Tag: school

  • ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ಬೆಂಗಳೂರು: ದಿನೇ ದಿನೇ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಕೆರೆ, ಕುಂಟೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಕರಾವಳಿಯಲ್ಲಿ ಸ್ವಲ್ಪ ಬಿಡುವು ಕೊಟ್ಟ ವರುಣ ಈಗ ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಭಾಗಗಳಲ್ಲಿ ಅಬ್ಬರಿಸುತ್ತಿದ್ದಾನೆ. ಎಲ್ಲಿ ನೋಡಿದರು ನೀರು ನಿಂತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

    ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎನ್‍ಡಿಆರ್ ತಂಡ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿದೆ. ಮೂಲ್ಕಿ ಭಾಗದಲ್ಲಿ ನೆರೆಗೆ ಕಾರಣವಾಗಿದ್ದ ಶಾಂಭವಿ ನದಿಯಲ್ಲಿ ನೀರು ಇಳಿಕೆಯಾಗಿದೆ. ಆದರು ಇಲ್ಲಿನ ಕೃಷಿ ಜಮೀನು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿಲ್ಲ. ಹೀಗಾಗಿ ಶಿಬರೂರು, ಕಿಲೆಂಜೂರು ಭಾಗದ ಸಂತ್ರಸ್ತರಿಗಾಗಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಆರಂಭಿಸಲಾಗಿದೆ.

    ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆಆರ್‍ಎಸ್ ಭರ್ತಿಗೆ ಇನ್ನು 15.45 ಅಡಿ ಬಾಕಿ ಇದ್ದು, ಒಳಹರಿವು 10,124 ಕ್ಯೂಸೆಕ್ ಇದ್ದರೆ, ಹೊರ ಹರಿವು 3,494 ಕ್ಯೂಸೆಕ್ ಇದೆ. ಬರೋಬ್ಬರಿ 15 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ತುಂಗಭದ್ರಾ ಡ್ಯಾಂನಲ್ಲಿ 42 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಹಾರಂಗಿ ಜಲಾಶಯ ಭರ್ತಿಯಾಗಿದ್ದು ಒಳ ಹರಿವು ಹೆಚ್ಚಳವಾಗಿದೆ.

    ನಿರಂತರ ಮಳೆಯಿಂದಾಗಿ ಪಶ್ಚಿಮ ಘಟ್ಟದಿಂದ ಹರಿದು ಬರುವ ಬಹುತೇಕ ನದಿಗಳು ತುಂಬಿಕೊಂಡಿದೆ. ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧಿವಿನಾಯಕ ಕ್ಷೇತ್ರಕ್ಕೆ ನದಿಯ ನೆರೆ ನೀರು ನುಗ್ಗಿದೆ. ದೇವಸ್ಥಾನದ ಅಂಗಣದ ಒಳಭಾಗದಲ್ಲಿ ಭಾನುವಾರ ರಾತ್ರಿಯಿಂದ ಎರಡು ಅಡಿಯಷ್ಟು ನೀರು ನಿಂತಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಗಳು ನೀರಿನ ಮಧ್ಯೆಯೇ ನಡೆದಿದೆ. ಭಕ್ತರು ನೀರಿನಲ್ಲಿ ನಿಂತೇ ದೇವರ ಸೇವೆ ಪೂರೈಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದಾಗ ಪ್ರತಿವರ್ಷವೂ ನೆರೆ ನೀರು ದೇಗುಲಕ್ಕೆ ನುಗ್ಗುತ್ತದೆ.

    ಉಡುಪಿ ಜಿಲ್ಲೆಯಲ್ಲಿ ಮೂರು ದಿನ ನಿರಂತರ ಮುಂಗಾರು ಮಳೆ ಆರ್ಭಟಿಸಿದ್ದು ಸ್ವರ್ಣಾ ನದಿ ಉಕ್ಕಿ ಹರಿದಿದೆ. ನದಿಯ ರಭಸಕ್ಕೆ ಬಜೆ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕಾರ್ಕಳ, ಉಡುಪಿಯಲ್ಲಿ ಸುರಿದ ಧಾಕಾರಾರ ಮಳೆ ಪರಿಣಾಮ ಅಣೆಕಟ್ಟು ಮೇಲಿಂದ ನದಿ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಪುನರ್ವಸು ಮಳೆಗೆ ಉಡುಪಿ ಜಿಲ್ಲೆ ತತ್ತರಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಉಡುಪಿನಗರ, ಮಲ್ಪೆ, ಬ್ರಹ್ಮಾವರ ಮತ್ತು ಕೋಟ ಭಾಗಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕುಂದಾಪುರದ ಖಾರ್ವಿಕೆರೆಯಲ್ಲಿ ಮೂರು ಮನೆಗಳು ಕುಸಿದಿವೆ. ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಇನ್ನು ಕಾರ್ಕಳ ತಾಲೂಕಿನಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಕಟಪಾಡಿಯ ಕಲ್ಲಾಪುವಿನಲ್ಲಿ ರಾಷ್ಡ್ರೀಯ ಹೆದ್ದಾರಿಯಲ್ಲಿ ನೆರೆ ನೀರು ಆವರಿಸಿದೆ. ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ತುರ್ತು ಕಾಮಗಾರಿಗೆ ಆದೇಶ ನೀಡಿದ್ದಾರೆ.

  • ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

    ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

    ಮಡಿಕೇರಿ: ಕೊಡಗಿನಲ್ಲಿ ಭಾನುವಾರ ಕೊಂಚ ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದ ಹಲವೆಡೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

    ಕಳೆದ ರಾತ್ರಿಯೇ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಇನ್ನೂ ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಕಾಕೋಟುಪರಂಬು, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ಬಾಳೆಲೆ, ಟಿ.ಶೆಟ್ಟಿಗೇರಿ ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಮರ ಬಿದ್ದಿದ್ದು ಅದನ್ನು ತೆರವುಗೊಳಿಸಲಾಗುತ್ತಿದೆ.

    ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿಯೂ ಮಳೆಯ ಆರ್ಭಟ ಮುಂದುವರಿದಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಅದೇ ರೀತಿ ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

    ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಸುರಿದರೆ ಭಾರೀ ನಷ್ಟ ಅನುಭವಿಸುವ ಸಾಧ್ಯತೆ ಇದೆ.

  • ಕೊಡಗಲ್ಲಿ ಮಳೆ, ಶಾಲೆ-ಕಾಲೇಜಿಗೆ ರಜೆ – ಉಡುಪಿಯಲ್ಲಿ ಭಾರೀ ಮಳೆ, ಆದ್ರೆ ರಜೆ ಕ್ಯಾನ್ಸಲ್

    ಕೊಡಗಲ್ಲಿ ಮಳೆ, ಶಾಲೆ-ಕಾಲೇಜಿಗೆ ರಜೆ – ಉಡುಪಿಯಲ್ಲಿ ಭಾರೀ ಮಳೆ, ಆದ್ರೆ ರಜೆ ಕ್ಯಾನ್ಸಲ್

    ಕೊಡಗು/ಉಡುಪಿ: ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳುತ್ತಿರುವುದಿಂದ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಉಡುಪಿಯಲ್ಲಿ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುವ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾದ ಶ್ರೀವಿದ್ಯಾ ರವರು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

    ಉಡುಪಿಯಲ್ಲೂ ಮಳೆ ತನ್ನ ಆರ್ಭಟ ಮುಂದುವರೆಸಿದ್ದು, ಕಳೆದೊಂದು ದಿನದಿಂದ ಮಳೆ ಮುಂದುವರೆಯುತ್ತಲೇ ಇದೆ. ಜಿಲ್ಲೆಯ ಕಾಪು, ಬೈಂದೂರು ಹಾಗೂ ಹೆಬ್ರಿ ತಾಲೂಕಿನಾದ್ಯಂತ ವರ್ಷಧಾರೆ ವ್ಯಾಪಕವಾಗಿ ಮುಂದುವರೆದಿದೆ. ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜಾ ಎನ್ನುವ ಸುದ್ದಿ ವಾಟ್ಸಪ್ ನಲ್ಲಿ ಹರಿದಾಡಿದ್ದರಿಂದ ಪೋಷಕರು ಗೊಂದಲಕ್ಕೊಳಗಾಗಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಯಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್‍ರವರು ಉಡಿಪಿ ಜಿಲ್ಲೆಯಾದ್ಯಂತ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ತಿಳಿಸಿದ್ದಾರೆ.

    ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ತಾಲೂಕು ಬಿಇಓ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

  • ಒಂದೇ ಬಣ್ಣದ ಒಳಉಡುಪು ಧರಿಸುವಂತೆ ವಿದ್ಯಾರ್ಥಿನಿಯರಿಗೆ ಶಾಲೆಯ ನ್ಯೂ ರೂಲ್ಸ್

    ಒಂದೇ ಬಣ್ಣದ ಒಳಉಡುಪು ಧರಿಸುವಂತೆ ವಿದ್ಯಾರ್ಥಿನಿಯರಿಗೆ ಶಾಲೆಯ ನ್ಯೂ ರೂಲ್ಸ್

    ಮುಂಬೈ: ಪುಣೆಯ ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರಿಗೆ ಒಂದೇ ರೀತಿಯ ಬಣ್ಣದ ಒಳಉಡುಪು ಧರಿಸಬೇಕೆಂದು ಹೊಸ ವಸ್ತ್ರ ನಿಯಮವನ್ನು ಜಾರಿ ಮಾಡಿದೆ.

    ಪುಣೆಯ ಮಯೀರ್ ಎಂಐಟಿಯ ಶಾಲೆ ಈ ರೀತಿ ಹೊಸ ನಿಯಮವನ್ನು ಮಾಡಿದೆ. ವಿದ್ಯಾರ್ಥಿನಿಯರು ಬಿಳಿ ಬಣ್ಣದ ಅಥವಾ ಚರ್ಮದ ಬಣ್ಣದ ಒಳ ಉಡುಪುಗಳನ್ನು ಶಾಲೆಗೆ ಧರಿಸಿಕೊಂಡು ಬರಬೇಕು ಎಂದು ಆದೇಶ ಹೊರಡಿಸಿದೆ. ಜೊತೆಗೆ ಶಾಲಾ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವ ಸಲುವಾಗಿ ಈ ಹೊಸ ನಿಯಮವನ್ನು ಮಾಡಲಾಗಿದೆ ಎಂದು ಶಾಲೆ ತಿಳಿಸಿದೆ.

    ಶಾಲೆ ಈ ನಿಯಮದ ಬಗ್ಗೆ ವಿದ್ಯಾರ್ಥಿನಿಯರ ದಿನಚರಿ ಡೈರಿಯಲ್ಲಿ ಬರೆದು ಪೋಷಕರ ಬಳಿ ಸಹಿ ಮಾಡಿಸಿಕೊಂಡು ಬರುವಂತೆ ತಿಳಿಸಿದೆ. ಬಳಿಕ ಶಾಲೆಯ ಈ ಹೊಸ ನಿಯಮದ ವಿರುದ್ಧ ಆಕ್ರೋಶಗೊಂಡು ವಿದ್ಯಾರ್ಥಿಗಳ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

    ಅಷ್ಟೇ ಅಲ್ಲದೇ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಅನೇಕ ಸಲ ಟಾಯ್ಲೆಟ್ ಬಳಸಲು ಸಹ ಅನುಮತಿಸುವುದಿಲ್ಲ. ಅವರು ಧರಿಸಬೇಕಾದ ಸ್ಕರ್ಟ್ ನ ಉದ್ದವನ್ನೂ ಶಾಲೆ ಅವರೇ ಉಲ್ಲೇಖಿಸಿದ್ದಾರೆ. ಈ ಹೊಸ ನಿಯಮಕ್ಕೆ ನಮ್ಮ ಬಳಿ ಸಹಿ ಹಾಕಿಸಿಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

    ಶಾಲೆ ಮಾಡಿದ ನಿಯಮವನ್ನು ಉಲ್ಲಂಘಿಸಿದರೆ ವಿದ್ಯಾರ್ಥಿನಿಯರು ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ನಿಯಮದಿಂದ ಪೋಷಕರಿಗೆ ಮತ್ತು ವಿದ್ಯಾಥಿಗಳಿಗೆ ತೊಂದರೆ ಆಗುವುದಿಲ್ಲ. ಶಾಲೆಯ ಈ ನಿಯಮ ಒಳ್ಳೆಯದಾಗಿದೆ ಎಂದು ಎಂಐಟಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಚಿತ್ರ ಕರದ್ ನಗರೆ ಹೇಳಿದ್ದಾರೆ.

    ನಾವು ಈ ಹಿಂದೆ ಕೆಲವು ಅನುಭವಗಳನ್ನು ಹೊಂದಿದ್ದೇವೆ. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರಿಂದ ನಾವು ಯಾವುದೇ ರಹಸ್ಯ ಕಾರ್ಯಸೂಚಿಯನ್ನು ಹೊಂದಿಲ್ಲ. ಇದು ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಠಿಯಿಂದ ಮಾಡಲಾಗಿದೆ ಎಂದು ತಮ್ಮ ಹೊಸ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ.

  • ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

    ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

    ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಸಮೀಪದ ಆಲತ್ತಿಕಾಡವಿನ ಸೇತುವೆ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವಂತಿದೆ.

