Tag: scam

  • 162 ಬಾರಿ ಫಾರಿನ್‌ ಟ್ರಿಪ್‌, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

    162 ಬಾರಿ ಫಾರಿನ್‌ ಟ್ರಿಪ್‌, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

    ಲಕ್ನೋ: ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಪ್ರಕರಣದ ಕುರಿತು ಸ್ಫೋಟಕ ರಹಸ್ಯಗಳನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. 8 ವರ್ಷಗಳಿಂದ ನಕಲಿ ಕಚೇರಿ ನಡೆಸುತ್ತಿದ್ದ ಆರೋಪಿ ಹರ್ಷವರ್ಧನ್ ಜೈನ್‌ (Harshvardhan Jain) ಬಗೆಗಿನ ಸತ್ಯಗಳನ್ನು ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

    ಹೌದು. ನಕಲಿ ರಾಯಭಾರ ಕಚೇರಿಯಲ್ಲಿ ಸುಮಾರು 300 ಕೋಟಿ ಹಗರಣ ನಡೆದಿದ್ದು, ಬಹು ವಿದೇಶಿ ಬ್ಯಾಂಕ್‌ ಖಾತೆಗಳ (Bank Account) ಲಿಂಕ್‌ ಇರೋದು ಪತ್ತೆಯಾಗಿದೆ. ಆರೋಪಿ ಹರ್ಷವರ್ಧನ್‌ 162 ಬಾರಿ ಫಾರಿನ್‌ ಟ್ರಿಪ್‌ ಹೋಗಿಬಂದಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಬಂಧನ – 45 ಲಕ್ಷ ಹಣ, ಐಷಾರಾಮಿ ಕಾರುಗಳು ವಶಕ್ಕೆ

    300 ಕೋಟಿ ರೂ.ಗಳ ಹಗರಣ
    ಯುಪಿ ಎಸ್‌ಟಿಎಫ್‌ ನಡೆಸಿದ ತನಿಖೆಯಲ್ಲಿ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಮತ್ತು ವಂಚಕ ಅಹ್ಸಾನ್‌ ಅಲಿ ಸಯೀದ್‌ಗೆ ಹರ್ಷವರ್ಧನ್‌ನನ್ನ ಪರಿಚಯಿಸಿದ್ದು ಚಂದ್ರಸ್ವಾಮಿ ಅಂತ ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಜನಿಸಿದ್ದ ಸಯೀದ್‌ ಜೈನ್‌ ಈಗ ಟರ್ಕಿ ಪ್ರಜೆಯಾಗಿದ್ದಾರೆ. ಹರ್ಷವರ್ಧನ್‌ ಜೈನ್‌ ಸಯೀದ್‌ ಜೈನ್‌ ಜೊತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯಲು ಕೆಲಸ ಮಾಡಿದ್ದ. ಈ ಹಾದಿಯಲ್ಲಿ 300 ಕೋಟಿ ಹಗರಣ ನಡೆದಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ನೋಯ್ಡಾದಲ್ಲಿ ಸ್ಕೂಟಿಗೆ BMW ಕಾರು ಡಿಕ್ಕಿ – 5 ವರ್ಷದ ಬಾಲಕಿ ಸಾವು

    ಸ್ವಿಸ್‌ ನಲ್ಲಿ ವಂಚನೆ
    ಅಂತಾರಾಷ್ಟ್ರೀಯ ವಂಚಕ ಸಯೀದ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿ ನಡೆಸುತ್ತಿದ್ದ. ಕೆಲ ಸಮಯದ ನಂತರ ಇದನ್ನ ಬ್ರೋಕರೇಜ್‌ ಕಂಪನಿ ಆಗಿ ಬದಲಾಯಿಸಲಾಗಿತ್ತು. ಈ ವೇಳೆ ಸಾಲ ಪಡೆಯುವವರಿಗೆ ಸಹಾಯ, ಮಾರ್ಗದರ್ಶನ ಮಾಡುವ ಭರವಸೆ ನೀಡಿ 25 ದಶಲಕ್ಷ ಪೌಂಡ್‌ (ಸುಮಾರು 300 ಕೋಟಿ ರೂ.) ಸಂಗ್ರಹ ಮಾಡಿದ್ದ. ಬಳಿಕ ಸ್ವಿಸ್‌ ನಿಂದ ಕಂಪನಿಯನ್ನೇ ಎತ್ತಂಗಡಿ ಮಾಡಿದ್ದ ಸಯೀದ್‌. ಈ ಪ್ರಕರಣ ಸಂಬಂಧ ಸಯೀದ್‌ ಜೈನ್‌ನನ್ನ 2022ರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜೈನ್‌ ನಕಲಿ ರಾಯಭಾರ ಕಚೇರಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದನ್ನ ಯುಪಿ ಎಸ್‌ಟಿಎಫ್‌ ಅಧಿಕಾರಿಗಳು ಬಯಲಿಗೆಳೆದಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

    ಏನಿದು ಪ್ರಕರಣ?
    ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನ ಯುಪಿ ಎಸ್‌ಟಿಎಫ್ ಬಂಧಿಸಿತ್ತು. ದಾಳಿಯಲ್ಲಿ ಹಲವಾರು ನಕಲಿ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನ ಹೊಂದಿರುವ ಹಲವಾರು ಕಾರುಗಳನ್ನು ಹೊಂದಿದ್ದ. ಜೊತೆಗೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತಮ್ಮ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನ ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರೋದು ಬೆಳಕಿಗೆ ಬಂದಿತ್ತು. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುವುದು ಪತ್ತೆಯಾಗಿತ್ತು. ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆಗಳು ಬಹಿರಂಗಪಡಿಸಿದ್ದವು. 2011 ರಲ್ಲಿ, ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು, ಇದಕ್ಕಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ವಶಪಡಿಸಿಕೊಂಡ ವಸ್ತುಗಳು:
    1. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ಕಾರ್‌ಗಳು
    2. 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು
    3. ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು
    4. ಎರಡು ನಕಲಿ ಪ್ಯಾನ್ ಕಾರ್ಡ್‌ಗಳು
    5. ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು
    6. ಎರಡು ನಕಲಿ ಪ್ರೆಸ್ ಕಾರ್ಡ್‌ಗಳು
    7. 44.7 ಲಕ್ಷ ರೂ. ನಗದು
    8. ವಿವಿಧ ದೇಶಗಳಿಂದ ಬಂದ ವಿದೇಶಿ ಕರೆನ್ಸಿ
    9. ವಿವಿಧ ಕಂಪನಿಗಳ ದಾಖಲೆಗಳು
    10. ಹೆಚ್ಚುವರಿ ಹದಿನೆಂಟು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

  • ಬೀದರ್ | ಶಾದಿಮಹಲ್ ನಿರ್ಮಾಣ ಹೆಸರಲ್ಲಿ ಹಗರಣ ಆರೋಪ – ಕೋಟ್ಯಂತರ ಹಣ ನುಂಗಿದ್ರಾ ಅಧಿಕಾರಿಗಳು?

    ಬೀದರ್ | ಶಾದಿಮಹಲ್ ನಿರ್ಮಾಣ ಹೆಸರಲ್ಲಿ ಹಗರಣ ಆರೋಪ – ಕೋಟ್ಯಂತರ ಹಣ ನುಂಗಿದ್ರಾ ಅಧಿಕಾರಿಗಳು?

    ಬೀದರ್: ಜಿಲ್ಲೆಯಲ್ಲಿ ಶಾದಿ ಮಹಲ್ (Shadi Mahal) ನಿರ್ಮಾಣ ಮಾಡುವುದಾಗಿ ತಿಳಿಸಿ, ಅಧಿಕಾರಿಗಳು ಕೋಟ್ಯಂತರ ಹಣ ನುಂಗಿದ್ರಾ ಎನ್ನುವ ಪ್ರಶ್ನೆ ಮೂಡಿದೆ.

    ಹೌದು, ಜಿಲ್ಲೆಯಲ್ಲಿ ಒಟ್ಟು 26 ಶಾದಿ ಮಹಲ್‌ಗಳ ನಿರ್ಮಾಣಕ್ಕೆ ಕೋಟ್ಯಂತರ ಹಣ ನೀಡಲಾಗಿದ್ದು, ಆದರೆ ನಿಗದಿತ ಸ್ಥಳಗಳಲ್ಲಿ ಶಾದಿ ಮಹಲ್‌ಗಳೇ ಕಾಣುತ್ತಿಲ್ಲ. ಹೀಗಾಗಿ ಈ ಶಾದಿ ಮಹಲ್‌ಗಳ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಸಂಸ್ಥೆಯವರು ಕೋಟ್ಯಂತರ ಹಣ ಗೋಲ್ಮಾಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.ಇದನ್ನೂ ಓದಿ: ಡಿಗ್ರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇನ್ಮುಂದೆ ಸಿಸಿಟಿವಿ ಕಣ್ಗಾವಲು

    ಸರ್ಕಾರ ಬಡವರಿಗಾಗಿ ಕೊಟ್ಟ ಯೋಜನೆ ಇದೀಗ ಭ್ರಷ್ಟರ ಹೊಟ್ಟೆ ತುಂಬಿಸಿದೆ. 2014ರಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಬಡ ಅಲ್ಪಸಂಖ್ಯಾತರಿಗಾಗಿ ಶಾದಿ ಮಹಲ್ ನಿರ್ಮಾಣ ಘೋಷಿಸಿತ್ತು. ಅದರಂತೆ ಜಿಲ್ಲೆಯಲ್ಲಿ 6 ಕೋಟಿ ರೂ.ಗೂ ಅಧಿಕ ಹಣದಲ್ಲಿ ಒಟ್ಟು 26 ಶಾದಿಮಹಲ್ ನಿರ್ಮಾಣಕ್ಕೆ ಸೂಚಿಸಿತ್ತು.

    ಶಾದಿಮಹಲ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣವೇನೋ ಬರುತ್ತಿದೆ. ಆದರೆ ಬಹುತೇಕ ಕಡೆಗಳಲ್ಲಿ ಶಾದಿಮಹಲ್‌ಗಳ ನಿರ್ಮಾಣ ಆಗಿಲ್ಲ. ದಾಖಲೆಗಳ ಪ್ರಕಾರ, ಬೀದರ್‌ನ ಚಿದ್ರಿಯಲ್ಲಿ ಎರಡು ಶಾದಿ ಮಹಲ್‌ಗಳು ಇವೆ ಎನ್ನಲಾಗುತ್ತಿತ್ತು. `ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಮಾಡಿದಾಗ ಶಾದಿ ಮಹಲ್ ಇಲ್ಲದೆ ಇರೋದು ಕಂಡುಬಂದಿದೆ. ಈ ಶಾದಿ ಮಹಲ್ ಸ್ಥಳದಲ್ಲಿ ಕೆಲವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.

    ಗ್ರಾಮಗಳನ್ನೆಲ್ಲಾ ಸುತ್ತಾಡಿದ್ರು ಶಾದಿ ಮಹಲ್ ಸಿಗುವುದೇ ಇಲ್ಲ. ದಾಖಲೆಗಳ ಪ್ರಕಾರ, ಅಷ್ಟೂರಿನಲ್ಲಿ 7 ವರ್ಷದ ಹಿಂದೆ ಶಾದಿ ಮಹಲ್ ನಿರ್ಮಾಣ ಮಾಡಲಾಗಿದೆ. 50 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ 20 ಲಕ್ಷ ರೂ. ಹಣ ಮೊದಲ ಕಂತು ನೀಡಿದ್ರೂ ನಿರ್ಮಾಣವಾಗಿಲ್ಲ. ಮೇಲಾಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈ ಬಗ್ಗೆ ವರದಿ ಕೂಡ ನೀಡಿದ್ದಾರೆ. ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯನ್ನು ಕೇಳಿದ್ರೆ 2018ರ ಬಳಿಕ ಜಿಲ್ಲೆಯಲ್ಲಿ ಯಾವುದೇ ಹೊಸ ಶಾದಿ ಮಹಲ್ ಅನುಮೋದನೆಯಾಗಿಲ್ಲ. ಸ್ಥಳ ಬದಲಾವಣೆ ಕಾರಣ ಇದ್ದು, ನೋಟಿಸ್ ನೀಡಿದ್ದಾಗಿ ಹೇಳಿದ್ದಾರೆ.

    ಬಡ ಅಲ್ಪಸಂಖ್ಯಾತರಿಗೆ ಅನುಕೂಲವಾಗಲಿ ಎಂದು ಸರ್ಕಾರ ಮಾಡಿದ್ದ ಶಾದಿ ಮಹಲ್ ಯೋಜನೆ ಹಣ ಕಂಡವರ ಪಾಲಾಗ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.ಇದನ್ನೂ ಓದಿ: Haveri | ಶಾಲಾ ಬಸ್ ಚಾಲನೆ ವೇಳೆ ಹೃದಯಾಘಾತ – ಚಾಲಕ ಸಾವು 

     

  • KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

    KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

    – 96 ಕಾಮಗಾರಿಗಳ ಹೆಸರಿನಲ್ಲಿ ಗೋಲ್ಮಾಲ್

    ಕೊಪ್ಪಳ: ಜಿಲ್ಲೆಯ ಕೆಆರ್‌ಐಡಿಎಲ್‌ನಲ್ಲಿ (KRIDL) 96 ಕಾಮಗಾರಿಗಳ ಹೆಸರಿನಲ್ಲಿ ಬಹುಕೋಟಿ ಹಗರಣವಾಗಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ (BJP) ಮಾಜಿ ಶಾಸಕ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ವಾಲ್ಮೀಕಿ ಹಗರಣ (Valmiki Scam), ಆದರೆ ವಾಲ್ಮೀಕಿ ಹಗರಣವನ್ನೇ ಮೀರಿಸುವಂತಹ ದೊಡ್ಡ ಹಗರಣವನ್ನ `ಪಬ್ಲಿಕ್ ಟಿವಿ’ ಬಯಲಿಗೆ ಎಳೆದಿದೆ. ಕೊಪ್ಪಳದ (Koppal) ಕೆಆರ್‌ಐಡಿಎಲ್‌ನಲ್ಲಿ ಕಾಮಗಾರಿ ಮಾಡದೆ 96 ಕಾಮಗಾರಿಗಳ ಹೆಸರಲ್ಲಿ ನೂರಾರು ಕೋಟಿ ಹಗರಣ ನಡೆದಿದೆ. ಇದೀಗ ಈ ಹಗರಣದಲ್ಲಿ ನೂರಾರು ಕೋಟಿ ರೂ. ನುಂಗಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಗುಂಡು ಹಾರಿಸಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ

    ಸದ್ಯ ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ತನಿಖೆ ನಡೆಸುವಂತೆ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸಿಎಂ ಹಾಗೂ ಕೆಆರ್‌ಐಡಿಎಲ್ ಎಂಡಿಗೆ ಮನವಿ ಮಾಡಿದ್ದಾರೆ. ಈ ಕಾಮಗಾರಿಗಳು ನಡೆದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕನಕಗಿರಿ ಶಾಸಕ ಹಾಗೂ ಇಂದು ಬಿಜೆಪಿ ಜಿಲ್ಲಾದ್ಯಕ್ಷರಾಗಿರುವ ಬಸವರಾಜ ದಡೆಸೂಗುರ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

    ಕೆಆರ್‌ಐಡಿಎಲ್ ವತಿಯಿಂದ ಒಟ್ಟು 96 ಕಾಮಗಾರಿಗಳನ್ನ ಮಾಡಿದ್ದು, ಕನಕಗಿರಿಯಲ್ಲಿ 19, ಗಂಗಾವತಿಯಲ್ಲಿ 05, ಯಲಬುರ್ಗಾದಲ್ಲಿ 04, ಹಾಗೂ ಕೊಪ್ಪಳದಲ್ಲಿ ಒಟ್ಟು 68 ಕಾಮಗಾರಿಗಳನ್ನ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳ ಮೊತ್ತ ನೂರಾರು ಕೋಟಿಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಝಡ್ ಚಿಂಚೋಳಿಕರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ನ್ಯಾಯಾಲಯದ ಮೂಲಕ ಮತ್ತೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.ಇದನ್ನೂ ಓದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ನಾದಿನಿಯನ್ನು ಕೊಂದ

    ಇನ್ನೂ ಈ ಕುರಿತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಮಾತನಾಡಿ, ಈ ಅಕ್ರಮದಲ್ಲಿ ಹೊರಗುತ್ತಿಗೆ ದಾರ ಕಳಕಪ್ಪ ನಿಡಗುಂದಿ ಮತ್ತು ಸಿಮೆಂಟ್ ಪೂರೈಕೆದಾರ ಅಮರೇಶ ಯಂಬಲದಿನ್ನಿ ಕೂಡ ಸಾಥ್ ನೀಡಿದ್ದಾರೆ. ಸದ್ಯ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ, ಲೋಪವೆಸಗಿದ ಅಧಿಕಾರಿ ಹಾಗೂ ಇದಕ್ಕೆ ಸಾಥ್ ನೀಡಿದ ಎಲ್ಲರ ವಿರುದ್ಧವೂ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದು, ಈ ದೊಡ್ಡ ಹಗರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೂಡಲೇ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರುತ್ತಿದೆ.

  • ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಚಿತ್ರದುರ್ಗ: ಮುಂಬೈ ಪೊಲೀಸರೆಂದು ನಂಬಿಸಿ ಹಿರಿಯ ವೈದ್ಯರೊಬ್ಬರಿಂದ 1.27 ಕೋಟಿ ರೂ. ದೋಚಿದ್ದ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಚಿತ್ರದುರ್ಗದ (Chitradurga) ಸೆನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ ಆಗಸ್ಟ್ 23 ರಂದು ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ನಾವು ಟಿಆರ್‌ಎಐ & ಮುಂಬೈ(Mumbai) ಪೊಲೀಸರೆಂದು ಹೇಳಿದ್ದು, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ಅಲ್ಲದೇ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ತಮ್ಮ ಖಾತೆಗೆ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    ಇದರಿಂದಾಗಿ ಕಂಗಾಲಾದ ವೈದ್ಯ ಶ್ರೀನಿವಾಸ್ ಶೆಟ್ಟಿಯವರು ಆಗಸ್ಟ್ 26 ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವಂಚಕರ ಜಾಡನ್ನು ಬೆನ್ನತ್ತಿದ್ದ ಪೊಲೀಸರು, ಅಸ್ಸಾಂ ಮೂಲದ ಆರೋಪಿ ಪವನ್ ಕುಮಾರ್, ಜಾಕೀರ್ ಬೋರಾ ಎಂಬ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಂಚಿತರಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ 16.89 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಈ ಸಂಬಂಧ ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ

  • ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ವಂಚನೆ – ದುಬೈ ಮೂಲದ ಐವರು ಅರೆಸ್ಟ್

    ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ವಂಚನೆ – ದುಬೈ ಮೂಲದ ಐವರು ಅರೆಸ್ಟ್

    ಬೆಂಗಳೂರು: ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ಹಣ ವಂಚಿಸುತ್ತಿದ್ದ ಐವರು ಸೈಬರ್ ವಂಚಕರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ದುಬೈನ (Dubai) ಮೂಲದ ಯುಸೂಫ್ ಸೇಠ್, ಬೆಂಗಳೂರು (Bengaluru) ಮೂಲದ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತ ಆರೋಪಿಗಳು. ಇದನ್ನೂ ಓದಿ: 2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ: ಡಾ. ಗೀತಾ ಗೋಪಿನಾಥ್

    ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಆರೋಪಿಗಳು ಕರೆ ಮಾಡುತ್ತಿದ್ದರು. ನಾವು ಕ್ರೈಂ ಪೊಲೀಸರು, ಈ ಪ್ರಕರಣವನ್ನು ಬಗೆಹರಿಸಲು ನೀವು ಹಣ ಕೊಡಬೇಕು ಎಂದು ಸಂತ್ರಸ್ತರಲ್ಲಿ ಬೇಡಿಕೆ ಇಡುತ್ತಿದ್ದರು. ಇದನ್ನೂ ಓದಿ: ಸಿಟಿಯಲ್ಲಿ ಕಳ್ಳತನ, ಕಾಡಿನಲ್ಲಿ ವಾಸಸ್ಥಾನ – ಬೆಂಗಳೂರಲ್ಲಿ ಐನಾತಿ ಕಳ್ಳ ಅರೆಸ್ಟ್

    ಕೊಡಗು (Kodagu) ಮೂಲದ ವ್ಯಕ್ತಿಯಿಂದ 2.20 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ವಂಚಿಸಿದ್ದ ಹಣದಿಂದ ಬೆನ್ಜ್ ಕಾರನ್ನು ಖರೀದಿ ಮಾಡಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಟ್ಯಾಕ್ಸ್ ಸಂಗ್ರಹ ಶಾಕ್- 4 ತಿಂಗಳಲ್ಲಿ ಗುರಿ ಮುಟ್ಟದ ತೆರಿಗೆ ಸಂಗ್ರಹ

    ಈ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.70 ಕೋಟಿ ರೂ., 7700 ಯುಎಸ್ ಡಾಲರ್ (6.46 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ. ದುಬೈನಲ್ಲಿ ವಂಚನೆ ಮಾಡಲು ಆರೋಪಿಗಳು ಭಾರತೀಯ ಬ್ಯಾಂಕ್ ಅಕೌಂಟ್ ಬಳಸಿದ್ದಾರೆ. ಈ ಕುರಿತಂತೆ ಸಿಐಡಿ ಅಧಿಕಾರಿಗಳು ತನಿಖೆ ನಡಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಸಂಸ್ಥೆ ಮೂಲಕ ಗ್ಯಾರಂಟಿಗಳ ಸರ್ವೆಗೆ ಮುಂದಾದ ರಾಜ್ಯ ಸರ್ಕಾರ

  • Valmiki Scam | 187 ಕೋಟಿ ಲೂಟಿಗೆ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಹುದ್ದೆ ನೀಡಿದ್ದ ಎಂಡಿ

    Valmiki Scam | 187 ಕೋಟಿ ಲೂಟಿಗೆ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಹುದ್ದೆ ನೀಡಿದ್ದ ಎಂಡಿ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ (Karnataka Maharshi Valmiki Scheduled Tribe Development Corporation Ltd) ಕೋಟ್ಯಂತರ ರೂ. ಹಣ ಲೂಟಿ ಮಾಡಲು ನಕಲಿ ಹುದ್ದೆಯನ್ನೇ ಸೃಷ್ಟಿಸಿದ ಘಟನೆ ಈಗ ಬೆಳಕಿಗೆ ಬಂದಿದೆ.

    ಹೌದು. ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಜಾರಿ ನಿರ್ದೇಶನಾಲಯದ (ED) ಪ್ರವೇಶದ ಬಳಿಕ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ.

    ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯಲು ಎಂಡಿ ಪದ್ಮನಾಭ್ (Padmanabh) ನಕಲಿ ವ್ಯಕ್ತಿಯನ್ನೇ ಸೃಷ್ಟಿಸಿ ನಿಗಮದಲ್ಲಿ ಹುದ್ದೆ ಸಹ ನೀಡಿದ್ದರು. ಈ ನಕಲಿ ವ್ಯಕ್ತಿ 45 ಕೋಟಿ ರೂ. ಹಣ ವ್ಯವಹಾರ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: Valmiki Scam | ನಾಗೇಂದ್ರ ಆದಾಯದ ಮೂಲ ಕೆದಕಲು ಮುಂದಾದ ಇಡಿ

