Tag: School Bag

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

    – ಮಕ್ಕಳೇ.. ನಿಮ್ಮ ತರಗತಿಗೆ ಬ್ಯಾಗ್ ತೂಕ ಎಷ್ಟಿರಬೇಕು?

    ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ (School Bag Weight) ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ (Education Department) ಮಹತ್ವದ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

    ತರಗತಿ ಮತ್ತು ತೂಕದ ವಿವರ:
    1-2ನೇ ತರಗತಿ – 1.5 ರಿಂದ 2 ಕೆಜಿ
    3-5ನೇ ತರಗತಿ – 2-3 ಕೆಜಿ
    6-8ನೇ ತರಗತಿ – 3-4 ಕೆಜಿ
    9-10ನೇ ತರಗತಿ – 4-5 ಕೆಜಿ

    ಹೊರೆ ಇಳಿಸಲು ಅಧ್ಯಯನ ನಡೆಸಿದ ಡಿಎಸ್‌ಇಆರ್‌ಟಿ:
    ಎನ್‌ಎಲ್‌ಎಸ್‌ಯುಐ, ಸೆಂಟರ್ ಫಾರ್ ಚೈಲ್ಡ್ ಲಾ ಇವರ ಸಹಯೋಗದೊಂದಿಗೆ ಅಧ್ಯಯನ ಮಾಡಿದ ಡಿಎಸ್‌ಇಆರ್‌ಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ವಿದ್ಯಾರ್ಥಿಗಳ ದೇಹದ ತೂಕದ 10-15% ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಲು ಶಿಫಾರಸ್ಸು ಮಾಡಿದೆ. ಮೂಳೆ ತಜ್ಞರ ಶಿಫಾರಸ್ಸಿನ ಮೇರೆಗೆ ಡಿಎಸ್‌ಇಆರ್‌ಟಿ ಬ್ಯಾಗ್ ತೂಕದ ವರದಿ ನೀಡಿದ್ದು, ಇದನ್ನು ಅನ್ವಯಿಸಿ ಶಿಕ್ಷಣ ಇಲಾಖೆ ಶಾಲಾ ಬ್ಯಾಗ್‌ನ ತೂಕವನ್ನು ಕಡಿಮೆ ಮಾಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ‘ಯೋಗ’ – ಗಿನ್ನಿಸ್‌ ದಾಖಲೆ ಬರೆದ ವಿಶ್ವಸಂಸ್ಥೆ ಕೇಂದ್ರ ಕಚೇರಿ

    ಕಡಿಮೆ ತೂಕದ ಬ್ಯಾಗ್ ನಿಯಮ ಜಾರಿ ಹೇಗೆ?
    * ಶಾಲಾ ಎಸ್‌ಎಂಸಿ, ಎಸ್‌ಡಿಎಂಸಿ ಹಾಗೂ ಶಾಲ ಮುಖ್ಯಸ್ಥರು ಇಲಾಖೆ ಆದೇಶ ಪಾಲನೆಗೆ ಕ್ರಮವಹಿಸಬೇಕು.
    * 1ರಿಂದ 5ನೇ ತರಗತಿಯವರೆಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರೋ ಪಠ್ಯಕ್ರಮವನ್ನು ಮಾತ್ರ ಶಾಲೆಗಳು ಬೋಧನೆ ಮಾಡಬೇಕು.
    * ಬೇರೆ ಯಾವುದೇ ಪಠ್ಯ ಕ್ರಮ ಬೋಧನೆ ಮಾಡುವಂತೆ ಇಲ್ಲ.
    * ಒಂದು ವೇಳೆ ನಿಯಮ ಮೀರಿ ಬೇರೆ ಪಠ್ಯ ಕ್ರಮ ಬೋಧನೆ ಮಾಡಿದರೆ ಶಾಲೆ ಮಾನ್ಯತೆ ರದ್ದು ಮಾಡಲಾಗುತ್ತದೆ.
    * ಶಿಕ್ಷಣ ಇಲಾಖೆ ನಿಯಮ ಪಾಲನೆ ಮಾನಿಟರ್ ಮಾಡಲು ವಿಶೇಷ ತಂಡ ರಚನೆ ಮಾಡಿ ತಪಾಸಣೆ ಮಾಡಿಸುವುದು.
    * ಕ್ಲಸ್ಟರ್ ಹಂತದಲ್ಲಿ ಸಿಆರ್‌ಪಿ ಮತ್ತು ಇಸಿಒಗಳು, ಬ್ಲಾಕ್ ಹಂತದಲ್ಲಿ ಬಿಆರ್‌ಸಿ ಮತ್ತು ಬಿಇಒಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.
    * ಜಿಲ್ಲಾ ಹಂತದಲ್ಲಿ ಡಿಡಿಪಿಐಗಳು, ಡಯಟ್ ಪ್ರಾಂಶುಪಾಲರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

  • ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ – ಸ್ಕೂಲ್ ಬಳಿ ಬ್ಯಾಗ್ ಬಿಟ್ಟು ಕಣ್ಮರೆ

    ಶಾಲೆಗೆ ಹೋಗಿದ್ದ 7ನೇ ಕ್ಲಾಸ್ ಬಾಲಕಿ ನಾಪತ್ತೆ – ಸ್ಕೂಲ್ ಬಳಿ ಬ್ಯಾಗ್ ಬಿಟ್ಟು ಕಣ್ಮರೆ

    ಹಾಸನ: ಶಾಲೆಗೆ ತೆರಳಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ನಡೆದಿದೆ.

    ದಾಸರಹಳ್ಳಿ ಗ್ರಾಮದ ಡಿ.ಬಿ.ಕುಮಾರ್ ಅವರ ಸಾಕು ಮಗಳು ನಂದಿತಾ (Nanditha) ಕಾಣೆಯಾದಾಕೆ. ಅಣತಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಂದಿತಾ, ಸರ್ಕಾರಿ ಹಾಸ್ಟೆಲ್‍ನಲ್ಲಿದ್ದಳು. ನವೆಂಬರ್ 7ರಂದು ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಹಾಸ್ಟೆಲ್‍ಗೆ ಹೋಗದೆ ನಾಪತ್ತೆಯಾಗಿದ್ದಾಳೆ.

    ಮೂಲತಃ ಕೆ.ಆರ್.ಪೇಟೆ, ತಾಲ್ಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ (Education) ಕೊಡಿಸುತ್ತಿದ್ದರು. ನವೆಂಬರ್ 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ (School) ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣಿಯಾಗಿದ್ದಾಳೆ. ಇದನ್ನೂ ಓದಿ: ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದ ಕಿರಾತಕ

    ಇತ್ತ ಸೋಮವಾರ ಸಂಜೆ ಹಾಸ್ಟೆಲ್‍ಗೆ ನಂದಿತಾ ಬಾರದಿದ್ದರಿಂದ ಹಾಸ್ಟೆಲ್ ವಾರ್ಡನ್ ನಂದಿತಾ ತಾತ ಕುಮಾರ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಶಾಲೆಯಲ್ಲಿ ವಿಚಾರಿಸಿದಾಗ ನಂದಿತಾ ನಾಪತ್ತೆ ಆಗಿರುವ ವಿಷಯ ಗೊತ್ತಾಗಿದೆ. ಕುಮಾರ್ ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ದಾಸರಹಳ್ಳಿ ಗ್ರಾಮದ ಗಿರೀಶ್, ನಂದಿತಾಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ಗಿರೀಶ್‍ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇತ್ತ ಗಿರೀಶ್ ಅನಾಥನಾಗಿದ್ದು, ವ್ಯಾನ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ. ನಂದಿತಾ ತನ್ನ ಪೋಷಕರಿಗೆ ಫೋನ್ ಮಾಡಿಕೊಡು ಎಂದಾಗ ಆತ ಫೋನ್ ಮಾಡಿ ಕೊಟ್ಟಿದ್ದಾನೆ. ಈ ಕಾರಣಕ್ಕೆ ಅವನ ಮೇಲೆ ಅನುಮಾನ ಪಡಲಾಗುತ್ತಿದೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.

    ಇದೀಗ ಸಾಕು ಮಗಳು ಹಾಗೂ ವಿದ್ಯಾರ್ಥಿನಿ ನಿಗೂಢ ನಾಪತ್ತೆಯಿಂದ ಪೋಷಕರು ಹಾಗೂ ಶಿಕ್ಷಕರು ಆತಂಕಗೊಂಡಿದ್ದಾರೆ. ಗಿರೀಶ್‍ನನ್ನು ವಶಕ್ಕೆ ಪಡೆದಿರುವ ನುಗ್ಗೇಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಂದಿತಾಳ ಸುಳಿವು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    – ಮುಂದಿನ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ

    ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಮಣೂರು ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಾತ್ರ ಸರಕಾರಿ ಶಾಲೆಯ ಮಕ್ಕಳು.

    ಸಚಿವರು ಸರಕಾರಿ ಶಾಲೆಯ ಮಕ್ಕಳ ಕೈಯಲ್ಲೇ ಪ್ರಮುಖ ಕಾರ್ಯಕ್ರಮ, ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು. ಮಕ್ಕಳಿಗಾಗಿರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಸಚಿವರ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ಮೂಲಕ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯ ತೆಗೆದುಕೊಂಡಿದ್ದೇವೆ. ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆಗಳು ಕಡ್ಡಾಯ ಮಾಡುತ್ತೇವೆ. ಪಠ್ಯಪುಸ್ತಕ ಬಿಟ್ಟು ಏನಾದರೂ ಮಾಹಿತಿ, ಚಟುವಟಿಕೆ ಮಕ್ಕಳಿಗೆ ಶಿಕ್ಷಕರು, ಶಿಕ್ಷಕೇತರರಿಂದ ಸಿಗುವಂತಾಗಲಿದೆ. ಇದಕ್ಕೆ ಈಗಾಗಲೇ ರೂಪುರೇಷೆ ನಿರ್ಮಾಣ ಮಾಡಿದ್ದೇವೆ ಎಂದರು.

    2020 ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಅವರ ಆರೋಗ್ಯವೂ ಮುಖ್ಯ. ಖಂಡಿತಾ ಮುಂದಿನ ವರ್ಷಕ್ಕೆ ಪುಸ್ತಕಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.

    ಶಿಕ್ಷಕರಲ್ಲದ ವಿಷಯ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ಆ್ಯಪ್ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. ರಜೆಯ ದಿನ ಹತ್ತಿರದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿ ಇಂಗ್ಲೀಷ್, ಹಿಂದಿ ಮತ್ತಿತರ ಯಾವುದಾದರೂ ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಾಠ ಮಾಡುವ ಅವಕಾಶ ಜನಸಾಮಾನ್ಯರಿಗೆ ಕಲ್ಪಿಸಲಾಗುವುದು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಮಾರ್ಚ್ ತಿಂಗಳಿನಲ್ಲಿ ಸಹಾಯವಾಣಿ ತೆರೆಯುತ್ತೇವೆ. ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ವಿಚಾರಣೆ ಮಾಡೋದು ನಮ್ಮ ಉದ್ದೇಶ ಎಂದರು.

  • ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಒಂದಾದ ಗೆಳೆಯರ ತಂಡವೊAದು ಸಮಾಜಕ್ಕೆ ಹೇಗೆ ಸ್ಪಂದಿಸಬಹುದು ಎಂದು ನಿರೂಪಿಸಿದೆ. ಹೊಳೆನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ.

    ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ.

    ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನ ಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಸೇರಿ ತಲಾ ಎಂಟುನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ.

    ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ ಬ್ರಿಗಾಂಝ, ಮೋಹನ್ ಮತ್ತು ಮಹಮದ್ ಶಫಿ ಸೇರಿದಂತೆ ಇತರರು ಹಾಜರಿದ್ದರು.

  • ಮಗನಿಗಾಗಿ ವಿಶೇಷ ಶಾಲಾ ಬ್ಯಾಗ್ ತಯಾರಿಸಿದ ಬಡ ರೈತ – ಫೋಟೋ ವೈರಲ್

    ಮಗನಿಗಾಗಿ ವಿಶೇಷ ಶಾಲಾ ಬ್ಯಾಗ್ ತಯಾರಿಸಿದ ಬಡ ರೈತ – ಫೋಟೋ ವೈರಲ್

    ನೋಮ್ ಪೆನ್: ಅದೆಷ್ಟೋ ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಡತನಕ್ಕೆ ತಮ್ಮ ನೂರಾರು ಕನಸುಗಳನ್ನು ಬಲಿಕೊಟ್ಟಿದ್ದಾರೆ. ಆದರೆ ಕಾಂಬೋಡಿಯಾದಲ್ಲಿ ರೈತರೊಬ್ಬರು ತಮ್ಮ ಮಗನ ಶಾಲಾ ಬ್ಯಾಗ್ ಖರೀದಿಸಲು ಹಣವಿಲ್ಲದೆ ತಾವೇ ಸ್ವತಃ ಒಂದು ಸುಂದರ ಬ್ಯಾಗ್ ತಯಾರಿಸಿ ಎಲ್ಲೆಡೆ ಸುದ್ದಿಯಾಗಿದ್ದಾರೆ.

    ಮಕ್ಕಳ ಉತ್ತಮ ಭವಿಷ್ಯಕ್ಕೆ ಅವರಿಗೆ ಶಿಕ್ಷಣ ಕೊಡಿಸುವ ಹೊಣೆ ಪೋಷಕರ ಮೇಲೆ ಇರುತ್ತದೆ. ಆದರೆ ಬಡತನ ಕೆಲವೊಮ್ಮೆ ಅದಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಹಲವು ಮಕ್ಕಳು ಬಡತನದಿಂದ ತಮ್ಮ ಕನಸನ್ನು ಬಲಿಕೊಡಬೇಕಾಗುತ್ತದೆ. ಆದರೆ ಕಾಂಬೋಡಿಯಾದ ರೈತರೊಬ್ಬರು ಬಡತನವಿದ್ದರೂ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೆ ಮಗನ ಓದಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಷ್ಟು ಹಣ ಅವರ ಬಳಿ ಇಲ್ಲ. ಆದರೆ ತಮ್ಮ ಮಗ ಶಿಕ್ಷಣ ಪಡೆಯುವುದು ಮುಖ್ಯವೆಂದು ಸ್ವತಃ ತಾವೇ ವಿಶೇಷವಾಗಿ ಬ್ಯಾಗ್ ತಯಾರಿಸಿ ಮಗನಿಗೆ ನೀಡಿದ್ದಾರೆ.

    ಈ ಬ್ಯಾಗ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು. ಅಂತ ವಿಶೇಷತೆ ಏನಿದೆಪ್ಪ ಈ ಬ್ಯಾಗ್‍ನಲ್ಲಿ ಎಂದು ಪ್ರಶ್ನೆಹುಟ್ಟುವುದು ಸಹಜ. ತಂದೆಯೊಬ್ಬರು ತನ್ನ ಮಗನಿಗೆ ಶಾಲಾ ಬ್ಯಾಗ್ ಕೊಡಿಸಲು ಆಗದಿದ್ದರೂ ಸ್ವತಃ ತಾವೇ ರಾಫೀಯಾ ಸ್ಟ್ರಿಂಗ್(ಪ್ಲಾಸ್ಟಿಕ್ ಹಗ್ಗ) ಬ್ಯಾಗ್ ತಯಾರಿಸಿದ್ದಾರೆ. ಬೇರೆ ಮಕ್ಕಳನ್ನು ನೋಡಿ ತನ್ನ ಬಳಿ ಬ್ಯಾಗ್ ಇಲ್ಲವೆಂದು ಮಗ ಬೇಸರಪಡಬಾರದು ಎಂದು ತಂದೆ ಈ ಉಪಾಯ ಮಾಡಿದ್ದಾರೆ. ಇವರು ವಾಸಿಸುವ ಪ್ರದೇಶದಲ್ಲಿ ಶಾಲಾ ಬ್ಯಾಗ್ ದುಬಾರಿಯಾಗಿತ್ತು. ಅಲ್ಲದೆ ಅಷ್ಟು ಹಣವನ್ನು ರೈತ ಬರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬ್ಯಾಗ್‍ಗೆ ಖರ್ಚು ಮಾಡುವ ಹಣವನ್ನು ಉಳಿಸಲು ಪ್ಲಾಸ್ಟಿಕ್ ಹಗ್ಗವನ್ನು ಬಳಸಿ ಬ್ಯಾಗ್ ತಯಾರಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ವಿದ್ಯಾರ್ಥಿ ವೈ.ಎನ್ ಕೆಂಗ್(5) ತನ್ನ ತಂದೆ ತಯಾರಿಸಿದ ಈ ಬ್ಯಾಗ್ ಧರಿಸಿ ಶಾಲೆಗೆ ಹೋಗಿದ್ದನು. ಈ ವೇಳೆ ಶಿಕ್ಷಕಿ ಬ್ಯಾಗ್ ನೋಡಿ ಎಲ್ಲಿ ಖರೀದಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಆಗ ನನ್ನ ತಂದೆ ಈ ಬ್ಯಾಗ್ ತಯಾರಿಸಿದ್ದು ಎಂದನು. ಆದ ವಿದ್ಯಾರ್ಥಿಯ ಬಡತನ ಕಂಡು ಶಿಕ್ಷಕಿ ಈ ಬ್ಯಾಗ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬ್ಯಾಗ್ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದು, ತಂದೆ ಉಪಾಯವನ್ನು ಮೆಚ್ಚಿದ್ದಾರೆ. ಅಲ್ಲದೆ ಹಲವರು ಈ ಬದ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.

    https://www.facebook.com/alway.smile.758/posts/1380883075412376

    ವಿಶ್ವಸಂಸ್ಥೆಯ ವರದಿ ಪ್ರಕಾರ ಸುಮಾರು 60 ದಶಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಬಡತನದ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ಈ ತಂದೆಯ ಉಪಾಯ ಎಲ್ಲರ ಮನ ಗೆದ್ದಿದ್ದು, ಸದ್ಯ ಈ ವಿಶೇಷ ಬ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ ಶೇ.10 ರಷ್ಟು ಮೀರುವಂತೆ ಇಲ್ಲ. 1-2 ತರಗತಿ ಮಕ್ಕಳಿಗೆ ಇನ್ನು ಮುಂದೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಹೇಳಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯವಾಗಿ ಆಗಬೇಕು. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಆದೇಶ ನೀಡಿದೆ.

    ಸ್ಕೂಲ್ ಬ್ಯಾಗ್ ರೂಲ್ಸ್!
    1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
    2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
    3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
    4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
    5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
    6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
    7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
    8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

    ಹೊಸ ಆದೇಶದ ಅನ್ವಯ ಮಕ್ಕಳ ಶಾಲಾ ಬ್ಯಾಗ್ ತೂಕ ಹೀಗೆ ಇರಬೇಕು
    1. 2ನೇ ತರಗತಿ – 1.5 ರಿಂದ 2 ಕೆಜಿ.
    2. 3-5ನೇ ತರಗತಿ – 2 ರಿಂದ 3 ಕೆಜಿ
    3. 6-8ನೇ ತರಗತಿ – 3 ರಿಂದ 4 ಕೆಜಿ.
    4. 9-10ನೇ ತರಗತಿ – 4 ರಿಂದ 5 ಕೆಜಿ

    ಶಾಲಾ ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆಗಳನ್ನು ಮಾಡಬೇಕು?
    1. ಕ್ಷೇತ್ರ ಸಂಚಾರ
    2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
    3. ಗಣಿತ ವಿನೋದ, ಅಬ್ಯಾಕಸ್
    4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
    5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
    6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
    7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ
    8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
    9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
    10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
    11. ಹೊರಾಂಗಣ ಕ್ರೀಡೆಗಳು
    12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
    13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
    14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.