ಮಡಿಕೇರಿ: ಕೊಡಗಿನಲ್ಲಿ ಕಳೆದ 4 ದಿನಗಳಿಂದ ಮುಂಗಾರು ಮಳೆಯ ತೀವ್ರತೆ ಹೆಚ್ಚಾಗಿದ್ದು, ಇಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜೀವನದಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ಇನ್ನು ಭಾಗಮಂಡಲದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ `ತ್ರಿವೇಣಿ ಸಂಗಮ’ ದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಕಾವೇರಿಯ ನೀರು ಸ್ನಾನ ಘಟ್ಟದ ಮೆಟ್ಟಿಲುಗಳನ್ನು ಮೀರಿದೆ. ಹಾಗಾಗಿ ಯಾತ್ರಾತ್ರಿಗಳಿಗೆ ತಲಕಾವೇರಿ ತೆರಳಲು ಅವಕಾಶ ನಿರಾಕರಿಸಲಾಗಿದೆ.

ಬೆಳಗಾವಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ನಗರದ ಟಿಳಕವಾಡಿಯ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಳೆಯಿಂದ ಮನೆಯಲ್ಲಿನ ಸಾಮಾಗ್ರಿಗಳು ನೀರುಪಾಲಾಗಿದ್ದು, ನೀರು ಹೊರ ಹಾಕಲು ಜನರು ಪರದಾಟ ನಡೆಸಿದ್ದರು. ಇನ್ನು ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ದಬದಬೆ ಜಲಪಾತ ತುಂಬಿಹರಿಯುತ್ತಿದೆ. ಈ ಜಲಪಾತದಲ್ಲಿ ನೀರು ಹೆಚ್ಚಾಗಿದ್ದರಿಂದ ಅಶೋಕನಗರದಲ್ಲಿ ಇಪ್ಪತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತ್ತು.
ಬೀದರ್ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ್ದಾನೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಈ ಮಧ್ಯೆ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ರೈತರಿಗೆ, ವರುಣನ ಆಗಮನ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಕೋಲಾರದಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಸಿಡಿಲು ಬಡಿದು ಕರು ಸಾವನ್ನಪ್ಪಿದ್ದು, ಗೋಶಾಲೆಯ ಛಾವಣಿ ಕುಸಿದಿದೆ.

ಶಿವಮೊಗ್ಗದ ತುಂಗಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಗಾಜನೂರು ಅಣೆಕಟ್ಟೆ ಭರ್ತಿಯಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನ 12 ಗೇಟುಗಳನ್ನು ತೆರೆದು ನೀರು ಹೊರ ಬಿಡಲಾಗುತ್ತಿದೆ. ಇದು ಕೇವಲ 3.2 ಟಿಎಂಸಿ ಸಾಮಥ್ರ್ಯದ್ದಾಗಿದ್ದು, ರಾಜ್ಯದಲ್ಲಿಯೇ ತುಂಬಾ ಬೇಗ ನೀರು ತುಂಬುವ ಅಣೆಕಟ್ಟು ಇದಾಗಿದೆ. ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾದ ಪರಿಣಾಮ ಅಣೆಕಟ್ಟಿನಲ್ಲಿ 9000 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ಹೊರ ಹರಿವನ್ನೂ ಬಿಡಲಾಗುತ್ತಿದೆ.































