Tag: school

  • ರಸ್ತೆ ಬದಿಯಲ್ಲಿ ಹಣ್ಣು ಮಾರುತ್ತಿದ್ದ ವೃದ್ಧೆಯ ಮೇಲೆ ಹರಿದ ಕಾರು

    ರಸ್ತೆ ಬದಿಯಲ್ಲಿ ಹಣ್ಣು ಮಾರುತ್ತಿದ್ದ ವೃದ್ಧೆಯ ಮೇಲೆ ಹರಿದ ಕಾರು

    ಯಾದಗಿರಿ: ಕಾರ್ ಚಾಲಕನ ನಿರ್ಲಕ್ಷ್ಯದಿಂದ ಹಣ್ಣು ಮಾರುವ ಅಮಾಯಕ ವೃದ್ಧೆ ಮೇಲೆ ಕಾರ್ ಹರಿದ ಘಟನೆ ಯಾದಗಿರಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಜನವರಿ 25ರಂದು ಸಂಜೆ ನಗರದ ಮಹಾತ್ಮ ಗಾಂಧಿ ಶಾಲೆಯ ಆವರಣದ ಮುಂಭಾಗದಲ್ಲಿ ನಡೆದಿದೆ. ಘಟನೆಯಿಂದ ಅಂಬೇಡ್ಕರ್ ನಗರದ ನಿವಾಸಿ ವೃದ್ಧೆ ಕಲಾವತಿಗೆ ಗಂಭೀರ ಗಾಯವಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಗರದ ವಿವೇಕಾನಂದ ಕಾಲೊನಿ ನಿವಾಸಿ ಗೋಪಿನಾಥ್ ಎಂಬವರಿಗೆ ಸೇರಿದ ಕಾರ್ ಎನ್ನಲಾಗಿದೆ. ಕಾರ್ ಹರಿದ ದೃಶ್ಯ ಕಂಡು ಶಾಲಾ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಶಾಲೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯದ ಆಧಾರದ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ – ಮಕ್ಕಳ ಸಂತೆಯಲ್ಲಿ ಪೊಂಗಲ್ ಘಮಲು!

    ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ – ಮಕ್ಕಳ ಸಂತೆಯಲ್ಲಿ ಪೊಂಗಲ್ ಘಮಲು!

    ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಡ್ತು. ಈ ಹಬ್ಬ ಸುಗ್ಗಿ ಜೊತೆ ಹಿಗ್ಗು ತಂದಿದ್ದು, ನಾಡಿನೆಲ್ಲೆಡೆ ಸಂಭ್ರಮ, ಸಡಗರವನ್ನುಂಟು ಮಾಡಿದೆ. ಅದರಂತೆ ಸಿಲಿಕಾನ್ ಸಿಟಿಯ ಬಹುತೇಕ ಶಾಲೆಗಳಲ್ಲಿ ಸಂಕ್ರಾಂತಿ ಕಲರವ ಮುಗಿಲು ಮುಟ್ಟಿದೆ.

    ನಗರದ ನಾಗಸಂದ್ರ ಮುಖ್ಯ ರಸ್ತೆಯಲ್ಲಿರುವ ನಿಸರ್ಗ ಸ್ಕೂಲ್ ನಲ್ಲಿ ರೈತರ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳೆಲ್ಲ ರೈತಾಪಿ ವೇಷಭೂಷಣ ಧರಿಸಿ, ಪಕ್ಕಾ ಹಳ್ಳಿ ಸೊಗಡನ್ನು ಪ್ರದರ್ಶಿಸಿದರು.

    ಹುಡುಗರು ಪಂಚೆ ಉಟ್ಟುಕೊಂಡು ಖದರ್ ತೋರಿಸಿದರೆ, ಹುಡುಗಿಯರು ಸೀರೆ ಉಟ್ಟುಕೊಂಡು ಪಕ್ಕಾ ಹಳ್ಳಿ ಹೆಣ್ಣು ಮಕ್ಕಳಾಗಿದ್ದರು. ಚಿಣ್ಣರೆಲ್ಲಾ ಭೂದೇವಿಗೆ ನಮಿಸಿ, ರಾಗಿ, ಭತ್ತ, ಕಡಲೆಕಾಯಿ, ಗೆಣಸು ಅವರೆಕಾಯಿಗಳನ್ನು ರಾಶಿ ಮಾಡಿದರು. ಜೊತೆಗೆ ರೈತರು ಬೆಳೆದ ತರಕಾರಿಗಳನ್ನು ಸ್ವತ: ಮಕ್ಕಳೇ, ತಮ್ಮ ತೊದಲು ನುಡಿಗಳಲ್ಲಿ ಕೂಗಿ, ಕರೆದು ಮಾರಾಟ ಮಾಡಿದರು.

    ಸದಾ ಆಫೀಸ್, ಕೆಲಸ ಅಂತಾ ಬ್ಯುಸಿ ಇದ್ದ ಪೋಷಕರಂತೂ ಮಕ್ಕಳ ಸಂಭ್ರಮ, ಬೊಂಬಾಟ್ ಡ್ಯಾನ್ಸ್ ನೋಡಿ ಹಿರಿಹಿರಿ ಹಿಗ್ಗಿದರು. ಜೊತೆಗೆ ನಗರದ ಮಕ್ಕಳಿಗೆ ದೇಶಿ ಸಂಸ್ಕೃತಿ ಪರಿಚಯಿಸಿದ ಶಾಲೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಜೆ ನೀಡ್ಬೇಕು ಇಲ್ಲವಾದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ: ಹಾಸನ ವಿದ್ಯಾರ್ಥಿಗಳು

    ರಜೆ ನೀಡ್ಬೇಕು ಇಲ್ಲವಾದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ: ಹಾಸನ ವಿದ್ಯಾರ್ಥಿಗಳು

    ಹಾಸನ: ಇಂದು ಹಾಗೂ ನಾಳೆ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯದ ಹಲವು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ರಜೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಸ್‍ಯಿಲ್ಲದೇ ಪರದಾಡುತ್ತಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ಬಂದ್ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲಾ- ಕಾಲೇಜುಗಳಿಗೆ ರಜೆ ನೀಡಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗಳಿಗೆ ಹೋಗಲು ಬಸ್‍ಯಿಲ್ಲದೇ ಹರಸಾಹಸ ಪಡುತ್ತಿದ್ದಾರೆ. ವಿದ್ಯಾರ್ಥಿಗಳು ಬೇರೆಡೆಯಿಂದ ಹಾಸನ ನಗರಕ್ಕೆ ಬರಲು ಪರದಾಡುತ್ತಿದ್ದಾರೆ.

    ನಮಗೆ ರಜೆ ನೀಡಬೇಕು ಇಲ್ಲವಾದಲ್ಲಿ ಸರಿಯಾಗಿ ಬಸ್ ವ್ಯವಸ್ಥೆಯನ್ನು ಮಾಡಬೇಕು. ನಾವು ದೂರದಿಂದ ಶಾಲೆಗಳಿಗೆ ಬರುತ್ತೇವೆ. ನಮಗೆ ಪರೀಕ್ಷೆಗಳಿರುವ ಸಮಯ ಇದು. ದಯವಿಟ್ಟು ನಮಗೆ ತೊಂದರೆ ನೀಡಬೇಡಿ ಎಂದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ಇಲ್ಲ, ಮನೆನೂ ಇಲ್ಲ-ಶಾಲೆಯ ಮಕ್ಕಳಿಗಾಗಿಯೇ ಜೀವನ ಮುಡಿಪು

    ಮದ್ವೆ ಇಲ್ಲ, ಮನೆನೂ ಇಲ್ಲ-ಶಾಲೆಯ ಮಕ್ಕಳಿಗಾಗಿಯೇ ಜೀವನ ಮುಡಿಪು

    ಹಾಸನ: ಮದ್ವೆ ಆಗದೇ, ಮನೆಯನ್ನು ಹೊಂದದೆ ಕಳೆದ 18 ವರ್ಷಗಳಿಂದ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಸಂಬಳವನ್ನು ಶಾಲೆಗೆ ನೀಡಿ ಅಲ್ಲಿಯ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪೋಷಿಸುತ್ತಿದ್ದಾರೆ.

    ಹಾಸನದ ಕಂದಲಿ ಬಳಿಯಿರೋ ಮೋರಾರ್ಜಿ ಶಾಲೆಯ ಪ್ರಾಂಶುಪಾಲ ತಮ್ಮಣ್ಣಗೌಡರಿಗೆ ಮದುವೆಯಾಗಿಲ್ಲ. 54 ವರ್ಷದ ತಮ್ಮಣ್ಣಗೌಡರು ಮನೆಯನ್ನು ಹೊಂದಿಲ್ಲ. ತಮಗೆ ಬರುವ ವೇತನವನ್ನು ಶಾಲೆ ಮತ್ತು ಶಾಲಾ ಮಕ್ಕಳಿಗೆ ಮೀಸಲಿಟ್ಟಿದ್ದು, ಶಾಲೆಯಲ್ಲೇ ವಾಸವಾಗಿದ್ದಾರೆ. ವಸತಿ ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪೋಷಿಸಿ ಒಳ್ಳೆಯ ಪ್ರಜೆಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ. ಈ ಕಾಯಕ ಬರೋಬ್ಬರಿ 18 ವರ್ಷಗಳಿಂದ ನಡೆಯುತ್ತಿರುವುದು ವಿಶೇಷ.

    ಈ ಶಾಲೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿದ್ದು ಸತತ 12 ವರ್ಷಗಳಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ತಮ್ಮಣ್ಣಗೌಡರ ಪಾತ್ರ ಬಹುದೊಡ್ಡದು. ಶಾಲಾ ಕಲಿಕೆಗೆ ವಿಶೇಷವಾದ ಮಾದರಿಗಳನ್ನು ಅಳವಡಿಸಿದ್ದಾರೆ. ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಾರೆ.

    ಚನ್ನರಾಯಪಟ್ಟಣದಲ್ಲಿ ತಮ್ಮ ಸಹೋದರರು, ಸಂಬಂಧಿಕರು ಇದ್ದರೂ ಅಲ್ಲಿಗೇ ಹೋಗೋದು ಕೆಲಸ ಇದ್ದರೆ ಮಾತ್ರ. ಉಳಿದಂತೆ ತಮ್ಮಣ್ಣಗೌಡರಿಗೆ ಶಾಲೆಯೇ ಕುಟುಂಬ.

    ಇನ್ನು ಕೆಲವೇ ದಿನಗಳಲ್ಲಿ ತಮ್ಮಣ್ಣಗೌಡರು ಬಿಇಓ ಆಗಿ ಬಡ್ತಿ ಪಡೆಯಲಿದ್ದಾರೆ. ತಮ್ಮಣ್ಣ ಗೌಡರು, 2000ನೇ ಇಸವಿಯಲ್ಲಿ ಈ ಶಾಲೆಗೆ ಬಂದಾಗ ಬೆಂಗಾಡಾಗಿತ್ತು. ಸದ್ಯ ಶಾಲಾ ಆವರಣವೀಗ ಸಸ್ಯಗಳಿಂದ ನಳನಳಿಸುತ್ತಿದೆ. 1,200ಕ್ಕೂ ಹೆಚ್ಚು ಗಿಡಗಳನ್ನು ತಮ್ಮಣ್ಣಗೌಡರು ತಮ್ಮ ಸ್ವಂತ ಖರ್ಚಿನಲ್ಲಿ ಬೆಳೆಸಿದ್ದಾರೆ. ಆ ಗಿಡಗಳು ಇದೀಗ ಫಲವನ್ನು ಕೊಡುತ್ತಿವೆ.

  • ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

    ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

    ಕೊಪ್ಪಳ: ದೇಶದಲ್ಲೆಡೆ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಆದರೆ ನಗರದ ಖಾಸಗಿ ಶಾಲೆಯೊಂದು ಟ್ರೆಡಿಷನಲ್ ಡೇ ಆಚರಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದೆ.

    ಕೊಪ್ಪಳದ ಖಾಸಗಿ ಶಾಲೆಯಲ್ಲಿ ಮಂಗಳವಾರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಶಾಲೆಯ ಮಕ್ಕಳೆಲ್ಲ ಸಂಪ್ರದಾಯಿಕ ಉಡುಗೆ ತೊಟ್ಟು ಹೊಸ ವರ್ಷ ಆಚರಣೆ ಮಾಡಿದರು. ಬಹುತೇಕ ಶಾಲೆಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷ ಆಚರಣೆ ಮಾಡಿದರೆ, ಇಲ್ಲಿನ ವಿದ್ಯಾರ್ಥಿಗಳು ಹೊಸ ವರ್ಷವನ್ನು ಟ್ರೆಡಿಷನಲ್ ಡೇ ಯನ್ನಾಗಿ ಆಚರಣೆ ಮಾಡಿದರು. ಅದರಲ್ಲೂ ಟ್ರೆಡಿಷನಲ್ ಡೇಯೊಂದಿಗೆ ಸಂದೇಶ ಸಾರುವ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ರ‍್ಯಾಂಪ್‌ ವಾಕ್ ಮಾಡಿದ್ದಾರೆ.

    ಇಂಗ್ಲಿಷ್ ಮಾಧ್ಯಮ ಶಾಲೆಯಾದರೂ ಭಾರತದ ಸಂಸ್ಕೃತಿಯನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಶಿಕ್ಷಕರು ಹೊಸ ವರ್ಷದಂದು ಟ್ರೆಡಿಶನಲ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ್ನಾಟಕದ ನಾನಾ ಭಾಗದ ಸಂಪ್ರದಾಯಕ ಉಡುಗೆಯನ್ನ ಹಾಕಿಕೊಂಡು ಮಕ್ಕಳು ಹೊಸ ವರ್ಷವನ್ನು ಆಚರಣೆ ಮಾಡಿದರು. ಶಿಕ್ಷಕ ಸಿಬ್ಬಂದಿ ಕೂಡ ಹಳ್ಳಿ ಸ್ಟೈಲ್ ಸೀರೆಯನ್ನು ಧರಿಸಿ ಮಕ್ಕಳ ಜೊತೆ ಸಂಭ್ರಮಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಜರಿ ಕೂಗಿದ್ರೆ ವಿದ್ಯಾರ್ಥಿಗಳು ‘ಎಸ್ ಸರ್’ ಬದಲು ‘ಜೈ ಹಿಂದ್’ ಹೇಳ್ಬೇಕು- ಶಿಕ್ಷಣ ಇಲಾಖೆ ಆದೇಶ

    ಹಾಜರಿ ಕೂಗಿದ್ರೆ ವಿದ್ಯಾರ್ಥಿಗಳು ‘ಎಸ್ ಸರ್’ ಬದಲು ‘ಜೈ ಹಿಂದ್’ ಹೇಳ್ಬೇಕು- ಶಿಕ್ಷಣ ಇಲಾಖೆ ಆದೇಶ

    ಗಾಂಧಿನಗರ: ಶಾಲೆಯಲ್ಲಿ ಶಿಕ್ಷಕರು ಹಾಜರಿ ಕೂಗಿದರೆ ವಿದ್ಯಾರ್ಥಿಗಳು ಎಸ್ ಸರ್ ಎನ್ನುವ ಬದಲಾಗಿ ಜೈ ಹಿಂದ್/ ಜೈ ಭಾರತ್ ಅಂತ ಹೇಳಬೇಕು ಎಂದು ಗುಜರಾತ್ ಶಿಕ್ಷಣ ಇಲಾಖೆ ಆದೇಶ ಜಾರಿ ಮಾಡಿದೆ.

    ಈ ಹಿಂದೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರ್ಕಾರವು ಇಂತಹ ಆದೇಶ ಹೊರಡಿಸಿತ್ತು. ಇದರಿಂದಾಗಿ ಮಧ್ಯಪ್ರದೇಶದ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಕೆ.ಕೆ.ಮಿಶ್ರಾ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಗುಜರಾತ್ ಶಿಕ್ಷಣ ಇಲಾಖೆಯು ಕೂಡ ಹಾಜರಿ ಕೂಗಿದಾಗ ಮಕ್ಕಳು ಎಸ್ ಸರ್ ಬದಲಾಗಿ ಜೈ ಹಿಂದ್/ ಜೈ ಭಾರತ್ ಅಂತ ಹೇಳಬೇಕು ಎನ್ನುವ ಆದೇಶವನ್ನು ಜಾರಿಗೆ ಮಾಡಿದ್ದು, ಇಂದಿನಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಜೈ ಹಿಂದ್ ಮೊಳಗಲಿದೆ.

    ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಹಾಜರಿ ಕೂಗಿದರೆ ಜೈಹಿಂದ್ ಎಂದು ಹೇಳುವುದು ಕಡ್ಡಾಯವಾಗಿತ್ತು. ನಂತರದ ದಿನಗಳಲ್ಲಿ ಈ ಪದ್ಧತಿ ಇಲ್ಲದಂತಾಗಿ ಎಸ್ ಸರ್ ಎನ್ನಲು ಮಕ್ಕಳು ಪ್ರಾರಂಭಿಸಿದರು. ಹೀಗಾಗಿ ಈ ಪದ್ಧತಿಯನ್ನು ಮಂಗಳವಾರದಿಂದ ಮತ್ತೆ ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿಂಹ ಹೇಳಿದ್ದಾರೆ.

    ಈ ಆದೇಶದಿಂದ ಮಕ್ಕಳು ತಮ್ಮ ಶಾಲಾ ದಿನಗಳಲ್ಲಿ ಸುಮಾರು 10 ಸಾವಿರ ಬಾರಿ ಜೈ ಹಿಂದ್/ ಜೈ ಭಾರತ್ ಎಂದು ಹೇಳಿದಂತಾಗುತ್ತದೆ. ಹೀಗಾಗಿ ಅವರಲ್ಲಿ ದೇಶಾಭಿಮಾನ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಆದೇಶವನ್ನು ಪಾಲಿಸುತ್ತಿದೆಯೇ ಎನ್ನುವುದನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು (ಡಿಇಓ) ಪರಿಶೀಲನೆ ಮಾಡಬೇಕು ಅಂತ ಸೂಚನೆ ನೀಡಲಾಗಿದೆ. ರಾಜಸ್ಥಾನ ಮಾದರಿಯಂತೆ ಗುಜರಾತ್‍ನಲ್ಲಿ ರಾಜ್ಯದಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರದ ನಿರ್ಧಾರವನ್ನು ಭೂಪೇಂದ್ರ ಸಿಂಹ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ಬಳ್ಳಾರಿ: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೇಡ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭಾಮ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಸಚಿವ ಜಿಟಿ ದೇವೇಗೌಡರು, ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡಿದ್ದಾರೆ.

    ಹಂಪಿ ವಿವಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು, ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೆ ಆಯ್ತಾ?. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸ್ಥಿತಿ ಏನಾಗಬೇಕು ಎಂದು ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡಿದರು.

    ಸಿದ್ದರಾಮಯ್ಯ ಅವರಿಗೆ ಇಂಗ್ಲಿಷ್ ಮೇಲೆ ಇರುವ ವ್ಯಾಮೋಹದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವರು ಇಂಗ್ಲಿಷ್ ಪ್ರೇಮದ ಬಗ್ಗೆ ಪ್ರಶ್ನೆ ಮಾಡಿ ಹಳ್ಳಿಗಳಲ್ಲಿನ, ಬಡ ಮಕ್ಕಳ ಸ್ಥಿತಿಯನ್ನು ಪ್ರಸ್ತಾಪ ಮಾಡಿ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪ್ರಾಧ್ಯಾಪರ ಬಗ್ಗೆಯೂ ಅಸಮಾಧಾನ ಹೊರಹಾಕಿದ ಅವರು, ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುತ್ತೀರಾ. ನೀವು ಕಲಿತಿದ್ದನ್ನು ಮಕ್ಕಳಿಗೆ ಕಲಿಸ್ರಪ್ಪಾ. ಶಿಕ್ಷಕ ವೃತ್ತಿ ಸಂಬಳಕ್ಕಾಗಿ ಮಾಡೋದಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಸಮ್ಮಿಶ್ರ ಸರ್ಕಾರದ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ಶಾಸಕ ರಮೇಶ್ ಅವರಿಗೆ ಸದ್ಯ ಸಿಟ್ಟು, ಕೋಪವಿದೆ. ಅದನ್ನು ಶಮನ ಮಾಡುತ್ತೇವೆ. ಒಂದೇ ಪಕ್ಷದ ಸರ್ಕಾರವಿದ್ದಾಗಲೇ ಸಣ್ಣಪುಟ್ಟ ತೊಂದರೆ ಇರುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿರುವ ಸಮಸ್ಯೆ ಬಗೆಹರಿಸುತ್ತೇವೆ. ಅದೆಲ್ಲವನ್ನು ಕುಮಾರಸ್ವಾಮಿ, ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಗೆಹರಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಕನ್ನಡ ಮೇಷ್ಟ್ರು’ ಸಿದ್ದರಾಮಯ್ಯರಿಂದ ಕುಮಾರಸ್ವಾಮಿಗೆ ಕ್ಲಾಸ್!

    ‘ಕನ್ನಡ ಮೇಷ್ಟ್ರು’ ಸಿದ್ದರಾಮಯ್ಯರಿಂದ ಕುಮಾರಸ್ವಾಮಿಗೆ ಕ್ಲಾಸ್!

    ಬಾಗಲಕೋಟೆ: ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತೇನೆ ಎಂದು ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಸಿಎಂ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಬಾದಾಮಿಯಲ್ಲಿ ನಡೆದ ಪುಸ್ತಕ ಪ್ರಾಧಿಕಾರದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 1 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷಾ ಕಲಿಕೆ ಬಗ್ಗೆ ಸ್ಪಷ್ಟತೆ ಇರಬೇಕು. ನಾನೂ ಕೂಡ ಪ್ರೌಢಶಾಲೆ ಶಿಕ್ಷಣವನ್ನು ಕನ್ನಡದಲ್ಲಿ ಓದಿದವನು. ನಾನೇನು ಪೆದ್ದನಾ ಎಂದು ಪ್ರಶ್ನಿಸಿದರು. ಅಲ್ಲದೇ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭಾಮ ಭಾಷೆಯಾಗಿ ಉಳಿಯಬೇಕು ಎಂದರು.

    ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಂಎಲ್‍ಸಿ ಒಬ್ಬರು ಇಂಗ್ಲಿಷ್ ಬಗ್ಗೆ ಹೊಗಳಿ ಮಾತನಾಡಿದ್ದರು. ಆಗ ನಾನು ನಿಮಗೆ ಕನ್ನಡ ಬರುತ್ತಾ ಎಂದು ಕೇಳಿದೆ, ಹೌದು ಎಂದರು. ಆಗ ಸಂಧಿ ಎಂದರೇ ಏನು ಎಂದು ಪ್ರಶ್ನೆ ಮಾಡಿದೆ. ಮರುಕ್ಷಣ ಆತ ಏನು ಮಾತನಾಡದೆ ಸುಮ್ಮನಾದ. ಅದರಂತೆ ಕನ್ನಡ ಭಾಷೆ ಉಳಿಯಬೇಕು ಎಂದು ಹೇಳುತ್ತೇನೆ. ಭಾಷೆ ಬಗ್ಗೆ ಎಲ್ಲರಿಗೂ ಪ್ರೀತಿ ಇರಬೇಕು. ಅದನ್ನು ಹೆಚ್ಚಿಸಿಕೊಳ್ಳಲು ಓದಬೇಕು. ಆದರೆ ನಾನು ಕಾನೂನು ವಿದ್ಯಾರ್ಥಿಯಾಗಿದ್ದ ವೇಳೆ ಹೆಚ್ಚು ಓದುತ್ತಿದೆ, ಆದರೆ ರಾಜಕಾರಣಿ ಆದ ಮೇಲೆ ಬಿಟ್ಟಿದ್ದೇನೆ. ಆಗ ಓದಿದ ಸಂಗತಿಗಳನ್ನೇ ಈಗ ಮಾತನಾಡುತ್ತಿದ್ದೇನೆ ಎಂದರು.

    ಕಾಲೇಜು ಶಿಕ್ಷಣ ಪಡೆಯುವ ವೇಳೆ ಊಟ ನಾನೇ ಮಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಇದು ಇಂದಿನ ಮಕ್ಕಳಿಗೆ ಆಗಬಾರದು ಎಂದು ವಿದ್ಯಾಸಿರಿ ಯೋಜನೆ ಜಾರಿ ಮಾಡಿದೆ. ಅದನ್ನು ಜನರು ಆರ್ಥೈಸಿಕೊಳ್ಳಬೇಕು. ನಮ್ಮ ಜನ, ನೆಲ ಜಲ ಹಾಗೂ ಭಾಷೆಯನ್ನ ಪ್ರೀತಿಸಿದವನು ಮನುಷ್ಯನೇ ಅಲ್ಲ. ನಾನು ಕೆಲವು ದಿನ ಮೇಷ್ಟ್ರ ಆಗಿ ಕೆಲಸ ಮಾಡಿದ್ದು, ಆದ್ದರಿಂದ ನಿಮಗೂ ಪಾಠ ಮಾಡಿದಂತೆ ಆಗುತ್ತದೆ ಎಂದು ತಮ್ಮ ಮಾತು ಪೂರ್ಣಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಬಾಗಲಕೋಟೆ: ತಾವು ಶಾಲಾ ದಿನಗಳ ಸಮಯದಲ್ಲಿ ಟೈರ್ ನಿಂದ ತಯಾರಿಸಿದ್ದ ಚಪ್ಪಲಿ ಧರಿಸಿ ಹೋಗುತ್ತಿದ್ದೇವು, ಈಗಿನ ಮಕ್ಕಳಿಗೆ ಇಂತಹ ತೊಂದರೆ ಆಗಬಾರದು ಎಂದು ಹೇಳಿ ಶೂ ಭಾಗ್ಯ ಯೋಜನೆ ಜಾರಿ ಮಾಡಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಬಾದಾಮಿಯಲ್ಲಿ ಪುಸ್ತಕ ಪ್ರಾಧಿಕಾರದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಟೈರ್ ಚಪ್ಪಲಿ ಪ್ರಸಂಗ ನೆನೆಸಿಕೊಂಡರು. ನಾನು ಶಾಲೆಗೆ ಹೋಗುವಾಗ ಟೈರ್ ಚಪ್ಪಲಿ ಧರಿಸುತ್ತಿದ್ದೆ. ಇಂತಹ ತೊಂದರೆ ಬರಬಾರದೆಂದು ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಜಾರಿಗೆ ತಂದಿದ್ದೇವೆ ಎಂದರು. ಇದೇ ವೇಳೆ ತಮ್ಮ ಅಧಿಕಾರ ಮತ್ತು ಸಂಪತ್ತು ಯಾವತ್ತೂ ಬಲಾಡ್ಯರ ಕೈಯಲ್ಲಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ನಾನು ಧರಿಸುತ್ತಿದ್ದ ಟೈರ್ ಚಪ್ಪಲಿ ಮೂರು ವರ್ಷ ಆದ್ರು ಹರಿದಿರಲಿಲ್ಲ ಎಂದು ನಗೆಚಟಾಕಿ ಹಾರಿಸಿದರು.

    ಬಾದಾಮಿಯ ಕನಕ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ಸ್ವತಃ ಡೋಲು ಬಾರಿಸಿ ಗಮನ ಸೆಳೆದರು. ಆದರೆ ಆ ವೇಳೆ ಡೋಲು ಬಾರಿಸುವ ಕೋಲಿನ ಸಿಬಿರು ಚುಚ್ಚಿ ಸಿದ್ದರಾಮಯ್ಯ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಬೆರಳಿಗೆ ಚುಚ್ಚಿದ್ದ ಸಿಬಿರು ತೆಗೆದು ಪ್ರಥಮ ಚಿಕಿತ್ಸೆ ನೀಡಿದರು.

    ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಮೈತ್ರಿ ಸರ್ಕಾರ ನಡೆಸುವ ಉದ್ದೇಶ ಇಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ಅವರು, ಹೊರಟ್ಟಿ ಹೇಳಿಕೆ ಕೊಟ್ಟಿದ್ದರೆ ತೋರಿಸಿ ಎಂದು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡದೆ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ರಾಮನಗರ: ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಿಬ್ಬಂದಿ ಛತ್ರಿ ಸೇವೆ ನೀಡಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಅನಿತಾ ಕುಮಾರಸ್ವಾಮಿಯವರು ಬಿಸಿಲಿಗೆ ಅಂಜಿ, ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡಿದ್ದಾರೆ. ಅನಿತಾರವರು ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮ ಶಾಲಾ ಆವರಣದಲ್ಲೇ ನಡೆಯುತ್ತಿದ್ದರಿಂದ ಬಿಸಿಲ ಝಳ ನೇರವಾಗಿ ಅವರನ್ನು ಕುಟುಕುತ್ತಿತ್ತು.

    ಈ ವೇಳೆ ಇದನ್ನು ಗಮನಿಸಿದ ಶಾಲಾ ಆಡಳಿತ ಸಿಬ್ಬಂದಿ ಮೊದಲು ತಾವೇ ಛತ್ರಿ ಹಿಡಿದಿದ್ದರು, ಬಳಿಕ ಅನಿತಾರವರ ಗನ್ ಮ್ಯಾನ್ ಛತ್ರಿ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಬಿಸಿಲಿನಿಂದ ರಕ್ಷಿಸಿದ್ದಾರೆ. ನಂತರ ಅನಿತಾರವರು ಭಾಷಣ ಮಾಡುವ ವೇಳೆಯು ಸಿಬ್ಬಂದಿ ಛತ್ರಿ ಹಿಡಿದೇ ನಿಂತಿದ್ದರು. ವಿಪರ್ಯಾಸವೆಂದರೇ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಸುಡು ಬಿಸಿಲಿನಲ್ಲೇ ಕುಳಿತಿದ್ದರೇ, ಶಾಸಕರು ಮಾತ್ರ ತಮ್ಮ ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv