Tag: school

  • ಶಿಥಿಲಗೊಂಡಿದೆ ಸರ್ಕಾರಿ ನರ್ಸರಿ ಶಾಲಾ ಕಟ್ಟಡ- ಅಪಾಯದಲ್ಲಿದೆ ಶಾಲಾ ಮಕ್ಕಳ ಜೀವ

    ಶಿಥಿಲಗೊಂಡಿದೆ ಸರ್ಕಾರಿ ನರ್ಸರಿ ಶಾಲಾ ಕಟ್ಟಡ- ಅಪಾಯದಲ್ಲಿದೆ ಶಾಲಾ ಮಕ್ಕಳ ಜೀವ

    ಬೆಂಗಳೂರು: ನಗರದಲ್ಲಿ ಒಂದು ನರ್ಸರಿ ಶಾಲೆಯಿದೆ. ಈ ಶಾಲೆಯಲ್ಲಿ ಒಟ್ಟು 30 ಪುಟ್ಟ ಮಕ್ಕಳು ಇದ್ದಾರೆ. ಆದರೆ ಶಾಲೆಯ ಕಟ್ಟಡ ನೋಡಿದರೆ ಎದೆ ಜಲ್ ಎನ್ನುವುದು ಪಕ್ಕಾ. ಈ ಶಾಲೆಗೆ ಮಕ್ಕಳನ್ನು ಕಳಿಸುತ್ತಿರೋ ಪೋಷಕರ ಧೈರ್ಯವನ್ನು ಮೆಚ್ಚಲೇ ಬೇಕು.

    ಸಿಮೆಂಟ್ ಕಿತ್ತು ಬಂದಿರೋ ಮೇಲ್ಛಾವಣಿ, ಬಿರುಕುಬಿಟ್ಟಿರೋ ಗೋಡೆ. ಮೊದಲ ನೋಟದಲ್ಲಿ ಯಾವುದೋ ಪಾಳು ಬಿದ್ದ ಕಟ್ಟಡದಂತೆ ಕಾಣುವ ಇದು ಸರ್ಕಾರಿ ನರ್ಸರಿ ಶಾಲೆ ಎಂದು ಹೇಳಿದರೆ ನೀವು ನಂಬಲ್ಲೇಬೇಕು. ಬೆಂಗಳೂರಿನ ಎಪಿಎಂಸಿ ಯಾರ್ಡ್ ಪಕ್ಕದಲ್ಲಿರೋ ಅಶೋಕಪುರದ ಸರ್ಕಾರಿ ನರ್ಸರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ 4 ವರ್ಷಗಳೇ ಕಳೆದಿವೆ.

    30 ಮಕ್ಕಳಿರುವ ಈ ಶಾಲೆಗೆ ಬೆರಳೆಣಿಕೆಯ ಮಕ್ಕಳು ಮಾತ್ರ ಬರುತ್ತಾರೆ. ಏಕೆಂದರೆ ಕಟ್ಟಡ ಕುಸಿದು ಮಕ್ಕಳ ಜೀವ ಹೋಗುತ್ತೋ ಎನ್ನುವ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಕೆಲ ಪೋಷಕರು ಮಕ್ಕಳ ಜೊತೆ ಶಾಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸಂಬಂಧಪಟ್ಟವರು ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವುದು ಪೋಷಕರ ಆರೋಪ.

    ಶಾಲಾ ಕಟ್ಟಡದ ದುಸ್ಥಿತಿ ಬಗ್ಗೆ ಹೇಳಿದರೆ ಶಾಸಕ ಗೋಪಾಲಯ್ಯ ಮತ್ತು ಕಾರ್ಪೋರೇಟರ್ ಮಹಾದೇವು ಮಕ್ಕಳಿಗೆ ರಜೆ ಕೊಟ್ಟು ಕಳಿಸಿ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದಾರಂತೆ. ನಾವು ಬೇರೆ ಕಡೆ ಶಾಲೆ ಮಾಡೋಕೆ ಹೇಳಿದ್ದೇವೆ. ಆದರೆ ಇವರು ಇಲ್ಲೇ ಮಾಡಿದರೆ ಏನ್ ಮಾಡೋದು ಎಂದು ಸ್ಥಳೀಯ ನಾಯಕರೊಬ್ಬರು ತಮ್ಮ ತಪ್ಪನ್ನು ಮುಚ್ಚಿಕೊಂಡರು.

    ಮೊದಲೇ ಜನರು ಸರ್ಕಾರಿ ಶಾಲೆಗಳು ಎಂದು ಮಾರುದ್ದ ದೂರ ನಿಲುತ್ತಾರೆ. ಈ ಬಡ ಪುಟ್ಟ ಮಕ್ಕಳ ಜೀವಕ್ಕೇನಾದರು ಆದರೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಲೇಬೇಕು.

  • ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

    ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

    ಕೊಪ್ಪಳ: ಮೊಬೈಲ್, ಕಂಪ್ಯೂಟರ್ ಬಂದ ಮೇಲೆ ಮಕ್ಕಳ ಸಾಹಿತ್ಯ ನಶಿಸಿ ಹೋಗ್ತಿದೆ. ಆದ್ರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಗ್ರಾಮದ ಶಿಕ್ಷಕರು, ಜನಪ್ರಿಯ ಗೀತೆಗೆ ಸಾಹಿತ್ಯ ಬರೆದಿರೋ ಹಾಡು ಈಗ ಎಲ್ಲಾ ಕಡೆ ಕೇಳಿ ಬರ್ತಿದೆ.

    ಹೌದು. ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಅನ್ನೋ ಹಾಡಿಗೆ “ಬಾರೋ ಬೇಗ ನೀನು.. ಶಾಲೆ ಸೇರು ನೀನು.. ನನ್ನ ರಾಜಕುಮಾರ” ಅಂತ ಹೊಸದಾಗಿ ಸಾಹಿತ್ಯ ಬರೆದು ಮಕ್ಕಳನ್ನ ಶಾಲೆಗೆ ಬರುವಂತೆ ಮಾಡಿದ್ದಾರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಶಾಲೆಯ ಶಿಕ್ಷಕ ಸುರೇಶ್ ಕಂಬಳಿ. ಈ ಹಾಡಿಗೆ ದನಿಕೊಟ್ಟವರು ಪಕ್ಕದ ಬರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರೇವಣ್ಣ ಕೋಳೂರು. ಇನ್ನು ಮೇಷ್ಟ್ರ ಈ ಸಾಹಿತ್ಯ-ಗಾಯನಕ್ಕೆ ಮನಸೋತಿರುವ ನಟ ಪುನೀತ್ ಅವರೇ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಇದನ್ನ ಶೇರ್ ಮಾಡಿದ್ದಾರೆ.

    ಈ ಹಾಡನ್ನ ಪ್ರತಿದಿನ ಪ್ರಾರ್ಥನೆಯ ಹಾಡಿನಂತೆ ಹಾಡಿಸಲಾಗುತ್ತಿದೆ. ಮಕ್ಕಳೂ ಸಹ ಖುಷಿಯಿಂದ ಹಾಡುತ್ತಿದ್ದಾರೆ. ಈ ಹಾಡಿನ ಜೊತೆಗೆ ಇತರೆ ಹಳೇ ಹಾಡಿಗೆ ಹೊಸ ಸಾಹಿತ್ಯ ಬರೆದು ಹತ್ತು ಹಾಡುಗಳನ್ನ ಒಳಗೊಂಡ ಸಿಡಿಯೊಂದನ್ನು ಹೊರತಂದಿದ್ದಾರೆ.

    ಒಟ್ಟಿನಲ್ಲಿ ಮಕ್ಕಳನ್ನ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರ ಈ ಪ್ರಯತ್ನ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

  • ತರಗತಿಯಲ್ಲೇ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಶಿಕ್ಷಕಿಯಿಂದ ಹಣಕ್ಕಾಗಿ ಹುಡುಕಾಟ!

    ತರಗತಿಯಲ್ಲೇ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಶಿಕ್ಷಕಿಯಿಂದ ಹಣಕ್ಕಾಗಿ ಹುಡುಕಾಟ!

