Tag: school

  • ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಚಿಕ್ಕಬಳ್ಳಾಪುರ: ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂ ಇಲ್ಲದೆ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ನೆಲದ ಮೇಲೆ ಕೂತು ಪಾಠಪ್ರವಚನ ಮಾಡಿ ಮನಸೆಳೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನೂತನ ಸಿಇಓ ಫೌಸಿಯಾ ತಾರನಮ್ ಪಾಠ ಮಾಡಿದ ಮಹಿಳಾ ಐಎಎಸ್ ಅಧಿಕಾರಿ. ಇವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಳೆದ ವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದಾರೆ. ಅಂದಹಾಗೆ ಜಿಲ್ಲೆಗೆ ಆಗಮಿಸಿರುವ ಸಿಇಓ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ಗ್ರಾಮಪಂಚಾಯ್ತಿ ಕಚೇರಿಗಳು ಸೇರಿ ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನ ಸುತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ನಿಗಾವಹಿಸುವ ಕೆಲಸ ಮಾಡುತ್ತಿದ್ದಾರೆ.

    ಅಗಲಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಸಿಇಓ, ಮಕ್ಕಳೊಂದಿಗೆ ಮಕ್ಕಳಂತೆ ನೆಲದ ಮೇಲೆ ಕೂತು ಅವರ ಜೊತೆ ಬೆರೆತು ಪಾಠ ಪ್ರವಚನ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಇಓ ಫೌಸಿಯಾ ತಾರನಮ್, ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲು ನಾನು ಬಯಸಿದ್ದೇನೆ. ಹೀಗಾಗಿ ನಾನು ಪೂರ್ವ ನಿಗದಿ ಮಾಡದೆ ಧಿಡೀರ್ ಭೇಟಿ ಕೊಟ್ಟಿದ್ದೇನೆ. ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಿಗೆ ಮುಂದಿನ ದಿನಗಳಲ್ಲಿಯೂ ಭೇಟಿ ನೀಡಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.

  • ರಾಜಕೀಯ ದಿಗ್ಗಜರಿರೋ ಜಿಲ್ಲೆಯ ಗ್ರಾಮವೊಂದ್ರಲ್ಲಿ ಮಕ್ಕಳಿಗೆ ಕಟ್ಟಡದ ಜಗಲಿಯಲ್ಲೇ ಪಾಠ!

    ರಾಜಕೀಯ ದಿಗ್ಗಜರಿರೋ ಜಿಲ್ಲೆಯ ಗ್ರಾಮವೊಂದ್ರಲ್ಲಿ ಮಕ್ಕಳಿಗೆ ಕಟ್ಟಡದ ಜಗಲಿಯಲ್ಲೇ ಪಾಠ!

    ಹಾಸನ: ದೇಶಕ್ಕೆ ಮಾಜಿ ಪ್ರಧಾನಿ ಕೊಟ್ಟ ಹಿರಿಮೆಯನ್ನು ಹಾಸನ ಜಿಲ್ಲೆ ಹೊಂದಿದೆ. ಅಲ್ಲದೆ ಓರ್ವ ಪುತ್ರ ಮಾಜಿ ಮುಖ್ಯಮಂತ್ರಿ, ಮತ್ತೊಬ್ಬರು ಪ್ರಭಾವಿ ರಾಜಕಾರಿಣಿಯಾಗಿದ್ದಾರೆ. ಮೊಮ್ಮಗರೊಬ್ಬರು ಸಂಸದರಾದ್ರೆ, ಸೊಸೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇಷ್ಟೆಲ್ಲ ಜನ ಪ್ರತಿನಿಧಿಸುವ ಕ್ಷೇತ್ರದ ಗ್ರಾಮವೊಂದರಲ್ಲಿ ಪುಟ್ಟ ಮಕ್ಕಳು ಜಗಲಿಯಲ್ಲೇ ಪಾಠ ಕೇಳುವಂತಾಗಿದೆ.

