Tag: school

  • ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಬಾಗಲಕೋಟೆ: ಸ್ವಾಮೀಜಿಯೊಬ್ಬನ ಅಕ್ರಮ ಚಟುವಟಿಕೆಯ ವಿಚಾರ ತಿಳಿದು ಆತನನ್ನು ಗ್ರಾಮಸ್ಥರೇ ವೇದಿಕೆಯಿಂದ ಹೊರಹಾಕಿದ ಘಟನೆ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ನಡೆದಿದೆ.

    ಸೂಳಿಭಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಗಿತ್ತು. ಶಾಲಾ ಸಿಬ್ಬಂದಿ ಘನಮಠೇಶ್ವರ ಸ್ವಾಮೀಜಿಯ ಹಿಂದಿನ ಅಕ್ರಮ ವಿಚಾರ ತಿಳಿಯದೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸುವಂತೆ ಕೇಳಿಕೊಂಡು ಆಹ್ವಾನ ನೀಡಿದ್ದರು.

    ಆಹ್ವಾನ ನೀಡಿದ ಬಳಿಕ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮೀಣ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಸಮಿತಿ ಅಧ್ಯಕ್ಷರಾಗಿರುವ ಎಸ್.ಜಿ ನಂಜಯ್ಯನಮಠ ಅವರಿಗೆ ಜಿಲ್ಲೆ ಹಿರೆಕೆರೂರು ತಾಲೂಕಿನ ಅಬಲೂರು ಗ್ರಾಮದ ಈ ಸ್ವಾಮೀಜಿ ಒಂದು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದು ಅಲ್ಲದೇ ಇಬ್ಬರನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದಿದೆ.

    ವಿಚಾರ ತಿಳಿದ ಬಳಿಕ ಎಸ್.ಜಿ ನಂಜಯ್ಯನಮಠ ಮುಜುಗರ ತಪ್ಪಿಸಿಕೊಳ್ಳಲು ಸ್ವಾಮೀಜಿಗೆ ಫೋನ್ ಮಾಡಿ ಕಾರ್ಯಕ್ರಮ ರದ್ದಾಗಿದೆ ಬರಬೇಡಿ ಎಂದರೂ, ಕಳ್ಳ ಸ್ವಾಮೀಜಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ. ಬರಬೇಡಿ ಎಂದರೂ ಕಾರ್ಯಕ್ರಮಕ್ಕೆ ಹಾಜರಾಗಿದ್ದನ್ನು ನೋಡಿ ಗ್ರಾಮಸ್ಥರು ಹಾಗೂ ಮಾಜಿ ಶಾಸಕ ನಂಜಯನಮಠ ಈ ಸ್ವಾಮೀಜಿಯನ್ನ ವೇದಿಕೆಯಿಂದ ಹೊರ ನಡೆಯುವಂತೆ ಆಕ್ರೋಶದಿಂದ ಆಗ್ರಹಿಸಿದ್ದಾರೆ.

    ಈ ವೇಳೆ ಘನಮಠೇಶ್ವರ ಸ್ವಾಮೀಜಿ ನಾನು ಹಿಂದೂ ಧರ್ಮದ ರಕ್ಷಕ. ಧರ್ಮದ ಉಳಿವಿಗಾಗಿ ಹೋರಾಡುತ್ತಿದ್ದೇನೆ. ನಾನು ಉಗ್ರಗಾಮಿಯೇ? ನಕ್ಸಲೈಟಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾನು ತಪ್ಪು ಮಾಡಿದರೆ ಇಲ್ಲೇ ಗಲ್ಲಿಗೇರಿಸಬೇಕು ಇಲ್ಲವೇ ಕಾರ್ಯಕ್ರಮ ನಡೆಯಲು ಬಿಡಬಾರದು ಎಂದು ರಾದ್ಧಾಂತ ಮಾಡಿದ್ದಾನೆ.

    ಈತನ ಮಾತುಗಳಿಗೆ ಕೆರಳಿದ ಗ್ರಾಮಸ್ಥರು ಇದು ಮಕ್ಕಳ ಕಾರ್ಯಕ್ರಮ ಇಲ್ಲಿ ನಿನ್ನ ಅಸಂಬದ್ಧ ಮಾತುಗಳಿಗೆ ಆಸ್ಪದವಿಲ್ಲ, ಮೊದಲು ಹೊರಹೋಗಿ ಎಂದು ಹೇಳಿ ಸ್ವಾಮೀಜಿಯನ್ನು ಹೊರದಬ್ಬಿದ್ದಾರೆ.

  • ಊಟ ಎಲ್ಲಿಂದ ಬಂದ್ರೂ ಊಟನೇ ಅಲ್ವಾ: ಸಿಎಂ ಸಮರ್ಥನೆ

    ಊಟ ಎಲ್ಲಿಂದ ಬಂದ್ರೂ ಊಟನೇ ಅಲ್ವಾ: ಸಿಎಂ ಸಮರ್ಥನೆ

    ಉಡುಪಿ: ಕಲ್ಲಡ್ಕ ಶಾಲೆಗಳು ಸರ್ಕಾರಿ ಶಾಲೆಗಳಲ್ಲ, ಅನುದಾನಿತ ಶಾಲೆಗಳು ಅಲ್ಲ. ಇವು ಖಾಸಗಿ ಶಾಲೆಗಳಾಗಿದ್ದು, ಅವುಗಳಿಗೆ ಏಕೆ ಸರ್ಕಾರ ಊಟ ಪೂರೈಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

    ಇಂದು ಉಡುಪಿ ಸಮಾವೇಶದಲ್ಲಿ ಭಾಗವಹಿಸಲು ಬೈಂದೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಊಟ ವ್ಯವಸ್ಥೆ ನಿಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯೆ ನೀಡಿ, ಕಲ್ಲಡ್ಕ ಶಾಲೆಗಳು ಸರ್ಕಾರಿ ಶಾಲೆಗಳಲ್ಲ, ಅನುದಾನಿತ ಶಾಲೆಗಳು ಅಲ್ಲ. ಇವು ಖಾಸಗಿ ಶಾಲೆಗಳಾಗಿದ್ದು, ಅವುಗಳಿಗೆ ಏಕೆ ಸರ್ಕಾರ ಊಟ ಪೂರೈಕೆ ಮಾಡಬೇಕು. ಅದರ ಬದಲು ಬೇರೆ ಶಾಲೆಗೆ ಕೊಡಬಹುದಲ್ಲ ಎಂದು ಪ್ರಶ್ನಿಸಿದರು.

    ಕೊಲ್ಲೂರು ದೇವಸ್ಥಾನದಿಂದ ಸಾಧನಾ ಸಮಾವೇಶಕ್ಕೆ ಊಟ ಪೂರೈಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಊಟ ಎಲ್ಲಿಂದ ಪೂರೈಕೆ ಆಗುತ್ತಿದೆ ಎಂಬುವುದು ಗೊತ್ತಿಲ್ಲ. ಊಟ ಎಲ್ಲಿಂದ ಬಂದರು ಊಟನೇ ಅಲ್ವಾ ಎಂದು ಸಮಜಾಯಿಷಿ ನೀಡಿದರು.

    ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕರಾವಳಿಯ ಸದ್ಯದ ಪರಿಸ್ಥಿತಿ ಗೆ ಕೋಮುವಾದಿಗಳು ಕಾರಣ. ಬಿಜೆಪಿಯವರು ಮನುಷ್ಯರೇ ಅಲ್ಲ. ಬಿಜೆಪಿಯವರು ಹಿಂದೂಗಳೂ ಅಲ್ಲ ಮನುಷ್ಯರೂ ಅಲ್ಲ. ನಾವು ಹಿಂದೂ ವಿರೋಧಿ ಅಂದವರು ಯಾರು? ಹಿಂದುತ್ವ ಆಹಾರದಿಂದ ನಿರ್ಧರಿಸಲು ಆಗಲ್ಲ. ಯುಪಿ ಜಂಗಲ್ ರಾಜ್, ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ. ಆದರೆ ನಾವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇದ್ದೇವೆ. ಬಿಹಾರ-ಯುಪಿ ಕಾನೂನು ಸುವ್ಯವಸ್ಥೆ ಇಲ್ಲದ ರಾಜ್ಯಗಳು. ನಾನು ಕರ್ನಾಟಕದ ಮಣ್ಣಿನ ಮಗ. ನನಗೆ ಬುದ್ಧಿ ಹೇಳಿಕೊಡುವ ಅಗತ್ಯವಿಲ್ಲ. ಯೋಗಿ ಆದಿತ್ಯನಾಥ್ ಗೆ ಇತಿಹಾಸ ಗೊತ್ತಿಲ್ಲ. ಅವರಿಂದ ನಾನು ಹಿಂದುತ್ವ ಕಲಿಯುವ ಅಗತ್ಯವಿಲ್ಲ, ಕೋಮು ದ್ವೇಷದ ವಿಷಬೀಜ ಭಿತ್ತಲು ಯೋಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ

    ಕರಾವಳಿಯಲ್ಲಿನ ಘಟನೆಗಳಿಗೆ ಸಂಘ ಪರಿವಾರದ ಕುಮ್ಮಕ್ಕು ನೀಡುತ್ತಿದೆ. ಆದರೆ ಸರ್ಕಾರ ಯಾವುದೇ ಸಂಘಟನೆ ನಿಷೇಧ ಬಗ್ಗೆ ಚರ್ಚೆ ಆಗಿಲ್ಲ. ಪಿಎಫ್‍ಐ, ಭಜರಂಗದಳ, ಶ್ರೀ ರಾಮಸೇನೆ ಮೆಲೆ ನಿಗಾ ಇಡಲು ಹೇಳಿದ್ದೇನೆ ಎಂದರು.

    ಇನ್ನು ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಮುಂದೆ ಮಾತಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗೆ ಇಲ್ಲ. ಪ್ರಧಾನಿ ಮುಂದೆ ಬಿಎಸ್ ವೈ, ಶೆಟ್ಟರ್, ಡಿವಿಎಸ್ ತುಟಿಪಿಟಿಕ್ ಹೇಳಲ್ಲ. ಜೆಡಿಎಸ್ ನಾಯಕ ರೇವಣ್ಣ ಮಾತೇ ಎತ್ತಿಲ್ಲ. ಸರ್ವಪಕ್ಷ ಸಭೆಯಲ್ಲಿ ಶೆಟ್ಟರ್, ಈಶ್ವರಪ್ಪ ಉಸಿರೆತ್ತಿಲ್ಲ. ರೈತರ ಬಗ್ಗೆ ಬಿಜೆಪಿ- ಜೆಡಿಎಸ್ ಗೆ ಕಾಳಜಿಯಿಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕಿ ರೈತರ ಮೇಲೆ ಗುಂಡು ಹಾರಿಸಿ ಇಬ್ಬರು ರೈತರನ್ನು ಕೊಂದು ಹಾಕಿದರು ಎಂದು ವಿರೋಧಿ ಪಕ್ಷಗಳ ನಾಯಕರ ವಿರುದ್ಧ ಕಿಡಿಕಾರಿದರು.

     

     

  • ಸೈಕಲ್ ನಲ್ಲಿ ಶಾಲೆಗೆ ಹೋಗ್ತಿದ್ದಾಗ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು

    ಸೈಕಲ್ ನಲ್ಲಿ ಶಾಲೆಗೆ ಹೋಗ್ತಿದ್ದಾಗ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು

    ಬಳ್ಳಾರಿ: ಶಾಲೆಗೆ ಹೋಗುತ್ತಿದ್ದ ವೇಳೆ ಬಸ್ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಹೊರವಲಯದ ಗುಗರಹಟ್ಟಿಯಲ್ಲಿ ಇಂದು ಮುಂಜಾನೆ 14 ವರ್ಷದ ಬಾಲಕ ಆಕಾಶ್ ಶಾಲೆಗೆ ಸೈಕಲ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಸೈಕಲ್‍ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕ ಮೃತಪಡುತ್ತಿದ್ದಂತೆ ಬಸ್ ಚಾಲಕ ಬಸ್ ನಿಲ್ಲಿಸಿ ಓಡಿಹೋಗಿದ್ದಾನೆ.

    ಬಾಲಕನ ಪೋಷಕರು ಹಾಗೂ ಸ್ಥಳೀಯರು ರಸ್ತೆ ಮಧ್ಯೆಯೇ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಿಂದ ರಸ್ತೆ ಬಂದ್ ಆದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.

    ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಮುಂಬೈ: ಎರಡು ದಿನದ ರಜಾ ಅರ್ಜಿಯನ್ನು ತರದಕ್ಕೆ 10 ವರ್ಷದ ಬಾಲಕಿಗೆ ಚೆನ್ನಾಗಿ ಥಳಿಸಿದ್ದ ಮುಂಬೈ ಶಾಲೆಯೊಂದರ ತರಗತಿ ಶಿಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ.

    ಈ ಘಟನೆ ನಗರದ ಮುನ್ಸಿಪಲ್ ಕಾರ್ಪೋರೇಷನ್ ನಡೆಸಲ್ಪಡುವ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆಯಿಂದ ಅಮನಾತಾದ ಶಿಕ್ಷಕನನ್ನು ಶ್ರೀಕೃಷ್ಣ ಕೆಂಜಾಲೆ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: 5ನೇ ತರಗತಿಯಲ್ಲಿ ಓದುತ್ತಿದ್ದ ಬಿಹಾದ ಮೂಲದ ವಿದ್ಯಾರ್ಥಿನಿ ಹೊಟ್ಟೆ ನೋವು ಅಂತ ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಆದ್ರೆ ರಜೆ ಕಳೆದು ಶಾಲೆಗೆ ಹೋಗಬೇಕಿದ್ರೆ ಆಕೆ ರಜೆಯ ಅರ್ಜಿಯನ್ನು ತೆದುಕೊಂಡು ಹೋಗಲು ಮರೆತಿದ್ದಳು. ಇದರಿಂದ ಸಿಟ್ಟುಗೊಂಡ ಶಿಕ್ಷಕ ಆಕೆಗೆ ಶಿಕ್ಷೆಯಾಗಿ ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿಯ ಬಲಗೈಯಲ್ಲಿ ಬಾಸುಂಡೆ ಬಂದಿದೆ.

    ಬುಧವಾರ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಕಟ್ಟಡ ಕಾರ್ಮಿಕರಾಗಿದ್ದು ಈ ವಿಚಾರವನ್ನು ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಜಾಧವ್ ಅವರು ಪುಣೆ ನಗರಾಯುಕ್ತರಿಗೆ ವಿಷಯ ತಿಳಿಸುತ್ತಾರೆ. ಜಾಧವ್ ಮಾಹಿತಿಯಂತೆ ಅವರು ಚಿಕಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆಯ ಬಗ್ಗೆ ಬಾಲಕಿ ಅಥವಾ ಆಕೆಯ ತಂದೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿ ನಗರದ ಯಶ್ವಂತ್ ರಾವ್ ಚೌಹಾಣ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಅಷ್ಟಕ್ಕೂ ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು. ಸದ್ಯ ಪ್ರಕರಣ ಸಂಬಂಧ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಅಂತ ಶಿಕ್ಷಣಾಧಿಕಾರಿ ಬಿ ಎಸ್ ಅವಾರಿ ತಿಳಿಸಿದ್ದಾರೆ.

  • ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ತಿರುವನಂತಪುರಂ: ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ಮುಖ್ಯಶಿಕ್ಷಕಿ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡದೇ ಆತನನ್ನು ಅಮಾನತು ಮಾಡಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿಯನ್ನು 5 ತಿಂಗಳ ಹಿಂದೆಯೇ ಶಾಲೆಯಿಂದ ಹೊರಹಾಕಲಾಗಿದೆ ಎಂದು ಸೆಂಟ್. ಥಾಮಸ್ ಸೆಂಟ್ರಲ್ ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

    ಶಾಲೆಯ ಮೆಟ್ಟಿಲ ಹತ್ತಿರ ವಿದ್ಯಾರ್ಥಿ ಹುಡುಗಿಯನ್ನು ತಬ್ಬಿಕೊಂಡಿದ್ದನು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಆಕೆಯನ್ನು ಶುಭ ಕೋರಲು ನಾನು ತಬ್ಬಿಕೊಂಡಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆದರೆ ಆತ ಶುಭ ಕೋರಲು ತಬ್ಬಿಕೊಂಡ ಎಂದರೆ 2 ಸೆಕೆಂಡ್ ಗಳಲ್ಲಿ ಮುಗಿಬೇಕಿತ್ತು. ಆದರೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಆತ ವಿದ್ಯಾರ್ಥಿನಿಯನ್ನು ತಬ್ಬಿಕೊಂಡಿದ್ದನು. ನಂತರ ಶಿಕ್ಷಕರು ಅವರ ಮೇಲೆ ರೇಗಿದ್ದಕ್ಕೆ ಅವರು ದೂರ ಹೋದರು. ಅಷ್ಟೇ ಅಲ್ಲದೇ ಇವರಿಬ್ಬರು ಸಲುಗೆಯಿಂದ ಇರೋ ಫೋಟೋಗಳು 100ಕ್ಕಿಂತ ಹೆಚ್ಚು ಲೈಕ್ಸ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು ಎಂದು ಶಾಲಾ ಮುಖ್ಯಶಿಕ್ಷಕಿ ಸೆಬಸ್ಟಿಯನ್ ಟಿ ಜೋಸೆಫ್ ತಿಳಿಸಿದ್ದಾರೆ.

    ನಾನು ನನ್ನ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ನಂಬಲಿಕ್ಕೆ ಆಗುತ್ತಿಲ್ಲ. ನನ್ನ ಅಜ್ಜಿ ಮುಂದೆಯೇ ಅವರು ನನಗೆ ಕೆಟ್ಟದಾಗಿ ಕರೆಯುತ್ತಾರೆ. ಅಷ್ಟೇ ಅಲ್ಲದೇ ನಾನೊಬ್ಬ ರೇಪಿಸ್ಟ್, ಕ್ರಿಮಿನಲ್ ಎನ್ನುವಂತೆ ನನ್ನ ಜೊತೆ ವರ್ತಿಸಿದ್ದಾರೆ. ನಾನು ನನ್ನ ಬೋರ್ಡ್ ಪರೀಕ್ಷೆ ಬರೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ನಾನು ಫೋಟೋ ಅಪ್ಲೋಡ್ ಮಾಡಿದ್ದೆ. ಅದನ್ನು ಉಳಿದವರು ಶೇರ್ ಮಾಡಿದ್ದಾರೆ ಎಂದು ವಿದ್ಯಾರ್ಥಿ ಮಾಧ್ಯಮಕ್ಕೆ ತಿಳಿಸಿದ್ದಾನೆ.

    ನಾನು ಸ್ಪರ್ಧೆಯಲ್ಲಿ ಭಾಗವಹಿಸಿದ ಮೇಲೆ ಆತ ನನ್ನನ್ನು ತಬ್ಬಿಕೊಂಡಿದ್ದು ನನಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಕೆಲವು ಸೆಕೆಂಡ್ ಗಳ ಕಾಲ ಆತ ನನ್ನನ್ನು ತಬ್ಬಿಕೊಂಡಿದ್ದನು. ಆದರೆ ಶಾಲೆಯವರು ಆತ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ತಬ್ಬಿಕೊಂಡಿದ್ದನು ಎಂದು ಹೇಳುತ್ತಿದ್ದಾರೆ. ಶಾಲೆಯ ಶಿಕ್ಷಕರು ನಮ್ಮನ್ನು ಕೀಳು ದೃಷ್ಟಿಯಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಕುಟುಂಬದವರಿಗೂ ಅಸಭ್ಯವಾಗಿ ಬೈಯುತ್ತಾರೆ. ಅಷ್ಟೇ ಅಲ್ಲದೇ ನಮಗೆ ಕಿರುಕುಳ ಕೂಡ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.

