Tag: school

  • ಡಿಸಿಎಂ ಅವರ ಸ್ವಕ್ಷೇತ್ರದಲ್ಲಿ ಸೂರಿಲ್ಲದ ಶಾಲೆಯಲ್ಲಿ ಮಕ್ಕಳ ಯಾತನೆ

    ಡಿಸಿಎಂ ಅವರ ಸ್ವಕ್ಷೇತ್ರದಲ್ಲಿ ಸೂರಿಲ್ಲದ ಶಾಲೆಯಲ್ಲಿ ಮಕ್ಕಳ ಯಾತನೆ

    ತುಮಕೂರು: ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿ ಶಾಲೆಯೊಂದು ಸೂರಿಲ್ಲದೇ ಮಕ್ಕಳ ದಿನನಿತ್ಯದ ಯಾತನೆಗೆ ಕಾರಣವಾಗಿದೆ.

    ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಸರಿಯಾದ ಸೂರಿಲ್ಲದೇ ಗಾಳಿ, ಮಳೆ, ಬಿಸಿಲಿನಲ್ಲೇ ಮಕ್ಕಳು ಕುಳಿತು ಪಾಠ ಕೇಳುತ್ತಿದ್ದಾರೆ. ಅದರಲ್ಲೇ ಸುಮಾರು 26 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕಲಿಯುತಿದ್ದಾರೆ.

    ಶಿಕ್ಷಕರು ಕುಳಿತುಕೊಳ್ಳೋದಕ್ಕೆ ಒಂದು ಕುರ್ಚಿ ಸಹ ಶಾಲೆಯಲ್ಲಿ ಇಲ್ಲದಂತಾಗಿದೆ. ಸುತ್ತಲಿನ ಐದಾರು ಹಳ್ಳಿಗಳ ಮಕ್ಕಳಿಗೆ ಈ ಶಾಲೆ ಆಸರೆಯಾಗಿದ್ದು, ಶಾಲೆಯ ಸ್ಥಿತಿ ನೋಡಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ದಿನನಿತ್ಯ ಮಕ್ಕಳು ಈ ಶಾಲೆಯಲ್ಲಿ ಜೀವ ಬಿಗಿಹಿಡಿದುಕೊಂಡು ಪಾಠ ಕೇಳುತ್ತಿದ್ದಾರೆ. ತನ್ನ ಕ್ಷೇತ್ರವನ್ನ ಮಾದರಿ ಕ್ಷೇತ್ರವಾಗಿ ಮಾಡುತ್ತೀನಿ ಅಂದಿದ್ದ ಡಾ.ಜಿ. ಪರಮೇಶ್ವರ್ ಅವರಿ ಉಪಮುಖ್ಯಮಂತ್ರಿಯಾದರೂ ಈ ಶಾಲೆ ಹಾಗೆಯೇ ಇದೆ. ಇನ್ನಾದರೂ ಈ ಶಾಲೆಗೆ ಕಾಯಕಲ್ಪ ಸಿಗುತ್ತಾ ಅಂತಾ ಊರಿನ ಜನರು ಕಾದು ನೋಡುತ್ತಿದ್ದಾರೆ.

  • ವಿದ್ಯಾರ್ಥಿನಿಯೊಬ್ಬಳಿಗೆ ಇಬ್ಬರು ಶಿಕ್ಷಕರು!

    ವಿದ್ಯಾರ್ಥಿನಿಯೊಬ್ಬಳಿಗೆ ಇಬ್ಬರು ಶಿಕ್ಷಕರು!

    ಚಿತ್ರದುರ್ಗ: ಮಕ್ಕಳು ಖಾಸಗಿ ಶಾಲೆಗೆ ಸೇರಿಕೊಳ್ಳುತ್ತಿರುವ ಪರಿಣಾಮ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು ಇರುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಂಜೆಹಟ್ಟಿ ಗ್ರಾಮದಲ್ಲಿರುವ ಪ್ರಾಥಮಿಕ ಕಿರಿಯ ಶಾಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಬೇಕು ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಅನ್ನೋ ದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಕ್ಕಳಿಗೆ ಮಾತ್ರ ಸರ್ಕಾರಿ ಶಾಲೆಯಲ್ಲಿ ಸರಿಯಾಗಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಇಬ್ಬರು ಶಿಕ್ಷಕರಿದ್ದಾರೆ.

    ಒಂದೊಂದು ದಿನ ಬೆಳಗ್ಗೆ ಶಾಲೆ ಆರಂಭಿಸಿ ಮಧ್ಯಾಹ್ನ 2 ಗಂಟೆ ಸಮಯಕ್ಕೆ ಶಾಲೆಗೆ ಬೀಗ ಜಡಿದು ಮನೆ ದಾರಿ ಹಿಡಿಯುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ 80 ಜನ ವಿದ್ಯಾರ್ಥಿಗಳಿದ್ದೂ, ಕಳೆದ ಸಾಲಿನಲ್ಲಿ ಪಾಠಗಳು ಸರಿಯಾಗಿ ನಡೆಯುವುದಿಲ್ಲ ಎಂದು ಬೇಸರದಿಂದ ಮಕ್ಕಳ ಟಿಸಿ ಪಡೆದು ಚಳ್ಳಕೆರೆ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

    ಉಳಿದ ಮೂವರು ಮಕ್ಕಳು ಆದರೆ ಜೂನ್ ತಿಂಗಳಲ್ಲಿ ದಾಖಲಾತಿ ಸಂಖ್ಯೆ 10ಕ್ಕೆ ಏರಿದೆ ಅಂತ ಹೇಳಿ ಶಾಲೆ ನಡೆಸಲಾಗುತ್ತಿದೆ. ಆದರೆ ಅವರುಗಳಲ್ಲಿ ವಿದ್ಯಾರ್ಥಿನಿ ಮಾತ್ರ ಶಾಲೆಗೆ ಬರುತ್ತಿದ್ದಾಳೆ. ಶಾಲೆಯ ಆರಂಭದಲ್ಲಿ ಗ್ರಾಮದಲ್ಲಿ ಶಿಕ್ಷಕರು ಬಂದು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಪ್ರೇರೇಪಿಸಬೇಕು. ಆದರೆ ಅಂತಹ ಕೆಲಸವನ್ನು ಯಾವುದೇ ಶಿಕ್ಷಕರು ಮಾಡುವುದಿಲ್ಲ. ಇದರಿಂದಾಗಿ ಸರ್ಕಾರಿ ಶಾಲೆಯು ಮುಚ್ಚುವ ಸ್ಥಿತಿಗೆ ತಲುಪಿದೆ ಅಂತ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಚಿಕ್ಕಬಳ್ಳಾಪುರ: ಒಂದು ಕಡೆ ರಾಜ್ಯದ ಸಂಸದರಿಗೆ ದುಬಾರಿ ಐಪೋನ್ ಕೊಟ್ಟಿರೋ ಸಮ್ಮಿಶ್ರ ಸರ್ಕಾರ ಹಾಗೂ ಸಚಿವರ ನಡೆ ಎಲ್ಲರ ಟೀಕೆಗೆ ಗುರಿಯಾಗಿದೆ. ಆದ್ರೆ ಇತ್ತ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳೆ ಕಳೆದರೂ ಪಾಪ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತ್ರವೇ ಕೊಟ್ಟಿಲ್ಲ. ಹೈಸ್ಕೂಲ್ ಗೆ ಬರುತ್ತಿದ್ದಂತೆ ಚೂಡಿದಾರ ತೊಡಬೇಕಿದ್ದ ಹೆಣ್ಣು ಮಕ್ಕಳು ಇನ್ನೂ ಹಳೆಯ ಲಂಗ-ಸ್ಕರ್ಟ್ ಧರಿಸಿಯೇ ಶಾಲೆಗೆ ಬರುವಂತೆ ಜಿಲ್ಲೆಯ ವಿದ್ಯಾರ್ಥಿನಿಯರ ಸ್ಥಿತಿ

    ಚಿಕ್ಕಬಳ್ಳಾಪುರ ಇದುವರೆಗೂ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಿಲ್ಲ. 7ನೇ ತರಗತಿ ವರೆಗೂ ಲಂಗ ತೊಡುತ್ತಿದ್ದ ವಿದ್ಯಾರ್ಥಿನಿಯರು ಹೈ ಸ್ಕೂಲ್ ಮೆಟ್ಟಿಲೇರಿದ ಬಳಿಕ ಚೂಡಿದಾರ ತೊಡಬೇಕು. ಇಡೀ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು 43,329 ಹೈಸ್ಕೂಲ್ ವಿದ್ಯಾರ್ಥಿಗಳಿದ್ದಾರೆ. ಕೆಲವರು ಯೂನಿಫಾರಂ ಇಲ್ಲದ ಕಾರಣ ಕಲರ್ ಬಟ್ಟೆ ತೊಟ್ಟು ಶಾಲೆಗಳಿಗೆ ಬರುತ್ತಿದ್ದರೆ, ಇನ್ನೂ ಕೆಲವರು ಹಳೆಯ ಯೂನಿಫಾರಂನ್ನೇ ಧರಿಸಿ ಶಾಲೆಗಳಿಗೆ ಬರುತ್ತಿದ್ದಾರೆ.

    ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8,388 ವಿದ್ಯಾರ್ಥಿನಿಯರಿದ್ದು, ಇವರಿಗೆಲ್ಲರಿಗೂ ಸಮವಸ್ತ್ರ ಭಾಗ್ಯ ಲಭಿಸಿಲ್ಲ. ಇದರಲ್ಲಿ 8ನೇ ತರಗತಿಯೇ ಒಟ್ಟು 5,205 ವಿದ್ಯಾರ್ಥಿನಿಯರಿದ್ದು, 7 ನೇ ತರಗತಿಯ ಲಂಗವನ್ನೇ ತೊಟ್ಟು ಹೈಸ್ಕೂಲ್‍ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲ ಶಾಲೆಗಳಲ್ಲಿನ 8ನೇ ತರಗತಿ ವಿದ್ಯಾರ್ಥಿನಿಯರು ಕಲರ್ ಡ್ರಸ್‍ಗಳಲ್ಲಿ ಶಾಲೆಗೆ ಬರ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನ ಕೇಳಿದ್ರೇ ರಾಜ್ಯ ಮಟ್ಟದಲ್ಲಿ ಟೆಂಡರ್ ಸಮಸ್ಯೆ ಆಗಿದೆ ಅದಷ್ಟು ಬೇಗ ಕೊಡುತ್ತೇವ ಅಂತಿದ್ದಾರೆ.

    ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕಾದ ಸರ್ಕಾರ ಇದುವರೆಗೂ ಒಂದು ಜೊತೆ ಸಮವಸ್ತ್ರವನ್ನೂ ಸಹ ವಿತರಿಸಿಲ್ಲ, ಹೀಗಾಗಿ ಸರ್ಕಾರಿ ಶಾಲೆಗೆ ಬರೋ ಮಕ್ಕಳು ಸ್ವಂತ ಹಣದಿಂದ ಸಮವಸ್ತ್ರ ಖರಿದಿಸೋ ಶಕ್ತಿ ಕೂಡ ಇರಲ್ಲ. ಒಂದು ಕಡೆ ಸಂಸದರಿಗೆ ಬೇಡದ ಇರೋ ಐಫೋನ್ ಕೊಡೋ ಸರ್ಕಾರ, ಇಲ್ಲಿ ಪಾಪ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡೋಕೆ ಮೀನಾಮೇಷ ಎಣಿಸ್ತಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  • ಮಳೆ ಬಂದ್ರೆ ಸಾಕು ಯಾದಗಿರಿ ವಿದ್ಯಾರ್ಥಿಗಳು ಭಯಪಡ್ತಾರೆ!

    ಮಳೆ ಬಂದ್ರೆ ಸಾಕು ಯಾದಗಿರಿ ವಿದ್ಯಾರ್ಥಿಗಳು ಭಯಪಡ್ತಾರೆ!

    ಯಾದಗಿರಿ: ಮಳೆ ಬಂದ್ರೆ ಸಾಕು ಯಾದಗಿರಿ ತಾಲೂಕಿನ ಅರಕೇರಾ (ಕೆ) ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆ ಜಲಮಯವಾಗುತ್ತದೆ ಎಂದು ಭಯಪಡುತ್ತಾರೆ.

