Tag: school

  • ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕರಾವಳಿ ಭಾಗದ ಕುಮಟ ತಾಲೂಕಿನ ಕೂಜಳ್ಳಿ, ಕೋನಳ್ಳಿ ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕುಮಟ ತಾಲೂಕಿನ ಬಡಗಣಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

    ಹೆಚ್ಚಿನ ಮಳೆಯಾದಲ್ಲಿ ಮೂರಕ್ಕೂ ಹೆಚ್ಚು ಗ್ರಾಮಗಳು ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಹೈ ಅಲರ್ಟ್ ಘೋಷಣೆ ಮಾಡಿದೆ.

    ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೇಡ್ ಅಲರ್ಟ್ ನಡುವೆ ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಉಡುಪಿಯ ಪೇಜಾವರ ಮಠಾದೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಸಹಿತ ಚಳಿ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

    ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಈ 24 ಗಂಟೆಯಲ್ಲಿ 135 ಮಿಲಿ ಮೀಟರ್ ಮಳೆ ಬಿದ್ದಿದೆ. ಕುಂದಾಪುರ ತಾಲೂಕಲ್ಲಿ ಅತೀ ಹೆಚ್ಚು 155 ಮಿಲಿಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿಮೀಟರ್ ಮಳೆಯಾಗಿದೆ. ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಉಡುಪಿ ನಗರದ ಕಲ್ಸಂಕ- ಬನ್ನಂಜೆ ವ್ಯಾಪ್ತಿಯ ಹತ್ತಾರು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿದೆ.

    ಬೈಲಕೆರೆಯ ಸುಮಾರು 15 ಮನೆಗಳಿಗೆ ಕಾಲುವೆಯ ನೀರು ನುಗ್ಗಿದೆ. ಮೂಡನಿಡಂಬೂರು ವ್ಯಾಪ್ತಿಯಲ್ಲಿ ಕಾಲುವೆ ಉಕ್ಕಿ ಹರಿದಿದೆ. ಗದ್ದೆಗಳೆಲ್ಲ ಜಲಾವೃತವಾಗಿದೆ. ಮಳೆ ನೀರು ರಸ್ತೆಯಲ್ಲೆಲ್ಲ ಹರಿದಿದ್ದು ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ಸಮಸ್ಯೆಯಾಗಿತ್ತು. ಅಂಬಾಗಿಲು ರಸ್ತೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಕೆಲಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಐದು ದಿನಗಳಲ್ಲಿ ಜಿಲ್ಲೆಯಲ್ಲಿ 500 ಮಿಲಿಮೀಟರ್ ಮಳೆಯಾಗಿದ್ದು, ಮುಂಗಾರು ಪ್ರಬಲವಾಗಿರುವುದಕ್ಕೆ ಪ್ರೌಢಶಾಲೆಯವರೆಗೆ ಡಿಸಿ ರಜೆ ಘೋಷಣೆ ಮಾಡಿದ್ದರು. ಇಂದು ವಿಪರೀತ ಮಳೆಯಾಗಿದ್ದರಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಡಕ್ಕೆ ಮಣಿದು ಡಿಗ್ರಿ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದ್ದಾರೆ.

    ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನೂ ಎರಡು ದಿನ ಮಳೆಯಾಗಲಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇದೇ ವೇಳೆ ಮಂಗಳೂರು – ಬೆಂಗಳೂರು ಸಂಚರಿಸುವ ಎಲ್ಲ ರೀತಿಯ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಕೇರಳದ ಕಣ್ಣೂರು ಮತ್ತು ಕಾರವಾರದಿಂದ ಬೆಂಗಳೂರಿಗೆ ಹೋಗುವ ರೈಲು ಸೇವೆಯನ್ನು ಮಂಗಳೂರಿನವರೆಗೆ ಮಾತ್ರ ನಡೆಸಲಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.

