Tag: school

  • ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಬೆಂಂಗಳೂರು: ಮಕ್ಕಳು ಬ್ಯಾಗ್ ಯೂನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋಗುವಾಗ ಪೋಷಕರು ನೂರು ಕನಸು ಗರಿಗೆದರುತ್ತದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಭವಿಷ್ಯ ಮಾದಕ ವ್ಯಸನದೊಳಗೆ ಬಂಧಿಯಾಗುತ್ತಿದೆ. ಶಾಲಾ ಮಕ್ಕಳನ್ನೇ ಈ ಕೆಟ್ಟ ಜಾಲ ಟಾರ್ಗೆಟ್ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯೇ ಭಯಾನಕ ಸತ್ಯವನ್ನು ಹೊರಹಾಕಿದೆ.

    ಪಾನಿಪುರಿಯಲ್ಲಿ ಡ್ರಗ್ಸ್ ಹಾಕಿಕೊಡಲಾಗುತ್ತಿದೆ. ಬೆಂಗಳೂರು ಡ್ರಗ್ಸ್ ಜಾಲದ ಸಿಟಿಯಾಗಿದೆ ಎಂದು ಶಾಸಕ ವಿಜಯ್ ಕುಮಾರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದಾಗ ಇದು ಸಾಧ್ಯನೇ ಇಲ್ಲ ಎಂದು ಹೇಳಿದ್ದರು. ಆದರೆ ಇದು ನಿಜ ಅಂತಾ ಆರೋಗ್ಯ ಇಲಾಖೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

    ಶಾಲೆಯ ಅಕ್ಕಪಕ್ಕದಲ್ಲಿ ಪಾನಿಪುರಿಯೊಳಗೆ, ಐಸ್ ಕ್ರೀಂನಲ್ಲಿಯೇ ಮಕ್ಕಳಿಗೆ ಡ್ರಗ್ಸ್ ರುಚಿ ತೋರಿಸುವ ಜಾಲ ಬೆಳೆದಿದೆ. ಈ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಆದ್ದರಿಂದ ಈಗಾಗಲೇ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೊಟ್ಟಿದ್ದು, ಶಾಲೆಯ ನೂರು ಮೀಟರ್ ಅಂತರದಲ್ಲಿರುವ ಅನುಮಾನಸ್ಪದ ಶಾಪ್, ಐಸ್‍ಕ್ರೀಂ ಪಾನೀಪುರಿ ಅಂಗಡಿಗಳ ಮೇಲೆ ಕಣ್ಣಿಡುವಂತೆ ಆದೇಶಿಸಿಲಾಗಿದೆ. ಅಲ್ಲದೇ ಪೋಷಕರಿಗೂ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಜಂಟಿ ಆಯುಕ್ತ ಹರ್ಷವರ್ಧನ್ ಹೇಳಿದ್ದಾರೆ.

    ಮಕ್ಕಳ ಬದುಕು ಕಸಿದುಕೊಳ್ಳುವ ಈ ಜಾಲದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಇದ್ದರೆ ದೂರು ನೀಡುವಂತೆ ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ವಿಭಾಗ ತನಿಖಾಧಿಕಾರಿಗಳ ತಂಡ ರಚನೆ ಮಾಡಿಕೊಂಡು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿವೆ.

  • ಶಾಲೆಗೆ ಚಕ್ಕರ್ ಹಾಕಿ ಗಾಂಜಾ ಹೊಡೆಯುತ್ತಿದ್ದ ವಿದ್ಯಾರ್ಥಿಗಳು- ದೂರು ನೀಡಿದ್ದಕ್ಕೆ 5 ಮನೆಗಳ ಗಾಜು ಒಡೆದ್ರು

    ಶಾಲೆಗೆ ಚಕ್ಕರ್ ಹಾಕಿ ಗಾಂಜಾ ಹೊಡೆಯುತ್ತಿದ್ದ ವಿದ್ಯಾರ್ಥಿಗಳು- ದೂರು ನೀಡಿದ್ದಕ್ಕೆ 5 ಮನೆಗಳ ಗಾಜು ಒಡೆದ್ರು

