Tag: school

  • ರಾಯಚೂರಿನಲ್ಲಿ ಭಾರೀ ಮಳೆ – ನೀರು ನಿಂತ ಶಾಲೆಯಲ್ಲೇ ಮಕ್ಕಳಿಗೆ ಪಾಠ

    ರಾಯಚೂರಿನಲ್ಲಿ ಭಾರೀ ಮಳೆ – ನೀರು ನಿಂತ ಶಾಲೆಯಲ್ಲೇ ಮಕ್ಕಳಿಗೆ ಪಾಠ

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜಿಲ್ಲೆಯಲ್ಲಿ ಅವಾಂತರಗಳನ್ನ ಸೃಷ್ಟಿಸುತ್ತಿದೆ. ಸಿಂಧನೂರು, ಸಿರವಾರ, ಮಾನ್ವಿ, ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ಭಾರೀ ಮಳೆಯಾಗಿದೆ.

    ಸಿಂಧನೂರು ತಾಲೂಕಿನ ಬಂಗಾರ ಕ್ಯಾಂಪ್ ನಲ್ಲಿ ಶಾಲೆಗೆ ನೀರು ನುಗ್ಗಿದ್ದು ಮಕ್ಕಳು ಪರದಾಡುವಂತಾಗಿದೆ. ನೀರು ತುಂಬಿದ ಕೊಠಡಿಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಸಿರವಾರ ತಾಲೂಕಿನ ಅತ್ತನೂರು, ಚಾಗಭಾವಿಯಲ್ಲಿ ಹಳ್ಳ ತುಂಬಿಹರಿಯುತ್ತಿದ್ದು ಜಮೀನುಗಳಿಗೆ ನೀರು ನುಗ್ಗಿದೆ.

    ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಸಿಯತಲಾಬ್ ಪ್ರದೇಶದಲ್ಲಿ ಮನೆಗಳು ಜಲಾವೃತವಾಗಿವೆ. ಶ್ರೀರಾಮನಗರ ಕಾಲೋನಿಯಲ್ಲಿರುವ ಕೊದಂಡರಾಮ ದೇವಸ್ಥಾನ ಆವರಣ ಕೆರೆಯಂತಾಗಿದೆ. ಮಳೆಯಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮಾನ್ವಿಯ ಮುಷ್ಟೂರು ಸೇತುವೆ, ಲಿಂಗಸುಗೂರಿನ ಉಪ್ಪಾರ ನಂದಿಹಾಳ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿವೆ.

  • ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    – ಮನೆಯಲ್ಲಿ ಪತಿ ಜೊತೆ ಒಳಉಡುಪಿನಲ್ಲಿ ಸಿಕ್ಕ ಶಿಷ್ಯೆ

    ಲಂಡನ್: ಅಪ್ರಾಪ್ತೆ ಶಿಷ್ಯೆ ಜೊತೆ ಅಕ್ರಮ ಸಂಬಂಧ ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಆತನ ಪತ್ನಿಗೆ ಭವಿಷ್ಯದಲ್ಲಿ ಪಾಠ ಹೇಳದಂತೆ ಬ್ಯಾನ್ ಮಾಡಲಾಗಿದೆ. ಅಪ್ರಾಪ್ತೆ ಶಿಷ್ಯೆ ಜೊತೆ ಪತಿ ಅಕ್ರಮ ಸಂಬಂಧವನ್ನ ಬಚ್ಚಿಟ್ಟದ್ದರಿಂದ ಪತ್ನಿಯೂ ಶಿಕ್ಷೆಗೆ ಗುರಿಯಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಇಬ್ಬರನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

    ಜೇನ್ ಮತ್ತು ಬ್ರಿಯಾನಾ ಇಂಗ್ಲೆಂಡಿನ ವಾರ್‍ವಿಕ್ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮಕ್ಕಳಿಗೆ ಮನೆ ಪಾಠ ಸಹ ಮಾಡುತ್ತಿದ್ದರು. ಮನೆ ಪಾಠಕ್ಕೆ ಬರುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಕ್ರಮ ಸಂಬಂಧ ಹೊಂದಿದ್ದನು.

    ಮೊದಲ ಬಾರಿಗೆ ಸೂಪರ್ ಮಾರ್ಕೆಟ್ ನಲ್ಲಿ ವಿದ್ಯಾರ್ಥಿನಿಯನ್ನ ಭೇಟಿಯಾಗಿದ್ದ ಶಿಕ್ಷಕ ಕಾರ್ ಪಾರ್ಕಿಂಗ್ ನಲ್ಲಿ ಆಕೆಗೆ ಕಿಸ್ ಮಾಡಿದ್ದನು. ತದನಂತರ ತನ್ನ ಮನೆಗೆ ಆಹ್ವಾನಿಸಿ ವಿದ್ಯಾರ್ಥಿನಿ ಜೊತೆ ಮೂರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನು.

    ಒಂದು ಸಾರಿ ಮನೆಯ ಗೆಸ್ಟ್ ರೂಮಿನಲ್ಲಿ ವಿದ್ಯಾರ್ಥಿನಿ ಒಳಉಡುಪಿನಲ್ಲಿ ಪತಿ ಜೊತೆ ಸಿಕ್ಕಿದ್ದಾಳೆ. ಆದ್ರೆ ಶಿಕ್ಷಕಿ ವಿಷಯವನ್ನು ಬಾಲಕಿಯ ಕುಟುಂಬಕ್ಕೂ ಮತ್ತು ಶಿಕ್ಷಣ ಮಂಡಳಿಗೆ ತಿಳಿಸಿದೇ ಮರೆ ಮಾಚಿದ್ದಳು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭೋಧನಾ ನಿಯಂತ್ರಣ ಏಜೆನ್ಸಿಗೆ ಕೇಸ್ ವರ್ಗಾವಣೆ ಆಗಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿರುವ ಏಜೆನ್ಸಿ ಇಬ್ಬರ ಮೇಲೆ ನಿಷೇಧ ಹೇರಿದೆ. 2015 ಸೆಪ್ಟೆಂಬರ್ ನಲ್ಲಿ ಪ್ರಕರಣ ನಡೆದಿದ್ದು, ಇದೀಗ ಶಿಕ್ಷಕನಿಗೆ 42 ವರ್ಷ. ಈತ ಖಾಸಗಿ ಬೋರ್ಡಿಂಗ್ ಶಾಲೆಯ ಮಾಲೀಕ ಮತ್ತು ಶಿಕ್ಷಕನಾಗಿದ್ದು, ಇಲ್ಲಿ ಓರ್ವ ವಿದ್ಯಾರ್ಥಿ ವಾರ್ಷಿಕ ಅಂದಾಜು 69 ಲಕ್ಷ ರೂ. ಪಾವತಿಸಬೇಕು.

    ಸೆಪ್ಟೆಂಬರ್ ನಲ್ಲಿ ವಿದ್ಯಾರ್ಥಿನಿ ಜೊತೆಗಿನ ಪತಿಯ ಸಂಬಂಧ ಪತ್ನಿಗೆ ನವೆಂಬರ್ ನಲ್ಲಿ ತಿಳಿದಿದೆ. ಪತ್ನಿಗೆ ವಿಷಯ ತಿಳಿದಿದ್ದರೂ ಇಬ್ಬರ ಅಕ್ರಮ ಸಂಬಂಧ ಮಾರ್ಚ್ 2016ರವರೆಗೆ ನಡೆದಿದೆ. ವಿದ್ಯಾರ್ಥಿನಿಯ ಸಹಪಾಠಿ ಸುಳಿವು ನೀಡಿದ್ದರಿಂದ ಇಬ್ಬರ ಕಳ್ಳ ಸಂಬಂಧ ಬಯಲಿಗೆ ಬಂದಿದೆ. ಸುದ್ದಿ ಹರಡುತ್ತಿದ್ದಂತೆ ಇಬ್ಬರ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆ ತೊರೆಯಲು ಮುಂದಾಗ ಶಿಕ್ಷಕ ಇಬ್ಬರ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿದ್ದಾನೆ.

    ಇದೊಂದು ಅನೈತಿಕ ಸಂಬಂಧವಾಗಿದ್ದು, ಕ್ರಿಮಿನಲ್ ಪ್ರಕರಣವಲ್ಲ. ವಿದ್ಯಾರ್ಥಿನಿ ಬೇರೊಂದು ಶಾಲೆಯವಳಾಗಿದ್ದಾಳೆ. ಇಬ್ಬರ ಮೇಲೆ ನಿಷೇಧ ಹೇರಲಾಗಿದೆ ಎಂದು ಏಜೆನ್ಸಿ ಹೇಳಿದೆ. ವಿಚಾರಣೆಯಲ್ಲಿ ಶಿಕ್ಷಕಿ, ನನ್ನ ಪತಿ ಆಕೆಯೊಂದಿಗೆ ಸಂಬಂಧ ಹೊಂದಿರುವ ವಿಚಾರ ನನಗೆ ಗೊತ್ತಿತ್ತು. ಬೆಡ್ ರೂಮಿನಲ್ಲಿ ಸಿಕ್ಕಾಗ ತನ್ನ ವಯಸ್ಸು 18 ಎಂದು ಹೇಳಿದ್ದರಿಂದ ನಾನು ಯಾರೊಂದಿಗೂ ಈ ವಿಚಾರ ಹಂಚಿಕೊಳ್ಳಲಿಲ್ಲ ಎಂದಿದ್ದಾರೆ.

