Tag: school

  • ಆಗ ತಾನೇ ಶಾಲೆಯಿಂದ ಬಂದ 9ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್!

    ಆಗ ತಾನೇ ಶಾಲೆಯಿಂದ ಬಂದ 9ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್!

    ಕೋಲ್ಕತ್ತಾ: ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದ ಮಲ್ಡಾದ ಇಂಗ್ಲಿಷ್ ಬಜಾರ್ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.

    3ನೇ ತರಗತಿ ಓದುತ್ತಿರೋ 9ರ ಬಾಲಕಿ ಮೇಲೆ 10ನೇ ತರಗತಿ ಓದುತ್ತಿರೋ 16 ವರ್ಷದ ಬಾಲಕ ಈ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಸಂತ್ರಸ್ತ ಬಾಲಕಿ ಪೋಷಕರು ಆರೋಪಿ ಬಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

    ಘಟನೆ ವಿವರ: ಸಂತ್ರಸ್ತ ಬಾಲಕಿಯ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ತಾಯಿ ಸರ್ಕಾರೇತರ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ನಿಮಿತ್ತ ಇವರಿಬ್ಬರೂ ಮನೆಯಿಂದ ಹೊರ ಹೋಗಿದ್ದರು. ಹೀಗಾಗಿ ಸಂಜೆ ಶಾಲೆಯಿಂದ ಬಂದ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದನ್ನು ಗಮನಿಸಿದ ಅದೇ ಪ್ರದೇಶದ ಬಾಲಕ ಆಕೆಯನ್ನು ಮಾವಿನ ತೋಟಕ್ಕೆ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಗೆ ಚಾಕು ತೋರಿಸಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ವಿಚಾರವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.

    ಅತ್ಯಾಚಾರದಿಂದಾಗಿ ಬಾಲಕಿ ನೋವಿನಿಂದ ಕಿರುಚಿಕೊಳ್ಳುತ್ತಿರುವುದನ್ನು ಇನ್ನೊಬ್ಬಳು ಅಪ್ರಾಪ್ತೆ ಕೇಳಿಸಿಕೊಂಡಿದ್ದಾಳೆ. ಅಲ್ಲದೇ ಆಕೆ ಅಲ್ಲಿ ನಡೆದ ಘಟನೆಯನ್ನು ನೋಡಿದ್ದಾಳೆ. ನಾನು ಆಡುಗಳನ್ನು ಕಟ್ಟಿ ಹಾಕಲು ಮಾವಿನ ತೋಟಕ್ಕೆ ಬಂದಿದ್ದೆ. ಈ ವೇಳೆ ಬಾಲಕಿಯ ಗುಂಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ನೋವಿನಿಂದ ಒದ್ದಾಡುತ್ತಿದ್ದಳು. ಅಲ್ಲದೇ ಸ್ಥಳೀಯ ಬಾಲಕನೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ ಅಂತ ಬಾಲಕಿಯ ಆಂಟಿ ಹೇಳಿದ್ದಾರೆ.

    ಕೂಡಲೇ ಬಾಲಕಿಯ ಕುಟುಂಬಸ್ಥರು ಪಂಚಾಯತ್ ಅಧ್ಯಕ್ಷರ ಸಹಾಯದಿಂದ ಮಾಲ್ಡಾ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಂಚಾಯತ್ ಕಚೇರಿಯಲ್ಲಿದ್ದಾಗ ಸಂತ್ರಸ್ತೆ ಪೋಷಕರು ಬಂದು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಕೂಡಲೇ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಅಂತ ಘಟನೆ ಬಗ್ಗೆ ಕಜಿಗ್ರಾಮ್ ಗ್ರಾಮದ ಪಂಚಾಯತ್ ಅಧ್ಯಕ್ಷ ಗೌತಮ್ ಚೌಧರಿ ಹೇಳಿದ್ದಾರೆ.