    ಸಣ್ಣ ಮಳೆ ಬಂದ್ರೂ ಇಲ್ಲಿಯ ಇಡೀ ಶಾಲೆ ಜಲಮಯ ಆಗುತ್ತದೆ. ಇದರಿಂದ ಎಲ್ಲಾ ಕೊಠಡಿಗಳಲ್ಲೂ ನೀರು ತೊಟ್ಟಿಕ್ಕುತ್ತಲೇ ಇರುತ್ತದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕಾಂದ್ರೆ ಮಕ್ಕಳು ಕೈಯಲ್ಲಿ ಕೊಡೆ ಹಿಡಿದುಕೊಂಡು ಕುಳಿತುಕೊಳ್ಳಬೇಕು. ಇನ್ನು ಶಿಕ್ಷರದ್ದು ಅದೇ ಫಜೀತಿಯಾಗಿದೆ.

    ಹೀಗಾಗಿ ಕೊಡೆ ಹಿಡಿದುಕೊಂಡೇ ಪಾಠ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರಿಸ್ಥಿತಿಯಾಗಿದೆ. ಈ ಶಾಲೆಯಲ್ಲಿ ಸುಮಾರು 450 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಶಾಲಾ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿರುವ ಕಾರಣ ಮಳೆ ಬಂದಾಗ ಸೋರುತ್ತದೆ. ಅಲ್ಲದೇ ಕಟ್ಟಡದಲ್ಲಿ ಬಿರುಕುಗಳು ಸಹ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕದಿಂದಲೇ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ರೂ ಪ್ರಯೋಜನ ಆಗಿಲ್ಲ ಅಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದೂರಿದ್ದಾರೆ.

  • ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ- 5 ದಿನಗಳ ರಜೆಯ ನಂತರ ಶಾಲೆಗಳು ಪುನಾರಂಭ

    ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ- 5 ದಿನಗಳ ರಜೆಯ ನಂತರ ಶಾಲೆಗಳು ಪುನಾರಂಭ

    ಮಡಿಕೇರಿ: ಕೊಡಗಿನಲ್ಲಿ ವರುಣನ ಆರ್ಭಟ ತಗ್ಗಿದ್ದು, ಜಿಲ್ಲೆಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ಅಂಗನವಾಡಿ, ಶಾಲೆಗಳು ಎಂದಿನಂತೆ ಆರಂಭಗೊಂಡಿದೆ.

    ಕಳೆದ 2 ವಾರಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದ ಮಳೆ ಮಂಗಳವಾರ ರಾತ್ರಿಯಿಂದ ಕಡಿಮೆಯಾಗಿದೆ. ಕಳೆದ 5 ದಿನಗಳಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆಗಳು ಮತ್ತೆ ಆರಂಭಗೊಂಡಿದೆ.

    ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿದಿದೆ. ಅಲ್ಲದೇ ಮುಳುಗಡೆಯಾಗಿದ್ದ ರಸ್ತೆ ಹಾಗೂ ಸೇತುವೆ ಸಹಜ ಸ್ಥಿತಿಗೆ ಮರಳಿದೆ.

    ಮಹಾಮಳೆಗೆ ಭಗಂಡೇಶ್ವರ ಕ್ಷೇತ್ರ ಜಲಾವೃತಗೊಂಡಿದ್ದು, ಗಾಳಿಯ ರಭಸಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯಯಾಗಿತ್ತು. ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿತ್ತು. ಸದ್ಯ ವರುಣ ತನ್ನ ಆರ್ಭಟ ನಿಲ್ಲಿಸಿದ್ದರೂ ತುಂತುರು ಮಳೆಯಾಗುತ್ತಿದೆ.

  • ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಬೆಂಗಳೂರು: ಸಚಿವ ಎಚ್ ಡಿ ರೇವಣ್ಣ ಆಪ್ತರೊಬ್ಬರು ಕೆಐಎಡಿಬಿ ಮೂಲಕ ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಕಟ್ಟಡವನ್ನು ಕಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

    ಹೌದು. ಸಚಿವರ ಆಪ್ತ ಮಂಜೇ ಗೌಡ ಎಂಬವರು ಸುಮಾರು ಎರಡು ಎಕರೆಯಷ್ಟು ಜಮೀನನ್ನ ಕೈಗಾರಿಕೆಗೆ ಅಂತ ಪಡೆದು ಬೃಹತ್ ಸ್ಕೂಲ್ ಕಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ.

    ಏನಿದು ಪ್ರಕರಣ?:
    ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಜಾಗದಲ್ಲಿ ಕಾಂಕ್ರೀಕ್ ಪ್ರಾಡಕ್ಟ್‍ನ ಕೈಗಾರಿಕೆ ನಿರ್ಮಾಣವಾಗ ಬೇಕಿತ್ತು. ಯಾಕಂದ್ರೆ 1992 ರಲ್ಲಿ ಕೆಐಎಡಿಬಿ ಕೈಗಾರಿಕೆ ನಿರ್ಮಾಣಕ್ಕೆ ಅಂತ ರವಿಶಂಕರ್ ಗೌಡ ಅವರಿಗೆ ಜಮೀನು ಮಂಜೂರು ಮಾಡಿತ್ತು. ಆದ್ರೆ ರವಿಶಂಕರ್ ಗೌಡ ಯಾವುದೇ ಕೈಗಾರಿಕೆ ನಿರ್ಮಿಸದೇ 2004 ರಲ್ಲಿ ಇದೇ ಜಮೀನನ್ನ ರೇವಣ್ಣ ಆಪ್ತ ಮಂಜೇಗೌಡರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.

    ಮಂಜೇಗೌಡ ಕೂಡ ಕೈಗಾರಿಗೆ ನಡೆಸುವ ಬದಲು ಸ್ಕೂಲ್ ಕಟ್ಟಿದ್ರು. ಸುತ್ತಮುತ್ತ ಕೈಗಾರಿಕೆ ಪ್ರದೇಶವಾಗಿರೋದ್ರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಮಕ್ಕಳ ಹಕ್ಕನ್ನ ರಕ್ಷಿಸಿ ಎಂದು ಮಕ್ಕಳ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ನೀಡಿದ್ರು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸ್ಥಳ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಕೈಗಾರಿಕೆ ಮಾಡಬೇಕಾದ ಜಾಗದಲ್ಲಿ ಶಾಲೆ ಹೇಗೆ ಕಟ್ಟಿದ್ದೀರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.

    1,300 ಮಕ್ಕಳ ಜೀವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಕ್ಕಳ ಹಕ್ಕು ಆಯೋಗ, ಇತ್ತ ಬಿಬಿಎಂಪಿ, ಬಿಡಿಎ, ಶಿಕ್ಷಣ ಇಲಾಖೆಗೆ ನೊಟೀಸ್ ನೀಡಿದೆ. ಈ ಶಾಲೆಯ ಮಾಲೀಕ ಡಾ. ಮಂಜೇಗೌಡ ಮೂಲತಃ ಹಾಸನದವರಾಗಿದ್ದಾರೆ. ಪಿಡಬ್ಲುಡಿ ಎಂಜಿನಿಯರ್ ಆಗಿರುವ ಇವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಮಂಡಳಿ ಬೋರ್ಡ್ ಮೆಂಬರ್ ಕೂಡ ಆಗಿದ್ರು. ಇದೆಲ್ಲಾ ಪ್ರಭಾವ ಬಳಸಿಯೇ ಇಷ್ಟೆಲ್ಲಾ ಅಕ್ರಮ ನಡೆಸಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ.

  • ಶಾಲೆಯ ಅಡುಗೆ ಮನೆಯಲ್ಲಿ 60ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಪತ್ತೆ!

    ಶಾಲೆಯ ಅಡುಗೆ ಮನೆಯಲ್ಲಿ 60ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಪತ್ತೆ!

    ಮುಂಬೈ: ಮಹಾರಾಷ್ಟ್ರದ ಶಾಲೆಯೊಂದರ ಅಡುಗೆ ಮನೆಯಲ್ಲಿ ಬರೋಬ್ಬರಿ 60 ಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ.

    60ಕ್ಕೂ ಹೆಚ್ಚು ವಿಷಪೂರಿತ ಹಾವುಗಳನ್ನು ರಸ್ಸೆಲ್ ನ ವೈಪರ್ ಹಾವುಗಳು ಎಂದು ಗುರುತಿಸಲಾಗಿದೆ. ಇವು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಪಂಗ್ರಾ ಬೊಖೇರ್ ಗ್ರಾಮದ ಜಿಲ್ಲಾ ಪರಿಷದ್ ಶಾಲೆಯ ಅಡುಗೆ ಮನೆಯಲ್ಲಿರುವುದು ಗೋಚರವಾಗಿದೆ.

    ಶುಕ್ರವಾರ ಮಧ್ಯಾಹ್ನ ಅಡುಗೆ ಸಹಾಯಕಿಗೆ ಮೊದಲು ಎರಡು ರುಸ್ಸೆಲ್ ಹಾವುಗಳು ಕಾಣಸಿಕ್ಕಿವೆ. ಬಳಿಕ ಅಡುಗೆ ಮಾಡಲು ಕಟ್ಟಿಗೆ ತೆಗೆದುಕೊಳ್ಳುವಾಗ 58 ಹಾವುಗಳು ಪತ್ತೆಯಾಗಿವೆ. ಹಾವುಗಳನ್ನು ಕಂಡು ಗಾಬರಿಗೊಂಡ ಶಿಕ್ಷಕಿ ಉಳಿದ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ.

    ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಅವುಗಳನ್ನು ಕೋಲಿನಿಂದ ಹೊಡೆಯಲು ಮುಂದಾದರು. ಆಗ ಶಾಲಾ ಆಡಳಿತಾಧಿಕಾರಿ ಅವರನ್ನು ತಡೆದು ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ವಿಷಪೂರಿತ ಹಾವುಗಳನ್ನು ನೋಡಿದ ಬಳಿಕ ವಿದ್ಯಾರ್ಥಿಗಳು ಭಯ ಭೀತಗೊಂಡಿದ್ದಾರೆ. ಮಾಹಿತಿ ತಿಳಿದ ಉರಗ ತಜ್ಞ ವಿಕಿ ದಲಾದ್ ಸ್ಥಳಕ್ಕೆ ಬಂದು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ದಲಾಲ್ ರಸ್ಸೆಲ್ ವೈಪರ್ ಗಳನ್ನು ಹಿಡಿದು ಬಾಟಲಿಗಳಲ್ಲಿ ಹಾಕುತ್ತಿದಂತೆಯೇ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಶಾಲಾ ಆಡಳಿತಾಧಿಕಾರಿ ಭೀಮಾರಾವ್ ಬೊಖೇರ್ ಅವರು ಎಲ್ಲಾ 60 ಹಾವುಗಳನ್ನು ಅರಣ್ಯ ಅಧಿಕಾರಿ ಜೆ.ಡಿ ಕಾಚ್ವೆಗೆ ಹಸ್ತಾಂತರಿಸಿದ್ದಾರೆ.

  • ಶಾಲೆಯ ಗೋಡೆ ಮೇಲೆ ಅಶ್ಲೀಲ ಪದ- ಮುಜುಗರಕ್ಕೀಡಾದ ವಿದ್ಯಾರ್ಥಿ, ಶಿಕ್ಷಕ ವೃಂದ

    ಶಾಲೆಯ ಗೋಡೆ ಮೇಲೆ ಅಶ್ಲೀಲ ಪದ- ಮುಜುಗರಕ್ಕೀಡಾದ ವಿದ್ಯಾರ್ಥಿ, ಶಿಕ್ಷಕ ವೃಂದ

    ಹಾಸನ: ಶಾಲೆಯ ಗೋಡೆಗಳ ಮೇಲೆ ಶಿಕ್ಷಕರ ವಿರುದ್ಧವೇ ಬರಹಗಳನ್ನು ಬರೆದಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹುರುಡಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾ ದೇಗುಲದಲ್ಲಿ ಅಶ್ಲೀಲ ಶಬ್ಧಗಳ ಬರಹ ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಮಸ್ಥರು ಮುಜುಗರಕ್ಕೆ ಈಡಾಗುವಂತಾಗಿದೆ.

    ಪ್ರೌಢ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳು ಸಹ ಅಶ್ಲೀಲ ಬರಹಗಳಿಂದ ಪೋಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ಶಾಲೆಯ ಇಬ್ಬರು ಶಿಕ್ಷಕರ ನಡುವೆಯ ಕಲಹವಿದ್ದು ಈ ಗೋಡೆ ಬರಹಕ್ಕೆ ಅವರೇ ಕಾರಣ ಎಂದು ಹೇಳಲಾಗಿದೆ.

    ಎರಡು ವರ್ಷಗಳಿಂದ ಶಿಕ್ಷಕರ ನಡುವೆಯ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

  • ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಅರೆಸ್ಟ್!

    ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಅರೆಸ್ಟ್!

    ಚಿಕ್ಕೂಡಿ: ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.

    ಉಮೇಶ್ ಅಚಕನಹಳ್ಳಿ(18) ಬಂಧಿತ ಆರೋಪಿ. ಕಳೆದ ಜೂನ್ 4ರಂದು ಉಮೇಶ್ ಶಾಲೆಗೆ ಬೆಂಕಿ ಇಟ್ಟಿದ್ದನು. ಪ್ರಕರಣದ ದಿಕ್ಕು ತಪ್ಪಿಸಲು ತಾನೇ ಬೇರೆಯವರ ಹೆಸರಲ್ಲಿ ಲೆಟರ್ ಬರೆದಿದ್ದ. ಸದ್ಯ ಪೊಲೀಸ್ ತನಿಖೆ ವೇಳೆ ಎಲ್ಲ ಕೃತ್ಯವನ್ನು ತಾನೇ ಮಾಡಿದ್ದಾಗಿ ಉಮೇಶ್ ಒಪ್ಪಿಕೊಂಡಿದ್ದಾನೆ.

    ಏನಿದು ಘಟನೆ?
    ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಶಾಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದನು. ಈ ಹಿಂದೆ ಶಾಲೆಗೆ ಬೆಂಕಿ ಇಟ್ಟಿದ್ದ ಕಿರಾತಕನಿಂದ ಶಾಲೆಯ ಕೊಠಡಿಯಲ್ಲಿ ಐದು ಲವ್ ಲೆಟರ್ ಗಳನ್ನು ಬರೆದು ಹಳೆಯ ಪ್ರೇಮಿಗಳನ್ನು ಒಂದು ಮಾಡದಿದ್ದಲ್ಲಿ ಶಾಲೆ ಧ್ವಂಸಗೊಳಿಸುವದಾಗಿ ಬೆದರಿಕೆ ಹಾಕಿದ್ದನು. ಪೊಲೀಸರು ತಮ್ಮನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂದು ಬರೆದಿರುವ ಜೊತೆಗೆ ನಮ್ಮನ್ನು ಒಂದು ಮಾಡಿ ಎಂದು ವಿನಂತಿಸಿಕೊಂಡಿದ್ದಾನೆ. ಮತ್ತೆ ಪಾಗಲ್ ಪ್ರೇಮಿಯ ಕೃತ್ಯದಿಂದ ಶಾಲೆಯ ಆಡಳಿತ ಸಿಬ್ಬಂದಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

    ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯ ಬ್ಯಾಗನ್ನು ಶಾಲೆ ಗೋಡೆಯ ಬಳಿ ಇಟ್ಟಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆ ಬ್ಯಾಗಿನಿಂದ ಹಾವು ಹೊರಬಂದಿದೆ. ಹಾವು ಬ್ಯಾಗಿನಿಂದ ಹೊರಬರುತ್ತಿರುವುದನ್ನು ಕಂಡ ಇತರ ವಿದ್ಯಾರ್ಥಿಗಳ ಗಾಬರಿಗೊಂಡು ಶಿಕ್ಷಕರನ್ನು ಕರೆದು ಹಾವನ್ನು ತೋರಿಸಿದ್ದಾರೆ. ನಂತರ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಹಾವನ್ನು ಹೊಡೆದು ಹಾಕಿದ್ದಾರೆ.

    ಈ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ಗಿಡಗಂಟಿಗಳು ಎಲ್ಲಂದರಲ್ಲಿ ಬೆಳೆದುಕೊಂಡಿವೆ. ಹೀಗಾಗಿ ಹಾವು ಮತ್ತು ಚೇಳುಗಳು ಆಗಾಗ ಶಾಲೆಗೆ ಅತಿಥಿಗಳಾಗಿ ಬಂದು ಬಂದು ಭೇಟಿ ನೀಡುತ್ತವೆ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಒತ್ತು ಕೊಡುತ್ತಾರಾ ಕಾದು ನೋಡಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.