    ಬೆಂಗಳೂರು: ಶಾಲೆಯಲ್ಲಿ ಮಕ್ಕಳು ವಿದ್ಯೆ ಕಲಿಯಲು ಬರುತ್ತಾರೆ. ಶಾಲೆಯನ್ನ ವಿದ್ಯಾದೇಗುಲ ಎಂದು ಪೂಜೆ ಮಾಡುತ್ತಾರೆ. ಅದರೆ ಅಂತಹ ಶಾಲೆಯಲ್ಲಿ ವಿದ್ಯಾರ್ಥಿಗಳು ಗಾಂಜಾ ಹೊಡೆದು ಪುಂಡಾಟ ನಡೆಸ್ತಾರೆ ಎಂದರೆ ಎಲ್ಲರೂ ಸಹ ಒಂದು ನಿಮಿಷ ಶಾಕ್ ಗೆ ಒಳಗಾಗ್ತಾರೆ.

    ಬೆಂಗಳೂರು ಹೊರವಲಯದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಗಾಂಜಾ ಹೊಡೆಯುವುದಲ್ಲದೇ ಶಾಲೆಗೆ ಚಕ್ಕರ್ ಹಾಕಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಶಾಲೆಗೆ ಸ್ಥಳೀಯರು ದೂರು ನೀಡಿದ್ದು, ನಮ್ಮ ಮೇಲೆ ದೂರು ಕೊಡುತ್ತೀರಾ ಎಂದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಗಾಂಜಾ ಮತ್ತಿನಲ್ಲಿ 5 ಮನೆಗಳ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ.

    ಈ ಬಗ್ಗೆ ಶಾಲೆಯ ಪಕ್ಕದಲ್ಲಿಯೇ ಇರುವ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಿಎಂ ತವರು ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

    ಸಿಎಂ ತವರು ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಪ್ರತಿಭಟನೆಗೆ ಕುಳಿತಿದ್ದಾರೆ.

    ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ತರಗತಿ ಬಹಿಷ್ಕರಿಸಿ ಬಿರು ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಯಲ್ಲಿ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳು ಇಲ್ಲ. ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಬಯಲು ಬಹಿರ್ದೆಸೆಗೆ ಹೋಗಲು ಮುಜುಗರ ಮತ್ತು ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆಗೆ ಬೀಗ ಹಾಕಿ ಬಿಸಿಲಲ್ಲಿ ಕೂತು ಪ್ರತಿಭಟಿಸಿದ್ದಾರೆ.

    ಮೂಲಭೂತ ಸೌಕರ್ಯಗಳ ಸಮಸ್ಯೆ ಬಗ್ಗೆ ಶಿಕ್ಷಣಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

