ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಫ್ಲೋರಿಡಾದ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿ ವೇಳೆ ಶಾಲೆಯ ಗಣಿತ ಶಿಕ್ಷಕಿ ಸಮಯಪ್ರಜ್ಞೆ ಪ್ರದರ್ಶಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದ ಘಟನೆ ವರದಿಯಾಗಿದೆ.
ಶಾಲೆಯ ಗಣಿತ ಶಿಕ್ಷಕಿ ಭಾರತ ಮೂಲದ ಶಾಂತಿ ವಿಶ್ವನಾಥನ್ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಅವರನ್ನು ಶಾಲೆಯಲ್ಲಿ `ವಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಿವೆ.

ಅಂದು ಎಆರ್-15 ರೈಫಲ್ ನೊಂದಿಗೆ ಶಾಲೆ ಒಳಪ್ರವೇಶಿಸಿದ್ದ ಆರೋಪಿ ಕ್ಯಾಂಪಸ್‍ನಲ್ಲಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದ. ಈ ವೇಳೆ ಶಾಲೆಯ ಎಚ್ಚರಿಕೆ ಗಂಟೆ ಮೊಳಗುತ್ತಿದಂತೆ ಎಚ್ಚೆತ ಶಾಂತಿ ಅವರು ವಿದ್ಯಾರ್ಥಿಗಳನ್ನು ಕೊಠಡಿಯ ನೆಲದ ಮೇಲೆ ಮಲಗಲು ಸೂಚಿಸಿದ್ದರು. ಅಲ್ಲದೇ ಕೊಠಡಿಯ ಎಲ್ಲಾ ಕಿಟಕಿ, ಬಾಗಿಲು ಮುಚ್ಚಿ ಯಾರೂ ತರಗತಿಯ ಒಳಪ್ರವೇಶ ಮಾಡದಂತೆ ಮಾಡಿದ್ದರು. ಇದರಿಂದ ಆರೋಪಿಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಇರುವ ಸಂಗತಿ ತಿಳಿಯದಂತೆ ಮಾಡಿದ್ದರು ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

ಈ ನಡುವೆ ಪೊಲೀಸ್ ತಂಡ ಬಂದು ತರಗತಿಯ ಬಾಗಿಲು ತೆರೆಯುವಂತೆ ಬಾಗಿಲು ಬಡಿದರೂ ಶಾಂತಿ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದರು. ಆರೋಪಿಯೇ ಪೊಲೀಸರಂತೆ ನಟಿಸುತ್ತಿರಬಹುದು ಎಂದು ಹೆದರಿ, ಬಾಗಿಲು ಒಡೆಯಿರಿ ಅಥವಾ ಕೀ ಬಳಸಿ ಒಳಗೆ ಬನ್ನಿ. ಯಾವುದೇ ಕಾರಣಕ್ಕೂ ನಾನು ಬಾಗಿಲು ತೆರೆಯುವುದಿಲ್ಲ ಎಂದು ಶಿಕ್ಷಕಿ ಹೇಳಿದ್ದರು. ನಂತರ ಪೊಲೀಸ್ ತಂಡದಲ್ಲಿದ್ದವರೊಬ್ಬರು ಕಿಟಕಿ ಮುಖಾಂತರ ವಿದ್ಯಾರ್ಥಿಗಳನ್ನ ಹೊರಗೆ ಕರೆತಂದರು ಎಂದು ವಿದ್ಯಾಥಿಯೊಬ್ಬರು ಇಲ್ಲಿನ ಪತ್ರಿಕೆಗೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿಯ ಧೈರ್ಯ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆ ಸೂಚಿಸಿದ್ದು, ಅವರು ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ: ಫ್ಲೋರಿಡಾದ ಪಾರ್ಕ್‍ಲ್ಯಾಂಡ್ ನಲ್ಲಿರುವ ಮಜಾರ್‍ಒರಿ ಸ್ಟೋನ್‍ಮ್ಯಾನ್ ಡೌಗ್ಲಾಸ್ ಹೈಸ್ಕೂಲ್‍ನ ಶಾಲೆಯ ಮಾಜಿ ವಿದ್ಯಾರ್ಥಿ ನಿಕೊಲಾಸ್ ಕ್ರೂಸ್(19) ಶಾಲೆಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿ 17 ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ. ಗುಂಡಿನ ದಾಳಿ ನಡೆದ ಕೆಲವು ಗಂಟೆಗಳಲ್ಲಿ ಆರೋಪಿ ನಿಕೊಲಾಸ್ ನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ಅಶಿಸ್ತಿನ ಕಾರಣ ಶಾಲೆಯಿಂದ ಹೊರಹಾಕಲಾಗಿತ್ತು. ನಿಕೊಲಾಸ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ.


























































