Tag: school building

  • ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಬೆಳಗಾವಿ: ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಶಾಲಾ ದುರಸ್ತಿಗೆ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು.

    ಶಿಥಿಲವಾದ ಶಾಲಾ ಕೊಠಡಿ ಹಿನ್ನೆಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮಸ್ಥರು ಸರ್ಕಾರಿ ಶಾಲಾ ಮೈದಾನದಲ್ಲಿಯೇ ಮೊದಲ ದಿನವೇ ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠಕ್ಕೆ ಪಟ್ಟುಡಿದಿದ್ದರು. ಈ ಬಗ್ಗೆ ಸಂಪೂರ್ಣವಾಗಿ ವರದಿ ಬಿತ್ತರಿಸಿ ಪಬ್ಲಿಕ್ ಟಿವಿ ಶಾಲಾ ಮಕ್ಕಳ ಸಮಸ್ಯೆಯನ್ನು ಎಳೆಎಳೆಯಾಗಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತಂದಿತ್ತು. ಪರಿಣಾಮ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶಾಲಾ ದುರಸ್ತಿ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ? 

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದ್ದೇನೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿರುವ ಪಬ್ಲಿಕ್ ಟಿವಿಯ ಪ್ರತಿನಿಧಿಗಳು ಮುದ್ದೇನೂರು ಗ್ರಾಮದ ಸರ್ಕಾರಿ ಶಾಲೆಯ ಸಮಸ್ಯೆಗಳ ಸರಮಾಲೆಯನ್ನು ಸರ್ಕಾರಕ್ಕೆ ಎಚ್ಚರಿಸಿತ್ತು. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಮುದ್ದೇನೂರು ಗ್ರಾಮದ ಕನ್ನಡ ಶಾಲೆಯ ಏಂಟು ಕೊಠಡಿಗಳ ದುರಸ್ಥಿಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

    ಜೊತೆಗೆ ತಕ್ಷಣವೇ ನಿತೇಶ್ ಪಾಟೀಲ್ ಅವರು, ದುರಸ್ತಿ ಕಾರ್ಯವನ್ನು ಪ್ರಾರಂಭ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

  • ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

    ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

    ಚಿತ್ರದುರ್ಗ: ಗ್ರಾಮೀಣ ಭಾಗದ ರಸ್ತೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

    ಚಿತ್ರದುರ್ಗ ತಾಲೂಕಿನ ಪ್ರಧಾನ ಮಂತ್ರಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ತೋಪುರಮಾಳಿಗೆಯಿಂದ ಎಣ್ಣೆಗೆರೆ ಮುಖ್ಯರಸ್ತೆಯ ಕಾಮಗಾರಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಅವರು, ತೋಪರಮಾಳಿಗೆಯಿಂದ ಎಣ್ಣೆಗೆರೆವರೆಗೆ 35 ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಗುಣಮಟ್ಟದಿಂದ ಮಾಡಲು ಸೂಚಿಸಿದ್ದೇನೆ. ಈ ಭಾಗದಲ್ಲಿ 4 ಕೋಟಿ ವೆಚ್ಚದಲ್ಲಿ 4 ಬೃಹತ್ ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    ನಮ್ಮ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಶಾಲೆಗಳು, ಅಂತರ್ಜಲ ಹೆಚ್ಚಿಸುವ ಕಡೆಗೆ ಹೆಚ್ಚಿನ ಗಮನ ನೀಡಿದ್ದೇನೆ. 75 ಭಾಗ ಹಳ್ಳಿಯಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಅಲ್ಪ ಸ್ವಲ್ಪ ಹಳ್ಳಿಯಲ್ಲಿ ಮಾತ್ರ ರಸ್ತೆ ಮಾಡಬೇಕಿದೆ. ಜನರಿಗೆ ಅಂತರ್ಜಲ ವೃದ್ಧಿಯಾದರೆ ಬೊರವೆಲ್ ನಲ್ಲಿ ನೀರಿನ ಮಟ್ಟ ಹೆಚ್ಚಿ ಉತ್ತಮ ಮಳೆ ಬೆಳೆಯಾಗಬಹುದು. ಚೆಕ್ ಡ್ಯಾಂಗಳು ಎಲ್ಲ ಕಡೆಗಳಲ್ಲಿ ತುಂಬಿದ್ದು, ಸಂತಸ ಉಂಟು ಮಾಡಿದೆ.

    ಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿಗೂ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಖಾಸಗಿ ಶಾಲೆಗಳಿಗಿಂತ ಅಚ್ಚುಕಟ್ಟಾಗಿ ಕಟ್ಟಡ ನಿರ್ಮಿಸುವ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಹಣ ಕಟ್ಟಿ ಖಾಸಗಿ ಶಾಲೆಗೆ ಕಳಿಸುವ ಬದಲು ಉತ್ತಮವಾದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಬೇಕು ಎಂಬ ಭಾವನೆಯಲ್ಲಿ ಪೋಷಕರು ಇದ್ದಾರೆ ಎಂದು ತಿಳಿಸಿದರು.

    ಕೋವಿಡ್ ಮತ್ತು ಓಮಿಕ್ರಾನ್ ಬಗ್ಗೆ ಎಚ್ಚರ ಇರಲಿ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈಗ ನಮ್ಮ ಪ್ರಾಣ ತಮ್ಮ ಕೈಯಲ್ಲಿದೆ. ಎಲ್ಲರೂ ಸಹ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ಎಂದು ಸಂದೇಶ ಕೊಟ್ಟರು. ಎಲ್ಲಾರಿಗೂ ಸಹ ತನ್ನದೇ ಆದ ಕುಟುಂಬಗಳಿವೆ. ನಮಗಾಗಿ ನಮ್ಮವರಿಗಾಗಿ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ಈ ಸಂದರ್ಭದಲ್ಲಿ ಎಂಜಿನಿಯರ್ ನಾಗರಾಜು, ಗುತ್ತಿಗೆದಾರ ಎಟಿಎಸ್ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಬೋಸಣ್ಣ, ಸದಸ್ಯರಾದ ಓಬಳೇಶ್, ವೆಂಕಟೇಶ್, ಮುಖಂಡರಾದ ನಾಗೇಂದ್ರ ರೆಡ್ಡಿ, ಸುರೇಶ್ ರೆಡ್ಡಿ, ಶಶಿಧರ್, ಸುರೇಶ್, ರಾಜೇಶ್, ಮಾರುತಿ ಗ್ರಾಮಸ್ಥರು ಇದ್ದರು.

  • ʼಹೊರ ಜಿಲ್ಲೆಯಿಂದ ಬಂದ್ರೆ ಶಾಲೆಯಲ್ಲಿ ಇರಬೇಕುʼ – ಡಂಗುರ ಸಾರಿದ ಗ್ರಾಮಸ್ಥರು

    ʼಹೊರ ಜಿಲ್ಲೆಯಿಂದ ಬಂದ್ರೆ ಶಾಲೆಯಲ್ಲಿ ಇರಬೇಕುʼ – ಡಂಗುರ ಸಾರಿದ ಗ್ರಾಮಸ್ಥರು

    – ಕೊರೊನಾ ಟೆಸ್ಟ್ ಮಾಡಿಸಿದ್ರೆ ಮಾತ್ರ ಶಾಲೆ ಕಟ್ಟಡಕ್ಕೆ ಎಂಟ್ರಿ
    – ನೇರವಾಗಿ ಮನೆಗೆ ಬಂದ್ರೆ ಮಾಲೀಕರಿಗೆ ದಂಡ

    ಚಿಕ್ಕಮಗಳೂರು: ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಏಳು ದಿನಗಳ ಕಾಲ ಶಾಲಾ ಕಟ್ಟಡದಲ್ಲಿ ಇದ್ದು ಕ್ವಾರಂಟೈನ್‌ ಬಳಿಕ ಮನೆಗೆ ಬರಬೇಕೆಂದು ಕಡೂರು ತಾಲೂಕಿನ ಗ್ರಾಮದಲ್ಲಿ ಡಂಗುರ ಸಾರಿಸಿ ಎಚ್ಚರಿಕೆ ನೀಡಲಾಗಿದೆ.

    ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಿಸಿ ಸ್ಥಳೀಯರಿಗೆ ಎಚ್ಚರಿಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಬರುವವರನ್ನು ಯಾರೂ ಮನೆಗೆ ಸೇರಿಸಬಾರದು ಎಂದು ಗ್ರಾಮಸ್ಥರಿಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸಿಕೊಂಡರೆ ಮಾಲೀಕರಿಗೆ ಯಾವುದೇ ಮುಲಾಜಿಲ್ಲದೆ ದಂಡ ಹಾಕುವುದಾಗಿ ತಿಳಿಸಿದ್ದಾರೆ.

    ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ. ಬಂದವರು ಕಡ್ಡಾಯವಾಗಿ ಏಳು ದಿನಗಳ ಕಾಲ ಶಾಲೆಯಲ್ಲಿ ಕ್ವಾರಂಟೈನ್‍ ಆಗಿ ಬಳಿಕ ಮನೆಗೆ ಬರಬೇಕೆಂದು ಡಂಗುರ ಸಾರಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 155 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 97 ಜನ ಬಿಡುಗಡೆಯಾಗಿದ್ದರೆ. ಸದ್ಯ 54 ಸಕ್ರಿಯ ಪ್ರಕರಣಗಳಿವೆ. ಇತ್ತೀಚಿನ ಪ್ರಕರಣಗಳಲ್ಲಿ ಬೆಂಗಳೂರಿಗೆ ಹೋಗಿ ಬಂದ ಬಹುತೇಕರಲ್ಲಿ ಕೊರೊನಾ ಪತ್ತೆಯಾಗಿರುವ ಕಾರಣ ಹಳ್ಳಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ.

    ಕೊರೊನಾ ಆರಂಭದ ದಿನಗಳಲ್ಲಿ ಹೊರ ಜಿಲ್ಲೆಗಳಿಂದ ಬಂದರೆ ಅಂಥವರನ್ನು ಗ್ರಾಮದ ಹೆಬ್ಬಾಗಿಲಿನಿಂದ ವಾಪಸ್ ಕಳುಹಿಸಲಾಗಿತ್ತು. ಗ್ರಾಮದ ಮುಂಭಾಗ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದವರು ಯಾರೂ ಗ್ರಾಮದೊಳಕ್ಕೆ ಕಾಲಿಡದಂತೆ ಹಳ್ಳಿಗರು ಕಾದುಕುಳಿತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ರಾಜ್ಯವಾಪಿ ಹರಡಿರುವುದರಿಂದ ಹಳ್ಳಿಗರು ಲಾಕ್‍ಡೌನ್ ನಂತಹ ನಿರ್ಧಾರಗಳನ್ನು ಕೈಬಿಟ್ಟು, ಈ ರೀತಿಯ ಕಾನೂನುಗಳನ್ನು ಸ್ವಯಂಪ್ರೇರಿತವಾಗಿ ಜಾರಿಗೆ ತಂದುಕೊಂಡಿದ್ದಾರೆ.

  • ನನ್ನ ಮೈಮುಟ್ಟಿ ಹಲ್ಲೆ ಮಾಡಿದ್ರು- ತೇಜಸ್ವಿನಿ ರಮೇಶ್ ಆರೋಪ

    ನನ್ನ ಮೈಮುಟ್ಟಿ ಹಲ್ಲೆ ಮಾಡಿದ್ರು- ತೇಜಸ್ವಿನಿ ರಮೇಶ್ ಆರೋಪ

    – ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ

    ಚಿಕ್ಕಬಳ್ಳಾಪುರ: ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಬದಲಾಗಿ ನನ್ನ ಹಾಗೂ ನಮ್ಮ ಹಿರಿಯರ ಮೇಲೆ ಕುಡಿದು ಹಲ್ಲೆ ಮಾಡಲು ಅವರೇ ಬಂದಿದ್ರು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್, ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರನ್ನೂ ಹೊಡೆದಿಲ್ಲ. ಅವರೇ ಕುಡಿದು ಬಂದು ನನ್ನ ಹೊಡೆಯೋಕೆ ಬಂದರು. ಆಗ ನಾನು ತಡೆದೆ ಅಷ್ಟೇ. ಮೇಳೆಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾನೆ. ಈಗ ಊರಲ್ಲಿ ಸರ್ಕಾರಿ ಶಾಲೆ ಕಟ್ಟೋಕೆ ಹೋದರೆ ಅಡ್ಡಿಪಡಿಸುತ್ತಿದ್ದಾನೆ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂಬಂಧ ಮೇಳೆಕೋಟೆ ಗ್ರಾಮ ಪಂಚಾಯತಿ ಪಿಡಿಓ ರಮಿತಾ ಅವರನ್ನು ಕೇಳಿದರೆ, ಸರ್ಕಾರಿ ಶಾಲೆ ಕಟ್ಟಡ ಕಟ್ಟೋಕೆ 178-88 ಅಳತೆಯ ನಿವೇಶನವನ್ನ ಮಂಜೂರು ಮಾಡಿದ್ದೇವೆ. ಆದರೆ ಅದನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ ಅಧ್ಯಕ್ಷರ ಮನೆಗೆ ಹೊಂದಿಕೊಂಡಂತೆ ಅಲ್ಲಿ ಅಂದಾಜು ಇನ್ನೂ 20 ಅಡಿ ಜಾಗ ಉಳಿದಿತ್ತು. ಈಗ ಎಲ್ಲಾ ಜಾಗವನ್ನ ಸೇರಿಸಿ ಶಾಲಾ ಕಟ್ಟಡ ಕಟ್ಟಲಾಗುತ್ತಿದೆ. ಈ ಬಗ್ಗೆ ನಾವು ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ?:
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ಸರ್ಕಾರಿ ನೂತನ ಶಾಲಾ ಕಟ್ಟಡ ಕಟ್ಟುವುದಕ್ಕೆ ತೇಜಸ್ವಿನಿ ರಮೇಶ್ ಮುಂದಾಗಿದ್ದಾರೆ. ಶಾಲಾ ಕಟ್ಟಡಕ್ಕೆ ಗ್ರಾಮದಲ್ಲಿನ ಸರ್ಕಾರಿ ಕರಾಬು ಜಾಗ 178-88 ಅಡಿ ಅಳತೆಯ ನಿವೇಶನವನ್ನ ಗ್ರಾಮಪಂಚಾಯತಿ ವತಿಯಿಂದ ಮಂಜೂರು ಮಾಡಿಸಿಕೊಂಡಿದ್ದಾರೆ. ಶಾಲಾ ಕಟ್ಟಡ ಕಟ್ಟುವುದಕ್ಕೆ ಬಂದಿದ್ದ ಒಂದು ಕೋಟಿ ರೂ. ಅನುದಾನ ಸಹ ವಾಪಸ್ ಆಗಿದೆಯಂತೆ. ಆದರೆ ಹೇಗೋ ಕಾಮಗಾರಿ ಆರಂಭ ಮಾಡಿಸಿರುವ ತೇಜಸ್ವಿನಿ ರಮೇಶ್ ಜಾಗದಲ್ಲಿ ಶಾಲಾ ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ.

    ಶಾಲಾ ಕಟ್ಟಡ ಕಟ್ಟುವುದಕ್ಕೆ ನೀಡಿದ್ದ 178-88 ಅಡಿ ಜಾಗದ ಜೊತೆಗೆ ಹೆಚ್ಚುವರಿ ಜಾಗವನ್ನ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಎಂಬವರ ಮನೆಗೆ ಹೋಗಿ ಬರುವುದಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ ಶಾಲಾ ಕಟ್ಟಡ ಕಾಮಗಾರಿಯನ್ನ ಸ್ಥಗಿತ ಮಾಡುವಂತೆ ಗ್ರಾಮ ಪಂಚಾಯತಿ ಆಧ್ಯಕ್ಷರೇ ಸ್ವತಃ ಪಿಡಿಓಗೆ ದೂರು ನೀಡಿದ್ದಾರೆ.

    ಈ ಮಧ್ಯ ಶಾಲಾ ಕಟ್ಟಡ ವಿವಾದ ತಾರಕಕ್ಕೇರಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಅವರ ಕಡೆಯವರು ಮತ್ತು ತೇಜಸ್ವನಿ ರಮೇಶ್ ಅವರ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ತೇಜಸ್ವಿನಿ ರಮೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಸದ್ಯ ಗ್ರಾಮದಲ್ಲಿ ಶಾಲಾ ಕಟ್ಟಡ ಕಟ್ಟುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಗ್ರಾಮಪಂಚಾಯತಿ ಆಧ್ಯಕ್ಷ ಹಾಗೂ ತೇಜಸ್ವಿನಿ ರಮೇಶ್ ನಡುವೆ ಜಟಾಪಟಿ ಮುಂದುವರಿದಿದೆ. ಹೀಗಾಗಿ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸಹ ಮೊಕ್ಕಾಂ ಹೂಡಿದ್ದಾರೆ.

  • ಶಿಥಿಲಾವಸ್ಥೆಗೆ ತಲುಪಿದ ಸ್ವತಂತ್ರ ಪೂರ್ವದ ಸರ್ಕಾರಿ ಶಾಲೆ – ಜೀವಭಯದಲ್ಲಿ ವಿದ್ಯಾರ್ಥಿಗಳು

    ಶಿಥಿಲಾವಸ್ಥೆಗೆ ತಲುಪಿದ ಸ್ವತಂತ್ರ ಪೂರ್ವದ ಸರ್ಕಾರಿ ಶಾಲೆ – ಜೀವಭಯದಲ್ಲಿ ವಿದ್ಯಾರ್ಥಿಗಳು

    ಚಿತ್ರದುರ್ಗ: ಭಾರತ ಹಳ್ಳಿಗಳ ದೇಶ ಹೀಗಾಗಿ ಹಳ್ಳಿಗಳ ಅಭಿವೃದ್ಧಿಯಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯವೆಂದು ಮನಗೊಂಡ ಸರ್ಕಾರಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಸೌಲಭ್ಯಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸುತ್ತಿವೆ. ಶಾಲಾ ಅಭಿವೃದ್ಧಿಯ ಚರ್ಚೆಗಳಿಗಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗ್ತಿದೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಕಂದವಾಡಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ದುಸ್ಥಿತಿ ನೋಡಿದರೆ ಸರ್ಕಾರದ ಹಣ ಎಲ್ಲಿ ಖರ್ಚಾಗ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

    ಈ ಶಾಲೆಯು 1947ರಲ್ಲಿ ಭಾರತಕ್ಕೆ ಸ್ವತಂತ್ರ ಬರುವ ಮುನ್ನ ನಿರ್ಮಾಣವಾದ ಶಾಲೆಯಾಗಿದೆ. ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಹೀಗಾಗಿ ಈ ಶಾಲೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿ ಬಿರುಕುಬಿಟ್ಟಿವೆ. ಹೀಗಾಗಿ ಒಮ್ಮೆ ಜೋರಾಗಿ ಮಳೆ ಬಂದರೆ ಸಾಕು ಆಗಲೋ ಈಗಲೋ ಬೀಳುವ ಸ್ಥಿತಿಗೆ ತಲುಪಿದೆ.

    ಹಳೆಯ ಶಾಲಾ ಕೊಠಡಿಗಳಲ್ಲಿಯೇ ಇಂದಿಗೂ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಆದ್ದರಿಂದ ಮಳೆಗಾಲದಲ್ಲಂತೂ ಶಾಲೆಯ ಗೋಡೆಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕದಿಂದ ಮಕ್ಕಳು ಅವರ ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವ ಸ್ಥಿತಿಯಿದೆ. ಅಲ್ಲದೆ ಬೇಸಿಗೆಯಲ್ಲಿ ಕಾದ ಕಬ್ಬಿಣದಂತಾದ ಕೆಂಪು ಹೆಂಚಿನ ಮೇಲ್ಛಾವಣಿಯಿಂದ ತೂರಿ ಬರೋ ಬಿಸಿಲ ಜಳ ಮಕ್ಕಳ ಮೈ ಸುಡುತ್ತಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಹಿಡಿಶಾಪ ಹಾಕುತಿದ್ದಾರೆ.

    ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಗೆ ಉತ್ತಮ ವ್ಯವಸ್ಥೆ ಮಾತ್ರ ಈವರೆಗೆ ಕಲ್ಪಿಸಲಾಗಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರನ್ನು ಕೇಳಿದರೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ಈ ಸಮಾಜಕ್ಕೆ ನೀಡಿದ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಜೀವಭಯದಿಂದ ಪಾಠ ಕೇಳುವಂತಾಗಿದೆ.

  • ಬಯಲಿನಲ್ಲೇ ಮಕ್ಕಳಿಗೆ ಪಾಠ- ಸಚಿವರ ಕ್ಷೇತ್ರದ ಶಾಲೆಯ ಕಥೆ

    ಬಯಲಿನಲ್ಲೇ ಮಕ್ಕಳಿಗೆ ಪಾಠ- ಸಚಿವರ ಕ್ಷೇತ್ರದ ಶಾಲೆಯ ಕಥೆ

    -ಸುಡುವ ಬಿಸಿಲಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು

    ಚಿತ್ರದುರ್ಗ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳ ದಿನದಿಂದ ದಿನಕ್ಕೆ ತೆರೆಯ ಹಿಂದೆ ಸರಿಯುತ್ತಿವೆ. ಕಟ್ಟಡವಿದ್ದರೆ ಮಕ್ಕಳಿಲ್ಲ, ಮಕ್ಕಳಿದ್ದರೆ ಕಟ್ಟಡವಿಲ್ಲ ಎಂಬಂತಾಗಿದೆ ಸರ್ಕಾರಿ ಶಾಲೆಗಳ ಸ್ಥಿತಿ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಸಚಿವರ ಕ್ಷೇತ್ರದಲ್ಲಿಯ ಸರ್ಕಾರಿ ಶಾಲೆಯ ಮಕ್ಕಳು ಬಿಸಿಲಿನಲ್ಲಿಯೇ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ. ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳುವ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಜ್ಯದ ಗಡಿಭಾಗದಲ್ಲಿರುವ ಈ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ ಹಲವು ವರ್ಷಗಳೇ ಕಳೆದಿವೆ. ಮೇಲ್ಛಾವಣೆಯ ಸಿಮೆಂಟ್ ತುಂಡುಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಗಾಯಗೊಳಿಸುತ್ತಿವೆ. ಅಲ್ಲದೇ ಶಾಲೆಯ ಕೊಠಡಿಗಳ ಬಾಗಿಲು ಕಿಟಕಿಗಳು ಸಹ ಸಂಪೂರ್ಣ ಹಾಳಾಗಿದ್ದೂ, ಪಾಳುಬಿದ್ದ ಮನೆಯಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಠ ಕೇಳಲು ಹಿಂದೇಟು ಹಾಕುತ್ತಿದ್ದು, ಪ್ರಾಣಭಯದಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸುತ್ತಿಲ್ಲ. ಇದನ್ನರಿತ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಯಲು ರಂಗಮಂದಿರದ ಆಶ್ರಯ ಪಡೆದಿದ್ದಾರೆ.

    ನಾನು ಈ ಜಿಲ್ಲೆಗೆ ಬಂದು ಕೇವಲ ಎರಡು ತಿಂಗಳಾಗಿದೆ. ಕೋನಾಪುರ ಶಾಲೆ ಸ್ಥಿತಿ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಸಂಸದರ ನಿಧಿಯಿಂದ ತ್ವರಿತವಾಗಿ ಶಾಲಾ ಕಟ್ಟಡ ರಿಪೇರಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಹೇಳುತ್ತಾರೆ.

    ಶಿಥಿಲಾವಸ್ಥೆಯಲ್ಲಿರುವ ಕೋನಾಪುರ ಶಾಲೆಯ ವಿದ್ಯಾರ್ಥಿಗಳಿಗೆ ಬಯಲು ರಂಗಮಂದಿರವೇ ಆಸರೆಯಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಪೋಷಕರು ಹಾಗು ವಿದ್ಯಾರ್ಥಿಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಬಯಲು ಪಾಠವೇ ವಿದ್ಯಾರ್ಥಿಗಳಿಗೆ ನಿರಂತರವಾಗಿದೆ. ಸುಡು ಬಿಸಿಲಲ್ಲಿ ಕುಳಿತು ಪಾಠ ಕೇಳುವ ಮಕ್ಕಳ ಸ್ಥಿತಿ ಕಂಡು ಪೋಷಕರ ಮನ ಕಲುಕುತ್ತಿದೆ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದೂ, ತುರ್ತಾಗಿ ಶಾಲಾ ಕೊಠಡಿ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

  • ಶಿಥಿಲಗೊಂಡ ಕಟ್ಟಡ- 10 ವರ್ಷವಾದ್ರೂ ರೇವಣ್ಣ ಕ್ಷೇತ್ರದ ಶಾಲೆಗಿಲ್ಲ ಕಟ್ಟಡ

    ಶಿಥಿಲಗೊಂಡ ಕಟ್ಟಡ- 10 ವರ್ಷವಾದ್ರೂ ರೇವಣ್ಣ ಕ್ಷೇತ್ರದ ಶಾಲೆಗಿಲ್ಲ ಕಟ್ಟಡ

    -ಶಾಲೆಯ ಮುಂಭಾಗವೇ ಮಕ್ಕಳಿಗೆ ಪಾಠ

    ಹಾಸನ: ಮಾಜಿ ಸಚಿವ, ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಬಿಂಬಿತರಾಗಿದ್ದ ಹೆಚ್.ಡಿ.ರೇವಣ್ಣ ಅವರ ಹೊಳೆನರಸೀಪುರ ಕ್ಷೇತ್ರದ ಉಣ್ಣೆನಹಳ್ಳಿಯ ಗ್ರಾಮದ ಮಕ್ಕಳಿಗೆ ಶಾಲಾ ಕಟ್ಟಡವೇ ಇಲ್ಲ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮುಂಭಾಗದಲ್ಲಿಯೇ ಮಕ್ಕಳು ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದಿದೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಇದೀಗ ಪುತ್ರ ರೇವಣ್ಣ ಪ್ರತಿನಿಧಿಸುತ್ತಿದ್ದಾರೆ. ಆದ್ರೂ ಉಣ್ಣೆನಹಳ್ಳಿಯ ಗ್ರಾಮಕ್ಕೆ ಶಾಲಾ ಕಟ್ಟಡ ಮಾತ್ರ ಅಭಿವೃದ್ಧಿಗೊಂಡಿಲ್ಲ. ಶಾಲಾ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಸಂಘದ ಕಚೇರಿಯನ್ನು ಮಕ್ಕಳಿಗೆ ನೀಡಿದ್ದರು. ಈಗ ಸಂಘದ ಸದಸ್ಯರು ಕಚೇರಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಇತ್ತ ಗ್ರಾಮಸ್ಥರು ಸಹ ಕಟ್ಟಡ ಬೀಳುವ ಹಂತದಲ್ಲಿ ಇರೋದರಿಂದ ಮುಂಜಾಗ್ರತ ಕ್ರಮವಾಗಿ ಶಾಲೆಗೆ ಬೀಗ ಹಾಕಿದ್ದಾರೆ. ಹೀಗಾಗಿ ಶಾಲೆಯ ಮುಂಭಾಗವೇ ಮಕ್ಕಳು ಪಾಠ ಕೇಳುವಂತಾಗಿದೆ.

    ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಒಟ್ಟು 20 ಮಕ್ಕಳಿದ್ದಾರೆ. ಕೊಠಡಿ ಇಲ್ಲದೇ ಬಯಲಿನಲ್ಲಿಯೇ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದಲೂ ಮಕ್ಕಳು ಬಯಲಿನಲ್ಲಿ ಶಾಲೆಯ ಕಟ್ಟಡದ ಮುಂಭಾಗದಲ್ಲಿ ಪಾಠ ಕೇಳುವಂತಾಗಿದೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

    ದೇವೇಗೌಡರು, ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಎಲ್ಲರೂ ಅಧಿಕಾರದಲ್ಲಿದ್ದರೂ ನಮ್ಮ ಶಾಲೆಗೆ ಕಟ್ಟಡವಿಲ್ಲ ಎಂಬುವುದು ದುರಂತ. ನಮ್ಮ ಗ್ರಾಮಕ್ಕೆ ಕಳೆದ 10 ವರ್ಷಗಳಿಂದಲೂ ಶಾಲೆಗೆ ಕಟ್ಟಡವಿಲ್ಲ. ಮಕ್ಕಳಿಗೆ ಆಡಲು ಸೂಕ್ತ ಮೈದಾನ ಇಲ್ಲದಂತಾಗಿದೆ. ಒಂದು ವೇಳೆ ಮಳೆ ಬಂದರು ಕಟ್ಟಡ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಶಾಲಾ ಕಟ್ಟಡ ದುರಸ್ತಿ ವೇಳೆ ಗೋಡೆ ಕುಸಿತ – ಕಾರ್ಮಿಕ ಸಾವು

    ಶಾಲಾ ಕಟ್ಟಡ ದುರಸ್ತಿ ವೇಳೆ ಗೋಡೆ ಕುಸಿತ – ಕಾರ್ಮಿಕ ಸಾವು

    ಮಡಿಕೇರಿ: ಶಾಲಾ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದುಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಹುಣಸೂರು ತಾಲೂಕಿನ ರತ್ನಪುರಿ ದರ್ಗದ ನಿವಾಸಿ ಮಹಮ್ಮದ್ ಜಾಫರ್ ಅಲಿಯಾಸ್ ಬಾಬು(34) ಮೃತಪಟ್ಟ ಕಾರ್ಮಿಕ. ಬಾಬು ಸೇರಿದಂತೆ ಕೆಲ ಕಾರ್ಮಿಕರು ಇಂದು ಮುಳ್ಳುಸೋಗೆಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಕೆಡವುತ್ತಿದ್ದರು. ಈ ವೇಳೆ ಗೋಡೆ ಕುಸಿದು ಬಾಬು ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಾಬು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಗೊತ್ತಿದ್ದರೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯಶಿಕ್ಷಕರು ಆಸ್ಪತ್ರೆಗೆ ಆಗಮಿಸಿರಲಿಲ್ಲ ಕಾರ್ಮಿಕನ ಸಾವಿಗೆ ಅವರು ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ ಎಂದು ಕುಶಾಲನಗರದ ಮುಸ್ಲಿಂ ಸಮುದಾಯದ ಮುಖಂಡರು, ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಗರ ಘಟಕದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 60 ವರ್ಷ ಹಳೇ ಶಾಲಾ ಕಟ್ಟಡ ತೆರವುಗೊಳಿಸುವಾಗ ಧರೆಗುರುಳಿದ ವಿದ್ಯುತ್ ಕಂಬಗಳು- ತಪ್ಪಿತು ಭಾರೀ ಅನಾಹುತ

    60 ವರ್ಷ ಹಳೇ ಶಾಲಾ ಕಟ್ಟಡ ತೆರವುಗೊಳಿಸುವಾಗ ಧರೆಗುರುಳಿದ ವಿದ್ಯುತ್ ಕಂಬಗಳು- ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ಸುಮಾರು 60 ವರ್ಷದ ಹಳೇ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಗೋಡೆ ಕುಸಿದ ಪರಿಣಾಮ ವ್ಯಾಪಾರ ನಡೆಯುವ ಸಂದರ್ಭದಲ್ಲೇ ಸಾಲು ಸಾಲು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರಂ ಧರೆಗುಳಿದ ಘಟನೆ ನಗರದ ಯಶವಂತಪುರ ಮಾರ್ಕೆಟ್ ಬಳಿ ನಡೆದಿದೆ.

    ಯಶವಂತಪುರದ ತರಕಾರಿ ಮಾರ್ಕೆಟ್ ಬಳಿ ಇರುವ ಸುಮಾರು 60 ವರ್ಷ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಈ ವೇಳೆ ಏಕಾಏಕಿ ಗೋಡೆ ಕುಸಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದೆ. ಪರಿಣಾಮ 2 ವಿದ್ಯುತ್ ಟ್ರಾನ್ಸ್ ಫಾರಂ ಮತ್ತು 6 ವಿದ್ಯುತ್ ಕಂಬಗಳು ನೆಲಕ್ಕುರುಳಿ ಎರಡು ಬೈಕ್ ಮತ್ತು ನಾಲ್ಕು ತರಕಾರಿ ಗಾಡಿಗಳು ಜಖಂಗೊಂಡಿದೆ. ಘಟನೆಯಲ್ಲಿ ಸ್ಥಳದಲ್ಲಿದ್ದ ವ್ಯಾಪಾರಿಗಳು ಅನಾಹುತದಿಂದ ಪಾರಾಗಿದ್ದಾರೆ.

    ಕಟ್ಟಡ ತೆರವು ಕಾರ್ಯಾಚರಣೆ ಕುರಿತು ಸ್ಥಳೀಯ ವ್ಯಾಪಾರಿಗಳಿಗೆ ಮಾಹಿತಿ ನೀಡಿ ಈ ಸ್ಥಳದಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡವನ್ನು ಕರೆಸಲಾಗಿದೆ. ತ್ವರಿತವಾಗಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗುವುದು ಎಂದು ಯಶವಂತಪುರ ವಾರ್ಡ್ ಕಾರ್ಪೊರೇಟರ್ ವೆಂಕಟೇಶ್ ತಿಳಿಸಿದರು.

    ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಬೇರೆ ಕಂಬಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.

     

  • ಕುಸಿಯುತ್ತಿರುವ ಕಟ್ಟಡದ ಮೇಲ್ಛಾವಣಿ – ಆತಂಕದಲ್ಲಿ ಪಾಠ ಕೇಳ್ತಿದ್ದಾರೆ ಶಾಲಾ ಮಕ್ಕಳು

    ಕುಸಿಯುತ್ತಿರುವ ಕಟ್ಟಡದ ಮೇಲ್ಛಾವಣಿ – ಆತಂಕದಲ್ಲಿ ಪಾಠ ಕೇಳ್ತಿದ್ದಾರೆ ಶಾಲಾ ಮಕ್ಕಳು

    ಮೈಸೂರು: ಹೇಳಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್‍ನ ಪವರ್ ಫುಲ್ ಮಿನಿಸ್ಟರ್ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರೂ ಮೈಸೂರಿನವರು. ಆದರೆ ನಗರದ ನಂಜನಗೂಡು ಪಟ್ಟಣದಲ್ಲಿ ಸರ್ಕಾರಿ ಶಾಲೆಯೊಂದರ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

    ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಶತಮಾನದ ಕಟ್ಟಡ ಈಗ ದುಃಸ್ಥಿತಿ ತಲುಪಿದೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಹಂತದಲ್ಲಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ನಂಜನಗೂಡಿನ ಬಿಇಓ ಕಚೇರಿಗೆ ಕೂಗಳತೆ ದೂರದಲ್ಲಿರುವ ಈ ಸರ್ಕಾರಿ ಶಾಲೆಯ ಸ್ಥಿತಿ ದುಸ್ತರವಾಗಿದೆ.

    1946 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಾತ್ಮಗಾಂಧಿ ಭೇಟಿ ನೀಡಿದ ಹಿನ್ನೆಲೆಯನ್ನು ಹೊಂದಿರುವ ಈ ಶಾಲೆಗೆ ಕಾಯಕಲ್ಪ ನೀಡುವುದಕ್ಕೆ ಯಾರೂ ಕೂಡ ಮನಸ್ಸು ಮಾಡುತ್ತಿಲ್ಲ. ಶಾಲೆಯ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಶಾಲೆಯ ಕಾಂಪೌಂಡ್ ಗೋಡೆ ಯಾವ ಕ್ಷಣದಲ್ಲಾದರೂ ಕುಸಿಯಬಹುದು. ಸುಣ್ಣ ಮಿಶ್ರಿತ ಮಣ್ಣಿನಿಂದ ನಿರ್ಮಿಸಿದ ಶತಮಾನದ ಶಾಲೆಗೆ ಕಾಯಕಲ್ಪ ನೀಡದೆ ಇದ್ದರೆ ನಿಜಕ್ಕೂ ದೊಡ್ಡ ಅನಾಹುತವಾಗಿ ಮಕ್ಕಳ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇದೆ.

    ಮಕ್ಕಳ ಪ್ರಾಣದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡದೆ ಶಾಲೆಯ ಕಟ್ಟಡವನ್ನು ಶೀಘ್ರವಾಗಿ ವ್ಯವಸ್ಥಿತವಾಗಿ ದುರಸ್ತಿ ಮಾಡಬೇಕಿದೆ.