Tag: school

  • ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ತೆಗಂಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನವಾದರೂ ಶಾಲೆಗೆ ಶಿಕ್ಷಕರು ಹಾಜರಾಗಿಲ್ಲ. ಹಾಗಾಗಿ ಬೆಳಗ್ಗೆಯಿಂದ ಶಿಕ್ಷಕರಿಗಾಗಿ ಕಾದು ಕುಳಿತ ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ಘಟನೆ ನಡೆದಿದೆ.

    ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 3 ಜನ ಶಿಕ್ಷಕರು ಇರುವ ಈ ಶಾಲೆಯಲ್ಲಿ 50ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

    ಗ್ರಾಮದಲ್ಲಿ ಬಹುತೇಕ ಮಕ್ಕಳು ಶಾಲೆಯ ದುರಾವಸ್ಥೆಯಿಂದ ಬೇಸತ್ತು ಸಮೀಪದ ಔರಾದ್ ಪಟ್ಟಣದ ಶಾಲೆಗೆ ತೆರಳುತ್ತಿದ್ದಾರೆ. ಆದರೂ ತಮ್ಮ ವರಸೆ ಬಿಡದ ಶಿಕ್ಷಕರು ಕಳೆದ 10 ವರ್ಷಗಳಿಂದ ಇದೇ ಚಾಳಿ ಮುಂದುವರಿಸಿದ್ದಾರೆ. ಇದರಿಂದ ಬಡವರ ಮಕ್ಕಳ ಭವಿಷ್ಯದ ಜೊತೆ ಶಿಕ್ಷಕರು ಆಟವಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಬೆಂಗಳೂರು: ಕರ್ನಾಟಕದ ಜನರ ಮನಸ್ಸು ಗೆದ್ದಿರುವ ಹಾಗೂ ಚಿತ್ರದುರ್ಗ ಕೋಟೆಯಲ್ಲಿ ಕೋತಿಯಂತೆ ಲೀಲಾಜಾಲವಾಗಿ ಬಂಡೆಗಳನ್ನು ಏರುತ್ತಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಅದು ಮುಂದಿನ ವರ್ಷ ಫೆಬ್ರವರಿ 26-27 ನನ್ನ ಕೊನೆಯ ದಿನ ಎಂದು ಹೇಳಿ ಭಾವುಕರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಆದ್ದರಿಂದ ನಾನು ಮುಂಬರುವ ಫೆಬ್ರವರಿಯ 26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನೋಪಾಯಕ್ಕೆ ಬಳಕೆ ಮಾಡುವುದಾಗಿ ತಿಳಿಸಿದರು.

    ಆ ದಿನ ನಾನು ಬದುಕುವುದು ಬಹಳ ಕಷ್ಟ ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ ಅಲ್ಲದೆ ಬೇರೇನೂ ಅಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ.

    ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಬಂಧೀಖಾನೆ, ಏಳು ಸುತ್ತಿನ ಕೋಟೆ ದೇವಾಲಯಗಳನ್ನು ತದ್ರೂಪವನ್ನು ನೋಡಿ ಇನ್ನಷ್ಟು ಭಾವುಕರಾಗಿ ಮಕ್ಕಳ ಜೊತೆ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡರು.

  • ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ 50 ಮಕ್ಕಳ ರಕ್ಷಣೆ

    ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ 50 ಮಕ್ಕಳ ರಕ್ಷಣೆ

    ಯಾದಗಿರಿ: ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಿವಿಧ ಶಾಲೆಗಳ 50 ಮಕ್ಕಳನ್ನು ಇಂದು ಬೆಳಂಬೆಳಗ್ಗೆ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ವ್ಯಾಪ್ತಿಯಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ. ಕೆಂಭಾವಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಶಾಲೆಯನ್ನು ಬಿಡಿಸಿ ಮಕ್ಕಳನ್ನು ಹತ್ತಿ ಬಿಡಿಸುವ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಶಾಲೆ ಶಿಕ್ಷಕರು ಶಾಲಾ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದು ಕಾನೂನು ಬಾಹಿರ ಎಂದು ಮಕ್ಕಳ ಪೋಷಕರಿಗೆ ಎಷ್ಟು ಬಾರಿ ತಿಳಿಸಿ ಹೇಳಿದರೂ ಪ್ರಯೋಜನವಾಗಿರಲಿಲ್ಲ.

    ಇಂದು ಮಕ್ಕಳ ಹಕ್ಕು ರಕ್ಷಣೆ ಅಧಿಕಾರಿಗಳು ಇಂದು ವಿವಿಧ ಗ್ರಾಮಗಳ ವ್ಯಾಪ್ತಿಯ ಜಮೀನುಗಳ ಮೇಲೆ ದಾಳಿ ಮಾಡಿ, ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡಿ ಸುಮಾರು 15 ಆಟೋಗಳನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಕೆಲ ಮಕ್ಕಳ ಪೋಷಕರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

  • ನೀನು ಸಿಂಗಲ್ ಬ್ಲಡ್‍ಗೆ ಹುಟ್ಟಿದ್ದಾ ಅಥವಾ ಕ್ರಾಸ್ ಬ್ಲಡ್‍ಗೆ ಜನಿಸಿದ್ದಾ – ಪ್ರಾಂಶುಪಾಲ ಅಸಭ್ಯ ವರ್ತನೆ

    ನೀನು ಸಿಂಗಲ್ ಬ್ಲಡ್‍ಗೆ ಹುಟ್ಟಿದ್ದಾ ಅಥವಾ ಕ್ರಾಸ್ ಬ್ಲಡ್‍ಗೆ ಜನಿಸಿದ್ದಾ – ಪ್ರಾಂಶುಪಾಲ ಅಸಭ್ಯ ವರ್ತನೆ

    – ಹಿಂದಿನ ಜನ್ಮದಲ್ಲಿ ಪತಿ-ಪತ್ನಿಯಾಗಿ ಹುಟ್ಟಿದ್ವಿ ಎಂದು ಕಿರುಕುಳ
    – ಚೆನ್ನಾಗಿ ಕಾಣ್ತೀಯಾ ಎಂದು ಮುತ್ತು ಕೊಡ್ತಾನೆ

    ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಧನಂಜಯ್ ಅನುಚಿತವಾಗಿ ವರ್ತಿಸಿದ ಪ್ರಾಂಶುಪಾಲ. ಪ್ರಾಂಶುಪಾಲ ವಿದ್ಯಾರ್ಥಿನಿಯರ ಬಳಿ, “ನೀನು ಸಿಂಗಲ್ ಬ್ಲಡ್‍ಗೆ ಹುಟ್ಟಿದ್ದಾ ಅಥವಾ ಕ್ರಾಸ್ ಬ್ಲಡಾ” ಎಂದು ಪ್ರಶ್ನೆ ಕೇಳುತ್ತಾರೆ. ಅಲ್ಲದೆ ಸುಂದರವಾದ ವಿದ್ಯಾರ್ಥಿನಿಯರನ್ನು ಕಂಡರೆ ನಾನು ನೀನು ಹಿಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗಿ ಹುಟ್ಟಿದ್ವಿ ಎಂದು ಹೇಳುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

    ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರಿಗೆ, “ನೀನು ಚೆನ್ನಾಗಿ ಕಾಣುತ್ತಿಯಾ’ ಎಂದು ಹೇಳಿ ಕೆನ್ನೆಗೆ ಮುತ್ತು ಕೂಡ ನೀಡುತ್ತಾನೆ. ಇತರ ಶಿಕ್ಷಕರೊಂದಿಗೆ ಮಾತಾಡಿದರೂ ಸಂಬಂಧ ಕಲ್ಪಿಸುತ್ತಾನೆ, ಕೆಟ್ಟ ಪದಗಳಿಂದ ನಿಂದಿಸುತ್ತಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಶಿಕ್ಷಕನ ದುರ್ವತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಇಂದು ಪೋಷಕರು ಬಂದು ವಿಚಾರಿಸಿದಾಗ ಪ್ರಾಂಶುಪಾಲ ಧನಂಜಯ್ ವಸತಿ ಶಾಲೆಯಿಂದ ಪರಾರಿಯಾಗಿದ್ದಾರೆ.

  • ತಂದೆ ಮೇಲಿನ ಸಿಟ್ಟಿಗೆ ದೇಹವನ್ನೇ ಸುಟ್ಟುಕೊಂಡ ಅಪ್ರಾಪ್ತ!

    ತಂದೆ ಮೇಲಿನ ಸಿಟ್ಟಿಗೆ ದೇಹವನ್ನೇ ಸುಟ್ಟುಕೊಂಡ ಅಪ್ರಾಪ್ತ!

    – ಶಾಲೆಯಲ್ಲೇ ಬಾಲಕ ಆತ್ಮಹತ್ಯೆಗೆ ಯತ್ನ

    ಮುಂಬೈ: ಶಾಲೆಗೆ ತೆಗೆದುಕೊಂಡು ಹೋಗಲು ತಂದೆ ಬೈಕ್ ಕೊಟ್ಟಿಲ್ಲವೆಂದು ಸಿಟ್ಟಿನಿಂದ ಅಪ್ರಾಪ್ತ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಘಟನೆ ಕಲಂಬೋಲಿ ಸೆಕ್ಟರ್ 1ರ ನ್ಯೂ ಸುಧಾಗಡ್ ನಲ್ಲಿ ನಡೆದಿದೆ.

    ಬಾಲಕನನ್ನು ಶಿವಂ ಯಾದವ್ ಎಂದು ಗುರುತಿಸಲಾಗಿದ್ದು, ಈತ 11ನೇ ತರಗತಿಯಲ್ಲಿ ಓಡುತ್ತಿದ್ದನು. ಘಟನೆಯಿಂದ ಶಿವಂ ದೇಹ ಶೇ. 90ರಷ್ಟು ಸುಟ್ಟಿದೆ.

    ನಡೆದಿದ್ದೇನು..?
    ಶುಕ್ರವಾರ ಬೆಳಗ್ಗೆ ಶಿವಂ ತನ್ನ ತಂದೆಯ ಬಳಿ ಶಾಲೆಗೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಕೇಳಿದ್ದಾನೆ. ಆದರೆ ಮಗನಿಗೆ 17 ವರ್ಷ  ಆಗಿರುವುದರಿಂದ ತಂದೆ ಈ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.

    ಇದರಿಂದ ಸಿಟ್ಟುಗೊಂಡ ಶಿವಂ ಶಾಲೆಗೆ ತೆರಳಿ ಎರಡನೇ ಮಹಡಿಯಲ್ಲಿರುವ ವಾಶ್ ರೂಂಗೆ ತೆರಳಿ ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಆತನನ್ನು ವಾಶ್ ರೂಂನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅದಾಗಲೇ ಬೆಂಕಿ ಆತನ ದೇಹವನ್ನು ಆವರಿಸಿತ್ತು. ಆದರೂ ಸಿಬ್ಬಂದಿ ಬೆಂಕಿಯನ್ನು ನಂದಿಸಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕಲಂಬೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಗಾಯಕ್ವಾಡ್ ತಿಳಿಸಿದ್ದಾರೆ.

    ಇತ್ತ ಆಸ್ಪತ್ರೆಗೆ ದಾಖಲಾಗಿರುವ ಶಿವಂ ಬಳಿ ಕೃತ್ಯ ಎಸಗಲು ಕಾರಣವೇನೆಂದು ವೈದ್ಯರು ಕೇಳಿದ್ದಾರೆ. ಈ ವೇಳೆ ಆತ, ಶಾಲೆಗೆ ಬೈಕ್ ತೆಗೆದುಕೊಂಡು ಹೋಗಲು ತಂದೆ ಬಿಡಲಿಲ್ಲ. ಇದರಿಂದ ಸಿಟ್ಟುಗೊಂಡು ಈ ರೀತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಂನನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಶಿವಂ ತಂದೆ ದೀಪಕ್ ಯಾದವ್ ಅವರು ನಾಗ್ಪದ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಂ ಅಪ್ರಾಪ್ತನಾಗಿರುವುದರಿಂದ ಆತನಿಗೆ ಬೈಕ್ ಕೊಡುತ್ತಿರಲಿಲ್ಲ. ಯಾಕಂದರೆ ಪರವಾನಿಗೆ ಇಲ್ಲದೆ ಬೈಕ್ ತೆಗೆದುಕೊಂಡು ಹೋದರೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬೀಳಬಹುದೆಂಬ ನಿಟ್ಟಿನಲ್ಲಿ ದೀಪಕ್ ಆತನಿಗೆ ಬೈಕ್ ಓಡಿಸಲು ಬಿಡುತ್ತಿರಲಿಲ್ಲ. ಆದರೂ ಶಿವಂ ಅನೇಕ ಬಾರಿ ಮನೆಯವರಿಗೆ ಗೊತ್ತಿಲ್ಲದೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದನು. ಸದ್ಯ ಘಟನೆಯಿಂದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೃಶ್ಯದಲ್ಲಿ ಬಾಲಕ ತನ್ನ ಕೈಯಲ್ಲಿ ಏನೋ ಹಿಡಿದುಕೊಂಡು ವಾಶ್ ರೂಮಿಗೆ ಓಡುತ್ತಿರುವುದು ಸೆರೆಯಾಗಿದೆ. ಅಲ್ಲದೆ ವಾಶ್ ರೂಮಿನಲ್ಲಿ ಸುಡಲು ಬೇಕಾದ ವಸ್ತುಗಳು ಕೂಡ ಪತ್ತೆಯಾಗಿದ್ದು, ಅವುಗಳನ್ನು ಆತನ ಮನೆಯಿಂದಲೇ ತಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

  • ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

    ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

    ಹೈದರಾಬಾದ್: ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಮೃತಪಟ್ಟ ಘಟನೆ ಬುಧವಾರ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪನ್ಯಂನಲ್ಲಿ ನಡೆದಿದೆ.