    ಹೌದು. ಹೊಳೇನರಸೀಪುರ ತಾಲೂಕಿನ ಉಣ್ಣೆನ ಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಲಾ ಕಟ್ಟಡವಿಲ್ಲ. ಅದು ಹೇಗೋ ಗ್ರಾಮಸ್ಥರು ತಮ್ಮ ಸಂಘದ ಕಟ್ಟಡವನ್ನು ಶಾಲೆಗೆ ಕೊಟ್ಟು ಇಷ್ಟು ವರ್ಷ ತರಗತಿ ನಡೆಸಲು ಸಹಾಯ ಮಾಡಿದರು. ಆದರೆ ಇದೀಗ ಅವರು ಕೂಡ ತಮ್ಮ ಕಟ್ಟಡಕ್ಕೆ ಬೀಗ ಜಡಿದಿದ್ದು ಪುಟ್ಟ ಪುಟ್ಟ ಮಕ್ಕಳೀಗ ಶಾಲಾ ಕಟ್ಟಡದ ಜಗಲಿಯಲ್ಲಿ ಕುಳಿತು ಪಾಠ ಕಲಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

    ಇಪ್ಪತ್ತೊಂದನೆಯ ಶತಮಾನದಲ್ಲಿ ಇಷ್ಟೆಲ್ಲ ರಾಜಕೀಯ ದಿಗ್ಗಜರು ಇರುವ ಗ್ರಾಮದಲ್ಲಿ ಈ ಪರಿಸ್ಥಿತಿ ಇದೆ ಎಂದರೆ ನಿಜಕ್ಕೂ ವಿರ್ಯಾಸವೇ ಸರಿ. ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲವಾಗಿದೆ. ಹೀಗಾಗಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸಿದ ಗ್ರಾಮಸ್ಥರು ಯುವಕರ ಸಂಘದ ಕಚೇರಿಯ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದರು. ಆದರೆ ಇದೀಗ ಅದಕ್ಕೆ ಬೀಗ ಜಡಿದ ಪರಿಣಾಮ ಈ ವಿದ್ಯಾರ್ಥಿಗಳು ಕಟ್ಟಡದ ಹೊರಗಡೆಯೇ ಪಾಠ ಕೇಳುವಂತಾಗಿದೆ.

    ಒಟ್ಟು 1ರಿಂದ 5ನೇ ತರಗತಿಯವರೆಗೆ 20 ಮಕ್ಕಳು ವಿದ್ಯಾರ್ಥಿಗಳಿದ್ದಾರೆ. ಎಲ್ಲ ತರಗತಿಗಳಿಗೂ ಒಂದೇ ಕೊಠಡಿ. ಅದರಲ್ಲೇ ಎಲ್ಲ ತರಗತಿಗಳಿಗೆ ಪಾಠದ ಜೊತೆಗೆ ಬಿಸಿಯೂಟದ ಅಡುಗೆ ಕೂಡ ಅಲ್ಲಿಯೇ ಮಾಡಲಾಗುತ್ತಿದೆ. ಇದರಿಂದ ಅತ್ತ ಸರಿಯಾಗಿ ಪಾಠ ಹೇಳಿಕೊಡಲೂ ಆಗದೆ ಹಿರಿಯ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗದೇ ಶಿಕ್ಷಕರು ಕೂಡ ಹೈರಾಣಾಗಿದ್ದಾರೆ.

    ಇಪ್ಪತ್ತು ವಿದ್ಯಾರ್ಥಿಗಳು ಜಗಲಿ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಈ ವಿದ್ಯಾರ್ಥಿಗಳಿಗೆ ಇದೇ ಗತಿಯಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಗ್ರಾಮಸ್ಥರು ತಮ್ಮ ಊರಿನ ಶಾಲೆಗೆ ನೂತನ ಕಟ್ಟಡ ಕಟ್ಟಿಕೊಡಬೇಕೆಂದು ಆಗ್ರಹಿಸಿದ್ದಾರೆ.

  • ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    -ಮಕ್ಕಳಿಗೆ ಗ್ರಾಮಸ್ಥರು, ಶಿಕ್ಷಕರು ಸಾಥ್

    ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ ಕೆಸರುಮಯವಾಗಿತ್ತು. ಹೀಗಾಗಿ ನೀರು ತಗ್ಗಿರುವ ಕಾರಣಕ್ಕೆ ಈ ಶಾಲೆಯ ವಿದ್ಯಾರ್ಥಿಗಳೇ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

    ಕಲಿಕೆಯಲ್ಲಿ ಆಸಕ್ತಿ ಇರುವ ಕಾರಣಕ್ಕೆ ತಮ್ಮ ಶಾಲೆಯನ್ನು ತಾವಾಗೆ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ನಿರ್ಧರಿಸಿ, ಸ್ನೇಹಿತರೊಟ್ಟಿಗೆ ಸೇರಿಕೊಂಡು ಉತ್ಸಾಹದಿಂದ ಶಾಲೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚಿದ ಶಿಕ್ಷಕರ ವರ್ಗ ಹಾಗೂ ಎಸ್‍ಡಿಎಂಸಿ ಸದಸ್ಯರು ಕೂಡ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.

    ಶಾಲಾ ಕೊಠಡಿಗಳಿಗೆ ಹಾಗೂ ಆವರಣಕ್ಕೆ ಪುಟಾಣಿ ಮಕ್ಕಳು ಪೈಪ್‍ಗಳ ಮೂಲಕ ನೀರು ಹಾಕುತ್ತಿದ್ದರೆ, ಇತರೆ ವಿದ್ಯಾರ್ಥಿಗಳು ಪೊರಕೆಯಿಂದ ಗುಡಿಸಿ ಕಸವನ್ನು, ಕೆಸರನ್ನು ಹೊರಗಡೆ ಎಸೆಯುತ್ತಿದ್ದಾರೆ. ಅಲ್ಲದೆ ಮಳೆಗೆ ಶಾಲೆಯ ಕೆಲ ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದನ್ನು ಕೂಡ ಮಕ್ಕಳೇ ಸ್ವಚ್ಛಗೊಳಿಸುತ್ತಿದ್ದಾರೆ.

  • ವಾಸಕ್ಕೆ ಯೋಗ್ಯವಲ್ಲವೆಂದ ಜಿಲ್ಲಾಡಳಿತ – ಆತಂಕದಲ್ಲಿ ಗ್ರಾಮಸ್ಥರು

    ವಾಸಕ್ಕೆ ಯೋಗ್ಯವಲ್ಲವೆಂದ ಜಿಲ್ಲಾಡಳಿತ – ಆತಂಕದಲ್ಲಿ ಗ್ರಾಮಸ್ಥರು

    ಮಡಿಕೇರಿ: ಜಲ ಪ್ರಳಯಕ್ಕೆ ಕೊಡಗು ಜಿಲ್ಲೆಯ ಜನ ನಲುಗಿ ಹೋಗಿದ್ದು, ಮತ್ತೆ ಬದುಕನ್ನು ಕಟ್ಟಿಕೊಳ್ಳಲು ಜನತೆ ಮುಂದಾಗುತ್ತಿದ್ದಾರೆ. ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಮುರಿದು ಬಿದ್ದಿರುವ ಮನೆ, ನೆಲಸಮಗೊಂಡಿರುವ ಅಂಗಡಿ ಮುಂಗಟ್ಟುಗಳು, ಇದೀಗ ಅವಶೇಷಗಳಂತೆ ಗೋಚರಿಸುತ್ತಿದೆ.

    ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರಿಗೆ ಆಶ್ರಯ ತಾಣವಾಗಿದ್ದ ಕಾಳಜಿ ಕೇಂದ್ರಗಳಿಂದ ಹೊರ ಬರುತ್ತಿರುವ ಸಂತ್ರಸ್ತರು ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಜಲಪ್ರಳಯ ಕಸಿದುಕೊಂಡಿರುವ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಹಂಬಲ ಹೊಂದಿದ್ದು, ತಮ್ಮ ಅಕ್ಕಪಕ್ಕದವರ ನೆರವಿನೊಂದಿಗೆ ಮನೆ, ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

    ಜಿಲ್ಲಾಡಳಿತ ಸದ್ಯಕ್ಕೆ ಈ ಗ್ರಾಮದಲ್ಲಿ ವಾಸಕ್ಕೆ ಯೋಗ್ಯವಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಡಳಿತದ ಮಾತು ಕೇಳಿ ಗ್ರಾಮಸ್ಥರು ಆಂತಕದಲ್ಲಿ ಇದ್ದಾರೆ. ಶಾಲೆಗಳಲ್ಲಿ ಇದೀಗ ಆಶ್ರಯ ನೀಡಿದ್ದಾರೆ. ಆದರೆ ಎಷ್ಟು ದಿನ ಇಲ್ಲಿ ಇರುವುದಕ್ಕೆ ಸಾಧ್ಯ, ತಮಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ಆದಷ್ಟು ಬೇಗ ಮಾಡಿಕೊಡುವಂತೆ ಸಂತ್ರಸ್ತರು ಹೇಳುತ್ತಿದ್ದಾರೆ.

    ಅಲ್ಲದೆ ಇದೇ ಗ್ರಾಮದಲ್ಲಿ ಮಳೆಯಲ್ಲಿ ಮೃತಪಟ್ಟ ಕುಂಞಣ್ಣ(68) ಅವರ ಮಗ ಸಂತೋಷ್ ಎಂಬವರು ಮಳೆಯ ಸಮಯದಲ್ಲಿ ಊರಿನವರ ರಕ್ಷಣೆ ಹೋಗಿ ಅನೇಕರ ಜೀವ ಉಳಿಸಿದ್ದರು. ಆದರೆ ಅವರಿಗೆ ತಮ್ಮ ತಂದೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತಂದೆ ಮನೆಯಲ್ಲಿ ಇರುವುದು ನಮಗೆ ತಿಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  • ಪ್ರವಾಹಕ್ಕೆ ಹಾಳಾದ ಪಠ್ಯಪುಸ್ತಕಕ್ಕಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

    ಪ್ರವಾಹಕ್ಕೆ ಹಾಳಾದ ಪಠ್ಯಪುಸ್ತಕಕ್ಕಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

    ಮಡಿಕೇರಿ: ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಗೆ ಉಂಟಾದ ಪ್ರವಾಹದಿಂದ ಜನರ ಆಸ್ತಿಪಾಸ್ತಿಗಳು ಮಾತ್ರ ನಾಶವಾಗಿಲ್ಲ, ಅದರ ಜೊತೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಸಹ ಕೊಚ್ಚಿಕೊಂಡು ಹೋಗಿದೆ. ಮನೆಗಳಿಗೆ ನುಗ್ಗಿರುವ ಪ್ರವಾಹದ ನೀರಿಗೆ ಇಡೀ ಮನೆಯೇ ಜಲಾವೃತವಾಗಿ, ಮನೆಯಲ್ಲಿದ್ದ ನೋಟ್ಸ್, ರೆಕಾರ್ಡ್ ಸೇರಿದಂತೆ ಇತರೆ ಸಲಕರಣೆಗಳು ನೀರಿನಿಂದ ಹಾಳಾಗಿಹೋಗಿದೆ.

    ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಆದರೆ ಅವಾಂತರ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮಳೆ, ಪ್ರವಾಹ ಕಡಿಮೆ ಅದ ಮೇಲೆ ಸಮಸ್ಯೆಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಮಳೆಗೆ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಂಡಿತ್ತು. ಸದ್ಯ ಈ ಗ್ರಾಮದಲ್ಲಿ ನೀರು ಇಳಿದಿರುವ ಹಿನ್ನೆಲೆ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಮನೆಯಲ್ಲಿಟ್ಟಿದ್ದ ವಸ್ತುಗಳೆಲ್ಲಾ ನೀರಿಗೆ ಹಾಳಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಳಸುವ ನೋಟ್ಸ್ ಗಳು ಹಾಗೂ ರೆಕಾರ್ಡ್ ಗಳು ನೀರಿಗೆ ಹಾನಿಯಾಗಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.

    ಕಷ್ಟಪಟ್ಟು ಬರೆದಿಟ್ಟಿದ್ದ ನೋಟ್ಸ್ ಗಳು, ಪ್ರಾಕ್ಟಿಕಲ್ಸ್‍ಗೆ ಬಳಸುವ ಸಲಕರಣೆಗಳು ನೀರಿನಲ್ಲಿ ಬಿದ್ದು ಉಪಯೋಗಕ್ಕೆ ಬಾರದಂತ ಸ್ಥಿತಿಗೆ ತಲುಪಿದೆ. ಇದೇ ತಿಂಗಳು ನಮಗೆ ಪರೀಕ್ಷೆಯಿದೆ. ನಾವು ಸಾಕಷ್ಟು ತಯಾರಿ ನಡೆಸಿದ್ದೆವು. ಇದೀಗ ನಮ್ಮ ಪರಿಶ್ರಮವೆಲ್ಲ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ. ಕೆಲ ದಿನಗಳಿಂದ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಪ್ರವಾಹ ತಗ್ಗಿದ್ದರು ಕೂಡ ಜನರು ಸಂಕಷ್ಟದಲ್ಲಿದ್ದಾರೆ. ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

    ಇತ್ತ ಮಡಿಕೇರಿ ತಾಲೂಕಿನ ಕೊಟ್ಟಮುಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅದರೆ ಈಗ ಪ್ರವಾಹ ಇಳಿದು ಗ್ರಾಮ ಕೆಸರುಮಯವಾಗಿದೆ. ಅಲ್ಲದೆ ಗ್ರಾಮದ ಶಾಲೆಗೆ ನೀರು ನುಗ್ಗಿ ಪೀಠೋಪಕರಣಗಳು ಸೇರಿದಂತೆ ಎಲ್ಲ ನೀರಿನಲ್ಲಿ ಮುಳುಗಿ ಕೆಸರುಮಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಶಾಲೆಯ ಪರಿಸ್ಥಿತಿ ನೋಡಿಕೊಂಡು, ತಾವು ಬೆಳೆಸಿದ ಹೂ ಗಿಡಗಳ ಸ್ಥಿತಿ ಕಂಡು ಬೇಸರ ಪಟ್ಟಿದ್ದಾರೆ.

  • ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ ಈ ಶಾಲೆ ಕಟ್ಟಡ ನೆಲಕ್ಕೆ ಉರುಳಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

