ಭೋಪಾಲ್: ಫೆಬ್ರವರಿ 12 ರಂದು ಶಾಲಾ ಬಸ್ಸಿಗೆ ನುಗ್ಗಿ ದುಷ್ಕರ್ಮಿಗಳು ಉದ್ಯಮಿಯೊಬ್ಬರ 6 ವರ್ಷದ ಅವಳಿ ಮಕ್ಕಳನ್ನು ಕಿಡ್ನಾಪ್ ಮಾಡಿದ್ದರು. ಈಗ ಆ ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಂಡಾದಲ್ಲಿರುವ ಯಮುನಾ ನದಿಯೊಂದರಲ್ಲಿ ಶವವಾಗಿ ಮಕ್ಕಳು ಪತ್ತೆಯಾಗಿದ್ದಾರೆ. ಈ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಪದ್ಮ್ ಶುಕ್ಲಾ, ರಾಮ್ಕೇಶ್, ಪಿಂಟ ಯಾದವ್, ರಾಕೇಶ್ ದ್ವಿವೇದಿ, ಅಲೋಕ್ ಸಿಂಗ್ ಮತ್ತು ವಿಕ್ರಮಿಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳನ್ನು ಕಲ್ಲಿಗೆ ಕಟ್ಟಿಗೆ ನದಿಗೆ ಎಸೆದಿದ್ದಾರೆ. ಶವಗಳು ನದಿಯ ಮೇಲೆ ತೇಲಿ ಬಂದಾಗ ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಚಂಚಲ್ ಶೇಖರ್ ತಿಳಿಸಿದ್ದಾರೆ.
ಅಪಹರಿಸಿದ್ದು ಹೇಗೆ?
ಫೆಬ್ರವರಿ 12 ರಂದು ಚಿತ್ರಕೂಟದಲ್ಲಿ ಶಾಲಾ ಬಸ್ಸಿಗೆ ಇಬ್ಬರು ಮುಸುಕುಧಾರಿ ಪುರುಷರು ಬಂದೂಕುಗಳನ್ನು ಹಿಡಿದುಕೊಂಡು ನುಗ್ಗಿದ್ದಾರೆ. ಬಳಿಕ ಗನ್ ತೋರಿಸಿ ತೈಲ ಉದ್ಯಮಿ ಬ್ರಿಜೇಶ್ ರಾವತ್ ಎಂಬವರ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದರು. ಮಕ್ಕಳನ್ನು ಕಿಡ್ನಾಪ್ ಮಾಡಿರುವ ದೃಶ್ಯ ಶಾಲೆಯ ಬಸ್ಸಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರಲ್ಲಿ ಇಬ್ಬರು ಬಂದೂಕು ಹಿಡಿದಿದ್ದು, ಹಳದಿ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿರುವುದನ್ನು ಕಾಣಬಹುದಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಉದ್ಯಮಿಯಿಂದ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳಲು ಕಿಡ್ನಾಪ್ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮಧ್ಯಪ್ರದೇಶ ಪೊಲೀಸರು ಅಪಹರಣಕಾರರನ್ನು ಪತ್ತೆಹಚ್ಚಲು ಸಹಾಯ ಮಾಡುವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಫೋಷಣೆ ಮಾಡಿದ್ದರು. ಅಪಹರಣದ ನಂತರ “ಬಬುಲಿ ಕೋಲ್” ಎಂದು ಕರೆಯಲ್ಪಡುವ ಗ್ಯಾಂಗ್ ಮಕ್ಕಳನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದರು.
ಅವಳಿ ಮಕ್ಕಳ ಕಿಡ್ನಾಪ್ ಹತ್ಯೆಯನ್ನು ಖಂಡಿಸಿ ಚಿತ್ರಕೂಟದಲ್ಲಿ ಜನರು ಪ್ರತಿಭಟನೆ ಮಾಡಿದ್ದಾರೆ. ಮಕ್ಕಳ ಸಾವಿನ ಸುದ್ದಿ ಬಂದಾಗ ಸ್ಥಳೀಯರು ಅಂಗಡಿಗಳು ಮತ್ತು ಇತರ ವ್ಯಾಪಾರದ ಅಂಗಡಿಯನ್ನು ಮುಚ್ಚುವಂತೆ ಒತ್ತಾಯಿಸಿದ್ದರು. ಸದ್ಯಕ್ಕೆ ಈ ಕುರಿತು ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ಇಬ್ಬರನ್ನು ಮಕ್ಕಳನ್ನು ಅಪಹರಣ ಮಾಡಿರುವುದು ಜನರನ್ನು ಆಘಾತಗೊಳ್ಳುವಂತೆ ಮಾಡಿದೆ. ಮಕ್ಕಳು ಪ್ರತಿ ದಿನ ಶಾಲೆಗೆ 4 ಕಿ.ಮೀ. ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಸಂತೋಷ್ ಸಿಂಗ್ ಗೌರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv