್ ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

  • ತನಗಿಂತ ಹೆಚ್ಚು ಅಂಕ ಪಡೆದಳೆಂದು ಕ್ಲಾಸ್‍ಮೇಟ್‍ಗೆ ವಿಷವುಣಿಸಿದ 8ನೇ ಕ್ಲಾಸ್ ಹುಡುಗಿ!

    ತನಗಿಂತ ಹೆಚ್ಚು ಅಂಕ ಪಡೆದಳೆಂದು ಕ್ಲಾಸ್‍ಮೇಟ್‍ಗೆ ವಿಷವುಣಿಸಿದ 8ನೇ ಕ್ಲಾಸ್ ಹುಡುಗಿ!

    ನವದೆಹಲಿ: ಪರೀಕ್ಷೆಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದಳು ಎಂಬ ಕಾರಣಕ್ಕೆ 8ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬಳು ತನ್ನ ಕ್ಲಾಸ್‍ಮೇಟ್‍ನ ನೀರಿನ ಬಾಟಲಿಯಲ್ಲಿ ಸೊಳ್ಳೆ ಔಷಧಿ ಬೆರೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಘಟನೆಯ ನಂತರ ಪೊಲೀಸರ ಭಯದಿಂದ ಆರೋಪಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಸದ್ಯ ಆಕೆಯ ಪರಿಸ್ಥಿತಿ ಗಂಭಿರವಾಗಿದೆ ಎಂದು ಪೊಲೀಸ್ ಅಧಿಕರಿಗಳು ಹೇಳಿದ್ದಾರೆ.

    ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಸೋಮವಾರದಂದು ತನ್ನ ಕ್ಲಾಸ್‍ಮೇಟ್‍ನ ನೀರಿನ ಬಾಟಲಿಯಲ್ಲಿ ಸೊಳ್ಳೆ ಔಷಧಿ ಬೆರೆಸಿದ್ದಾಳೆ. ನಂತರ ಬಾಲಕಿ ಆ ಬಾಟಲಿಯಿಂದ ನೀರು ಕುಡಿದಿದ್ದು ವಾಂತಿಯಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.

    13-14 ವರ್ಷ ವಯಸ್ಸಿನ ಈ ಇಬ್ಬರು ಹುಡುಗಿಯರು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಸಂತ್ರಸ್ತ ಬಾಲಕಿ ತನ್ನ ಬಾಟಲಿಯಿಂದ ನೀರು ಕುಡಿದ ನಂತರ ಏನೋ ಸೊಳ್ಳೆ ಔಷಧಿ ವಾಸನೆ ಬರುತ್ತಿದೆ ಎಂದು ತನ್ನ ಗೆಳತಿಗೆ ಹೇಳಿದ್ದಳು. ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಶಾಲೆಯವರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

    ಬಳಿಕ ಶಾಲಾ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಲಾಗಿದ್ದು, ಆರೋಪಿ ವಿದ್ಯಾರ್ಥಿನಿ ತನ್ನ ಕ್ಲಾಸ್‍ಮೇಟ್‍ನ ನೀರಿನ ಬಾಟಲಿಗೆ ಸೊಳ್ಳೆ ಔಷಧಿ ಬೆರೆಸಿ ನಂತರ ಅದನ್ನು ಮತ್ತೊಬ್ಬ ವಿದ್ಯಾರ್ಥಿಯ ಬ್ಯಾಗ್‍ನಲ್ಲಿ ಬಚ್ಚಿಟ್ಟಿದ್ದಾಳೆ ಎಂದು ಸಿಂಗ್ ತಿಳಿಸಿದ್ದಾರೆ.

    ಸಂತ್ರಸ್ತ ಬಾಲಕಿ ಈ ಬಗ್ಗೆ ಹೇಳಿಕೆ ನೀಡಿದ್ದು, ಪರೀಕ್ಷೆಯಲ್ಲಿ ನಾನು ಆಕೆಗಿಂತ ಹೆಚ್ಚಿನ ಅಂಕ ಪಡೆದಿದ್ದಕ್ಕೆ ಈ ರೀತಿ ಮಾಡಿರಬಹುದು ಎಂದು ಹೇಳಿದ್ದಾಳೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆಂದು ಹೆದರಿ ಆರೋಪಿ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಸೊಳ್ಳೆ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಸದ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

    ನಾವು ಆಕೆಗೆ ಚಿಕಿತ್ಸೆ ನೀಡುತ್ತಿದ್ದೇವೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಡಾ ಸುಧೀರ್ ಸಿಂಗ್ ಹೇಳಿದ್ದಾರೆ. ಐಪಿಸಿ ಸಸೆಕ್ಷನ್ 328ರ ಅಡಿ ಆರೋಪಿ ವಿದ್ಯಾರ್ಥಿನಿಯ ವಿರುದ್ಧ ಪ್ರಕರಣ ದಾಖಲಾಗಿದೆ.

  • ಶಾಲಾ ಛಾವಣಿಯ ಮರದ ತುಂಡು ಬಿದ್ದು ಇಬ್ಬರ ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಛಾವಣಿಯ ಮರದ ತುಂಡು ಬಿದ್ದು ಇಬ್ಬರ ವಿದ್ಯಾರ್ಥಿಗಳಿಗೆ ಗಾಯ

    ದಾವಣಗೆರೆ: ಶಾಲಾ ಛಾವಣಿಗೆ ಹಾಕಿದ್ದ ಮರದ ತುಂಡು ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಹರಪನಹಳ್ಳಿ ತಾಲೂಕಿನ ಕಣಿವಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಣಿವಿಹಳ್ಳಿ ಗ್ರಾಮದ ಪೂಜಾರ ಮಂಜುನಾಥ್ ಮತ್ತು ಕೋಟೆಪ್ಪ ಗಾಯಗೊಂಡ ವಿದ್ಯಾರ್ಥಿಗಳು. ಬುಧವಾರ ಸಂಜೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಹಂಚಿನ ಕೊಠಡಿಯ ಛಾವಣಿಗೆ ಹಾಕಿದ್ದ ಮರದ ತುಂಡು ಕೆಳಗೆ ಬಿದ್ದಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾದೆ.

    ಶಾಲಾ ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿದ್ದು, ಮಕ್ಕಳು ಪ್ರಾಣ ಭೀತಿಯಿಂದ ಕಲಿಯುವಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಕೊಠಡಿಗಳು ಇಂತಹ ಪರಿಸ್ಥಿತಿಯಲ್ಲಿವೆ.