    ಲೂಟಿಗಾಗಿ ನಕಲಿ ಹುದ್ದೆ:
    ಕೋಟಿ ಕೋಟಿ ಲೂಟಿ ಹೊಡೆಯಲು ಪದ್ಮನಾಭ್ ಜ್ಯೂನಿಯರ್ ಅಕೌಂಟೆಂಟ್ ಹುದ್ದೆಯನ್ನು ಸೃಷ್ಟಿಸಿದ್ದರು. ಈ ಹುದ್ದೆಗೆ ಶಿವಕುಮಾರ್‌ ಹೆಸರಿನಲ್ಲಿ ಉದ್ಯೋಗಿಯನ್ನು ನೇಮಕ ಮಾಡಲಾಗಿತ್ತು. ಜ್ಯೂನಿಯರ್ ಅಕೌಂಟೆಂಟ್ ಅಂತಾ ಐಡಿ ಕಾರ್ಡ್ ನೀಡಿ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಅಸಲಿಗೆ ಶಿವಕುಮಾರ್‌ ಹೆಸರಿನ ವ್ಯಕ್ತಿಯೇ ಇರಲಿಲ್ಲ. ಇದನ್ನೂ ಓದಿ: ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಹಣಕ್ಕೆ ಕನ್ನ ಹಾಕಲು ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ನಲ್ಲಿ ಫೆ. 21ರಂದು 034123030001619 ಖಾತೆ ಓಪನ್‌ ಆಗುತ್ತದೆ.ಈ ಶಿವಕುಮಾರ್ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆಗೆ ಮನವಿ ಹೋಗುತ್ತದೆ. ಮನವಿ ಮೇರೆಗೆ ನಿಗಮದಿಂದ ಮಾ 5ರಿಂದ ಮೇ 6 ರವರೆಗೆ 187 ಕೋಟಿ ರೂ. ಹಣ ವರ್ಗಾವಣೆಯಾಗುತ್ತದೆ. ಶಿವಕುಮಾರ್‌ ಖಾತೆಯಿಂದ ಹೈದರಾಬಾದ್‌ನ ಆರ್‌ಬಿಎಲ್ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗುತ್ತದೆ. ಪದ್ಮನಾಭ್ ಕೃತ್ಯಕ್ಕೆ ಯೂನಿಯನ್‌ ಬ್ಯಾಂಕ್ ಸಿಬ್ಬಂದಿ ಸಾಥ್ ನೀಡಿದ್ದರಿಂದ ಇಷ್ಟೊಂದು ಹಣವನ್ನು ಲೂಟಿ ಮಾಡಲಾಗಿದೆ.

  • ವಾಲ್ಮೀಕಿ ನಿಗಮದಂತೆ ಪ್ರವಾಸೋದ್ಯಮ ಇಲಾಖೆಯಲ್ಲೂ ಗೋಲ್ಮಾಲ್‌ – 2.47 ಕೋಟಿ ರೂ. ಅಕ್ರಮ ಹಣ ವರ್ಗಾವಣೆ

    ವಾಲ್ಮೀಕಿ ನಿಗಮದಂತೆ ಪ್ರವಾಸೋದ್ಯಮ ಇಲಾಖೆಯಲ್ಲೂ ಗೋಲ್ಮಾಲ್‌ – 2.47 ಕೋಟಿ ರೂ. ಅಕ್ರಮ ಹಣ ವರ್ಗಾವಣೆ

    – ಕಳೆದ ಅಕ್ಟೋಬರ್‌ 28 ರಿಂದ ಈ ಫೆಬ್ರವರಿ 22 ರವರೆಗೆ ವರ್ಗಾವಣೆ
    – 3 ಖಾತೆಯಿಂದ ಒಟ್ಟು 54 ಬಾರಿ ವರ್ಗಾವಣೆ
    – ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಗೂ ದುಡ್ಡು

    ಬಾಗಲಕೋಟೆ: ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ (Valmiki Scam) ಸರ್ಕಾರದ ಕೊರಳಿಗೆ ಕುಣಿಕೆಯಾಗುತ್ತಿದೆ. ಈಗಾಗಲೇ ಸಚಿವ ಬಿ. ನಾಗೇಂದ್ರ (Nagendra) ತಲೆದಂಡ ಕೂಡ ಆಗಿದ್ದು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಮಧ್ಯೆ ಅದೇ ಮಾದರಿಯಲ್ಲಿ ಮತ್ತೊಂದು ಇಲಾಖೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

    ಬಾಗಲಕೋಟೆ (Bagalkot) ಜಿಲ್ಲಾ ಪ್ರವಾಸೋದ್ಯಮ (Tourism Department) ಇಲಾಖೆಯಲ್ಲಿ 2,47,73,999 ರೂ. ವಂಚನೆಯಾಗಿದ್ದು, ಬಾಗಲಕೋಟೆ ಐಡಿಬಿಐ ಬ್ಯಾಂಕ್‌ ಖಾತೆಗಳ ಮೂಲಕ ಹಣ ವಿವಿಧ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದಂತೆ ಜುಲೈ 11 ರಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    ವಂಚನೆ ಹೇಗೆ?
    ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು ಮೂರು ಖಾತೆಗಳನ್ನು ಬಾಗಲಕೋಟೆ ಐಡಿಬಿಐ ಬ್ಯಾಂಕ್‌ನಲ್ಲಿ (IDBI) ನಿರ್ವಹಣೆ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ (ಹೆಡ್‌) ಹೆಸರಲ್ಲಿ ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. ಮೂರು ಬ್ಯಾಂಕ್‌ ಖಾತೆಯಿಂದ ಕಳೆದ ಅಕ್ಟೋಬರ್‌ 28 ರಿಂದ ಈ ಫೆಬ್ರವರಿ 22 ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಇದನ್ನೂ ಓದಿ: ಅನಂತ್‌ ಅಂಬಾನಿ ವಿವಾಹ ಮಹೋತ್ಸವದಲ್ಲಿ ಮೋದಿ ಭಾಗಿ – ನವ ಜೋಡಿಗೆ ಆಶೀರ್ವದಿಸಿದ ಪ್ರಧಾನಿ!

    ಯಾವ ಖಾತೆಯಿಂದ ಎಷ್ಟು?
    1071104000160063 ಖಾತೆ ಮೂಲಕ 1,35,96,500 ರೂ., 1071104000165228 ಮೂಲಕ 1,01,33,750 ರೂ., ಮೂರನೇ ಖಾತೆ 1071104000165501 ಯಿಂದ 10,43,749 ರೂ. ಹಣ ವರ್ಗಾವಣೆಯಾಗಿದೆ. ಒಂದು ಖಾತೆಯಿಂದ 28 ಬಾರಿ, ಮತ್ತೊಂದು ಖಾತೆಯಿಂದ 25 ಬಾರಿ, ಮೂರನೇ ಖಾತೆಯಿಂದ ಒಂದು ಬಾರಿ ಸೇರಿ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿದೆ.

    ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿಗಳು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇಲಾಖೆಯ ಹಣ ತೆಗೆದುಕೊಂಡು ಸರಕಾರಕ್ಕೆ ಮೋಸ ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಿ- ಇದು ಹೇಗೆ ಕೆಲಸ ಮಾಡುತ್ತೆ?

    ಬಾಗಲಕೋಟೆ ಎಸ್‌ಪಿ  ಅಮರನಾಥ ರೆಡ್ಡಿ

    ಎಸ್‌ಪಿ ಹೇಳಿದ್ದೇನು?
    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಾಗಲಕೋಟೆ ಎಸ್‌ಪಿ  ಅಮರನಾಥ ರೆಡ್ಡಿ, ಪ್ರವಾಸೋದ್ಯಮ ಇಲಾಖೆಯ ಖಾತೆಯಿಂದ ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಗೂ ದುಡ್ಡು ಹೋಗಿದೆ. ಹಣ ವರ್ಗಾವಣೆ ಬಗ್ಗೆ ಐಡಿಬಿಐ ಬ್ಯಾಂಕ್ ಬಳಿಯೂ ದಾಖಲೆ ಇಲ್ಲ. ಯಾರು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ. ಒಂದು ತಂಡ ರಚಿಸಿ ತನಿಖೆ ನಡೆಸಿದ್ದೇವೆ. ದಾಖಲೆ ಸಂಗ್ರಹಣೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.

    ಬ್ಯಾಂಕ್‌ನವರಿಗೆ ನೋಟಿಸ್‌ ನೀಡಲಾಗಿದ್ದು, ಎಷ್ಟು ಖಾತೆಗಳಿಗೆ ಹೋಗಿದೆ ಎನ್ನುವುದನ್ನು ಮಾಹಿತಿ ಕೇಳಿದ್ದೇವೆ. ಬೇರೆ ಬೇರೆ ಇಲಾಖೆಗಳ ಖಾತೆಗಳ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಯಾರಾದರೂ ದೂರು ನೀಡಿದರೆ ಖಂಡಿತ ತನಿಖೆ ನಡೆಸುತ್ತೇವೆ. ಪ್ರವಾಸೋದ್ಯಮ ಇಲಾಖೆಯಲ್ಲಿ 2021ರಿಂದ ಇಲ್ಲಿಯವರೆಗೂ ಬಂದ ಡಿಡಿಗಳ ಬಳಿಯೂ ಮಾಹಿತಿ ಪಡೆಯಲಿದ್ದೇವೆ. ಬ್ಯಾಂಕ್‌ನಿಂದ ವಿವರಣೆ ಬಂದ ಬಂದ ಮೇಲೆ ವೈಯಕ್ತಿಕವಾಗಿ ನೋಟಿಸ್ ನೀಡಲಿದ್ದೇವೆ. ಬೇರೆ ಖಾತೆಗಳಿಗೆ ಹೋಗಿದೆಯೋ, ಬೇರೆ ಇಲಾಖೆ ಖಾತೆಗಳಿಗೆ ಹೋಗಿದೆಯೋ ಎಂಬುದನ್ನು ಪರಿಶೀಲನೆ‌ ಮಾಡುತ್ತೇವೆ ಎಂದಿದ್ದಾರೆ.

     

  • ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    – ದಾಖಲೆಗಳು ದೊಡ್ಡದಾಗಿದೆ ಎಂದು ದೆಹಲಿ ಕೋರ್ಟ್‌ ಹೇಳಿದೆ
    – ನಮ್ಮ ವಾದವನ್ನು ಸರಿಯಾಗಿ ಆಲಿಸಿಲ್ಲ: ಇಡಿ

    ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರಿಗೆ ರೋಸ್ ಅವೆನ್ಯೂ  ಕೋರ್ಟ್‌  ನೀಡಿದ ಜಾಮೀನಿಗೆ (Bail) ದೆಹಲಿ ಹೈಕೋರ್ಟ್ (Delhi High Court) ಮಧ್ಯಂತರ ತಡೆ ನೀಡಿದೆ. ವಿಸ್ತೃತ ಆದೇಶವನ್ನು ಕಾಯ್ದಿರಿಸಿದ್ದು ಎರಡು ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

    ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಈ ಆದೇಶ ನೀಡಿದ್ದಾರೆ. ನಾನು ಆದೇಶವನ್ನು ಎರಡು ಮೂರು ದಿನಗಳವರೆಗೆ ಕಾಯ್ದಿರಿಸುತ್ತಿದ್ದೇನೆ. ಆದೇಶವನ್ನು ಪ್ರಕಟಿಸುವವರೆಗೆ ವಿಚಾರಣಾ ನ್ಯಾಯಾಲಯದ ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

    court order law

    ವಿಚಾರಣೆ ವೇಳೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಆದೇಶವಾಗಿದ್ದರೂ ವಿಚಾರಣಾ ನ್ಯಾಯಾಲಯವು ಇಡಿ ವಾದವನ್ನು ಸರಿಯಾಗಿ ಆಲಿಸಿಲ್ಲ ಎಂದು ಪ್ರತಿಪಾದಿಸಿದರು. ಇಡಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಭರ್ಜರಿ ನಿದ್ದೆ ಮಾಡಿದ ಎಂಎಲ್‌ಸಿ ವಸಂತ ಕುಮಾರ್‌

    ದಯವಿಟ್ಟು ವಿಚಾರಣಾ ನ್ಯಾಯಾಲಯದ ಆದೇಶವನ್ನು ಗಮನಿಸಬೇಕು. ನ್ಯಾಯಾಲಯವು ನಮ್ಮ ಮಾತುಗಳನ್ನು ಕೇಳುವುದಿಲ್ಲ, ನಾವು ನೀಡಿದ ದಾಖಲೆಗಳನ್ನು ನೋಡುವುದಿಲ್ಲ ಮತ್ತು ಅದು ದೊಡ್ಡದಾಗಿದೆ ಎಂದು ಹೇಳುತ್ತದೆ. ಬೃಹತ್ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಇದಕ್ಕಿಂತ ವಿಕೃತ ಆದೇಶ ಇರಲು ಸಾಧ್ಯವಿಲ್ಲ. ಈ ಮೂಲಕ ನ್ಯಾಯಧೀಶರು ದಾಖಲೆಗಳನ್ನು ಪರಿಶೀಲಿಸಲಿಲ್ಲ ಎಂದು ಆದೇಶದಲ್ಲೇ ಒಪ್ಪಿಕೊಂಡಿದ್ದಾರೆ ಎಂಬ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

     

    ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi), ಇಡಿ 3 ಗಂಟೆ 45 ನಿಮಿಷಗಳ ಕಾಲ ವಾದ ಮಂಡಿಸಿದೆ. ತನ್ನ ವಾದದಲ್ಲಿ ಸರ್ಕಾರಿ ಸಂಸ್ಥೆಯ ಮೂಲಕ ನ್ಯಾಯಧೀಶರನ್ನು ನಿಂದಿಸಿದ್ದಾರೆ. ಬಂಧನದ ಕಾನೂನು ಬದ್ಧತೆಯ ವಿಷಯವು ಇನ್ನೂ ಉನ್ನತ ನ್ಯಾಯಾಲಯದ ಮುಂದೆ ಬಾಕಿ ಇದೆ. ಆರ್ಟಿಕಲ್ 21 ಅಸ್ತಿತ್ವದಲ್ಲಿಲ್ಲ, ವ್ಯಕ್ತಿ ಸ್ವಾತಂತ್ರ್ಯವು ತುಂಬಾ ಕಡಿಮೆಯಾಗಿದೆ. ಇಡಿಗೆ ಕಣ್ಣುಗಳಿದ್ದರೆ ವಾಸ್ತವದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುತ್ತಿರಲಿಲ್ಲ. ಜೈಲಿಗೆ ಕಳುಹಿಸುತ್ತಿರಲಿಲ್ಲ. ಇದು ಕೇವಲ ಹೇಳಿಕೆ ಮೇಲೆ ದಾಖಲಿಸಿರುವ ಪ್ರಕರಣ ಎಂದು ವಾದಿಸಿದರು.

  • ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯನವರೇ ಎ1 ಆರೋಪಿ: ಅಶೋಕ್ ಗಂಭೀರ ಆರೋಪ

    ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯನವರೇ ಎ1 ಆರೋಪಿ: ಅಶೋಕ್ ಗಂಭೀರ ಆರೋಪ

    – ಕಸಕ್ಕೂ ತೆರಿಗೆ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆಂದು ಆಕ್ರೋಶ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ನಡೆದ ಬಹುಕೋಟಿ ಹಗರಣದ ಹಿಂದೆ ಕೇವಲ ಬಿ.ನಾಗೇಂದ್ರ (B Nagendra) ಇಲ್ಲ. ಇದರ ಹಿಂದೆ ದೊಡ್ಡ ನಾಯಕರೇ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಗೊತ್ತಿದ್ದೇ ಈ ಹಗರಣ ನಡೆದಿದೆ. ಇದರ ಜೊತೆ ಇನ್ನಷ್ಟು ಸಚಿವರೂ ಸೇರಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಒತ್ತಾಯಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಆರ್ಥಿಕತೆಯ ಬಗ್ಗೆ ಗೊತ್ತಿದೆಯೇ? ಇಲಾಖೆಯ ಮೇಲೆ ಇವರಿಗೆ ಹಿಡಿತವಿಲ್ಲವೇ? ಈ ಹಣ ಹೈದರಾಬಾದ್‌ಗೆ ಹೋಗಿದ್ದು ತಿಳಿದರೂ ಬೇರೆಯವರ ವಿರುದ್ಧ ಕಠಿಣ ಕ್ರಮ ವಹಿಸಿಲ್ಲ. ದಲಿತರ ಹಣವನ್ನು ವಾಪಸ್ ಮಾಡದಿದ್ದರೆ ಜನರ ಶಾಪ ತಟ್ಟಲಿದೆ. ಈ ಅಕ್ರಮದಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿದ್ದು, ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಸ್ಟಡಿ ಅವಧಿ ಅಂತ್ಯ – ಪರಪ್ಪನ ಅಗ್ರಹಾರ ಜೈಲಿಗೆ ಪ್ರಜ್ವಲ್ ಶಿಫ್ಟ್!

    ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ (Guarantee Scheme) ಕಾಂಗ್ರೆಸ್‌ಗೆ ಮತ ಬಂದಿಲ್ಲ. ಸರ್ಕಾರ ಪಾಪರ್ ಆಗಿ ಅಭಿವೃದ್ಧಿ ಶೂನ್ಯವಾಗಿರುವುದರಿಂದಲೇ ಕಾಂಗ್ರೆಸ್ ಸೋತಿದೆ. ಸರ್ಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದರಿಂದ ಈಗ ಸಾಲ ಮಾಡಿ ಸಂಬಳ ಕೊಡುವ ಪರಿಸ್ಥಿತಿ ಬಂದಿದೆ. ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಶಾಸಕರು ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್ ಆಗಿರುವ ಸರ್ಕಾರ ಎಲ್ಲಾ ಕಡೆ ಬಿಲ್ ಪಾವತಿ ಬಾಕಿ ಇರಿಸಿಕೊಂಡಿದೆ. ಬಿಜೆಪಿ ಸರ್ಕಾರವಿದ್ದಾಗ ಶಾಸಕರು ಶಾಲೆ, ಆಸ್ಪತ್ರೆ, ನೀರಾವರಿ ಯೋಜನೆ ತಂದರು. ಕಾಂಗ್ರೆಸ್‌ನ ಶಾಸಕರು ಏನೂ ತಂದಿಲ್ಲವೆಂದು ಜನರೇ ಹೀಯಾಳಿಸುತ್ತಿದ್ದಾರೆ. ಅಭಿವೃದ್ಧಿ ಇಲ್ಲದೆ ಜನರು, ಶಾಸಕರು ಹಾಗೂ ಸಚಿವರ ಮಾತಿಗೆ ವಿರುದ್ಧವಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದರು. ಇದನ್ನೂ ಓದಿ: ಐವರು ಕೇಂದ್ರ ಸಚಿವರು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವಿದೆ: ಪರಮೇಶ್ವರ್

    ಕಾಂಗ್ರೆಸ್ ಸರ್ಕಾರ ದಲಿತರ ಹಣ ಲೂಟಿ ಹೊಡೆದು, ಶೂನ್ಯ ಸಾಧನೆ ಮಾಡಿ, ಜನರ ಪಾಲಿಗೆ ಸತ್ತುಹೋಗಿದೆ. ಒಬ್ಬ ಸಚಿವರೂ ಮಳೆ ಹಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸಚಿವರಿರುವ ಕಡೆ ಹಿನ್ನೆಡೆಯಾಗಿದ್ದು, ಸ್ಥಾನ ಕಳೆದುಕೊಳ್ಳುವ ಆತಂಕವಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕನಕಪುರದಲ್ಲಿ ಹೀನಾಯವಾಗಿ ಸೋತಿದ್ದಾರೆ. ರಾಜ್ಯದಲ್ಲಿ ಸರ್ಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ದಲಿತರ 187 ಕೋಟಿ ರೂ. ಲೂಟಿ ಮಾಡಿದ್ದರಿಂದಲೇ ಇವರು ಸೋತಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸರ್ಕಾರ ಮೂಲೆ ಸೇರಿದೆ ಎಂದು ಹೇಳಿದರು. ಇದನ್ನೂ ಓದಿ: ಬೈಕ್‌ಗೆ ಲಾರಿ ಡಿಕ್ಕಿ – ಪತಿಯೊಂದಿಗೆ ದೇವರ ದರ್ಶನ ಮುಗಿಸಿ ಬರುತ್ತಿದ್ದ ಪತ್ನಿ ಸಾವು!

    ಕಸಕ್ಕೂ ತೆರಿಗೆ:
    ಈಗಾಗಲೇ ತೆರಿಗೆ ಭಾರದಿಂದ ಜನರು ಸುಸ್ತಾಗಿದ್ದಾರೆ. ಕಸಕ್ಕೂ ತೆರಿಗೆ ಹಾಕುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಮುಂದೆ ಹಾಲು, ಆಲ್ಕೋ ಹಾಲ್, ಬಸ್ ಟಿಕೆಟ್ ದರವನ್ನೂ ಹೆಚ್ಚಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ಹೊಸ ತೆರಿಗೆಗಳನ್ನು ವಿಧಿಸಲಿದ್ದಾರೆ. ಇದರ ವಿರುದ್ಧವೂ ಬಿಜೆಪಿ ಪ್ರತಿಭಟಿಸಲಿದೆ. ಅಲ್ಪಸಂಖ್ಯಾತರು ಏನು ಮಾಡಿದರೂ ನಡೆಯುತ್ತದೆ ಎಂಬ ನಂಬಿಕೆ ಬಂದಿದೆ. ಹಿಂದೂಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದೆ ಹಾಗೂ ಮಾಫಿಯಾ ರೌಡಿಗಳಿಗೆ ಭಯ ಕಡಿಮೆಯಾಗಿದೆ. ಗೃಹ ಇಲಾಖೆ ದಿಕ್ಕು ದೆಸೆಯಿಲ್ಲದಂತೆ ನಡೆಯುತ್ತಿದೆ. ಜನರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ – ಹೊಣೆ ಹೊತ್ತ ಪಾಕ್ ಉಗ್ರ ಸಂಘಟನೆ

    ನರೇಂದ್ರ ಮೋದಿಯವರು ಹಿಂದುಳಿದ ವರ್ಗದ ನಾಯಕರಾಗಿದ್ದು, ಸಚಿವ ಸಂಪುಟದಲ್ಲಿ ಎಲ್ಲ ಜಾತಿ ವರ್ಗಕ್ಕೆ ಸ್ಥಾನಮಾನ ನೀಡಿದ್ದಾರೆ. ಕರ್ನಾಟಕದ ಸಂಸದರಿಗೂ ಅವಕಾಶ ನೀಡಿರುವುದು ಅಭಿನಂದನೀಯ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲಾಗಿದ್ದು, ಇಲ್ಲಿಗೆ ಹೆಚ್ಚು ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ನನ್ನ ಬಗ್ಗೆ ತಪ್ಪು ವರದಿಯಾಗಿದೆ, ಕೇರಳದ ಅಭಿವೃದ್ಧಿಗೆ ಬದ್ಧ: ರಾಜೀನಾಮೆ ವಿಚಾರಕ್ಕೆ ಸುರೇಶ್‌ ಗೋಪಿ ಸ್ಪಷ್ಟನೆ

  • ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ – ತನಿಖೆಗೆ ಸಿಬಿಐ ಬಳಿಕ ED ಎಂಟ್ರಿ!

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ – ತನಿಖೆಗೆ ಸಿಬಿಐ ಬಳಿಕ ED ಎಂಟ್ರಿ!

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ (Valmiki Corporation Corruption Scam) ಪ್ರಕರಣಕ್ಕೆ ಈಗ ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ (ED) ಎಂಟ್ರಿ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು, ಯೂನಿಯನ್ ಬ್ಯಾಂಕ್ (Union Bank Of India) ನೀಡಿದ್ದ ದೂರು ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಸಿಬಿಐನಿಂದ ಮಾಹಿತಿ ಪಡೆದುಕೊಂಡಿದೆ. ಜೊತೆಗೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಬಗ್ಗೆಯೂ ಮಾಹಿತಿ ಪಡೆದಿದ್ದು, ಮುಂದಿನ ವಾರದಲ್ಲೇ ಇಡಿ ಇನ್ನಷ್ಟು ತನಿಖೆಯೊಂದಿಗೆ ಎಫ್‌ಐಆರ್‌ ದಾಖಲಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ʻಪಬ್ಲಿಕ್‌ ಟಿವಿʼಗೆ (Public TV) ಮಾಹಿತಿ ನೀಡಿವೆ. ಇದನ್ನೂ ಓದಿ: Exclusive: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ- ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್

    ಈಗಾಗಲೇ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Karnataka Maharshi Valmiki Scheduled Tribe Development Corporation Ltd) ನಡೆದಿರುವ ಹಗರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ. ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಅಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ಅಧಿಕಾರಿಗಳು, ಬ್ಯಾಂಕ್‌ ಉದ್ಯೋಗಿ ವಿರುದ್ಧ ಎಫ್‌ಐಆರ್‌

    ಏನಿದು ಪ್ರಕರಣ?
    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಇತ್ತೀಚೆಗೆ ಶಿವಮೊಗ್ಗದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು