Tag: school bus

  • ನಡು ರಸ್ತೆಯಲ್ಲೇ ಹೊತ್ತಿ ಉರಿದ ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್

    ನಡು ರಸ್ತೆಯಲ್ಲೇ ಹೊತ್ತಿ ಉರಿದ ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್

    ಬಳ್ಳಾರಿ: ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಬೆಂಕಿ ತಗುಲಿ ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಹೊಸಪೇಟೆ ಬೈಪಾಸ್ ನಲ್ಲಿ ನಡೆದಿದೆ.

    ಹುನಗುಂದ ತಾಲೂಕಿನ ವಜ್ಜಲ ಗ್ರಾಮದ ಸರ್ಕಾರಿ ಶಾಲೆಯಿಂದ 16 ಮಕ್ಕಳು ಮತ್ತು ಮೂವರು ಶಿಕ್ಷಕರು ಗುರುವಾರ ಮುಂಜಾನೆ ಶಾಲಾ ಮಕ್ಕಳು ಹಂಪಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಹಂಪಿ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಬಸ್ ಗೆ ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ ನಲ್ಲಿದ್ದ 16 ಮಕ್ಕಳನ್ನು ಬಸ್ ಸಿಬ್ಬಂದಿ ಹಾಗೂ ಸ್ಥಳೀಯರು ಬಸ್ ಗಾಜುಗಳನ್ನು ಒಡೆದು ರಕ್ಷಣೆ ಮಾಡಿದ್ದಾರೆ.

    ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಸ್ ನಿಂದ ರಕ್ಷಣೆ ಮಾಡಿದ ಶಾಲಾ ಮಕ್ಕಳನ್ನು ಬೇರೆ ವಾಹನದ ವ್ಯವಸ್ಥೆ ಮಾಡಿ ಮಾಜಿ ಶಾಸಕ ಆನಂದಸಿಂಗ್ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಘಟನೆ ಸಂಬಂಧ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಹೈದರಾಬಾದ್: ಶಾಲಾ ಬಸ್ ನಿಂದ ಬಿದ್ದು 1ನೇ ತರಗತಿಯ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಈ ಘಟನೆ ಸಾಹೇಬ್ ನಗರದಲ್ಲಿರೋ ವಸಂತಲಿಪುರಂನಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ಮೃತ ಅಂಜಲಿ ಮನೆ ಶಾಹೇಬ್ ನಗರದಲ್ಲಿತ್ತು. ಈಕೆ ಪ್ರತೀ ದಿನ ಶಾಲೆಗೆ ಶಾಲಾ ಬಸ್ ನಲ್ಲೇ ಹೋಗಿ ಬರುತ್ತಿದ್ದಳು. ಅಂತೆಯೇ ಇಂದು ಕೂಡ ವಸಂತಪುರಂನಲ್ಲಿರೋ ಪ್ರಶಾಂತಿ ವಿದ್ಯಾನಿಕೇತನ್ ಶಾಲೆಗೆ ತೆರಳಿ ಮತ್ತೆ ಬಸ್ ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಳು. ಈ ವೇಳೆ ಬಸ್ ನ ಡೋರ್ ಪಕ್ಕ ಅಂಜಲಿ ಕುಳಿತಿದ್ದಳು. ಅಂತೆಯೇ ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಸ್ಪೀಡ್ ಬ್ರೇಕರ್ ನೋಡಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಾಲಕಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಚಕ್ರದಡಿ ಸಿಲುಕಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ನಾವು ಇಂದು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ.

    ಕೆಲ ಖಾಸಗಿ ಶಾಲೆಯ ಬಸ್ ಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಅಲ್ಲದೇ ಪೋಷಕರಿಂದ ಭಾರೀ ಶುಲ್ಕ ಪಡೆದುಕೊಳ್ಳುತ್ತಾರೆ. ಆದ್ರೆ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿಲ್ಲ. ಈ ಎಲ್ಲಾ ಹಿನ್ನೆಲೆಗಳಿಂದ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಘಟನೆ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • KSRTC ಬಸ್ ಗೆ ಡಿಕ್ಕಿಯಾಗಿ ಮರಕ್ಕೆ ಗುದ್ದಿದ ಸ್ಕೂಲ್ ಬಸ್- 3 ವಿದ್ಯಾರ್ಥಿಗಳ ದುರ್ಮರಣ

    KSRTC ಬಸ್ ಗೆ ಡಿಕ್ಕಿಯಾಗಿ ಮರಕ್ಕೆ ಗುದ್ದಿದ ಸ್ಕೂಲ್ ಬಸ್- 3 ವಿದ್ಯಾರ್ಥಿಗಳ ದುರ್ಮರಣ

    ರಾಮನಗರ: ಚಾಲಕನ ನಿಯಂತ್ರಣ ತಪ್ಪಿದ ಸ್ಕೂಲ್ ಬಸ್ ಕೆಎಸ್‍ಆರ್ ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಗುದ್ದಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಅನ್ನಪೂರ್ಣೇಶ್ವರಿ ಆಶ್ರಮದ ಬಳಿ ನಡೆದಿದ್ದು, ಗುರುಕುಲ ಶಾಲೆಯ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳು ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

    ಮರಳವಾಡಿ ಕಡೆಗೆ ಬರುತ್ತಿದ್ದ ಕನಕಪುರ-ತೇರುಬೀದಿ ಮಾರ್ಗದ ಬಸ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಲ್ ಬಸ್ ನ ಛಾವಣಿ ಕಿತ್ತು ಬಂದು, ನಂತರ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಕನಕಪುರ ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು

    ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು

    ನವದೆಹಲಿ: ರಸ್ತೆಯಲ್ಲಿಯೇ ಶಾಲಾ ಬಸ್ ಒಂದು ಹೊತ್ತಿ ಉರಿದಿದ್ದು, ಸುಮಾರು 30 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ದೆಹಲಿಯ ಡೌಲಾ ಕುವಾನ್ ಪ್ರದೇಶದಲ್ಲಿ ನಡೆದಿದೆ.

    ನಾರಾಯಣದಲ್ಲಿರುವ ಕೇಂದ್ರಿಯ ವಿದ್ಯಾಲಯ ಶಾಲೆಗೆ ಸೇರಿದ ಬಸ್ ಆಗಿದೆ. ಈ ಬಸ್ ಸುಮಾರು 30 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಡೌಲಾ ಕುವಾನ್ ಸಮೀಪದಲ್ಲಿ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

    ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯಾರ್ಥಿಗಳು ಕಿರಿದಾದ ಮಾರ್ಗದಿಂದ ತಪ್ಪಿಸಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ ತಕ್ಷಣ ಮಾಹಿತಿ ತಿಳಿದು ಮೂರು ಅಗ್ನಿಶಾಮಕ ದಳಗಳು ಬಂದು ಬೆಂಕಿಯನ್ನು ನಂದಿಸಿವೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರೊಬ್ಬರಿಗೆ ಅಪಾಯ ಸಂಭವಿಸಿಲ್ಲ ಮಾಧ್ಯಮಗಳು ವರದಿ ಮಾಡಿವೆ.

    ಬಸ್‍ನ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಇನ್ನು ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

  • ವಿದ್ಯುತ್ ಕಂಬಕ್ಕೆ ಶಾಲಾ ವಾಹನ ಡಿಕ್ಕಿ, ತಪ್ಪಿತು ಭಾರೀ ಅನಾಹುತ

    ವಿದ್ಯುತ್ ಕಂಬಕ್ಕೆ ಶಾಲಾ ವಾಹನ ಡಿಕ್ಕಿ, ತಪ್ಪಿತು ಭಾರೀ ಅನಾಹುತ

    ವಿಜಯಪುರ: ಖಾಸಗಿ ಶಾಲಾ ವಾಹನವೊಂದು ರಸ್ತೆಯ ಇಳಿಜಾರಿನಿಂದ ತನ್ನಿಂತಾನೆ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಗರದಲ್ಲಿ ನಡೆದಿದೆ.

    ಆದರ್ಶನಗರ ಸೇವಾಲಾಲ್ ಹಾಗೂ ದುರ್ಗಾ ದೇವಸ್ಥಾನದ ಬಳಿ ಶಾಲಾ ಬಸ್ ನ್ನು ನಿಲ್ಲಿಸಲಾಗಿತ್ತು. ಈ ವೇಳೆ ಬಸ್ ತನ್ನಿಂದ ತಾನೇ ಮುಂದಕ್ಕೆ ಚಲಿಸಿ, ವಿದ್ಯುತ್ ಪ್ರವಹಿಸುತ್ತಿರುವ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ ಯಾರು ಇಲ್ಲದೇ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗಿದ್ದರಿಂದ, ಕಂಬ ಅರ್ಧ ಕಟ್ ಆಗಿ ಬಸ್ ಮೇಲೆಯೇ ಬಿದ್ದಿದೆ. ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವ ಅಧಿಕಾರಿಗಳು ಆಗಮಿಸದೇ ನಿರ್ಲಕ್ಷ್ಯವಹಿಸಿ ತಡವಾಗಿ ಬಂದಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಶಾಲಾ ಬಸ್ ಹರಿದು 5 ವರ್ಷದ ಬಾಲಕ ದುರ್ಮರಣ

    ಶಾಲಾ ಬಸ್ ಹರಿದು 5 ವರ್ಷದ ಬಾಲಕ ದುರ್ಮರಣ

    ಚಂಢೀಗಢ: ಐದು ವರ್ಷದ ಬಾಲಕನ ಮೇಲೆ ಶಾಲಾ ಬಸ್ ಹರಿದು ಮೃತಪಟ್ಟ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ.

    ಹರಿಯಾಣದ ರಿವಾರಿ ಜಿಲ್ಲೆಯಲ್ಲಿ ಶುಕ್ರವಾರ ಈ ಅವಘಡ ಸಂಭವಿಸಿದ್ದು, ಮೃತ ದುರ್ದೈವಿ ಬಾಲಕನನ್ನು ಹಿಮಾಂಗ್ ಎಂದು ಗುರುತಿಸಲಾಗಿದೆ. ಈತ ಎಲ್‍ಕೆಜಿ ಓದುತ್ತಿದ್ದನು. ಚಾಲಕ ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಾಲಕನ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಸದ್ಯ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಅಂತ ತನಿಖಾಧಿಕಾರಿ ಪ್ರೀತ್ ಸಿಂಗ್ ಹೇಳಿದ್ದಾರೆ.

  • ಶಾಸಕ ಉಮೇಶ್ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿ- 8 ಮಕ್ಕಳಿಗೆ ಗಾಯ

    ಶಾಸಕ ಉಮೇಶ್ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿ- 8 ಮಕ್ಕಳಿಗೆ ಗಾಯ

    ಚಿಕ್ಕೋಡಿ: ಶಾಸಕ ಉಮೇಶ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.

    20 ಮಕ್ಕಳನ್ನು ಕರೆದುಕೊಂಡು ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಬಸ್ ಈ ಅವಘಡಕ್ಕೆ ತುತ್ತಾಗಿದೆ. ಘಟನೆಯಿಂದ 8 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಬೆಲ್ಲದ ಬಾಗೇವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸ್ಥಳಕ್ಕೆ ಹುಕ್ಕೇರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹಿಂಬದಿಯಿಂದ ಶಾಲಾ ಬಸ್ ಡಿಕ್ಕಿ-4 ವರ್ಷದ ಬಾಲಕಿ ಸಾವು

    ಹಿಂಬದಿಯಿಂದ ಶಾಲಾ ಬಸ್ ಡಿಕ್ಕಿ-4 ವರ್ಷದ ಬಾಲಕಿ ಸಾವು

    ಬೆಂಗಳೂರು: ಶಾಲಾ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ಅರಿಶಿಣಕುಂಟೆ ಬಳಿ ನಡೆದಿದೆ.

    ವರ್ಷ (4) ಮೃತ ಬಾಲಕಿ. ವರ್ಷ ಎಸ್‍ಎಂ ರ್ಯಾಂಕಿಂಗ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಲ್‍ಕೆಜಿ ಓದುತ್ತಿದ್ದಳು. ಎಂದಿನಂತೆ ಇಂದು ಕೂಡ ವರ್ಷ ಶಾಲಾ ಬಸ್‍ನಲ್ಲಿ ಬಂದಿದ್ದಳು. ಆದ್ರೆ ಬಾಲಕಿಯನ್ನು ಬಸ್‍ನಿಂದ ಇಳಿಸುವಾಗ ಈ ಅವಘಡ ಸಂಭವಿಸಿದೆ.

    ಘಟನೆಯ ನಂತರ ಬಸ್ ಚಾಲಕ ನಾಪತ್ತೆಯಾಗಿದ್ದಾನೆ. ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹಿಮಾಚಲ ಪ್ರದೇಶದಲ್ಲಿ ಶಾಲಾ ಬಸ್ ಪಲ್ಟಿ – 25 ಮಕ್ಕಳಿಗೆ ಗಾಯ

    ಹಿಮಾಚಲ ಪ್ರದೇಶದಲ್ಲಿ ಶಾಲಾ ಬಸ್ ಪಲ್ಟಿ – 25 ಮಕ್ಕಳಿಗೆ ಗಾಯ

    ಶಿಮ್ಲಾ: ಶಾಲಾ ಬಸ್ ಪಲ್ಟಿಯಾಗಿ ಸುಮಾರು 25 ಮಕ್ಕಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸುಂದರ್‍ನಗರ ಪ್ರದೇಶದ ದೆಹರ್ ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಸುಮಾರು 25 ಮ್ಕಕಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ.

    ಕಳೆದ ತಿಂಗಳು ಉತ್ತರಪ್ರದೇಶದ ಇಟಾದಲ್ಲಿ ಶಾಲಾ ಬಸ್ ಹಾಗೂ ಲಾರಿ ಡಿಕ್ಕಿಯಾಗಿ ಜೆಎಸ್ ವಿದ್ಯಾನಿಕೇತನ್ ಶಾಲೆಯ 15 ಮಕ್ಕಳು ಸಾವನ್ನಪ್ಪಿದ್ದರು. ತೀವ್ರ ಚಳಿ ಹಾಗೂ ಮಂಜಿನ ವಾತಾವರಣದಿಂದ ಶಾಲೆಗಳಿಗೆ ರಜೆ ಘೋಷಿಸುವಂತೆ ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವಿದ್ದರೂ ಕೂಡ ಜೆಎಸ್ ವಿದ್ಯಾನಿಕೇತನ್ ಶಾಲೆ ಕಾರ್ಯ ನಿರ್ವಹಿಸುತ್ತಿತ್ತು.

     

  • ಬೈಕ್ ಗೆ ಸ್ಕೂಲ್ ಬಸ್ ಡಿಕ್ಕಿ- ಬೈಕ್ ಸವಾರ ಸಾವು

    ಬೆಂಗಳೂರು: ಬೈಕಿಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ಶ್ರೀನಗರ ಬಸ್ ಸ್ಟಾಪ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಜಯನಗರದ ಸುರಾನ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಕೃಷ್ಣಪ್ಪ ಶೆಟ್ಟಿ ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ಶೆಟ್ಟಿ ಟಿವಿಎಸ್ ಬೈಕ್‍ನಲ್ಲಿ ಶ್ರೀನಗರದ ಕಡೆಯಿಂದ ಹನುಮಂತನಗರದ ಕಡೆ ತರೆಳುತಿದ್ದ ವೇಳೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ. ಬೈಕ್ ನ ಹಿಂಭಾಗದಲ್ಲಿ ಕುಳಿತಿದ್ದ ಭೈರಮ್ಮ ಅವರಿಗೆ ಗಾಯಗಳಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.

    ಸ್ಥಳಕ್ಕೆ ಬಸವನಗುಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.