    ಶನಿವಾರ ಮಧ್ಯಾಹ್ನದ ವೇಳೆಗೆ ಶಾಲೆಯ ಗೋಡೆಗಳು ಉದುರಲು ಪ್ರಾರಂಭವಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಶಬ್ದದೊಂದಿಗೆ ಕಟ್ಟಡ ಬಹುತೇಕ ನೆಲಕಚ್ಚಿದೆ. ರಾತ್ರಿ ಈ ದುರ್ಘಟನೆ ಸಂಭವಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಕಟ್ಟಡ ಪೂರ್ತಿ ನೆಲಸಮವಾಗಿದ್ದು ಶಾಲೆಯ ಮಧ್ಯವಿರುವ ಕೊಠಡಿ ಸಂಪೂರ್ಣ ನೆಲಸಮಗೊಂಡಿದೆ. ಈ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಸಹಿತ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ಕಟ್ಟಡ ತೇವವಾಗಿದೆ. ಹೀಗಾಗಿ ಕುಸಿದು ಬಿದ್ದಿದೆ. 100 ವರ್ಷ ಇತಿಹಾಸ ಇರುವ ಶಾಲೆ ಇದಾಗಿದ್ದು, ಕಟ್ಟಡ ಸುಮಾರು 45 ವರ್ಷ ಹಳೆಯದಾಗಿದೆ. ಸ್ಥಳಕ್ಕೆ ಶಾಸಕರು, ವಿವಿಧ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಭಾರೀ ಮಳೆ – 7 ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

    ಭಾರೀ ಮಳೆ – 7 ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

    ಬೆಂಗಳೂರು: ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಬಾಗಲಕೋಟೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಿಸಲಾಗಿದ್ದು, ಚಿಕ್ಕಮಗಳೂರಿನ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಒಂದೆಡೆ ಪ್ರವಾಹ, ಇನ್ನೊಂದೆಡೆ ಮಳೆ ಹೆಚ್ಚುತ್ತಲೇ ಇದ್ದು, ಪರಿಹಾರ ಕಾರ್ಯ ಸವಾಲಾಗಿ ಪರಿಣಮಿಸಿದೆ. ಕೆಲವೆಡೆ ಗಂಜಿ ಕೇಂದ್ರಗಳಿಗೇ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

    ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಜಿಲ್ಲೆಯಾದ್ಯಂತ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.

    ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ರಜೆ ಘೋಷಿಸಿ ಆದೇಶ ಹೊರಡಿಸಿದ್ದು, ತ್ರಿವಳಿ ನದಿಗಳ ಪ್ರವಾಹಕ್ಕೆ ತುತ್ತಾಗಿ ಸುಮಾರು 30 ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿವೆ. ಈ ಹಿನ್ನಲೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಿರಲಿ ಎಂದು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಉಡುಪಿ: ವರುಣನ ಆರ್ಭಟ ಒಂದು ಕಡೆಯಾದರೆ, ಭೂ ಕುಸಿತದ ಭೀತಿ ಇನ್ನೊಂದೆಡೆಯಾಗಿದೆ. ಕರಾವಳಿ ಭಾಗದ ಬಹುತೇಕ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿ ರಸ್ತೆಗಳು ಬಂದ್ ಆಗಿವೆ, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆಗಸ್ಟ್ 9ರಂದು ಸಹ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

    ಉತ್ತರ ಕನ್ನಡ: ಜಿಲ್ಲೆಯಲ್ಲಿ ಸಹ ಅದೇ ಪರಿಸ್ಥಿತಿ ಮುಂದುವರಿದಿದ್ದು, ಮಳೆ, ಪ್ರವಾಹ ನಿರಂತರವಾಗಿದೆ. ಈ ಹಿನ್ನೆಲೆ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿಗಳಿಗೆ ಶುಕ್ರವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ಆದೇಶಿಸಿದ್ದಾರೆ.

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆ 5 ತಾಲೂಕಿನ ಶಾಲಾ-ಕಾಲೇಜಿಗೆ ಶುಕ್ರವಾರವೂ ಸಹ ರಜೆಯನ್ನು ಮುಂದುವರಿಸಲಾಗಿದೆ. ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಅಪರ ಜಿಲ್ಲಾಧಿಕಾರಿ ಕುಮಾರ್ ಆದೇಶ ಹೊರಡಿಸಿದ್ದಾರೆ.

  • ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕ ನೇಣಿಗೆ ಶರಣು

    ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ವಸತಿ ಶಾಲೆಯ ಕೊಠಡಿಯಲ್ಲೇ ಮುಖ್ಯಶಿಕ್ಷಕನೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

    ನಗರದ ಪರಿಶಿಷ್ಠ ಜಾತಿ ವಸತಿ ನಿಲಯದಲ್ಲಿ ಮುಖ್ಯಶಿಕ್ಷಕರಾಗಿದ್ದ ಗಂಗಣ್ಣ (55) ಮೃತ ಶಿಕ್ಷಕ. ಕೌಟುಂಬಿಕ ಕಲಹ ಹಾಗೂ ಸಾಲಭಾದೆ ಶಂಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

    ಬೆಳಿಗ್ಗೆ ಎಂದಿನಂತೆ ವಸತಿ ಶಾಲೆಗೆ ಬಂದಿದ್ದ ಗಂಗಣ್ಣ ವಸತಿ ಶಾಲೆಯ ಮೊದಲ ಮಹಡಿಯ ಕೊಠಡಿಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸಮಾಜಕಲ್ಯಾಣ ಇಲಾಖಾಧಿಕಾರಿಗಳು ಹಾಗೂ ಗೌರಿಬಿದನೂರು ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಬೆಂಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಮಲೆನಾಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮತ್ತೆ ಎರಡು ದಿನಗಳ ಕಾಲ ರಜೆಯನ್ನು ವಿಸ್ತರಿಸಲಾಗಿದೆ.

    ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮಲೆಯ ಮಾರುತ ಬಳಿ ಗುಡ್ಡ ಕುಸಿಯುತ್ತಿದೆ. ಪದೇ ಪದೆ ಗುಡ್ಡ ಕುಸಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದ್ದು, ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಸಹ ಅಷ್ಟೇ ಭರದಿಂದ ಸಾಗಿದೆ. ಧಾರಾಕಾರ ಮಳೆಯಾಗಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ‌ ಕುಸಿತ ಕಂಡಿರುವುದರಿಂದ 2 ದಿನಗಳ ಕಾಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.

    ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯ ಎನ್ನುವಂತಹ ವಾತಾರಣ ನಿರ್ಮಾಣವಾಗಿದ್ದು, ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಸಂಪೂರ್ಣ ಬಂದ್ ಆಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಳುವಳ್ಳಿ ಮಾರ್ಗವೂ ರಸ್ತೆ ಕುಸಿತದಿಂದ ಮುಚ್ಚಲ್ಪಟ್ಟಿದೆ. ಭೂ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

    ಭದ್ರೆಯ ಅಬ್ಬರಕ್ಕೆ ಹೆಬ್ಬಾಳೆ, ಮಳೆಗಾಳಿ ಅಬ್ಬರಕ್ಕೆ ಹಳುವಳ್ಳಿ ರಸ್ತೆಯೂ ಬಂದ್ ಆಗಿವೆ. ಇದರಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಸಂಪೂರ್ಣ ಬಂದ್ ಆದಂತಾಗಿವೆ.

    ಹಾಸನ: ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿದ್ದು, ಕೆರೆ ಉಕ್ಕಿ ಹರಿಯುತ್ತಿದೆ. ಕೆರೆ ಭರ್ತಿಯಾಗಿದ್ದರಿಂದ ನೀರು ಹೊರಗೆ ಹರಿಯುತ್ತಿದ್ದು, ಕೆರೆಯ ಬಳಿ ಇರುವ ಹತ್ತಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಭತ್ತ ಹಾಗೂ ವಿವಿಧ ಬೆಳೆಗಳು ನೀರುಪಾಲಾಗಿವೆ. ಕೆರೆ ತುಂಬಿದ್ದರಿಂದ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಹಾಸನ ತಾಲೂಕಿನ ಅಗಸರಹಳ್ಳಿ ಸೇತುವೆ ಸಹ ಮುಳುಗಡೆಯಾಗಿದ್ದು, ಈ ಮಾರ್ಗದ ವಾಹನ ಸವಾರರು ಪರದಾಡುತ್ತಿದ್ದಾರೆ.

    ಸಕಲೇಶಪುರದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹೊಳೆಮಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ. ಪಟ್ಟಣದ ಮೀನು ಮಾರುಕಟ್ಟೆ ಮತ್ತು ಆಝಾದ್ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಿರುಗಾಳಿ ಸಹಿತ ಮಳೆಗೆ ಮಲೆನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಇನ್ನೂ ಸಹ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದ್ದು, ಪ್ರವಾಹದ ಭೀತಿ ಇನ್ನೂ ಹೆಚ್ಚಾಗಿದೆ.

    ಉತ್ತರ ಕನ್ನಡ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಕಾರವಾರ ತಾಲೂಕಿನ ಕಿನ್ನರ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕಾಳಿ ನದಿಯ ನೀರಿನ ಪ್ರವಾಹಕ್ಕೆ ಗ್ರಾಮಗಳು ಜಲಾವೃತಗೊಂಡಿವೆ.

  • ಶಾಲೆಯಲ್ಲಿ ವಿತರಿಸಿದ ಮಾತ್ರೆ ಸೇವಿಸಿ 35 ವಿದ್ಯಾರ್ಥಿಗಳು ಅಸ್ವಸ್ಥ

    ಶಾಲೆಯಲ್ಲಿ ವಿತರಿಸಿದ ಮಾತ್ರೆ ಸೇವಿಸಿ 35 ವಿದ್ಯಾರ್ಥಿಗಳು ಅಸ್ವಸ್ಥ

    ತುಮಕೂರು: ಶಾಲೆಯಲ್ಲಿ ವಿತರಿಸಿದ ಐರನ್ ಕಂಟೆಂಟ್ ಮಾತ್ರೆ ಸೇವಿಸಿದ 35 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಎಸ್. ಕೊಡಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೊಡಿಗೆಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಐರನ್ ಆಂಡ್ ಫಾಲಿಕ್ ಆಸಿಡ್’ ಹೆಸರಿನ ಮಾತ್ರೆಯನ್ನು ಇಂದು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಿಂದ ತಂದು ವಿತರಣೆ ಮಾಡಲಾಗಿತ್ತು. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಉಚಿತವಾಗಿ ನೀಡಿರುವ ಈ ಮಾತ್ರೆ 2018ರ ಆಗಸ್ಟ್ ನಲ್ಲಿ ತಯಾರಾಗಿದ್ದು, 2020 ಜುಲೈವರೆಗೆ ಬಳಸಬಹುದಾಗಿದೆ.

    ಈ ಮಾತ್ರೆ ನುಂಗಿದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಾತ್ರೆ ಸೇವಿಸಿದ ಕೆಲ ಸಮಯದ ನಂತರ ವಿದ್ಯಾರ್ಥಿಗಳಿಗೆ ತಲೆ ಸುತ್ತುವುದು, ವಾಂತಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದಂತೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ರಿಯಾಕ್ಷನ್ ಆಗಿ 15 ಮಂದಿ ರೋಗಿಗಳು ಕಣ್ಣು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಜುಲೈ 15ರಂದು ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿತ್ತು.

    25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು.

    ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದರು.

    ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಳಸಿದ ಔಷಧ ದುಷ್ಪರಿಣಾಮದಿಂದ ರಿಯಾಕ್ಷನ್ ಆಗಿ ಈ ಫಲಿತಾಂಶ ಬಂದಿದೆ ಎಂದು ಆಸ್ಪತ್ರೆ ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಅಕ್ಯೂಜೆಲ್ ಆಫ್ತಮಾಲಿಕ್ ವಿಸಿಯೋಸರ್ಜಿಕಲ್ ಡಿವೈಸ್ ಬ್ಯಾಚ್ ನಂ ಒಯುವಿ 1990203 ಔಷಧವನ್ನು ಬಳಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.