Tag: School Vacation

  • 5 ವರ್ಷದೊಳಗಿನ ಮಕ್ಕಳಿಗೆ ಒಂದು ತಿಂಗಳು ರಜೆ: ಸುಧಾಕರ್

    5 ವರ್ಷದೊಳಗಿನ ಮಕ್ಕಳಿಗೆ ಒಂದು ತಿಂಗಳು ರಜೆ: ಸುಧಾಕರ್

    ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ 5 ವರ್ಷದ ಕೆಳಗಿನ ಶಾಲೆಗೆ ಹೋಗುವ ಮಕ್ಕಳಿಗೆ ಒಂದು ತಿಂಗಳು ರಜೆ ಕೊಡಲಾಗುವುದು ಎಂದು ವೈದ್ಯಕೀಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯಕಿಯ ಇಲಾಖೆ ಸಮಕ್ಷಮದಲ್ಲಿ ರಜೆ ಘೋಷಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ನಾವು ಈಗಾಗಲೇ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯನ್ನು ನೀಡಿದ್ದೇವೆ ಎಂದು ತಿಳಿಸಿದರು.

    5 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ 31ರವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಬೇಸಿಗೆ ರಜೆ ಮುಗಿದ ನಂತರವೇ 5 ವರ್ಷದೊಳಗಿನ ಮಕ್ಕಳಿಗೆ ಶಾಲೆ ಆರಂಭವಾಗಲಿವೆ. ಪ್ರಿನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಕಲಿಯುತ್ತಿರುವ ರಾಜ್ಯದ ಎಲ್ಲ ಮಕ್ಕಳಿಗೆ ರಜೆ ಸಿಗಲಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಯುಕೆಜಿ, ಎಲ್‍ಕೆಜಿ ಶಾಲೆಗಳಿಗೆ ಇಂದಿನಿಂದ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದರು.

  • ಮುಂಗಾರು ಅಬ್ಬರ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

    ಮುಂಗಾರು ಅಬ್ಬರ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

    ಉಡುಪಿ/ಮಂಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ನಿನ್ನೆ ಆರಂಭವಾದ ಮಳೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಂಜಾನೆಯಿಂದ ಗಾಳಿ ಸಹಿತ ಮಳೆಯಾಗಿತ್ತಿದ್ದು, ಇನ್ನೆರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಬೆನ್ನಲ್ಲಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

    ನಿನ್ನೆಯಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಇಂದು ವಿಪರೀತ ಮಳೆ ಬೀಳುತ್ತಿದ್ದು, ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರು ಒಂದು ದಿನ ರಜೆ ಘೋಷಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಎರಡು ದಿನ ರಜೆ ನೀಡಿದ್ದು, ಸಂಜೆಯ ನಂತರ ಮಳೆ ಕಡಿಮೆಯಾಗದಿದ್ದರೆ ಉಡುಪಿಯಲ್ಲೂ ರಜೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಜೆ ಘೋಷಣೆಗೆ ಮುನ್ನವೇ ಮನೆಯಿಂದ ಹೊರಟಿದ್ದರು. ಶಾಲೆ ತಲುಪುತ್ತಿದ್ದಂತೆ ರಜೆ ಘೋಷಣೆಯಾಗಿದ್ದು, ಮಳೆಯಲ್ಲಿಯೇ ಬಂದಿದ್ದ ಮಕ್ಕಳು ನೆನೆದುಕೊಂಡೇ ಮನೆ ಸೇರುವಂತಾಯಿತು. ಪುಟ್ಟ ಮಕ್ಕಳನ್ನು ಕರೆದೊಯ್ಯಲು ಪೋಷಕರು ಪರದಾಡುವಂತಾಗಿದೆ. ಶಿಕ್ಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಯಿಂದ ಕಳುಹಿಸಿಕೊಟ್ಟರು.

    ಮಕ್ಕಳು ಮನೆಯಿಂದ ಹೊರಡುವ ಮೊದಲೇ ರಜೆ ಕೊಡಬೇಕು. ಶಾಲೆ ತಲುಪಿದ ನಂತರ ರಜೆ ಕೊಟ್ಟರೆ ಮಕ್ಕಳಿಗೂ ಕಷ್ಟ, ಪೋಷಕರಿಗೂ ಆತಂಕ. ಹವಾಮಾನ ಇಲಾಖೆ ನಾಲ್ಕು ದಿನ ಮಳೆಯಾಗುತ್ತದೆ ಅಂತ ಮೊದಲೇ ವರದಿ ನೀಡಿದೆ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಜಿಲ್ಲಾಡಳಿತ ಚಿಂತನೆ ಮಾಡಬೇಕು ಎಂದು ಸಮಾಜ ಸೇವಕ ನಿತ್ಯಾನಂದ ಹೇಳಿದ್ದಾರೆ.

    ಇತ್ತ ಅರಬ್ಬೀ ಸಮುದ್ರ ಅಬ್ಬರಿಸುತ್ತಿದೆ. ಮೀನುಗಾರರಿಗೂ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಈಗಾಗಲೇ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿದ್ದು, ನಾಡದೋಣಿ ಮೀನುಗಾರರಿಗೆ ಜಾಗರೂಕರಾಗಿರುವಂತೆ ಮುನ್ಸೂಚನೆ ಕೊಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಜಡಿ ಮಳೆ, ಮಂಗಳೂರು ನಗರದಲ್ಲಿ ತುಂತುರು ಮಳೆ ಸುರಿಯುತ್ತಿದೆ. ಹೊಳೆ, ನದಿಗಳು ತುಂಬಿ ಹಯಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ.