Tag: school

  • ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನಾಳೆ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಶಾಲಾ-ಕಾಲೇಜಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

    ಕೊಡಗು: ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗೆ ಮಳೆ ಮುಂದುವರಿದರೆ ಮಡಿಕೇರಿ- ತಲಕಾವೇರಿ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 375 ರಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

    ದಕ್ಷಿಣ ಕನ್ನಡ/ ಉತ್ತರ ಕನ್ನಡ: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ. ಮಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ವಾಹನ ಸಂಚಾರ ಸ್ತಬ್ಧಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ 1ರಿಂದ 10ನೇ ತರಗತಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದು. ಉಳಿದ ತಾಲೂಕಿನಲ್ಲಿ ಮಳೆಯ ಆಧಾರದಲ್ಲಿ ರಜೆ ನೀಡುವುದು ಆಯಾ ತಾಲೂಕಿನ ತಹಶೀಲ್ದಾರ್ ವಿವೇಚನೆಗೆ ಬಿಟ್ಟಿದ್ದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಲ್ಪ ಮಳೆ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿದೆ. ಸಮುದ್ರದಲ್ಲಿ 10 ರಿಂದ 12 ಅಡಿ ಎತ್ತರದ ಅಲೆಗಳು ಏಳುತ್ತಿವೆ. ಎರಡು ದಿನಗಳಿಂದ ಮೀನುಗಾರಿಕೆಗೆ ತೆರಳದಂತೆ ಬಂದರಿನಲ್ಲಿ ಬೋಟ್‍ಗಳಿಗೆ ತಡೆ ಹಾಕಿದ್ದಾರೆ.

    ಮಲೆನಾಡಿನಲ್ಲಿ ಹಲವೆಡೆ ಹೆಚ್ಚಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ಹಾಗೂ ಉಡುಪಿಯಲ್ಲಿ ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡಲಾಗಿದೆ. ಧಾರವಾಡದಲ್ಲಿಯೂ ಆಗಾಗ ಜಿಟಿಜಿಟಿ ಮಳೆ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯೇ ಸ್ವಲ್ಪ ಮಟ್ಟಿಗೆ ಜಿಟಿಜಿಟಿಯಾಗಿ ಆರಂಭವಾಗಿದ್ದ ಮಳೆ, ಬೆಳಗ್ಗೆಯಿಂದ ಆಗಾಗ ಬರುತ್ತಲೇ ಇತ್ತು. ಜಿಲ್ಲೆಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇದ್ದು, ಸ್ವಲ್ಪ ಚಳಿ ಜಾಸ್ತಿಯಾಗಿದೆ.

  • ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಬೆಳಗಾವಿ: ಮಕ್ಕಳನ್ನು ಶೌಚಾಲಯ ಕ್ಲೀನ್ ಮಾಡಲು ಹಾಗೂ ಬೈಕ್ ತೊಳೆಸಲು ಬಳಕೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದಲ್ಲಿ ನಡೆದಿದೆ.

    ಬಡಗಿವಾಡ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಪಾಠದ ಬದಲು ಮಕ್ಕಳಿಂದ ಬೈಕ್ ಕ್ಲೀನ್ ಮಾಡಿಸಿದ್ದಾರೆ ಮತ್ತು ಬಿಸಿಯೂಟ ಪಾತ್ರೆಗಳನ್ನು ತೊಳೆಸಿದ್ದಾರೆ.

    ಶಿಕ್ಷಕ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಸಂಪೂರ್ಣ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಇದೀಗ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಶಿಕ್ಷಕರ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನು ಓದಿ:ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಶಾಲೆಯಲ್ಲಿಯೇ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ಶಾಲೆಯಲ್ಲಿಯೇ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ನವದೆಹಲಿ: ಮುನ್ಸಿಪಲ್ ಕೌನ್ಸಿಲ್ ಶಾಲೆಯ 2ನೇ ತರಗತಿ ವಿದ್ಯಾರ್ಥಿಯನ್ನು ವಿದ್ಯುತ್ ಕೆಲಸಗಾರನೊಬ್ಬ ಅತ್ಯಾಚಾರಗೈದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

    ನವದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿ ರಾಮ್ ಅರ್ಸೆ (37) ಎಂಬಾತನೇ ಅತ್ಯಾಚಾರಗೈದ ಆರೋಪಿ. ರಾಮ್ ಅರ್ಸೆ ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನಂತೆ. ದೆಹಲಿನ ಗೋಲ್ ಮಾರ್ಕೆಟ್ ಪ್ರದೇಶದ ಶಾಲೆಯ ಆವರಣದಲ್ಲಿಯೇ ಘಟನೆ ನಡೆದಿದೆ.

    ಗುರುವಾರ ಬಾಲಕಿಯನ್ನು ಶಾಲೆಯ ಪಂಪ್ ರೂಮ್‍ಗೆ ಎಳೆದುಕೊಂಡು ಹೋದ ರಾಮ್ ಅರ್ಸೆ, ಬಾಲಕಿ ಮೇಲೆ ಅತ್ಯಾಚಾರವೆಸಗಿ, ಬಳಿಕ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ. ಹೀಗಾಗಿ ಬಾಲಕಿ ಯಾರಿಗೂ ಹೇಳಿರಲಿಲ್ಲ. ಶಾಲೆಯಿಂದ ಬಾಲಕಿ ಮನೆಗೆ ಬಂದಾಗ, ಮಗಳ ಗುಪ್ತಾಂಗದಿಂದ ರಕ್ತಸ್ರಾವ ಆಗುತ್ತಿರುವುದನ್ನು ತಾಯಿ ಗಮನಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದ್ದಾಳೆ ಎಂದು ವರದಿಯಾಗಿದೆ.

    ಆರೋಪಿ ರಾಮ್ ಅರ್ಸೆನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಸತಿ ಶಾಲೆಗೆ ಸಿವಿಲ್ ಬೀದರ್ ನ್ಯಾಯಾಧೀಶರ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

    ವಸತಿ ಶಾಲೆಗೆ ಸಿವಿಲ್ ಬೀದರ್ ನ್ಯಾಯಾಧೀಶರ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

    ಬೀದರ್: ಹೈಕೋರ್ಟ್ ಮಾರ್ಗದರ್ಶನದಂತೆ ಬೀದರ್ ಭಾಲ್ಕಿ ತಾಲೂಕಿನ ವಸತಿ ಶಾಲೆಗಳಿಗೆ ಜಿಲ್ಲಾ ಸೀನಿಯರ್ ಸಿವಿಲ್ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿ ವಸತಿ ಶಾಲೆಯ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಜಿಲ್ಲಾ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಆರ್. ರಾಘವೇಂದ್ರರವರು ಇಂದು ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದರು.

    ವಸತಿ ಶಾಲೆಯಲ್ಲಿ ಆಹಾರ ಸಂಗ್ರಹದಲ್ಲಿ ನಿರ್ವಹಣೆ ಇಲ್ಲದೆ ಇರುವುದು, ಶುದ್ಧ ಕುಡಿಯುವ ನೀರು, ಸ್ಥಾನ ಮಾಡಲು ಬಿಸಿ ನೀರಿನ ಸಮಸ್ಯೆ, ಸೇರಿದಂತೆ ಹಲವು ಅವ್ಯವಸ್ಥೆಯಿಂದ ಕೂಡಿತ್ತು. ಅದನ್ನು ಕಂಡ ನ್ಯಾಯಾಧೀಶರು ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡು ಸರಿಪಡಿಸುವಂತೆ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸರ್ಕಾರಿ ಶಾಲೆಗೆ ಸೇರಿದ ಜಾಗಕ್ಕಾಗಿ ವಾಗ್ವಾದ- ಆಟವಾಡ್ತಿದ್ದ ಮಕ್ಳನ್ನೂ ಗದರಿಸಿದ!

    ಸರ್ಕಾರಿ ಶಾಲೆಗೆ ಸೇರಿದ ಜಾಗಕ್ಕಾಗಿ ವಾಗ್ವಾದ- ಆಟವಾಡ್ತಿದ್ದ ಮಕ್ಳನ್ನೂ ಗದರಿಸಿದ!