  • ಶಾಲೆಯಲ್ಲಿ ನಿಗೂಢವಾಗಿ ಬೀಳುವ ಕಲ್ಲುಗಳಿಂದ ತಾತ್ಕಾಲಿಕ ಮುಕ್ತಿ

    ಶಾಲೆಯಲ್ಲಿ ನಿಗೂಢವಾಗಿ ಬೀಳುವ ಕಲ್ಲುಗಳಿಂದ ತಾತ್ಕಾಲಿಕ ಮುಕ್ತಿ

    ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳಿಗೆ ಈಗ ಬ್ರೆಕ್ ಬಿದ್ದಿದೆ. ಆದರೆ ಇದರ ಹಿಂದಿನ ಮರ್ಮ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

    ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಗ್ರಾಮದ ಶಾಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಪರಿಣಾಮ ಹಲವು ಮಕ್ಕಳ ತಲೆಗೆ ಗಾಯಗಳಾಗಿತ್ತು. ಇದರಿಂದ ಭಯಭೀತರಾಗಿ ಮಕ್ಕಳು ಶಾಲೆ ಬಿಟ್ಟ ಘಟನೆಗಳು ಕೂಡ ನಡೆದು ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಾನಾಮತಿಯ ಕಾಟದಿಂದ ಕಲ್ಲು ಬೀಳುತ್ತಿವೆ ಎಂದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

    ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲುಗಳ ಸದ್ದಿಲ್ಲ. ಒಂದು ಕಲ್ಲು ಶಾಲೆಯತ್ತ ಮುಖ ಮಾಡಿಲ್ಲ. ಶಿಕ್ಷಣ ಇಲಾಖೆಯ ಸಿಬ್ಬಂದಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಶಾಲೆಯ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಸೋಮವಾರ ಮಾತ್ರ ಶಾಲೆಯಲ್ಲಿ ಕಲ್ಲು ಬೀಳದೇ ಇರುವುದರಿಂದ ಶಾಲೆಯಲ್ಲಿ ಮಕ್ಕಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳ ಪ್ರಕರಣದಿಂದ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಾ ದೃಷ್ಠಿಯಿಂದ ಕಳೆದ ಎರಡು ದಿನಗಳಿಂದ ಶಾಲೆಗೆ ರಜೆ ಘೋಷಿಸಿತ್ತು. ಸೋಮವಾರ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಶಾಲೆಗೆ ಭೇಟಿ ನೀಡಿ ಪವಾಡ ಬಯಲು ಮಾಡುವ ಪ್ರಯತ್ನ ಮಾಡಿದರು. ಮಕ್ಕಳ ಮುಂದೆ ಕೆಲ ತಾಂತ್ರಿಕ ಪ್ರಯೋಗ ಮಾಡಿದರು.ಶಾಲೆಯನ್ನೆಲ್ಲ ಜಾಲಾಡಿ ಕಲ್ಲು ಬೀಳುವ ಪ್ರಕರಣದ ಸತ್ಯಸತ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಭೇಟಿ ನೀಡಿದಾಗಲೂ ಯಾವುದೇ ಕಲ್ಲುಗಳು ಬೀಳಲಿಲ್ಲ. ಆದರೆ ಮಕ್ಕಳು ಮಾತ್ರ ಎಂದಿನಂತೆ ಮಂತ್ರಿಸಿದಿ ನಿಂಬೆಹಣ್ಣು, ದೇವರ ಪ್ರಸಾದ ಹಿಡಿದುಕೊಂಡು ಬಂದದ್ದು ಮಾತ್ರ ಅಲ್ಲಿನ ಭಯದ ವಾತಾವರಣವನ್ನು ಪ್ರತಿಬಿಂಬಿಸುತ್ತಿತ್ತು.

    ಸಿಸಿಟಿವಿ ಅಳವಡಿಕೆ, ಪೊಲೀಸ್ ಭದ್ರತೆ, ವಿಜ್ಞಾನ ಪರಿವೀಕ್ಷಕರು ಭೇಟಿ ಬಳಿಕ ಕಲ್ಲುಗಳು ಬೀಳುವುದಕ್ಕೆ ಬ್ರೇಕ್ ಬಿದ್ದಿದೆ. ಶಾಲೆ ಪರಿಶೀಲಿಸಿದ ಅಧಿಕಾರಿಗಳು ಹಾಗೂ ಪವಾಡ ಬಯಲು ತಜ್ಞರು ಇದು ಕಿಡಿಗೇಡಿಗಳ ಕಾರ್ಯ ಯಾವುದೇ ಬಾನಾಮತಿ ಕಾಟ ಎಂಬುದು ಸುಳ್ಳು. ಇದು ಮಾನವ ನಿರ್ಮಿತ ಕೃತ್ಯ ಇಂತಹ ವದಂತಿಗಳಿಗೆ ಕಿವಿಕೊಡಬಾರದು ಎಂದು ಸಲಹೆ ನೀಡಿದರು. ಜೊತೆಗೆ ಕೆಲವೇ ದಿನದಲ್ಲಿ ಇಂಜಿನವಾರಿ ಗ್ರಾಮದಲ್ಲಿ ಮೂಢನಂಬಿಕೆ, ಮಂತ್ರ ತಂತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

  • ಮಕ್ಕಳಿಂದ ಮೂಡಿ ಬಂದ ಚಂದ್ರಯಾನ-2 ಯಶಸ್ವಿ ಉಡಾವಣೆ

    ಮಕ್ಕಳಿಂದ ಮೂಡಿ ಬಂದ ಚಂದ್ರಯಾನ-2 ಯಶಸ್ವಿ ಉಡಾವಣೆ

    ಕೊಪ್ಪಳ: ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಬಗ್ಗೆ ಯಾರಿಗೆ ಗೊತಿಲ್ಲ ಹೇಳಿ. ಇಡಿ ದೇಶವೇ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು. ಇದೀಗ ಅಂತಹದ್ದೆ ಒಂದು ಪ್ರಯತ್ನ ನಮ್ಮ ಕೊಪ್ಪಳದ ವಿದ್ಯಾರ್ಥಿಗಳು ಮಾಡಿದ್ದಾರೆ.