    ಪುರುಷೋತ್ತಮ್ ರೆಡ್ಡಿ(6) ಮೃತಪಟ್ಟ ಬಾಲಕ. ಶ್ಯಾಮ್‍ಸುಂದರ್ ರೆಡ್ಡಿ ಹಾಗೂ ಕಲ್ಪನಾ ಮಗನಾಗಿರುವ ಪುರುಷೋತ್ತಮ್ ಪನ್ಯಂನ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದನು. ಕಲ್ಪನಾ 2 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹಾಗಾಗಿ ಶ್ಯಾಮ್‍ಸುಂದರ್ ತನ್ನ ಮಗನನ್ನು ವಿಜಯಾನಿಕೇತನ್ ವಸತಿ ಶಾಲೆಗೆ ಸೇರಿಸಿದ್ದರು.

    ಪ್ರತಿ ದಿನದಂತೆ ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ಊಟಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಮಕ್ಕಳು ಜಾಗಕ್ಕಾಗಿ ತಮಾಷೆ ಮಾಡುತ್ತಿದ್ದರು. ಈ ರೀತಿ ಮಾಡುವಾಗ ಆಕಸ್ಮಿಕವಾಗಿ ಪುರುಷೋತ್ತಮ್‍ನನ್ನು ತಳ್ಳಿದ್ದಾರೆ. ಪರಿಣಾಮ ತನ್ನ ಮುಂದೆ ಇದ್ದ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಪುರುಷೋತ್ತಮ್ ಬಿದ್ದಿದ್ದಾನೆ.

    ಪುರುಷೋತ್ತಮ್ ಪಾತ್ರೆಗೆ ಬೀಳುವುದನ್ನು ನೋಡಿದ ಶಾಲಾ ಅಟೆಂಡರ್ ಪೀರಮ್ಮ ಆತನನ್ನು ಹೊರತೆಗೆದಿದ್ದಾರೆ. ಬಳಿಕ ಶಾಲಾ ಆಡಳಿತ ಮಂಡಳಿ ಪುರುಷೋತ್ತಮ್‍ಗೆ ಚಿಕಿತ್ಸೆ ಕೊಡಿಸಲು ಹತ್ತಿರ ಶಾಲೆಗೆ ಕರೆದುಕೊಂಡು ಹೋದರು. ಅಲ್ಲದೆ ಈ ವಿಷಯವನ್ನು ಆತನ ತಂದೆಗೂ ತಿಳಿಸಲಾಯಿತು.

    ಈ ಘಟನೆಯಲ್ಲಿ ಪುರುಷೋತ್ತಮ್ ದೇಹ ಸಾಕಷ್ಟು ಸುಟ್ಟು ಹೋಗಿದ್ದು, ಚರ್ಮದ ಮೇಲೆ ಗುಳ್ಳೆಗಳು ಬಂದಿತ್ತು. ಹಾಗಾಗಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕ ಮೃತಪಟ್ಟಿದ್ದಾನೆ.

    ಈ ಬಗ್ಗೆ ಪನ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ

    ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ

    ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿದ್ದ ಫೋಟೋವೊಂದು ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬೆನ್ನಲ್ಲೇ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ದೊರೆತಿದೆ.

    ಮೋತಿ ದಿವ್ಯಾ ತರಗತಿ ಹೊರಗೆ ನಿಂತಿದ್ದ ಬಾಲಕಿ. ಇತ್ತೀಚೆಗೆ ದಿವ್ಯಾ ತರಗತಿ ಹೊರಗೆ ನಿಂತಿದ್ದ ಮನಕಲಕುವ ಫೋಟೋವನ್ನು ತೆಲುಗು ಪ್ರತಿಕೆಯೊಂದು ಪ್ರಕಟಿಸಿತ್ತು. ಆದರೆ ಇದೀಗ ಆ ಫೋಟೋದಿಂದ ಬಾಲಕಿಗೆ ಅದೇ ಶಾಲೆಯಲ್ಲಿ ಅಡ್ಮಿಶನ್ ಸಿಕ್ಕಿದೆ. ಅವುಲಾ ಶ್ರೀನಿವಾಸ್ ಈ ಫೋಟೋವನ್ನು ಕ್ಲಿಕ್ಕಿಸಿದ್ದರು. ಅವುಲಾ ಈ ಫೋಟೋವನ್ನು ಪ್ರಕಟಿಸಿ ಅದಕ್ಕೆ ‘ಹಸಿವಿನ ನೋಟ’ ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಈ ಫೋಟೋವನ್ನು ಹೈದರಾಬಾದ್‍ನ ಗುಡಿಮಲಕಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಶಾಲೆಯಲ್ಲಿ ಕ್ಲಿಕ್ಕಿಸಲಾಗಿದೆ.

    ಈ ವೈರಲ್ ಫೋಟೋ ವೆಂಕಟ್ ರೆಡ್ಡಿ ಅವರ ಕಣ್ಣಿಗೆ ಬಿದ್ದಿದೆ. ವೆಂಕಟ್ ರೆಡ್ಡಿ ಅವರು ಎಂವಿ ಫೌಂಡೇಶನ್‍ನಲ್ಲಿ ರಾಷ್ಟ್ರೀಯ ಕನ್ವೀನರ್ ಆಗಿದ್ದು, ಇದು ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‍ಜಿಓ. ವೆಂಕಟ್ ರೆಡ್ಡಿ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿ ಅದಕ್ಕೆ, “ಯಾಕೆ ಈ ಬಾಲಕಿಗೆ ದಾಖಲಾತಿ ನೀಡಿಲ್ಲ. ಆ ಬಾಲಕಿಗೂ ಕೂಡ ಓದುವ ಹಾಗೂ ಊಟ ಮಾಡುವ ಅಧಿಕಾರ ಇದೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

    ಬಾಲಕಿ ತನ್ನ ಶಿಕ್ಷಣದ ಹಕ್ಕಿನಿಂದ ವಂಚಿತಳಾಗದಂತೆ ನೋಡಿಕೊಳ್ಳಲು ವೆಂಕಟ್ ರೆಡ್ಡಿ ತನ್ನ ಸಂಸ್ಥೆ ಮತ್ತು ಸ್ಥಳೀಯ ಸ್ವಯಂಸೇವಕರನ್ನು ಸಂಪರ್ಕಿಸಿದ್ದಾರೆ. ಸದ್ಯ ಬಾಲಕಿ ಈಗ ಅದೇ ಶಾಲೆಯಲ್ಲಿ ದಾಖಲಾಗಿ ಶಿಕ್ಷಣ ಪಡೆಯುತ್ತಿದ್ದಾಳೆ. ಬಳಿಕ ವೆಂಕಟ್ ಅವರು ದಿವ್ಯಾ ತನ್ನ ಪೋಷಕರೊಂದಿಗೆ ಮೊದಲನೇ ದಿನ ಶಾಲೆಗೆ ಹೋದ ಫೋಟೋವನ್ನು ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ದಿವ್ಯಾ ಶಾಲಾ ಯೂನಿಫಾರಂ ಧರಿಸಿದ್ದಳು.

    ಈ ಪೋಸ್ಟ್ ನೋಡಿ ಹಲವು ಮಂದಿ ವೆಂಕಟ್ ರೆಡ್ಡಿ ಹಾಗೂ ಫೋಟೋ ಕ್ಲಿಕ್ಕಿಸಿದ ಪತ್ರಕರ್ತನ ಬಗ್ಗೆ ಮೆಚ್ಚುಗೆಯ ಮಾತುಗಳನಾಡುತ್ತಿದ್ದಾರೆ. ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು.

  • 15ರ ಅಂಧ ಬಾಲೆ ಮೇಲೆ ಅಂಧ ಶಿಕ್ಷಕರಿಬ್ಬರಿಂದ್ಲೇ ನಿರಂತರ ಅತ್ಯಾಚಾರ

    15ರ ಅಂಧ ಬಾಲೆ ಮೇಲೆ ಅಂಧ ಶಿಕ್ಷಕರಿಬ್ಬರಿಂದ್ಲೇ ನಿರಂತರ ಅತ್ಯಾಚಾರ

    ಗಾಂಧಿನಗರ: ಸುಮಾರು ನಾಲ್ಕು ತಿಂಗಳ ಕಾಲ 15 ವರ್ಷದ ಅಂಧ ಬಾಲಕಿ ಮೇಲೆ ಇಬ್ಬರು ಅಂಧ ಶಿಕ್ಷಕರು ನಿರಂತರವಾಗಿ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಗುಜರಾತಿನಲ್ಲಿ ನಡೆದಿದೆ.

    ದೇವಾಲಯಗಳ ಪಟ್ಟಣ ಎಂದೇ ಖ್ಯಾತಿ ಪಡೆದಿರುವ ಗುಜರಾತಿನ ಅಂಬಾಜಿಯಲ್ಲಿ ಘಟನೆ ನಡೆದಿದೆ. ಖಾಸಗಿ ಟ್ರಸ್ಟ್ ನಡೆಸುತ್ತಿರುವ ಶಾಲೆಯಲ್ಲಿ ಮಗುವಿನ ಮೇಲೆ ಅತ್ಯಾಚಾರವಾಗಿದೆ. ಇಬ್ಬರು ಅಂಧ ಶಿಕ್ಷಕರು ನನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅಂಧ ಬಾಲಕಿ ಆರೋಪಿಸಿದ್ದಾಳೆ.

    ಸುಮಾರು ನಾಲ್ಕು ತಿಂಗಳಿಂದ 30 ವರ್ಷದ ಜಯಂತಿ ಠಾಕೋರ್ ಹಾಗೂ 62 ವರ್ಷದ ಚಮನ್ ಠಾಕೋರ್ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.

    ಆರೋಪಿ ಶಿಕ್ಷಕರನ್ನು ಪತ್ತೆ ಹಚ್ಚಲು ಪೊಲೀಸರು ಮ್ಯಾನ್‍ಹಂಟ್ ಪ್ರಾರಂಭಿಸಿದ್ದು, ಇದರಲ್ಲಿ ಒಬ್ಬ 62 ವರ್ಷ ವಯಸ್ಸಿನವನಾಗಿದ್ದಾನೆ. ಅತ್ಯಾಚಾರ ನಡೆದಿರುವ ಕುರಿತು ಬಾಲಕಿಯ ಚಿಕ್ಕಮ್ಮ ದೂರು ನೀಡಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ದೀಪಾವಳಿ ಹಬ್ಬಕ್ಕೆ ಬಾಲಕಿ ತನ್ನ ಸ್ವಂತ ಊರು ಪಟಾನ್ ಜಿಲ್ಲೆಯ ರಾಧನಪುರ ತಾಲೂಕಿನ ಪ್ರೇಮನಗರಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಬ್ಬಕ್ಕೆ ಬಂದ ಬಾಲಕಿ ಮರಳಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಆಗ ಆಕೆಯ ಚಿಕ್ಕಮ್ಮ ಏಕೆ ಎಂದು ಕೇಳಿ ಆಕೆಯನ್ನು ತಬ್ಬಿಕೊಂಡಿದ್ದಾಳೆ. ಈ ವೇಳೆ ಘಟನೆ ಕುರಿತು ಬಾಲಕಿ ತನ್ನ ಚಿಕ್ಕಮ್ಮನಿಗೆ ವಿವರಿಸಿದ್ದು, ನಂತರ ಚಿಕ್ಕಮ್ಮ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.

    ವರದಿ ಪ್ರಕಾರ, ಈ ವರ್ಷ ಜುಲೈನಲ್ಲಿ ಸಂಗೀತ ಕಲಿಯಲು ಅಂಬಾಜಿಯ ಶಾಲೆಗೆ ಸೇರುವುದಕ್ಕೂ ಮೊದಲು ಬಾಲಕಿ ಸ್ಥಳೀಯ ಶಾಲೆಯಲ್ಲಿ 8ನೇ ತರಗತಿವರೆಗೆ ಅಧ್ಯಯನ ಮಾಡಿದ್ದಾಳೆ. ಈ ಶಾಲೆಗೆ ಸೇರಿದ ನಂತರ ಶಿಕ್ಷಕರು ದುರ್ನಡತೆ ತೋರಿದ್ದು, ಇಬ್ಬರು ಶಿಕ್ಷಕರ ನಡವಳಿಕೆ ಕುರಿತು ಶಾಲೆಯ ಇತರ ಮೂವರು ಶಿಕ್ಷಕರಿಗೆ ಮಾಹಿತಿ ನೀಡಿದ ನಂತರ ಲೈಂಗಿಕ ದೌರ್ಜನ್ಯವನ್ನು ನಿಲ್ಲಿಸಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿ, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಶಿಕ್ಷಕರನ್ನು ಬಂಧಿಸಲು ಮ್ಯಾನ್‍ಹಂಟ್ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷ ಪೊಕ್ಸೊ ಕಾಯ್ದೆಗೆ ಕಠಿಣ ಶಿಕ್ಷೆಗಳನ್ನು ಸೇರಿಸಿದೆ. ಮರಣ ದಂಡನೆಯನ್ನು ಸಹ ಸೇರಿಸಲಾಗಿದೆ.

  • ಸೇತುವೆ ನಿರ್ಮಿಸಿದ್ರು, ದಾಖಲಾತಿ ಹೆಚ್ಚಿಸಿದ್ರು- ಕಾಡಶೆಟ್ಟಿಹಳ್ಳಿ ಗ್ರಾಮಸ್ಥರಿಂದ 50 ವರ್ಷಗಳ ಕನಸು ನನಸು

    ಸೇತುವೆ ನಿರ್ಮಿಸಿದ್ರು, ದಾಖಲಾತಿ ಹೆಚ್ಚಿಸಿದ್ರು- ಕಾಡಶೆಟ್ಟಿಹಳ್ಳಿ ಗ್ರಾಮಸ್ಥರಿಂದ 50 ವರ್ಷಗಳ ಕನಸು ನನಸು

    ತುಮಕೂರು: ಊರಿನ ಜನ ಒಗ್ಗಟ್ಟಾಗಿ ನಿಂತರೆ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯ ಅನ್ನೋದಕ್ಕೆ ಕುಣಿಗಲ್‌ನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರು ಸಾಕ್ಷಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ. ‘ದೈತ್ಯ ಮಾರಮ್ಮ ಚಾರಿಟಬಲ್ ಟ್ರಸ್ಟ್’ ಎಂಬ ಹೆಸರಿನ ಸಂಘವನ್ನು ಕಟ್ಟಿಕೊಂಡು ಊರಿನ ಅಭಿವೃದ್ದಿ ಮಾಡುತ್ತಿದ್ದಾರೆ. ಸಮಾಜ ಸೇವೆಯ ಮೊದಲ ಹೆಜ್ಜೆಯಾಗಿ ಇವರು ಈ ಊರಿನ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ವಿದ್ಯಾರ್ಥಿಗಳ ಕೊರತೆಯಿಂದಾಗಿ ಇಲ್ಲಿಯ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವಂತಿತ್ತು. ಇದನ್ನರಿತ ಗ್ರಾಮಸ್ಥರು ಶಾಲೆಯನ್ನು ದತ್ತುಪಡೆದುಕೊಂಡು ಶಾಲೆಯ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಸವಲತ್ತುಗಳನ್ನು ಶಾಲೆಗೆ ಕೊಟ್ಟಿದ್ದಾರೆ. ಬಹುಮುಖ್ಯವಾಗಿ ಈ ಶಾಲೆಗೆ ಅಕ್ಕಪಕ್ಕದ ಊರಿಂದ ವಿದ್ಯಾರ್ಥಿಗಳು ಬರಲು ಶಿಂಷಾ ನದಿ ಅಡ್ಡಿಯಾಗಿತ್ತು. ನದಿಗೆ ಸೇತುವೆ ಇಲ್ಲದ ಕಾರಣ ಸುಮಾರು 9 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ದೂರದ ನೆಪವೊಡ್ಡಿ ಪೋಷಕರು ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಇದನ್ನರಿತ ಕಾಡಶೆಟ್ಟಹಳ್ಳಿ ಗ್ರಾಮಸ್ಥರು ತಾವೇ ಸ್ವತಃ ಶ್ರಮದಾನ ಮಾಡಿ ತೊರೆಹಳ್ಳಿ-ಕಾಡಶೆಟ್ಟಿಹಳ್ಳಿ ನಡುವೆ ಶಿಂಷಾ ನದಿಗೆ ಸೇತುವೆ ಕಟ್ಟಿದ್ದಾರೆ. ಸುಮಾರು 45 ಅಡಿ ಉದ್ದ, 30 ಅಡಿ ಅಗಲ ಹಾಗೂ 10 ಅಡಿ ಎತ್ತರದ ಸೇತುವೆ ನಿರ್ಮಿಸಿದ್ದಾರೆ. ತಮ್ಮ ತಮ್ಮ ಮನೆಗಳಿಂದ ಟ್ರ್ಯಾಕ್ಟರ್, ಪಿಕ್ಕಾಸಿ, ಗುದ್ದಲಿ ತಂದು ಸುಮಾರು ಒಂದು ವಾರಗಳ ಕಾಲ ಶ್ರಮದಾನ ಮಾಡಿದ್ದಾರೆ. ಲಕ್ಷಾಂತರ ರೂ. ವ್ಯಯಿಸಿ ಸೇತುವೆ ನಿರ್ಮಾಣ ಮಾಡಿದ್ದಾರೆ.

    ಸೇತುವೆ ನಿರ್ಮಾಣವಾದ ದೆಸೆಯಿಂದ ಸುಮಾರು 9 ಕಿ.ಮೀ ದೂರದ ಪ್ರಯಾಣ ಈಗ 2 ಕಿ.ಮೀ ದೂರ ಆಗಿದೆ. ಕೇವಲ 6 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 76 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸೇತುವೆ ಮಾತ್ರವಲ್ಲ ಸೇತುವೆಗೆ ಹೊಂದಿಕೊಂಡಿರುವಂತೆ ಕಚ್ಚಾರಸ್ತೆಯನ್ನೂ ಮಾಡಿದ್ದಾರೆ. ಎರಡೂ ಕಡೆಗಳಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಶ್ರಮದಾನದಿಂದ ರಸ್ತೆ ನಿರ್ಮಿಸಿದ್ದಾರೆ. ಪರಿಣಾಮ ದ್ವಿಚಕ್ರ ವಾಹನಗಳು, ಶಾಲಾ ಬಸ್ಸುಗಳು ಓಡಾಡುತ್ತಿವೆ. ಅಲ್ಲದೆ ದೈತ್ಯ ಮಾರಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾಡಶೆಟ್ಟಿಹಳ್ಳಿ ಶಾಲೆಯ ದುರಸ್ಥಿ ಕೆಲಸವೂ ನಡೆಯುತ್ತಿದೆ. ಹೊಸ ಕಟ್ಟಡಗಳ ನಿರ್ಮಾಣ, ಸುಣ್ಣ-ಬಣ್ಣಗಳನ್ನು ಬಳಿದು ನ್ಯೂ ಲುಕ್ ನೀಡಲಾಗುತ್ತಿದೆ.

    ಕೆಲ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಬೇಡಿಕೆ ಇಟ್ಟಿದ್ದರಿಂದ ಸರ್ಕಾರದ ಅನುದಾನದ ಇಲ್ಲದೇ ಇದ್ದರೂ ಟ್ರಸ್ಟ್ ವತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಇಂಗ್ಲಿಷ್ ಶಿಕ್ಷಕರು ಸೇರಿದಂತೆ ಮೂರು ಅತಿಥಿ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಶಾಲೆಯ ಸಹಶಿಕ್ಷಕ ಲಕ್ಷ್ಮಣ ತಿಳಿಸಿದ್ದಾರೆ.

    ದೈತ್ಯ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸರ ನೇತೃತ್ವದಲ್ಲಿ ಈ ಎಲ್ಲಾ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸುಮಾರು 50 ವರ್ಷಗಳಿಂದ ಶಿಂಷಾ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈಗ ಗ್ರಾಮಸ್ಥರೇ ಒಗ್ಗಟ್ಟಾಗಿ ಸೇತುವೆ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ. ಸೇತುವೆ ನಿರ್ಮಾಣ ಮಾಡಿ ತಮ್ಮೂರ ಶಾಲೆ ಉಳಿಸುವುದರೊಂದಿಗೆ ಊರಿನ ಜನರಿಗೂ ಉಪಕಾರಿಯಾಗಿದ್ದಾರೆ.

  • ಹುಟ್ಟುಹಬ್ಬದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥ

    ಹುಟ್ಟುಹಬ್ಬದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥ

    ಮೈಸೂರು: ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಯೊಬ್ಬ ನೀಡಿದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.

    ವಿದ್ಯಾರಣ್ಯಪುರಂನಲ್ಲಿರುವ ನಳಂದ ಶಾಲೆಯ ಓದುತ್ತಿದ್ದ ವಿದ್ಯಾರ್ಥಿ ತನ್ನ ಹುಟ್ಟುಹಬ್ಬ ಹಿನ್ನೆಲೆ ಶಾಲೆಯ ಎಲ್ಲ ಮಕ್ಕಳಿಗೂ ಚಾಕ್ಲೇಟ್ ನೀಡಿದ್ದಾನೆ. ಚಾಕ್ಲೇಟ್ ತಿಂದ ಮಕ್ಕಳಿಗೆ ತಕ್ಷಣ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ.

    ವಾಂತಿ ಮತ್ತು ಹೊಟ್ಟೆ ನೋವಿನಿಂದ ಅಸ್ವಸ್ಥರಾದ 16 ಜನ ಮಕ್ಕಳನ್ನು ಶಾಲಾ ಶಿಕ್ಷಕರು ತಕ್ಷಣ ರಾಮಕೃಷ್ಣ ನರ್ಸಿಂಗ್ ಹೋಂಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಶಿಕ್ಷಕರು ತಿಳಿಸಿದ್ದಾರೆ. ಈ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.