    ಮಂಡ್ಯ: ಸರ್ಕಾರಿ ಶಾಲೆಗೆ ಸೇರಿದ ಜಾಗ ನಮ್ಮದೆಂದು ಗ್ರಾಮದ ವ್ಯಕ್ತಿಯೊಬ್ಬರು ಶಿಕ್ಷಕರ ಜೊತೆ ವಾಗ್ವಾದ ನಡೆಸಿದ್ದಲ್ಲದೆ, ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಗ್ರಾಮದ ಸರ್ವೆ ನಂಬರ್ 196ರಲ್ಲಿ ಸರ್ಕಾರಿ ಶಾಲೆಗೆ ಮೀಸಲಿರಿಸಿದ 98 ಗುಂಟೆ ಜಾಗವಿದೆ. 1950ನೇ ಇಸವಿಯಿಂದಲೂ ಈ ಜಾಗ ಶಾಲೆಯ ಒಡೆತನದಲ್ಲೇ ಇದೆ.

    ಆದರೆ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ಲಕ್ಷ್ಮಣ ಮತ್ತು ತಂಗ್ಯಮ್ಮ ಶಾಲೆಗೆ ಸೇರಿದ ಜಾಗ ನಮ್ಮದು ಎಂದು ದನಕರುಗಳನ್ನು ಕಟ್ಟುತ್ತಿದ್ದಾರೆ. ಜೊತೆಗೆ ಶಾಲಾ ಮೈದಾನದಲ್ಲಿ ಗಿಡ ನೆಡಲು ಹೋದರೆ ಅಥವಾ ಕ್ರೀಡಾಕೂಟ ನಡೆದರೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಶಿಕ್ಷಕರ ಮೇಲೂ ಜೋರು ಧ್ವನಿಯಲ್ಲಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿದ್ದಾರೆ.

    ಈ ಎಲ್ಲ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ಶಿಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೇ ಈ ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಅಳತೆ ಮಾಡಿಸಿ ಬಂದೋಬಸ್ತ್ ಮಾಡಬೇಕು. ಅನವಶ್ಯಕವಾಗಿ ಯಾವುದೇ ವ್ಯಕ್ತಿ ಸರ್ಕಾರಿ ಶಾಲೆಯ ಜಾಗವನ್ನು ಅತಿಕ್ರಮವಾಗಿ ಪ್ರವೇಶಿಸಬಾರದು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಕಂಟ್ರಾಕ್ಟರ್

    ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಕಂಟ್ರಾಕ್ಟರ್

    ಕೊಪ್ಪಳ: ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ವಿದ್ಯಾರ್ಥಿಗಳನ್ನೇ ಬಳಸಿಕೊಂಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯಿತಿ ಕಡೆಯಿಂದ ವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಪೌಂಡ್ ನಿರ್ಮಾಣದ ಕಾಮಗಾರಿಗೆ ಕೆಲಸವನ್ನು ಸ್ಥಳೀಯ ಗುತ್ತಿಗೆದಾರನೊಬ್ಬನಿಗೆ ಆಡಳಿತ ಮಂಡಳಿ ನೇಮಿಸಿದೆ. ಆದರೆ ಆ ಗುತ್ತಿಗೆದಾರ ಕಾಂಪೌಂಡ್ ನಿರ್ಮಾಣಕ್ಕೆ ಶಾಲಾ ಮಕ್ಕಳನ್ನೆ ಬಳಸಿಕೊಂಡಿದ್ದಾನೆ.

    ಕಾರ್ಮಿಕರನ್ನು ಕರೆದುಕೊಂಡು ಕಾಮಗಾರಿ ನಡೆಸಿದರೆ, ಕೂಲಿ ನೀಡಬೇಕಾಗುತ್ತದೆ ಎಂಬ ದುರಾಲೋಚನೆಯಿಂದ ಗುತ್ತಿಗೆದಾರ ಈ ಕಾರ್ಯಕ್ಕೆ ಮುಂದಾಗಿದ್ದಾನೆ. ಗುತ್ತಿಗೆದಾರನ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಕ್ಕಳನ್ನು ಕಾಮಗಾರಿಗೆ ಬಳಸಿಕೊಂಡಿದ್ದಕ್ಕೆ ಪೋಷಕರು ಗುತ್ತಿಗೆದಾರನ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದಕ್ಕೆ ಕುಮ್ಮಕ್ಕು ನೀಡಿದ ಶಾಲಾ ಸಿಬ್ಬಂದಿಯ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಚಿತ್ರದುರ್ಗ: ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಮೀಪ ನಡೆದಿದೆ.

    ಚಳ್ಳಕೆರೆ ತಾಲೂಕಿನ ಚೌಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ವಾರ್ಡ್ ನಿಂದ ಶಿಪ್ಟ್ ಮಾಡಲು ಸ್ಟ್ರಚ್ಚರ್ ಕೂಡ ಇಲ್ಲದೇ ನಡೆಸಿಕೊಂಡೆ ಹೋದ ಅಮಾನವೀಯ ಘಟನೆ ಕೂಡ ನಡೆದಿದೆ.

    ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಖಾಸಗಿ ಟೆಂಪೋವೊಂದರಲ್ಲಿ ಚೌಳೂರಿನಿಂದ ಟಿ.ಎನ್.ಕೋಟೆ ಗ್ರಾಮಕ್ಕೆ ಕರೆತರಲಾಗುತ್ತಿತ್ತು. ಆದರೆ ಟೆಂಪೋ ಪಲ್ಟಿಯಾಗಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಚಿತ್ರದುರ್ಗ: ಶಾಲಾ ಕೊಠಡಿಯಲ್ಲಿ ಬಾಲಕಿ ಕೈ ಮೇಲೆ ಬೆಂಚ್ ಬಿದ್ದು ಕೈ ಬೆರಳುಗಳು ಅರ್ಧಕ್ಕೆ ಕಟ್ ಆಗರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ.

    ಸರ್ಕಾರಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಸರದಿಯಂತೆ ನಿತ್ಯವೂ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಕೊಠಡಿಗಳ ಕಸ ಗುಡಿಸುತ್ತಿದ್ದರು. ಹೀಗಾಗಿ 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಶಾಲಾ ಕೊಠಡಿಯ ಕಸಗುಡಿಸುವ ವೇಳೆ ಬೆಂಚ್ ಎತ್ತಿಡುವಾಗ ತನ್ನ ಕೈ ಮೇಲೆ ಹಾಕಿಕೊಂಡಿದ್ದಾಳೆ. ಪರಿಣಾಮ ಆಕೆಯ ಬಲಗೈನ ಮೂರು ಬೆರಳುಗಳು ಅರ್ಧಕ್ಕೆ ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿ ಆಕೆ ಮೂರ್ಛೆ ಹೋಗಿದ್ದಳು. ತಕ್ಷಣ ಆಕೆಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಪೋಷಕರು, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶಕ್ಕೊಳಗಾಗಿದ್ದು, ಈ ಘಟನೆ ಶಿಕ್ಷಕರ ನಿರ್ಲಕ್ಷ್ಯದಿಂದಾಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಬಾಲಕಿಯ ಜೀವಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಅಗತ್ಯ ಚಿಕಿತ್ಸೆ ನೀಡಿರೋ ಜಿಲ್ಲಾಸ್ಪತ್ರೆ ವೈದ್ಯರು ಆಕೆಯ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಬಹುದೆಂಬ ಭರವಸೆಯನ್ನ ನೀಡಿದ್ದಾರೆ.

    ಘಟನೆ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಿದ್ಯಾರ್ಥಿನಿ ಹತ್ಯೆ – ಅತ್ಯಾಚಾರಕ್ಕೆ ಯತ್ನಿಸಿ ಕೊಲೆ?

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಿದ್ಯಾರ್ಥಿನಿ ಹತ್ಯೆ – ಅತ್ಯಾಚಾರಕ್ಕೆ ಯತ್ನಿಸಿ ಕೊಲೆ?

    ಕೋಲಾರ: ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.

    ರಕ್ಷಿತಾ (15) ಕೊಲೆಯಾದ ವಿದ್ಯಾರ್ಥಿನಿ. ಜಿಲ್ಲೆಯ ಮಾಲೂರು ಪಟ್ಟಣದ ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ. ಮಾಲೂರು ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದ ರಕ್ಷಿತಾ, ಬಿಜಿಎಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಬುಧವಾರ ಸಂಜೆ 4.30ರ ವೇಳೆ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳಿಬ್ಬರು ಅಪಹರಣ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ವಿದ್ಯಾರ್ಥಿನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

    ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ ದುಷ್ಕರ್ಮಿಗಳಿಂದ ತಪ್ಪಿಕೊಳ್ಳಲು ಯಶಸ್ವಿಯಾಗಿದ್ದಳು. ಬಳಿಕ ವಿದ್ಯಾರ್ಥಿನಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ರಕ್ಷಿತಾಳನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

    ದಿನ ನಿತ್ಯದಂತೆ ಶಾಲೆ ಅವಧಿ ಮುಗಿದ ಬಳಿಕ ರಕ್ಷಿತಾಳನ್ನು ಅವರ ತಂದೆ ಮನೆಗೆ ಕರೆದ್ಯೊಯುತ್ತಿದ್ದರು. ಆದರೆ ಇಂದು ಕೆಲಸ ನಿಮಿತ್ತ ತಂದೆ ಆಗಮಿಸಿರಲಿಲ್ಲ. ಹೀಗಾಗಿ ಸ್ನೇಹಿತೆಯೊಂದಿಗೆ ರಕ್ಷಿತಾ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ರಕ್ಷಿತಾಳನ್ನು ಅಪಹರಣ ಮಾಡಲು ಆರೋಪಿಗಳು ಬಳಸಿದ್ದ ಬೈಕ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೊಲೆಯಾದ ರಕ್ಷಿತಾ ಸ್ನೇಹಿತೆ ಘಟನೆಯಿಂದ ಆತಂಕಗೊಂಡು ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿ ಎಚ್ಚರಗೊಂಡ ಬಳಿಕ ಪೊಲೀಸರು ತನಿಖೆ ಒಳಪಡಿಸುವ ಸಾಧ್ಯತೆ ಇದೆ. ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಜಿ ಸಿಎಂ ತವರಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

    ಮಾಜಿ ಸಿಎಂ ತವರಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿರುವ ದುಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಇಂತಹ ದುಸ್ಥಿತಿ ಎದುರಿಸುತ್ತಿದ್ದಾರೆ. ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆಯ ಬಳಿ ಬೆಳೆದಿರುವ ಮುಳ್ಳಿನ ಪೊದೆಗಳ ಮೊರೆ ಹೋಗಿದ್ದಾರೆ.

    ಹಾವು, ಚೇಳುಗಳ ಆವಾಸ ಸ್ಥಾನವಾಗಿರುವ ಪೊದೆಗಳ ಬಳಿ ಮಕ್ಕಳಿಗೆ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. 300 ಕ್ಕೂ ಹೆಚ್ಚು ಮಕ್ಕಳಿರುವ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳೂ ಸಹ ಇದ್ದಾರೆ. ವಿಧ್ಯಾರ್ಥಿನಿಯರಿಗೂ ಇದೇ ಪರಿಸ್ಥಿತಿ ಇದೆ. ಖಾಸಗಿ ಕಂಪನಿ ನೆರವಿನಿಂದ ಶೌಚಾಲಯ ನಿರ್ಮಾಣವಾಗಿದ್ದರೂ ನೀರಿನ ಸಮಸ್ಯೆಯಿಂದ ಅದನ್ನು ಮುಚ್ಚಲಾಗಿದೆ.

    ಖಾಸಗಿ ಶಾಲೆಗಳ ಹಾವಳಿಯಲ್ಲೂ ಈ ಸರ್ಕಾರಿ ಶಾಲೆಗೆ ಪ್ರವೇಶಾತಿ ಗಣನೀಯವಾಗಿದೆ. ಹೀಗಿದ್ದೂ ಅವ್ಯವಸ್ಥೆಯನ್ನ ಸರಿಪಡಿಸುವ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಲವಾರು ದಿನಗಳಿಂದಲೂ ಮಕ್ಕಳು ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದರೂ ಸರಿಪಡಿಸುವ ಗೋಜಿಗೆ ಹೋಗದೇ ಇರುವುದು ವಿಪರ್ಯಾಸವಾಗಿದೆ.