    ಎಂಜಿನಿಯರ್ಸ್ ಡೇ ಅಂಗವಾಗಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಯೋಗಾರ್ಥವಾಗಿ ವಿಜ್ಞಾನಿಗಳ ರೀತಿಯಲ್ಲಿ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಉಡಾವಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಎಲ್‍ಕೆಜಿಯಿಂದ ಹಿಡಿದು ಆರನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಈ ಪ್ರಯೋಗದಲ್ಲಿ ತಮ್ಮ ಚಾಣಕ್ಯತನವನ್ನು ತೋರಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಪಡೆದು ತಾವೇ ಮಾದರಿಗಳನ್ನು ತಯಾರಿಸಿದ್ದಾರೆ.

    ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಒಂದು ತಿಂಗಳ ಕಾಲಾವಕಾಶ ತಗೆದುಕೊಂಡು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಶಾಲಾ ಆವರಣದಲ್ಲೇ ಚಂದ್ರ ಮತ್ತು ಭೂಮಿಯನ್ನು ತಯಾರು ಮಾಡಿ ಡ್ರೋಣ್ ಬಳಸಿ ವಿಕ್ರಮ್ ಲ್ಯಾಂಡರ್ ಯಾವ ರೀತಿ ಚಂದ್ರನ ಮೇಲೆ ಕಾರ್ಯಚರಣೆ ನಡೆಸಿದೆ ಅನ್ನುವ ಒಂದು ಚಿಕ್ಕ ಪ್ರಯೋಗವನ್ನು ಮಾಡಿ ಮಕ್ಕಳಲ್ಲಿ ಉಪಗ್ರಹದ ಬಗ್ಗೆ ಜ್ಞಾನ ಮೂಡಿಸುವ ಪ್ರಯತ್ನ ಮಾಡಲಾಯಿತು.

    ಚಂದ್ರಯಾನದ ಪ್ರಯೋಗ ಅಷ್ಟೇ ವಿವಿಧ ರೀತಿಯ ವೈಜ್ಞಾನಿಕ ಪ್ರಯೋಗವನ್ನು ಸಹ ವಿದ್ಯಾರ್ಥಿಗಳು ಮಾಡಿದ್ದು ಪಾಲಕರು ತಮ್ಮ ಮಕ್ಕಳು ಮಾಡಿದ ವೈಜ್ಞಾನಿಕ ಪ್ರಯೋಗ ನೋಡಿ ಖುಷಿಪಟ್ಟರು. ಇನ್ನೂ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶಿಕ್ಷಕರು ಸಹ ಸಾಥ್ ನೀಡಿದರು.

  • 33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    ಬೆಂಗಳೂರು: ಮೂವತ್ತುಮೂರು ವರ್ಷಗಳ ನಂತರ ಶಾಲೆಯ ವಾತಾವರಣಕ್ಕೆ ಆಗಮಿಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೋಡಿ ಭಾವುಕರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರೈಲ್ವೆಗೊಲ್ಲಹಳ್ಳಿ ಬಳಿಯ ಶ್ರೀ ಬೈಲಾಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳು ಒಂದಾಗಿದ್ದಾರೆ. 1986 ಮತ್ತು 87ನೇ ಸಾಲಿನಲ್ಲಿ ಎಸ್‍ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು, ಗುರುವಂದನಾ ಎಂಬ ವೇದಿಕೆಯಿಂದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮಿಜೀಗಳು, ರಸ ಪ್ರಶ್ನೆ ಮಾಡುವ ಮೂಲಕ 33 ವರ್ಷದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದರು. ಎಲ್ಲಾ ಹಳೆಯ ವಿದ್ಯಾರ್ಥಿಗಳು ತಮ್ಮ ಹಿಂದಿನ ಶಾಲೆಯನ್ನು ನೆನಪಿಸಿಕೊಳ್ಳುವಂತೆ, ವಿದ್ಯಾರ್ಥಿಗಳ ಜಾಗದಲ್ಲಿ ಕುಳಿತು ತಮ್ಮ ಹಳೆಯ ಶಿಕ್ಷಕರ ನೀತಿ ಮಾತುಗಳನ್ನು ಕೇಳಿದರು.

    ತಮ್ಮ ಶಾಲೆಯನ್ನು ಮದುಮಗಳಂತೆ ತಳಿರು ತೋರಣಗಳಿಂದ ಹಳೆಯ ವಿದ್ಯಾರ್ಥಿಗಳು ಸಿಂಗರಿಸಿದರು. ಇನ್ನೂ ಹಳೆಯ 55 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ನೆನಪನ್ನು ಹಂಚಿಕೊಂಡರು.

  • ಶಾಲಾ ಮಕ್ಕಳು, ಶಿಕ್ಷಕರ ಮೇಲೆ ಬೀಳ್ತಿವೆ ನಿಗೂಢ ಕಲ್ಲುಗಳು

    ಶಾಲಾ ಮಕ್ಕಳು, ಶಿಕ್ಷಕರ ಮೇಲೆ ಬೀಳ್ತಿವೆ ನಿಗೂಢ ಕಲ್ಲುಗಳು

    ಬಾಗಲಕೋಟೆ: ಶಾಲಾ ಮಕ್ಕಳು ಮತ್ತು ಶಿಕ್ಷಕರ ಮೇಲೆ ನಿಗೂಢ ಕಲ್ಲುಗಳು ಬೀಳುತ್ತಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ದಿನನಿತ್ಯ ಶಾಲಾ ಸಮಯದಲ್ಲಿ ಮಕ್ಕಳು ಮತ್ತು ಮಕ್ಕಳಿಗೆ ಅದೃಶ್ಯ ರೀತಿಯಲ್ಲಿ ಕಲ್ಲುಗಳು ಬೀಳುತ್ತಿವೆ. ತರಗತಿ ಒಳಗೆ ಪಾಠ ಕೇಳುವಾಗ, ಶೌಚಾಲಯಕ್ಕೆ ಹೋಗುವಾಗ ದಿಢೀರ್ ಅಂತ ಕಲ್ಲುಗಳು ಬೀಳುತ್ತಿದ್ದು, ಇದೆಲ್ಲ ಬಾನಾಮತಿಯ ಕಾಟ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕಲ್ಲು ಬೀಳುತ್ತಿರುವದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಕಿ ಜಯಶ್ರೀ ಕೆ.ಬಗಾಡೆ, ಕಳೆದ ಒಂದು ತಿಂಗಳಿನಿಂದ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಯ ಮೇಲೆ ಕಲ್ಲುಗಳು ಬೀಳುತ್ತಿವೆ. ಕಲ್ಲುಗಳು ಬಿದ್ದ ಪರಿಣಾಮ ಸುಮಾರು 12 ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿದ್ದು, ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಾಲೆಯ ಎಸ್‍ಡಿಎಂಸಿ ಸದಸ್ಯರು, ಜಿಲ್ಲಾ ಶಿಕ್ಷಣ ಸಂಯೋಜಕರಿಗೂ ಪತ್ರ ಬರೆದಿದ್ದೇವೆ. ಮಕ್ಕಳು ಭಯಗೊಂಡು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಕಲ್ಲುಗಳು ಬೀಳುತ್ತಿರುವ ವಿಷಯ ತಿಳಿದು ಶಾಲೆಗೆ ಇಂದು ಗುಳೇದಗುಡ್ಡ ಪೊಲೀಸರು ಮತ್ತು ಶಿಕ್ಷಣ ಸಂಯೋಜಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪ್ರವಾಹ ಸಂತ್ರಸ್ತರ ಕಣ್ಣೀರಿಗೆ ನೆರವಾದ ‘ಪಬ್ಲಿಕ್’

    ಪ್ರವಾಹ ಸಂತ್ರಸ್ತರ ಕಣ್ಣೀರಿಗೆ ನೆರವಾದ ‘ಪಬ್ಲಿಕ್’

    – ವಸಂತ ರೆಡ್ಡಿಯಿಂದ ನಿರಾಶ್ರಿತರಿಗೆ ಅಗತ್ಯ ವಸ್ತು

    ಬೆಳಗಾವಿ: ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿವೆ. ಅದರಲ್ಲೂ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಆದರೆ ಸರ್ಕಾರ ಪರಿಹಾರದ ರೂಪದಲ್ಲಿ ಕೇವಲ 10 ಸಾವಿರ ಚೆಕ್ ನೀಡಿ ಕೈ ತೊಳೆದುಕೊಂಡಿದೆ. ಪ್ರವಾಹ ನಿಂತ ಬಳಿಕ ಪಬ್ಲಿಕ್ ಟಿವಿ ‘ಬುಲೆಟ್ ರಿಪೋರ್ಟರ್’ ಎಂಬ ಹೆಸರಿನಡಿಯಲ್ಲಿ ಪ್ರವಾಹ ಬಂದ ಸ್ಥಳದಿಂದ ನೈಜ ಚಿತ್ರಣವನ್ನು ಅನಾವರಣ ಮಾಡಿತ್ತು. ಬೆಳಗಾವಿ ಜಿಲ್ಲೆಯ ಕಿಲಬನೂರು ಗ್ರಾಮದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದ, ಅದೆಷ್ಟೋ ಕುಟುಂಬದ ಜನ ಕಣ್ಣೀರು ಹಾಕಿದ್ದರು. ಪಬ್ಲಿಕ್ ಟಿವಿ ವರದಿ ಪ್ರಸಾರವಾದ ಬಳಿಕ ಜನ ಅವರ ಕಣ್ಣೀರು ಒರೆಸಲು ಮುಂದಾಗಿದ್ದಾರೆ.

    ಪ್ರವಾಹ ಬಂದಾಗ ಜನರ ಗೋಳು ಎಷ್ಟಿತ್ತೋ ಪ್ರವಾಹ ನಿಂತ ಮೇಲೆ ಆ ಗೋಳು ಇಮ್ಮಡಿಯಾಗಿತ್ತು. ಸರ್ಕಾರ ಪ್ರವಾಹ ಸಂತ್ರಸ್ತರ ಜೊತೆಯಲ್ಲಿ ಇದೆ ಎಂದು ಹೇಳಿತ್ತು. ಆದರೆ ಪಬ್ಲಿಕ್ ಟಿವಿ ಗ್ರೌಂಡ್ ರಿಪೋರ್ಟ್ ಮಾಡಿದಾಗ ಜನರ ಕಣ್ಣೀರಿನ ಒಂದೊಂದೇ ಕಥೆಗಳು ಅನಾವರಣಗೊಂಡಿದೆ. ಮನೆ ಕಳೆದುಕೊಂಡ ಅದೆಷ್ಟೋ ಜನ ತಮ್ಮ ಮನೆಯ ಮುಂದೆ ನಿಂತು ಕಣ್ಣೀರು ಹಾಕಿದ್ದರು. ಮನೆಯಲ್ಲಿ ಊಟ ಇಲ್ಲದೆ ಮಕ್ಕಳು ಶಾಲೆಗೆ ಹಸಿದ ಹೊಟ್ಟೆಯಲ್ಲಿಯೇ ಹೋಗಿ ಪಾಠ ಕೇಳುತಿದ್ದರು.

    ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲಬನೂರು ಗ್ರಾಮ ಮತ್ತು ವಿಠ್ಠಲ ಪೇಟೆಯ ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಜೊತೆಗೆ ಆ ಶಾಲೆ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮತ್ತೆ ಮಕ್ಕಳು ಆ ಶಾಲೆಯಲ್ಲಿ ಕಲಿಯುವಂತೆ ಮಾಡಿತ್ತು. ಇದಕ್ಕೆಲ್ಲ ಕಾರಣ ಸುಮಾರು 8 ವರ್ಷದ ಸ್ವಾತಿ ಎಂಬ ಮುಗ್ಧ ಬಾಲಕಿ. ಅಂದು ಪಬ್ಲಿಕ್ ಟಿವಿ ಬುಲೆಟ್ ರಿಪೋರ್ಟರ್ ಶೀರ್ಷಿಕೆ ಅಡಿಯಲ್ಲಿ ಗ್ರೌಂಡ್ ರಿಪೋರ್ಟಿಂಗ್ ಮಾಡಿದಾಗ  ಬಾಲಕಿ ತನ್ನ ಹಸಿವಿನ ರೋಧನೆ ತೋಡಿಕೊಂಡಿದ್ದಳು. ಆಗ ಪಬ್ಲಿಕ್ ಟಿವಿ ಕೇವಲ ಸ್ವಾತಿ ಕಣ್ಣೀರು ಒರೆಸುವ ಪ್ರಯತ್ನ ಮಾಡಲಿಲ್ಲ. ಜೊತೆಗೆ ಅಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳು ಕಣ್ಣೀರು ಒರೆಸಿತ್ತು.

    ಕೇವಲ ಪಬ್ಲಿಕ್ ಟಿವಿ ಮಾತ್ರ ಅವಳ ಸಹಾಯಕ್ಕೆ ಬರಲಿಲ್ಲ, ಜೊತೆಯಲ್ಲಿ ಬೆಂಗಳೂರಿನ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಸಂತರೆಡ್ಡಿ ಅವರು ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಸಂಪೂರ್ಣ ಜಲಸಮಾಧಿ ಆಗಿರುವ ಕಿಲಬನೂರು ಗ್ರಾಮದ ಸುಮಾರು 150ಕ್ಕೂ ಹೆಚ್ಚಿನ ಕುಟುಂಬಕ್ಕೆ ಪ್ರೆಶರ್ ಕುಕ್ಕರ್, ಅಕ್ಕಿ, ಬೆಳೆ, ಗೋಧಿಯನ್ನು ಕೊಟ್ಟಿದ್ದಾರೆ. ಅಲ್ಲದೆ ವಿಠ್ಠಲ ಪೇಟೆಯ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಜೊತೆಗೆ ಇತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಇದಕ್ಕೆಲ್ಲ ಕಾರಣ ಸ್ವಾತಿ ಅಂದು ಹಾಕಿದ ಕಣ್ಣೀರು, ಅವಳ ಆ ಮುಗ್ಧ ಮುಖದಲ್ಲಿ ಮತ್ತೆ ನಗುವನ್ನು ತರೆಸಲು ದೂರದ ಊರಿನಿಂದ ಜನ ಬಂದು ಆ ಶಾಲೆಯ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೊಡುತ್ತಿದ್ದಾರೆ. ಸ್ವಾತಿ ಎಂಬ ಪುಟ್ಟ ಬಾಲಕಿಯ ತನ್ನ ಹಸಿವಿನ ರೋಧನೆ ಹೇಳಿಕೊಂಡಿದ್ದರಿಂದ ಇಂದು ಈ ಶಾಲೆಯಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳಿಗೆ ಸಹಾಯ ಆಗುತ್ತಿದೆ.

    ಪ್ರವಾಹಕ್ಕೆ ತುತ್ತಾಗಿ ಅದೆಷ್ಟೋ ಶಾಲೆಗಳು, ಅಲ್ಲಿ ಕಲಿಯುವ ಮಕ್ಕಳ ಭವಿಷ್ಯ ಇಂದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಆದರೆ ಪಬ್ಲಿಕ್ ಟಿವಿ ವರದಿ ಬಳಿಕ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಎಲ್ಲಾ ಶಾಲಾ ಮಕ್ಕಳಿಗೆ ಮತ್ತೊಂದು ಸಾರಿ ಪುಸ್ತಕವನ್ನು ವಿತರಿಸುವಂತೆ ಆದೇಶ ಮಾಡಿದೆ. ಜೊತೆಯಲ್ಲಿ ಅನೇಕ ದಾನಿಗಳು ಸರ್ಕಾರಿ ಶಾಲಾ ಮಕ್ಕಳ ಜೊತೆಯಲ್ಲಿ ನಿಲ್ಲುವಂತೆ ಮಾಡಿದೆ.

  • ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಕೊಪ್ಪಳ: ಚಂದಿರನ ಅಂಗಳದಲ್ಲಿ ವಿಕ್ರಮ ಲ್ಯಾಂಡರ್ ಸಂಪರ್ಕ ಕಡಿತ ಹಿನ್ನೆಲೆ ಕೊಪ್ಪಳದ ವಿದ್ಯಾರ್ಥಿಗಳು ವಿಜ್ಞಾನಿಗಳ ಪ್ರಯತ್ನಕ್ಕೆ ಸೆಲ್ಯೂಟ್ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗಂಗಾವತಿಯ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಇಂದು ಶಾಲೆ ಆರಂಭಕ್ಕೂ ಮುನ್ನ ವಿಜ್ಞಾನಿಗಳ ಪ್ರಯತ್ನಕ್ಕೆ ಜಯಘೊಷಣೆ ಮೊಳಗಿಸಿದ್ದಾರೆ. ಇದು ನಮ್ಮ ವಿಫಲವಲ್ಲ. ಚಂದಿರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಉಡಾವಣೆ ಮಾಡುವ ಸಾಹಸಕ್ಕೆ ಜಗತ್ತಿನ ಮುಂದುವರಿದ ಯಾವ ದೇಶ ಕೈ ಹಾಕಿರಲಿಲ್ಲ. ಇವತ್ತು ನಮ್ಮ ದೇಶ ಆ ಒಂದು ಸಾಹಸಕ್ಕೆ ಕೈ ಹಾಕಿದೆ. ಯಶಸ್ಸು ಸಿಗದೆ ಇರಬಹುದು ಆದರೆ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಸ್ವಾಭಿಮಾನದಿಂದ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ನಮ್ಮ ದೇಶದ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳಾದ ನಾವು ಇದ್ದೇವೆ. ಮತ್ತೆ ಪ್ರಯತ್ನಿಸೋಣ ಆ ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಮುಂದಿನ ಉಡಾವಣೆಯ ಜಯ ನಮ್ಮದಾಗಲಿ ಎಂದು ದೇವರಲ್ಲಿ ಬೇಡಿಕೊಂಡರು. ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ಎಂದು ಹೇಳುವ ಮೂಲಕ ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.

  • ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಬಾಗಲಕೋಟೆ: ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಲಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಘಟಪ್ರಭಾ ನದಿ ಪ್ರವಾಹದದಿಂದಾಗಿ ಸರ್ಕಾರಿ ಶಾಲೆ ಮುಳುಗಡೆಯಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳಿಗೆ ಪಾಠ ಮಾಡಲು ಬೇರೆ ಕಟ್ಟಡವಿಲ್ಲ. ಹೀಗಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

    ಶಾಲೆಯ ಕಟ್ಟಡ ಬೀಳುವ ಭಯದಿಂದ ಸಿಬ್ಬಂದಿ ಈಗಾಗಲೇ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆ ಬಂದರೆ ಶಾಲೆಯ ಹೊರಗಡೆ ತಲೆ ಮೇಲೆ ಟಾರ್ಪಲ್ ಹಾಕಿಕೊಂಡು ಪಾಠ ಕೇಳುವ ಅನಿವಾರ್ಯ ಮಕ್ಕಳದ್ದಾಗಿದೆ.

    ಶಾಲಾ ಕಟ್ಟಡ ನೀರಲ್ಲಿ ಮುಳುಗಿ ಹಾಳಾಗಿ ಹೋಗಿದ್ದರಿಂದ ಯಾವಾಗ ಬೀಳುತ್ತೋ ಅನ್ನೋ ಆತಂಕದಲ್ಲಿರುವ ಸ್ಥಳೀಯರು ಇಷ್ಟೆಲ್ಲ ಆದರೂ ಯಾವೊಬ್ಬ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸ್ಥಿತಿ ಆಲಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕೂಡಲೇ ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