    ಸಭೆಯ ನಿಮಿತ್ತ ನಾನು ನಗರಕ್ಕೆ ಹೋಗಿದ್ದೆ. ಸಭೆ ಮುಗಿಸಿಕೊಂಡು ಮನೆಗೆ ಬರುವಾಗ ಮಗಳು ಅತ್ಯಾಚಾರವಾಗಿ ನೋವಿನಿಂದ ಒದ್ದಾಡುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ಬಾಲಕಿಯ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆರೋಪಿ ಬಾಲಕನ ವಿರುದ್ಧ ಬಾಲಕಿಯ ಪೋಷಕರು ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

  • ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಪಟ್ನಾ: ಶಾಲೆಯ ನಿರ್ದೇಶಕನೊಬ್ಬ 6ನೇ ತರಗತಿಯ ಬಾಲಕನ ಮೇಲೆ ನಿರಂತರವಾಗಿ ಮೂರು ವರ್ಷಗಳ ಕಾಲ ಲೈಂಗಿಕ ಶೋಷಣೆ ಎಸಗಿರುವ ಅಘಾತಕಾರಿ ಘಟನೆ ಬಿಹಾರದ ಸಿತಮಾರಿ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಬೆಳಕಿಗೆ ಬಂದ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಬಾಲಕ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರೋಪಿ ಮೂರು ವರ್ಷಗಳಿಂದ ನಿರಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ತನ್ನ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಹೀಗಾಗಿ ಬಾಲಕ ತನ್ನ ಮೇಲೆ ನಡೆಯುತ್ತಿರುವ ಶೋಷಣೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೆ ಕಳೆದ ಶುಕ್ರವಾರ ತೀವ್ರವಾಗಿ ನೊಂದ ಬಾಲಕ ಪೋಷಕರ ಬಳಿ ಘಟನೆ ಕುರಿತು ವಿವರವಾಗಿ ತಿಳಿಸಿದ್ದಾನೆ. ತನ್ನ ಮಗನ ಮೇಲೆ ನಡೆದಿರುವ ಕೃತ್ಯದ ಬಗ್ಗೆ ಕೇಳಿದ ಪೋಷಕರು ಅಘಾತಕ್ಕೊಳಗಾಗಿದ್ದಾರೆ.

    ಆರೋಪಿ ಬಾಲಕನ ಮೇಲೆ ಲೈಂಗಿಕ ಶೋಷಣೆ ನಡೆಸುವ ವೇಳೆ ಕೆಲವು ರಾಸಾಯನಿಕ ವಸ್ತುಗಳನ್ನು ದೇಹಕ್ಕೆ ಎರಚುತ್ತಿದ್ದ. ಒಂದು ವೇಳೆ ಆತನ ಕೃತ್ಯಕ್ಕೆ ನಿರಾಕರಿಸಿದರೆ ನನ್ನ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬಾಲಕ ತಿಳಿಸಿದ್ದಾನೆ.

    ಆರೋಪಿಯ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ ಬಾಲಕನ ಪೋಷಕರ ವಿರುದ್ಧವೇ ಹಲ್ಲೆ ನಡೆಸಿದ್ದು, ಈ ವೇಳೆಯು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕನ ಪೋಷಕರು ತಿಳಿದ್ದಾರೆ.

  • ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ಯಶಸ್ವಿಯಾಗಿ ಕರೆತಂದ ಶ್ರೀ

    ಕಲಬುರಗಿ: ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವು ಯೋಜನೆ ತಂದರೂ ಪ್ರಯೋಜನವಾಗಿಲ್ಲ. ಆದ್ರೆ ಕಲಬುರಗಿಯ ಮಹೇಶ್ವರನಂದ ಸ್ವಾಮೀಜಿಗಳು, ಅಲೆಮಾರಿ ಮಕ್ಕಳಿಗಾಗಿಯೇ ಶಾಲೆ ತೆಗೆದಿದ್ದಾರೆ. ರಾಜ್ಯದ ಮೂಲೆ-ಮೂಲೆ ಸುತ್ತಿ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಜೊತೆ ವಸತಿ ಸೌಕರ್ಯ ನೀಡುತ್ತಿದ್ದಾರೆ.

