Tag: school admission

  • 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    – 1ನೇ ತರಗತಿ ವಯೋಮಿತಿ ನಿಯಮ ಸಡಿಲಿಕೆ

    ಬೆಂಗಳೂರು: 5 ವರ್ಷ 5 ತಿಂಗಳು ತುಂಬಿದ ಮಕ್ಕಳು 1ನೇ ತರಗತಿಗೆ ಸೇರಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ವಯಸ್ಸಿನ ಮಿತಿ ಸಡಿಲಿಕೆ ಬಗ್ಗೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    1ನೇ ತರಗತಿ ಸೇರುವ ಮಕ್ಕಳ ವಯೋಮಿತಿ ಸಡಿಲಿಕೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

    ಪೋಷಕರು ವಯೋಮಿತಿ ಗೊಂದಲದಲ್ಲಿ ಇದ್ದಾರೆ. ಎರಡು ತಿಂಗಳು ರಿಯಾಯ್ತಿ ಕೊಡಬಹುದು. ದೇಶದಲ್ಲಿ ಈಗಾಗಲೇ 6 ವರ್ಷ ಇದೆ. ಈ ವರ್ಷ ಮಾತ್ರ ವಯಸ್ಸಿನ ಮಿತಿ ಸಡಿಲ ಮಾಡಲಾಗುವುದು. ಮುಂದಿನ ವರ್ಷದಿಂದ 1ನೇ ತರಗತಿಗೆ ಸೇರಲು 6 ವರ್ಷ ನಿಯಮ ಕಡ್ಡಾಯ ಎಂದು ತಿಳಿಸಿದರು.

    ಎಸ್‌ಇಪಿ ಅವರಿಂದ ವರದಿ ಕೇಳಿದ್ವಿ. ಅವರು ಮೊದಲು 6 ವರ್ಷ ಅಂತ ಹೇಳಿದ್ರು. ಆಮೇಲೆ ನಮ್ಮ ಇಲಾಖೆ ಅವರ ಜೊತೆ ಮಾತಾಡಿದ್ವಿ. ಎಸ್‌ಇಪಿ ಸೂಚನೆ ಮೇಲೆ 5 ವರ್ಷ 5 ತಿಂಗಳು ಆಗಿದ್ದರೆ ದಾಖಲಾತಿ ಮಾಡಬೇಕು. ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿ ಮತ್ತೆ ಮಾಡಲಿ ಎಂದರು.

    ಯುಕೆಜಿ ಮುಗಿಸಿರಬೇಕು. 1ನೇ ತರಗತಿಗೆ 5 ವರ್ಷ 5 ತಿಂಗಳು ದಾಖಲಾತಿ ಮಿತಿ ಸಡಿಲಿಕೆ ಮಾಡಲಾಗಿದೆ. ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯ. ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.

    ವಯೋಮಿತಿ ಸಡಿಲ ಮಾಡುವುದಕ್ಕೆ ಎಲ್ಲರೂ ಒತ್ತಡ ಹಾಕಿದ್ದರು. ಮಕ್ಕಳನ್ನ ಮಿಷನ್ ರೀತಿ ಓದಿಸೋಕೆ ಪೋಷಕರು ಮುಂದಾಗಬಾರದು. ಮಕ್ಕಳಿಗೆ ಒತ್ತಡ ಹಾಕುವುದು ಸರಿಯಲ್ಲ. ಒತ್ತಡ ಇಲ್ಲದೆ ಮಕ್ಕಳು ಓದಬೇಕು ಎಂದು ಸಲಹೆ ನೀಡಿದರು.

  • PUBLiC TV Impact –  ಅನಾಥ ಬಾಲಕನಿಗೆ ಸಿಕ್ತು ಶಾಲೆಯ ಪ್ರವೇಶಾತಿ

    PUBLiC TV Impact – ಅನಾಥ ಬಾಲಕನಿಗೆ ಸಿಕ್ತು ಶಾಲೆಯ ಪ್ರವೇಶಾತಿ

    ದಾವಣಗೆರೆ: ತಂದೆ ತಾಯಿಯಲ್ಲದೇ ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ ಅನಾಥ ಬಾಲಕನಿಗೆ ಶಿಕ್ಷಣ ಸಿಗದೇ ಪರದಾಡುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ (PUBLiC TV Report) ಮಾಡಿತ್ತು. ವರದಿ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳು (Education Department) ಎಚ್ಚೆತ್ತಿದ್ದಾರೆ. ಸದ್ಯ ಅನಾಥ ಬಾಲಕನಿಗೆ ಶಿಕ್ಷಣ ಭಾಗ್ಯ ದೊರೆತಿದೆ.

    ಆ ಬಾಲಕ ಆರು ತಿಂಗಳು ಇರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದ. ಹೆಂಡತಿಯನ್ನು ಕೊಂದು ಆ ಬಾಲಕನ ತಂದೆ ಜೈಲು ಸೇರಿದ್ದ. ಅನಾಥವಾಗಿದ್ದ ಬಾಲಕನು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಶಾಲೆಗೆ ಸೇರಿಸಲು ಹೋದಾಗ ಶಾಲಾ ಮುಖ್ಯ ಶಿಕ್ಷಕಿ ಆತನನ್ನು ಶಾಲೆಗೆ ಸೇರಿಸಿಕೊಳ್ಳದೇ ಸತಾಯಿಸುತ್ತಿದ್ದರು. ಈ ಸಮಯದಲ್ಲಿ ಈ ಕುರಿತು ಪಬ್ಲಿಕ್ ಟಿವಿ ವರದಿಯೊಂದನ್ನು ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅನಾಥ ಬಾಲಕನಿಗೆ ಶಾಲೆಯ ಪ್ರವೇಶಾತಿ ಸಿಗುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಸಿಕ್ಕಿದೆ.ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ

    ದಾವಣಗೆರೆಯ (Davanagere) ಶಾಮನೂರು ಹೊಸ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸನ್ನಿವೇಶ ಕಂಡು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಶಾಲೆಗೆ ಸೇರಿಸಿಕೊಳ್ಳದೇ ಇದ್ದಿದ್ದಕ್ಕೆ ಶಾಲೆಯ ಹೊರಗೆ ಕೂತಿದ್ದ ಬಾಲಕ ಇಂದು ಶಾಲೆಯಲ್ಲಿ ಕೂತು ಪಾಠ ಕೇಳುತ್ತಿದ್ದಾನೆ. ಇದಕ್ಕೆ ಪಬ್ಲಿಕ್ ಟಿವಿಯ ವರದಿಯೇ ಕಾರಣ. ಅಕ್ಷಯ್ ಎನ್ನುವ ಬಾಲಕನಿಗೆ ಶಾಲೆಗೆ ಸೇರಿಸಿಕೊಳ್ಳದೇ ಶಾಲಾ ಮುಖ್ಯ ಶಿಕ್ಷಕರು ಸತಾಯಿಸುತ್ತಿದ್ದರು. ಇದಕ್ಕೆ ಕಾರಣ ಅಕ್ಷಯ್ ತಾಯಿಯನ್ನು ಆತನ ತಂದೆ ಕೊಲೆ ಮಾಡಿ ಜೈಲು ಸೇರಿದ್ದ.

    ಅನಾಥವಾಗಿದ್ದ ಆ ಬಾಲಕನನ್ನು ದೊಡ್ಡಮ್ಮ ರೂಪ ತನ್ನ ಮಕ್ಕಳಂತೆ ಸಾಕುತ್ತಿದ್ದಳು. ಶಾಲೆಗೆ ಸೇರಿಸಲು ಹೋದಾಗ ತಂದೆ ತಾಯಿಯ ಆಧಾರ್ ಕಾರ್ಡ್ ಬೇಕು ಇಲ್ಲವಾದ್ರೆ ಸೇರಿಸಿಕೊಳ್ಳೋದಿಲ್ಲ ಎಂದು ಸತಾಯಿಸಿದ್ದರು. ಇದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿ ಕುಟುಂಬವಿದ್ದು, ಆ ಕುಟುಂಬದ ನೆರವಿಗೆ ಪಬ್ಲಿಕ್ ಟಿವಿ ನಿಂತಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇ ತಡ ಆ ಬಾಲಕನನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಇನ್ನು ಯಾವಾಗ ಬಾಲಕನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರವಾಯ್ತೋ ಕೂಡಲೇ ಎಚ್ಚೆತ್ತ ಅಧಿಕಾರಿಗಳು, ಅದರಲ್ಲೂ ದಕ್ಷಿಣ ಕ್ಷೇತ್ರ ವಲಯದ ಬಿಇಒ ಪುಷ್ಪಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನನ್ನು ಶಾಲೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ವರದಿಯಲ್ಲಿ ಕೂಡ ಪಬ್ಲಿಕ್ ಟಿವಿ ಬಿತ್ತರಿಸಿದ ಸುದ್ದಿಯ ಬಗ್ಗೆ ಕೂಡ ಉಲ್ಲೇಖವಾಗಿದೆ. ಇದರಿಂದ ಬಿಇಒ ಪುಷ್ಪಲತ ಆ ಬಾಲಕನಿಗೆ ಧೈರ್ಯ ಹೇಳುವ ಮೂಲಕ ಶಾಲೆಗೆ ಸೇರಿಸಿಕೊಂಡಿದ್ದಾರೆ. ಈಗ ಬಾಲಕ ತರಗತಿಯಲ್ಲಿ ಕೂತು ಮಕ್ಕಳ ಜೊತೆ ವಿದ್ಯಾಭ್ಯಾಸ ಕಲಿಯುವಂತಾಗಿದೆ. ಇನ್ನು ಇದಕ್ಕೆ ಸಹಕಾರಿಯಾದ ಪಬ್ಲಿಕ್ ಟಿವಿಗೆ ಬಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಯಾದಗಿರಿಯಲ್ಲಿ ಗುಡುಗು ಸಹಿತ ಬಾರಿ ಮಳೆ : ಸಿಡಿಲು ಬಡಿದು ನಾಲ್ವರು ಸಾವು

  • ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!

    ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!

    ಹೈದರಾಬಾದ್: ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಅಥವಾ ವಿವಿಧ ಮಳಿಗೆಗಳಲ್ಲಿ ಲಕ್ಕಿ ಡ್ರಾ ಆಯೋಜನೆ ಮಾಡೋದನ್ನ ನೋಡಿರ್ತೀರ. ಆದ್ರೆ ತೆಲಂಗಾಣದ ಹಾಯತ್ ನಗರದಲ್ಲಿ ಶಾಲೆಯೊಂದು ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿ ಸುದ್ದಿಯಾಗಿದೆ.

    ಇಲ್ಲಿನ ಪದ್ಮಾವತಿ ಕಾಲೋನಿಯಲ್ಲಿರುವ ಸರೀತಾ ವಿದ್ಯಾ ನಿಕೇತನ್ ಶಾಲೆಯು ಲಕಿ ಡ್ರಾ ನಡೆಸುತ್ತಿದೆ. ಮೊದಲ ಪ್ರವೇಶ- ಲಕ್ಕಿ ಡ್ರಾ- ಸೀಸನ್ 1 ಎಂದು ಬೋರ್ಡ್ ಹಾಕಲಾಗಿದೆ. ಮಾರ್ಚ್ 27 ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಶುಲ್ಕ ಪಾವತಿಸಿ ನವೀಕರಿಸಿಕೊಂಡರೆ ಲಕ್ಕಿ ಡ್ರಾ ವನ್ನು ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಶಾಲೆಯ ನೋಟಿಸ್‍ನಲ್ಲಿ ಹಾಕಿದ್ದಾರೆ.

    ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳುವವರಿಗೆ ಟೋಕನ್‍ಗಳನ್ನು ನೀಡಲಾಗುತ್ತಿದೆ. ಮತ್ತು ಡ್ರಾ ಮಾರ್ಚ್ 23ರಂದು ನಡೆಯಲಿದೆ. ಪ್ರವೇಶ ಮತ್ತು ಶಾಲಾ ಶುಲ್ಕಗಳು ಲಕ್ಷಾಂತರ ರೂಪಾಯಿ ಇರುವಾಗ ಶಾಲೆಯವರು ಸಾವಿರ ರೂ ಬೆಲೆಯ ಉಡುಗೊರೆಗಳನ್ನ ಬಹುಮಾನವಾಗಿ ಇಟ್ಟು ಪೋಷಕರನ್ನ ಸೆಳೆಯುತ್ತಿದ್ದಾರೆ.

    ಎಲ್‍ಕೆಜಿ ಯಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ರಿಮೋಟ್ ಕಂಟ್ರೋಲ್ ಕಾರ್, ಬಾರ್ಬೀ ಡಾಲ್, ಟೆಡ್ಡಿ ಬೇರ್ ಮತ್ತು ಪುಸ್ತಕವನ್ನ ಲಕ್ಕಿ ಡ್ರಾ ಬಹುಮಾನವಾಗಿ ನೀಡಲಾಗುತ್ತಿದೆ. ಹಾಗೇ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ಫುಟ್ಬಾಲ್, ಪುಸ್ತಕ, ಕ್ರಿಕೆಟ್ ಕಿಟ್, ಚೆಸ್ ಬೋರ್ಡ್‍ಗಳನ್ನು ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ.

    ಶಾಲೆಯ ನೋಟಿಸ್ ಬಗ್ಗೆ ಮಾತನಾಡಿದ ಪೋಷಕರು, ಲಕ್ಕಿ ಡ್ರಾ ಬಗ್ಗೆ ಇತ್ತೀಚೆಗೆ ನೋಟಿಸ್ ಹಾಕಿದ್ದಾರೆ. ಮಾರ್ಚ್ 23 ರವರೆಗೂ ಇದು ಇಲ್ಲಿರುತ್ತದೆ. ಯಾವುದೇ ಪೋಷಕರು ಇದಕ್ಕೆ ಈವರೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲವೆಂದು ಹೇಳಿದರು.

    ಆದ್ರೆ ಕೆಲವರು ಈ ಕ್ರಮವನ್ನು ಅನೈತಿಕವೆಂದು ಖಂಡಿಸಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಈ ಬಗ್ಗೆ ಮಾತನಾಡಿದ್ದು, “ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ. ಬಹುಮಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಪೋಷಕರು ಮತ್ತು ಮಕ್ಕಳನ್ನು ಆಕರ್ಷಿಸುವಂತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳೇ ಹೊರತು ವ್ಯವಹಾರವಲ್ಲ. ಈ ಬಗ್ಗೆ ಜಿಲ್ಲಾ ಶಿಕ್ಷಣ ಕಚೇರಿಯ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.