  • ಮಳೆ ಬಂದ್ರೆ ರಸ್ತೆಯೆಲ್ಲಾ ಕೆಸರು ಮುದ್ದೆ-ಹಸಿದ ಶಾಲಾ ಮಕ್ಕಳಿಗೆ ಸಿಗಲ್ಲ ಬಿಸಿಯೂಟ

    ಮಳೆ ಬಂದ್ರೆ ರಸ್ತೆಯೆಲ್ಲಾ ಕೆಸರು ಮುದ್ದೆ-ಹಸಿದ ಶಾಲಾ ಮಕ್ಕಳಿಗೆ ಸಿಗಲ್ಲ ಬಿಸಿಯೂಟ

    ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಧೋಪೇನಟ್ಟಿ ಗ್ರಾಮದಲ್ಲಿ ಮಳೆ ಬಂದರೆ ರಸ್ತೆಯೆಲ್ಲಾ ಕೆಸರು ಮುದ್ದೆಯಾಗುತ್ತದೆ. ಹೀಗಾಗಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಬೈಕ್‍ನಲ್ಲಿ ಹೊತ್ತು ತರಬೇಕು. ಒಂದು ವೇಳೆ ಬೈಕ್ ಸಾಗದಷ್ಟು ರಸ್ತೆ ಕೆಸರುಮಯವಾದರೆ ಆ ದಿನ ಮಕ್ಕಳಿಗೆ ಬಿಸಿಯೂಟವಿಲ್ಲ.

    ಗ್ರಾಮಕ್ಕೆ ಬಿಸಿಯೂಟ ಮುಟ್ಟಬೇಕಾದರೆ ಸಾಹಸ ಪಡಬೇಕು, ಬಿಸಿಯೂಟದ ಪಾತ್ರೆಗಳನ್ನ ಬೈಕ್ ಮೇಲೆನೇ ಇಟ್ಟುಕೊಂಡು ಹೋಗಬೇಕು. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಈ ಊಟ ಮುಟ್ಟಿಸಲು ಓರ್ವ ಬೈಕ್ ಸವಾರನನ್ನೇ ನೇಮಕ ಮಾಡಿದ್ದಾರೆ. ಆ ಸವಾರ ಬೈಕ್‍ಗೆ ದಬ್ಬೆ ಕಟ್ಟಿಕೊಂಡು, ಬಿಸಿಯೂಟದ ಡಬ್ಬಿಗಳನ್ನು ಕಟ್ಟಿಕೊಂಡು ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಹೇಗೋ ಮಕ್ಕಳಿಗೆ ಬಿಸಿಯೂಟ ತಲುಪಿಸುತ್ತಾರೆ

    ಧೋಪೇನಟ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಬಿಸಿಯೂಟ ತಲುಪಿಸಲು ನಿತ್ಯವೂ ಸರ್ಕಸ್ ಮಾಡಬೇಕು. ಮಳೆ ಬಂತು ಅಂದರೆ ಈ ಶಾಲೆಯಲ್ಲಿ ಓದುವ ಒಟ್ಟು 22 ಮಕ್ಕಳಿಗೆ ಈ ಬಿಸಿಯೂಟನೂ ಸಿಗಲ್ಲ. ಯಾಕೆಂದರೆ ಮಳೆಗೆ ರಸ್ತೆ ಹದಗೆಟ್ಟಿರುತ್ತದೆ. ಡೋರಿ ಗ್ರಾಮದವರೆಗೆ ಮಾತ್ರ ರಸ್ತೆ ಚೆನ್ನಾಗಿದ್ದು, ಮುಂದಕ್ಕೆ ಧೋಪೇನಟ್ಟಿ ಗ್ರಾಮದ ದಾರಿ ಹದಗೆಟ್ಟಿದೆ. ಇದರಿಂದ ಬೈಕ್ ಸಹ ಸಂಚರಿಸಲು ಕೂಡ ಆಗಲ್ಲ. ಆದರೂ ಗ್ರಾಮದ ಯುವಕನೋರ್ವ ಡೋರಿಯಿಂದ ಧೋಪೇನಟ್ಟಿಗೆ ಬಿಸಿಯೂಟ ತಲುಪಿಸುತ್ತಾರೆ.

    ಕಳೆದ ನಾಲ್ಕು ವರ್ಷಗಳಿಂದ ಧೋಪೇನಟ್ಟಿ ಶಾಲಾ ಮಕ್ಕಳಿಗೆ ಬೈಕ್ ಮೇಲೆ ಬಿಸಿಯೂಟ, ಹಾಲು ತಲುಪುತ್ತಿದೆ. ಈ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಗೆ ತಿಳಿಸಿದರೂ ಯಾವುದೇ ಉಪಯೋಗ ಆಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲದಿದ್ದರೂ ಪರವಾಗಿಲ್ಲ, ಶಾಲಾ ಮಕ್ಕಳು ಹಸಿದುಕೊಂಡು ಇರಬಾರದು ಎಂದು ಗ್ರಾಮದ ನಿವಾಸಿ ಸಂತೋಷ್ ಬೈಕ್ ಮೇಲೆ ಬಿಸಿಯೂಟ ತಂದು ಮೆಚ್ಚುಗೆಯ ಕೆಲಸ ಮಾಡುತ್ತಿದ್ದಾರೆ. ಸಂತೋಷ್‍ರನ್ನು ನೋಡಿಯಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.