    ಭೋಪಾಲ್: ಹತ್ತನೆ ತರಗತಿಯ ವಿದ್ಯಾರ್ಥಿಯೊಬ್ಬಳು ತರಗತಿಯಲ್ಲಿ ಕಳೆದುಕೊಂಡಿದ್ದ 70 ರೂ ಹಣವನ್ನು ಪರಿಶೀಲಿಸಲು ಶಾಲೆಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಘಟನೆ ಮಧ್ಯ ಪ್ರದೇಶದ ದಮೋಹ ಶಾಲೆಯಲ್ಲಿ ನಡೆದಿದೆ.

    ತರಗತಿಯ ವಿದ್ಯಾರ್ಥಿನಿಯೊಬ್ಬಳು 70 ರೂ. ಕಳೆದು ಕೊಂಡಿರುವ ಕುರಿತು ಶಿಕ್ಷಕಿಗೆ ದೂರು ನೀಡಿದ್ದು, ಇದರಿಂದ ಕೋಪಗೊಂಡ ಶಿಕ್ಷಕಿ ದೂರು ನೀಡಿದ ವಿದ್ಯಾರ್ಥಿ ಪಕ್ಕ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿನಿಯ ಬಳಿ ಹಣ ಇದೆ ಎಂದು ತಿಳಿದು ಆಕೆಯನ್ನು ತರಗತಿಯಲ್ಲೇ ವಿವಸ್ತ್ರಗೊಳಿಸಿದ್ದಾರೆ.

    ಶಾಲೆಯ ಅವಧಿ ಮುಕ್ತಾಯದ ನಂತರ ವಿದ್ಯಾರ್ಥಿನಿ ಶಿಕ್ಷಕಿ ಮಾಡಿದ ಕೃತ್ಯದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕಿಯ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಜಿಲ್ಲಾ ಶಿಕ್ಷಣ ಅಧಿಕಾರಿ ಪಿ.ಪಿ ಸಿಂಗ್, ಘಟನೆ ಶುಕ್ರವಾರ ನಡೆದಿರುವ ಕುರಿತು ಮಾಹಿತಿ ಲಭಿಸಿದ್ದು, ಈ ಕುರಿತು ಶಿಕ್ಷಕಿ ಜ್ಯೋತಿ ಗುಪ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಘಟನೆ ಕುರಿತು ತನಿಕೆ ಕೈಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಘಟನೆ ಕುರಿತು ಸ್ಪಷ್ಟನೆಯನ್ನು ನೀಡಿರುವ ಶಿಕ್ಷಕಿ ಜ್ಯೋತಿ ಗುಪ್ತಾ, ನಾನು 17 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬಳಿ ಪರಿಶೀಲನೆ ನಡೆಸಿದ್ದು ನಿಜ, ಆದರೆ ಈ ಸಂದರ್ಭದಲ್ಲಿ ತರಗತಿಯಲ್ಲಿ ಇತರೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ಹೇಳಿದ್ದಾರೆ.

     

  • ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು

    ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು

    ಪುಣೆ: ಶಾಲೆಯಲ್ಲಿ ಆಧಾರ್ ಕಾರ್ಡ್ ಮಾಹಿತಿ ನೀಡದ್ದಕ್ಕೆ 10 ವರ್ಷದ ಬಾಲಕನನ್ನು ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಪುಣೆಯಲ್ಲಿ ನಡೆದಿದೆ. ಥಳಿತದ ಪರಿಣಾಮ ಬಾಲಕನಿಗೆ ಮೊಣಕಾಲಿನಲ್ಲಿ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

    ಇಲ್ಲಿನ ಚಿಂಚವಾಡ ಪ್ರದೇಶದ ಮೋರ್ಯ ಶಿಕ್ಷಣ್ ಸಂಸ್ಥಾದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದು ವಾರಗಳೇ ಕಳೆದಿದ್ದು, ಬಾಲಕನ ಪೋಷಕರು ಚಿಂಚವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬೆಳಕಿಗೆ ಬಂದಿದೆ. ಪೊಲೀಸರು ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಶಿಕ್ಷಕರು ನಮ್ಮ ಮಗನಿಗೆ ಆಧಾರ್ ಕಾರ್ಡ್ ಮಾಹಿತಿ ಕೇಳಿದ್ದು ಯಾಕೆ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿದ್ದಾರೆ.

    ನನಗೆ ಗೊತ್ತಿರೋ ಪ್ರಕಾರ, ಪೋಷಕರಿಗೆ ಸಕ್ರ್ಯೂಲರ್ ಮತ್ತು ಇತರೆ ಮಾಹಿತಿಯನ್ನ ಕಳಿಸಲು ಶಾಲೆ ಮೊಬೈಲ್ ಆ್ಯಪ್‍ವೊಂದನ್ನು ತಯಾರಿಸಲು ಯೋಚಿಸುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮಾಹಿತಿ ಕೇಳಿರಬಹುದು. ಆದ್ರೆ ಅದ್ಕಕಾಗಿ ನಮ್ಮ ಮಗನಿಗೆ ಈ ರೀತಿ ಥಳಿಸುವ ಅಗತ್ಯವಿರಲಿಲ್ಲ ಎಂದು ಬಾಲಕನ ತಾಯಿ ಸಂಗೀತಾ ಹೇಳಿದ್ದಾರೆ.

    ಬಾಲಕನನ್ನು ಅಕ್ಟೋಬರ್ 6 ರಿಂದ ಅಕ್ಟೋಬರ್ 15ರವರೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶಿಕ್ಷಕರಿಂದ ಥಳಿತಕ್ಕೊಳಗಾದ ನಂತರ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಘಟನೆಯ ಬಗ್ಗೆ ನಮಗೆ ಹೇಳಲು ಆತ ಭಯಗೊಂಡಿದ್ದ. ನಡೆದಾಡಲು ಕಷ್ಟಪಡುತ್ತಿದ್ದ. ಆಗ ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋದೆವು. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನಂತರವಷ್ಟೇ ನಡೆದ ಘಟನೆಯನ್ನು ವಿವರಿಸಿದ. ನಮಗೆ ಇದರಿಂದ ಶಾಕ್ ಆಯ್ತು ಎಂದು ಅವರು ಹೇಳಿದ್ದಾರೆ.

    ಬಾಲಕನನ್ನು ಡಿಸ್ಚಾರ್ಜ್ ಮಾಡಿಸಿದ ನಂತರ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಶಿಕ್ಷಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ 

  • ಶಾಲೆಯಲ್ಲಿ ಆಟವಾಡಲು ಬಾರದಕ್ಕೆ ಜಗಳ: ವಿದ್ಯಾರ್ಥಿ ಸಾವು

    ಶಾಲೆಯಲ್ಲಿ ಆಟವಾಡಲು ಬಾರದಕ್ಕೆ ಜಗಳ: ವಿದ್ಯಾರ್ಥಿ ಸಾವು

    ನವದೆಹಲಿ: ಶಾಲೆಯಲ್ಲಿ ಆಟವಾಡಲು ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯ ಕರವಾಲ್ ನಗರದಲ್ಲಿ ನಡೆದಿದೆ.

    7ನೇ ತರಗತಿಯ ಪ್ರಿನ್ಸ್ ಜಗಳದಲ್ಲಿ ಮೃತಪಟ್ಟ ದುರ್ದೈವಿ. ಸ್ನೇಹಿತರ ನಡುವಿನ ಜಗಳದ ಸಂದರ್ಭದಲ್ಲಿ ಪ್ರಿನ್ಸ್ ನನ್ನು ಬಲವಾಗಿ ತಳ್ಳಿದ ಕಾರಣದಿಂದ ಆತನ ತಲೆ ಗೋಡೆ ತಗುಲಿ ಸ್ಥಳದಲ್ಲೇ ಮೂರ್ಛೆ ಬಂದು ಬಿದ್ದಿದ್ದಾನೆ.

    ತಕ್ಷಣ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಸ್ಥಳೀಯ ಖಾಸಗಿ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತ ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲಾ ಅವಧಿ ಮುಕ್ತಾಯವಾದ ನಂತರ ಪ್ರಿನ್ಸ್ ನನ್ನು ಇತರೆ ವಿದ್ಯಾರ್ಥಿಗಳು ಆಟವಾಡಲು ಕರೆದಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಯ ನಡುವೆ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಪ್ರಿನ್ಸ್‍ನನ್ನು ಜೋರಾಗಿ ತಳ್ಳಿದ ಪರಿಣಾಮ ಸಾವು ಸಂಭವಿಸಿದೆ. ವಿದ್ಯಾರ್ಥಿಯ ದೇಹದ ಮೇಲೆ ಬೇರೆಯಾವ ರೀತಿಯ ಗಾಯದ ಗುರುತುಗಳು ಕಾಣಿಸಿಲ್ಲ. ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎಲ್ಲವೂ ತಿಳಿಯಲಿದೆ ಎಂದು ದೆಹಲಿಯ ಈಶಾನ್ಯ ಪೊಲೀಸ್ ಆಯುಕ್ತ ಎ.ಕೆ ಸಿಂಗ್ಲಾ ತಿಳಿಸಿದ್ದಾರೆ.

    ಘಟನೆಯ ಕುರಿತು ಶಾಲೆಯ ಆಡಳಿತ ಮಂಡಳಿ ತಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ವಿದ್ಯಾರ್ಥಿ ಸ್ನೇಹಿತರು ಪೋಷಕರಿಗೆ ಮಾಹಿತಿಯನ್ನು ನೀಡಿದ್ದು. ಅವರು ಆಸ್ಪತ್ರೆಗೆ ಬರುವ ವೇಳೆಗೆ ಪ್ರಿನ್ಸ್ ಸಾವನ್ನಪಿದ್ದ ಎಂದು ಪ್ರಿನ್ಸ್ ಸಹೋದರಿ ಕಾಂಚನ್ ತಿಳಿಸಿದ್ದಾರೆ.

    ಪ್ರಿನ್ಸ್ ನ ಪೋಷಕರು ನಾಲ್ಕು ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 2 ತಿಂಗಳ ಹಿಂದೆಯೇ ತಮ್ಮ ಮಗನ ವಿರುದ್ಧ ಆತನ ಸಹಪಾಠಿ ವಿದ್ಯಾರ್ಥಿಗಳು ಜಗಳ ನಡೆಸಿ ಹಲ್ಲೆ ನಡೆಸಿದ್ದರು. ಈ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮಾರವನ್ನು ಆಳವಡಿಸಲಾಗಿಲ್ಲ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಶಿಕ್ಷಕರು ತರಗತಿಯಲ್ಲಿ ಇರಲಿಲ್ಲ ಎಂದು ಕಾಂಚನ ತಿಳಿಸಿದ್ದಾರೆ.

    ಸದ್ಯ ಘಟನೆ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ದೆಹಲಿಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ತಿರುವನಂತಪುರ: ಕೇರಳದ ಖಾಸಗಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    15 ವರ್ಷದ ಗೌರಿ ನೇಹಾ ಕೇರಳದ ಕೊಲ್ಲಂನ ಟ್ರನಿಟಿ ಲೈಸಿಯಂ ಶಾಲೆಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇಂದು ಮೃತಪಟ್ಟಿದ್ದಾಳೆ ಅಂತ ವರದಿಯಾಗಿದೆ.

    ಏನಿದು ಘಟನೆ?: 13 ವರ್ಷದ ಸಹೋದರಿ ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಶಿಕ್ಷಕರೊಬ್ಬರು ಆಕೆಯನ್ನು ಹುಡುಗರ ಮಧ್ಯೆ ಕುಳಿತು ಪಾಠ ಕೇಳುವ ಶಿಕ್ಷೆ ನೀಡಿದ್ದರು. ಈ ರೀತಿ ಶಿಕ್ಷೆ ಕೊಟ್ಟ ವಿಚಾರವನ್ನು ಬಾಲಕಿ ತಾಯಿಗೆ ಹೇಳಿದ್ದಾಳೆ. ತಾಯಿ ಶಾಲೆಗೆ ಬಂದು ಈ ಕುರಿತು ಶಾಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಮಗಳಿಗೆ ಇನ್ನೊಂದು ಬಾರಿ ಈ ರೀತಿ ಶಿಕ್ಷೆ ನೀಡಿದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಈ ಘಟನೆಯ ನಂತರ ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆದು ಆಕೆ ಈ ವಿಚಾರವನ್ನು ಸಹೋದರಿಗೆ ತಿಳಿಸಿದ್ದಾಳೆ. ಇದಾದ ಬಳಿಕ ಬ್ರೇಕ್ ನಡುವೆ ಅಕ್ಕ ಈಗ ತಂಗಿ ಎಲ್ಲಿ ಕುಳಿತಿದ್ದಾಳೆ ಎನ್ನುವುದನ್ನು ಪರಿಶೀಲಿಸಲು ತರಗತಿಗೆ ಬರುತ್ತಿದ್ದಳು. ಅಕ್ಕ ತಂಗಿಯನ್ನು ನೋಡಲು ತರಗತಿಗೆ ಬರುವುದನ್ನು ನೋಡಿ ಉಳಿದ ವಿದ್ಯಾರ್ಥಿಗಳು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿನಿ ಶಾಲೆಯ ಮೂರನೇಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಸದ್ಯ ಇತರ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿನಿಯ ಶವವಿಟ್ಟು, ಬಾಲಕಿ ಸಾವಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣವೆಂದು ಪ್ರತಿಭಟನೆ ನಡೆಸಿದರು. ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ಪಡೆಯುವಲ್ಲಿ ವಿಫಲರಾಗಿದ್ದು, ತಂದೆಯ ಹೇಳಿಕೆಯನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ಭಾರವಾದ ಬ್ಯಾಗ್ ಹೊತ್ತು ಶಾಲಾ ಆವರಣದಲ್ಲೇ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು!

    ಭಾರವಾದ ಬ್ಯಾಗ್ ಹೊತ್ತು ಶಾಲಾ ಆವರಣದಲ್ಲೇ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು!

    ವಾರಂಗಲ್: ಒಂಭತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಆವರಣದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಕರಿಮಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ಮೃತ ವಿದ್ಯಾರ್ಥಿನಿಯನ್ನು 14 ವರ್ಷದ ಪಿ. ಶ್ರೀವರ್ಷಿತ ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಶಾಲಾ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿ ಬೆಳಿಗ್ಗೆ 8.45 ಸುಮಾರಿಗೆ ಕೌಟಿಲ್ಯ ಹೈಸ್ಕೂಲ್ ಗೆ ಬಂದಿದ್ದಾಳೆ. ಭಾರವಾದ ಬ್ಯಾಗ್ ಹೊತ್ತ ಆಕೆ ಶಾಲೆಯ ಮೆಟ್ಟಿಲುಗಳನ್ನು ಹತ್ತುತ್ತಾ 3ನೇ ಮಹಡಿವರೆಗೆ ಬಂದು ಕುಸಿದುಬಿದ್ದಾಳೆ. ಕೂಡಲೇ ಅಲ್ಲೇ ಅದ್ದ ಇತರ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಘಟನೆಯಿಂದ ವಿದ್ಯಾರ್ಥಿನಿಯ ಹಣೆಗೆ ತೀವ್ರ ಏಟು ಬಿದ್ದಿದ್ದು, ಮೂಗಿನಲ್ಲಿ ರಕ್ತ ಬರಲಾರಂಭಿಸಿತ್ತು. ಕೂಡಲೇ ಶಾಲಾ ಸಿಬ್ಬಂದಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ನಂತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಅಸ್ವಸ್ಥ ವಿದ್ಯಾರ್ಥಿನಿಯ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರು ವಿದ್ಯಾರ್ಥಿನಿಯನ್ನು ಪರೀಕ್ಷಿಸಿ ಆಕೆಗೆ ಬಿಪಿ ಕಡಿಮೆಯಾಗಿದೆ. ಹೀಗಾಗಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ಆಕೆಯನ್ನು ನಗರದ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯದಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ಶಾಲಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ತಡವಾಗಿ ಕರೆದುಕೊಂಡು ಹೋಗಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅಂತ ಪೋಷಕರು ಆರೋಪ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ಹಾಗೂ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಯನ್ನೂ ಮಾಡಿದ್ದಾರೆ.

    ವಿದ್ಯಾರ್ಥಿನಿ ನಿರ್ಜಲೀಕರಣದಿಂದ ಬಳಲುತ್ತಿದ್ದರಿಂದ ಮೃತಪಟ್ಟಿದ್ದಾಳೆ ಅಂತ ವೈದ್ಯರು ಹೇಳಿದ್ದಾಗಿ ಶಾಲೆಯ ಪ್ರಾಂಶುಪಾಲರಾದ ಕೆ. ಶ್ರೀಧರ್ ಹೇಳಿದ್ದಾರೆ.

  • ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ಹೈದರಾಬಾದ್: ಶಾಲೆಯ ಫೀಸ್ ಕಟ್ಟಲು ಪೋಷಕರು ಲೇಟ್ ಮಾಡಿದ ಕಾರಣ ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗಡೆ ಕೂರಿಸಿರುವ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸಿರಿಲಿಂಗಮ್‍ಪಲ್ಲಿಯ ಎಂಎನ್‍ಆರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಶಿಕ್ಷಕರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯನ್ನು ಶಾಲೆಯ ಕಾರಿಡಾರ್ ನಲ್ಲಿ ಯೇ ಕೂರಿಸಿದ್ದಾರೆ. ಮಕ್ಕಳು 7 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಹೊರಗಡೆ ಕುಳಿತಿದ್ದಾರೆ. ಈ ಮಕ್ಕಳು ಶಾಲೆಯ ಫೀಸ್ ತಡವಾಗಿ ಕಟ್ಟಿದ್ದು, ಇದಕ್ಕೆ ಫೈನ್ ಹಾಕಲಾಗಿತ್ತು. ಆದ್ರೆ ಫೈನ್ ಹಣ ಕಟ್ಟಿಲ್ಲವೆಂದು ಈ ರೀತಿ ಶೀಕ್ಷೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳನ್ನ ಈ ರೀತಿ ತರಗತಿಯಿಂದ ಹೊರಗೆ ಕೂರಿಸಿದ್ದು ಮಾನಸಿಕ ಅವಮಾನ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಮಕ್ಕಳ ಹಕ್ಕುಗಳ ಸಂಘದವರಾದ ಅಚ್ಯುತ್ ರಾವ್ ತಿಳಿಸಿದ್ದಾರೆ.

    ಈ ಕುರಿತು ರಂಗಾರೆಡ್ಡಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಎಂಎನ್‍ಆರ್ ಶಾಲೆ ಮಕ್ಕಳ ಹಕ್ಕುಗಳನ್ನ ಉಲ್ಲಂಘನೆ ಮಾಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಅಚ್ಯುತ್ ರಾವ್ ಹೇಳಿದ್ದಾರೆ.

  • ಮಹಾಮಳೆಯಿಂದಾಗಿ ಶಾಲೆಗೆ ಹೋಗದೇ ಗ್ರಾಮಕ್ಕೆ ವಾಪಸ್ ಆಗ್ತಿದ್ದಾರೆ ಬೀದರ್ ಮಕ್ಕಳು

    ಮಹಾಮಳೆಯಿಂದಾಗಿ ಶಾಲೆಗೆ ಹೋಗದೇ ಗ್ರಾಮಕ್ಕೆ ವಾಪಸ್ ಆಗ್ತಿದ್ದಾರೆ ಬೀದರ್ ಮಕ್ಕಳು

    ಬೀದರ್: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಔರಾದ್ ತಾಲೂಕಿನ ಗ್ರಾಮವೊಂದರ ಏಕೈಕ ರಸ್ತೆ ಕಡಿತಗೊಂಡಿದ್ದರಿಂದ ಶಾಲೆಗೆ ಹೋಗುತ್ತಿದ್ದ ಮಕ್ಕಳು ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮ ನಡುಗಡೆಯಂತ್ತಾಗಿದ್ದು, ಗ್ರಾಮದ ಜನರು ಈ ಮಹಾಮಳೆಗೆ ಹೈರಾಣಾಗಿ ಹೋಗಿದ್ದಾರೆ. ಒಂದು ಕಡೆ ಮಾಂಜ್ರಾ ನದಿ ಮತ್ತೊಂದು ಕಡೆ ಹಳ್ಳ ತುಂಬಿ ಗ್ರಾಮದಿಂದ ಹೊರ ಹೋಗಲು ಸಾಧ್ಯವಾಗದೇ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

    ಸತತ ಮೂರು ಗಂಟೆಗಳಿಂದ ಹೋಬಳಿಗೆ ಹೋಗಲು ಹರಸಾಹಸ ಪಟ್ಟುಕೊಂಡು ಸ್ಥಳದಲ್ಲೇ ಕುಳಿತಿದ್ದಾರೆ. ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿ ಇರೋದ್ರಿಂದ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಣಗಾವಲು ಹಾಕಲಾಗಿದೆ. ಮೂರು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೂ, ಶಾಸಕರಿಗೆ, ಅಧಿಕಾರಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ನಾವು ಪರದಾಟ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಡರಾತ್ರಿ ಸುರಿಯುತ್ತಿರುವ ಮಳೆಗೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜಿಲ್ಲೆಯ ಜನರು ಈ ಮಹಾಮಳೆಗೆ ಹೈರಾಣಾಗಿರವುದಂತು ಸುಳ್ಳಲ್ಲ.

  • ಮಧ್ಯಾಹ್ನ ಊಟ ಮುಗಿಸಿ ಶಾಲೆಗೆ ಹೋಗ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಾವಿಗೆ ತಳ್ಳಿದ

    ಮಧ್ಯಾಹ್ನ ಊಟ ಮುಗಿಸಿ ಶಾಲೆಗೆ ಹೋಗ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಾವಿಗೆ ತಳ್ಳಿದ

    ಹೈದರಾಬಾದ್: 6 ವರ್ಷದ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಆಕೆಯನ್ನು ಬಾವಿಗೆ ತಳ್ಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್‍ನಿಂದ 100 ಕಿ.ಮೀ ದೂರದಲ್ಲಿರುವ ಗ್ರಮಾವೊಂದರಲ್ಲಿ ಈ ಘಟನೆ ನಡೆದಿದೆ. ಕಾಮುಕ ಬಾಲಕಿಯನ್ನು ಬಾವಿಗೆ ತಳ್ಳಿದ್ದು ಆಕೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರದಂದು ಬಾಲಕಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದಳು. ಊಟ ಮುಗಿಸಿ ಶಾಲೆಗೆ ಹಿಂದಿರುಗಿದ್ದಳು. ಆದ್ರೆ ಸಂಜೆಯಾದ್ರೂ ಮನೆಗೆ ಹಿಂದಿರುಗದ ಕಾರಣ ಆಕೆಯ ತಾಯಿ ಮಗಳನ್ನ ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬಾಲಕಿ ಶಾಲೆಗೆ ಹೋಗೋ ಮಾರ್ಗದಲ್ಲಿನ ಜನರನ್ನ ಪೊಲೀಸರು ವಿಚಾರಿಸಿದ್ದರು. ಆಗ ಯಾರೋ ಒಬ್ಬರು ಗ್ರಾಮದ 22 ವರ್ಷದ ಶಿವಕುಮಾರ್ ಜೊತೆ ಬಾಲಕಿ ಇದ್ದಿದ್ದನ್ನು ನೋಡಿದ್ದಾಗಿ ಹೇಳಿದ್ದರು. ಇಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಶಿವಕುಮಾರ್ ಬಾಲಕಿಯ ಸಂಬಂಧಿ ಎಂದು ಹೇಳಲಾಗಿದೆ. ಶಿವಕುಮಾರ್‍ನನ್ನು ಗುರುವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

    ಮೋಗ್ದಾಂಪಲ್ಲಿ ಮಂಡಲ್‍ನ ಮನ್ನಾಪುರ ಗ್ರಾಮದಲ್ಲಿ ಬಾಲಕಿ ಶಾಲೆಗೆ ಹೋಗುವ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಅಂತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹತ್ತಿರದ ಜಮೀನೊಂದಕ್ಕೆ ಕರೆದುಕೊಂಡು ಹೋಗಿ ಎರಡು ಬಾರಿ ಅತ್ಯಾಚಾರವೆಸಗಿದ್ದಾಗಿ ಆರೋಪಿ ಶಿವಕುಮಾರ್ ಪೊಲೀಸರಿಗೆ ಹೇಳಿದ್ದಾನೆಂದು ವರದಿಯಾಗಿದೆ. ಅಲ್ಲದೆ ಬಾಲಕಿಯನ್ನು ಹತ್ತಿರದ ಬಾವಿಯೊಂದಕ್ಕೆ ತಳ್ಳಿದ್ದಾಗಿ ಆರೋಪಿ ಹೇಳಿದ್ದಾನೆ. ಬಾಲಕಿಯ ಶವವನ್ನು ಬಾವಿಯಿಂದ ಹೊರತೆಗೆಯಲಾಗಿದೆ.