  • ಶಾಲೆಯ ಮುಖ್ಯ ಶಿಕ್ಷಕಿ ಮೇಲೆ ಬಿಜೆಪಿ ಮುಖಂಡನ ಗೂಂಡಾಗಿರಿ- ಹಲ್ಲೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ

    ಶಾಲೆಯ ಮುಖ್ಯ ಶಿಕ್ಷಕಿ ಮೇಲೆ ಬಿಜೆಪಿ ಮುಖಂಡನ ಗೂಂಡಾಗಿರಿ- ಹಲ್ಲೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ

    ಬೆಂಗಳೂರು: ಬಿಜೆಪಿ ಮುಖಂಡನೋರ್ವ ಶಾಲೆಗೆ ನುಗ್ಗಿದ ಮುಖ್ಯ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ನಡೆದಿದೆ.

    ತಿಮ್ಮನಾಯಕನಹಳ್ಳಿ ನಿವಾಸಿಯಾಗಿರುವ ರಾಮಕೃಷ್ಣಪ್ಪ ಶಿಕ್ಷಕಿ ಮೇಲೆ ಹಲ್ಲೆಗೈದ ಬಿಜೆಪಿ ಮುಖಂಡ. ಯಲಹಂಕದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಆಶಾ, ರಾಮಕೃಷ್ಣಪ್ಪ ಬಳಿ ಸಾಲ ಪಡೆದಿದ್ದರು. ಸಾಲದ ಬಡ್ಡಿ ಹಣವನ್ನು ಪಡೆಯಲು ಶಾಲೆಗೆ ನುಗ್ಗಿದ ರಾಮಕೃಷ್ಣಪ್ಪ ಮಹಿಳೆ ಅಂತಾ ನೋಡದೇ ಕಪಾಳಮೋಕ್ಷ ಮಾಡಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಹಲ್ಲೆಗೊಳಗಾದ ಮುಖ್ಯ ಶಿಕ್ಷಕಿ ರಾಮಕೃಷ್ಣಪ್ಪ ವಿರುದ್ಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ರಾಮಕೃಷ್ಣಪ್ಪ ಯಲಹಂಕ ಶಾಸಕ ವಿಶ್ವನಾಥ್ ಅವರ ಪರಮಾಪ್ತ ಎಂದು ಹೇಳಲಾಗಿದೆ. ಇನ್ನೂ ರಾಮಕೃಷ್ಣ ಪತ್ನಿ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿದ್ದು, ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅಂತ ಆರೋಪಿಸಲಾಗಿದೆ.

    ಇತ್ತ ಠಾಣೆಯಲ್ಲಿ ದೂರು ದಾಖಲಾದ ಬಳಿಕ ರಾಮಕೃಷ್ಣ ಪುತ್ರ ಜನಾರ್ದನ್ ಶಿಕ್ಷಕಿಗೆ ಕರೆ ಮಾಡಿ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

    https://www.youtube.com/watch?v=scfpjJAMfSc

  • ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಮಂಗಳೂರು: ಕಲ್ಲಡ್ಕದ ಎರಡು ಶಾಲೆಗಳಿಗೆ ರಾಜ್ಯ ಸರಕಾರ ಅನುದಾನ ಕಡಿತಗೊಳಿಸಿದಾಗ ಸಂಸದೆ ಶೋಭಾ ಕರಂದ್ಲಾಜೆ ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿದ್ದರು.

    ಮಂಗಳೂರಿನ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಮನೆಯಲ್ಲಿ `ಅಕ್ಕಿ ಭಿಕ್ಷೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ರಾಜ್ಯ ಮಹಿಳಾ ಮೋರ್ಚ ಘಟಕದ ಮೂಲಕ ಪ್ರತಿ ಸಂಕ್ರಾಂತಿಯಂದು ರಾಜ್ಯಾದ್ಯಂತ ಅಕ್ಕಿ ಭಿಕ್ಷೆ ಅಭಿಯಾನ ನಡೆಸುವ ಮೂಲಕ ಕಲ್ಲಡ್ಕದ ಎರಡು ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.

    ಅ. 1ರಂದು ಯೋಜನೆಗೆ ಚಾಲನೆ ನೀಡಿದ್ದು ಬಿಟ್ಟರೆ ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಮುಖಂಡರು ಮಾತು ಮರೆತಿದ್ದಾರೆ. ಅದಾಕ್ಕಾಗಿ ಒಂದು ತಿಂಗಳ ಬಳಿಕ ದಕ್ಷಿಣ ಕನ್ನಡ ಮಹಿಳಾ ಮೋರ್ಚ ದವರು ಕಲ್ಲಡ್ಕ ಶಾಲೆಗೆ 11 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ಶಾಲೆಯಲ್ಲಿ ಪ್ರತಿದಿನ 3500 ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಮಹಿಳಾ ಮೋರ್ಚ ನೀಡಿದ ಅಕ್ಕಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

    ಶಾಲೆಯ ಮುಖ್ಯಸ್ಥರಾದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಮಾತ್ರ ಭಿಕ್ಷೆ ಎತ್ತಿಯಾದರೂ ಬಿಸಿಯೂಟ ನೀಡುತ್ತೀವಿ ಎಂದಿದ್ದರು. ಹಾಗಾದರೆ ಶೋಭಾ ಕರಂದ್ಲಾಜೆ ಅಕ್ಕಿ ಭಿಕ್ಷೆ ಹೆಸರಲ್ಲಿ ಜೋಳಿಗೆ ತೋರಿಸಿ ನಾಟಕವಾಡಿದರೇ ಎನ್ನುವ ಪ್ರಶ್ನೆ ಇದೀಗ ಅಲ್ಲಿನ ಜನರನ್ನು ಕಾಡುತ್ತಿದೆ.

  • ಶಾಲೆಯಿಂದ ಬಿಡುಗಡೆ ಮಾಡುವಂತೆ ಹೇಳಿದ್ದಕ್ಕೆ ಶಿಕ್ಷಕಿ ಪತಿಯಿಂದ ಬಿಇಓಗೆ ಜೀವ ಬೆದರಿಕೆ

    ಶಾಲೆಯಿಂದ ಬಿಡುಗಡೆ ಮಾಡುವಂತೆ ಹೇಳಿದ್ದಕ್ಕೆ ಶಿಕ್ಷಕಿ ಪತಿಯಿಂದ ಬಿಇಓಗೆ ಜೀವ ಬೆದರಿಕೆ

    ಗದಗ: ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಬಿಇಓಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಗದಗ ಜಿಲ್ಲೆ ರೋಣದಲ್ಲಿ ನಡೆದಿದೆ.

    ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ನಂಜುಂಡಯ್ಯ ಅವರಿಗೆ ಶಿಕ್ಷಕಿ ಎಸ್.ಎಮ್. ನಡುವಿನಮನಿ ಅನ್ನುವರ ಪತಿ ಉಮೇಶ್ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ. ರೋಣ ತಾಲೂಕಿನ ಚಿಕ್ಕಮಣ್ಣೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಎಸ್.ಎಮ್ ನಡುವಿನಮನಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಶಾಲೆಗೆ ಕಳೆದ ಸೆಪ್ಟೆಂಬರ್ 17, 2016 ರಂದು ವರ್ಗಾವಣೆ ಮಾಡಲಾಗಿತ್ತು.

    ವರ್ಗಾವಣೆಯಾಗಿ ವರ್ಷ ಕಳೆದರೂ ಶಿಕ್ಷಕಿ ಹೊಳೆಇಟಗಿ ಶಾಲೆಗೆ ಹಾಜರಾಗಿರಲಿಲ್ಲ. ನಂತರ ಅವರನ್ನ ಚಿಕ್ಕಮಣ್ಣೂರು ಶಾಲೆಯಿಂದ ಬಿಡುಗಡೆ ಮಾಡುವಂತೆ ಮುಖ್ಯೋಪಾಧ್ಯಾಯರಿಗೆ ಬಿಇಓ ಸೂಚಿಸಿದರು. ಇದಕ್ಕೆ ಶಿಕ್ಷಕಿ ಪತಿ ಉಮೇಶ್ ಸಿಟ್ಟಾಗಿ ಬಿಇಓ ಎನ್ ನಂಜುಂಡಯ್ಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕು ತೋರಿಸಿ ಜೀವ ಬೆದರಿಕೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

    ಶಿಕ್ಷಕಿ ಪತಿ ಉಮೇಶ್ ವಿರುದ್ಧ ರೋಣ ಪೊಲೀಸ್ ಠಾಣೆಗೆ ಬಿಇಓ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ತೋರಿಸಿ ಜೀವ ಬೆದರಿಕೆ ಬಗ್ಗೆ ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • ಪ್ರತ್ಯೇಕ ತಾಲೂಕು ರಚನೆಗೆ ಪತ್ರ ಚಳುವಳಿ ಆರಂಭಿಸಿದ ಶಾಲಾ ಮಕ್ಕಳು

    ಪ್ರತ್ಯೇಕ ತಾಲೂಕು ರಚನೆಗೆ ಪತ್ರ ಚಳುವಳಿ ಆರಂಭಿಸಿದ ಶಾಲಾ ಮಕ್ಕಳು

    ಬಾಗಲಕೋಟೆ: ತಮ್ಮ ಗ್ರಾಮವನ್ನು ನೂತನ ತಾಲೂಕನ್ನಾಗಿ ರಚನೆ ಮಾಡುವಂತೆ ಆಗ್ರಹಿಸಿ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿಯನ್ನ ನಡೆಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಗ್ರಾಮದಲ್ಲಿ ಭಾನುವಾರದಿಂದ ಗ್ರಾಮಸ್ಥರು ಸಾವಳಗಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಲಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳು ಸಿಎಂಗೆ ಪತ್ರ ಬರೆದಿದ್ದಾರೆ.

    ಇನ್ನು ವಿಶೇಷ ಅಂದರೆ ಡಿಸೆಂಬರ್ 19 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಹೀಗಾಗಿ ಸಿಎಂ ಗಮನ ಸೆಳೆಯುವ ಕಾರಣದಿಂದ ಸಾಮೂಹಿಕ ಪತ್ರ ಚಳುವಳಿಗೆ ಮುಂದಾಗಿದ್ದಾರೆ. ಪ್ರತಿಯೊಬ್ಬ ಮಕ್ಕಳು ಸಹ ಪತ್ರ ಬರೆದು ಸಿಎಂ ಅವರ ಬೆಂಗಳೂರ ವಿಳಾಸಕ್ಕೆ ಪೋಸ್ಟ್ ಮಾಡಿದ್ದಾರೆ. ತಮ್ಮ ಗ್ರಾಮ ನೂತನ ತಾಲೂಕಾಗಿ ರಚನೆಯಾಗಿ ಇನ್ನಷ್ಟು ಅಭಿವೃದ್ಧಿ ಕಾಣಬೇಕೆಂಬ ಉದ್ದೇಶದಿಂದ ಸಿಎಂಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

  • ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡಲು ಯತ್ನ – ವಿದ್ಯಾರ್ಥಿನಿಗೆ ಚಾಕು ಇರಿತ

    ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡಲು ಯತ್ನ – ವಿದ್ಯಾರ್ಥಿನಿಗೆ ಚಾಕು ಇರಿತ

    ಕಾರವಾರ: ಉತ್ತರ ಕನ್ನಡದಲ್ಲಿ ಮತ್ತೆ ಶಾಂತಿ ಕದಡುವ ಯತ್ನ ನಡೆದಿದೆ. ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ವಿದ್ಯಾರ್ಥಿನಿ ಕೊಲೆ ಯತ್ನ ನಡೆದಿದೆ.

    ಶಾಲೆಗೆ ಹೋಗುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದೆ. ಅನ್ಯಕೋಮಿನ ಇಬ್ಬರು ಯುವಕರು ಚಾಕು ಇರಿದಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿ ಕಾವ್ಯ ಶೇಖರ್ ಕೈಗಳಿಗೆ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಗೋಡಿನಲ್ಲಿ ಘಟನೆ ನಡೆದಿದ್ದು, ಕೂಡಲೇ ಗಾಯಾಳು ವಿದ್ಯಾರ್ಥಿನಿಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಚಾರದ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಎಸ್.ಪಿ ವಿನಾಯಕ್ ಪಾಟೀಲ್ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಹೊನ್ನಾವರದಲ್ಲಿ ಶುಕ್ರವಾರ ಬೆಳಗ್ಗೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.