    ಚಂದ್ರಗಿರಿ ನದಿಯನ್ನು ಈ ತೂಗು ಸೇತುವೆ ಮೂಲಕ ದಾಟಬೇಕಂದರೆ ದೊಡ್ಡ ರೀತಿಯ ಸಾಹಸವನ್ನೇ ಮಾಡಬೇಕು. ಈ ತೂಗು ಸೇತುವೆ ಈಗಲೂ ಆಗಲೂ ಬೀಳುವ ಸ್ಥಿತಿಯಲ್ಲಿದೆ. ಆದರೆ ದಿನನಿತ್ಯ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಅಂದರೆ ಇದೇ ತೂಗುಯ್ಯಲೆಯಲ್ಲೇ ತೇಲಾಡುತ್ತಾ, ತೆವಳುತ್ತಾ ಹೋಗಬೇಕು.

    ನದಿಯ ಹಿಂಭಾಗದಲ್ಲಿ ಆಲತ್ತಿಕಾಡವು, ದೊಡ್ಡಚೇರಿ ಎಂಬ ಕುಗ್ರಾಮಗಳಿದ್ದು, ಇಲ್ಲಿ 60ಕ್ಕೂ ಹೆಚ್ಚು ಕುಟುಂಬಗಳಿವೆ. ದಿನನಿತ್ಯ 1 ನೇ ತರಗತಿಯಿಂದ 7 ನೇ ತರಗತಿವರೆಗಿನ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೇತುವೆಯಲ್ಲಿ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಾರೆ. ಕೆಲವೊಮ್ಮೆ ಕಾಲು ಜಾರಿ ಬಿದ್ದು ಕೆಲ ವಿದ್ಯಾರ್ಥಿಗಳು ನೀರಿಗೆ ಬಿದ್ದು ಅದೃಷ್ಟವಶಾತ್ ಬದುಕಿ ಬಂದಿರೋ ಅನೇಕ ನಿದರ್ಶನಗಳಿವೆ. ಆದರೂ ವಿಧಿಯಿಲ್ಲ. ವಿದ್ಯಾರ್ಥಿಗಳು, ಗ್ರಾಮಸ್ಥರು  ಇದೇ ಸೇತುವೆಯಲ್ಲಿ ದಿನನಿತ್ಯ ಸರ್ಕಸ್ ಮಾಡಬೇಕು.

    ನದಿಯ ಆ ಬದಿಯಿಂದ ಈ ಬದಿಗೆ ಬರಲು ಬಿದಿರಿನಿಂದ ತೂಗು ಸೇತುವೆ ನಿರ್ಮಿಸಲಾಗಿದೆ. ಕಳೆದ ಮೂರು ದಶಕಗಳಿಂದ ಇದನ್ನು ಹಾಗೆಯೇ ಅಪಾಯ ತಂದೊಡ್ಡುವ ಈ ತೂಗುಸೇತುವೆಯನ್ನ ಪ್ರತಿ ವರ್ಷ ಪಂಚಾಯ್ತಿ ವತಿಯಿಂದ ನಾಮಕಾವಸ್ತೆಯಾಗಿ ದುರಸ್ತಿ ಮಾಡಲಾಗುತ್ತೆದೆ ಹೊರತು ಶಾಶ್ವತ ಪರಿಹಾರ ಮಾಡಿಲ್ಲ. ಪರಿಣಾಮ ಈ ಮುರಿದ ತೂಗು ಸೇತುವೆಯಲ್ಲೇ ವಿದ್ಯಾರ್ಥಿಗಳು ಸರ್ಕಸ್ ಮಾಡುತ್ತ ಶಾಲೆಗೆ ಹೋಗ ಬೇಕಾದ ಅನಿವಾರ್ಯತೆ ಎದುರಾಗಿದೆ.

    ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ತುಂಬಾ ತಡವಾಗಿ ಬಿಲ್ ಆಗುತ್ತೆ ಅನ್ನೋ ಕಾರಣಕ್ಕೆ ಈ ಬಾರಿ ಯಾರೂ ಕೂಡಾ ಸೇತುವೆಯ ದುರಸ್ತಿಗೇ ಮುಂದಾಗಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಿ ಅಂತ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

    ಭಾಗಮಂಡಲದಿಂದ ಸುಮಾರು 25 ಕಿ.ಮೀ ದೂರವಿರುವ ಈ ಕುಗ್ರಾಮಗಳು ಭೌಗೋಳಿಕವಾಗಿ ಮಡಿಕೇರಿ ತಾಲೂಕಿಗೆ ಸೇರಿದರೂ ಕ್ಷೇತ್ರ ವಿಂಗಡನೆಯಿಂದಾಗಿ ಇಲ್ಲಿಯ ಜನರು ವಿರಾಜಪೇಟೆ ಶಾಸಕರನ್ನ ಚುನಾಯಿಸಬೇಕಾಗಿದೆ. ಈ ಊರು ಭೌಗೋಳಿಕವಾಗಿ ಮಡಿಕೇರಿ ತಾಲೂಕಿಗೆ ಸೇರಿದರೂ ಕ್ಷೇತ್ರ ವಿಂಗಡನೆಯಿಂದಾಗಿ ಇಲ್ಲಿಯ ಜನರು ವಿರಾಜಪೇಟೆ ಶಾಸಕರನ್ನ ಚುನಾಯಿಸಬೇಕಾಗಿದೆ. ಹೀಗಾಗಿ ಇಲ್ಲಿಯವರು ಶಾಸಕ ಕೆ.ಜಿ ಬೋಪಯ್ಯ ಅವರ ಕೃಪೆಗೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

  • ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಬೀದರ್: ನಗರದ ಮಹಾದೇವ್ ಕಾಲೋನಿಯಲ್ಲಿ ಖಾಸಗಿ ಶಾಲೆಯೊಂದು ಅಡ್ಮಿಷನ್ ಮಾಡಿಕೊಂಡ ಬಳಿಕ ಬೀಗ ಹಾಕಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ.

    ಶಿಕ್ಷಣ ಹಕ್ಕು ಕಾಯ್ದೆಯಡಿ ಅನುದಾನವಿಲ್ಲದ ಖಾಸಗಿ ಶಾಲೆಯಲ್ಲಿ ಸೇರಿರೋ ಮಕ್ಕಳ ಸ್ಥಿತಿ ಡೋಲಾಯಮಾನವಾಗಿದೆ. ನಗರದ ಮಹಾದೇವ್ ಕಾಲೋನಿಯಲ್ಲಿನ ಶೆಡ್ ನಲ್ಲಿ ನಡೆಸುತ್ತಿದ್ದ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬೀಗ ಬಿದ್ದಿದೆ. ಶಾಲೆಗೆ ಅನುದಾನವಿಲ್ಲದ ಕಾರಣ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚಿದ್ದಾರೆ.

    ಶೈಕ್ಷಣಿಕ ವರ್ಷದಲ್ಲಿ ಆರ್ ಟಿಇ ವತಿಯಿಂದ 10 ಹಾಗೂ ಇತರೆ 60 ವಿದ್ಯಾರ್ಥಿಗಳು ಭಾರತಿ ಶಾಲೆಗೆ ದಾಖಲಾಗಿದ್ದರು. ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಅಡ್ಮಿಷನ್ ನಂತರ ಅನುದಾನ ಸಿಕ್ಕಿಲ್ಲವೆಂದು ಶಾಲೆಗೆ ಏಕಾಏಕಿ ಬೀಗ ಹಾಕಿದೆ.

    ಶಾಲೆಗೆ ದಿಢೀರನೇ ಬೀಗ ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಂಗಾಲಾಗಿದ್ದಾರೆ. ಇದರಿಂದಾಗಿ ಮಕ್ಕಳ ಟಿಸಿ ಹಾಗೂ ಮಾಕ್ಸ್ ಕಾರ್ಡ್ ಸಿಗದೇ ಬೇರೆ ಶಾಲೆಗೆ ಅಡ್ಮಿಷನ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಹಾಸನ: ಕುಡಿತದ ಚಟಕ್ಕೆ ಬಿದ್ದವರು ಮನ, ಮನೆಯನ್ನು ಮಾರಿಕೊಳ್ಳುವರು ಎಂಬ ಮಾತಿದೆ. ಆ ಮಾತಿಗೆ ಪೂರಕವಂತೆ ಈ ವರದಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಹೌದು ಹಾಸನ ಜಲ್ಲೆ ಶೆಟ್ಟಿ ಹಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವೃದ್ಧೆಯ ಕರುಣಾಜನಕ ಕಥೆ ಇದು.

    ಹಾಸನದ ನಿವಾಸಿಯಾಗಿರುವ ಜಯಲಕ್ಷ್ಮಮ್ಮ ಆಸ್ತಿ ಪಾಸ್ತಿ ಹೊಂದಿದ್ದ ಐಶ್ವರ್ಯವಂತ, ಗಂಡ ಮತ್ತು ಮಗನೊಂದಿಗೆ ಸುಖ ಸಂಸಾರದ ಜೀವನ ನಡೆಸುತ್ತಿದ್ದರು. ಗಂಡ ತೀರಿಹೋದ ನಂತರ ಮಗನಿಗೆ ಆಸರೆಯಾಗಿದ್ದರು. ಮಗನಿಗೆ ಮದುವೆ ಮಾಡಿ ಮಗ ಮತ್ತು ಸೊಸೆ, ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ಮಗ ನವೀನ್ ಬರೋಬ್ಬರಿ 40 ಆಟೋಗಳ ಮಾಲೀಕನಾಗಿದ್ದ. ಆದರೆ ಕುಡಿತದ ಚಟಕ್ಕೆ ಬಿದ್ದು ಆಸ್ತಿ ಮನೆಯನ್ನು ಮಾರಿಬಿಟ್ಟ. ಮಗನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ಬೆಂಗಳೂರಿನಲ್ಲಿ ರೈಲಿಗೆ ತಲೆಕೊಟ್ಟಿದ್ದಾರೆ.

    ಆದರೆ ಮಗ ಎರಡನೇ ಮದ್ವೆಯಾಗಿ ವೃದ್ಧೆ ತಾಯಿಯ ತಾಳಿಯನ್ನು ಕಸಿದುಕೊಂಡು ಕುಡಿತಕ್ಕೆ ಮಾರಿಕೊಂಡು ಬಳಿಕ ಸ್ವತಃ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಗನ ಸಾವನ್ನು ಕಂಡು ವೃದ್ಧೆ ಜಯಲಕ್ಷ್ಮಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕೆಲದಿನಗಳ ಕಾಲ ಕೋಮಾದಲ್ಲಿದ್ದು ಮರಳಿ ಪ್ರಜ್ಞೆ ಪಡೆದುಕೊಂಡಿದ್ದಾರೆ. ಮಗನ ಎರಡನೇ ಪತ್ನಿ ಮನೆಯೂ ಸಹ ತವರು ಸೇರಿದ್ದು, ಸದ್ಯ ಅಜ್ಜಿ ಮೊಮ್ಮಗ ಇಬ್ಬರು ಬೀದಿ ಪಾಲಾಗಿದ್ದಾರೆ.

    ಸದ್ಯ ಸ್ವಂತ ಇರಲು ಮನೆ ಇಲ್ಲ, ತಿನ್ನಲೂ ಊಟ ಇಲ್ಲದ ಪರಿಸ್ಥಿತಿಯಲ್ಲಿರುವ ಅಜ್ಜಿ ಜಯಲಕ್ಷಮ್ಮ ಸ್ಥಳೀಯರ ಸಹಾಯದಿಂದ ಮೊಮ್ಮಗನಿಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. 4ನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್‍ಗೆ ಪರೀಕ್ಷಾ ಶುಲ್ಕ ಕಟ್ಟಿಲ್ಲವೆಂದು ಶಾಲೆಯವರು ಪರೀಕ್ಷೆಗೆ ಕೂರಿಸದೆ ಹೊರ ಹಾಕಿದ್ದರು. ಇದರಿಂದ ಈಗ ದಾರಿ ಕಾಣದೇ ಕಂಗಾಲಾಗಿರುವ ಅಜ್ಜಿ, ಮೊಮ್ಮಗನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿ ತಾನೂ ಕೂಡ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

    ಇಷ್ಟೆಲ್ಲ ಕಷ್ಟಗಳ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಈ ಅಜ್ಜಿ ನನಗೆ ಏನೂ ಬೇಡ ನಾನು ಅನಾಥಾಶ್ರಮದಲ್ಲಿ ಜೀವಿಸುತ್ತೇನೆ. ನನ್ನ ಮೊಮ್ಮಗ ಪ್ರಜ್ವಲ್‍ಗೆ ವಿದ್ಯಾಭ್ಯಾಸ ಕೊಡಿಸಿ ಅವನ ಭವಿಷ್ಯ ಪ್ರಜ್ವಲಿಸುವಂತೆ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

  • ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ

    ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ

    ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಮುಚ್ಚರೆ ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿದಿರುವ ಪರಿಣಾಮಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೇವಸ್ಥಾನದ ಆವರಣದಲ್ಲೇ ಪಾಠ ಕೇಳುತ್ತಿದ್ದಾರೆ.

    ಮುಚ್ಚರೆ ಗ್ರಾಮದಲ್ಲಿನ ಸರ್ಕಾರಿ ಶಾಲೆಯು ಕುಸಿದ ಕಾರಣ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದಿದೆ. ಈ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಗಳಿದ್ದು, ಒಟ್ಟು 25 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಶಾಲೆ ಕಟ್ಟಡ ಕುಸಿದು ಹಲವು ದಿನಗಳೇ ಕಳೆದರೂ, ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ. ಶಾಲಾ ಕಟ್ಟಡವು ಸಂಪೂರ್ಣ ಶಿಥಿಲವಾಗಿದ್ದು, ಕೊಠಡಿಯಲ್ಲಿ ಮೇಲ್ಛಾವಣೆಯ ಕುಸಿದು ಬೀಳುತ್ತಿದೆ. ಇದು ಮಕ್ಕಳ ಜೀವಕ್ಕೇ ಅಪಾಯವಿರುವ ಕಾರಣ ಗ್ರಾಮಸ್ಥರು ದೇವಸ್ಥಾನದ ಆವರಣದಲ್ಲೇ ಶಾಲೆ ನಡೆಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

     

    ಈ ಕುರಿತು ಗ್ರಾಮಸ್ಥರು ಹತ್ತಾರು ಭಾರೀ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಜನಪ್ರತಿನಿಧಿಗಳು ನಮಗೇ ಬೇಕೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಮಾಡಿಕೊಡಬೇಕಾಗಿದೆ.

  • ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

    ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

    ಕೋಲಾರ: ಸರ್ಕಾರಿ ಶಾಲೆಯಲ್ಲಿ ನೀಡುವ ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಶಾಲಾ ಮಕ್ಕಳು ಹೊಟ್ಟೆ ನೋವು ಹಾಗೂ ವಾಂತಿ-ಬೇಧಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೊಂಪಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟಗೆ ಈ ಘಟನೆ ನಡೆದಿದ್ದು, ಅಸ್ವಸ್ಥಗೊಂಡ ಮಕ್ಕಳನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೊದಲಿಗೆ ಹೊಟ್ಟೆ ನೋವು, ವಾಂತಿ ಹಾಗೂ ಬೇಧಿಯಾಗಿ ಅಸ್ವಸ್ಥಗೊಂಡ 10ಕ್ಕೂ ಹೆಚ್ಚು ಮಕ್ಕಳಿಗೆ ಕಲುಷಿತ ಹಾಲು ನೀಡಿರುವುದೇ ಕಾರಣ ಎನ್ನಲಾಗಿದೆ. ಸದ್ಯ ಆಸ್ಪತ್ರೆಗೆ ಅಕ್ಷರದಾಸೋಹ ಅಧಿಕಾರಿಗಳು ಸೇರಿದಂತೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು ಮಕ್ಕಳಿಗೆ ಯಾವುದೇ ಅಪಾಯ ಇಲ್ಲ ಎಂದು ಖಚಿತ ಪಡಿಸಿದ್ದಾರೆ.

    ಈ ಘಟನೆಗೆ ನಿಖರ ಕಾರಣವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಶಾಲೆ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಹಾಗೂ ಶಾಲೆಗೆ ಅಂಡರ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಮಕ್ಕಳ  ನಿದ್ರೆಗೆ ಭಂಗ – ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ಪಾಳಿಗೆ ಪೋಷಕರ ಆಕ್ಷೇಪ

    ಮಕ್ಕಳ ನಿದ್ರೆಗೆ ಭಂಗ – ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ಪಾಳಿಗೆ ಪೋಷಕರ ಆಕ್ಷೇಪ

    ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಎರಡನೇ ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿಯನ್ನು ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಕಳೆದ ವರ್ಷದವರೆಗೆ ಬೆಳಗ್ಗೆ 8.30ಕ್ಕೆ ಆರಂಭಗೊಂಡು ಮಧ್ಯಾಹ್ನ 2.40 ರವರೆಗೆ ತರಗತಿಗಳು ನಡೆಯುತಿತ್ತು. ಆದರೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಎರಡು ಪಾಳಿಯಲ್ಲಿ ತರಗತಿಗಳು ನಡೆಯುತ್ತಿದೆ. ಮೊದಲ ಪಾಳಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ನಡೆದರೆ 12.30 ರಿಂದ ಸಂಜೆ 6 ಗಂಟೆಯವರೆಗೂ ಎರಡನೇ ಪಾಳಿ ನಡೆಯುತ್ತಿದೆ.

    ಕರ್ನಾಟಕದಲ್ಲಿ ಒಟ್ಟು 48 ಕೇಂದ್ರೀಯ ವಿದ್ಯಾಲಯಗಳಿದ್ದು, ಇವುಗಳ ಪೈಕಿ ಮಲ್ಲೇಶ್ವರಂನಲ್ಲಿ ಮಾತ್ರ ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದೆ. ದೇಶದ ಪೈಕಿ ಮಹಾರಾಷ್ಟ್ರ ಅಜನಿ ನಾಗ್ಪುರ್, ಭಂಡಪ್ ಮತ್ತು ದೆಹಲಿಯಲ್ಲಿರುವ ವಸಂತ್ ಕುಂಜ್‍ನಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಈ ವಿಶೇಷ ಬದಲಾವಣೆ ಮಾಡಲಾಗಿದೆ.

    ಪೋಷಕರ ಆಕ್ಷೇಪ ಯಾಕೆ?
    ಶಾಲೆಯ ಸಮಯವನ್ನು ಬದಲಾವಣೆ ಮಾಡಿರುವ ಕುರಿತು ಕೆಲ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ 7 ಗಂಟೆಗೆ ಶಾಲೆಗೆ ಆಗಮಿಸುವುದು ಕಷ್ಟಸಾಧ್ಯ. 7 ಗಂಟೆಗೆ ಶಾಲೆಗೆ ಆಗಮಿಸಲು ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿಯೇ ಏಳಬೇಕಾಗುತ್ತದೆ. ಇದರಿಂದಾಗಿ ತರಗತಿಯಲ್ಲಿ ವಿದ್ಯಾರ್ಥಿಗಳು ನಿದ್ದೆ ಮಾಡುತ್ತಾರೆ. ಅಲ್ಲದೇ ಪಠ್ಯದ ಬಗ್ಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಬೆಳಗ್ಗೆ ನಿದ್ದೆ ಕಡಿಮೆಯಾದರೆ ಮಕ್ಕಳ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ ಎಂದು ಪೋಷಕರು ಹೇಳಿದ್ದಾರೆ.

    ಸಮರ್ಥನೆ ಏನು?
    ಕೇಂದ್ರೀಯ ವಿದ್ಯಾಲಯಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎರಡು ಅವಧಿಗಳಲ್ಲಿ ತರಗತಿ ನಡೆಸಲು ಅನುಮತಿ ನೀಡಲು ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. 2017-18 ರ ಶೈಕ್ಷಣಿಕ ವರ್ಷದಲ್ಲಿ 120 ಸೀಟ್ ಗಳ ಮೂರು ಸೆಕ್ಷನ್ ಗಳಿರುವ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು 3,040 ಅರ್ಜಿಗಳು ಸಲ್ಲಿಕೆಯಾಗಿತ್ತು.

    ಸದ್ಯ ಶಾಲೆಯಲ್ಲಿ 1,836 ವಿದ್ಯಾರ್ಥಿಗಳು 1 ನೇ ತರಗತಿಯಿಂದ 12 ನೇ ತರಗತಿಯ ವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಕೆವಿ ಮಲ್ಲೇಶ್ವರಂ ಶಾಲೆಯಲ್ಲಿ ಮೂರು ಸೆಕ್ಷನ್ ಗಳಲ್ಲಿ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.40 ವರೆಗೂ ತರಗತಿಗಳು ನಡೆಯುತ್ತಿದೆ. ಸಚಿವಾಲಯದ ಅನುಮತಿಯಿಂದ ಶಾಲೆಯ 1 ರಿಂದ 8 ತರಗತಿಯ ವರೆಗೆ 640 ಸೀಟ್‍ಗಳು ಅಧಿಕವಾಗಿ ಲಭ್ಯವಾಗಿದೆ. ಅಲ್ಲದೇ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲ್ಲಿದ್ದು, ಈ ಕುರಿತು ಅರ್ಜಿಗಳನ್ನು ಆಹ್ವಾನಿಸುತ್ತೇವೆ ಎಂದು ಆಡಳಿತ ಮಂಡಳಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

    ಸದ್ಯ ಹೆಚ್ಚುವರಿಯಾಗಿ ಆರಂಭವಾಗುವ ತರಗತಿಗಳಿಗಾಗಿ ಪ್ರತ್ಯೇಕ ಸಿಬ್ಬಂದಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಕೇಂದ್ರಿಯ ವಿದ್ಯಾಲಯಗಳ ಉಪಾಧ್ಯಕ್ಷ ದೇವಕುಮಾರ್ ತಿಳಿಸಿದ್ದಾರೆ.