    ಕಲಬುರಗಿ ತಾಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದ ಅಧ್ಯಕ್ಷರಾದ ಮಹೇಶ್ವರನಂದ ಸ್ವಾಮೀಜಿ ಅಲೆಮಾರಿ ಜನಾಂಗದ ಮಕ್ಕಳ ಪೋಷಕರಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ರಾಜ್ಯದ ಮೂಲೆ ಮೂಲೆಗೆ ಹೋಗಿ ಅಲೆಮಾರಿ ಜನಾಂಗದ ಮಕ್ಕಳನ್ನು ಕರೆ ತಂದು ತಮ್ಮ ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ಈ ಮೂಲಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    2002ರಲ್ಲಿ ಶ್ರೀಗಳು ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಈ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಕಳೆದ 15 ವರ್ಷಗಳಲ್ಲಿ ಈ ಶಾಲೆಯಲ್ಲಿ 8 ಸಾವಿರಕ್ಕೂ ಅಧಿಕ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಶ್ರೀಗಳ ಕಾರ್ಯ ಮೆಚ್ಚಿ ಹಿಂದಿನ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಖುದ್ದು ಶಾಲೆಗೆ ಭೇಟಿ ನೀಡಿ, ಶ್ಲಾಘಿಸಿದ್ದರು.

    ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರದ ಯತ್ನ ವಿಫಲವಾಗಿದ್ದರೂ, ಶ್ರೀಗಳು ಯಶಸ್ವಿಯಾಗಿದ್ದಾರೆ.

    https://www.youtube.com/watch?v=TxziRBYSK44&pbjreload=10

  • ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಬಳ್ಳಾರಿ: ಇಲ್ಲಿನ ಮೊರಾರ್ಜಿ ಶಾಲೆಯ ಪ್ರಾಂಶುಪಾಲರ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಬಳಿ ಮುರಾರ್ಜಿ ಶಾಲೆಯ ನೂರಾರು ಮಕ್ಕಳು ಮಂಗಳವಾರ ಪ್ರಾಂಶುಪಾಲ ಶಶಿಧರ್, ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಭೋದನೆ ಮಾಡುತ್ತಾನೆ ಎಂದು ರೊಚಿಗೆದ್ದು ಪ್ರತಿಭಟನೆ ನಡೆಸಿದರು.

    ನಮ್ಮ ಮಾಸ್ಟರ್ ನಮ್ಮ ಮೈ-ಕೈ ಮುಟ್ಟಿ ಮಾತನಾಡಿಸ್ತಾನೆ. ಕೆಟ್ಟ ದೃಷ್ಠಿಯಿಂದ ನೋಡುತ್ತಾ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಾ? ಎಂದು ಕೇಳುತ್ತಾನೆ ಅಂತ ಮಕ್ಕಳು ಪ್ರಾಂಶುಪಾಲರ ವಿರುದ್ಧ ಧ್ವನಿಯೆತ್ತಿದ್ದಾರೆ. ಜೊತೆಗೆ ಕೂಡಲೇ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿ ಎಂದು ಮಕ್ಕಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

    ಮುಂಜಾನೆ 11 ಗಂಟೆಯಿಂದ ಶಾಲೆಯ ಮುಂದೆಯೇ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

    ಈ ಶಾಲೆಯ ಪ್ರಾಂಶುಪಾಲ ಶಶಿಧರ್ ಈ ಹಿಂದೆ ಹಡಗಲಿಯ ಶಾಲೆಯಲ್ಲೂ ಇದೇ ರೀತಿಯಾಗಿ ವರ್ತನೆ ಮಾಡಿದ ಪರಿಣಾಮ ಇವರನ್ನು ಹಗರಿಬೊಮ್ಮನಹಳ್ಳಿಯ ಅಂಬಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

    ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

    ಚಂಡೀಗಢ: ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ರನ್ನು ಗುಂಡಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.

    ರಿತು ಛಾಬ್ರಾ ಎಂಬವರು ಕೊಲೆಯಾದ ಪ್ರಿನ್ಸಿಪಾಲ್. ಯಮುನಾ ನಗರದ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 11.30ರ ವೇಳೆಯಲ್ಲಿ ನೇರ ಪ್ರಿನ್ಸಿಪಾಲರ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿದ್ಯಾರ್ಥಿ ಗುಂಡು ಹಾರಿಸಿದ್ದರಿಂದ 3 ಬುಲೆಟ್‍ಗಳು ತಾಗಿ ಗಂಭೀರವಾಗಿ ಗಾಯಗೊಂಡ ಛಾಬ್ರಾ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಬಳಿಕ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಶಾಲೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ಎಸ್‍ಪಿ ರಾಜೇಶ್ ಕಲಿಯಾ ತಿಳಿಸಿದ್ದಾರೆ.

    ಪ್ರಿನ್ಸಿಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಹಾಜರಾತಿ ಕಡಿಮೆ ಹೊಂದಿದ್ದ. ಅಲ್ಲದೇ ತರಗತಿಯ ಇತರೆ ವಿದ್ಯಾರ್ಥಿಗಳ ಜೊತೆ ಜಗಳವಾಡುತ್ತಿದ್ದ ಕಾರಣ ಆತನನ್ನು 15 ದಿನಗಳ ಹಿಂದೆ ಪ್ರಿನ್ಸಿಪಾಲರು ಶಾಲೆಯಿಂದ ಅಮಾನತು ಮಾಡಿದ್ದರು ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ಹಿಂದೆ ಗುರಗಾಂವ್ ನ ರಯಾನ್ ಇಂಟರ್‍ನ್ಯಾಷನಲ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿ 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ.

  • 1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

    1ನೇ ತರಗತಿ ಬಾಲಕನ ಹೊಟ್ಟೆಗೆ ಚಾಕು ಇರಿದ 6ನೇ ಕ್ಲಾಸ್ ವಿದ್ಯಾರ್ಥಿನಿ- ಪ್ರಿನ್ಸಿಪಲ್ ಅರೆಸ್ಟ್

    ಲಕ್ನೋ: ಶಾಲೆಯ ಟಾಯ್ಲೆಟ್‍ನಲ್ಲಿ 1ನೇ ತರಗತಿ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿನಿ ಚಾಕುವಿನಿಂದ ಹಲ್ಲೆ ಮಾಡಿರೋ ಆಘಾತಕಾರಿ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

    ಬಾಲಕನ ಮೇಲೆ 6ನೇ ತರಗತಿಯ ವಿದ್ಯಾರ್ಥಿನಿ ಹಲ್ಲೆ ಮಾಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ವಿಷಯವನ್ನು ಒಂದು ದಿನದವರೆಗೆ ಮುಚ್ಚಿಟ್ಟ ಶಾಲೆಯ ಮುಖ್ಯೋಪಾಧ್ಯಾಯರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಇಲ್ಲಿನ ಬ್ರೈಟ್‍ಲ್ಯಾಂಡ್ ಶಾಲೆಯಲ್ಲಿ ಬಾಲಕನ ಮೇಲೆ ವಿದ್ಯಾರ್ಥಿನಿ ಟಾಯ್ಲೆಟ್‍ನಲ್ಲಿ ದಾಳಿ ಮಾಡಿದ್ದಾಳೆಂದು ಪೋಷಕರು ಹೇಳಿದ್ದಾರೆ. ಬುಧವಾರದಂದು ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಬಾಲಕನಿಗೆ ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನನ್ನ ಮಗನಿಗೆ ಗಾಯವಾಗಿದೆ ಎಂದು ಶಾಲೆಯವರು ತಿಳಿಸಿದ್ರು. ಆತನ ಮೇಲೆ ಹುಡುಗಿಯೊಬ್ಬಳು ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ ಎಂದು ಬಾಲಕನ ತಂದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಬ್ಲೂ ವೇಲ್ ಗೇಮ್‍ನ ಭಾಗವಾಗಿ ಈ ಕೃತ್ಯ ನಡೆದಿರಬಹುದು ಎಂದು ಶಾಲೆಯ ಅಧಿಕಾರಿಗಳು ಶಂಕಿಸಿದ್ದಾರೆ.

    ಶಾಲೆಯವರು ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಚಾಕುವಿನಂತಹ ಚೂಪಾದ ವಸ್ತುವಿನಿಂದ ಇರಿಯಲಾಗಿದೆ ಎಂದು ಬಾಲಕನಿಗೆ ಚಿಕಿತ್ಸೆ ನೀಡ್ತಿರೋ ವೈದ್ಯರಾದ ಸಂದೀಪ್ ತಿವಾರಿ ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಇಂದು ಆಸ್ಪತ್ರೆಯಲ್ಲಿ ಬಾಲಕನನ್ನು ಭೇಟಿಯಾಗಿದ್ದಾರೆ.

    ಬಾಲಕನ ಮೇಲಿನ ದಾಳಿಯ ಬಗ್ಗೆ ಬುಧವಾರದಂದು ಶಾಲೆಯಲ್ಲಿ ಸುದ್ದಿ ಹರಡಿದ ನಂತರ ಹಲವಾರು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಕಳೆದ ವರ್ಷ ಗುರಗಾಂವ್‍ನ ರಯಾನ್ ಅಂತರಾಷ್ಟ್ರೀಯ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಎಂಬಾತನ ಮೇಲೆ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪರೀಕ್ಷೆ ಹಾಗೂ ಪೇರೆಂಟ್ಸ್ ಮೀಟಿಂಗ್ ಮುಂದೂಡುವ ಸಲುವಾಗ ವಿದ್ಯಾರ್ಥಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ಹೇಳಿದ್ದರು.

  • ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ತಾಯಿಗೆ ಡಿಕ್ಕಿ ಹೊಡೆದ ಕಾರು- ಮಹಿಳೆ ಸ್ಥಳದಲ್ಲೇ ಸಾವು

    ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ತಾಯಿಗೆ ಡಿಕ್ಕಿ ಹೊಡೆದ ಕಾರು- ಮಹಿಳೆ ಸ್ಥಳದಲ್ಲೇ ಸಾವು

    ಬೆಂಗಳೂರು: ಶಾಲೆಗೆ ತೆರಳಿದ್ದ ತನ್ನ ಮಗುವನ್ನು ವಾಪಸ್ ಮನೆಗೆ ಕರೆತರಲು ತೆರಳುತ್ತಿದ್ದ ತಾಯಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಧಾರುಣ ಘಟನೆ ಸಂಭವಿಸಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರದ ಬಳಿ ನಡೆದಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಅಪಘಾತವಾದ ಬಳಿಕ, ದಾಸನಪುರ ನಿವಾಸಿ ಸುದಾ ಎಂಬ ಮಹಿಳೆಗೆ ಅಪ್ಪಳಿಸಿದೆ.

    ಈ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದರೆ, ಎರಡು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ಈ ಘಟನಾ ಸ್ಥಳದಲ್ಲಿ ಸ್ಕೈವಾಕ್ ಇಲ್ಲದೇ ಇರುವ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಶಾಲೆಯಲ್ಲಿ ಶಿಕ್ಷಕನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

    ಶಾಲೆಯಲ್ಲಿ ಶಿಕ್ಷಕನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

    ಕೋಲಾರ: ಶಿಕ್ಷಕನೇ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಜಿಲ್ಲೆಯ ವೇಮಗಲ್‍ನಲ್ಲಿ ನಡೆದಿದೆ.

    ಕಾಮುಕ ಶಿಕ್ಷಕನನ್ನು ಮುನಿರಾಜು ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಡಿಸೆಂಬರ್ 30 ಶನಿವಾರದಂದು ಅತ್ಯಾಚಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತ ಬಾಲಕಿಯನ್ನ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

    ಡಿಸೆಂಬರ್ 30ರಂದು ಶಾಲೆಯಲ್ಲಿ ಆರೋಪಿ ಮುನಿರಾಜು ಯಾರೂ ಇಲ್ಲದ ವೇಳೆ 11 ವರ್ಷದ ಬಾಲಕಿಯನ್ನು ತನ್ನ ಕಚೇರಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಆದರೆ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ದೂರು ನೀಡಿದಂತೆ ತಿಳಿಸಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಮಂಗಳವಾರ ಸಂತ್ರಸ್ತೆಯ ಪೋಷಕರು ಆರೋಪಿ ವಿರುದ್ಧ ದೂರು ನೀಡಿದ್ದಾರೆ.

    ಈ ಪ್ರಕರಣ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ: ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

  • ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಭೋಪಾಲ್: ಶಾಲೆಯ ವಾರ್ಷಿಕೋತ್ಸವದಲ್ಲಿ ಪದ್ಮಾವತ್ ಚಿತ್ರದ ಗೂಮರ್ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶ್ರೀ ರಜ್‍ಪೂತ್ ಕರ್ಣಿ ಸೇನಾ ಕಾರ್ಯಕರ್ತರು ಶಾಲಾ ಆಸ್ತಿಯನ್ನು ಧ್ವಂಸ ಮಾಡಿದ ಘಟನೆ ಮಧ್ಯ ಪ್ರದೇಶದ ರತ್ಲಂನಲ್ಲಿ ನಡೆದಿದೆ.

    ಸೆಂಟ್ ಪೌಲ್ ಕಾನ್ವೆಂಟ್ ನಲ್ಲಿ ಈ ಘಟನೆ ನಡೆದಿದ್ದು, 1 ರಿಂದ 5ನೇ ತರಗತಿಯ ಮಕ್ಕಳು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಕಾರ್ಯಕ್ರಮ ನಡೆಯುವಾಗ ಕರ್ಣಿ ಸೇನಾ ಕಾರ್ಯಕರ್ತರು ಪ್ಲಾಸ್ಟಿಕ್ ಚೇರ್ ಮುರಿದಿದ್ದಾರೆ ಅಷ್ಟೇ ಅಲ್ಲದೇ ಸ್ಪೀಕರ್ ಒಡೆದು ಹಾಕಿದ್ದಾರೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.

    ಶಾಲೆಯ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಸದ್ಯ ಪದ್ಮಾವತಿ ಚಿತ್ರ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರೂ ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ. ಪದ್ಮಾವತ್ ಚಿತ್ರ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದೆ.

    https://www.youtube.com/watch?v=1kqJYqGraLg

     

  • ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

    ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

    ಭುವನೇಶ್ವರ್: ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ ತಂದೆಯೊಬ್ಬರು ಬೆಟ್ಟವನ್ನೇ ಕಡಿದು ಸುಮಾರು 15 ಕಿ.ಮೀ ರಸ್ತೆ ನಿರ್ಮಿಸುತ್ತಿರುವ ಘಟನೆ ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ನಡೆದಿದೆ.

    ಜಲಂಧರ್ ನಾಯಕ್, ತಮ್ಮ ಗ್ರಾಮವಾದ ಗುಮ್ಸಾಹಿಯಿಂದ ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಎರಡು ವರ್ಷಗಳಿಂದ ಪ್ರತಿದಿನ 8 ಗಂಟೆ ಕೆಲಸ ಮಾಡಿ 15 ಕಿ.ಮೀ ರಸ್ತೆ ನಿರ್ಮಿಸಲು ಒಬ್ಬರೇ ಶ್ರಮಿಸುತ್ತಿದ್ದಾರೆ.

    ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿರುವ ಜಲಂದರ್ ನಾಯಕ್(45) ಅವರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು ಸುಮಾರು 15 ಕಿ.ಮೀ. ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲ. ಹೀಗಾಗಿ ತಮ್ಮ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಸುತ್ತಿಗೆ ಮತ್ತು ಉಳಿ ಹಿಡಿದು ದಿನದ 8 ಗಂಟೆ ದುಡಿದು ಈಗಾಗಲೇ 8 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿ ಜಿಲ್ಲಾಡಳಿತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‍ಆರ್ ಇಜಿಎಸ್) ಅಡಿಯಲ್ಲಿ ಅವರ ಕೆಲಸಕ್ಕೆ ಸಂಬಳ ಪಾವತಿ ಮಾಡುವುದರ ಜೊತೆಗೆ ಸನ್ಮಾನ ಮಾಡಲು ನಿರ್ಧಾರ ಮಾಡಿದ್ದಾರೆ.

    ಈ ಹಿಂದೆ ಬಿಹಾರದ ದಶರತ್ ಮಂಝಿ ಅವರು ಸುಮಾರು 360 ಅಡಿ ರಸ್ತೆಯನ್ನು ನಿರ್ಮಿಸಲು 22 ವರ್ಷಗಳಷ್ಟು ಕಾಲ ಶ್ರಮಿಸಿ ಸುದ್ದಿಯಾಗಿದ್ದರು. ಈಗ ನಾಯಕ್ ಎರಡು ವರ್ಷಗಳಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿದ್ದಾರೆ. ಇನ್ನು ಮೂರು ವರ್ಷಗಳಲ್ಲಿ 7 ಕಿ.ಮೀ. ವಿಸ್ತರಿಸಬೇಕೆಂದು ಯೋಜನೆ ಮಾಡಿಕೊಂಡಿದ್ದಾರೆ.

    ನಾಯಕ್ ತಮ್ಮ ಮೂವರು ಮಕ್ಕಳು ಶಾಲೆಗೆ ಹೋಗಲು ಎದುರಿಸುತ್ತಿದ್ದ ಸಮಸ್ಯೆಗಳೇ ಅವರಿಗೆ ಸುತ್ತಿಗೆ ಮತ್ತು ಉಳಿಗೆಯನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ. ಆದ್ರೆ ಈವರೆಗೆ ಇವರ ಶ್ರಮವನ್ನ ಯಾರು ಕೂಡ ಗಮನಿಸಿರಲಿಲ್ಲ. ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿಗಳನ್ನ ಓದಿದ ನಂತರ ಜಿಲ್ಲಾಧಿಕಾರಿ ಬೃಂದಾ, ನಾಯಕ್ ಅವರನ್ನ ಕಚೇರಿಗೆ ಕರೆಸಿ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ. ಜೊತೆಗೆ ನಾಯಕ್ ಅವರ ಜೊತೆಗೆ ಕೆಲಸಗಾರರನ್ನ ನಿಯೋಜಿಸಿ ರಸ್ತೆ ಕಾಮಗಾರಿ ಪೂರ್ಣಳಿಸುವಂತೆ ಫುಲ್ಬನಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ)ಗಳಿಗೆ ಸೂಚನೆ ನೀಡಿದ್ದಾರೆ.

    ನಾಯಕ್ ಮತ್ತು ಅವರ ಕುಟುಂಬ ಮಾತ್ರ ಗುಮ್ಸಾಹಿ ಗ್ರಾಮದ ನಿವಾಸಿಗಳಾಗಿದ್ದು, ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಅಗತ್ಯ ಸೌಕರ್ಯಗಳ ಕೊರತೆಯಿಂದಾಗಿ ಇತರರು ಬಹಳ ಹಿಂದೆಯೇ ಗ್ರಾಮವನ್ನು ತೊರೆದ್ದರು. ನಾಯಕ್ ತರಕಾರಿಗಳನ್ನು ಮಾರಾಟ ಮಾಡುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ಗುರುತಿಸಿ ಸಹಾಯ ಮಾಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ. “ನಮ್ಮ ಹಳ್ಳಿಗೆ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ನನಗೆ ಭರವಸೆ ನೀಡಿದ್ದಾರೆ” ಎಂದು ನಾಯಕ್ ಹೇಳಿದ್ದಾರೆ.

    ನಾಯಕ್ ಅವರ ಪರಿಶ್ರಮ ಮತ್ತು ಕೆಲಸಕ್ಕಾಗಿ ಕಂಧಾಮಾಲ್ ಉತ್ಸವದ ಸಮಯದಲ್ಲಿ ಅವರನ್ನು ಗೌರವಿಸಲು ಯೋಚನೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಬೃಂದಾ ತಿಳಿಸಿದ್ದಾರೆ.