  • ಸಿಎಂ ಬರ್ತಾರೆ ಅಂತ ಹಂಪ್ಸ್ ನೆಲಸಮ- ರಸ್ತೆ ದಾಟಲು ಶಾಲಾ ಮಕ್ಕಳ ಪರದಾಟ

    ಸಿಎಂ ಬರ್ತಾರೆ ಅಂತ ಹಂಪ್ಸ್ ನೆಲಸಮ- ರಸ್ತೆ ದಾಟಲು ಶಾಲಾ ಮಕ್ಕಳ ಪರದಾಟ

    ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಾರೆಂದು ಹಂಪ್ಸ್ ನ ನೆಲಸಮ ಮಾಡಿಲಾಗಿದ್ದು, ಇದೀಗ ಸಿಎಂ ಅವರಿಂದಾಗಿ ಒಂದು ಗ್ರಾಮದ ಮಕ್ಕಳು ಜೀವಭಯದಿಂದ ಶಾಲೆಗೆ ತೆರಳಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿದಿನ ಭಯದಲ್ಲಿ ಓಡಾಡುತ್ತಿದ್ದಾರೆ. ಈ ಶಾಲೆ ಪಕ್ಕದಲ್ಲಿಯೇ ಮಿರಜ್-ಗೋಟೂರ್ ರಾಜ್ಯ ಹೆದ್ದಾರಿ ಇದೆ. ಮಕ್ಕಳು ರಸ್ತೆ ದಾಟುವಾಗ ಅಪಘಾತಗಳು ಸಂಭವಿಸಬಾರದು ಎಂದು ಲೋಕೋಪಯೋಗಿ ಇಲಾಖೆ ವೇಗ ನಿಯಂತ್ರಕಗಳನ್ನು ಅಳವಡಿಸಿತ್ತು. ಆದರೆ ಮೂರು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಈ ರಸ್ತೆಯಲ್ಲಿ ಬರುತ್ತಾರೆ ಎಂದು ರಸ್ತೆಯಲ್ಲಿದ್ದ ಹಂಪ್ಸ್ ಗಳನ್ನು ತೆಗೆಯಲಾಗಿತ್ತು. ಇದಾದ ಬಳಿಕ ಪುನಃ ವೇಗ ನಿಯಂತ್ರಕ ಅಳವಡಿಸಲು ಲೋಕೋಪಯೋಗಿ ಇಲಾಖೆ ಮನಸ್ಸು ಮಾಡಿಲ್ಲ.

    340 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಗೋಟೂರು ಪ್ರಾಥಮಿಕ ಶಾಲೆಗೆ ಆಗಮಿಸುತ್ತಾರೆ. ಮಕ್ಕಳು ಪ್ರತಿದಿನ ಜೀವ ಭಯದಲ್ಲೇ ರಸ್ತೆ ದಾಟುತ್ತಿದ್ದು, ಈಗಾಗಲೇ ಅಪಘಾತದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಎಸ್‍ಡಿಎಂಸಿ ಸದಸ್ಯ ರುದ್ರಗೌಡ ಪಾಟೀಲ ಹೇಳಿದ್ದಾರೆ.

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ಶಾಲೆಗೆ ಹೋಗಲ್ಲ ಎಂದಿದ್ದಕ್ಕೆ ಮಗನನ್ನ ಲೈಟ್ ಕಂಬಕ್ಕೆ ಕಟ್ಟಿಹಾಕಿದ ತಂದೆ!

    ಶಾಲೆಗೆ ಹೋಗಲ್ಲ ಎಂದಿದ್ದಕ್ಕೆ ಮಗನನ್ನ ಲೈಟ್ ಕಂಬಕ್ಕೆ ಕಟ್ಟಿಹಾಕಿದ ತಂದೆ!

    ಹೈದರಾಬಾದ್: ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಇಲ್ಲಿನ ಭದ್ರಾಚಲಂನಲ್ಲಿ ಈ ಘಟನೆ ನಡೆದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಡು ಬಿಸಿಲಿನಲ್ಲಿ ಬಾಲಕನನ್ನು ಕಂಬಕ್ಕೆ ಕಟ್ಟಿ ಶಿಕ್ಷಿಸಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ, ಬುಡಕಟ್ಟು ಜನಾಂಗದ ಈ ಅಪ್ರಾಪ್ತ ಬಾಲಕ ಗೊಲ್ಲ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕಮಲಾಪುರ್‍ನ ಆದರ್ಶ ಹೈ ಸ್ಕೂಲ್‍ನಲ್ಲಿ ಓದುತ್ತಿದ್ದಾನೆ. ಬಾಲಕ ಕಳೆದ ಒಂದು ವಾರದಿಂದ ಶಾಲೆಗೆ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ತಿಳಿದ ಮಕ್ಕಳ ಹಕ್ಕುಗಳ ಸಂಸ್ಥೆ ಬಾಲಲ ಹಕ್ಕುಲ ಸಂಘಂ, ಭದ್ರಾಚಲಂನ ಜಂಟಿ ಆಯುಕ್ತರಾದ ಪಮೇಲಾ ಸತ್ಪತಿ ಅವರಿಗೆ ವಿಷಯ ತಿಳಿಸಿದೆ. ಬಳಿಕ ಪೊಲೀಸ್ ತಂಡವನ್ನ ಗ್ರಾಮಕ್ಕೆ ಕಳಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಮುಕಲಪಲ್ಲಿ ಪೋಷಕರಿಗೆ ಕೌನ್ಸೆಲಿಂಗ್ ಮಾಡಿದ್ದಾರೆ. ಆದ್ರೆ ಪೋಷಕರು ಬಾಲಕನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆತನನ್ನು ಸರ್ಕಾರಿ ಹಾಸ್ಟೆಲ್‍ಗೆ ಕಳಿಸಬೇಕು ಎಂದು ಮಕ್ಕಳ ಹಕ್ಕುಗಳ ಸಂಘ ಒತ್ತಾಯಿಸಿದೆ.

    ಕಳೆದ ವಾರ ಕರೀಂನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ತಂದೆ ಕುಡಿತದ ಚಟದ ಬಗ್ಗೆ ಹಾಗೂ ಯಾವಾಗ್ಲೂ ನಿಂದಿಸುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದಾಗ, ತಂದೆಯನ್ನ ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.

  • ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ರುಂಡವನ್ನು ಕತ್ತರಿಸಿದ!

    ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ರುಂಡವನ್ನು ಕತ್ತರಿಸಿದ!

    ಭೋಪಾಲ್: ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಶಾಲೆಯ ಆವರಣದಲ್ಲೇ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ರುಂಡವನ್ನು ಕತ್ತರಿಸಿ ಕೊಲೆಗೈದ ಘಟನೆ ಮಧ್ಯಪ್ರದೇಶದಲ್ಲಿ ಅನುಪ್ಪುರ್ ನಲ್ಲಿ ನಡೆದಿದೆ.

    11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂಜಾ ಪನೀಕ(17) ತನ್ನ ಜೀವಶಾಸ್ತ್ರ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಲು ಮಧ್ಯಾಹ್ನ 12.30 ರ ಸುಮಾರಿಗೆ ಶಾಲೆಯ ತರಗತಿಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯೊಬ್ಬ ಶಿಕ್ಷಕಿಯ ಎದುರಲ್ಲೇ ಕತ್ತಿಯಿಂದ ಕೊಲೆ ಮಾಡಿದ್ದಾನೆ.

    63 ವರ್ಷದ ಆ ಶಿಕ್ಷಕಿಯೂ ಘಟನೆಯನ್ನು ನೋಡಿ ಆಘಾತಗೊಂಡಿದ್ದಾರೆ. ಕಣ್ಣಿಗೆ ಕನ್ನಡಕವನ್ನು ಧರಿಸಿರದ ಕಾರಣ ಕೊಲೆ ಮಾಡಿದವನನ್ನು ಗುರುತು ಹಿಡಿಯಲಾಗಲಿಲ್ಲ ಎಂದು ಶಿಕ್ಷಕಿಯೂ ಪೊಲೀಸರಿಗೆ ತಿಳಿಸಿದ್ದಾರೆ.

    ಶಿಕ್ಷಕಿಯ ಪ್ರಕಾರ ಆ ವ್ಯಕ್ತಿಯು ಬಾಲಕಿಯ ಹಿಂದೆ ಓಡಿ ಬಂದು ತನ್ನ ಕೈಯಲಿದ್ದ ಕತ್ತಿಯಿಂದ ಮೂರು ಬಾರಿ ಕುತ್ತಿಗೆಗೆ ಚುಚ್ಚಿದ್ದಾನೆ. ನಂತರ ಆ ಕತ್ತಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

    ನಗರ ಪ್ರದೇಶದಿಂದ ಶಾಲೆ ಸ್ವಲ್ಪ ದೂರ ಇರುವುದರಿಂದ ಸುತ್ತ ಮುತ್ತ ಕಮ್ಮಿ ಜನರಿದ್ದರು. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯ ಶವವನ್ನು ಮತ್ತು ಆ ಕತ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ.

    ಪೊಲೀಸರು ಬಾಲಕಿಯ ಕುಟುಂಬದವರಿಗೆ ಈ ಘಟನೆಯ ಬಗ್ಗೆ ಪ್ರಶ್ನಿಸಿದಾಗ, ಬಾಲಕಿಯ ಪೋಷಕರು ತಮ್ಮ ಕುಟುಂಬದವರಿಂದಲೇ ಯಾರೋ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

    ಆದರೆ ಪೊಲೀಸರಿಗೆ ಮತ್ತೊಂದು ಸಾವಿನ ಸುದ್ದಿಯಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆಯಾದ ಬಾಲಕಿಯ ಊರಿನ ಹತ್ತಿರ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ನೇಣು ಹಾಕಿಕೊಂಡ ಯುವಕನಿಗೂ ಮತ್ತು ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಏನಾದರೂ ಸಂಬಂಧ ಇದ್ಯಾ ಎನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

  • ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ತುಮಕೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೊರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ `ಯಾರೇ ನೀ ಮೋಹಿನಿ’ ಯ ಕಥೆ ಕೇಳಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ.

    ಹೌದು. ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋಕಿಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರಾವಾಹಿಯಲ್ಲಿನ ಭೂತದ ಕಥೆ ಕೇಳಿ ಇಬ್ಬರು ಮಕ್ಕಳು ಹೆದರಿ ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರಿದ್ದಲ್ಲದೇ ಪ್ರತಿಕ್ಷಾಗೂ ಹೆದರಿಸಿದ್ದಾಳೆ.

    ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಪ್ರತಿಕ್ಷಾ ಧಾರಾವಾಹಿಯಲ್ಲಿನ ಭೂತದ ಕಥೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

  • ಮಕ್ಕಳ ಜಗಳಕ್ಕೆ ಶಾಲೆಯ ಆವರಣದಲ್ಲೇ ಚಪ್ಪಲಿ, ಕಲ್ಲಿನಿಂದ ಹೊಡೆದಾಡಿಕೊಂಡ ಮಹಿಳೆಯರು! -ವಿಡಿಯೋ

    ಮಕ್ಕಳ ಜಗಳಕ್ಕೆ ಶಾಲೆಯ ಆವರಣದಲ್ಲೇ ಚಪ್ಪಲಿ, ಕಲ್ಲಿನಿಂದ ಹೊಡೆದಾಡಿಕೊಂಡ ಮಹಿಳೆಯರು! -ವಿಡಿಯೋ

    ಕಾರವಾರ: ಮಕ್ಕಳ ಜಗಳಕ್ಕೆ ಪೋಷಕರು ಮೂಗು ತೂರಿಸಿ ಶಾಲೆಯಲ್ಲಿಯೇ ಒಬ್ಬರಿಗೊಬ್ಬರು ಚಪ್ಪಲಿ, ಕಲ್ಲು ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಕಳೆದ ಮೂರು ದಿನದ ಹಿಂದೆ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯ ಮಕ್ಕಳ ನಡುವೆ ಗಲಾಟೆ ನಡೆದಿತ್ತು. ಬುಧವಾರ ಶಾಲೆ ಬಿಟ್ಟ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡ ವಿದ್ಯಾರ್ಥಿಯ ತಾಯಿ ಸುರೇಖಾ ಎಂಬುವವಳು ಮತ್ತೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.

    ಈ ಘಟನೆ ಊರಿನಲ್ಲಿ ಸದ್ದು ಮಾಡಿದ್ದು, ವಿಷಯ ತಿಳಿದ ಗ್ರಾಮದ ಪ್ರಮುಖರು ಚಪ್ಪಲಿಯಿಂದ ಹೊಡೆಸಿಕೊಂಡ ವಿದ್ಯಾರ್ಥಿ ಹಾಗೂ ಆಕೆಯ ತಾಯಿ ಕಾಂಚನ ಎಂಬುವವರೊಂದಿಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರಿಗೆ ಪ್ರಶ್ನೆ ಮಾಡಿದ್ದಾರೆ.

    ಘಟನೆ ಕುರಿತು ಶಾಲೆಯ ಎಸ್‍ಡಿಎಂಸಿ ಪೋಷಕರ ಸಭೆ ಕರೆದಿದ್ದು, ಈ ವೇಳೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಸುರೇಖಾ ಚೀಲದಲ್ಲಿ ಕಲ್ಲು ತುಂಬಿಕೊಂಡು ಬಂದಿದ್ದಾರೆ. ಸಭೆಯಲ್ಲಿ ಈಕೆಯ ವರ್ತನೆಯನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಒಪ್ಪದ ಈಕೆ ಕುಪಿತಗೊಂಡು ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲಿನಿಂದ ಸಭೆಗೆ ಬಂದ ಪೋಷಕರ ಮೇಲೆ ಏರ್ರಾಬಿರ್ರಿ ಕಲ್ಲು ತೂರಲು ಆರಂಭಿಸಿದಳು.

    ಇದರಿಂದಾಗಿ ಸಭೆಗೆ ಸೇರಿದ್ದ ಪೋಷಕರಿಗೂ ಸಿಟ್ಟು ಬಂದಿದ್ದು ರೊಚ್ಚಿಗೆದ್ದ ಕೆಲವು ಮಹಿಳೆಯರು ಈಕೆಗೂ ಗೂಸ ಕೊಟ್ಟಿದ್ದು ದೊಡ್ಡ ಕದನವೇ ನಡೆದಿದೆ. ಘಟನೆಯ ತೀವ್ರತೆ ಅರಿತ ಶಾಲೆಯ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ಶಾಂತಿ ಸಂಧಾನ ನಡೆಸಿ ಗಲಾಟೆ ನಡೆಸಿದ ಸುರೇಖಾರಿಂದ ಮುಚ್ಚಳಿಕೆಯನ್ನು ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.

    ಚಿಕ್ಕ ಮಕ್ಕಳ ಜಗಳಕ್ಕೆ ದೊಡ್ಡವರು ಎನಿಸಿಕೊಂಡವರು ಮೂಗು ತೂರಿಸಿ ಶಾಲೆಯಲ್ಲಿ ಮಕ್ಕಳ ಮುಂದೆಯೇ ಕಲ್ಲು, ಚಪ್ಪಲಿ ತೂರಾಟ ಮಾಡಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಗಲಾಟೆ ಮಾಡಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಸದ್ಯ ಮಹಿಳೆಯರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=0ZtHZp-d3fs

     

  • ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಲಕ್ನೋ: ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಳಬೇಕು ಎಂದು ಹೇಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನೊಬ್ಬ 6ನೇ ತರಗತಿಯ ಬಾಲಕಿಯನ್ನ ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಜಬಲ್‍ಪುರ್ ಕತ್ರಿ ಬಂಜರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಸದಾರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯೋಪಾಧ್ಯಾಯನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

    ಬಾಲಕಿಯ ತಂದೆ ದೂರು ನೀಡಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ ಎಂದು ಎಸ್‍ಪಿ ಕನೌಜ್ ಹರೀಶ್ ಚಂದ್ರ ಹೇಳಿದ್ದಾರೆ. ಮಂಗಳವಾರದಂದು ಬಾಲಕಿಯ ಪೋಷಕರು ಮುಖ್ಯೋಪಾಧ್ಯಾಯನ ವಿರುದ್ಧ ದೂರು ದಾಖಲಿಸಿದ್ದು, ಘಟನೆ ನಡೆದಾಗ ಬಾಲಕಿಯ ಜೊತೆ ಇದ್ದ ಶಾಲೆಯ ಇತರೆ ವಿದ್ಯಾರ್ಥಿನಿಯರು ಘಟನೆ ಬಗ್ಗೆ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

    ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಆಕೆಯನ್ನ ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದಾರೆ.