Tag: school

  • ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಕೊಯಂಬತ್ತೂರು: ಹತ್ತಾರು ವಿದ್ಯಾರ್ಥಿಗಳಿದ್ದರು ಅದೆಷ್ಟೋ ಶಾಲೆಗಳನ್ನು ಸರ್ಕಾರ ಮುಚ್ಚಿವೆ. ಆದರೆ ತಮಿಳುನಾಡಿದ ವಾಲ್‍ಪರೈನಲ್ಲಿರುವ ಚಿನ್ನಕಲ್ಲರ್ ನ 76 ವರ್ಷದ ಹಳೆದ ಶಾಲೆವೊಂದನ್ನು ಕೇವಲ ಒಂದೇ ಒಂದು ವಿದ್ಯಾರ್ಥಿಗಾಗಿ ಪುನರಾರಂಭಿಸಲಾಗಿದೆ.

    ಹೌದು. ಹತ್ತಾರು ಮಕ್ಕಳಿದ್ದರು ಮುಚ್ಚುವ ಈಗಿನ ಕಾಲದ ಶಾಲೆಗಳ ಮಧ್ಯೆ ಕೇವಲ ಒಂದು ವಿದ್ಯಾರ್ಥಿ ಶಾಲೆಯೊಂದು ಪುನರಾರಂಭವಾಗುವುದು ಎಲ್ಲೆಡೆ ಭಾರಿ ಸುದ್ದಿಯಾಗಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಒಂದು ಹುಡುಗಿಗೆ ಶಿಕ್ಷಣ ನೀಡಿದ ಬಳಿಕ ಈ ಶಾಲೆಗೆ ಮಕ್ಕಳು ದಾಖಲಾತಿ ಆಗದ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈ ವರ್ಷ ಗ್ರಾಮದ ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ರಾಜೇಶ್ವರಿ ಅವರು ತನ್ನ ಮಗನನ್ನು ಈ ವರ್ಷ ಶಾಲೆಗೆ ಸೇರಿಸಿದ್ದಾರೆ. ಶಿವ(6) ಓರ್ವನಿಗಾಗಿ ಈ ಶಾಲೆ ಸಿಬ್ಬಂದಿಗಳು ಮತ್ತೆ ಶಾಲೆ ಬಾಗಿಲು ತೆರೆದಿದ್ದಾರೆ.

    ಮನೆಯಿಂದ ನಾಲ್ಕು ಕಿ.ಮೀ ದೂರವಿರುವ ಪರಿಯಕಲ್ಲರ್ ಶಾಲೆಗೆ ಮಗನನ್ನು ಕಳುಹಿಸಲು ಕಷ್ಟವಾಗುತ್ತದೆ ಎಂದು ಮಹಿಳೆ ತಮ್ಮ ಮನೆಗೆ ಹತ್ತಿರವಿರುವ ಚಿನ್ನಕಲ್ಲರ್ ಶಾಲೆಯನ್ನು ಮತ್ತೆ ತನ್ನ ಮಗನಿಗಾಗಿ ತೆರೆಯುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ತಾಯಿಯ ಮನವಿಗೆ ಮಣಿದ ಶಿಕ್ಷಣ ಅಧಿಕಾರಿಗಳು, ಓರ್ವ ವಿದ್ಯಾರ್ಥಿಗಾಗಿ ಶಾಲೆಯನ್ನು ಮತ್ತೆ ಆರಂಭಿಸಿದ್ದಾರೆ.

    ಸದ್ಯ ಸೋಮವಾರದಂದು ಶಿವ 1ನೇ ತರಗತಿಗೆ ದಾಖಲಾತಿ ಪಡೆದಿದ್ದಾನೆ. ಮಗುವಿಗೆ ಅಗತ್ಯ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿಂದೆ ಇಲಾಖೆ ಶಾಲೆಯನ್ನು ಪುನರಾರಂಭಿಸಲು ವಿಶೇಷ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಶೂನ್ಯ ದಾಖಲಾತಿಯ ಕಾರಣ ಕಳೆದ ವರ್ಷ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಪೆರಿಯಕಲ್ಲರ್ ಶಾಲೆ ಮುಖ್ಯ ಶಿಕ್ಷಕ ಶಕ್ತಿವೇಲ್ ಹೇಳಿದ್ದಾರೆ.

    1943ರಲ್ಲಿ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡಲು ಈ ಶಾಲೆ ಆರಂಭಿಸಲಾಗಿತ್ತು. ಆಗ ಈ ಸ್ಥಳದಲ್ಲಿ 300ಕ್ಕೂ ಅಧಿಕ ಕಾರ್ಮಿಕರ ಕುಟುಂಬಗಳು ವಾಸವಾಗಿದ್ದವು. ಆದ್ದರಿಂದ 70 ವರ್ಷಗಳ ಕಾಲ ಶಾಲೆ ಸರಿಯಾಗಿ ನಡೆದಿತ್ತು. ಅಲ್ಲದೆ ಪ್ರತಿ ವರ್ಷ 50ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರು ವಲಸೆ ಹೋಗಲು ಆರಂಭಿಸಿದ ಬಳಿಕ ಶಾಲೆ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ದಟ್ಟ ಅರಣ್ಯದಿಂದ ಕೂಡಿರುವ ಚಿನ್ನಕಲ್ಲರ್ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. 2017-18ರಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿನಿಗಾಗಿ ಅಧ್ಯಾಪಕ ಹಾಗೂ ಮುಖ್ಯ ಶಿಕ್ಷಕರನ್ನು ನೇಮಿಸಲಾಗಿತ್ತು. ಆ ಬಳಿಕ ಶಾಲೆಯ ಸುತ್ತಾಮುತ್ತಾ ಆನೆಗಳ ಹಾವಳಿ ಹೆಚ್ಚಾಗುತ್ತಿದಂತೆ ಮಕ್ಕಳು ಶಾಲೆಯತ್ತ ಬರಲು ಹೆದರಿದರು. ಶಾಲೆಯ ಗಾಜು, ಬಾಗಿಲುಗಳೂ ಆನೆ ದಾಳಿಗೆ ಹಾನಿಯಾಗಿದ್ದವು. ಅಲ್ಲದೆ ಪ್ರದೇಶದಲ್ಲಿ ಆನೆ ಸೇರಿ ಇನ್ನಿತರ ಪ್ರಾಣಿಗಳು ಇಲ್ಲಿ ವಾಸವಾಗಿದ್ದ ಜನರ ಮೇಲೆ ದಾಳಿ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜನರು ಇಲ್ಲಿಂದ ವಲಸೆ ಹೋಗಲು ಶುರುಮಾಡಿದರು. ಹೀಗಾಗಿ ಸದ್ಯ ಈ ಪ್ರದೇಶದಲ್ಲಿ ಕೇವಲ 15 ಕುಟುಂಬಗಳು ಮಾತ್ರ ವಾಸವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟರು.

    ಬಳಿಕ ಮಾತನಾಡುತ್ತ, ಇತ್ತೀಚಿಗೆ ಇಲ್ಲಿ ಆನೆ ದಾಳಿ ನಡೆಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಗ್ರಾಮಸ್ಥರಲ್ಲಿ ಇನ್ನೂ ಕಾಡು ಪ್ರಾಣಿಗಳ ಭಯ ಇದೆ. ಅಲ್ಲದೆ ಶಿವನನ್ನು ಪೆರಿಯಕಲ್ಲರ್ ಶಾಲೆಗೆ ಕಳಿಸುವ ಬಗ್ಗೆ ತಾಯಿಯ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರು ಒಪ್ಪಿದರೆ ಈ ಶಾಲೆ ಮತ್ತೆ ಮುಚ್ಚಲಿದೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • 3 ವರ್ಷದಿಂದ ಸ್ನೇಹಿತನನ್ನು ಹೊತ್ಕೊಂಡು ಶಾಲೆಗೆ ಹೋಗ್ತಿರುವ ಗೆಳೆಯ

    3 ವರ್ಷದಿಂದ ಸ್ನೇಹಿತನನ್ನು ಹೊತ್ಕೊಂಡು ಶಾಲೆಗೆ ಹೋಗ್ತಿರುವ ಗೆಳೆಯ

    ಬೀಜಿಂಗ್: 3 ವರ್ಷದಿಂದ ಬಾಲಕನೊಬ್ಬ ತನ್ನ ಅನಾರೋಗ್ಯ ಗೆಳೆಯನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸುದ್ದಿವೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು, ಈಗ ವೈರಲ್ ಆಗುತ್ತಿದೆ.

    ಕ್ಸು (Xu) ಹಾಗೂ ಜಾಂಗ್ (Zhaang) ಇಬ್ಬರು ಆತ್ಮೀಯ ಗೆಳೆಯರಾಗಿದ್ದು, 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಜಾಂಗ್ ಗೆ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಆತನ ಗೆಳೆಯ ಕ್ಸು 3 ವರ್ಷದಿಂದ ತನ್ನ ಸ್ನೇಹಿತನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾನೆ.

    ಜಾಂಗ್ ನಾಲ್ಕು ವರ್ಷವಿದ್ದಾಗ ರ‍್ಯಾಗ್ ಡಾಲ್ ಕಾಯಿಲೆಗೆ ತುತ್ತಾಗಿದ್ದನು. ಈ ಕಾಯಿಲೆ ಇದ್ದರೆ ನಡೆದಾಡಲು ಸಮಸ್ಯೆ ಆಗುತ್ತದೆ. ಜಾಂಗ್ ಗೆ ಈ ಕಾಯಿಲೆ ಇದ್ದ ಕಾರಣ ಆತನ ಗೆಳೆಯ ಕ್ಸುನನ್ನು ದಿನನಿತ್ಯ ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದನು.

    ನನ್ನ ಸ್ನೇಹಿತನಿಗೆ ಸಹಾಯ ಮಾಡುವುದಕ್ಕೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು 40 ಕೆಜಿ ತೂಕ ಇದ್ದೇನೆ ಹಾಗೂ ನನ್ನ ಸ್ನೇಹಿತ ಜಾಂಗ್ 25 ಕೆಜಿ ತೂಕ ಇದ್ದಾನೆ. ಹಾಗಾಗಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಎಂದು ಕ್ಸು ಹೇಳಿದ್ದಾನೆ.

    ಅಲ್ಲದೆ ನಾವಿಬ್ಬರು ಆತ್ಮೀಯ ಸ್ನೇಹಿತರು. ನಾವು ಒಟ್ಟಿಗೆ ಕೂತು ಓದುತ್ತೇವೆ. ನಾವು ಒಟ್ಟಿಗೆ ಮಾತನಾಡುತ್ತೇವೆ ಹಾಗೂ ಜೊತೆಯಲ್ಲೇ ಆಟವಾಡುತ್ತೇವೆ ಎಂದು ಕ್ಸು ತನ್ನ ಗೆಳೆಯನದ ಬಗ್ಗೆ ಮಾತನಾಡಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಸ್ಯಾಕ್ರಮೆಂಟೋ : ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡುತ್ತಾರೆ. ಪಠ್ಯದ ಜೊತೆಗೆ ಆಟಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್ ನಡೆಸಲು ಅಲ್ಲಿಯ ಶಿಕ್ಷಣ ಮಂಡಳಿ ಆದೇಶಿಸಿದೆ. ಶಿಕ್ಷಣ ಮಂಡಳಿ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

    ಏನಿದು ಕಾಂಡೋಮ್ ರೇಸ್?
    ಶಾಲೆಗಳಲ್ಲಿ ಸುಮಾರು 10 ರಿಂದ 12 ವಯಸ್ಸಿನ ವಿದ್ಯಾರ್ಥಿನಿಯರು ತನ್ನ ಎಲ್ಲ ಸಹಪಾಠಿಗಳ (ಹುಡುಗರು ಸೇರಿದಂತೆ) ಮುಂದೆ ಕಾಂಡೋಮ್ ಬಳಕೆಯನ್ನು ತೋರಿಸಬೇಕು. ಆಟಿಕೆಯ ವಸ್ತುವಿಗೆ ಕಾಂಡೋಮ್ ಹಾಕುವ ಮೂಲಕ ಎಲ್ಲರಿಗೆ ಬಳಕೆಯ ವಿಧಾನದ ಬಗ್ಗೆ ತಿಳಿಸುವುದು.

    ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೆಬೆಚಾ ಫ್ರೀಡ್ರಿಚ್, ಇದೊಂದು ಶಾಕಿಂಗ್ ನಿರ್ಧಾರವಾಗಿದ್ದು, 10ರಿಂದ 12 ವರ್ಷದ ವಿದ್ಯಾರ್ಥಿನಿಯರು ಎಲ್ಲರ ಮುಂದೆ ಆಟಕೆಗೆ ಕಾಂಡೋಮ್ ತೊಡಿಸುವ ವಿಧಾನ ಶಾಲೆಗಳಲ್ಲಿ ಜಾರಿಗೆ ತಂದಿರೋದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕವಾಗಿ ಲೈಂಗಿಕ ಶಿಕ್ಷಣದ ಕುರಿತು ತುಂಬಾ ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಮಾತುಗಳಿಂದ ಯಾರು ಮುಜುಗರಕ್ಕೆ ಒಳಗಾಬಾರದೆಂಬವುದು ನನ್ನ ನಿಲುವು. ಶಾಲೆಯ ಕೊಠಡಿಯಲ್ಲಿ ಹುಡುಗರ ಮುಂದೆ ವಿದ್ಯಾರ್ಥಿನಿಯರು ಕಾಂಡೋಮ್ ಬಳಕೆಯ ಬಗ್ಗೆ ಮಾತನಾಡುವುದು ಅಪಾಯಕಾರಿ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಲೈಂಗಿಕ ಶಿಕ್ಷಣ ನೀಡಬೇಕೆಂದು ಪ್ರೀಡ್ರಿಚ್ ಸ್ಥಳೀಯ ಶಿಕ್ಷಣ ಮಂಡಳಿಗೆ ಸಲಹೆ ನೀಡಿದ್ದಾರೆ.

    ಶಿಕ್ಷಣ ಮಂಡಳಿ ಮೇ ನಲ್ಲಿ ಈ ಆದೇಶವನ್ನು ಹೊರಡಿಸಿದೆ. ಶಿಕ್ಷಣ ಮಂಡಳಿ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಕ್ಯಾಲಿಫೋರ್ನಿಯಾದೆಲ್ಲಡೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಹೋರಾಟಗಾರ್ತಿ ಪ್ರೀಡ್ರಿಚ್ ಬೆಂಬಲ ನೀಡಿದ್ದಾರೆ.

  • ಐಎಂಎ ವಂಚನೆಗೆ ಸರ್ಕಾರಿ ಶಾಲೆ ಬಂದ್ – 960 ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕರು

    ಐಎಂಎ ವಂಚನೆಗೆ ಸರ್ಕಾರಿ ಶಾಲೆ ಬಂದ್ – 960 ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕರು

    ಬೆಂಗಳೂರು: ಸಾವಿರಾರು ಜನರಿಗೆ ವಂಚನೆಗೈದು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ಬಳಿಕ ಆತ ದತ್ತು ಪಡೆದಿದ್ದ ಶಾಲೆಯ 960 ವಿದ್ಯಾರ್ಥಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮನ್ಸೂರ್ ಖಾನ್ 2 ವರ್ಷಗಳ ಹಿಂದೆ ತಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಿವಾಜಿನಗರದ ಸರ್ಕಾರಿ ವಿಕೆಒ ಪಬ್ಲಿಕ್ ಶಾಲೆಯನ್ನು ದತ್ತು ಪಡೆದಿದ್ದ. ಈ ಶಾಲೆಗೆ ಐಎಂಎ ಸಂಸ್ಥೆಯ ಮೂಲಕ 76 ಶಿಕ್ಷಕರನ್ನು ನೇಮಿಸಿ ಖಾಸಗಿ ಸಂಸ್ಥೆಗಳು ನಾಚುವಂತೆ ಅಭಿವೃದ್ಧಿಪಡಿಸಿದ್ದ. ಹಳೆ ಕಟ್ಟಡದ ನವೀಕರಣಗೊಳಿಸಿ, ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಿ ಹೈಟೆಕ್ ಶಾಲೆಯಂತೆ ರೂಪಿಸಿದ್ದ. ಶಾಲೆಯ ವಿನ್ಯಾಸ ಬದಲಾದ ನಂತರ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.

    ವಿಕೆಒ ಪಬ್ಲಿಕೆ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯಿಂದ ಕಾಲೇಜು ಶಿಕ್ಷಣವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಸರ್ಕಾರ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು, ಇನ್ನುಳಿದ 76 ಶಿಕ್ಷಕರು ಮನ್ಸೂರ್ ಖಾನ್‍ನ ಐಎಂಎ ಸಂಸ್ಥೆ ಮೂಲಕ ನೇಮಕಗೊಂಡಿದ್ದ. ಈಗ ಮನ್ಸೂರ್ ನಾಪತ್ತೆಯಾದ ಬೆನ್ನಲ್ಲೇ 56 ಶಿಕ್ಷಕರು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲೆ ನಫೀವುನ್ನೀಸಾ, ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ವೇತನ ಸೇರಿದಂತೆ ಇತರೆ ವೆಚ್ಚಗಳಿಗೆ ಪ್ರತಿ ತಿಂಗಳು 32 ಲಕ್ಷ ಹಣವನ್ನು ಮನ್ಸೂರ್ ವಿನಿಯೋಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆಯಿಂದ ನೇಮಕಗೊಂಡಿರುವ ಶಿಕ್ಷಕರಿಗೆ ವೇತನ ಸಮಸ್ಯೆಯ ಜೊತೆ ಭವಿಷ್ಯದ ಚಿಂತೆ ಆರಂಭವಾಗಿದೆ. ನಮ್ಮ ಸಂಬಳ ಸಮಸ್ಯೆ ಇತ್ಯರ್ಥವಾಗುವವರೆಗೆ ಪಾಠ ಮಾಡುವುದಿಲ್ಲ ಎಂದು ಹಠ ಹಿಡಿದ ಹಿನ್ನೆಲೆಯಲ್ಲಿ ಶಾಲೆಗೆ ಅನಿವಾರ್ಯವಾಗಿ ರಜೆ ನೀಡಲಾಗಿದೆ.

  • ಬುದ್ಧಿಮಾಂದ್ಯ ಮಗನ ಕಷ್ಟ ನೋಡಿ ಕನಲಿಹೋದ್ರು – ಕೊನೆಗೆ ಇತರೆ ಮಕ್ಕಳ ಬದುಕಿಗೂ ಬೆಳಕಾದ್ರು

    ಬುದ್ಧಿಮಾಂದ್ಯ ಮಗನ ಕಷ್ಟ ನೋಡಿ ಕನಲಿಹೋದ್ರು – ಕೊನೆಗೆ ಇತರೆ ಮಕ್ಕಳ ಬದುಕಿಗೂ ಬೆಳಕಾದ್ರು

    ರಾಯಚೂರು: ಮನೆಯಲ್ಲಿನ ಚಿಕ್ಕಮಕ್ಕಳನ್ನ ಸುಧಾರಿಸುವುದರಲ್ಲೇ ಪೋಷಕರು ಸುಸ್ತಾಗಿ ಹೋಗುತ್ತಾರೆ. ಅಂತಹದರಲ್ಲಿ ಬುದ್ಧಿಮಾಂದ್ಯ ಮಕ್ಕಳಿದ್ದರೆ ಅವರನ್ನ ಸಾಕಲು ಪೋಷಕರು ಕಷ್ಟಪಡೋದು ಸಾಮಾನ್ಯ. ಇಂತಹವರಿಗಾಗಿಯೇ ರಾಯಚೂರಿನ ಶಿಕ್ಷಕರೊಬ್ರು ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಉಚಿತ ಡೇ ಕೇರ್ ಸೆಂಟರ್ ತೆಗೆದಿದ್ದಾರೆ. ಬುದ್ಧಿಮಾಂದ್ಯ ಮಕ್ಕಳು ಯಾರ ಆಶ್ರಯ ಪಡೆಯದೆ ತಮ್ಮ ಕೆಲಸಗಳನ್ನ ತಾವೇ ಮಾಡಿಕೊಳ್ಳುವ ಹಾಗೇ ತರಬೇತಿಯನ್ನ ನೀಡುತ್ತಿದ್ದಾರೆ. ಇವರೇ ನಮ್ಮ ಇಂದಿನ ಪಬ್ಲಿಕ್ ಹೀರೋ.

    ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿ ಹಾಲಯ್ಯ ಹಿರೇಮಠ್ ನಮ್ಮ ಪಬ್ಲಿಕ್ ಹೀರೋ. ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಹಾಲಯ್ಯ ಹಿರೇಮಠ್ ತಮ್ಮ ಬುದ್ಧಿಮಾಂದ್ಯ ಮಗನನ್ನ ಸಾಕಲು ಕಷ್ಟಪಡುತ್ತಿದ್ದರು. ತನ್ನ ಹಾಗೇ ಸಾಕಷ್ಟು ಜನ ಪೋಷಕರು ಕಷ್ಟಪಡುವುದನ್ನ ನೋಡಿದ್ದರು. ಇಂತಹ ಮಕ್ಕಳು ಯಾರ ಆಶ್ರಯವಿಲ್ಲದೆ ದೈನಂದಿನ ಕೆಲಸಗಳನ್ನ ತಾವೇ ಮಾಡಿಕೊಳ್ಳುವಂತೆ ಮಾಡಬೇಕು ಅಂತ ನಿರ್ಧರಿಸಿ 2012ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಡೇ ಕೇರ್ ಸ್ಥಾಪಿಸಿದರು.

    2012 ರಲ್ಲಿ ಬಾಡಿಗೆ ಮನೆಯಲ್ಲಿ 8 ಮಕ್ಕಳೊಂದಿಗೆ ಆರಂಭವಾದ ಶಾಲೆಯಲ್ಲಿ ಈಗ 53 ವಿಕಲ ಚೇತನ ಮಕ್ಕಳಿವೆ. ಮಕ್ಕಳಿಗೆ ಉಚಿತವಾಗಿ ಫಿಸಿಯೋಥೆರಪಿ, ಮಾನಸಿಕ ವೈದ್ಯರಿಂದ ಚಿಕಿತ್ಸೆ, ಯೋಗ, ಸಂಗೀತ, ನಿತ್ಯ ಮಸಾಜ್ ಸೌಲಭ್ಯ ಕಲ್ಪಿಸಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಶಾಲೆ ನಡೆಸುತ್ತಾರೆ. ಬಸ್ ವ್ಯವಸ್ಥೆ ಮಾಡಿದ್ದು, ಇದಕ್ಕೆ ಮಾತ್ರ ಪ್ರತಿ ವಿದ್ಯಾರ್ಥಿಯಿಂದ ತಿಂಗಳಿಗೆ 500 ರೂಪಾಯಿ ಪಡೆಯುತ್ತಾರೆ.

    ಮೊದಲ ಮೂರು ವರ್ಷ ಸಂಪೂರ್ಣವಾಗಿ ಕೈಯಿಂದಲೇ ಖರ್ಚುಮಾಡಿ ಹಾಲಯ್ಯ ಈ ಶಾಲೆ ನಡೆಸಿದ್ದರು. ಇದೀಗ ಹಾಲಯ್ಯರ ಕೆಲಸಕ್ಕೆ ದಾನಿಗಳ ನೆರವು ಸಿಕ್ಕಿದೆ. ನಗರಸಭೆ ಅನುದಾನದಲ್ಲಿ ಸ್ವಂತ ಶಾಲೆ ತಲೆ ಎತ್ತಿದೆ. ಆರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ಬುದ್ಧಿಮಾಂದ್ಯ ಮಕ್ಕಳು ಹುಟ್ಟಲು ಕಾರಣವೇನು..? ಅವರನ್ನ ಹೇಗೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಪ್ರತಿ ಶನಿವಾರ ಕಾಲೇಜು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸ್ತಾರೆ. ಈ ಮೂಲಕ ಹಾಲಯ್ಯ ಹಿರೇಮಠ್ ನಿಸ್ವಾರ್ಥದಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ.

  • ಗಿರೀಶ್ ಕಾರ್ನಾಡ್ ವಿಧಿವಶ ಹಿನ್ನೆಲೆ – ಸರ್ಕಾರಿ ಶಾಲಾ, ಕಾಲೇಜಿಗೆ ರಜೆ

    ಗಿರೀಶ್ ಕಾರ್ನಾಡ್ ವಿಧಿವಶ ಹಿನ್ನೆಲೆ – ಸರ್ಕಾರಿ ಶಾಲಾ, ಕಾಲೇಜಿಗೆ ರಜೆ

    ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿಧಿವಶದ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆಯನ್ನು ಫೋಷಣೆ ಮಾಡಲಾಗಿದೆ.

    ಗಿರೀಶ್ ಕಾರ್ನಾಡ್ ಅವರಿಗೆ ಗೌರವ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆ-ಕಾಲೇಜುಗಳಿಗೆ ರಜೆಯನ್ನು ಫೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಜೊತೆಗೆ ಮೂರು ದಿನಗಳ ರಾಜ್ಯದಲ್ಲಿ ಶೋಕಾಚರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಗಿರೀಶ್ ಕಾರ್ನಾಡ್ ಕೊನೆಯ ಆಸೆಯಂತೆ ಅಂತ್ಯಕ್ರಿಯೆ

    ಅವರ ಕೊನೆಯ ಆಸೆಯಂತೆ ಸರ್ಕಾರಿ ಗೌರವಿಲ್ಲದೇ ಅಂತ್ಯಕ್ರಿಯೆ ಮಾಡಲಾಗುತ್ತದೆ. ಮಧ್ಯಾಹ್ನ ಸುಮಾರು 1 ಗಂಟೆಗೆ ಗಿರೀಶ್ ಅವರು ಮನೆಯಿಂದ ಆಂಬುಲೆನ್ಸ್ ನಲ್ಲಿ ಟ್ರಾಫಿಕ್‍ನಲ್ಲೇ ಕಾರ್ನಾಡ್ ಅವರ ಪಾರ್ಥೀವ ಶರೀರ ಲ್ಯಾವೆಲ್ಲಾ ರಸ್ತೆಯಿಂದ ಬೈಯಪ್ಪನಹಳ್ಳಿಯ ಚಿತಾಗಾರಕ್ಕೆ ಸಾಗಲಿದೆ.

    ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

  • ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ಗುವಾಹಟಿ: ಪ್ಲಾಸ್ಟಿಕ್ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತಂದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ. ಆದರೆ ಅಸ್ಸಾಂನಲ್ಲಿರುವ ಶಾಲೆಯೊಂದು ವಿನೂತನ ರೀತಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

    ದಿಸ್‍ಪುರದ ಶಾಲೆಯೊಂದು ವಿದ್ಯಾರ್ಥಿಗಳು ಪ್ಲಾಸ್ಟಿಕ್ ನೀಡಿದರೆ ಶಾಲಾ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ ಎಂದು ಪ್ರಕಟಿಸಿದೆ. ತಮ್ಮ ಶಾಲೆಯ ವಿದ್ಯಾರ್ಥಿಗಳು ಶುಲ್ಕದ ಬದಲು ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಸಾಕು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

    ಏನಿದು ಪ್ಲಾಸ್ಟಿಕ್ ಶುಲ್ಕ:
    ಶಾಲೆಯಲ್ಲಿರುವ ಒಟ್ಟು 110 ವಿದ್ಯಾರ್ಥಿಗಳು ಪ್ರತಿ ವಾರ 20 ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ನೀಡಬೇಕು. ಶಾಲೆಯ ಸೂಚನೆಯ ಪರಿಣಾಮ ವಿದ್ಯಾರ್ಥಿಗಳು ತಮ್ಮ ಮನೆಯ, ಗ್ರಾಮದ ಸುತ್ತಲು ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಶಾಲೆಗೆ ನೀಡುತ್ತಿದ್ದಾರೆ.

    ಈ ಹಿಂದೆ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಶಾಲೆ ಈ ನಿಯಮವನ್ನು ರೂಪಿಸಿದೆ. ಮಕ್ಕಳಿಂದ ಶೇಖರಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಪುನರ್ ಬಳಕೆ ಮಾಡಲು ಶಾಲಾ ಮಂಡಳಿ ನಿರ್ಧರಿಸಿದೆ. ಅಲ್ಲದೇ ಹೆಚ್ಚು ಪ್ಲಾಸ್ಟಿಕ್ ನೀಡಿದ ವಿದ್ಯಾರ್ಥಿಗಳಿಗೆ ಶಾಲೆಯೇ ಹಣವನ್ನು ನೀಡುತ್ತಿದೆ.

    ಈ ಹಿಂದೆ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೆಂಕಿ ಇಟ್ಟು ಸುಡಲಾಗುತಿತ್ತು. ಈಗ ಈ ವಾಯುಮಾಲಿನ್ಯವನ್ನು ತಪ್ಪಿಸಲು ತ್ಯಾಜ್ಯಗಳನ್ನು ಬಳಸಿ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಇಟ್ಟಿಗೆಗಳನ್ನು ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಸ್ಥಳೀಯ ಶೌಚಾಲಯಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮಕ್ಕಳು ಪ್ಲಾಸ್ಟಿಕ್ ಹೆಕ್ಕುತ್ತಿರುವ ಕಾರಣ ಜನರಲ್ಲೂ ಈಗ ಜಾಗೃತಿ ಮೂಡಲು ಆರಂಭಗೊಂಡಿದೆ.

    ಸ್ಥಳೀಯ ಮಕ್ಕಳು ಶಾಲೆಗೆ ಹೋಗದೇ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡಿ ದಿನಕ್ಕೆ 100 ರೂ. ನಿಂದ 150 ರೂ. ಸಂಪಾದಿಸುತ್ತಿದ್ದರು. ಈಗ ಪ್ಲಾಸ್ಟಿಕ್ ಶುಲ್ಕದಿಂದಾಗಿ ಅವರು ಶಾಲೆಗೆ ಸೇರ್ಪಡೆಯಾಗಿದ್ದಾರೆ.

    ಮಕ್ಕಳಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸಿ ಉತ್ತಮ ಶಿಕ್ಷಣ ನೀಡಲು ಈ ಶಾಲೆಯನ್ನು 2016 ರಲ್ಲಿ ಆರಂಭಿಸಲಾಗಿದೆ. ಮಝೀನ್ ಅಖ್ತರ್ ಎಂಬವರು ಟಾಟಾ ಇನ್‍ಸ್ಟಿಟ್ಯೂಶನ್‍ನ ಎಂಎಸ್‍ಡಬ್ಲ್ಯು ವಿದ್ಯಾರ್ಥಿನಿ ಪರ್ಮಿತರನ್ನ ಭೇಟಿ ಮಾಡಿ ಅವರ ಸಹಾಯದೊಂದಿಗೆ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ವಯಸ್ಸಿನ ಆಧಾರದ ಮೇಲೆ ಶಿಕ್ಷಣ ನೀಡದೆ, ಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಲಾಗುತ್ತಿದೆ.

  • ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಕಾಮಚೇಷ್ಟೆ!

    ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಕಾಮಚೇಷ್ಟೆ!

    ಬಾಗಲಕೋಟೆ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳ ಜೊತೆಗೆ ಶಿಕ್ಷಕನೊಬ್ಬ ಅಸಭ್ಯವಾಗಿ ವರ್ತಸಿ, ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿಗೆ ಮುತ್ತಿಕ್ಕಿದ ಕಾಮುಕ ಶಿಕ್ಷಕನ ಆಟ ತಡವಾಗಿ ಬೆಳಕಿಗೆ ಬಂದಿದೆ.

    ಫೆಬ್ರವರಿ ತಿಂಗಳಲ್ಲಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಜೊತೆ ಶಿಕ್ಷಕನ ಕಾಮಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಕ್ಷಕ ವಿದ್ಯಾರ್ಥಿನಿ ಶಾಲೆಯ ಕಾರ್ಯಾಲಯದ ಒಳಗೆ ಬಂದಾಗ ಆಕೆಯ ಜೊತೆ ಅಸಭ್ಯ ವರ್ತನೆ ತೋರಿದ್ದಾನೆ. ಕಾರ್ಯಾಲಯದಲ್ಲೇ ವಿಧ್ಯಾರ್ಥಿನಿಯನ್ನು ಅಪ್ಪಿಕೊಂಡು, ಮುತ್ತಿಟ್ಟು ಆಕೆಯನ್ನು ಸ್ಪರ್ಶಿಸಿದ್ದಾನೆ. ಈ ವೇಳೆ ಶಿಕ್ಷಕನ ಕಾಮದಾಟದ ದೃಶ್ಯಗಳು ಕಾರ್ಯಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ವಿದ್ಯಾರ್ಥಿನಿ ತೊಡೆ ಮೇಲೆ ಮಲಗಿದ ಹಾಸನ ಪ್ರಿನ್ಸಿಪಾಲ್: ಫೋಟೋ ವೈರಲ್

    ಈ ಘಟನೆ ಬೆಳಕಿಗೆ ಬಂದಂತೆ ಶಾಲೆಯ ಮುಖ್ಯೋಪಾದ್ಯಾಯರು ಶಿಕ್ಷಕನನ್ನು ಎರಡು ತಿಂಗಳ ಹಿಂದೆಯೇ ಅಮಾನತು ಮಾಡಿದ್ದಾರೆ. ಅಲ್ಲದೆ ಶಿಕ್ಷಕನ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಮೇ 5ರಂದು ಎಫ್‍ಐಆರ್ ಕೂಡ ದಾಖಲಾಗಿದೆ.

    ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಕಾಮುಕ ಶಿಕ್ಷಕನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸದ್ಯ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

  • ರಜೆ ಮುಗ್ಸಿ ಬರೋ ಮಕ್ಕಳಿಗೆ ರಿಷಬ್ ಶೆಟ್ಟಿಯಿಂದ ಸರ್ಪ್ರೈಸ್!

    ರಜೆ ಮುಗ್ಸಿ ಬರೋ ಮಕ್ಕಳಿಗೆ ರಿಷಬ್ ಶೆಟ್ಟಿಯಿಂದ ಸರ್ಪ್ರೈಸ್!

    ಬೆಂಗಳೂರು: “ಸಾ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಶೂಟಿಂಗ್ ನಡೆದ ಶಾಲೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ರೂಪ ಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ಅವರು ಕರಾವಳಿ ಭಾಗದ ಕೈರಂಗಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದರು. ಆದರೆ ಆ ಶಾಲೆ ತುಂಬಾ ಹದಗೆಟ್ಟಿತ್ತು. ಚಿತ್ರ ಭರ್ಜರಿ ಯಶಸ್ಸು ಪಡೆದ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಶಾಲೆಯನ್ನು ಅಭಿವೃದ್ಧಿ ಮಾಡಿ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ.

    ಕೈರಂಗಳ ಶಾಲೆಯ ಗೋಡೆಗಳಿಗೆ ವಿವಿಧ ಬಣ್ಣಗಳನ್ನು ಬಳಿದು ಹೊಸ ಶಾಲೆಯಾಗಿ ಮಾರ್ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಗೋಡೆಯ ಮೇಲೆ ಸಂಸ್ಕೃತಿ, ಜನಪದ, ಪರಿಸರ ಸೇರಿದಂತೆ ಅನೇಕ ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಸಂಸ್ಕೃತಿಯ ರೂಪ ಪಡೆದಿರುವ ಶಾಲೆ ನೋಡಲು ಸುಂದರವಾಗಿ ಆಕರ್ಷಕವಾಗಿ ಕಾಣುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    “ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ” ಎಂದು ಬರೆದು ಶಾಲೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    “ಸಾ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾದಲ್ಲಿ ದಿನಕಳೆದಂತೆ ಮುಚ್ಚಿಹೋಗುತ್ತಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮಕ್ಕಳು ಹೇಗೆ ಹೋರಾಟ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿತ್ತು.

  • 99ನೇ ವಯಸ್ಸಿನಲ್ಲಿ ಶಾಲೆಗೆ ಮರಳಿದ ವೃದ್ಧೆ- ಪಾಠ ಕಲಿಯುತ್ತಾ ಗೆದ್ದರು ನೆಟ್ಟಿಗರ ಮನಸ್ಸು

    99ನೇ ವಯಸ್ಸಿನಲ್ಲಿ ಶಾಲೆಗೆ ಮರಳಿದ ವೃದ್ಧೆ- ಪಾಠ ಕಲಿಯುತ್ತಾ ಗೆದ್ದರು ನೆಟ್ಟಿಗರ ಮನಸ್ಸು

    ಅರ್ಜೆಂಟಿನಾ: ವೃದ್ಧೆಯೊಬ್ಬರು ತಮ್ಮ 99ನೇ ವಯಸ್ಸಿನಲ್ಲಿ ಶಾಲೆಗೆ ಹೋಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದು, ಇಳಿ ವಯಸ್ಸಿನಲ್ಲಿ ಪಾಠ ಕೇಳಲು ಹೊರಟ ಈ ವೃದ್ಧೆ ಸದ್ಯ ನೆಟ್ಟಿಗರ ಮನ ಗೆದ್ದಿದ್ದಾರೆ.

    ಹೌದು. ಅರ್ಜೆಂಟಿನಾದ ಎಸೆಬಿಯಾ ಲಿಯೋನಾರ್ ಕೋರ್ಡಲ್(99) ಸಣ್ಣ ವಯಸ್ಸಿನಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ತನ್ನ ತಾಯಿಯನ್ನ ಕಳೆದುಕೊಂಡ ಪರಿಣಾಮ ಶಿಕ್ಷಣವನ್ನು ಬಿಟ್ಟಿದ್ದರು. ಆದ್ದರಿಂದ ತಮ್ಮ ಬಾಲ್ಯದಲ್ಲಿ ಕಲಿಯಲಾಗದ ಶಿಕ್ಷಣವನ್ನು ಪಡೆಯಲು, ಲಿಯೋನಾರ್ ತಮ್ಮ ಜೀವನದ ಕೊನೆಗಾಲದಲ್ಲಿ ಲೆಪ್ರಿಡಾದ ವಯಸ್ಕರ ಶಿಕ್ಷಣದ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದಾರೆ.

    ತನ್ನ 98 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಲಿಯೋನಾರ್ ಒಂದು ದಿನವೂ ಶಾಲೆಗೆ ಚಕ್ಕರ್ ಹಾಕಿಲ್ಲ. ಪ್ರತಿ ಮಂಗಳವಾರ, ಬುಧವಾರ ಹಾಗೂ ಗುರುವಾರ ಇವರ ಶಿಕ್ಷಕಿ ಪಟ್ರೇಶಿಯಾ, ಇವರ ಮನೆಗೆ ಬಂದು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಆದ್ರೆ ಶಾಲೆಯಲ್ಲಿ ನಡೆಯುವ ಪ್ರತಿ ಪಾಠದ ಬಗ್ಗೆ ನಾನು ನೆನಪಿಟ್ಟುಕೊಳ್ಳುತ್ತೇನೆ. ನಾನು ಶಾಲೆಗೆ ಸೇರಿದಾಗ ನನಗೆ ಓದಲು ಬರೆಯಲು ಬರುತ್ತಿರಲಿಲ್ಲ. ಈಗ ಅವೆಲ್ಲವೂ ಅಭ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಸುವುದು ಹೇಗೆ ಎಂಬುದನ್ನ ಕಲಿಯಲಿದ್ದೇನೆ ಎಂದು ಎಸೆಬಿಯಾ ತಮ್ಮ ಶಾಲೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

    ಲಿಯೋನಾರ್ ಅವರು ವಯಸ್ಕರ ಶಿಕ್ಷಣಕ್ಕೆ ಹೋಗುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಇಳಿವಯಸ್ಸಿನ ಈ ವಿದ್ಯಾರ್ಥಿನಿಯ ಕಥೆಗೆ ಅನೇಕ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಈ ವೃದ್ಧೆಯ ಛಲಕ್ಕೆ ಮತ್ತು ಕಲಿಯುವ ಗಟ್ಟಿತನಕ್ಕೆ ಭೇಷ್ ಅಂತ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.