  • ಭಾರೀ ಮಳೆ- ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ

    ಭಾರೀ ಮಳೆ- ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ

    -ಉಡುಪಿ ಜಿಲ್ಲಾ ಶಾಲೆಗಳಿಗೆ ರಜೆ

    ಮಂಗಳೂರು/ಉಡುಪಿ: ಮಂಗಳವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

    ಇತ್ತ ಉಡುಪಿಯಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮುನ್ನೇಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲಾ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮಾತ್ರ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ರಜೆ ಘೋಷಿಸಿದ್ದಾರೆ. ಮುಂದಿನ ಮೂರ್ನಾಲ್ಕು ದಿನ ಉಡುಪಿ ಪರಿಸರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

    ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿತ್ತು. ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದರು. ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು, ಜುಲೈ 22ರಿಂದ 25ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಿಕೊಂಡಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಬೆಳ್ತಂಗಡಿ, ಪುತ್ತೂರಿನಲ್ಲಿ ನಿರಂತರ ತುಂತುರು ಮಳೆಯಾಗುತ್ತಿದೆ.

  • ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ರಾಯಚೂರು: ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಏನೋ ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಈ ಶಾಲೆಯ ಮಕ್ಕಳು ಮಾತ್ರ ಕಟ್ಟಡವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

    ಸಿಂಧನೂರು ತಾಲೂಕಿನ ಗಣೇಶ ನಗರ ಗ್ರಾಮದ ಪ್ರಾಥಮಿಕ ಶಾಲೆಗೆ ಕಟ್ಟಡವೇ ಇಲ್ಲದೆ ಕಳೆದ 12 ವರ್ಷಗಳಿಂದ ಜೋಪಡಿಯಲ್ಲಿ ನಡೆಯುತ್ತಿದೆ. ಇಷ್ಟು ದಿನ ಬಿಸಿಲಿಗೆ ತತ್ತರಿಸಿದ ಒಂದರಿಂದ 6 ನೇ ತರಗತಿ ಮಕ್ಕಳು ಈಗ ಮಳೆಯಿಂದಾಗಿ ಶಾಲೆಗೆ ಹೋಗದಂತಹ ಸ್ಥಿತಿಯಲ್ಲಿದ್ದಾರೆ.

    ಖಾಸಗಿಯವರ ಜೋಪಡಿಯಲ್ಲಿ ಪಾಠ ನಡೆಸುತ್ತಿದ್ದ ಶಿಕ್ಷಕರು ಮಳೆಯಿಂದಾಗಿ ಶಾಲೆಯನ್ನ ನಡೆಸದಂತಾಗಿದೆ. ಕಷ್ಟಪಟ್ಟು ಶಾಲೆಗೆ ಬರುತ್ತಿದ್ದ 16 ಮಕ್ಕಳ ಭವಿಷ್ಯ ಈಗ ಅತಂತ್ರವಾಗಿದೆ. ಕನಿಷ್ಠ ಕಟ್ಟಡದಿಂದ ಹಿಡಿದು ಯಾವುದೇ ಸೌಲಭ್ಯಗಳಿಲ್ಲದೇ ಈ ಗ್ರಾಮದ ಶಾಲೆ ಇದ್ದರೂ ಇಲ್ಲದಂತಾಗಿದೆ.

    ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಶಾಸಕ ಪ್ರತಾಪ್ ಗೌಡ ಪಾಟೀಲ್‍ಗೆ ನೂರು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮೊದಲು ಪಬ್ಲಿಕ್ ಟಿವಿ ಸಹ ಶಾಲೆ ಕುರಿತು ವರದಿ ಪ್ರಸಾರ ಮಾಡಿತ್ತು, ಆದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ವಿದ್ಯಾರ್ಥಿಗಳ ಕಷ್ಟಕ್ಕೆ ಇನ್ನೂ ಸ್ಪಂದಿಸಿಲ್ಲ.

  • ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಜುಲೈ 20ರಿಂದ 22ರವರೆಗೆ 200 ಮಿಮೀ ಮಳೆ ಆಗುತ್ತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶನಿವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ಅಲ್ಲದೆ ತುರ್ತು ನಿರ್ವಹಣಾ ಪಡೆಗೆ ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ.

    ಈಗಾಗಲೇ ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು ಮಂಗಳೂರು ನಗರದ ವಿವಿಧೆಡೆ ಮಳೆ ನೀರು ಅವಾಂತರ ಸೃಷ್ಟಿಸಿದೆ. ಚರಂಡಿ ಬ್ಲಾಕ್ ಆಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಮಂಗಳೂರು ರೈಲು ನಿಲ್ದಾಣಕ್ಕೂ ನೀರು ನುಗ್ಗಿದೆ. ರೈಲು ನಿಲ್ದಾಣದ ಮುಂಭಾಗದಲ್ಲಿ ಕಾಮಗಾರಿ ನಡೆಯುತಿದ್ದ ಹಿನ್ನೆಲೆಯಲ್ಲಿ ಚರಂಡಿ ಬ್ಲಾಕ್ ಆಗಿತ್ತು. ಗುರುವಾರ ಒಂದೇ ಸಮನೆ ಸುರಿದ ಮಳೆಗೆ ನೀರು ರೈಲು ನಿಲ್ದಾಣದ ಒಳಗೆ ನುಗ್ಗಿದೆ. ಟಿಕೆಟ್ ಕೌಂಟರ್ ನಲ್ಲಿ ನೀರು ನಿಂತ ದೃಷ್ಯ ಅಲ್ಲಿನ ದಯನೀಯ ಸ್ಥಿತಿಯನ್ನು ತೋರಿಸುತ್ತಿದೆ.

  • ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ ಚಾಲಕ – ಶಾಲೆ ಆವರಣಕ್ಕೆ ನುಗ್ಗಿದ ಕಾರು

    ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ ಚಾಲಕ – ಶಾಲೆ ಆವರಣಕ್ಕೆ ನುಗ್ಗಿದ ಕಾರು

    ಮಂಗಳೂರು: ಶಾಲೆಯಿಂದ ಮಗುವನ್ನು ಕರೆದೊಯ್ಯಲು ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಭಸವಾಗಿ ಬಂದು ಆವರಣಕ್ಕೆ ನುಗ್ಗಿದ ಘಟನೆ ನಗರದಲ್ಲಿ ನಡೆದಿದೆ.

    65 ವರ್ಷದ ವೃದ್ಧರೊಬ್ಬರು ಕಾರನ್ನು ಚಲಾಯಿಸುತ್ತಾ ಬಿಜೈನಲ್ಲಿರುವ ಲೂರ್ಡ್ಸ್ ಶಾಲೆಯ ಆವರಣಕ್ಕೆ ಬಂದಿದ್ದು ನಿಲ್ಲಿಸಲೆಂದು ಬ್ರೇಕ್ ಒತ್ತುವ ಬದಲು ಆಕ್ಸಿಲೇಟರ್ ಒತ್ತಿದ್ದಾರೆ. ರಭಸವಾಗಿ ನುಗ್ಗಿ ಬಂದ ಕಾರನ್ನು ನೋಡಿ ಮಗುವನ್ನು ಹಿಡಿದುಕೊಂಡು ನಿಂತಿದ್ದ ಇತರೇ ಸಾರ್ವಜನಿಕರು ಗಾಬರಿಯಾಗಿ ದೂರಕ್ಕೆ ಓಡಿ ಪಾರಾಗಿದ್ದಾರೆ.

    ಕಾರು ನೇರವಾಗಿ ಶಾಲೆ ಆವರಣಕ್ಕೆ ನುಗ್ಗಿ ಕೆಳ ಅಂತಸ್ತಿನಲ್ಲಿ ಇದ್ದ ನೀರಿನ ಟ್ಯಾಂಕಿಗೆ ಡಿಕ್ಕಿಯಾಗಿ ನಿಂತಿದೆ. ಇದರಿಂದ ಚಾಲಕ ಬಚಾವಾಗಿದ್ದು ದೊಡ್ಡ ಅಪಘಾತದಿಂದ ಕಾರು ಪಾರಾಗಿದೆ. ಕಾರು ವೇಗವಾಗಿ ನುಗ್ಗಿ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕಟ್ಟಡದ ಮೇಲೆ ಬಿದ್ದ ಹೈಟೆನ್ಷನ್ ತಂತಿ – 55 ವಿದ್ಯಾರ್ಥಿಗಳಿಗೆ ಗಾಯ

    ಲಕ್ನೋ: ಶಾಲಾ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು, ಸುಮಾರು 55 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರದಂದು ಬಲರಾಂಪುರ ಜಿಲ್ಲೆಯ ಉಟ್ರೌಲಾದ ವಿಷ್ಣುಪುರ ಸರ್ಕಾರಿ ಪ್ರಾಥಮಿಕ ಕಟ್ಟಡದ ಛಾವಣಿಯ ಮೇಲೆ 11,000 ಕೆವಿಗೂ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದು ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು ಎನ್ನಲಾಗಿದ್ದು, 55 ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಸದ್ಯ ಗಾಯಗೊಂಡ ಮಕ್ಕಳಲ್ಲಿ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರನ್ನು ಬಲರಾಂಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    ಹೈಟೆನ್ಷನ್ ವೈರ್ ಶಾಲಾ ಕಟ್ಟಡದ ಮೇಲೆ ಬಿದ್ದ ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿಲ್ಲ. ಈ ಬಗ್ಗೆ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿದ್ದು, ಸಿಟ್ಟಿಗೆದ್ದು ಶಾಲಾ ಸಿಬ್ಬಂದಿ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೆ, ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣ ಕರುಣೇಶ್ ಅವರು ಓರ್ವ ಗುತ್ತಿಗೆದಾರರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್ ವಿರುದ್ಧವೂ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಗಾಯಗೊಂಡಿರುವ ಶಾಲಾ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

    ಈ ಅವಘಡ ಸಂಭವಿಸಿದ್ದು ಹೇಗೆ? ಕಾರಣವೇನು ಎನ್ನುವ ಬಗ್ಗೆ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಿ ಎಂದು ಮಧ್ಯಾಂಚಲ್ ವಿದ್ಯುತ್ ವಿತರಣಾ ನಿಗಮದ ಯೋಜನಾ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಅಲ್ಲದೇ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆಯನ್ನೂ ಕೂಡ ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನಿಗವಹಿಸಿ, ಜೊತೆಗೆ ಹೈಟೆನ್ಷನ್ ತಂತಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿ ಎಂದು ಸಿಎಂ ಉತ್ತರ ಪ್ರದೇಶ ವಿದ್ಯುತ್ ನಿಗಮದ ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

  • ಶಾಲೆಗೆ ಹೋಗಿ ಶಾಸಕ ನ್ಯಾಮಗೌಡರಿಂದ ಮಕ್ಕಳಿಗೆ ಸ್ವಚ್ಛತಾ ಪಾಠ

    ಶಾಲೆಗೆ ಹೋಗಿ ಶಾಸಕ ನ್ಯಾಮಗೌಡರಿಂದ ಮಕ್ಕಳಿಗೆ ಸ್ವಚ್ಛತಾ ಪಾಠ

    ಬಾಗಲಕೋಟೆ: ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಇಂದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.

    ಸ್ವಚ್ಛ ಜಮಖಂಡಿ ಹಸಿರು ಜಮಖಂಡಿ ಅಭಿಯಾನವನ್ನು ಶಾಸಕ ಆನಂದ ನ್ಯಾಮಗೌಡ ಹಮ್ಮಿಕೊಂಡಿದ್ದು ನಗರದಲ್ಲಿ ಗಿಡ ನೆಡುವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ.

    ಈ ಪ್ರಯುಕ್ತ ಇಂದು ನಗರದ 27, 28, 30ನೇ ವಾರ್ಡ್‍ಗೆ ತೆರಳಿದ ಆನಂದ ನ್ಯಾಮಗೌಡ ಆಯಾ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವಚ್ಛತಾ ಪಾಠ ಮಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಮನೆ, ಬೀದಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ನಗರಸಭೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.

    ಇದಾದ ಬಳಿಕ ಶಾಲೆ ಮೈದಾನದಲ್ಲಿ ಹಾಗೂ 27,28,30 ನೇ ವಾರ್ಡ್‍ನ ರಸ್ತೆ ಬದಿಗಳಲ್ಲಿ ನಗರಸಭೆ, ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ನೆಡಲಾಯಿತು.

  • ಪುತ್ತೂರಿನಲ್ಲಿ ಮತ್ತೊಂದು ಅತ್ಯಾಚಾರ ಯತ್ನ ಬೆಳಕಿಗೆ

    ಪುತ್ತೂರಿನಲ್ಲಿ ಮತ್ತೊಂದು ಅತ್ಯಾಚಾರ ಯತ್ನ ಬೆಳಕಿಗೆ

    ಮಂಗಳೂರು: ಇತ್ತೀಚೆಗಷ್ಟೇ ಯುವತಿಯ ಮೇಲಾದ ಗ್ಯಾಂಗ್‍ರೇಪ್ ಸುದ್ದಿ ಹೊರಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇಂದು ಮತ್ತೊಂದು ಅತ್ಯಾಚಾರ ಯತ್ನ ಪ್ರಕರಣ ಬೆಳಕಿಗೆ ಬಂದಿದೆ.

    ಅಜಿತ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಅಜಿತ್ ಶಾಲೆಗೆ ಹೋಗುತ್ತಿದ್ದ ಬಾಲಕಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಬಾಲಕಿಯನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಎಸ್‍ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಆರೋಪಿ ಅಜಿತ್‍ನನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಫೆಬ್ರವರಿಯಲ್ಲಿ ಪುತ್ತೂರಿನ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತನ್ನದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆಸಿದಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದರು.

    ಕಾಲೇಜಿನಲ್ಲಿ ನಡೆದ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಮಧ್ಯೆ ದ್ವೇಷ ಉಂಟಾಗಿತ್ತು. ಈ ಹಗೆ ತೀರಿಸಿಕೊಳ್ಳಲು ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    – ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ರೇಪ್

    ನವದೆಹಲಿ: ಶಿಕ್ಷಕಿಯ ಮೇಲೆ ಕಳೆದ 2 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದ ಪ್ರಾಂಶುಪಾಲನನ್ನು ದೆಹಲಿ ಪೊಲೀಸರು ಗುರುವಾರ ಬಂದಿಸಿದ್ದಾರೆ.

    ದಕ್ಷಿಣ ದೆಹಲಿಯ ಜಸೋಲ ಖಾಸಗಿ ಶಾಲೆಯ ಪ್ರಾಂಶುಪಾಲ ರಾಕೇಶ್ ಸಿಂಗ್ ಬಂಧಿತ ಪ್ರಾಂಶುಪಾಲ. 27 ವರ್ಷದ ಸಂತ್ರಸ್ತೆ ಬುಧವಾರ ನೀಡಿದ್ದ ದೂರು ಪಡೆದ ಪೊಲೀಸರು ಆರೋಪಿ ರಾಕೇಶ್ ಸಿಂಗ್‍ನನ್ನು ಬಂಧಿಸಿದ್ದಾರೆ.

    ಆಗಿದ್ದೇನು?:
    ಪ್ರಾಶುಂಪಾಲ ರಾಕೇಶ್ ಸಿಂಗ್ 2017ರ ಜೂನ್‍ನಲ್ಲಿ ಶಾಲಾ ಅವಧಿಯ ಬಳಿಕ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಂತೆ ಸಂತ್ರಸ್ತೆಯನ್ನು ಕರೆದಿದ್ದನು. ನಂತರ ಶಿಕ್ಷಕಿಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷಧ ಬೆರೆಸಿದ ಪಾನೀಯ ನೀಡಿದ್ದನು. ಇದನ್ನು ಕುಡಿದ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದ ವೇಳೆ ರಾಕೇಶ್ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.

    ಪ್ರಾಂಶುಪಾಲ ತನ್ನ ಬಳಿ ಇದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಮೂಲಕ ಕಳೆದ 5 ವರ್ಷಗಳಿಂದ ಶಾಲೆಯ ಆವರಣದಲ್ಲಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗೆ ಇಬ್ಬರು ಸಹ ಶಿಕ್ಷಕರು ಸಹಾಯ ಮಾಡಿದ್ದಾರೆ. ನಾನು ಗರ್ಭಿಣಿಯಾದಾಗ ಮಗುವನ್ನು ತೆಗೆಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಚಿನ್ಮೊಯ್ ಬಿಸ್ವಾಲ್ ವಿವರಿಸಿದ್ದಾರೆ.

    ಈ ಸಂಬಂಧ ಸಂತ್ರಸ್ತೆಯು ಸಾವಿತ್ರಿ ವಿಹಾರ್ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

  • ತರಗತಿಯಲ್ಲೇ ಅಪ್ರಾಪ್ತ ಬಾಲಕಿ ನೇಣಿಗೆ ಶರಣು

    ತರಗತಿಯಲ್ಲೇ ಅಪ್ರಾಪ್ತ ಬಾಲಕಿ ನೇಣಿಗೆ ಶರಣು

    ಹಾಸನ: ಇತ್ತೀಚೆಗೆ ಬೆಂಗಳೂರಿನಿಂದ ಹಾಸನ ಶಾಲೆಯೊಂದಕ್ಕೆ ಪ್ರವೇಶ ಪಡೆದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಬುಧವಾರ ಸಂಜೆ ತರಗತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

    ಲಕ್ಷ್ಮಿ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಲಕ್ಷ್ಮಿ ನಗರದ ಹೊರವಲಯದಲ್ಲಿರುವ ಲೋಯಲಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ತನ್ನದೇ ತರಗತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಲಕ್ಷ್ಮಿ ಪೋಷಕರು ಬೆಂಗಳೂರು ಮೂಲದವರಾಗಿದ್ದು, ಇದೇ ವರ್ಷ ಬೆಂಗಳೂರಿನಲ್ಲಿ ಓದುತ್ತಿದ್ದ ಬಾಲಕಿಯನ್ನು ಹಾಸನದ ಶಾಲೆಗೆ ಎಸ್‍ಎಸ್‍ಎಲ್‍ಸಿ ಅಧ್ಯಯನ ಮಾಡಲು ಸೇರಿಸಲಾಗಿತ್ತು. ಬುಧವಾರ ತರಗತಿ ಮುಗಿದ ನಂತರ ಎಲ್ಲ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ತೆರಳಿದ್ದರೆ ಲಕ್ಷ್ಮಿ ಮಾತ್ರ ಅಲ್ಲಿಂದ ಹೊರಡಲಿಲ್ಲ.

    ರಾತ್ರಿಯಾದರೂ ಲಕ್ಷ್ಮಿ ಹಾಸ್ಟೆಲ್‍ಗೆ ಬರದೇ ಇದ್ದಾಗ ಬಂದು ನೋಡಿದಾಗ ತರಗತಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಹಾಸನಕ್ಕೆ ಕಳುಹಿಸಿದ್ದು ಮನ ನೋಯಿಸಿತ್ತು ಎನ್ನಲಾಗಿದೆ. ಆದರೆ ಆತ್ಮಹತ್ಯೆ ಶೈಲಿಯಿಂದಾಗಿ ಇದು ಕೊಲೆ ಎಂಬ ಅನುಮಾನವೂ ಕೂಡ ವ್ಯಕ್ತವಾಗಿದೆ.

    ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.